ಎಸ್ ಜಿ ಸಿದ್ದರಾಮಯ್ಯ
1.
ಬಡೇಸಾಬು ಅಲಿಯಾಸ್ ಬುಡಾಣು ಸಾಬು
ನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವ
ನಮ್ಮೂರವನಲ್ಲ ಪಕ್ಕದೂರಿನ ಪೈಲುವಾನ
ಸಾಬು ಹೋಗಿ ಬಂದು ಅಂಗಡಿ ಮಾಡುತಿದ್ದ.
ತಡವಾದ ದಿನ ಇಲ್ಲೆ ಉಳಿಯುತಿದ್ದ. ಇಲ್ಲೆ
ಅಂದರೆ ಅಂಗಡಿಮನೆಯಲ್ಲೇ. ಮನೆಯೆಂದರೆ
ಅದು ಮನೆಯಲ್ಲ ಅಂಗಡಿಗಾಗಿ ಕಟ್ಟಿದ
ಗುಡಿಸಲು ನೆಲಬಾಡಿಗೆ ಇಲ್ಲದ ತಡಸಲು.
ಈ ಬಡೇಸಾಬರು ಎಲ್ಲರಿಗೂ ಬೇಕಾದ
ಮುಸಲರು. ಅದು ಹೇಗೋ ಏನೋ
ಸಮುದ್ರದ ಉಪ್ಪು ಬೆಟ್ಟದ ನೆಲ್ಲಿ ಎಲ್ಲಿಂದೆಲ್ಲಿಗೆ
ತೊಳಸಜ್ಜಿಗು ಬುಡಾಣಜ್ಜಗು ಅಂಟಿದ ನಂಟು.
ಅದು ಯಾರಿಗು ಮಾಡಲಿಲ್ಲ ಇರುಸು ಮುರುಸು
ಹುಬ್ಬುಗಂಟು. ತೊಳಸಜ್ಜಿಗೆ ಹದಿವಯಕೆ ಆದರು
ಮದುವೆ ಆರು ತಿಂಗಳಿಗೇ ಗಂಡನಿಲ್ಲದವಳು.
ಬುಡಾಣುಗಾದಳು ಪ್ಯಾರಕ ಮೊಹಬತ್ತಿನವಳು.
2.
ಮಗನಿಗೆ ಸಾಬರಭಾಷೆಯ ಕಲಿಸುವ ಆಸೆಯು
ಅಪ್ಪನಿಗೆ: ನನ್ನನು ಬಿಟ್ಟರು ಬುಡಾಣುಸಾಬರ ಬಳಿಗೆ.
ಬೆಳಗೂ ಬೈಗೂ ಹೋಗಿ ಬಂದು ಕಲಿತದ್ದು ಒಂದೇ
ದರವಾಜಖೋಲೋ. ಹತ್ತರವಯದಲಿ ಕಲಿತಾ
ಶಬ್ದ ಇಂದು ಎಪ್ಪತ್ತರ ಇಳಿವಯದಲಿ ಕಾಡುತ
ಬಂತೆ: ಅಹಮದಬಾದಿನ ಲೆಕ್ಕವಿರದ ದರವಾಜ
ಗಳ ನೆನಪಿಗೆ ತಂತೆ. ಅವರಿವರೆನ್ನದೆ ಎಲ್ಲರಿಗೂ
ತೆರೆದಾ ದರವಾಜಗಳು. ಮಂದಿರ ಮಸೀದಿ ಬಗೆ
ಬಾಂಧವ್ಯದ ದರವಾಜಗಳು. ಪ್ಯಾರಕ ಮೊಹಬತ್ತಿನ
ಪ್ರತೀಕಗಳು. ಅಲ್ಲೆ ಅಲ್ಲೇ ಹರಿವವಳು ಸಬರಮತಿ
ಸ್ವಾತಂತ್ರ್ಯದ ಹರಿಕಾರಿಗೆ ಸರ್ವೋದಯ ಕನಸಿಗೆ
ತೆರೆದಳು ದರವಾಜ. ಇದು ಮೂವತ್ತರ ದಶಕದ
ಅಂದಿನ ಸ್ವಾತಂತ್ರ್ಯದ ಪಾಠ, ತೊಂಬತ್ತರ ಗಡಿಯಲಿ
ಆಯಿತು ಗೋದ್ರಾ ಮೇಧ : ಮುಚ್ಚಿತು ದರವಾಜ,
ಅದೇ ಹೊತ್ತಲಿ ನನ್ನೂರಲಿ ಕೇಸರಿಬಣ್ಣದ ಬೆಂಕಿ
ಯಲಿ ಸುಟ್ಟಿತು ದರವಾಜ ಬಡೇಸಾಬರ ದರವಾಜ.
ಸುಟ್ಟ ಬೂದಿಯಲಿ ಮೂಳೆಯ ಹುಡುಕುತ
ಕನಸುನು ತಡಕುತ ಹರಿಹರಿದಾಡುವ ತೊಳಸಜ್ಜಿ
ಯ ಕೆನ್ನೆಯುಪ್ಪಿಗೆ ಆರದ ಬೂದಿಯಲಿ ಸಿಗದೆ
ಹೋಯಿತೋ ಸಾಬರಮತಿಯ ದರವಾಜ.
ಮನಮುಟ್ಟಿದ ಕವಿತಿ