ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಳೆ ಎಳೆಯಾಗಿ ತೆರೆದುಕೊಳ್ಳುವ ಗೊಂಚಲು – 'ಊರುಭಂಗ'

ಸಂಯುಕ್ತಾ ಪುಲಿಗಲ್

ಕಥೆಯೊಂದು ಹೇಗಿರಬೇಕು ಎನ್ನುವುದು ಸಾಧಾರಣವಾಗಿ ಓದುಗ ಮತ್ತು ಕಥೆಗಾರರ ಯಕ್ಷ ಪ್ರಶ್ನೆ. ಓದುಗನಿಗೆ ತಾನು ಇದುವರೆಗೂ ಓದಿಲ್ಲದ, ಹೊಸತೇನನ್ನೋ ಓದುವ, ತಿಳಿಯುವ ಹಸಿವು, ಕಥೆಗಾರನಿಗೆ ಹಿಂದೆಂದೂ ಇದ್ದಿರದ ಹೊಚ್ಚ ಹೊಸ ಕಥೆಯನ್ನು ಹೆಣೆಯುವ ತವಕ. ಓದುಗನ ಜ್ಞಾನ, ಹಸಿವು ಹೆಚ್ಚಾಗುತ್ತಿದ್ದಂತೆ ಕಥೆಗಾರನ ಹೊಣೆಯೂ ಹೆಚ್ಚುತ್ತದೆ. ಹೊಸ ಹೊಳಹುಗಳನ್ನು ಸೃಜಿಸುವ ಸೂತ್ರಧಾರನಾಗಿ ಕಥೆಗಾರ ನಿಲ್ಲಬೇಕಾಗುತ್ತದೆ. ಒಳನೋಟ ಮತ್ತು ಹುಡುಕಾಟದ ಪ್ರಚೋದನೆಯಿಂದ ಇದು ಸಾಧ್ಯವಾಗಬಹುದು. ಕಥೆಯ ಮೂಲಕ ಅನುಭವಕ್ಕೆ ಸಿಗುವ ಪಾತ್ರ, ಸನ್ನಿವೇಶ, ಚಿತ್ರಣ ಎಲ್ಲವೂ ನಮಗೆ ಪರಿಚಿತವಾದದ್ದೇ ಇರಬೇಕು, ಓದುತ್ತಾ ಓದುತ್ತಾ ಹೋದಂತೆ ಪರಿಚಯ ಗಾಢವಾಗಿ ಆಪ್ಯಾಯವಾಗಬೇಕು, ನಂತರ ಆ ಆಪ್ಯಾಯತೆಯನ್ನು ಮೀರಿದ ಅಪರಿಚಿತತೆ ಅಥವಾ ಅಜ್ಞಾತವನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳುವಂತಾಗಬೇಕು. ನಮ್ಮಲ್ಲೇ ಅಡಗಿರಬಹುದಾದ ನಾವಲ್ಲದ ನಮ್ಮನ್ನು ಕಂಡುಕೊಳ್ಳುವ, ಅದಕ್ಕೆ ತೆರೆದುಕೊಳ್ಳುವ ಕನ್ನಡಿಯಾಗಿ ಪುಸ್ತಕವೊಂದು ನಿಂತು, ತನ್ಮೂಲಕ ಅದು ವ್ಯಕ್ತಿಯೊಬ್ಬನ ಕಥೆಯಲ್ಲ, ಪ್ರತಿಯೊಬ್ಬನ ಅಂತರಾಳ ಎನ್ನುವಂತಾದರೆ ಅದೇ ಅದರ ಗೆಲುವು. ಈ ಗೆಲುವನ್ನು ಬಹುಪಾಲು ತನ್ನದಾಗಿಸಿಕೊಂಡಿದೆ, ವಿವೇಕ ಶಾನಭಾಗರ ‘ಊರುಭಂಗ’.
ಒಬ್ಬ ಮಧ್ಯವಯಸ್ಕ, ಸಕ್ಸಸ್ಫುಲ್ ಕಾರ್ಪೋರೆಟ್ ಉದ್ಯೋಗಿ, ಲೇಖಕನಾದ ಮನಮೋಹನ ಕಥೆಯ ಪ್ರಮುಖ ಪಾತ್ರ. ಅವನ ಮಾತು, ನಿರೂಪಣೆಯಿಂದಲೇ ಕಥೆ ಹೆಣೆದುಕೊಂಡು ಹೋಗುತ್ತದೆ. ಆತನ ಕುಟುಂಬ, ಸಹೋದ್ಯೋಗಿಗಳು, ಸ್ನೇಹಿತರು, ಶಮಿ ಮತ್ತು ಆತನ ತೆಂಕಣಕೇರಿಯ ಕಥೆಗಳು ಹೀಗೆ ಸಾಕಷ್ಟು ಪದರಗಳುಳ್ಳ ಕಥೆ ಎಳೆಎಳೆಯಾಗಿ ಬಿಡಿಸಿಕೊಳ್ಳುತ್ತಾ, ಹತ್ತಾರು ಕಥನಗಳನ್ನು ಪೋಷಿಸುತ್ತಾ ಹೋಗುತ್ತದೆ. ಇವೆಲ್ಲದರ ನಡುವೆ ನೆರೇಟ್ ಆಗದ ಕಥೆಯನ್ನೂ ಸೂಕ್ಷ್ಮವಾಗಿ ಬಿಂಬಿಸುತ್ತಾ ಹೋಗುತ್ತದೆ. ಮುಖ್ಯ ಕಥೆಗಿಂತ ಆ ಕಥೆಯ ಮೂಲಕ ಅದರ ಸಮಾನಾಂತರದಲ್ಲೇ ಅಂತರ್ಗತವಾಗಿ ಹಬ್ಬಿ ಹರಡಿಕೊಳ್ಳುವ ಕಥೆ ನಮ್ಮವೇ ಆಗಿ ಕಾಡುತ್ತದೆ. ಊರು ಭಂಗ ಎಂಬ ಶೀರ್ಷಿಕೆಯೇ ಎರಡು ಅರ್ಥಗಳನ್ನು ಹೊಂದಿದ್ದು, ಅದರಲ್ಲೇ ಕಥೆಯ ಬಹುತ್ವದ ಅರಿವಾಗುತ್ತದೆ.
ಸಶಕ್ತ ಭಾಷೆಯ ಬಳಕೆ ಮತ್ತು ನಿರರ್ಗಳವಾಗಿ ಅರಳುವ ಪಾತ್ರ ಚಿತ್ರಣವು ಕಥೆಗಾರನ ಸಾಮರ್ಥ್ಯವನ್ನು ತೋರುತ್ತದೆ. ಮೋ ಆಗುವ ಮನಮೋಹನ, ಬೀ ಆಗುವ ಬಿತೋವನ್, ಚಿತ್ತಾಲರ ಒಂದೂಮಗ, ಮಿಸ್ಟರ್ ರಮೇಶ, “ಎಲ್ಲವನ್ನೂ ಹೇಳುವುದು”, ಹೀಗೆ ಸಣ್ಣ ಸಣ್ಣ ವಿವರಗಳಿಂದ ಹಿಡಿದು, ಮನಮೋಹನನ ಪ್ರಾಜ್ಞ ಮಾತುಗಳು, ಆತನು ಶಮಿಗಾಗಿ ಬರೆಯುವ ಕವನಗಳು, ಮನಮೋಹನ ಮತ್ತು ಶಮಿಯರ ನಡುವಿನ ಚರ್ಚೆ, ಅವರಿಬ್ಬರ ಉತ್ಕಟ ದೈಹಿಕ ಸಂಬಂಧ, ಆ ಸಂಬಂಧದ ಸವಿವರದ ನಡುವೆಯೇ ತೇಲಿನಿಲ್ಲುವ ಅವರ ಮಾನಸಿಕ ಅಂತರ, ಮನಮೋಹನ ಹಾಗೂ ಅವನ ಸಂಸಾರದ ಹಿತ-ಅಹಿತ, ಚಂದುವಿನ ಜೊತೆಗಿನ ಮರೆತದ್ದನ್ನು ಪ್ರಜ್ಞಾಪೂರ್ವಕವಾಗಿ ಮತ್ತೆ ಪಡೆಯಲು ತವಕಿಸುವ ಸ್ನೇಹ, ದೃಷ್ಟಿ ಮೈಥುನ, ಪಾಲಿಟಿಕ್ಸ್ ಆಫ್ ಮೆಮೊರಿ, ಎಂಬಂತಹ ಅನೇಕ ಗಾಢ ವಿಚಾರಗಳು, ವಿವರಗಳು ತುಂಬಿ ಭಾಷೆ ತನ್ನ ರೂಪು-ವಿಸ್ತಾರವನ್ನು ಮೆರೆದಿದೆ.

ಪಾತ್ರಗಳ ಚಿತ್ರಣವೂ ವಿಭಿನ್ನವಾಗಿದೆ. ಕಥೆಯೊಳಗೆ ಕಥೆಗಳಿದ್ದು, ಮುಖ್ಯ ಪಾತ್ರ, ನಿರೂಪಕನಾಗಿ ತನ್ನ “ಪೂರ್ವಾಶ್ರಮ”ದಿಂದ ಅನೇಕ ವೈವಿಧ್ಯಮಯ ಪಾತ್ರಗಳನ್ನು ಅವರ ಕಥೆಗಳನ್ನು ಹೇಳುತ್ತಿರುತ್ತಾನೆ. ಹೇಳುವುದಷ್ಟೇ ಅಲ್ಲದೆ, ಆ ಕಳೆದ ಅನುಭವಗಳನ್ನು ತನಗೆ ಬೇಕಾದಂತೆ ನೆನೆದು ಆನಂದಿಸುತ್ತಿರುತ್ತಾನೆ. ಇಲ್ಲಿ ಕಂಡುಬರುವ ಪಾಲಿಟಿಕ್ಸ್ ಆಫ್ ಮೆಮೊರಿ ಎಂಬ ಕಾನ್ಸೆಪ್ಟ್ ಎಲ್ಲರ ಜೀವನಕ್ಕೂ, ಎಲ್ಲ ಸಂದರ್ಭಗಳಿಗೂ ಅನ್ವಯವಾಗುವಂತಹ ಸಂಗತಿ. ಮನಮೋಹನ, ಶಮಿ, ಭಾಸ್ಕರ್ ರಾವ್, ವ್ಯಾಂಡಿ ಶೆನೊಯ್, ರೇವತಿ, ಸಾಹು, ಚಂದು, ಜನಾರ್ದನ ಮುಂತಾದ ಎಲ್ಲಾ ಪಾತ್ರಗಳು ಮೊದಲ ಹಂತದ ಕಥೆಯಲ್ಲಿ ಕಂಡುಬಂದು ಮಾಡರ್ನ್ ಮತ್ತು ಸೊಫ಼ೆಸ್ಟಿಕೇಟೆಡ್ ಸಮುದಾಯದ ಪ್ರತಿನಿಧಿಗಳಾಗಿರುತ್ತಾರೆ. ಕಿಮಾನಿ ವಕೀಲರು, ವಿಠೋಬ, ಲಕ್ಷ್ಮಣ ನಾಯ್ಕ, ಶ್ರೀಧರ ನಾಯಕ, ರಾಮರಹೀಮ(ಅಶೋಕ), ವಿಜಯಾ, ಸದಾನಂದ ಮಾಸ್ತರು, ರಮಾ ಇವರೆಲ್ಲಾ ಮನಮೋಹನನ ನೆರೇಶನ್ ಮೂಲಕ ನಮಗೆ ಪರಿಚಯವಾಗುವ ಪಾತ್ರಗಳು. ಪಾತ್ರಗಳ ಕಟ್ಟುವಿಕೆ ಒಂದಕ್ಕಿಂತಲೂ ಒಂದು ಭಿನ್ನ ಮತ್ತು ವಿಶೇಷವಾಗಿದೆ.
“ಎಲ್ಲವನ್ನೂ ಹೇಳುತ್ತೇನೆ”, ಎಂಬ ಮಾತಿನಿಂದ ಆರಂಭಗೊಳ್ಳುವ ಕಥೆಯಲ್ಲಿ, ಉದ್ದಕ್ಕೂ ಹೇಳುವಿಕೆ ಇದ್ದೇ ಇದೆ. ಭಾಸ್ಕರ ರಾವ್ ಆತನ ರಿಟೈರ್ಮೆಂಟ್ ಭಾಷಣದಲ್ಲಿ “ಎಲ್ಲವನ್ನೂ ಹೇಳುವುದು”, ಮನಮೋಹನ ಶಮಿಗೆ “ಎಲ್ಲವನ್ನೂ ಹೇಳುವುದು”, ಚಂದು ಮತ್ತು ಮನಮೋಹನ ಪರಸ್ಪರ “ಎಲ್ಲವನ್ನೂ ಹೇಳಿಕೊಳ್ಳುವುದು”… ಹೀಗೆ. ಯಾರೊಬ್ಬರೂ ಎಲ್ಲವನ್ನೂ ಏಕೆ ಮತ್ತು ಹೇಗೆ ಹೇಳಲು ಸಾಧ್ಯ? ಪ್ರತಿ ನಿಮಿಷಕ್ಕೆ ನೂರೆಂಟು ಸ್ವಗತಗಳನ್ನು ಕಾಣುವ ಮನುಷ್ಯನ ಮನಸ್ಸು ವಾಚ್ಯವಾಗೋ, ಸೂಚ್ಯವಾಗೋ ಒಂದಷ್ಟು ಪ್ರಕಟಗೊಳ್ಳುತ್ತದೆಯೇ ಹೊರತು “ಎಲ್ಲವನ್ನೂ” ಬಿತ್ತರಿಸುವುದು ಅಸಾಧ್ಯ. ಟಿಪ್ ಆಫ್ ದಿ ಐಸ್ ಬರ್ಗ್ ನಂತೆ ಕಾಣುವ ನಮ್ಮ ಮಾನಸ ಸರೋವರದ ಆಳ ವಿಸ್ತಾರ ಎಷ್ಟೆಂದು ಅಳೆಯಲು ನಮಗೇ ಸಾಧ್ಯವಿಲ್ಲ. ಅಂಥದ್ದರಲ್ಲಿ ಇತರರಿಗೆ ಎಲ್ಲವನ್ನೂ ಹೇಳುವುದು? ಕಥೆಯುದ್ದಕ್ಕೂ “ಎಲ್ಲವನ್ನೂ” ಎನ್ನುವ ಪದ ಬಹಳ ಸಮರ್ಥವಾಗಿ ಮತ್ತು ಮಾರ್ಮಿಕವಾಗಿ ಉಪಯೋಗವಾಗಿದೆ ಅನಿಸುತ್ತದೆ.
ಯಾವುದೋ ಆದರ್ಶದಲ್ಲಿ ಬೆಳೆದ ಹಳ್ಳಿಯ ತರುಣ ಯುವಕ ಮನಮೋಹನ ಬೆಳೆಯುತ್ತಾ ಅನುಭವಸ್ಥನಾಗುತ್ತಾ, ಆದರ್ಶಗಳೇ ಬೇರೆ ವಾಸ್ತವವೇ ಬೇರೆ ಎಂಬುದನ್ನು ಕಂಡುಕೊಂಡು ಸಾಫ್ಟ್ ಕಾಲರ್ರಿನೊಳಗೆ ಅಡಗಿ ಕೂರುತ್ತಾನೆ. ತನ್ನೆಲ್ಲಾ ಮುಗ್ಧತೆ, ಆದರ್ಶ, ಸಾಹಸಗಳನ್ನೆಲ್ಲಾ ಮನಸಿನ ಪೆಟ್ಟಿಗೆಯೊಳಿಟ್ಟು ಬೀಗ ಜಡಿದು ಅದರ ಮೇಲೆ ಭದ್ರವಾಗಿ ಹೊಸ ಸೂರೊಂದನ್ನು ಕಟ್ಟಿಕೊಂಡು ಹೈ-ಫೈ ಜೀವನದಲ್ಲಿ ಬೆರೆತುಹೋಗಲು ಪ್ರಯತ್ನಾಪೂರ್ವಕವಾಗಿ ಕಲಿಯುತ್ತಾನೆ. ಆದರೂ ತೆಂಕಣಕೇರಿಯ ವಾಸನೆ, ಗಾಳಿ ಅವನಿಂದ ದೂರಾಗದು ಅಥವಾ ಅವನೇ ತನ್ನಾಳದ ಮನಸ್ಸಿನಲ್ಲಿ ಅದರಿಂದ ಬಿಡಿಸಿಕೊಳ್ಳಲು ಇಷ್ಟಪಡುವುದಿಲ್ಲ.
ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮದಲ್ಲದ ಬೇರೆಯವರ ಜೀವನವನ್ನು ಬದುಕಲು ಹಂಬಲಿಸುತ್ತಿರುತ್ತಾರೆ. ಇದು ವ್ಯಕ್ತಿಗತವಾಗಿಯೂ, ಸಮುದಾಯಿಕವಾಗಿಯೂ ಆಗಬಹುದು. ಮನಮೋಹನ ತನ್ನದಲ್ಲದ ಒಂದು ಬೆಡಗಿನ ಸಮುದಾಯಕ್ಕೆ ಆಕರ್ಷಿತನಾಗುತ್ತಾನೆ. ತಾನು ಅದರ ಪಾಲಾಗಲೇಬೇಕು ಎಂದು ಹಂಬಲಿಸುತ್ತಾನೆ. “ನಿನ್ನ ಜಗತ್ತಿನ ಬಗ್ಗೆ ನನಗೆ ಅಪಾರವಾದ ಆಕರ್ಷಣೆಯಿದೆ. ಭಯ ಹುಟ್ಟಿಸುವಷ್ಟು ಸೆಳೆತವಿದೆ” ಎನ್ನುವ ಮನಮೋಹನ ಶಮಿಯ ಬದುಕಿನೊಳಗೆ ಒಂದು ಭಾಗವಾಗಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾನೆ. ಸಲೀಸಾಗಿ ಶಮಿಯ ಎಲ್ಲಾ ಕೋರಿಕೆ, ಆಜ್ಞೆಗಳಿಗೆ ಮಣಿಯುತ್ತಾನೆ. ನಡುವಯಸ್ಸಿನ ವ್ಯಕ್ತಿಯೊಬ್ಬನ ಲೈಂಗಿಕ ಆಸೆ, ಪ್ರಚೋದನೆಗಳನ್ನು “ಮೋ” ಮತ್ತು ಶಮಿಯ ಇಂಟಿಮಸಿಯ ಮೂಲಕ ವಿವರಿಸುತ್ತಲೇ, ತೆಂಕಣಕೇರಿಯ ಅನುಭವವು ಆತನನ್ನು ಮಾಡರ್ನ್ ಸಿಟಿಯ ರುಚಿಯನ್ನು ಅನುಭೋಗಿಸುವ ಆತುರತೆ, ತೀವ್ರತೆಯ ಕಡೆಗೆ ಸೆಳೆದೊಯ್ಯುವ ಸನ್ನಿವೇಶವು ನಾಜೂಕಾಗಿ ಅಭಿವ್ಯಕ್ತಿಗೊಂಡಿದೆ.
ಕಥೆಯ ಅಂತ್ಯದಲ್ಲಿ ಶಮಿಯನ್ನು ಕಾಣಲೇಬೇಕೆಂದು ಹರಸಾಹಸ ಪಡುವ ಮನಮೋಹನನ ಮನಸ್ಥಿತಿ ಮತ್ತು ಸನ್ನಿವೇಶವು ಮನೋಜ್ಞವಾಗಿ ರೂಪುಗೊಂಡಿದೆ. ಕತ್ತಲಲ್ಲಿ, ಮರಹತ್ತಿ, ಸಣ್ಣ ರೆಂಬೆಕೊಂಬೆಗಳ ಮೇಲೆ ಇರುವೆ ಹತ್ತಿಸಿಕೊಂಡು, ಕಾಂಪೌಂಡು ಧುಮುಕಿ, ಹೂಕುಂಡ ಒಡೆದು, ಕೆಸರೆರೆಚಿ, ಕಾಲು ತರಚಿದರೂ ಶಮಿಯನ್ನು ಕಾಣುವ ಆಸೆಯನ್ನು ಬಿಡದ ಮನಮೋಹನನ ನಡವಳಿಕೆ ಓದುಗನಿಗೇ ಕಸಿವಿಸಿಯಾಗುವಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ. ನಮ್ಮದಲ್ಲದ ಯಾವುದನ್ನೋ ಬೇಜಿಜಕ್ ಉತ್ಕಟವಾಗಿ ಬಯಸುವ, ಹಲುಬುವ ಆದರೆ ಅದು ಯಾರಿಗೂ ತಿಳಿಯಬಾರದು ನಮ್ಮೊಳಗೇ ಕಾಪಿಡಬೇಕು ಎಂಬ ಸಾಮಾಜಿಕ ಸೋಗು ನಮ್ಮನ್ನು ಸದಾ ಎಚ್ಚರದಲ್ಲಿಟ್ಟಿರುತ್ತದೆ. ಮನಮೋಹನನ ಈ ಅವಸ್ಥೆಯನ್ನು ರೇವತಿ ಕಂಡಕೂಡಲೇ “ಗೆಟ್ ಔಟ್” ಎಂಬ ಒಂದೇ ಪದ ಬಳಸುತ್ತಾಳೆ. ಶಮಿಯ ಮೂಲಕ ಮನಮೋಹನ ಬಯಸಿದ್ದು ತನ್ನದಲ್ಲದ ಇನ್ನೊಂದು ಜಗತ್ತನ್ನು, ಆದರೆ ಆ ಜಗತ್ತು ಅವನನ್ನು ಹೊರಗೇ ಇರಿಸುತ್ತದೆ.
ಕಥೆಯ ಒಳನೋಟವನ್ನು ಗಮನಿಸಿದರೆ ಇಲ್ಲಿ ಶಮಿಯ ಪಾತ್ರ ಕೇವಲ ಒಂದು ಪ್ರತಿಮೆಯಾಗಿಯೇ ಕಂಡುಬರುವ ಸಾಧ್ಯತೆ ಇದೆ. ಇದಕ್ಕೆ ಕಥೆಯಲ್ಲೇ ಎರಡು ಕಡೆ ಸಣ್ಣ ಸುಳುಹೂ ಇದ್ದಂತಿದೆ: ಶಮಿಗೆ ಮನಮೋಹನ ಹೇಳುವ, “ನಿನ್ನ ಜಗತ್ತೆಂದರೆ ನನಗೆ ಆಕರ್ಷಣೆ” ಎಂಬ ಮಾತು ಮತ್ತು “ಶಮಿ ನಿಜಕ್ಕೂ ಇದ್ದಾಳಾ” ಎಂದು ಚಂದು ಕೇಳಿದಾಗ, “ಅದರಿಂದೇನು ವ್ಯತ್ಯಾಸವಾಗುತ್ತದೆ” ಎನ್ನುವ ಮನಮೋಹನನ ಮಾತು. ಮತ್ತೆ ಇಲ್ಲಿ ಪಾಲಿಟಿಕ್ಸ್ ಆಫ್ ಮೆಮೊರಿಯ ಪ್ರಸ್ತುತತೆ ಕಂಡುಬರುತ್ತದೆ.
ಮನಮೋಹನ ಎಂಬ ವ್ಯಕ್ತಿಯ ಭೂತ, ವರ್ತಮಾನ, ಭವಿಷ್ಯ ಎಂದು ನಾವು ವಿಂಗಡಿಸುವುದಾದರೆ, ತೆಂಕಣಕೇರಿ ಅವನ ಭೂತ ಮತ್ತು ಅವನಾಳದ ಆಸೆ, ಕನಸು ಅಲ್ಲಿನದೇ ಆಗಿವೆ. ವರ್ತಮಾನದಲ್ಲಿ ಅವನು ತೆಂಕಣಕೇರಿಯನ್ನು ಬಿಟ್ಟು ಸಿಟಿಗೆ ಹೊಂದಿಕೊಂಡಿರುವ ಆಧುನಿಕ ವ್ಯಕ್ತಿ ಮತ್ತು ಭವಿಷ್ಯದಲ್ಲಿ ಅವನ ಭೂತವನ್ನೆಲ್ಲಾ ಹತ್ತಿಕ್ಕಿ “ಶಮಿ” ಎಂಬ ಅತ್ಯಾಧುನಿಕ, ಹೊಸ ಜಗತ್ತಿಗೆ ಜಿಗಿಯುವ ಸೆಳೆತ. ಈ ಭೂತ ಭವಿಷ್ಯಗಳ ತಿಕ್ಕಾಟದಲ್ಲಿ ನಲುಗಿಹೋಗುವ ಮನಮೋಹನ. ಪದೇ ಪದೇ ತನ್ನ ಆಧುನಿಕತೆಯನ್ನು ನಿರೂಪಿಸಲು ಹೋಗಿ ಒಬ್ಬ ತೆಂಕಣಕೇರಿಯವನಾಗಿಯೇ ಉಳಿದುಬಿಡುವ ಅಷ್ಟೇ ಅಲ್ಲದೆ ಅದರಿಂದ ಅವಮಾನಿತನಾಗುತ್ತಿದ್ದೇನೆ ಎಂಬ ಭಾವನೆಯನ್ನು ಆರೋಪಿಸಿಕೊಳ್ಳುವುದು ಕಥೆಯ ಪೂರಾ ಕಂಡುಬರುತ್ತದೆ.
ತೆಂಕಣಕೇರಿಯ ಕಿಮಾನಿ ವಕೀಲರದು ಬಹಳವಾಗಿ ಕಾಡುವ ಪಾತ್ರ. ಈತನ ಪಾತ್ರ ವಾಸ್ತವತೆಗೆ ಹಿಡಿದ ಕೈಗನ್ನಡಿ. ಯಾವುದೇ ವೈಚಾರಿಕ, ಕ್ರಾಂತಿಕಾರಿ ಆಲೋಚನೆಗಳು, ಸಾಮಾಜಿಕ ಚೌಕಟ್ಟಿನಿಂದ ಸ್ವಲ್ಪ ಭಿನ್ನವಾಗಿ ಕಂಡುಬಂದರೂ ಅದು ವಿರೋಧದಿಂದ ಮೊದಲುಗೊಂಡು, ಅಪಹಾಸ್ಯವಾಗಿ ಕಡೆಗೆ ನಗಣ್ಯವಾಗಿಯೇ ಹೂತುಹೋಗುತ್ತದೆ. ಸತ್ಯ, ನಿಷ್ಠೆ, ಆದರ್ಶ, ವೈಚಾರಿಕತೆ ಎಂಬಂತಹ ಮೌಲ್ಯಗಳನ್ನು ಜೀವಿಸುತ್ತಿದ್ದ ಕಿಮಾನಿ ವಕೀಲರಿಗೆ ಆರಂಭದಲ್ಲಿ ಜನರು ಹೆದರುತ್ತಿರುತ್ತಾರೆ. ಒಬ್ಬ ಜಗಳಗಂಟನಾಗಿ ಹೆಸರಿಸಿ, ವಿರೋಧಿಸುತ್ತಾರೆ. ಸಣ್ಣ ಅನ್ಯಾಯವನ್ನೂ ಸಹಿಸದೆ ದನಿಯೆತ್ತುವ ಕಿಮಾನಿವಕೀಲರು ದಿನಗಳುರುಳಿದಂತೆ ಒಬ್ಬ ವಿದೂಷಕನಾಗುತ್ತಾನೆ. ಅವನ ಅನುಪಸ್ಥಿತಿಯಲ್ಲಿ ಅವನ ಬಗ್ಗೆ ಜನರು ನಕ್ಕು ಅಪಹಾಸ್ಯ ಮಾಡುತ್ತಾರೆ. ಬರುಬರುತ್ತಾ ಅವನ ಮಾತಿಗೆ ಬೆಲೆಯೂ ಇರದೇ ಆತನೇ ಒಬ್ಬ ನಗಣ್ಯವ್ಯಕ್ತಿಯಾಗಿಹೋಗುತ್ತಾನೆ.
ಅವನು ಎಮರ್ಜೆನ್ಸಿ ಸಮಯದಲ್ಲಿ ಆವೇಶದಿಂದ ಕ್ರಾಂತಿಕಾರಿ ಭಾಷಣ ಮಾಡುವಾಗ ಉಪೇಕ್ಷೆ ಮಾಡಿ ನಕ್ಕು, ಬಂಧಿಸದೇ ಸುಮ್ಮನಾಗುವ ಪೋಲಿಸರು ಮತ್ತು ಅವನ ಮಗಳ ಮದುವೆಯ ಮಾತುಕತೆಗೆ “ನೀವು ತಾಳಿಕಟ್ಟುವಾಗ ಅಲ್ಲಿದ್ದರೆ ಸಾಕು” ಎಂದು ಆಜ್ಞೆ ಮಾಡುವ ಸನ್ನಿವೇಶಗಳು ಮನಮುಟ್ಟುತ್ತದೆ. ಎಲ್ಲರಿಗೂ ತಿಳಿದಿರುವ, ಅತಿದೊಡ್ಡದಲ್ಲದ ಸಾಧಾರಣ ಆದರ್ಶಗಳು ಸಹ ಸೈದ್ಧಾಂತಿಕ ಮೌಲ್ಯಗಳಾಗಿ ನಿಲ್ಲುತ್ತವೆಯೇ ಹೊರತು ಅದು ವ್ಯಾವಹಾರಿಕವಾಗಿ ಕಾರ್ಯರೂಪಕ್ಕೆ ಬಂದರೆ ಅದರ ಬೆಲೆ ಕಳೆದುಹೋಗುತ್ತದೆ. ಶಿಸ್ತಿನಿಂದ ಆದರ್ಶಗಳನ್ನು ಪಾಠಿಸುವುದೇ ತಪ್ಪೇ? ಸಂದರ್ಭಕ್ಕೆ ಅನುಸಾರವಾಗಿ ನಮ್ಮ ನಂಬಿಕೆಗಳನ್ನು ರಾಜಿಮಾಡಿಕೊಳ್ಳುತ್ತಾ ಹೋಗುವುದೇ ನಿರಾಳ ಬದುಕಿನ ರಹಸ್ಯವೇ? ಅಥವಾ ಅದು ಸುಲಭವಾದ ಉತ್ತರವಾದ್ದರಿಂದ ಅದನ್ನೇ ಕಂಡುಕೊಂಡು ನಮ್ಮನ್ನು ನಾವು ನೈತಿಕ ಹೊಣೆಗಳಿಂದ ದೂರಾಗಿಸಿ ನುಣುಚಿಕೊಳ್ಳುತ್ತಿದ್ದೆವೆಯೇ? ಎಂಬ ಎಲ್ಲ ರೀತಿಯ ಪ್ರಶ್ನೆಗಳನ್ನು ಹುಟ್ಟಿಸುವ ಕಿಮಾನಿ ವಕೀಲರು ನಾವೆಲ್ಲರೂ ಆಸೆಪಡುವ, ಆದರೆ ಆ ಪಾತ್ರ ಚಿತ್ರಣದಂತೆ ಜರುಗಬಹುದಾದ ಸನ್ನಿವೇಶಗಳಿಗೆ ಹೆದರಿ ನಮ್ಮಲ್ಲೇ ಇರಬಹುದಾದ ಕಿಮಾನಿಯನ್ನು ಹುದುಗಿಸಿಟ್ಟಿರುವ ಪಾತ್ರವಾಗಿದೆ. “ತತ್ವಗಳ ಪಾಶದಲ್ಲಿ ಒಮ್ಮೆ ಸಿಲುಕಿಕೊಂಡ ಮೇಲೆ ಹೊರಬರಲು ದಾರಿಯೇ ಇರುವುದಿಲ್ಲ”, ಎಂಬ ಮಾತು ಸಾರ್ವಕಾಲಿಕ ಪ್ರಶ್ನೆಯಾಗಿಯೂ, ಉತ್ತರವಾಗಿಯೂ ನಿಲ್ಲುತ್ತದೆ.
ಲೀಟರುಗಟ್ಟಲೆ ಹಾಲನ್ನು ಕಾಸಿ ಬೆಣ್ಣೆ, ತುಪ್ಪ ಮಾಡಿಡುವ ಸದಾನಂದರ ಹೆಂಡತಿ ರಮಾಳ ಪಾತ್ರವು ಕುತೂಹಲವಾಗಿ ಹುಟ್ಟಿಕೊಂಡು, ನಡುವಿನಲ್ಲೆಲ್ಲೋ ಮರೆಯಾಗಿಹೋಗುತ್ತದೆ. ರಮಾಳ ಪಾತ್ರವು ಕಥೆಯಲ್ಲಿ ಹೆಚ್ಚು ಅರಳುವುದಿಲ್ಲ ಎನ್ನುವ ಅಂಶವು ಅವಳ ಪಾತ್ರವಿಸ್ತರಣೆಯಿಂದ ಮುಖ್ಯ ಕಥೆಯ ರಸ್ತೆ ಚದುರಿ “ಸಬಾಲ್ಟ್ರನ್” ಹೆಚ್ಚಾಗಬಹುದು ಎಂಬ ಆತಂಕದಿಂದ ದೂರಾಗುತ್ತದೆ. ಪ್ರಬಲ ಪ್ರತಿಮೆಗಳು, ಸೂಕ್ಷ್ಮ ಸಂವೇದನೆಗಳು, ಒಳನೋಟಗಳು ತುಂಬಿರುವ ಈ ಅದ್ಭುತ ಕಾದಂಬರಿಯಲ್ಲಿ ಸ್ತ್ರೀ ಪಾತ್ರಗಳು ಇನ್ನೂ ಕೊಂಚ ಬೆಳವಣಿಗೆ ಕಾಣಬಹುದಿತ್ತು ಎನಿಸಿದ್ದು ಬಹುಶಃ ಮಹಿಳಾ ಓದುಗಿಯಾದ ನನ್ನ ಪೂರ್ವಾಗ್ರಹ ಇರಬಹುದು! ಹೊಸ ಜಗತ್ತಿನ ಕನಸು ಕಾಣುವ ಮನಮೋಹನನಿಗೆ ಆಗುವ ಅವಮಾನ, ಅಡ್ಡಿಗಳು ಹೊಸತನವನ್ನು ಅಪ್ರಜ್ಞಾಪೂರ್ವಕವಾಗಿ ಧಿಕ್ಕರಿಸುವ ನೆಗಟಿವ್ ಮನೋಭಾವ ಸೂಚಿಸುವುದೇ ಎಂಬ ಅನುಮಾನ ಸಣ್ಣಗೆ ಸುಳಿದುಹೋದರೂ ಇಡೀ ಕಥೆಯು ಮನುಷ್ಯನ ಮನಸ್ಸಿನಾಳದ ಸೂಕ್ಷ್ಮಗಳನ್ನು ಅತ್ಯಂತ ಸಂವೇದನಾಶೀಲವಾಗಿ ಹಿಡಿದಿಟ್ಟಿರುವುದಲ್ಲಿ ಎರಡು ಮಾತಿಲ್ಲ.
ಇಲ್ಲಿ ವಿವರಿಸಿರುವ ಮತ್ತು ವಿವರಿಸದ ಇನ್ನೂ ಹಲವು ಒಳನೋಟಗಳನ್ನು ಹೊಂದಿರುವ ಈ ಕಾದಂಬರಿ, ಒಂದು ಕಥೆ ಎನ್ನುವುದಕ್ಕಿಂತಲೂ ಕಥೆಯ ಮೂಲಕ ಸಾಲುಗಳ ನಡುವೆ ಹೊಮ್ಮಿ ನಮ್ಮನ್ನು ಆವರಿಸುವ cognitive thought process ಎನ್ನಬಹುದು. ನವ್ಯೋತ್ತರದ ಛಾಪಿನಲ್ಲಿ ಮೂಡಿರುವ, ಒಂದು ಮನೋಜ್ಞ ಓದನ್ನು ಕೊಡುವ ಪುಸ್ತಕ ಊರುಭಂಗ ಎಂದು ಹೇಳುತ್ತಾ ಕಾದಂಬರಿಕಾರರಿಗೆ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.

‍ಲೇಖಕರು G

18 February, 2015

6 Comments

  1. Anil Talikoti

    ವಿವೇಕರ ‘ಊರುಭಂಗ’ -ಓದುವಂತೆ ಪ್ರೇರೇಪಿಸುವ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ
    -Anil

  2. Chidambar Narendra

    Very nice

  3. Uma Rao

    Good

  4. satish javaregowda

    Utthamavada krutivondakke sikka vasthunishta vimarsheya gowrava.

  5. mahesh kalal

    odalu hachuva lekhana thumba chennagide

  6. vidyashankar

    Good writing Samyukta… Must read this book

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading