ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲ ಆತ್ಮಗಳಿಗೂ ಒಂದು ಹಾಡಿರಲೇ ಬೇಕೆಂಬ ಯಾವ ನಿಯಮವೂ ಇಲ್ಲ..’ – ಸ್ವರ್ಣ

ಊರ್ಮಿಳೆಯ ಸ್ವಗತ

ಸ್ವರ್ಣ ಎನ್ ಪಿ

ಅವತಾರಿಯಲ್ಲದಿದ್ದರೂ ಅವನ ತಮ್ಮನೊಂದಿಗೆ ಮದುವೆ ಎಂದು ಹಿಗ್ಗಿದ್ದೆ

“ಅವತಾರಿಯ ತಮ್ಮನೆಂದ ಮೇಲೆ ಅವನು, ಅವನ ಶೇಷನೇ ಆಗಿರಬೇಕಲ್ಲವೇ?” ಎಂದಿತ್ತು ಮನಸು.

ನಿನ್ನೊಂದಿಗೆ ಸಪ್ತಪದಿ ತುಳಿಯುವಂತೆ ಮಾಡಿದ ಭಾಗ್ಯವ ನೆನೆದು ಹಿಗ್ಗಿದ್ದೆ.

ನಿನ್ನ ವಂಶದ ಕೀರ್ತಿಗಿನ್ನು ನಾನೂ ಭಾಜನಳು ಎಂಬ ಗಾಢ ವಾದ ಭಾವದೊಂದಿಗೆ ಅಕ್ಕಿಯನ್ನ ಚಿಮ್ಮಿಸಿದ್ದಾಯ್ತು

ಅತ್ತೆ ಮನೆಯ ಹುಳಿನೋವುಗಳನ್ನ ಅನುಭವಿಸುವ ಮುನ್ನವೇ, ನೀ ಹೊರಟಾಗಿತ್ತು

ನನ್ನ ಹಾಸಿಗೆಯ ಚಾದರ ಸುಕ್ಕಾಗಲೇ ಇಲ್ಲ !

ಅಣ್ಣನೊಂದಿಗೆ ಹೊರಟು ನಿಂತ ನಿನ್ನ ಹಟಕ್ಕೆ ಸಮನಾಗಿ ನಾನೂ ಅಕ್ಕನೊಂದಿಗೆ ಹೊರಡುವೆನೆನ್ನಬಹುದಿತ್ತೇನೋ?

ಅದನ್ನರಿವ ಮುಂಚೆಯೇ ನೀವೆಲ್ಲ ನಡೆದಾಗಿತ್ತು

ನನ್ನ ಹಟವನ್ನ ಯಾರೂ ಕೇಳಲೇ ಇಲ್ಲ !

ನೀ ಮತ್ತೆ ಬರುವ ಹೊತ್ತಿಗೆ ಮೌನ ನನಗೆ ಹಿತವೆನಿಸುತಿತ್ತು ಏಕಾಂತ ಒಗ್ಗಿ ಹೋಗಿತ್ತು

ನೀನಿಲ್ಲದ ಹೊತ್ತು ನನ್ನರಿವುದರಲ್ಲಿ ಸರಿದು ಹೋಗಿತ್ತು

ಹೇಳಲು ನನ್ನಲ್ಲೇನೂ ಉಳಿದಿರಲೇ ಇಲ್ಲ !

ಚರಿತ್ರೆ ದಾಖಲಿಸುವವರು ಏನನ್ನ ದಾಖಲಿಸಬೇಕೆಂಬುದನ್ನ ನಿರ್ಧರಿಸಿಯಾಗಿತ್ತು

ನನ್ನ ಕನಸುಗಳು, ಕಂಬನಿಯ ರಾತ್ರಿಗಳು ಹಾಡಾಗಲೇ ಇಲ್ಲ

ನನ್ನ ನಿನ್ನ ಹೆಸರೂ ಸೇರಲಿಲ್ಲ !

ಅದಾರೋ ಶಿಲ್ಪಿ ಗುಡಿಯಲ್ಲಡಿಲು ನನ್ನ ಮೂರ್ತಿ ಕೆತ್ತ ಹೊರಟನಂತೆ

ಮುಖದಲ್ಲಿ ಮಂದಹಾಸವನೆಂತು ತರುವುದು ?

ಅದಕೆ ನನ್ನ ಮೂರ್ತಿಯೂ ನಿನ್ನ ಸೇರಲಿಲ್ಲ

ಈಗ ಇನ್ನಾವುದೋ ಯುಗದಲ್ಲಿ ಒಂದಷ್ಟು ಜನ ನನ್ನ ಬಗ್ಗೆ ಬರೆಯುತ್ತಾರೆಂದು ಕೇಳಿ ನಾ ನಕ್ಕೆ

ಏನೆಂದು ಬರೆಯಬಹುದು ?

ಇಷ್ಟು ಯುಗಗಳು ಬೇಕಾದವೇ ನನ್ನ ಕಂಬನಿ ಲೋಕಕ್ಕೆ ಕಾಣಲು?

ಅದೇಕೋ ಈಗ ಚರಿತ್ರೆಯ ಭಾಗವಾಗುವ ಆಸೆ ಇನ್ನಿಲ್ಲ

ನೋವ ಹಾಡಾಗಿಸುವ ಪ್ರಯತ್ನವೇ ನಗು ಬರಿಸುತ್ತದೆ

ಅಣ್ಣನೊಂದಿಗೆ ನಿಲ್ಲುವುದು ನಿನ್ನ ಅಸ್ತಿತ್ವವಾದರೆ, ನನ್ನದು ಒಂಟಿ ಹಕ್ಕಿಯ ಮೌನ ಗಾನ

ಜಯ ವಿಜಯರ ಮೇಲೆ ವಿಜಯ ಸಾದಿಸಿದ ತೃಪ್ತಿ ನಿನ್ನದಾದರೆ

ನನ್ನೊಳಗಣ ಆರು ರಾಕ್ಷಸರ ಮೇಲೆ ಜಯಿಸಿದ ಆನಂದ ನನ್ನದು

ನನ್ನ ಹಾಡನ್ನ ಯಾರೂ ಹಾಡುವುದು ನನಗೆ ಬೇಕಿಲ್ಲ

ಎಲ್ಲ ಆತ್ಮಗಳಿಗೂ ಒಂದು ಹಾಡಿರಲೇ ಬೇಕೆಂಬ ಯಾವ ನಿಯಮವೂ ಇಲ್ಲ !

 

‍ಲೇಖಕರು G

5 December, 2012

6 Comments

  1. Shrivatsa Kanchimane

    ಊರ್ಮಿಳೆ ಸದಾ ಕಾಡುವ ಪಾತ್ರ..
    ತುಂಬಾನೇ ಇಷ್ಟವಾಯಿತು ಬಾವ ಬರಹ…

  2. veda

    Wah mana muttuvantide Swarna

  3. Shwetha Hosabale

    ಚೆನ್ನಾಗಿದೆ ಕವನ…ಇಷ್ಟ ಆಯ್ತು.

  4. Swarna

    ಮೆಚ್ಚಿ ಪ್ರತಿಕ್ರಿಯಿಸಿದ ತಮಗೆಲ್ಲರಿಗೂ,ಪ್ರಕಟಿಸಿದ ಅವಧಿಗೂ ವಂದನೆಗಳು

  5. Suma

    Tumbha chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading