ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿ ಹೋದವೋ ಗೆಳೆಯ ಆ ಕಾಲ?

ಮಂಜುನಾಯಕ ಟಿ

ಎಷ್ಟು ಜನ ಒಪ್ತಾರೋ ಗೊತ್ತಿಲ್ಲ. ನಂಗಂತು ಚೂರೂ ಅನುಮಾನಾನೇ ಇಲ್ಲ; ನಮ್ಮೊಳಗಿನ ಕೋತಿಗೆ ಬಾಲ ಬಂದದ್ದು ಆ ದಿನಗಳಲ್ಲೇ ಅನ್ನುವ ವಿಷ್ಯದಲ್ಲಿ. ಆ ದಿನಗಳೆಂದರೆ ಹೈಸ್ಕೂಲು ದಿನಗಳು. ಚಡ್ಡಿಗೆ ನಮಸ್ಕಾರ ಹೇಳಿ ಪ್ಯಾಂಟು ಏರಿಸಿಕೊಂಡು ಸರಕಾರ ಕೊಡಿಸಿದ್ದ ಸೈಕಲ್ಲಿನಲ್ಲಿ ಸ್ಟೈಲಾಗಿ ಅಲೆಯುತ್ತಿದ್ದ ದಿನಗಳವು. ಮೇಷ್ಟ್ರುಗಳಿಂದ ಬೈಸಿಕೊಂಡು, ಹೊಡೆಸಿಕೊಂಡು, ಕೆಲವೊಮ್ಮೆ ಪೆಕಾಪೆಕಾ ಒದೆಸಿಕೊಂಡು ದಾರಿ ತಪ್ಪದ ಮಕ್ಕಳಾಗಿ ರೂಪುಗೊಂಡ ದಿನಗಳವು. ಮುಗ್ದತೆಯ ಕಲ್ಯಾಣಿ ಚೂರು ಚೂರೇ ಕದಲಲಿಕ್ಕೆ ಶುರುವಿಟ್ಟುಕೊಂಡ ದಿನಗಳವು. ಮೊದಮೊದಲ ಕ್ರಶ್ಯು ಇಷ್ಯು ಇತ್ಯಾದಿಗಳೆಲ್ಲ ಧುತ್ತನೆ ಎದುರಾಗಿ ಗಲಿಬಿಲಿಗೊಳಿಸಿದ್ದ ದಿನಗಳವು. ಆದಷ್ಟು ಕನ್ನಡಿಂಗ್ಲೀಷುಹಿಂದಿಗಳ ವ್ಯಾಕರಣವನ್ನೂ ತಕ್ಕ ಮಟ್ಟಿಗೆ ಒಳ್ಳೇದು ಕೆಟ್ಟದ್ದುಗಳ ವ್ಯಾಕರಣವನ್ನೂ ಕಲಿತುಕೊಂಡ ದಿನಗಳವು. ಜಗತ್ತನ್ನು ಬ್ರಿಟಾನಿಯ ಬ್ಯಾಟಲ್ಲಿ ಚಚ್ಚಿಬಿಟ್ಟೇನು, ವಿದ್ಯಾ ನೋಟುಬುಕ್ಕಿನಲ್ಲಿ ಎಂದೂ ಮರಿ ಹಾಕದ ನವಿಲುಗರಿಯಂತೆ ಮುಚ್ಚಿಬಿಟ್ಟೇನು ಅಂತಂದುಕೊಳ್ಳುತ್ತಿದ್ದ ದಿನಗಳವು. ಸಣ್ಣಗೆ ಶುರುವಾಗಿದ್ದ ಹರೆಯದ ಹವೆಯಲ್ಲಿ ಹಾರಾಡುತ್ತ ಹುಡುಗಾಟಿಕೆಯನ್ನೇ ಪರಮೋದ್ದೇಶ ಮಾಡಿಕೊಂಡು ಕಳೆದ ದಿನಗಳವು. ಮಿತಿಯಿಲ್ಲದಂತೆ ಕನಸುತ್ತಿದ್ದ ದಿನಗಳವು. ಎಸ್ಸೆಲ್ಸಿ ಎಂಬ ‘ಭೂತಯ್ಯನ ಮಗ ಗುಮ್ಮಯ್ಯ’ ಆಗಾಗ ಕನಸಲ್ಲಿ ಬಂದು ಕಿರಿಕಿರಿ ಮಾಡುತ್ತಿದ್ದ ದಿನಗಳವು. ಅಷ್ಟೇ ಯಾಕೆ ಎದುರಾಡಲಿಕ್ಕೆ, ಸುಳ್ಳು ಹೇಳಲಿಕ್ಕೆ ನಮಗೆ ನಾವೇ ಅಧಿಕೃತ ಲೈಸನ್ಷ್ ಪಡೆದುಕೊಂಡ ದಿನಗಳು ಕೂಡ ಅವೇ.
‘ಮಕ್ಳಾ ಜಾಸ್ತಿ ಬಾಲ ಬಿಚ್ಬೇಡಿ..ಬಾಲ ಕಟ್ ಮಾಡಬೇಕಾಗುತ್ತೆ ನೋಡಿ’ ಹೀಗಂತ ಗಣಿತ ಕಲಿಸುತ್ತಿದ್ದ ನಮ್ಮ ಅಂಬಿಕಾ ಮೇಡಂ ತಾಕೀತು ಮಾಡುತ್ತಿದ್ದರು. ನಾವು ಭಾನಗಡಿಯೊಂದನ್ನು ಮಾಡಿ ಸಿಕ್ಕಿ ಬಿದ್ದಾಗೊಮ್ಮೆ ಈ ಮಾತು ಪುನರಾವರ್ತನೆಯಾಗುತ್ತಿತ್ತು. ಆ ಮಾತಿನ ಅರ್ಥ ಈಗೀಗ ಗೊತ್ತಾಗುತ್ತಿದೆ.

ಆ ದಿನಗಳ ಘಮ್ಮತ್ತೇ ಘಮ್ಮತ್ತು. ಅಷ್ಟು ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಹಳ್ಳಿ ನಮ್ಮ ಚಳ್ಳೂರು. ಊರು ಬಿಟ್ಟು ಎರಡ್ಮೂರು ಕಿಮೀ ದೂರದಲ್ಲಿದ್ದ ನಾಲ್ಕು ಮತ್ತೊಂದು ಕೋಣೆಗಳಿದ್ದ ಪುಟ್ಟ ಹೈಸ್ಕೂಲು. ಸುತ್ತಲಿನ ನಾಲ್ಕೈದು ಹಳ್ಳಿಗಳಿಗೆ ಅದೊಂದೇ ಹೈಸ್ಕೂಲು. ನಮ್ಮ ಕ್ಲಾಸಲ್ಲಿದ್ದದ್ದು ಅರವತ್ತೂ ಚಿಲ್ಲರೆ ತಲೆಗಳಷ್ಟೆ. ಅಷ್ಟೂ ಜನ ಹಾಜರಿದ್ದ ದಾಖಲೆ ಮೂರು ವರ್ಷದ ಇತಿಹಾಸದಲ್ಲೇ ಇಲ್ಲ. ಇದ್ದ ನಾಲ್ಕು ಮತ್ತೊಬ್ಬರು ಶಿಕ್ಷಕರು ನಮ್ಮನ್ನೆಲ್ಲ ಸಂಭಾಳಿಸುವುದರಲ್ಲಿ ಹೈರಾಣಾಗಿಬಿಡುತ್ತಿದ್ದರು. ಅದ್ಹೇಗೋ ಪ್ರತಿ ವರ್ಷ ನಮ್ಮ ಕ್ಲಾಸಿನ ಗಂಡು ಮಕ್ಕಳ ಸೆಕ್ರೆಟರಿಯಾಗಿ ಆಯ್ಕೆಯಾಗಿಬಿಡುತ್ತಿದ್ದೆ. ಹಾಗೆ ನೋಡಿದರೆ ನಮ್ಮ ಹೈಸ್ಕೂಲು ಕಂಡ ಅತಿ ಭ್ರಷ್ಟ ಸೆಕ್ರೆಟರಿ ನಾನೇ ಅನ್ಸುತ್ತೆ. ಗುರುಗಳಿಲ್ಲದ ಸಮಯದಲ್ಲಿ ಕ್ಲಾಸಲ್ಲಿ ಮಾತನಾಡಿದೋರ ಹೆಸರನ್ನು ಬೋಡರ್ಿನ ಮೇಲೆ ನಮೂದಿಸಿ ಗುರುಗಳಿಂದ ಕಜ್ಜಾಯ ತಿನ್ನಿಸುವುದು ಸೆಕ್ರೆಟರಿ ಆದವರ ಮುಖ್ಯ ಕರ್ತವ್ಯಗಳಲ್ಲೊಂದು. ನಂಗೆ ನನ್ನ ಪ್ರೀತಿಯ ಉಡಾಳ ಗೆಳೆಯರನ್ನು ತದುಕಿಸಲಿಕ್ಕೆ ಸುತಾರಾಂ ಇಷ್ಟ ಇರುತ್ತಿರಲಿಲ್ಲ. ಹಂಗಾಗಿ ಈ ಒಂದು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಅವರನ್ನು ಬಚಾವು ಮಾಡುತ್ತಿದ್ದೆ. ಅವರ ಸ್ನೇಹಕ್ಕಾಗಿ ಕರ್ತವ್ಯಭ್ರಷ್ಟನಾಗುತ್ತಿದ್ದೆ!
ಇದು ನಮಗೆ ಶತ್ರುಪಕ್ಷದ ನಾಯಕಿಯಂತೆ ಗೋಚರಿಸುತ್ತಿದ್ದ ಲೇಡಿ ಸೆಕ್ರೆಟರಿಗೆ ಆಗಿ ಬತರ್ಿರಲಿಲ್ಲ. ನಾವೆಲ್ಲ ಹುಡುಗರು ‘ಇಂದಿರಾಗಾಂಧಿ’ ‘ಚಾಮುಂಡಿ’ ಅಂತೆಲ್ಲಾ ಕರೆಯುವಷ್ಟು ಆಕೆ ಕರ್ತವ್ಯನಿಷ್ಠೆಯಾಗಿದ್ದಳು! ಆಕೆ ನಾವು ಕ್ಲಾಸಲ್ಲಿ ಮಾಡುತ್ತಿದ್ದ ಹಗರಣಗಳನ್ನೆಲ್ಲ ಹೆಡ್ ಮೇಷ್ಟ್ರಿಗೆ ವರದಿ ಮಾಡುತ್ತಿದ್ದಳು. ಕೆಲವೊಮ್ಮೆ ಆಕೆಯ ವರದಿಗಳಿಂದ ನಮಗೆ ಹೆಡ್ ಮಾಸ್ತರರ ರೂಲು ದೊಣ್ಣೆಯ ಚುರುಗುಟ್ಟುವ ಪೂಜೆಯಾಗುತ್ತಿತ್ತು. ಇನ್ನು ಮಂಗಳಾರತಿ, ಮಹಾ ಮಂಗಳಾರತಿ, ಮಹಾ ಮಸ್ತಕಾಭಿಷೇಕಗಳಿಗಂತೂ ಲೆಕ್ಕವಿಲ್ಲ. ಹಿಂಗಾಗಿ ಆಕೆಗೂ ನಮ್ಮ ಉಡಾಳ ಪಟಾಲಮ್ಮಿಗೂ ದಿನಕ್ಕೊಂದು ಜಗಳ ಗ್ಯಾರಂಟಿ. ಜಗಳವಾಡದ ದಿನ ಮದ್ಯಾಹ್ನದ ಬಿಸಿ ಊಟ ಅರಗುವುದಿಲ್ಲವೇನೋ ಎಂಬಷ್ಟು ಕಿತ್ತಾಟಗಳು ಕಾಮನ್ನಾಗಿದ್ದವು.
ಒದ್ದಾಡಿಕೊಂಡು ಹೊಟ್ಟೆ ನೋಯುವಷ್ಟು ನಗಲಿಕ್ಕೆ ದಿನಕ್ಕೊಂದಾದರೂ ಕಾರಣ ಒದಗಿಸುತ್ತಿದ್ದ ಗೆಳೆಯ ನಿಂಗನ ಬಗ್ಗೆ ಹೇಳಲೇ ಬೇಕು. ಅವನಂತು ನಮ್ಮ ಕ್ಲಾಸಿನ ಉಢಾಳ ಗಣ್ಯರಿಗೆಲ್ಲ ಗಣ್ಯನಂತಿದ್ದವ. ಅಂವ ನಮ್ಮೂರಿನ ಪಕ್ಕದೂರಾದ ಹಗೇದಾಳದವ. ಸುಗ್ಗಿ ದಿನಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಹಾಜರಿರುತ್ತಿದ್ದ. ಅವನು ಮಾಡುತ್ತಿದ್ದ ಮಿಮಿಕ್ರಿಗಳು, ಅಂವ ಬೇಕಂತಲೇ ವಿಚಿತ್ರವಾಗಿ ಯಾವುದೋ ಹಕ್ಕಿ ನಕ್ಕಂತೆ ನಗುತ್ತಿದ್ದ ರೀತಿ, ಮೇಷ್ಟ್ರು ಹೊಡೆಯುವಾಗ ತಪ್ಪಿಸಿಕೊಂಡು ಸುಮ್ಸುಮ್ನೆ ಮಹಾ ನೋವಾದವನಂತೆ ನಟಿಸುತ್ತಿದ್ದ ಪರಿ, ರಾಜಾರೋಷವಾಗಿ ಎದ್ದು ನಿಂತು ಕೇಳಿ ಒಂದೆರಡಕ್ಕೆ ಹೋಗುತ್ತಿದ್ದಾಗಿನ ಅವನ ರಾಜಗಾಂಭೀರ್ಯತೆ- ಅವನ್ನೆಲ್ಲ ಈಗ ನೆನಪಿಸಿಕೊಂಡರೂ ನಗು ತಡೆದುಕೊಳ್ಳಲಿಕ್ಕಾಗಲ್ಲ. ಒಮ್ಮೆ ಮೇಡಂ ‘ನಿಂಗು.. ನೆನ್ನೆ ಯಾಕೋ ಶಾಲೆಗೆ ಬಂದಿರಲಿಲ’್ಲ ಅಂತ ಕೇಳಿದ್ದಕ್ಕೆ ‘ನಮ್ಮ ಎಮ್ಮೆ ಕಟ್ಟಿಸಿಕೊಂಡು ಬರೋಕೆ ಕ್ಯಾಂಪಿಗೆ ಹೋಗಿದ್ದೆ ಮೇಡಂ’ ಅಂತಂದಿದ್ದ ಭೂಪ ಅಂವ!
ಅಡ್ಡಹೆಸರುಗಳು… ಕರೆಯಲು, ಕಾಡಿಸಲು ನಾವಿಟ್ಟುಕೊಂಡಿದ್ದ ಅಡ್ಡ ಹೆಸರುಗಳ ಉದ್ದ ಪಟ್ಟಿಯೇ ಇದೆ. ಹೆಸರಿಡಿಸಿಕೊಂಡವರ ನಸೀಬು ಒಂಚೂರು ಕೆಟ್ಟಿದ್ದಾಗ ಹುಟ್ಟಿಕೊಳ್ಳುತ್ತಿದ್ದ ಅವರವರ ಬಿರುದಾಂಕಿತಗಳು ಅವರಿಗೆ ಹೈಸ್ಕೂಲು ಜೀವನ ಮುಗಿಯುವವರೆಗೂ ಕಾಟ ನೀಡಿದ್ದುಂಟು. ಕಪ್ಪೆ, ಭೂತ, ಕೋರಿ, ಚೀರ, ವಡ್ರ, ಹಲ್ಲ, ಕರಡಿ, ಕಪಾಳ, ಕರಿಬೇವ, ಟಿಕ್ಕ, ನಾಗವಲ್ಲಿ, ಅಂಟ, ಕಿಜರ್ಿಕೋಳಿ, ಉಪುಳಿ, ಆನೆ, ಆನೆಕಿವಿ, ಯಂಕಣ್ ಮಾಸ್ತರ, ಟ್ಯರ್ರ..ಹೀಗೆ ವಿಚಿತ್ರಾನುವಿಚಿತ್ರವಾದ ಮತ್ತು ಪಕ್ಕಾ ಸಂಸ್ಕೃತ ಮೂಲದಿಂದ ಬಂದ ಶಬ್ದಗಳನ್ನೇ ನಾವು ಅಡ್ಡಡ್ಡ ಹೆಸರುಗಳಾಗಿ ಬಳಸಿಕೊಳ್ತಿದ್ವಿ! ಇವು ಅವರವರ ನಿಜನಾಮಧೇಯದೊಂದಿಗೆ ಸದಾ ಅಂಟಿಕೊಂಡಿರುತ್ತಿದ್ದವು.
ಹೀಗೆ ಹೈಸ್ಕೂಲು ಅಂದಾಕ್ಷಣ ನೆನಪಾಗೋ ಎಷ್ಟೋ ಸಂಗತಿಗಳಿವೆ. ಮೂರು ವರ್ಷವನ್ನು ಬಣ್ಣಬಣ್ಣದ ಮಳಿಗೆಗಳ ಗಿಜಿಗುಡುವ ಜಾತ್ರೆಯಾಗಿಸಿದ್ದ, ತರಹೇವಾರಿ ಹೂಗಳ ಸಂತೆಯಾಗಿಸಿದ್ದ ಸ್ನೇಹಿತರನ್ನು, ಆ ಪುಟ್ಟ ಶಾಲೆಯ ಕಾರಿಡಾರು ಮೈದಾನಗಳನ್ನು, ನಾವೇ ಬೈಸಿಕೊಳ್ಳುತ್ತ ನೆಟ್ಟಿದ ಗಿಡಗಳನ್ನು, ಗಂಟೆಯ ಟಣ್ ಟಣ್ ಶಬ್ದವನ್ನು, ನಮ್ಮೊಳಗಿನ ಬಾಲ ಬಂದ ಕೋತಿಯ ತಿದ್ದಿದ ಗುರುಗಳನ್ನು, ಹಬ್ಬದಂತೆ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟ ಪ್ರತಿಭಾ ಕಾರಂಜಿಗಳನ್ನು, ಗೆದ್ದ ಕಪ್ಪುಗಳನ್ನು, ಸೋತ ಪಂದ್ಯಗಳನ್ನು, ಹೊಡೆಸಿಕೊಂಡು ಕೆಂಪಾಗಿರುತ್ತಿದ್ದ ಅಂಗೈಗಳನ್ನು, ಮೊನ್ನೆ ತೀರಿ ಹೋದ ಒಂದು ಸಾರಿಯೂ ಹೊಡೆಯದ ಸಿದ್ದಲಿಂಗಪ್ಪ ಮಾಸ್ತರರನ್ನು, ಅವರು ಹಾಡ್ತಿದ್ದ ಹಾಡುಗಳನ್ನು, ಅವರ ನೀಲಿ ಎಕ್ಷ್ ಎಲ್ ಸೂಪರ್ ಗಾಡಿಯನ್ನು, ಅವರು ಕಲಿಸಿ ಬಿಟ್ಟು ಹೋದ ಸಮಾಜ ವಿಜ್ಞಾನದ ಪಾಠಗಳನ್ನು, ಹೈಸ್ಕೂಲ ದಾರಿಯಲ್ಲಿ ಕಂಡ ಎಷ್ಟೋ ಮರೆತುಹೋದ ಕನಸುಗಳನ್ನು, ಇತ್ಯಾದಿ ಇತ್ಯಾದಿ ಇತ್ಯಾದಿಗಳನ್ನು ನೆನೆದಾಗ ಎದೆಯ ಬೀದಿ ಹಸಿಯಾಗುತ್ತೆ. ಹಸಿರುಟ್ಟ ನಮ್ಮೂರ ಭತ್ತದ ಗದ್ದೆಯಾಗುತ್ತೆ, ‘ಎಲ್ಲಿ ಹೋದವೋ ಗೆಳೆಯ ಆ ಕಾಲ’ ಎಂಬ ಬೇಂದ್ರೆಯಜ್ಜನ ಹಾಡೇಕೋ ತಟ್ಟಂತ ನೆನಪಾಗುತ್ತೆ.

‍ಲೇಖಕರು G

2 April, 2015

4 Comments

  1. mallikarjun talwar

    good write up

  2. Veda H

    ಬಾಲ್ಯದ ನೆನಪುಗಳೇ ಹಾಗೆ,ನೆನಪಾದಾಗ ನಮಗರಿಯದೇ ನಮ್ಮ ಕಣ್ಣಲ್ಲಿ ಒಂದು ಹೊಳಪು ಮೂಡುತ್ತೆ. ನಮಗರಿಯದೇ ಕಣ್ಣಿಂದ ಹನಿಯೊಂದು ಜಾರುತ್ತೆ……. ಸುಂದರವಾದ ಲೇಖನ ಸರ್, ನಿಮ್ಮ ಲೇಖನದ ಮೂಲಕ ನಮ್ಮನ್ನ ನಮ್ಮ ಬಾಲ್ಯದ ನೆನಪುಗಳ ಅಂಗಳಕ್ಕೆ ಕೊಂಡೊಯ್ದಿರಿ. 🙂

  3. manjunayak

    Thank you veda h and mallikarjun talwar

  4. Gayatri Badiger

    Nenepugal nenepu..SUPER…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading