ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲವನ್ನೂ ಅನುಭವಿಸುವುದೇ ಬದುಕಲ್ಲವಾ?

– ಎಚ್ ಕೆ ಶರತ್


ಕೂತಲ್ಲಿ ಮಂದ ಬೆಳಕು. ಹೊರಗೆಲ್ಲ ಥಳುಕು ಬಳುಕು. ನನ್ನೊಳಗೆ ಅವಳು ಉಣಿಸಿದ ಪುಳಕದ ಮೆರವಣಿಗೆ. ಮೇಲಿಂದ ಸುರಿಯುತ್ತಿರುವ ಮಳೆ, ಇಳಿ ಸಂಜೆಯ ಜೀವ ಕಸಿದುಕೊಂಡಿದೆ. ಸಂಜೆ ಜೀವವಿದ್ದೂ ಶವವಾಗಿದೆ. ಜಗತ್ತು ಜಡವಾಗಿದೆ. ಜೀವಗಳು ಜೀವಂತ ಬೊಂಬೆಗಳಾಗಿವೆ. ನೀರು ಹರಿಯುತ್ತಿದೆ. ಜಗದ ರಾಡಿ ತೊಳೆಯುತ್ತಿದೆ.
ಬದುಕು ಪರಮಾಪ್ತವೆನಿಸಿದರೂ ಪ್ರಶ್ನೆಯಾಗಿಯೇ ಉಳಿಯುವುದು ಮನಸ್ಸು ಗೊಂದಲದ ಗುಡಿಯಲ್ಲಿ ಕುಳಿತಾಗಲೇ. ಇಲ್ಲಿವರೆಗೂ ನಮ್ಮ ಬದುಕಿಗೇ ಅಪರಿಚಿತವಾದವರು ಇದ್ದಕ್ಕಿದ್ದಂತೆ ನಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು, ಹಳೆ ನಂಬಿಕೆಗಳು ನಮ್ಮನ್ನಗಲುವುದು, ಪಡೆದುಕೊಳ್ಳುತ್ತಲೇ ಕಳಕೊಳ್ಳುವುದು, ಕಳಕೊಳ್ಳುತ್ತಲೇ ಪಡೆಯುವುದು, ಲೆಕ್ಕಾಚಾರದ ಸಹವಾಸವೇ ಬೇಡವೆನ್ನುತ್ತ ಹೊಸ ವಿಚಾರದ ಬೆನ್ನ ಹಿಂದೆ ಸಾಗುವುದು, ಎಲ್ಲೋ ಸಿಕ್ಕವರನ್ನು ಮತ್ತೆಲ್ಲೋ ಬಿಟ್ಟು ಮುಂದಕ್ಕೋಡುವುದು… ಬದುಕಿನ ಸುರುಳಿಗಳನ್ನು ಬಿಚ್ಚುತ್ತ ಹೋಗುವುದು ಮಣ್ಣು ಬಗೆಯುತ್ತ ಹೋದಂತೆ. ಗುಂಡಿ ತೋಡಾಯ್ತು ಅಂತ ಕತ್ತೆತ್ತಿ ನೋಡಿದ್ರೆ ನಾವೂ ಗುಂಡಿ ಪಾಲಾಗಿರುತ್ತೇವೆ. ಸಮತಟ್ಟಾದ ನೆಲದ ಮೇಲೆ ನಿಂತ ಬದುಕು ಅಪರಿಚಿತವಾಗಿಯೇ ಉಳಿಯುತ್ತದೆ.
ಎಲ್ಲರೊಳಗೂ ಎಲ್ಲವನ್ನೂ ಮೀರಬೇಕೆಂಬ ತುಡಿತವಿರುತ್ತೆ. ಹೊರಗಿನ ವಾಸ್ತವದ ತಿವಿತಕ್ಕೆ ಬೆದರಿ ಮಿತಿಯ ಗಡಿ ದಾಟದವರೇ ಹೆಚ್ಚು. ಭಾವುಕತೆ ಮತ್ತು ವಾಸ್ತವತೆಯ ನಡುವೆ ಎದ್ದು ನಿಂತಿರುವ ಗೋಡೆ ಎಷ್ಟೋ ಕನಸುಗಳ ನೆಲ ಸಮಾಧಿ ಮಾಡಿದೆ.
ಎಲ್ಲರಿಗೂ ನಾವು ಇಂದಲ್ಲ ನಾಳೆ ಸಾಯ್ತೀವಿ ಅನ್ನೋದು ಗೊತ್ತು. ಆದ್ರು ಸಾವಿರಾರು ವರ್ಷ ಬದುಕುವವರ ಹಾಗೆ ಮಾತಾಡ್ತೀವಿ. ಸಮಾಜದ ಹೆಸರೇಳಿಕೊಂಡು ನಮ್ಮದಲ್ಲದ ಬದುಕು ಬಾಳುತ್ತಾ ಸಾಗ್ತೀವಿ.
ಹಣ, ಆಸ್ತಿ ಮಾಡ್ಬೇಕು. ಹಂಗ್ ಬದುಕ್ಬೇಕು ಹಿಂಗ್ ಬದುಕ್ಬೇಕು ಅಂದ್ಕೊತೀವಿ. ಆದ್ರೆ ಏನೇ ಮಾಡಿದ್ರೂ ಸಮಾಧಾನ ನಮ್ಮದಾಗಲ್ಲ.
ಅಷ್ಟಕ್ಕೂ ಎಲ್ಲ ಸಿಕ್ತು ಅಂದ್ಕೊಂಡ್ರೆ ನಾವು ಸತ್ತಂತೆ ಅಲ್ವ? ನಮ್ಮೊಳಗೆ ಸುಲಭಕ್ಕೆ ಸಿಗದ್ದನ್ನು ದಕ್ಕಿಸಿಕೊಳ್ಳಬೇಕೆಂಬ ತುಡಿತವಿಲ್ಲದೇ ಹೋದರೆ ಬದುಕುವ ಬಯಕೆಯಾದರೂ ಎಲ್ಲಿ ಹುಟ್ಟುತ್ತೆ?
ನಾವು ಯಾವ ಕಾರಣಕ್ಕೆ ಇನ್ನೊಬ್ಬರು ತೋರುವ ಮಾರ್ಗದಲ್ಲಿ ನಡೆಯಬೇಕು? ಬದುಕು ಪ್ರತಿಯೊಬ್ಬರಿಗೂ ನಮಗಿಷ್ಟವಾದ ಹಾದಿ ತುಳಿಯಲು ಬಿಟ್ಟಿರುವಾಗ ನಾವೇಕೆ ಚೌಕಟ್ಟುಗಳಡಿಯಲ್ಲಿ ಬಂಧಿಯಾಗಬೇಕು?
ಇರುವುದೇ ಅನುಭವಿಸುವುದಕ್ಕಲ್ಲವಾ? ಬದುಕೆಂದರೆ ಎಲ್ಲವನ್ನೂ ಅನುಭವಿಸುವುದೇ ಅಲ್ಲವಾ? ಆದರೂ ನಾವೇಕೆ ಎಲ್ಲದಕ್ಕೂ ಮಿತಿಯ ಗೆರೆ ಎಳೆಯುತ್ತೇವೆ? ಇನ್ನೊಬ್ಬರಿಗೆ ಹಿಂಸೆ ಕೊಡದೇ ನಮಗನಿಸಿದ್ದನ್ನು ಮಾಡಿಕೊಂಡಿರಬಾರದೇಕೆ? ನಾಲ್ಕಂತಸ್ತಿನ ಕಟ್ಟಡದ ಒಳಗೆ ಕನಸು ಎಷ್ಟು ದಿನ ಉಸಿರಾಡಬಲ್ಲದು?

‍ಲೇಖಕರು G

28 September, 2014

1 Comment

  1. Vasanth

    ಈ ಸಮಾಜ ಮನುಷ್ಯರನ್ನು ಸಹಜವಾಗಿ ಬದುಕಲು ಬೀಡುತ್ತಿಲ್ಲ. ಭಾವುಕತೆಯ ಹೆಸರಿನಲ್ಲಿ ಬದುಕನ್ನು ಇನ್ನಷ್ಟು ಗೊಂದಲಗೊಳಿಸುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading