ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲರಿಗೂ ಆಪ್ತವಾಗುವ ‘ಮಹಿ’

ವಸು ವತ್ಸಲೆ ಬರೆದ ಮಕ್ಕಳ ಕಾದಂಬರಿ ‘ಮಹಿ’

‘ಅವ್ಯಕ್ತ ಪ್ರಕಾಶನ’ ಈ ಪುಸ್ತಕವನ್ನು ಪ್ರಕಟಿಸಿದೆ.

ಈ ಪುಸ್ತಕದ ಕುರಿತು ಗುಂಡುರಾವ್ ದೇಸಾಯಿ ಅವರ ಅನಿಸಿಕೆ ಇಲ್ಲಿದೆ.

ಗುಂಡುರಾವ್ ದೇಸಾಯಿ

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳೆ ವಿರಳ ಅದರಲ್ಲಿ ಮಕ್ಕಳ ಸಾಹಿತ್ಯದಲ್ಲಿ  ಹೆಣ್ಣುಮಕ್ಕಳ ಸಂವೇದನಗಳಂತೂ ಹುಡುಕುವುದೆ ಕಷ್ಟ. ವೈದೇಹಿ, ವಿಜಯಶ್ರೀ ಹಾಲಾಡಿ, ಲಲಿತಾ ಹೊಸಪ್ಯಾಟಿ, ಭಾಗಿರಥಿ ಹೆಗಡೆ ಹೀಗೆ ಬೆರೆಳಣಿಕೆಯ ಮಹಿಳಾ ಮಕ್ಕಳ ಸಾಹಿತಿಗಳನ್ನು ಬಿಟ್ಟರೆ ಇತ್ತ ಅಣಕಿ ಹಾಕುವವರು ತೀರಾತೀರಾ ವಿರಳ. ಅದರಲ್ಲಿ ಬಾಲ್ಯಕೇಂದ್ರಿತ ಸಾಹಿತ್ಯ ಬರೆಯುವರು ಸಿಗುವುದು ಬಹಳ‌ಕಷ್ಟ. ಅಂತಹುದರಲ್ಲಿ ಮಹಿ ಎನ್ನುವ ಕಾದಂಬರಿ ಮೂಲಕ ಮಕ್ಕಳ ಸಾಹಿತ್ಯದಲ್ಲಿ ಹುಡಗಿಯರ ಸಂವೇದನೆಯ ಧ್ವನಿ ಎತ್ತಿದವರು ವಸುವತ್ಸಲಾ ಅವರು.

2025 ರ ಜಿ.ಬಿ.ಹೊಂಬಳ ರಾಜ್ಯ ಪ್ರಶಸ್ತಿ ಪಡೆದ ಮಕ್ಕಳ‌ ಈ ಕಾದಂಬರಿ ಹೆಣ್ಣುಮಗಳ ಬಾಲ್ಯವನ್ನು ರಸವತ್ತಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ವಾಸ್ತವ ಹಾಗೂ ರಮ್ಯತೆ (ಫ್ಯಾಂಟಸಿ) ಒಳಗೊಂಡಿರುವ 206 ಪುಟಗಳ ಈ ಕಾದಂಬರಿ ಮಹಿಯ ಸಾಹಸದ ಚಿತ್ರಕತೆಯಂತಿದೆ. ಮಕ್ಕಳ ಸಾಹಿತ್ಯವೆಂದರೆ ಮಕ್ಕಳು ಮಾತ್ರ ಓದಬೇಕೆನ್ನುವ ಮೌಢ್ಯದಿಂದ ಹೊರಬರಬೇಕಾದ ಸಾಹಿತ್ಯವಾಗಿದೆ.‌ ದೊಡ್ಡವರು ಓದಲೇಬೇಕಾದ ಸಾಹಿತ್ಯ ಹೊಸಗಾಲದ‌ ಮಕ್ಕಳ‌ ಸಾಹಿತ್ಯವಾಗಿದೆ.

ಮಹಿ ಹಾಗೂ ಮಿತಾ ಕಾದಂಬರಿಯ ತುಂಬಾ ಓಡಾಡುವ ಪಾತ್ರಗಳು. ಮಸ್ತವ್ವ, ಮಾದಜ್ಜ ಅವರ ಮಾತು ಮತ್ತು ನಡುವಳಿಕೆ ಅಚ್ಚರಿ ಮತ್ತು ಕುತೂಹಲ ಹುಟ್ಟಿಸುವ ಪಾತ್ರಗಳು.

ಹೆಣ್ಣು ಎಂದರೆ ಅಬಲೆ ಅಲ್ಲ ಎನ್ನುವ ಸಂಗತಿ ಮಹಿ ಮತ್ತು ಮಿತಾ ತೋರಿಸುತ್ತಾರೆ. ಅಂಜುಬುರುಕ ಹಾಗೂ ಇವರ ಕಾರ್ಯಕ್ಕೆ ಅಡ್ಡವಾಗುವ ಅಜ್ಜು ಕೂಡಾ ಇದ್ದಾನೆ.

ಲೇಖಕಿಗೆ ಬಾಲ್ಯ ಅಪಾರವಾಗಿ ಕಾಡಿದುದ್ದಕ್ಕಾಗಿ ಬಾಲ್ಯದ ಎಲ್ಲ ನೆನಪುಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಬಾಲ್ಯದ ಹುಡುಗಾಟಿಕೆಗಳು, ಚೇಷ್ಟೆಗಳು, ಕೀಟಲೇಗಳು ಸಹಜವಾಗಿ ಅರಳಿ ಓದುವವರನ್ನು ಮತ್ತೆ ಬಾಲ್ಯಕ್ಕೆ ಕರೆದೊಯ್ಯದೆ ಇರದು.

ಹಸು, ಕರು, ಮೊಲ(ಬಿಳಿಯ)ದ ಒಡನಾಟದ ಸಂಗತಿಗಳು ಪ್ರಬಂಧದಂತೆ ಮೂಡಿಬಂದಿವೆ.

ಈ ಕಾದಂಬರಿಯಯ ಮಹಿ ಸಾಮಾನ್ಯ ಹುಡುಗಿ ಅಲ್ಲ.‌ ಹೊಸತನದ‌ ಹುಡುಕಾಟದ, ಸಾಹಸ‌ಮರೆಯುವ, ಪ್ರತಿಯೊಂದನ್ನು ಕುತೂಹಲದಿಂದ‌ ಗಮನಿಸುವ, ಹಿಡಿದ ಕೆಲಸವನ್ನು ಸಾಧಿಸದೆ ಬಿಡದ ಸಾಹಸದ ಹುಡುಗಿ. ಎಲ್ಲ ಹುಡಗಿಯರು ಇಂತಹ ಸ್ಥಿತಿಯಲ್ಲಿರುವಂತಿದ್ದರೂ ನಾವು ಹೆಣ್ಣೆಂಬ ಚೌಕಟ್ಟಿನಲ್ಲಿ ಬಂಧಿಸಿ ಅವರ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಿದ್ದೇವೆ, ಕನಸು ಮಾಡಿದ್ದೇವೆ.‌ ಲೇಖಕಿಯಾದ ವಸು ವತ್ಸಲೆಯವರು ಮಹಿ ಪಾತ್ರದ ಮೂಲಕ ತನ್ನ ಮನದ ಆಸೆಗಳನ್ನು ಹಲವು ಸಂಗತಿಗಳ ಮೂಲಕ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಕಾದಂಬರಿ ಎಲ್ಲೂ ಕೃತಕತೆ ಮರೆಯದೆ ಜೀವಂತಿಕೆಯಿಂದ ಓದುಗರನ್ನು ಬಿಡದೆ ಮುಂದೆ ಏನಾಗುವುದು ಎನ್ನುವ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುತ್ತದೆ.

ಒಬ್ಬಳೆ ಕೆಂಚನ ಹಿಂಬಾಲಿಸಿ ಕಾಡಿಗೆ ಹೋಗುವುದಾಗಲಿ, ಹೊರೆಯ ನಡುವೆ ಮಲಗಿಕೊಂಡು ಬರುವುದಾಗಲಿ, ಕೆಂಚರಾಮ, ಸೋಮ‌ಎನ್ನುವ ಜನಪದ ದೇವರುಗಳ ಮುಖವನ್ನೆ ನೋಡಲು ಅಂಜುವ ಮುಖವಾಡದೊಳಗೆ ಹೋಗಿ ಹಾಕಿಕೊಂಡು ಸಂಭ್ರಮಿಸುವುದಾಗಲಿ, ಚಿಟ್ಟೆದಿಬ್ಬ, ನವಲಿ ಗುಡ್ಡ, ಕರಡಿಗುಡ್ಡದ ಕಠಿಣದ ಪಯಣವಾಗಲಿ ಮಕ್ಕಳ ಸಾಹಸ ಹಾಗೂ ಶೋಧ ಪ್ರವೃತ್ತಿಯ ಸಹಜ ಗುಣ.

ಬಂದಿರುವ ಹಲವು ಮಕ್ಜಳ ಕಾದಂಬರಿಗಳಲ್ಲಿ ಗಂಡುಮಕ್ಕಳನ್ನೆ ವಿಜೃಂಭಿಸಿದ್ದೆ ಹೆಚ್ಚು ಆದರೆ ಲೇಖಕಿ ಸ್ವತಃ ಹೆಣ್ಣಾಗಿ, ಬಾಲಕಿಯ ಭಾವನೆಗಳನ್ನು ಯಥಾವತ್ತಾಗಿ ಹಿಡಿದಿಡುವಲ್ಲಿ ಸಫಲವಾಗಿದ್ದಾರೆ.

ಕಾದಂಬರಿಯ ಹನ್ನೊಂದು ಅಧ್ಯಾಯಗಳ ಲಹರಿಯೇ ಒಂದಾದರೆ ನಂತರ ಫ್ಯಾಂಟಸಿಯನ್ನು ತರೆದುಕೊಂಡ ಅಧ್ಯಾಯಗಳ ಓದಿನ ಸುಖವೆ ಬೇರೆ. ವಾಸ್ತವವಾಗಿ ಹೇಗೆ ಮುಗಿಸುತ್ತಾರೆ ಎನ್ನುವ ಕುತೂಹಲದಲ್ಲಿಯ ಓದುಗರಿಗೆ ಸಡನ್ ಆಗಿ ಅವಾಸ್ತವಕ್ಕೆ ಕರೆದುಕೊಂಡು ಬೆರಗು ಮೂಡಿಸುತ್ತಾರೆ.

ಮೊಲವೆ ದಾರಿತೋರಿಸುತ್ತದೆ ಎನ್ನುವ ಮಾದಜ್ಜನ ನಿಗೂಢ ನಡೆ, ಅವನ ಕೊಳಲು, ಗುಹೆ, ಇರುವೆ, ಹಣ್ಣು, ಚಿಕ್ಕ ಮನುಷ್ಯರು, ಸದ್ದು ಪಿಟಿಪಿಟಿ… ಭೂಪ ಕೇಳೆಂದ ಮಾತು, ನವಿಲೂರು, ಮಯೂರ ರಾಜ ಅವನ ಪರಿವಾರ, ಮತ್ಸ್ಯ ಕನ್ಯೆಯರು, ಕರಡಿಗುಡ್ಡ, ಕೊಳಲ ಜೋಗಿ, ಮುಟ್ಟಿದಂತೆ ಫಳ ಫಳ ಹೊಳೆಯುವ ಹಣತೆ, ಜಾರುಗುಪ್ಪೆ ಇವುಗಳೆಲ್ಲವನ್ನು ಓದುವಾಗ ಕೊಡುವ, ನೀಡುವ ಅನುಭವ ದೊಡ್ಡದು. ಒಟ್ಟಾರೆ ದೃಶ್ಯ ಕಾವ್ಯದಂತೆ ಈ ಕಾದಂಬರಿ ಇದೆ.

ಮಕ್ಕಳ ಚಿತ್ರವೆಂದರೆ  ನಾಟಕೀಯ ಸಂಭಾಷಣೆಗಳಿರುವ ಕತೆಗಳೆ ಬರುತ್ತಿವೆ. ಈ ಕಾದಂಬರಿ ಒಳ್ಳೆಯ ನಿರ್ದೇಶಕರ ಕೈಯಲ್ಲಿ ಸಿಕ್ಕರೆ ಅತ್ಯುತ್ತಮ ಚಲನಚಿತ್ರವಾಗಬಲ್ಲದು. ಬಾಲ್ಯದ ಗಟ್ಟಿ ಅನುಭವಗಳ ಖಜಾನೆಯೆ ಈ ಕಾದಂಬರಿಯಲ್ಲಿದೆ.

ಕನ್ನಡದಲ್ಲಿ ವಾಸ್ತವದ ಹಾಗೂ ಫ್ಯಾಂಟಸಿ ಕಾದಂಬರಿಗಳು ಬಂದಿವೆ ಆದರೆ ಎರಡನ್ನೂ ಮೇಳೈಸಿ ಹೆಣೆದ‌ ಈ ಕಾದಂಬರಿ ಮಕ್ಕಳ ಸಾಹಿತ್ಯದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಕಾದಂಬರಿಯಾಗಿದೆ.

ಪುಸ್ತಕ ಪ್ರಕಾಶನವೆಂದರೆ‌ ಪ್ರಕಾಶಕರು ಶಸ್ತ್ರ ತ್ಯಾಗ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರಕಾಶಕರಾಗಿ, ಬರಹಗಾರ್ತಿಯಾಗಿ, ಸಂಘಟಕಿಯಾಗಿ, ಯೂ-ಟ್ಯೂಬರ್ ಆಗಿ ಕೆಚ್ಚೆದೆಯಿಂದ‌ ಎಲ್ಲವನ್ನು ಸಾಧ್ಯಮಾಡುತ್ತಿರುವ ಬಹುಮುಖ ವ್ಯಕ್ತಿತ್ವದ ವಸು ಅವರು ಮಾದರಿಯಾಗಿ ನಿಲ್ಲುತ್ತಾರೆ. ಚಂದದ ಮಕ್ಕಳ ಕಾದಂಬರಿಯನ್ನು ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಅವರಿಗೆ ಅಭಿನಂದನೆಗಳು.

ಮಕ್ಕಳಿಗೆ ಜಂಕ್ ಫುಡ್, ಮೊಬೈಲ್ ಕೊಟ್ಟು ಅವರ ದೇಹದ ಹಾಗೂ ಮಾನಸಿಕ‌ ಆರೋಗ್ಯವನ್ನು ಹಾಳುಮಾಡುತ್ತಿದ್ದರೂ ಮಕ್ಕಳಿಗೆ ಕನ್ನಡದಲ್ಲಿ ಬರುತ್ತಿರುವ ಚಂದದ ಸಾಹಿತ್ಯ ಕೃತಿಗಳನ್ನು ಕೊಟ್ಟು ಅವರ ಸಹಜ ವ್ಯಕ್ತಿತ್ವ ಅರಳಿಸುವ ಪ್ರಯತ್ನ ಮಾಡುತ್ತಿಲ್ಲ. ನನಗೆ ಓದಲು ಆಸಕ್ತಿಯಿಲ್ಲ ಎಂದರೆ‌ ನಮ್ಮ‌ ಮಕ್ಕಳಿಗೂ ಆಸಕ್ತಿಯಿಲ್ಲ ಎನ್ನುವ ಅಘೋಷಿತ ತೀರ್ಮಾನಕ್ಕೆ ನಾವು ಬಂದಂತಿದೆ. ಪಠ್ಯಪುಸ್ತಕಗಳ ಹೊರತಾಗಿ ನಾವು ಆಲೋಚಿಸಿದಾಗ ನಮ್ಮ‌ಮಕ್ಕಳು ಸೃಜನಶೀಲರಾಗಿ ವಿಕಸಿತಗೊಳ್ಳಬಲ್ಲರು ಎನ್ನುವ ಎಚ್ಚರದೊಳಗೆ ಪಾಲಕರು ಇರಬೇಕಿದೆ.

‍ಲೇಖಕರು Admin

23 November, 2025

1 Comment

  1. ಶ್ರೀನಿವಾಸ ಕಟ್ಟಿಮನಿ ಬೈಲಪತ್ತಾರ

    ವಸುವತ್ಸಲೆಯವರು ಬರಹಗಳು ಸಂವೇದನೆಶಿಲತೆಯ ಮತ್ತು ವೈವದಿತೆ ಹಾಗು ಮೂಲತ ಪ್ರಾಥಮಿಕ ಶಿಕ್ಷಕಿಯರಾಗಿದ್ದು ಮುದ್ದು ಮಕ್ಕಳ ಒಡನಾಟದ ಉಲ್ಲಾಸ ಭೌತಿಕ ಮನಸ್ಥಿತಿ ಅವಲೋಕನ ತಮ್ಮ ಅಕ್ಷರ ರೋಪ ಬರಹ ಅನನ್ಯ ಅವರ ಸಾಹಿತ್ಯ ಕೃಷಿ ಹೆಮ್ಮರವಾಗಲಿ ಶುಭಹಾರೈಕೆಗಳು .. ಶ್ರೀನಿವಾಸ .ಕಟ್ಟಿಮನಿ.ಬೈಲಪತ್ತಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading