ಜೋಗಿ
ದಯಾನಂದ್,
ಮರೆತ ಮಾತೊಂದನ್ನು ನೆನಪಿಸಲಿಕ್ಕೆ ಈ ಟಿಪ್ಪಣಿ. ದೇವನೂರರ ಪುಸ್ತಕದಲ್ಲಿರುವ ಬಹುತೇಕ ಬಹುತೇಕ ಬರಹಗಳನ್ನು ನಾನು ಲಂಕೇಶ್ ಪತ್ರಿಕೆ ಮುಂತಾದ ಕಡೆ ಮೊದಲೇ ಓದಿದ್ದೆ. ಅವರ ಮಾತುಗಳನ್ನು ಅನೇಕ ಸಂದರ್ಭದಲ್ಲಿ ಕೇಳಿದ್ದೆ.
ಅವರ ಹೊಸ ಪುಸ್ತಕ ಬಂದಿದೆ ಅನ್ನುವ ಹುರುಪಲ್ಲಿ ಓದಲು ಶುರು ಮಾಡಿದಾಗ ಎಲ್ಲವೂ ಹಳೆಯದೇ ಅನ್ನಿಸಿ ಎಂಥ ನಿರಾಸೆ ಆಯಿತೆಂದು ನಿಮಗೆ ಹೇಗೆ ಹೇಳಲಿ?
ಬಹುಶಃ ಅವನ್ನೆಲ್ಲ ಮೊದಲ ಸಲ ಓದುತ್ತಿರುವ ನಿಮಗೂ, ಆಗಲೇ ಓದಿರುವ ನನಗೂ ಅವು ಒಂದೇ ಥರ ಪುಳಕ ಮೂಡಿಸಬೇಕು ಅಂತ ಬಯಸೋದೂ ತಪ್ಪೇನೋ. ನಿಮಗಿಂತ ನಾನು ಕನಿಷ್ಠ ಇಪ್ಪತ್ತೈದು ವರ್ಷ ಮೊದಲು ಹುಟ್ಟಿದ್ದೇ ಸಮಸ್ಯೆಯಾಗಿರಬೇಕು.
-ಜೋಗಿ
ಟಿ.ಕೆ. ದಯಾನಂದ
ಪ್ರಿಯ ಜೋಗಿ ಸರ್.
ಮೊದಲಿಗೆ ಒಂದನ್ನಂತೂ ನಾನು ಸ್ಪಷ್ಟಪಡಿಸಿಬಿಡುತ್ತೇನೆ, ದೇವನೂರರ ಕೃತಿಗಳನ್ನು ಯಾರೂ ವಿಮರ್ಶಿಸಬಾರದು, ಟೀಕಿಸಬಾರದು ಅವರು ವಿಮರ್ಶೆಗೆ ಅತೀತರು, ಅವರನ್ನು ದಂತದ ಸಿಂಹಾಸನದ ಮೇಲೆ ಕುಳ್ಳಿರಿಸಿ ಅದರ ಸುತ್ತಲೂ ಕೈಯಲ್ಲಿ ಭರ್ಜಿಗಳನ್ನು ಹಿಡಿದು ನಿಂತು ಕಾವಲುಭಟರಂತೆ ನಿಂತುಕೊಳ್ಳುವ ಕ್ರಿಯೆಯನ್ನು ಎಲ್ಲರಂತೆಯೇ ನಾನೂ ಸಹ ಪ್ರತಿರೋಧಿಸುತ್ತೇನೆ. ವಿಮರ್ಶೆ ಮತ್ತು ಟೀಕೆಗೆ ಮಹದೇವರು ಹೊರತಾದವರು ಅನ್ನುವ ಬೆರಳುಚೀಪುವಂತಹ ಸಾಲು ತಮ್ಮ ಮುಂದಿಟ್ಟ ಪ್ರಶ್ನೆಗಳಲ್ಲಿ ಒಂದೂ ಇಲ್ಲ.
ಸೋಷಿಯಲ್ ಆಕ್ಟಿವಿಸಂ ಮತ್ತು ಸಾಹಿತ್ಯಿಕ ಜಗತ್ತು ಎರಡೂ ನೆಲೆಯಲ್ಲಿಯೂ ಇವತ್ತಿನ ತಲೆಮಾರಿನ ವತಿಯಿಂದ ಮಹದೇವರನ್ನು ಕೇಳಲು ನನ್ನೊಳಗೇ ಸಾಕಷ್ಟು ಪ್ರಶ್ನೆಗಳುಂಟು. ನಿಜ ಹೋರಾಟದ ಕೆಚ್ಚು, ಸಮಾನತೆಯ ಹಂಬಲ ಇವನ್ನೆಲ್ಲ ಅವರು ಒಂದು ಸಾಹಿತ್ಯ ಕೃತಿಯ ಮೂಲಕ ಕೊಡುತ್ತಾರೆಂದು ತಾವು ಬಯಸುತ್ತಿರುವಂತೆಯೇ ನಾವುಗಳೂ ಸಹ ಬಯಸುತ್ತೇವೆ. ಓದುಗನಾಗಿ ನನಗೇ ಇದೇ ಬೇಕು ಅಂತ ಆಶಿಸುವ ಹಕ್ಕಂತೂ ನಮಗೆಲ್ಲರಿಗೂ ಸಮನಾಗಿಯೇ ಇದೆ. ಎದೆಗೆ ಬಿದ್ದ ಅಕ್ಷರವನ್ನು ಓದಿದ ತಕ್ಷಣ ತಮಗೆ ನಿರಾಶೆ ಆಗುವುದು ತಪ್ಪೆಂದೂ ಅದು ತಮಗೆ ಹಿಡಿಸಲೇಬೇಕಿರುವ ಅತ್ಯದ್ಭುತ ಪುಸ್ತಕವೆಂದೂ ನಾನು ಮಹದೇವರ ಪರವಾಗಿ ವಕೀಲಿಕೆ ವಹಿಸುವುದು ಮೂರ್ಖತನದ ತುತ್ತತುದಿ.
ಓದುಗವಲಯದ ಭಿನ್ನ ನೆಲೆಯ ಗ್ರಹಿಕೆಗಳು ಒಬ್ಬರಿಗೆ ಒಪ್ಪಿಗೆಯಾಗಿ ಮತ್ತೊಬ್ಬರಿಗೆ ಒಪ್ಪಿಗೆಯಾಗದ್ದಾಗುವುದು ಅತ್ಯಂತ ಸಹಜವೇ. ಅದರಲ್ಲಿ ಎರಡನೇ ಯಾವ ಮಾತೂ ಉದ್ಭವಿಸುವುದಿಲ್ಲ. ವಿವೇಕಶಾನಭಾಗರ ಫಾಚರ್ ಫೋಚರ್ ಕೃತಿಯಲ್ಲಿ ಬರುವ ಬದುಕಿನ ವಿವರಗಳೊಳಗೆ ನನ್ನನ್ನು ನಾನು ಕಂಡುಕೊಳ್ಳಲಾರೆ ಅದು ನನ್ನ ಆದ್ಯತೆಯ ಜಗತ್ತು ಆಗಿಲ್ಲ ಎಂಬ ಕಾರಣಕ್ಕೆ ಅದನ್ನು ಒಂದು ಸೃಜನಶೀಲ ಓದಾಗಿ ಮಾತ್ರ ನಾನು ಗ್ರಹಿಸುವುದು ಸರಿಯೋ ಅಥವಾ ಅಲ್ಲಿನ ಬದುಕಿಗೂ ನನ್ನ ಬದುಕಿಗೂ ಸಂಬಂಧವೇ ಇಲ್ಲ, ಈ ಕೃತಿಯಿಂದ ನನಗೆ ಯಾವ ಜ್ಞಾನವೂ ಉದಯವಾಗಲಿಲ್ಲವೆಂಬ ಕಾರಣಕ್ಕೆ ಇಡೀ ಕೃತಿಯನ್ನು ಸಾರಾಸಗಟಾಗಿ ಹುಸಿ ಪುಸ್ತಕವೆಂದು ಜರೆದು ನಿರಾಕರಿಸುವುದು ಸರಿಯೋ?
ಎದೆಗೆ ಬಿದ್ದ ಅಕ್ಷರದಿಂದ ತಮಗಾದ ನಿರಾಶೆಯ ಜಾಗದಲ್ಲಿ ಆಕ್ಟಿವಿಸಂ ಮತ್ತು ಬರಹ ಎರಡರಲ್ಲೂ ವರ್ತಮಾನದ ಪ್ರಶ್ನೆಗಳಿಗೆ ಹೊಸ ಹೊಳಹುಗಳನ್ನು ಕಂಡುಕೊಳ್ಳುತ್ತಿರುವ ಇವತ್ತಿನ ತಲೆಮಾರಿನ ಯುವಸಮೂಹಕ್ಕೆ ಒಂದಿಷ್ಟು ಭರವಸೆಗಳು ದಕ್ಕಿವೆ. ಜಾನಕಿ ಕಾಲಂನ ತಮ್ಮ ಅಂಕಣದ ಕೆಲವು ಮಾತುಗಳು ತಮಗಾದ ನಿರಾಸೆಯನ್ನು ಹೇಳಿದ್ದರೆ ಚೆಂದಿತ್ತು. ಆದರೆ ನನ್ನ ನಿರಾಸೆಗೆ ಕಾರಣವಾದ ಪುಸ್ತಕದಲ್ಲಿ ಕೇಂದ್ರವೂ ಇಲ್ಲ-ಆಶಯವೂ ಇಲ್ಲ, ಇದೊಂದು ಹುಸಿ ಪುಸ್ತಕ, ಹುಸಿ-ಪ್ರಚಾರಕ್ಕೊಳಗಾದ ಎಂದೋ ಬರೆದ ಲೇಖನಗಳ ಸಂಗ್ರಹವೆಂದು ಸಾರಾಸಗಟಾಗಿ ತಿರಸ್ಕರಿಸಿ ಬಿಡುವುದು ಎಷ್ಟರಮಟ್ಟಿಗೆ ಸರಿ ಎಂಬುದು ನನ್ನ ಮೂಲ ತಕರಾರು.
ಮಹದೇವರ ಕೃತಿಯೊಳಗೆ ಅಲ್ಲಲ್ಲಿ ಸೂಚಿತವಾಗುವ ಬಿಡಿ ಪ್ರಸಂಗಗಳು ಒಂದೊಳ್ಳೆಯ ಕಥೆಗಳು ಆಗಬಹುದಿತ್ತು, ಮತ್ತು ಸಾಹಿತ್ಯಿಕ ಚೌಕಟ್ಟಿನ ಒಳಗೆ ಈ ವಿವರಗಳು ಸೃಜನಶೀಲವಾಗಿ ನುಸುಳಿದ್ದರೆ ಒಂದು ತಲೆಮಾರಿನ ಪಲ್ಲಟಗಳನ್ನು ಹಿಡಿದಿಡುವ “ಕುಸುಮಬಾಲೆ, ಒಡಲಾಳ”ದಂಥಹ ದಾಖಲೆಯೂ ಆಗುತ್ತಿತ್ತಲ್ಲ ಎಂಬ ಆಸೆ ನನಗೂ ಆಗಿದ್ದು ನಿಜ. ಈ ಕುರಿತಂತೆ ನಿಮ್ಮ ನಿರಾಸೆಯೊಟ್ಟಿಗೆ ಜೊತೆಯಾಗಿ ನಾನೂ ನಿಂತಿದ್ದೇನೆ. ಈ ಬಗ್ಗೆ ನನ್ನೊಳಗೆ ಇನ್ನೂ ಅಂಬೆಗಾಲಿಡುವ ಬರಹಗಾರನಿಗೆ ಆದ ನಿರಾಸೆಯ ಜೊತೆಯಲ್ಲಿಯೇ ಆಕ್ಟಿವಿಸಂಗೆ ಬೇಕಿರುವ ಹೊಸ ಹೊಳಹುಗಳು ಮತ್ತು ಪರಿಶೋಧವನ್ನು ಮಹದೇವರ ಪುಸ್ತಕ ಮೊಗೆ ಮೊಗೆದು ಕೊಟ್ಟಿರುವುದಂತೂ ನಿಜ.
ಎದೆಗೆ ಬಿದ್ದ ಅಕ್ಷರವನ್ನು ದೇವನೂರರಲ್ಲದೆ ಮತ್ತಿನ್ಯಾರೇ ಬರೆದಿದ್ದರೂ ಅದರೊಳಗೆ ” ನಾಳೆಗಳನ್ನು ಕಟ್ಟುವ ಕಣ್ಣುಗಳ ಹುಡುಕಾಟ”ದ ಆಶಯಗಳ ಕುರಿತು ನನಗಂತೂ ಯಾವ ತಕರಾರೂ ಇರುತ್ತಿರಲಿಲ್ಲ. ಈ ಆಶಯಗಳ ಬಗ್ಗೆ ತಮ್ಮ ನಿಲುವು ತಕ್ಷಣದ ಉಡಾಫೆಯೆಂದು ಅನಿಸಿದ್ದಕ್ಕೆ ಇಷ್ಟೆಲ್ಲ ಮುಂದಿಡಬೇಕಾಯಿತು. ತಿಕ್ಕಾಟವಿದ್ದೆಡೆಯಲ್ಲಿಯೇ ಬೆಳಕು ಹುಟ್ಟುವುದೆಂದು ನಂಬುವ ನಮಗೆ ಈ ಸಂವಾದ ಯಾವ ವೈಯುಕ್ತಿಕ ತಿಕ್ಕಾಟವಾಗದೆ ವಿಚಾರವೊಂದನ್ನು ಪ್ರತ್ಯೇಕ ಬಣ್ಣಗಳಲ್ಲಿ ಪರಿಗ್ರಹಿಸುವ ಆಯಾಮಗಳೆರಡು ಎದುರು ಬದುರು ಕುಳಿತು ಕಷ್ಟಸುಖ ಮಾತಾಡಿಕೊಂಡಂತೆ ಎಂಬುದಾಗಿ ನಾನು ಭಾವಿಸುತ್ತೇನೆ.
ದೇವನೂರರು ಬರೆಯಲಿರುವ ಕೃತಿಗಳ ಬಗ್ಗೆ ನಿಮ್ಮಷ್ಟೇ ನಿರೀಕ್ಷೆಯನ್ನು ಇವತ್ತಿನ ತಲೆಮಾರೂ ಎದುರು ನೋಡುತ್ತದೆ ಜೊತೆಗೆ ಅವುಗಳ ಬಗ್ಗೆ ತಮ್ಮ ಟೀಕೆ, ವಿಮರ್ಶೆಯನ್ನೂ ಸಹ. ಅವರ ಸಾವಾಸ ನಮಗ್ಯಾಕೆ ಬೇಕು ಅನ್ನುವ ಯಾವ ಮುಲಾಜುಗಳೂ ಇಲ್ಲದೆಯೂ ಮಹದೇವರು, ಜೋಗಿ ಮತ್ತು ನಾನೂ ಸೇರಿದಂತೆ ವಿಮರ್ಶೆಯ ಪರಿಧಿಯೊಳಗೇ ಇರುವ ಹುಲುಮನುಷ್ಯರೆಂಬುದನ್ನು ಒಪ್ಪಿಕೊಳ್ಳುತ್ತಲೇ, ಇನ್ನುಳಿದಂತೆ ದೂರು ದುಮ್ಮಾನ, ತಕರಾರೂ ಮೆಚ್ಚುಗೆಗಳೂ ಸಹ ವಯಸ್ಸು, ಆಲೋಚನೆ, ಬರಹಗಳ ಆದ್ಯತೆಗಳ ಭಿನ್ನತೆಗಳ ನಡುವೆಯೂ ಆರೋಗ್ಯಕರವಾಗಿಯೇ ನಮ್ಮ ನಡುವೆ ಇದ್ದೇ ಇರಲಿ ಎಂಬ ಹಂಬಲ ನನ್ನದಾಗಿದೆ.









ಯಾವ ಕಾಲದಲ್ಲೇ ಬರೆದಿರಲಿ…ಯಾವಾಗಲೇ ಬರೆದಿರಲಿ…ಬೇರೆ ಬೇರೆ ಕಾಲಗಳಲ್ಲಿ ಅದು ಬೇರೆ ಬೇರೆ ಹೊಳಹುಗಳನ್ನು, ಅನುಭವಗಳನ್ನು ಕೊಡಬೇಕು. ಮುಖ್ಯವಾಗಿ ಅದು ಇಂದಿನ ದಿನಕ್ಕೆ ಪ್ರಸ್ತುತ ಅನ್ನಿಸಿದರು ಸಾಕು…ಆ ಬರಹಗಳನ್ನು ನಾವು ಹಳೆಯದು ಎಂದು ಕರೆಯಬೇಕಾಗಿಲ್ಲ….ಸಾಧಾರಣವಾಗಿ ಕಾದಂಬರಿ ಪ್ರಾಕಾರವನ್ನು ಬಿಟ್ಟರೆ ಕತೆ ಕವನಗಳೆಲ್ಲ ಎಂದೆಂದೋ, ಯಾವ್ಯಾವುದೋ ಪತ್ರಿಕೆಗಳಲ್ಲಿ ಪ್ರಕಟವಾಗಿಯೇ ಇರುತ್ತೆ. ಹಾಗೆಂದು ಒಂದು ಕತಾ ಸಂಕಲನ, ಲೇಖನಗಳ ಸಂಗ್ರಹವನ್ನು ಹುಸಿಯೆಂದು ಕರೆಯಲಾದೀತೇ? ಹುಸಿಯೇನ್ನುವ ಶಬ್ದ..ಜೀವಂತವಿಲ್ಲದ ಕೃತಿಯ ಕುರಿತಂತೆ…ಅಂದರೆ…ಅದರಲ್ಲಿರುದು ಈಗ ಅಪ್ರಸ್ತುತ ಎಂದು ಕಂಡಾಗ ಮಾತ್ರ ಬಳಸಬಹುದಾದ ಪದ ಎಂದು ನನಗನ್ನಿಸುತ್ತದೆ. ಹಲವು ಕೃತಿಗಳು ಈಗ ನನಗೆ ಹುಸಿ ಅನ್ನಿಸತ್ತೆ. ತ.ರ.ಸು. ಕಾದಂಬರಿ….ಭೈರಪ್ಪರ ಹಲವು ಕಾದಂಬರಿಗಳು…ಒಂದು ಕಾಲದಲ್ಲಿ ನನಗೆ ಇಷ್ಟವಾದವುಗಳು ಈಗ ನನ್ನಲ್ಲಿ ಏನನ್ನು ಹುಟ್ಟಿಸುತ್ತಿಲ್ಲ…ಕನಿಷ್ಠ ಸಿಟ್ಟನ್ನು ಕೂಡ…ಚಿತ್ತಾಲರ ಛೇದವನ್ನು ನಾನು ಸುಮಾರು ಆರು ಬಾರಿ ಓದಿದ್ದೇನೆ….ಆರು ಬಾರಿಯೂ ಅದು ನನಗೆ ಹಳೆ ಕಾದಂಬರಿ ಅನ್ನಿಸಿಲ್ಲ…ಆರು ಬಾರಿಯೂ ಹೊಸ ಅನುಭವ ನೀಡಿದೆ. ಆರು ಬಾರಿಯು ನನ್ನ ಕಣ್ಣಂಚು ಒದ್ದೆಯಾಗಿದೆ…ಹಿರಿಯರಾದ ಜೋಗಿಯವರ ಮಾತು ಆಕಸ್ಮಿಕವಾಗಿ ಜಾರಿ ಬಿದ್ದ ಮಾತಲ್ಲ…ಯಾಕೆಂದರೆ ಓದಿನ ಖುಷಿಯ ಕುರಿತಂತೆ ಅವರು ಹಲವು ಬಾರಿ ಬರೆದಿದ್ದಾರೆ…ಬಹುಷಃ ದೇವನೂರು ಬರಹಗಳು ಸದ್ಯದ ದಿನಗಳಲ್ಲಿ ಅವರನ್ನು ಪುಳಕ ಗೊಳಿಸದೆ ಇದ್ದರೆ ಹಾಗೆಯೇ ಅದನ್ನು ಒಪ್ಪಿಕೊಲ್ಲುದು ಜಾಣ ಮೌನಕ್ಕಿಂತ ಹೆಚ್ಚು ಉತ್ತಮ. ಅದನ್ನು ಪ್ರಕಟ ಪಡಿಸಿದ್ದಕ್ಕೆ ನಾನವರನ್ನು ಅಭಿನಂದಿಸುತ್ತೇನ
ಇದೆ ಸಂದರ್ಭದಲ್ಲಿ ದೇವನೂರ ಅವರ ತೀರ ಅಭಿಮಾನಿಗಳು ಅವರ ಮೇಲೆ ಸಂತತ್ವವನ್ನು, ಪ್ರವಾದಿತ್ವವನ್ನು ಹೇರಿದ್ದಿದೆ….ನಾವೆಲ್ಲೋ ಅವರನ್ನು ಅವರಷ್ಟಕ್ಕೆ ಬಿಡದೆ ಈ ಮೂಲಕ ಅವರ ಹೆಗಲಿಗೆ ಅವರು ಹೊರಲು ಕಷ್ಟವಾಗುವ ಭಾರವನ್ನು ಹಾಕಿಬಿಟ್ಟಿದ್ದೇವೋ ಎಂಬ ಅನುಮಾನ…ನನ್ನನ್ನು ಕಾಡಿದ್ದಿದೆ…ಅದು ನಿಜವಾಗಬೇಕೆಂದು ಇಲ್ಲ….