ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವಿ ಯವರ ವೈದೇಹಿ

ವಿವೇಚನೆಗೆ ಸಂದರ್ಭವಾಗಿರುವ ‘ವೈದೇಹಿ’

ಡಿ.ಎಸ್.ರಾಮಸ್ವಾಮಿ

ಇಪ್ಪತ್ನಾಲ್ಕು ಕವಿತೆಗಳು, ಒಂಭತ್ತು ಅನುವಾದಗಳು ಮತ್ತು ಹತ್ತು ಗೀತೆಗಳನ್ನೊಳಗೊಂಡ ಎಚ್ ಎಸ್ ವೆಂಕಟೇಶಮೂರ್ತಿಗಳ ಹೊಸ ಸಂಕಲನ ‘ವೈದೇಹಿ ಮತ್ತು ಇತರ ಕವನಗಳು’. ವರ್ತಮಾನದ ಪ್ರಮುಖ ಕವಿಗಳಲ್ಲೊಬ್ಬರಾದ ಎಚ್.ಎಸ್.ವಿ ಯವರು ತಮ್ಮ ಕಾವ್ಯಾಯಾನದುದ್ದಕ್ಕೂ ಹೊಸ ಹೊಸ ಪ್ರಯೋಗಗಳನ್ನೂ, ಪುರಾಣದ ತಳುಕುಗಳನ್ನೂ, ಭಾಷೆಯ ಬಗೆಯನ್ನೂ ಬಗೆಯುತ್ತ ಬಂದವರು. ಅದರಲ್ಲೂ ‘ಉತ್ತರಾಯಣ ಮತ್ತು … ..’ ಸಂಕಲನದಿಂದೀಚೆಗೆ ಅವರ ಕಾವ್ಯ ಮಾರ್ಗ ಅವರ ಈವರೆಗಿನ ಕಾವ್ಯಕೃಷಿಯಿಂದ ಭಿನ್ನಮಾರ್ಗಕ್ಕೆ ತೆರೆದುಕೊಂಡುದನ್ನು ಕಾವ್ಯಾಸಕ್ತರೆಲ್ಲರೂ ಬಲ್ಲರು. ಇಹದ ಲೌಕಿಕಕ್ಕೂ ಪರದ ಪಾರಮಾರ್ಥಿಕಕ್ಕೂ ಸೇತುವೆಯಂತಿರುವ ಹಿರಿಯ ಜೀವವೊಂದರ ಮನುಷ್ಯ ಸಹಜ ತುಡಿತಗಳು ಅವರ ಇತ್ತೀಚಿನ ಕಾವ್ಯಾಯಾನದ ನಾವೆಯಾಗಿದೆ ಮತ್ತು ಲೌಕಿಕದ ಆಕರ್ಷಣೆಗಳನ್ನು ಮೀರಿ ನಿಲ್ಲಬೇಕೆನ್ನುವ ಕವಿಯ ಅಂತರಂಗದ ಮಾತಿಗೆ ಸಾಕಷ್ಟು ಪುಷ್ಟಿಯನ್ನೂ ಪ್ರಸ್ತುತ ಸಂಕಲನ ಕೊಡಮಾಡಿದೆ.

 

ಇರುವಿಕೆಯನ್ನು ಅನುಸರಿಸುವುದು ಸಾಧ್ಯವಿಲ್ಲವೆಂದು ನಂಬಿರುವ ಎಚ್.ಎಸ್.ವಿ, ಆಗುವಿಕೆಯ ನಿರೀಕ್ಷೆಯಲ್ಲಿ ಇಲ್ಲಿನ ಕವಿತೆಗಳಲ್ಲಿ ತನ್ಮಯಶೀಲತೆಯನ್ನು ಪಡೆದಿದ್ದೇನೆಂದು ಸಂಕಲನದ ಅರಿಕೆಯಲ್ಲಿ ಹೇಳಿಕೊಂಡಿದ್ದಾರಾದರೂ, ಅವರ ನಿರೀಕ್ಷೆಗಳು ಓದುಗನನ್ನು ಸಂಪ್ರೀತಗೊಳಿಸಿ ಆ ‘ಅಗುವಿಕೆ’ಯ ಸೋಪಾನಕ್ಕೆ ಕರೆದೊಯ್ದಿವೆಯೇ ಅನ್ನುವುದು ಇಲ್ಲಿ ಪ್ರಶ್ನೆ. ಏಕೆಂದರೆ ಅಲ್ಲಮ, ಬೇಂದ್ರೆ, ಶರೀಫರಂಥವರು ಇರುವಿಕೆಯಲ್ಲೇ ಹೊಸತನ್ನು ಕಂಡವರಾದರೆ, ಕುಮಾರವ್ಯಾಸ, ಕುವೆಂಪು, ಅಡಿಗ ಮುಂತಾದವರು ಆಗುವಿಕೆಯ ಕಾಯುವಿಕೆಯಲ್ಲಿ ತಲ್ಲೀನರಾಗಿ ಹೊಸತೊಂದರ ಹುಟ್ಟಿಗೆ ಕಾಯುತ್ತಿರುವಂಥವರು. ಎಚ್.ಎಸ್.ವಿ ಎರಡನೆಯ ಮಾರ್ಗವನ್ನು ಅನುಸರಿಸುತ್ತಿದ್ದೇನೆಂದು ಹೇಳಿಕೊಂಡಿರುವ ಕಾರಣ ಒಂದೋ ಅವರು ನಂಬಿದುದನ್ನು ಇದಮಿತ್ಥಂ ಎಂದು ಋಜುವಾತು ಪಡಿಸಬೇಕು ಅಥವ ನಾಳೆಯ ನಿರೀಕ್ಷೆಗಳಲ್ಲಿ ಇಂದಿನ ಕ್ಲೇಷಗಳನ್ನು ಮರೆಯಬೇಕು. ಅದೂ ಒಪ್ಪದ ಇದೂ ನಂಬದ ದ್ವಂದ್ವಗಳಿಗೆ ಪುರಾಣದ ಪೋಷಾಕು ತೊಡಿಸಿದ ಇಲ್ಲಿನ ಬಹುತೇಕ ಕವಿತೆಗಳು ಆಶಯದ ಘಮಲಿನಲ್ಲೇ ಮೈಮರೆತ ಕಾರಣ ಆಗುವಿಕೆಯ ನಿರೀಕ್ಷೆಗಳಿಂದ ಗಾವುದ ದೂರವುಳಿದೆವೆಯೆಂದು ಬಹು ವಿಷಾದದಿಂದಲೇ ಹೇಳಬೇಕಾಗುತ್ತದೆ.

ಆದರೆ ಎಲ್ಲೆಲ್ಲಿ ಕವಿ ಪುರಾಣದ ಹಂಗು ತೊರೆದು ಸ್ವ ವಿಮರ್ಶೆಗೆ ತೊಡಗುತ್ತಾರೋ ಅಲ್ಲೆಲ್ಲ ಅವರ ಛಾಪು ಎದ್ದು ಕಾಣತೊಡಗುತ್ತದೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಬಹುದು:

ವರ್ಷಗಳ ಹಿಂದೆ ಒಲೆಯಮೇಲಿಟ್ಟ/ಕೊಳಗವನ್ನಿಳಿಸಲೇ ಇಲ್ಲ ಕೆಳಕ್ಕೆ. ಮತ್ತೆ ಮತ್ತೆ ಕುದಿಸಿ ಕುದಿಸಿ /ಹದಗೊಳಿಸುವ ಹುನ್ನಾರ ನಡೆದೇ ಇದೆ. ನನ್ನ ತಳಮಳ ರಸಕ್ಕೆ / ಹೀಗೆ ನಿತ್ಯ ನಿತ್ಯ ಹೊಸ ಬೆಲ್ಲ ಉಪ್ಪು ಹುಳಿ ಖಾರಗಳ ಹಾಕುವ / ಕೈ ನನ್ನದು ತಾನೆ? ನಾನೇನೋ ಪಂಕ್ತಿ ಎಲೆ ಹಾಕಿ ಬಡಿಸುತ್ತಲೇ / ಇದ್ದೇನೆ ದಿನ ನಿತ್ಯ. ಯಾರೋ ಉಣ್ಣುತ್ತಾರೆ, ಯಾರೋ ಉಂಡೆಲೆ / ಎತ್ತೆಸೆಯುತ್ತಾರೆ. ಮತ್ತೆ ನಡೆಯುತ್ತದೆ ಗೋಮಯ. ಮತ್ತೆ ಮತ್ತೆ / ಸಾಲೆಲೆ ಪದಾರ್ಥಕ್ಕೆ ಮೇಲೋಗರವ ಬಡಿಸಿ ಕಾಯುವ ನಿರೀಕ್ಷೆ. ( ರಸಕರ್ತನ ತಳಮಳ) ಯಾವ ಅಡಿ ಟಿಪ್ಪಣಿಯನ್ನೂ ಬೇಡದ ಇಂಥ ಸಾಲುಗಳ ಜೊತೆ ಪುರಾಣಾರೋಪಿತ ಸಂದರ್ಭಗಳು ಸೋಲುತ್ತವೆ. ‘ಅಪಾರ್ಥ’ ಕವಿತೆಯಲ್ಲಿ ಊರ್ವಶಿ ಆತ್ಮಸಮರ್ಥನೆಗಾಗಿ ಅರ್ಜುನನನ್ನು ಅವನ ವ್ರತವನ್ನೂ ಪ್ರಶ್ನಿಸುತ್ತಿದ್ದಾಳೆ. ಮೂಲದಲ್ಲಿ ಅಂದರೆ ಪಾಂಡವರ ವನವಾಸ ಕಾಲದಲ್ಲಿ ಪಾಶುಪತಾಸ್ತ್ರ ಪಡೆದ ಅರ್ಜುನ ಅತಿಥಿಯಾಗಿ ದೇವಲೋಕಕ್ಕೆ ಹೋದಾಗ ಊರ್ವಶಿಯಲ್ಲಿ ತಾಯಿಯನ್ನು ಕಂಡಂತಾಗಿ ಅವಳ ಸಂಗವನ್ನು ತಿರಸ್ಕರಿಸುತ್ತಾನೆ. ಇದು ಕುಮಾರ ವ್ಯಾಸನನ್ನೂ ಸೇರಿದಂತೆ ಎಲ್ಲರೂ ಕಟ್ಟಿಕೊಟ್ಟ ಚಿತ್ರ. ತನ್ನ ಆತ್ಮಸಮರ್ಥನೆಗಾಗಿ ಇಲ್ಲಿನ ಊರ್ವಶಿ ಬೃಹನ್ನಳೆಯಾಗಿದ್ದ ಅರ್ಜುನನನ್ನು ಹೀಗೆಳೆಯುತ್ತಿದ್ದಾಳೆ. ಆದರೆ ಅರ್ಜುನ ಶಿಖಂಡಿಯಾಗಿದ್ದೇ ಊರ್ವಶಿಯ ಶಾಪದಿಂದಾಗಿ ಅನ್ನುವ ಮೂಲ ಗೊತ್ತಿರುವ ಓದುಗ ಗಲಿಬಿಲಿಗೊಳ್ಳದೇ ಪದ್ಯವನ್ನು ಪಕ್ಕಕ್ಕಿಟ್ಟುಬಿಡುತ್ತಾನೆ, ಅಷ್ಟೆ. ಅದರ ಬದಲು ಮುದೆಂದೋ ಸ್ವರ್ಗದಲ್ಲಿ ಪರಸ್ಪರ ಭೆಟ್ಟಿಯಾದ ಸಂದರ್ಭದಲ್ಲಿ ಊರ್ವಶಿ ಶಿಖಂಡಿಯಾಗಿದ್ದ ಅಜರ್ುನನ್ನು ಕುರಿತು ಕಿಚಾಯಿಸಿದಂತೆ ಪದ್ಯ ಬಂದಿದ್ದರೆ ಆಗಿನ ಸ್ವಾದವೇ ಬೇರೆಯಾಗಿರುತ್ತಿತ್ತು ಅಲ್ಲವೇ? ಪುರಾಣ ಪ್ರತಿಮೆಗಳನ್ನು ಹೇಗೆ ಬೇಕಾದರೂ ಬಳಸಬಹುದಾದರೂ ಅವನ್ನು ಮುರಿದು ಕಟ್ಟುವ ಕ್ರಮದಲ್ಲಿ ಹೊಸತನವಿರದಿದ್ದರೆ ಗೊಂದಲಗಳಷ್ಟೇ ಉಳಿದುಬಿಡುತ್ತವೆ. ಆದರೆ ‘ಬಿನ್ನಹ’ ಕವಿತೆಯಲ್ಲಿ ಒಡಮೂಡಿರುವ ರಾವಣನ ಪ್ರಾರ್ಥನೆ ಅಹುದಹುದು ಎನ್ನುವಂತಿದೆ. …ರಾಗವಾಗುವ ತನಕ ರಾವಣ ರಾವಕ್ಕಿಲ್ಲ / ಬಿಡುಗಡೆಯ ಕಡೆ./ನಡೆಯುತ್ತಿರಲಿ ಅನವರತ ಮಣ್ಣ ಮೆಟ್ಟಿ ಮೆಟ್ಟಿ / ಹದಮಾಡುವ ನಿಮ್ಮ ಕುಂಬಾರ ಕುಣಿತ.

‘ಹಕ್ಕಿ ಹಾರುತಿದೆ’ ಪದ್ಯದ ಶೀರ್ಷಿಕೆ ಬೇಂದ್ರೆಯವರ ಬಹುಚರ್ಚಿತ ಕವಿತೆಯ ನೆನಪು ಮೂಡಿಸಿದರೂ ಈ ಕವಿತೆಯಲ್ಲಿ ಕವಿಯ ಆತಂಕವೇ ಬೇರೆ ತೆರನಾದದ್ದು. ರೆಕ್ಕೆ ಸೋಲುತ್ತಾ ಇವೆ. / ಬಯಲುಳಿಯಬೇಕೆ? ಮೊದಲು ಹಕ್ಕಿಯನಿಳಿಸು ನೆಲಕ್ಕೆ. / ಹಕ್ಕಿ ಹಕ್ಕಿಯಲ್ಲ – ಅದು ಆಕಾಶದ ಹೃದಯ. ಈ ಸಾಲುಗಳು ಎಂದಿನ ಎಚ್.ಎಸ್.ವಿಯವರ ಸಹಜ ಸ್ವಭಾವದ ಮನುಷ್ಯ ಕಾಳಜಿಯ ತಂತುಗಳು. ಆದರೆ ಇನ್ನೊಂದು ಸುತ್ತಿಗೆ ಕೂತಿದ್ದಾನೆ ಮುಗ್ಧ ಪೋರ ಮತ್ತೆ ತತ್ಪರನಾಗಿ / ಚದುರಂಗದ ಚೌಕಿಯ ಮೇಲೆ ಮುಂಗುರುಳ ಜೊಂಪೆ ತೂಗಿ (ಮೊಮ್ಮಗನ ಚದುರಂಗ) ಬರಿಯ ಸಾಲುಗಳಾಗಿ ಎದೆಗಿಳಿಯದೇ ಪ್ರತ್ಯೇಕವಾಗೇ ನಿಲ್ಲುತ್ತವೆ. ‘ಇನ್ನೊಬ್ಬ ಕಿಂಗ್ ಲಿಯರ್’ ಪದ್ಯದಲ್ಲಿ ಏನೋ ತಾಗಿದ ಪ್ರಯುಕ್ತ / ಬಿಸಿಯೇರಿ ತರುಣನ ರಕ್ತ / ವೇಷದಿಂದಾಗಿ ಕ್ಷಣ ಮುಕ್ತ / ಅಪ್ಪಿಕೊಳ್ಳುತ್ತಾನೆ ಹಿಡಿದು ಗಟ್ಟಿ, ಕೈ ಜಾರಿದಂತಾಗಿ ಹುಡುಗಿ, ತೆರೆ ಬಿದ್ದ ಹೊತ್ತು. ಎನ್ನುವುದು ಸಹಜವೂ, ಸಫಲವೂ ಹಾಗೇ ಸನಿಹಕ್ಕೂ ಬರುವ ಮತ್ತೆ ಮತ್ತೆ ಫ್ರಾಯ್ಡ್ನನ್ನು ನೆನಪಿಸುವ ಸಾರ್ಥಕ ಸಾಲುಗಳು.

ವರ್ಡ್ಸ್ ವರ್ತ್ ಮತ್ತು ಟ್ಯಾಗೋರರ ಪದ್ಯಗಳ ಅನುವಾದಗಳಲ್ಲೂ ಈ ಕವಿಯ ಶ್ರಮ ಎದ್ದು ಕಾಣುತ್ತದೆ. ಈಗಾಗಲೇ ಕನ್ನಡಕ್ಕೆ ಬಂದಿರುವ ಇದೇ ಪದ್ಯಗಳ ಇತರರ ಅನುವಾದಗಳಿಗಿಂತ ಈ ಅನುವಾದಗಳಲ್ಲಿ ಮೂಲದ ನಿಷ್ಠೆ ಎದ್ದು ಕಾಣುತ್ತದೆ. ಸಾಲಿಟರಿ ರೀಪರ್ ಇಲ್ಲಿ ಕಣಿವೆಯ ಹೆಣ್ಣಾಗಿ ನಿಂತಂತೆಯೇ ಟ್ಯಾಗೋರರ ಅಹಲ್ಯೆ ಕಲ್ಲಾಗದೇ ಹೂವಾಗಿ ನಳನಳಿಸಿದ್ದಾಳೆ.

ಆದರೆ ಗೀತೆಗಳೆಂದು ಕರೆದಿರುವ ಹತ್ತು ರಚನೆಗಳು ಸಂಕಲನದ ಕಡೆಯ ಭಾಗದಲ್ಲಿ ಅಚ್ಚಾಗಿವೆ. ಮೂಲತಃ ಕವಿತೆ, ಪದ್ಯ, ಗೀತೆ, ವಚನ ಎಂದು ಬೇರ್ಪಡಿಸುವ ಕ್ರಮವೇ ಒಟ್ಟೂ ಬರಹಗಳನ್ನು ಒಟ್ಟಂದದಲ್ಲಿ ಕಾಣುವ ಪ್ರಯತ್ನದಿಂದ ವಿಮುಖವಾಗಿಸುತ್ತವೆ. ಅಡಿಗರ ಪದ್ಯ ಅಥವ ಅಲ್ಲಮನ ಒಂದು ವಚನ ಗೀತೆಯಾಗಿ ಮಾರ್ಪಡುವುದು ಹಾಡುಗಾರನ ಮತ್ತು ಸಂಗೀತ ನಿದರ್ೆಶಕನ ಶ್ರಮದಿಂದಾಗಿಯೇ ವಿನಾ ಅದನ್ನು ಪದ್ಯವೆಂದೋ ಗೀತೆಯೆಂದೋ ಟಂಕಿಸುವ ಕ್ರಮದಿಂದಲ್ಲ. ಕೃಷ್ಣ ಮತ್ತು ಅವನ ಸಖಿಯರ ಪ್ರಸ್ತಾಪ ಇಲ್ಲಿನ ರಚನೆಗಳಲ್ಲಿರುವ ಕಾರಣ ಇವನ್ನೂ ‘ಗೀತೆ’ ಅಂತ ಕವಿ ಕರೆದಿದ್ದಾರೆಯೋ ಏನೋ? ಆದರೆ ಇಂಥ ಬಳಕೆಯಿಂದ ಗೀತೆ ಅನ್ನುವ ಶಬ್ದಕ್ಕೆ ಇರುವ ಮೂಲಾರ್ಥಕ್ಕೆ ಸೂತಕವಲ್ಲವೇ?

ಮೂಲತಃ ಭಾವ ಪ್ರಾಧಾನ್ಯತೆಯನ್ನೇ ಆಶ್ರಯಿಸಿರುವ ಎಚ್.ಎಸ್.ವಿ, ಪ್ರತಿಮೆ, ಸಂಕೇತ, ಚಿತ್ರಿಕೆಗಳ ಮೂಲಕವೂ ಮಾತನಾಡಬಲ್ಲವರು. ಛಂಧೋಬಂಧನ ಮತ್ತು ನಾದಮಯತೆ ಅವರ ಸ್ವಕೀಯ. ಆದರೆ ಪುರಾಣ ಪ್ರತಿಮೆಗಳನ್ನು ವರ್ತಮಾನಕ್ಕೆ ತಂದು ಮುರಿದು ಕಟ್ಟುವ ಅವರ ಪ್ರಯತ್ನವೇಕೋ ಅವರ ಹಿಂದಿನ ಸಂಕಲನದ ಶ್ರೀಸಂಸಾರಿಯಷ್ಟು ಯಶಸ್ವಿಯಾಗಿವೆಯೆಂದು ಪ್ರಮಾಣಿಸುವುದು ಕಷ್ಟದ ಕೆಲಸ. ಆದರೂ ಎಂ ಅರ್ ದತ್ತಾತ್ರಿಯಂಥ ಯುವ ಲೇಖಕರಿಂದ ಮುನ್ನುಡಿಯನ್ನು ಬರೆಸಿಕೊಂಡಿರುವ ಕವಿಯ ಹೃದಯ ಶ್ರೀಮಂತಿಕೆಯನ್ನೂ ನಾವು ಗಮನಿಸಲೇಬೇಕು.

 

‍ಲೇಖಕರು G

25 December, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading