-ಜಿ ಎನ್ ಮೋಹನ್
ಅದು ಹೀಗಾಯ್ತು. ಎಚ್ ಎಸ್ ವೆಂಕಟೇಶ ಮೂರ್ತಿಗಳು ಒಂದು ದಿನ ‘ನಯನ’ದಲ್ಲಿ ಸಿಕ್ಕರು. ಮೂರು ಸಮಗ್ರ ಸಂಕಲನಗಳನ್ನು ತರುವ ಉತ್ಸಾಹ ಅವರ ಮುಖದಲ್ಲಿತ್ತು. ಆ ವೇಳೆಗೆ ಪ್ರಿಂಟಿಂಗ್ ಪ್ರೆಸ್ ನಿಂದ ಆಚೆ ಒಂದಿಷ್ಟು ಮುಖ ತೋರಿಸಿದ್ದ ಸಮಗ್ರ ಕಾವ್ಯ ಪುಸ್ತಕ ನನ್ನಲ್ಲಿತ್ತು. ಆ ಕವಿತೆಗಳನ್ನು ಓದುತ್ತಾ ಓದುತ್ತಾ ನನ್ನನ್ನು ನಾನೇ ಮರೆತು ಹೋದೆ. ಎಚ್ ಎಸ್ ವಿ ಅವರ ಕಾವ್ಯ ನಮ್ಮ ಯೌವ್ವನವೂ ಹೌದು. ಅವರ ‘ಒಣಮರದ ಗಿಳಿಗಳು’ ನಾನು ಆವಾಹಿಸಿಕೊಂಡು ಓದಿದ ಸಂಕಲನ. ಆ ಮೊದಲು ಕಲ್ಲೆ ಶಿವೋತ್ತಮರಾವ್ ಅವರ ಮನೆಯಲ್ಲಿ ಅವರ ‘ಸಿಂದಾಬಾದನ ಆತ್ಮಕಥೆ’ ಪುಸ್ತಕ ಇತ್ತು.
ಅವರ ಕವಿತೆಗೂ ಮೊದಲು ನಾನು ಓದಿದ್ದು ಅವರ ‘ತಾಪಿ’ ಕಾದಂಬರಿ. ಓ! ಆ ಸುಳಿಯಲ್ಲಿ ಸಿಕ್ಕು ಎದ್ದದ್ದು ಒಂದು ಮರೆಯಲಾಗದ ಅನುಭವ. ಆ ನಂತರ ನಾನೂ ಕವಿತೆ ಬರೆಯಲು ಶುರು ಮಾಡಿದೆ. ಎಂ ಇ ಎಸ್ ಸಂಜೆ ಕಾಲೇಜಿನಲ್ಲಿ ಕವಿತಾ ಸ್ಪರ್ಧೆ ಇತ್ತು. ನಾನು ‘ಇನ್ನೂ ಉಳಿದಿದ್ದೇನೆ’ ಎನ್ನುವ ಕವಿತೆ ಕಳಿಸಿದ್ದೆ. ಆ ವೇಳೆಗೆ ಆ ಕವಿತೆ ಸಾಕಷ್ಟು ಕಡೆ ಶಹಬಾಶ್ಗಿರಿ ಪಡೆದಿತ್ತು. ಅದರ ಸೊಕ್ಕೂ ಒಂದಿಷ್ಟು ನನ್ನೊಳಗಿತ್ತು. ಸಂಜೆ ಕಾಲೇಜಿನ ಸ್ಪರ್ಧೆಯೊಂದರಲ್ಲಿ ಆ ಕವಿತೆ ಓದಲು ಹೋದಾಗ ಅದರ ಪ್ರಾಂಶುಪಾಲರು ನನ್ನನ್ನೂ, ನನ್ನ ಜೊತೆ ಇದ್ದ ಗೆಳೆಯ ಉದಯನನ್ನೂ ಕಾಫಿಗೆ ಅಂತ ತಮ್ಮ ಚೇಂಬರ್ ಒಳಗೆ ಕರೆದುಕೊಂಡು ಹೋದರು.
ಅಲ್ಲಿ ನೋಡಿದರೆ ಎಚ್ ಎಸ್ ವಿ. ಒಂದು ಸಂಭ್ರಮ ನಾನು ಓದಿದ ‘ತಾಪಿ’ ಕಾದಂಬರಿಯ ಲೇಖಕ ಅಂತ. ಹರಟೆ ಹೊಡೆಯುತ್ತಾ ನಿಮ್ಮ ಕಾವ್ಯ ಮಾರ್ಗ ಯಾವುದು ಅಂತ ಕೇಳಿದರು. ನಾನು ‘ಬಂಡಾಯ’ ಎಂದೆ. ‘ಜನರು ಬೀದಿಯಲ್ಲಿದ್ದಾಗ ರಂಗ ಮಹಲುಗಳನ್ನೊದ್ದು , ಭ್ರಮೆಯ ಲೋಕವ ಧಾಟಿ ತಾನೂ ಬದುಕಲೆಂದು ಕಾವ್ಯ ಬಂತು ಬೀದಿಗೆ’ ಎನ್ನುವ ರಮ್ಜಾನ್ ದರ್ಗಾ ಕವಿತೆ ನಮ್ಮನ್ನು ಕಾದಿದ್ದ ದಿನಗಳವು. ತಕ್ಷಣ ಎಚ್ಹೆಸ್ವಿ ಮುಖ ಗಂಭೀರವಾಯಿತು. ಅದು ಆ ಕಾಲದ ಎಚ್ ಎಸ್ ವಿ.
ಎಚ್ ಎಸ್ ವಿ ಸಂತ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳುತ್ತಿದ್ದ ಸಾಹಿತ್ಯ ಸ್ಪರ್ಧೆಗಳು ನಮಗೆ ಹಬ್ಬ. ಕವಿತೆಯ ವಿಮರ್ಶೆ ಮಾಡಲು ಏರ್ಪಡಿಸಿದ ಸ್ಪರ್ಧೆಗೆ ನಾನು ಕೆ ಎಸ ನ ಅವರ ‘ಮನೆಯಿಂದ ಮನೆಗೆ’ ಕವಿತೆ ಆರಿಸಿಕೊಂಡಿದ್ದೆ. ತೀರ್ಪುಗಾರರಲ್ಲಿ ಒಬ್ಬರಾಗಿ ಕುಳಿತಿದ್ದ ಎಚ್ ಎಸ್ ವಿ ‘ಹೊತ್ತು ಸಾಗಿಸಬೇಕು, ಅದಕೆ ಕತ್ತಲೆ ಬೇಕು’ ಎನ್ನುವ ಸಾಲಿನಲ್ಲಿ ‘ಹೊತ್ತು’ ಏನನ್ನು ಹೇಳುತ್ತಿದೆ? ಎಂದು ಕೇಳಿದರು. ಕನ್ನಡ ಸಾಹಿತ್ಯವನ್ನು ಸಾಣೆ ಹಿಡಿದು ಗೊತ್ತಿಲ್ಲದ ನಾನು ಏನೋ ಒಂದು ಉತ್ತರ ಕೊಟ್ಟೆ- ಸರಿ ಅಲ್ಲದ್ದು. ಆ ಸ್ಪರ್ಧೆಯಲ್ಲಿ ಬಹುಮಾನ ಗೆದ್ದದ್ದು ಈಗ ಪ್ರಕಾಶ್ ರಾಜ್ ಆಗಿರುವ ಪ್ರಕಾಶ್ ರೈ. ಮಾತುಗಾರ ಪುಟ್ಟಸ್ವಾಮಿ.
ಹೀಗೆ ಇರುವಾಗಲೇ ಅವರ ‘ಒಣಮರದ ಗಿಳಿಗಳು’ ಬಂದದ್ದು. ಅದರ ಮುಖಪುಟ ಚಿತ್ರ ಅವರೇ ಬರೆದಿದ್ದರು ಎಂಬ ನೆನಪು. ನನಗೋ ಆ ಸಂಕಲನದ ಶೀರ್ಷಿಕೆಯೇ ಇಷ್ಟವಾಗಿ ಹೋಗಿತ್ತು. ಆ ವೇಳೆಗಾಗಲೇ ಹೃದಯ ದಹಿಸಿಕೊಂಡು ಒಣಮರದ ಗಿಳಿಗಳಾಗಿದ್ದವರು ನಾವು. ಆ ಮೇಲೆಯಂತೂ ಆ ಶೀರ್ಷಿಕೆಯನ್ನು ನಮ್ಮ ಬಳಗದಲ್ಲಿ ಎಷ್ಟು ಪಾಪ್ಯುಲರ್ ಮಾಡಿಬಿಟ್ಟೆವೆಂದರೆ ಯಾರಾದರೂ ಒಂಟಿ ಯಾಗಿ ಸಿಕ್ಕರೂ ಏನೋ ಒಳ್ಳೆ ಒಣಮರದ ಗಿಳಿ ಥರಾ ಒಂಟಿಯಾಗಿದ್ದೀಯಾ ಎನ್ನುತ್ತಿದ್ದೆವು. ಆ ಶೀರ್ಷಿಕೆ ಮಾತ್ರವಲ್ಲ.
‘ನಿನ್ನ ಗಾಯಗಳನ್ನು
ಪಡೆಯುವವರೆಗೂ
ನಿನ್ನ ನೋವುಗಳನ್ನು
ಪಡೆಯಲಾರೆ’
ಎನ್ನುವ ಕವಿತೆ
ಕೃಷ್ಣ ನಿನ್ನ ಬೇಡಿದವರು
ಭಾಗ್ಯವಂತರಾದರು
ಕೃಷ್ಣ ನಿನ್ನ ಕಾಡಿದವರು
ಕೀರ್ತಿವಂತರಾದರು
ಕೃಷ್ಣ ನಿನ್ನ ಕೂಡಿದವರು
ಹೇಳೋ ಏನಾದರು?
ಎಂದು ರಾಧೆ ಕೃಷ್ಣನಿಗೆ ಕೇಳುವ ಪರಿ,
ಆ ಹುಡುಗಿ
ಪಾಪ
ಆಟದ ಬಯಲಲ್ಲಿ ಬಾಲ್ಯವನ್ನ
ಶಾಲೆಗಳಲ್ಲಿ ಮುಗ್ಧತೆಯನ್ನ
ಸೀರೆಯಂಗಡಿಯಲ್ಲಿ ಕನಸುಗಳನ್ನ
ದಿನಸಿ ಅಂಗಡಿಯಲ್ಲಿ ಕೋಪವನ್ನ
ಮಾರುಕಟ್ಟೆಯಲ್ಲಿ ಸಂಕೋಚವನ್ನ
ದಟ್ಟ ಕೂದಲ ಎದೆ ಪೊದೆಯಲ್ಲಿ ಸ್ವತಹ ತನ್ನನ್ನ
ಕಳೆದುಕೊಂಡು ಬಿಟ್ಟಳು!
ಇದಲ್ಲದೆ ಇಷ್ಟವಾದದ್ದು ಎಷ್ಟೋ ಇತ್ತು ಆದರೂ ಇವು ಮಾತ್ರ ನಾಲಗೆಯ ಮೇಲೆ ಕುಣಿದಾಡುತ್ತಲೇ ಉಳಿಯಲು ನಮ್ಮ ಆ ವಯಸ್ಸೂ ಕಾರಣವಾಗಿಬಿಟ್ಟಿತು.
ಆ ನಂತರ ಬಂದ ಎಲ್ಲಾ ಸಂಕಲನಕ್ಕೂ ನಾವು ಸಾಕ್ಷಿಗಳೇ..’ಎಷ್ಟೊಂದು ಮುಗಿಲು’ ಸಂಕಲನ ಹಾಗೂ ನನ್ನ ‘ಸೋನೆಮಳೆಯ ಸಂಜೆ’ ಎರಡೂ ಮೂಡಬಿದ್ರೆಯ ಸ್ಪರ್ಧೆಯಲ್ಲಿ ಒಟ್ಟಾಗಿ ಕುಳಿತಿದ್ದವು. ಎಷ್ಟೊಂದು ಮುಗಿಲುಗಳನ್ನು ಅ ವೇಳೆಗಾಗಲೇ ನಮ್ಮ ಕೈಗಿಟ್ಟಿದ್ದ ಎಚ್ ಎಸ್ ವಿ ಗೆದ್ದು ಹೋದರು. ಅವರ ಕವಿತೆಗಳು ನಮ್ಮೊಳಗೆ ಇಳಿದದ್ದು, ಅದರ ಅರ್ಥಗಳನ್ನು ಕಂಡಿರಿಸಿದ್ದು ಎಲ್ಲವೂ ಒಂದು ಸುಖ ಯಾನ. ಹಾಗಾಗಿಯೇ ಎಚ್ ಎಸ್ ವಿ ಎದುರು ಸಿಕ್ಕಾಗ ನನಗೆ ಒಂದು ಭಯವೂ, ನನ್ನ ಯೌವನವನ್ನು ನಾನು ಮತ್ತೆ ಭೇಟಿಯಾದ ಸಂಭ್ರಮವೂ ಆಗುತ್ತದೆ.
ಎಚ್ ಎಸ್ ವಿ ಒಳಗಿರುವ ತಲ್ಲಣಗಳು ಸಧ್ಯಕ್ಕೆ ನನ್ನನ್ನು ಕಾಡುತ್ತಿರುವ ಸಂಗತಿಗಳು. ‘ಶೂದ್ರ’ಕ್ಕೆ ಬರೆದ ಅವರ ತಲ್ಲಣಗಳ ಕಟ್ಟು ಆ ಕವಿಯ ಬಗ್ಗೆ ನನ್ನ ಗೌರವವನ್ನು ಇನ್ನಷ್ಟು, ಮತ್ತಷ್ಟು ಹೆಚ್ಚಿಸಿದೆ. ಹಾಗೆ ಅಂದುಕೊಳ್ಳುತ್ತಲೇ ಅವರ ಸಮಗ್ರ ಕವಿತೆಗಳನ್ನು ಕೈಗೆತ್ತಿಕೊಂಡೆ. ಅದರ ಮುನ್ನುಡಿಯಾಗಿ ಅವರು ಬರೆದುಕೊಂಡ ಅಂತರಂಗ ನನ್ನ ಅಂತರಂಗವನ್ನೂ ತಾಕಿತು. ಹಿಂಸೆಯಿಂದ ಜಗತ್ತು ತಲ್ಲಣಿಸುತ್ತಿರುವ ಕಾಲವಿದು.. ಎನ್ನುತ್ತಾ ಆರಂಭವಾಗುವ ಅವರ ಅಂತರಂಗದ ಮಾತು ನೀವು ಕೇಳಿಸಿಕೊಳ್ಳಲೇ ಬೇಕು. ಹಾಗೆನ್ನುವಾಗಲೇ
in the deserts of the heart,
let the healing fountain start
ಅನ್ನುವ Auden ನ ಮಾತೂ ಕಾಣಿಸಿತು.
ಎಚ್ ಎಸ್ ವಿ ನನ್ನೊಳಗೆ ಇಳಿದ ಕವಿ, ಉಳಿದ ಕವಿ..
ಎಚ್ ಎಸ್ ವಿ ನನ್ನೊಳಗೆ ಇಳಿದ ಕವಿ, ಉಳಿದ ಕವಿ..
ನಿಮಗೆ ಇವೂ ಇಷ್ಟವಾಗಬಹುದು…





Great to read. I have yet to digest all that has been said, and heard !