ಅಳಿಯಲಾರದ ನೆನಹು-೧೦

-ಎಚ್ ಎಸ್ ವೆಂಕಟೇಶಮೂರ್ತಿ
ನನಗಾಗ ಏಳೋ ಎಂಟೋ ವರ್ಷವಿರಬೇಕು. ನಮ್ಮ ಸೀತಜ್ಜಿಗೆ ಇದ್ದಕ್ಕಿದ್ದಂತೆ ಮೈ ತೂಗು ಪ್ರಾರಂಭವಾಯಿತು. ಬೆಳಿಗ್ಗೆ ಪೂಜೆ ಮುಗಿಸಿ ದೇವರ ಮುಂದೆ ಕೂತಾಗ ಕೂತಂತೆಯೇ ಹಿಂದಕ್ಕೆ ಮುಂದಕ್ಕೆ ಮೈ ಒನೆಯುತ್ತಾ ಇದ್ದರು. ಅಜ್ಜ ಅವರನ್ನು ಬಿಗಿಯಾಗಿ ಹಿಡಿದುಕೊಂಡು ಕೂತರೂ ಅಜ್ಜನ ಸಮೇತ ತೂಗಾಟ ಮುಂದುವರೆಯುತ್ತಿತ್ತು. ದಾವಣಗೆರೆಗೆ ಹೋಗಿ ಇಂಗ್ಲಿಷ್ ಡಾಕ್ಟರ್ ನೋಡಿಕೊಂಡು ಬಂದರೂ ಏನೂ ಉಪಯೋಗವಾಗಲಿಲ್ಲ. ಕಂಚೀನಾಳಿಗೆ ಹೋಗಿ ಮಂಜಪ್ಪನಿಗೆ ಹರಕೆ ಕಟ್ಟಿ ಬಂದರು. ಜಾತ್ರೆಯಲ್ಲಿ ಎರಡು ಮಣ ಕೊಬ್ಬರಿ ಸುಡಿಸಿದರು. ದೊಣ್ಣೆ ಬಸಣ್ಣ(ಇವನು ನಮ್ಮೂರ ಮಂತ್ರವಾದಿ!) ಬಂದು ನಿಂಬೇಕಾಯಿ ಮಂತ್ರಿಸಿಕೊಟ್ಟು ಹೋದ. ಅಮಾವಾಸ್ಯೆ ರಾತ್ರಿ ಊರೇ ಸದ್ದು ಹೊಡೆದು ಮಲಗಿದ ಮೇಲೆ ಬಸಣ್ಣ ಹೂಂಕಾರ ಮಾಡುತ್ತಾ ಏನೇನೋ ನಿವಾಳಿಸಿ, ರಾವು ತೆಗೆದು, ಇದು ಗ್ರಹಚೇಷ್ಟೆ…ಯಾವುದೋ ಗಾಳಿ ಸೇರ್ಕಂಡಿದೆ….ಇವತ್ತು ಸರಿಯಾಗಿ ಕಟ್ಟು ಮಾಡಿದೀನಿ…ನಾಳೀನಿಂದ ಈ ಕಡೆ ಮಖ ಮಾಡಿದ್ರೆ ಕೇಳ್ರಿ ಭೋಸುಡ್ಕೆ…!ಎಂದು ಅಭಯಕೊಟ್ಟ.

ಇದಾದ ಎರಡು ದಿನ ಅಜ್ಜಿಯ ಮೈತೂಗು ನಿಂತಿತ್ತು. ಮೂರನೇ ದಿನ ಅಜ್ಜಿಯ ಮುಖ ಮತ್ತೆ ಭಯಗ್ರಸ್ತವಾಗಿತ್ತು. ಯಾಕೋ ಮೈ ತೂಗ್ತಾ ಇದೆ ನೋಡೇ…ಎಂದು ತಮ್ಮ ಅಕ್ಕ ಭೀಮಜ್ಜಿಯ ಮುಂದೆ ಅಲವತ್ತುಕೊಂಡರು. ಮತ್ತೆ ಯಥಾಪ್ರಕಾರ ಮೈ ಒನೆತ ಪ್ರಾರಂಭವಾಯಿತು. ಹುಣಿಸೇಕಟ್ಟೆಗೆ ಹೋಗಿ ಚೌಡಿಯನ್ನು ಹೊರಡಿಸಿ ಕೇಳಬೇಕು ಎಂದು ನಮ್ಮ ಮನೆಯ ಹಿರಿಯರು ಮಾತಾಡಿಕೊಂಡರು. ನಾವು ಮನೆಯಲ್ಲಿ ಇದ್ದವರು ನಾನು, ನನ್ನ ಅಮ್ಮ, ನನ್ನ ಅಜ್ಜಿ, ಅವರ ಅಕ್ಕ ಭೀಮಜ್ಜಿ ಮತ್ತು ನಮ್ಮ ಅಜ್ಜ-ಇಷ್ಟೇ ಜನ. ಈ ಐವರ ಮಧ್ಯೆ ಇದ್ದಕ್ಕಿದ್ದಂತೆ ಆರನೆಯ ಅಪರಚಿತ ವ್ಯಕ್ತಿಯೊಬ್ಬ ನಮ್ಮ ಜೊತೆಗೆ ಇದ್ದಾನೆಂಬ ಭಾವನೆಯಿಂದ ನಾನಂತೂ ಭಯಭೀತನಾಗಿ ಹೋದೆ. ಅಜ್ಜಿಯ ಬಳಿ ಮಲಗಲು, ಅವಳನ್ನು ಮುಟ್ಟಲು ನನಗೆ ಭಯವಾಗತೊಡಗಿತು. ಅಜ್ಜಿ ಆಗ ನಕ್ಕು, ಹೆದರಬೇಡ ಬಾ-ಎಂದು ಸನ್ನೆ ಮಾಡುತ್ತಿದ್ದರು. ಹಾಗೆ ನಕ್ಕವರು ನಮ್ಮ ಅಜ್ಜಿಯೋ ಅಥವಾ ಆ ಆರನೇ ಆಸಾಮಿಯೋ? ಈ ಯೋಚನೆಯಿಂದ ನಾನು ನಿಜವಾಗಿಯೂ ಹೈರಾಣಾಗಿ ಹೋದೆ.
ಹುಣಿಸೇಕಟ್ಟೆಗೆ ಅಜ್ಜಿಯೊಂದಿಗೆ ನಾನೂ ಹೋದೆ. ನಮ್ಮ ಅಜ್ಜಿಯ ಅಣ್ಣ ಅಲ್ಲಿ ಇದ್ದರು. ಅಣ್ಣ ಅಂದರೆ ದೊಡ್ಡಪ್ಪನ ಮಗ. ಅವರು ಆ ಊರಿನ ಶಾನುಭೋಗರೂ ಹೌದು. ಒಳ್ಳೇ ಜಬರ್ದಸ್ತ್ ಆಸಾಮಿ. ನಾವೆಲ್ಲಾ ಅವರನ್ನು ಹುಣಿಸೇಕಟ್ಟೆ ಹುಲಿ ಎಂದೇ ಕರೆಯುತ್ತಿದ್ದೆವು. ತುರುವನೂರು ತಾಲ್ಲೋಕಿನಲ್ಲಿರುವ ಹುಣಿಸೇಕಟ್ಟೆ ಒಂದು ಸಣ್ಣ ಹಳ್ಳಿ. ಆ ಊರಿನ ಚೌಡಿ ದೆವ್ವ ಬಿಡಿಸುವುದರಲ್ಲಿ ತುಂಬಾ ಫೇಮಸ್ಸಾಗಿದ್ದಳು. ರಾತ್ರಿ ನಾವೆಲ್ಲಾ ಅಜ್ಜಿಯ ಸಮೇತ ಚೌಡಿ ಗುಡಿಗೆ ಹೋದೆವು. ಚೌಡಿಗೆ ಮಂಗಳಾರತಿ ಬೆಳಗುತ್ತಿದ್ದಂತೇ ಪೂಜಾರಿಯ ಮೇಲೆ ಆವೇಶವಾಗಿ, ಆತ ರೌದ್ರಾವತಾರ ತಾಳಿ, ತನ್ನ ಕಟ್ಟಿದ ಕೂದಲ ಗಂಟು ಬಿಚ್ಚಿಕೊಂಡು ಬೆನ್ನ ಮೇಲೆ ಹರಡಿಕೊಂಡು, ಕೈಯಲ್ಲಿದ್ದ ಚಾವಟಿ ಜಳಪಿಸುತ್ತಾ-“ಸ್ವಾಮೀ ಮದ್ಲು ನಿಮ್ಮ ತಂಗೀನ ಈ ಕಡೆ ಕರಕಂಬನ್ನಿ..!” ಅಂತ ಅಬ್ಬರಿಸಿದ. ಚೌಡಿಗೂ ಶಾನುಭೋಗರ ಮೇಲೆ ಎಷ್ಟು ಗೌರವ ಅಂತ ನನಗೆ ಆಶ್ಚರ್ಯವಾಯಿತು.
ನಮ್ಮ ಹುಲಿಯ ಬಗ್ಗೆ ಮೊದಲೇ ಇದ್ದ ಗೌರವದ ಜತೆಗೆ ಈಗ ದಿಗಿಲೂ ಅಮರಿಕೊಂಡಿತು. ಇತ್ತ ನಮ್ಮ ಅಜ್ಜಿಯ ಮೈ ಒನೆತವೂ ಹೆಚ್ಚಾಗ ತೊಡಗಿತು. ಜೊತೆಗೆ ಈಗ ಅವರು ಗಟ್ಟಿಯಾಗಿ ರಾಗವಾಗಿ ಅಲಲಿಕ್ಕೆ ಶುರುಹಚ್ಚಿದರು. ನೀವು ಏನೇ ಅನ್ನಿ, ದೊಡ್ಡವರು ಅಳುವುದು ನೋಡಲಿಕ್ಕೆ ತುಂಬಾ ಅಸಹ್ಯವಾಗಿರತ್ತೆ. ಚೌಡಿ-ನೀನು ಯಾರು ಬಗಳು, ಎಂದು ಆರ್ಭಟಿಸಿದಾಗ, ನಮ್ಮ ಅಜ್ಜಿ “ನಾನು ಇವಳ ಎರಡನೇ ಮಲತಾಯಿ…ಪದ್ದಮ್ಮ!”ಅಂದುಬಿಡೋದೇ. ಪದ್ದಮ್ಮ ಸತ್ತು ಆಗಲೇ ಮೂವತ್ತು ವರ್ಷಕ್ಕೆ ಮೇಲಾಗಿತ್ತು. ಇಷ್ಟು ದಿನ ಈ ಪದ್ದಮ್ಮ ಎಲ್ಲಿದ್ದಳು? ಈಗ ಯಾಕೆ ನಮ್ಮ ಅಜ್ಜಿಯನ್ನು ಬಂದು ಹಿಡಿದುಕೊಂಡಿದ್ದಾಳೆ ತಿಳಿಯದೆ ನನಗೆ ಭಾರೀ ಗೊಂದಲವಾಗಿ ಹೋಯಿತು. ಪೂಜಾರಿ ಅಜ್ಜಿಯ ಕೊರಳಿಗೆ ಒಂದು ತಾಯತಿ ಕಟ್ಟಿ, “ನೀವೇನೂ ಕಾಳಜೀ ಮಾಡೋದು ಬ್ಯಾಡ. ನಾನು ಈ ಹೆಣ್ಣುಗ್ರಹಕ್ಕೆ ಟಿಕೆಟ್ ಕೊಟ್ಟಿವ್ನಿ. ಮತ್ತೆ ಆಕೆ ಕಾಟ ಕೊಡೋಣಿಲ್ಲ…”ಎಂದು ಅಭಯ ಪ್ರದಾನ ಮಾಡಿದ ಮೇಲೆ ನಾವು ಅರಾಮಾಗಿ ಊರಿಗೆ ಹಿಂದಿರುಗಿದೆವು.
ಚೌಡಿ ಮುಂದಿನ ಅಮಾವಾಸ್ಯೆ ರಾತ್ರಿ ನಮ್ಮ ಊರಿಗೆ ಬಂದು ಅಲ್ಲಿ ಮನೆಗೆ ಮಂತ್ರಕಟ್ಟು ಮಾಡಿ ಬರೋದಾಗಿ ಕೂಡಾ ಅಶ್ವಾಸನೆ ಕೊಟ್ಟಿದ್ದಳು. ನನಗೆ ಆಶ್ಚರ್ಯ. ಚೌಡಿ ಅಷ್ಟು ದೂರದಿಂದ ನಮ್ಮೂರಿಗೆ ಹೇಗೆ ಬರ್ತಾಳೆ? ಅವಳಿಗೆ ದಾರಿ ಗೀರಿ ತಪ್ಪೋದಿಲ್ಲವೆ? ನಮ್ಮ ಊರಿಗೆ ಬಂದಮೇಲೆ ನಮ್ಮ ಮನೆ ಗುರುತು ಅವಳಿಗೆ ಹೇಗೆ ಸಿಗತ್ತೆ? ಅಮಾವಾಸ್ಯೆ ರಾತ್ರಿ ನಮ್ಮ ಭೀಮಜ್ಜಿ ಮನೆಯ ಕಂಭದ ಕಿವಿಗಳ ಮೇಲೆಲ್ಲಾ ಊದಿನಕಡ್ಡಿ ಹಚ್ಚಿಟ್ಟಿದ್ದರು. ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕಿದ್ದರು. ದೇವರ ಮುಂದೆ ಚೌಡಮ್ಮನಿಗೆ ಅಂತ ಅರಿಸಿನ ಕುಂಕುಮ ಹೂವು ಮಡಿಲಕ್ಕಿ ಇಟ್ಟಿದ್ದರು. ನಾನು ರಾತ್ರಿ ಬಹಳ ಹೊತ್ತು ಎಚ್ಚರವಾಗಿದ್ದೆ. ಚೌಡಮ್ಮ ಬರುವಾಗ ಗಮ್ಮಂತ ಹೂವಿನ ವಾಸನೆ ಬರುತ್ತೆ, ಘಲ್ ಘಲ್ ಅಂತ ಗೆಜ್ಜೆಯ ಸದ್ದು ಕೇಳತ್ತೆ ಅಂತ ಭೀಮಜ್ಜಿ ಹೇಳಿದ್ದರು. ಚೌಡಮ್ಮ ಯಾವ ಮಾಯದಲ್ಲಿ ಬಂದಳೋ, ಯಾವ ಮಾಯದಲ್ಲಿ ಹೋದಳೋ ನನಗಂತೂ ಒಂದೂ ತಿಳಿಯಲಿಲ್ಲ. ಬೆಳಿಗ್ಗೆ ಮಾತ್ರ ನಮ್ಮ ಮನೆ ಇವತ್ತೇನೋ ಬೇರೆ ಥರ ಇದೆ ಅಂತ ನನಗೆ ಅನ್ನಿಸತೊಡಗಿತು.
ಹುಣಿಸೇಕಟ್ಟೆಗೆ ಹೋಗಿಬಂದಮೇಲೆ ಮೂರು ತಿಂಗಳು ನಮ್ಮ ಅಜ್ಜಿ ಅರಾಮಾಗಿದ್ದರು. ಸದ್ಯ, ಪದ್ದಜ್ಜೀ ಅವಳನ್ನು ಬಿಟ್ಟು ಬೇರೆಲ್ಲಿಗೋ ಹೋಗಿರಬೇಕು ಅಂತ ನಮ್ಮ ಹಿರೀಕರು ಮಾತಾಡಿಕೊಂಡರು. ಊಹುಂ! ಮತ್ತೆ ಅಮಾವಾಸ್ಯೆ ಬಂದಾಗ ಯಥಾಪ್ರಕಾರ ಅಜ್ಜಿ ಮೈ ತೂಗಲಿಕ್ಕೆ ಪ್ರಾರಂಭಿಸಿದರು. ನಮ್ಮ ಚಿಕ್ಕಮ್ಮನಿಗೆ ನಾನು ಏನು ಅಪರಾಧ ಮಾಡಿದ್ದೆ? ಅವಳು ಸತ್ತಾಗ ಕೈಗೂಸಾಗಿದ್ದ ಅವಳ ಮಗುವಿಗೆ ಬಾಣಂತಿಯಾಗಿದ್ದ ನಾನು ನನ್ನ ಕೂಸಿನ ಜತೆಯೇ ತೊಡೆಗೆ ಹಾಕಿಕೊಂಡು ಹಾಲು ಕೊಟ್ಟಿದ್ದೇ ಅಪರಾಧವಾ? ಕೊನೆಗೆ ಆ ಮಗು ಕೂಡಾ ಉಳಿಯಲಿಲ್ಲ. ಆ ಹಠ ಈವಾಗ ನಮ್ಮ ಚಿಕ್ಕಮ್ಮ ನನ್ನ ಮೇಲೆ ತೀರಿಸುತ್ತಾ ಇದ್ದಾಳಾ? ಇತ್ಯಾದಿ ಹಲುಬುತ್ತಾ ನಮ್ಮ ಅಜ್ಜಿ ಬಂದವರ ಮುಂದೆಲ್ಲಾ ಗೋಳಾಡತೊಡಗಿದಳು. ಆ ದಿನಗಳಲ್ಲಿ ನೋಡಿ, ಯಾರೋ ಪುಣ್ಯಾತ್ಮರು ಉಕ್ಕಡದ ವಿಷಯ ನಮ್ಮ ಅಜ್ಜಿಗೆ ಹೇಳಿದರು. ನಮ್ಮ ಕಡೆ ಉಕ್ಕಡ ಪ್ರಸಿದ್ಧ ಗ್ರಹವಿಮೋಚನಾ ಕ್ಷೇತ್ರವಾಗಿತ್ತು. ಅಲ್ಲಿ ದೆವ್ವ ಹಿಡಿದ ನೂರಾರು ಮಂದಿ ದಿನವೂ ಬರುವರೆಂದೂ, ಅಜ್ಜಯ್ಯನ ಸೇವೆ ಮಾಡಿದ ಮೇಲೆ ಎಂಥ ಜೋರು ದೆವ್ವಗಳೂ ಗಡಿಪಾರಾಗುವವೆಂದೂ, ಮತ್ತೆ ಇತ್ತ ಕಡೆ ಮುಖ ತಿರುಗಿಸುವುದಿಲ್ಲವೆಂದೂ ತಿಳಿದಿದ್ದೇ ನಮ್ಮ ಮನೆಯವರು ಉಕ್ಕಡದ ಯಾತ್ರೆಗೆ ಹೊರಟೇ ಬಿಟ್ಟರು.
ಅದೊಳ್ಳೆ ಮಳೆಗಾಲ. ನಾವು ಊರು ಬಿಟ್ಟಾಗಲೇ ಆಕಾಶದಲ್ಲಿ ಕಪ್ಪು ಮೋಡಗಳು ಡುರಕಿ ಹಾಕುತ್ತಾ ಇದ್ದವು. ನಾವು ಬಸ್ ಹಿಡಿದು ಹೊಸದುರ್ಗಕ್ಕೆ ಹೋಗಿ, ಆಮೇಲೆ ಇನ್ನೊಂದು ಲಠೂರಿ ಬಸ್ ಹಿಡಿದು ಉಕ್ಕಡ ತಲಪಿದೆವು. ಹೊಳೆ ದಾಟಿ ದೇವಸ್ಥಾನಕ್ಕೆ ಹೋಗಬೇಕು. ಹೊಳೆ ತುಂಬಿ ಹರಿಯುತ್ತಾ ಇತ್ತು. ಈ ಹೊತ್ತಲ್ಲಿ ಹೊಳೆ ದಾಟುವ ಸಾಹಸ ಬೇಡವೆಂದೂ, ಬೆಳಿಗ್ಗೆ ತೆಪ್ಪದಲ್ಲಿ ಕೂತು ಹೊಳೆ ದಾಟಬಹುದೆಂದೂ ನಮ್ಮ ಹಿರಿಯರು ನಿಶ್ಚಯ ಮಾಡಿದರು. ಹೊಳೆಯ ದಂಡೆಯ ಮೇಲೆ ಒಂದು ಪುರಾತನ ಕಾಲದ ಈಶ್ವರನ ಗುಡಿಯಿತ್ತು. ದೇವರ ಮುಂದೆ ಹರಳೆಣ್ಣೆ ದೀಪವೂ ಉರಿಯುತ್ತಿತ್ತು. ಅದು ಬಿಟ್ಟರೆ ಬೇರೆ ಬೆಳಕಿಲ್ಲ. ಗುಡಿಯ ಹೊರಗೆ ಅಭೋ ಎಂಬ ಕತ್ತಲು. ನೀನೇ ಅನ್ನೋರಿಲ್ಲ. ಆ ಹಾಳುಗುಡಿಯಲ್ಲೇ ರಾತ್ರಿ ನಾವು ಮಲಗೋದು ಎಂದು ನಮ್ಮ ಮಾರ್ಗದರ್ಶಿಯಾಗಿದ್ದ ಭದ್ರಕ್ಕ ಹೇಳಿದಳು.ಮತ್ತೂ ನಾವು ಮಲಗುವುದು ಶಿವನ ಗುಡಿಯಲ್ಲಿ ಆದುದರಿಂದ ಇಲ್ಲಿ ಪೀಡೆ ಪಿಶಾಚಿಗಳ ಭಯವಿಲ್ಲ ಎಂದೂ ಭದ್ರಕ್ಕ ಹೇಳಿದಳು. ಈ ಮಾತಿನಿಂದ ನಮಗೆಲ್ಲಾ ಅದೆಷ್ಟೋ ಧೈರ್ಯ. ರಾತ್ರಿ ಯಾರಾದರೂ ಬಂದು ಬಾಗಿಲು ಬಡಿದರೆ ಯಾರೂ ಬಾಗಿಲು ತೆಗೆಯಬೇಡಿ ಎಂದು ಭದ್ರಕ್ಕ ಹೇಳಿ ನಮ್ಮಜ್ಜಿ ಕಲಸಿಕೊಟ್ಟ ಅವಲಕ್ಕಿ ಮೊಸರು ಗಡದ್ದಾಗಿ ಹೊಡೆದು ಗೊರ್ ಗೊರ್ ಅಂತ ಗೊರಕೆ ಹೊಡೆಯಲು ಪ್ರಾರಂಭಿಸಿದಳು. ನಮ್ಮ ಅಜ್ಜ ಕಲ್ಲುಕಂಭಕ್ಕೆ ಒರಗಿ ಗಾಯತ್ರಿ ಹೇಳುತ್ತಾ ಕೂತೇ ಇದ್ದರು. ನಾನು ಅಮ್ಮ ಭೀಮಜ್ಜಿ ಸೀತಜ್ಜಿ ಗೋಡೆಯ ಅಂಚಿಗೆ ಒಂದು ಪಕ್ಕದಲ್ಲಿ ಮಲಗಿದೆವು. ನನಗೆ ಭಯವಾದುದರಿಂದ ಭೀಮಜ್ಜಿಯ ಹೊದಿಕೆಯಲ್ಲಿ ಬುಡುರಿಕೊಂಡಿದ್ದೆ. ಅಜ್ಜಿ ನನಗೆ ಭಯವಾಗಬಾರದೆಂದು ರಾಮನ ವನವಾಸದ ಕಥೆ ಹೇಳತೊಡಗಿದಳು. ಹೊರಗೆ ಧೋ ಎಂದು ಮಳೆ ಸುರಿಯ ಹತ್ತಿತು. ನಾನು ಸ್ವಲ್ಪ ಮಾತ್ರ ಹೊದಿಕೆ ಬಿಡಿಸಿಕೊಂಡು ಪಿಳಿ ಪಿಳಿ ಕಣ್ಣು ಬಿಡುತ್ತಾ ಅಜ್ಜಿಯ ಕಥೆ ಕೇಳುತಾ ಇದ್ದೆ. ನಾವು ಇರೋದೇ ದಂಡಕಾರಣ್ಯ ಎಂದು ನನಗೆ ಭಾಸವಾಗತೊಡಗಿತ್ತು. ರಾಮ ಲಕ್ಷ್ಮಣ ಸೀತೆಯ ಬಗ್ಗೆ ಅಯ್ಯೋ ಪಾಪ ಅನ್ನಿಸುತಾ ಇತ್ತು. ಅಷ್ಟರಲ್ಲಿ ಗುಡಿಯ ಹೊರಗೆ ಯಾರದ್ದೋ ಹೆಜ್ಜೆ ಸಪ್ಪುಳ ಕೇಳಿತು. ಯಾರೋ ಗುಡಿಯ ಬಾಗಿಲು ಬಡಿದರು. ಅಜ್ಜ ಜಪ್ಪಯ್ಯ ಅಂದರೂ ಬಾಗಿಲು ತೆರೆಯಲೊಲ್ಲರು. ಹೊರಗೆ ಒಬ್ಬಳು ಹೆಂಗಸು ಮುಸುಕು ಹಾಕಿಕೊಂಡು ನಿಂತ ಹಾಗಿತ್ತು. ಬಾಗ್ಲು ತೆಗೀರಿ ಸ್ವಾಮಿ ಮಳೆ ಹೊಡೀತೈತೆ…ಈಗ ಹೊಳೇ ದಾಟಹಂಗೂ ಇಲ್ಲ..ಎಂದು ಹೊರಗೆ ನಿಂತ ಹೆಂಗಸು ಗೋಗರೆಯುತ್ತಿದ್ದಳು.
ಅಜ್ಜ: ಯಾ ಊರಮ್ಮ ನಿಂದು
ಹೊರಗಿನಿಂದ: ಪರದೇಶಿ ಸ್ವಾಮಿ…ಊರು ಕೇರಿ ಇಲ್ಲದೋಳು..
ಅಜ್ಜನಿಗೆ ಏನನ್ನಿಸಿತೋ. ಸ್ವಭಾವತಃ ಅವರು ಧೈರ್ಯಶಾಲಿ. ಜೊತೆಗೆ ಗಾಯತ್ರಿ ಬೇರೆ ನಿತ್ಯಪಠಣೆ ಮಾಡುತ್ತಿದ್ದೋರು. ಅವರಿಗೆ ದೆವ್ವ ಭೂತಗಳು ಏನು ತಾನೆ ಮಾಡಿಯಾವು.
ಬಾಗಿಲು ತೆಗೀ ಬೇಡ್ರೀ ಎಂದು ನಮ್ಮ ಅಜ್ಜಿ ಹೇಳಿದರೂ ಕೇಳದೆ ಅಜ್ಜ ಬಾಗಿಲು ತೆರೆದರು. ಸೊರ್ರ್ ಅಂತ ಇರಚಲು ಒಳಗೆ ನುಗ್ಗಿತು. ಹೆಂಗಸನ್ನು ಒಳಗೆ ಬಿಟ್ಟುಕೊಂಡು ಅಜ್ಜ ಬಾಗಿಲು ಮತ್ತೆ ಭದ್ರಪಡಿಸಿದರು. ರಾತ್ರಿನಾಗ ಇಲ್ಲೇ ಬಿದ್ಕಂಡಿದ್ದು ಒತ್ತಾರೆ ಹೊಂಟೋಯ್ತೀನಿ ಸ್ವಾಮಿ…ನಿಮಗೆ ತೊಂದರೆ ಕೊಡಾಕಿಲ್ಲ..ಎಂದಳು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದ ಹೆಂಗಸು. ಭೀಮಜ್ಜಿ ಕಥೆ ನಿಲ್ಲಿಸಿ ಎದ್ದುಕೂತು ಆ ಮುದುಕಿಯನ್ನು ನೋಡಿದರು. ಹಣತೆಯ ಬೆಳಕಲ್ಲಿ ಕಂಡಂತೆ ತುಂಬಾ ವಯಸ್ಸಾದ ಹಣ್ಣು ಹಣ್ಣು ಮುದುಕಿ ಅವಳು. ಕರುಳು ಚುರುಕ್ ಅಂತು ನಮ್ಮ ಭೀಮಜ್ಜಿಗೆ. ತಗೋ ಇದನ್ನು ಹೊದ್ದುಕೋ ಅಂತ ಒಂದು ಹಳೇ ಶಾಲು ಮುದುಕಿಗೆ ಕೊಟ್ಟು, ಹೊಟ್ಟೇಗೇನಾದರೂ ತಿಂದಿದೀಯಾ ಅಂತ ಅವಳನ್ನು ಕೇಳಿದರು. ಮೂರು ದಿನದಿಂದ ಉಪವಾಸ ತಾಯಿ ಅಂದಳು ಆ ಮುದುಕಿ. ಅಜ್ಜಿಯ ಗಂಟಲ್ಲಿ ಅವಲಕ್ಕಿ ಬೆಲ್ಲ ಇತ್ತು. ಮುದುಕಿಗೆ ಅದನ್ನು ಕೊಟ್ಟು ತಿಂದು ಈ ನೀರು ಕುಡಿದೊ ಮಲಕ್ಕೋ ಅಜ್ಜೀ..ಅಂದರು ಮಹಾಗಟ್ಟಿಗಿತ್ತಿಯಾಗಿದ್ದ ನಮ್ಮ ಭೀಮಜ್ಜಿ. ಆಮೇಲೆ ರಾಮನ ಹೆಸರು ಆ ಮುದುಕಿಯ ಕಿವಿಗೂ ಬೀಳಲಿ ಅಂತ ರಾಮನ ಕಥೆಯನ್ನು ಗಟ್ಟಿಯಾಗಿ ಹೇಳತೊಡಗಿದಳು. ಪಿಶಾಚಿಯಾಗಿದ್ದರೆ ರಾಮನಾಮ ಕಿವಿಗೆ ಬಿದ್ದ ಕೂಡಲೇ ಅಲ್ಲಿಂದ ಕಂಬಿಕೀಳಬೇಕಲ್ಲ!
ನನಗೆ ಯಾವಾಗ ಕಣ್ಣುಹತ್ತಿತೋ ತಿಳಿಯದು. ಎದ್ದಾಗ ಚುಮು ಚುಮು ಬೆಳಗು. ಎದ್ದವನೇ ರಾತ್ರಿ ಆ ಅಪರಚಿತ ಮುದುಕಿ ಮಲಗಿದ್ದ ಮೂಲೆಯ ಕಡೆ ನೋಡಿದೆ. ಅವಳಾಗಲೇ ಎದ್ದು ಹೋಗಿದ್ದಾಳೆ…ಯಾವ ಮಾಯದಲ್ಲಿ ಹೋದಳೋ ಶ್ರೀರಾಮನೇ ಬಲ್ಲ ಅಂದರು ಭೀಮಜ್ಜಿ. ಉಕ್ಕಡದಿಂದ ಬಂದಮೇಲೆ ಅಜ್ಜಿಯ ಮೈತೂಗು ಸಂಪೂರ್ಣ ನಿಂತುಹೋಯಿತು! ಆವತ್ತು ರಾತ್ರಿ ಗುಡಿಗೆ ಬಂದವಳು ನರಮನುಷ್ಯಳಲ್ಲವೆಂದೂ , ತೀರಿಹೋಗಿದ್ದ ಪದ್ದಮ್ಮನೇ ಆ ರೂಪದಲ್ಲಿ ಬಂದದ್ದೆಂದೂ, ಅನ್ನದ ಋಣ ತೀರಿಸಿಕೊಂಡು ಹೊರಟುಹೋದಳೆಂದೂ ಭೀಮಜ್ಜಿ ನನಗೆ ಹೇಳಿದರು!
****
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ದೆವ್ವಗಳ ಬೀಡಿನಲ್ಲಿ ಒಂದು ರಾತ್ರಿ!
ನಿಮಗೆ ಇವೂ ಇಷ್ಟವಾಗಬಹುದು…


tumba sogasaagide. vaarakkommeya badalu dinaalu bareyabaarade?!
ತುಂಬಾ ಸ್ವಾರಸ್ಯಕರವಾಗಿದೆ. ಚೆನ್ನಾಗಿ ಓದಿಸಿಕೊಂಡು ಹೋಯಿತು.
ನಮ್ಮೆಲ್ಲಾ ಅವ್ಯಕ್ತ ಕೊರಗು, ಸಂಕಟ, ರಗಳೆ, ಯಾವೆಲ್ಲಾ ರೂಪದಲ್ಲಿ ನಮ್ಮನ್ನು ಕಾಡುತ್ತವೆ ಎಂಬುದು ನಿಜಕ್ಕೂ ಅಚ್ಚರಿಯ ವಿಷಯ. ಜೊತೆಗೆ ಅದಕ್ಕೊಂದು ಪರಿಹಾರವೂ ಕೂಡಾ ನಮ್ಮ ನಮ್ಮ ನಂಬಿಕೆಯ ವರ್ತುಲದೊಳಗೆ ಸಿಗುವುದೂ ಇನ್ನಷ್ಟು ಅಚ್ಚರಿಯ ವಿಷಯವೇ ಸರಿ! ಬರವಣಿಗೆ ಸರಾಗವಾಗಿ ಓದಿಸಿಕೊಂಡು, ಸ್ವಾರಸ್ಯವನ್ನು ಉಳಿಸಿಕೊಂಡೂ ಸಾಗುತ್ತದೆ. ಖುಷಿ ಆಯಿತು! ನಮಸ್ಕಾರ.
ನಾವು ಮರಿಮಕ್ಕಳು ಹುಟ್ಟುವ ಅನೇಕ ವರ್ಷಗಳ ಮುನ್ನಿನ ಈ ಪ್ರಸಂಗ ಓದಿದಾಗ ಬೆರಗು ಮತ್ತು ಭಯ ಎರಡೂ ಉಂಟಾದವು.
navya jagathige ondu hale kathana,
Hat’s of Ventkatesh Murthy sir