ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಹೆಸ್ವಿ ಅನಾತ್ಮ ಕಥನ: ಮೊನ್ನೆ ಊರಿಗೆ ಹೋದಾಗ ಟಿ.ಕೆಂಚಪ್ಪ ಸಿಕ್ಕಿದ್ದ.

ಅಳಿಯಲಾರದ ನೆನಹು-೪

ಕಾರೆ ಕಾಕಿ ಮಾವು ನೇರಿಳೆ…...

ಎಚ್ ಎಸ್ ವೆಂಕಟೇಶಮೂರ್ತಿ

ನಾನು ಇನ್ನೂ ಚಿಕ್ಕ ಹುಡುಗನಾಗಿದ್ದಾಗಿನ ವಿಷಯ ಹೇಳುತ್ತೇನೆ. ೧೯೫೫-೫೬ ಅಂತ ಇಟ್ಟುಕೊಳ್ಳಿ. ಆಗ ಅಂಗಡಿಯಲ್ಲಿ ನಮಗೆ ನೋಡಲು ಸಿಗುತ್ತಿದ್ದ ಒಂದೇ ಹಣ್ಣು, ಬಾಳೆ. ಅದುಬಿಟ್ಟರೆ ಬೇರೆ ಹಣ್ಣು ನಾವು ನಮ್ಮೂರ ಅಂಗಡಿಗಳಲ್ಲಿ ಕಂಡದ್ದೇ ಇಲ್ಲ. ಯಾರಾದರು ನಂಟರು ದುರ್ಗ, ದಾವಣಗೆರೆ, ಶಿವಮೊಗ್ಗ, ಭದ್ರಾವತಿಯಿಂದ ಬಂದರೆ ಮಾತ್ರ ನಮಗೆ ಕಿತ್ತಳೆಯೋ, ಮೋಸಂಬಿಯೋ ನೋಡಲು ಸಿಗುತ್ತಿತ್ತು. ಬೆಂಗಳೂರಿಂದ ಒಂದು ಬಾರಿ ನಮ್ಮ ಹಳ್ಳಿಗೆ ಬಂದ ನಮ್ಮ ಮಾವ ದ್ರಾಕ್ಷಿಹಣ್ಣು ತಂದಿದ್ದರು. ಅದು ಕಪ್ಪು ದ್ರಾಕ್ಷಿ. ಇಷ್ಟು ಬಿಟ್ಟರೆ ಬೇರೆ ಯಾವ ಹಣ್ಣಿನ ಮಂಡೆಕುಂಡೆ ನಾವು ಕಂಡವರಲ್ಲ. ಆದರೆ ಹಣ್ಣುತಿನ್ನುವ ಆಸೆ ಮಕ್ಕಳಿಗೆ ಸಹಜವಲ್ಲವೇ? ಸಂಜೆ ಸ್ಕೂಲಿಂದ ಬಂದ ಮೇಲೆ ನಮ್ಮ ನಾಲಗೆ ಚುಟು ಚುಟು ಅನ್ನುತ್ತಾ ಇತ್ತು. ಆಗ ನಾವು ಹುಡುಗರೆಲ್ಲಾ ಸೇರಿ ಹಣ್ಣಿನ ಬೇಟೆಗೆ ಹೊರಡುತಾ ಇದ್ದೆವು. ಹಣ್ಣಿನ ಬೇಟೆ ಎಂದರೆ ಸಾಮಾನ್ಯ ಅಂತ ತಿಳಿಯ ಬೇಡಿ. ಅದಕ್ಕೆ ಒಬ್ಬ ಮರ ಹತ್ತುವ ಪರಿಣತ ಬೇಕು; ಒಬ್ಬ ಬೇಲಿ ನುಗ್ಗುವ ಪರಿಣತ ಬೇಕು; ಗುರಿಕಾರನಂತೂ ಗುಂಪಿನಲ್ಲಿ ಇರಲೇ ಬೇಕು.

ನಮ್ಮ ಸ್ಕೂಲಿನ ಹಿಂದೆ ಎರಡು ಮಾವಿನ ಮರ ಇದ್ದವು. ಒಂದು ಚೂರು ಗಾಳಿ ಜೋರಾಗಿ ಬೀಸಿತು ಎಂದರೆ ನಾವು ಹೋ ಎಂದು ಅರಚುತ್ತ ಜೋಡಿ ಮಾವಿನ ಮರದ ಬಳಿ ಓಡುತಾ ಇದ್ದೆವು. ಬಹಳ ಎತ್ತರದ ಮರಗಳು ಅವು. ಅವುಗಳ ಬಡ್ಡೆಯೇ ಬಹಳ ಎತ್ತರ ಇದ್ದು ಮೇಲೆಲ್ಲೋ ಅವು ಕವಲೊಡೆದು ಅರ್ಧ ಆಕಾಶ ಮುಚ್ಚುವಂತೆ ರೆಂಬೆ ಕೊಂಬೆ ಹರಡಿಕೊಂಡಿದ್ದವು. ನನ್ನಂಥವ ಕಲ್ಲು ಬೀಸಿದರೆ ಅದು ಮರದ ಬಡ್ಡೆ ದಾಟಿ ಮೇಲಕ್ಕೆ ಹೋಗುತ್ತಲೇ ಇರಲಿಲ್ಲ. ಜೋರು ಗಾಳಿ ಬೀಸಿದಾಗ ಮಾವಿನ ಹಣ್ಣು ತುಪು ತುಪು ನೆಲಕ್ಕೆ ಬೀಳುತ್ತಾ ಇದ್ದವು. ನಾವು ಒಬ್ಬರ ಮೇಲೊಬ್ಬರು ಬಿದ್ದು ಆ ಹಣ್ಣು ಹೆಕ್ಕಿ, ಪಕ್ಕದಲ್ಲೇ ಇದ್ದ ಪಾತಾಳಗಂಗೆ ಬಾವಿಯಲ್ಲಿ ಹಣ್ಣು ತೊಳೆದು ಗಡ್ಡ ಚೀಪುತ್ತಾ ಅದೆಷ್ಟೊ ಹೊತ್ತು ಹಣ್ಣಿನ ರಸ ಹೀರುವಲ್ಲಿ ತನ್ಮಯರಾಗುತ್ತಿದ್ದೆವು.ಪಾತಾಳ ಗಂಗೆ ಬಾವಿಯ ವಿಶೇಷವೆಂದರೆ ಅದು ತುಂಬೋ ಬಾವಿ. ಮೆಟ್ಟಿಲು ಇಳಿದು ನೀರಿನ ತನಕ ಹೋಗಬಹುದಿತ್ತು. ನೀರು ಹಚ್ಚಗೆ ಪಾಚಿಕಟ್ಟಿರುತ್ತಾ ಇತ್ತು. ನಾವು ಪಾಚಿ ಸರಿಸಿ, ಅಂಗಿ ನೀರಿಗೆ ಬಿಟ್ಟುಕೊಂಡು ಅಂಗಿಯಲ್ಲಿ ಸೋಸಿ ಬಂದನೀರನ್ನು ಕುಡಿಯುವುದಕ್ಕೆ, ಹಣ್ಣು ತೊಳೆಯುವುದಕ್ಕೆ ಬಳಸುತ್ತಾ ಇದ್ದೆವು.

ಸದರೀ ಮಾವಿನ ಮರದ ಹಣ್ಣುಗಳ ವಿಷಯಕ್ಕೆ ಈಗ ಬರುತ್ತೇನೆ. ಹಣ್ಣಿನ ಗಾತ್ರ ಒಂದು ಹಿಡಿಯಷ್ಟು ಚಿಕ್ಕದು. ಅದರ ಸಿಪ್ಪೆ ಸುಲಿದು ಚೀಪತೊಡಗಿದರೆ ಬಾಯಿ ತುಂಬ ಬರೀ ಮಾವಿನ ಜೇನುಸಿಹಿನಾರು. ಅದು ಗೊಂಬೆಯಾಟದ ನಾರದರ ಗಡ್ಡದ ಹಾಗೆ ಇರುತ್ತಾ ಇತ್ತು. ಹಳದಿ ಬಣ್ಣದ ಗಡ್ಡ ಬೆಳ್ಳಗೆ ಆಗುವ ತನಕ ನಾವು ಹಣ್ಣು ಚೀಪುತಾ ಇದ್ದೆವು. ಬೆಳ್ಳಗಾಯಿತು ಎಂದರೆ ರಸವನ್ನೆಲ್ಲಾ ನಾವು ಹೀರಿದ್ದೇವೆ ಎಂದು ಅರ್ಥ. ಆಮೇಲೆ ಆ ಗಡ್ಡದ ಓಟೆಯನ್ನು ಯಾರು ಎಷ್ಟು ದೂರಕ್ಕೆ ಒಗೆಯುತ್ತಾರೆ ಎಂಬ ಬಗ್ಗೆ ಸ್ಪರ್ಧೆ ಏರ್ಪಾಡಾಗುತ್ತಿತ್ತು. ಯಾರು ಬಹಳ ದೂರಕ್ಕೆ ಮಾವಿನ ಓಟೆ ಎಸೆಯುತ್ತಾರೋ ಅವರಿಗೆ ಉಳಿದವರು ಒಂದೊಂದು ಬಳಪದ ತುಂಡು ಕೋಡಬೇಕು. ಕೆಂಪು, ಬಿಳಿ, ನೀಲಿ, ಹಸಿರು ಬಣ್ಣದ ಬಳಪದ ಚೂರುಗಳು ಎಲ್ಲರ ಚಡ್ಡಿ ಜೋಬಲ್ಲೂ ತುಂಬಿರುತ್ತಾ ಇದ್ದವು. ಬಳಪ ಹೆಚ್ಚು ಗೆದ್ದವನು ಮಹಾ ಧೀರನೂ ಶೂರನೂ ಆಗಿ ಆವತ್ತಿನ ಮಟ್ಟಿಗೆ ಮೆರೆಯುತ್ತಾ ಇದ್ದನು. ಉದುರು ಹಣ್ಣು ಸಿಗದ ಕೆಲವರು ಹುಡುಗರು ಸಪ್ಪೆ ಮುಖ ಹಾಕಿಕೊಂಡು ನಿಂತಿರುತ್ತಾ ಇರಲು, ಗುರಿಕಾರನೂ, ಅಭಿನವ ಅಭಿಮನ್ಯು ಎಂದು ಹೆಸರಾದವನೂ ಆದ ಕಾಳಾಚಾರಿ ಅವರಿಗೆ ಕಲ್ಲು ಆಯ್ದು ತಂದುಕೊಡಲು ಹೇಳುತ್ತಿದ್ದನು. ಈ ಕಾಳಾಚಾರಿಯಾದರೋ ಉಷ್ಟುಮರ ಬೀದಿಯಲ್ಲಿದ್ದ ಬನಶಂಕರಿ ಪೆಟ್ಟಿಗೆಯನ್ನು ಪೂಜೆ ಮಾಡುವ ಅರ್ಚಕನ ಮಗನಾಗಿದ್ದನು. ಹಾಗಾಗಿ ಅವನೂ ಒಮ್ಮೊಮ್ಮೆ ಬನಶಂಕರಿ ಪೆಟ್ಟಿಗೆಯನ್ನು ತಾನೇ ಅರ್ಚಿಸುವ ಅದೃಷ್ಟಶಾಲಿಯಾಗಿದ್ದನು. ಆ ಪೆಟ್ಟಿಗೆಯಲ್ಲಿ ಏಳು ಹೆಡೇ ಸರ್ಪ ಇದೆಯೆಂದೂ, ಅದರ ಮೇಲೆ ಗೇಣುದ್ದದ ಕೂದಲು ಇದೆಯೆಂದೂ, ತಾನು ಅದರ ಆರಾಧಕನಾದುದರಿಂದ ತಾನು ಇಟ್ಟ ಗುರಿ ಯಾವತ್ತೂ ತಪ್ಪುವುದಿಲ್ಲವೆಂದು ಹೇಳುತ್ತಿದ್ದನು. ಅದು ಬರೀ ಬೊಕಳೆ ಎಂಬುದು ನಮ್ಮಲ್ಲಿ ಕೆಲವರಿಗೆ ತಿಳಿದಿದ್ದರೂ, ಅದನ್ನು ಬಾಯಿ ಬಿಟ್ಟು ಆಡದೆ ಅವನ ಗುರಿ ತಾಗಿ ಬೀಳುವ ಹಣ್ಣಿನ ಪಾಲು ಪಡೆಯಲು, ಅಹಾ ಓಹೋ ಎಂದು ಉದ್ಗರಿಸುತ್ತಾ, ಹೌದೇನಲೇ? ಹೌದೇನಲೇ ಎಂಬುದಾಗಿ ಅವನನ್ನು ತಾರೀಫು ಮಾಡುತ ಇದ್ದೆವು.

ನೀವು ನಂಬ ಬೇಕು. ಕಾಳಾಚಾರಿ ಒಮ್ಮೆ ಒಂದು ಕಲ್ಲು ಬೀಸಿದ ಎಂದರೆ ಎಲ್ಲೋ ಆಕಾಶದಲ್ಲಿ ಎಲೆಗಳ ಸಂದಿಯಲ್ಲಿ ಜೋಲಿಯಾಡುತ್ತಾ ಇದ್ದ ಬಣ್ಣದಿರುಗಿದ ಒಂದು ಹಣ್ಣು ಕಲ್ಲು ತಾಗಿದ ಅರೆಕ್ಷಣದ ನಂತರ ಕೆಲವು ಎಲೆಗಳನ್ನು ರೆಕ್ಕೆಯ ಹಾಗೆ ಅಂಟಿಸಿಕೊಂಡು , ಮಾವಿನ ತೊಂಗಲಲ್ಲಿ ತೂರಿಕೊಂಡು ದೊಪ್ಪನೆ ನೆಲಕ್ಕೆ ಬೀಳುತಾ ಇತ್ತು.ಕಲ್ಲು ತಾಗಿದ ಅರೆಕ್ಷಣ ಆ ಹಣ್ಣು ಯಾವ ಮಾಯದಿಂದ ಮರಕ್ಕೇ ಅಂಟಿಕೊಂಡು ಇರುತ್ತಿತ್ತು ಎನ್ನುವುದು ಈವತ್ತೂ ನನ್ನ ಬುದ್ಧಿಗೆ ಬಗೆ ಹರಿಯದ ವಿಷಯ. ಅದನ್ನು ನಾವು ಯಾರೂ ಮುಟ್ಟುವ ಹಾಗಿಲ್ಲ. ಕಲ್ಲು ಆಯ್ದು ತಂದ ಬಡಪಾಯಿಗಳಿಗೆ ಕಾಳಾಚಾರಿ ಆ ಹಣ್ಣುಗಳನ್ನು ದಯಪಾಲಿಸುತ್ತಾ ಇದ್ದನು. ಒಂದು ವೇಳೆ ಎರಡೇ ಹಣ್ಣು ಬಿದ್ದು ಇದ್ದವರು ನಾಕು ಮಂದಿ ಅಂತ ಆದರೆ ಅವರು ಹಣ್ಣನ್ನು ಅಂಗಿಯಲ್ಲಿ ಮುಚ್ಚಿಕೊಂಡು ಹಲ್ಲಿಂದ ಕಚ್ಚಿ ತಮ್ಮ ಪಾಲು ತಾವು ಪಡೆಯುತ್ತಾ ಇದ್ದರು. ಹೀಗೆ ಗುಬ್ಬಿಯೆಂಜಲು ಮಾಡಿ ಪಡೆದ ಹಣ್ಣು ಬ್ರಾಹ್ಮಣ, ಲಿಂಗಾಯತ, ಕುರುಬ, ಉಪ್ಪಾರ ಯಾರೂ ತಿನ್ನ ಬಹುದಿತ್ತು. ಅಲ್ಲಿ ಜಾತಿ ಗೀತಿ, ಮಡಿ ಮೈಲಿಗೆಯ ಪ್ರಶ್ನೆ ಬರುತ್ತಾ ಇರಲಿಲ್ಲ. ಇದು ನಾವು ನಾವೇ ಹುಡುಗರು ಮಾಡಿಕೊಂಡ ಒಪ್ಪಂದವಾಗಿತ್ತು. ಇದನ್ನು ಯಾರೂ ಮನೆಗೆ ಹೋಗಿ ದೊಡ್ಡವರ ಮುಂದೆ ವದರಕೂಡದೆಂದು ನಮ್ಮಲ್ಲೇ ಅಲಿಖಿತ ಒಪ್ಪಂದವಾಗಿತ್ತು. ಅದನ್ನು ನಾವು ಯಾರೂ ಯಾವತ್ತೂ ಮುರಿಯಲಿಲ್ಲ.

ಮಾವು ಯಾವತ್ತೋ ಒಂದು ಕಾಲದಲ್ಲಿ ಮಾತ್ರ ಸಿಕ್ಕುವ ಹಣ್ಣು. ಕಾರೆ ಹಣ್ಣು ಹಾಗಲ್ಲ. ನಮ್ಮ ನಾಗರಕಲ್ಲು ಹೊಲದಲ್ಲಿ ಭರ್ದಂಡು ಕಾರೆ ಮೆಳೆಗಳಿದ್ದವು. ಕಾರೇ ಮೆಳೆಯಲ್ಲಿ ಹಾವು ಇರುತ್ತದೆ ಎಂಬುದು ಆಗ ನಮ್ಮ ಗ್ಯಾರಂಟೀ ನಂಬಿಕೆ. ಆದಕಾರಣ ಕಾರೆಹಣ್ಣು ಕೀಳುವುದಕ್ಕೆ ಎಂಟೆದೆಯ ಭಂಟನೇ ಬೇಕು. ಜೊತೆಗೆ ಈ ಪಾಪಿಷ್ಟ ಮೆಳೆಗೆ ಮೈತುಂಬ ದಬ್ಬಣದಂಥ ಮುಳ್ಳು. ಚುಚ್ಚಿದರೆ ಮುಗಿಯಿತು ಕಥೆ! ಚರ್ಮ ಸೀಳಿ ಮಾಂಸಕ್ಕೆ ಉರಿ ಹತ್ತುತಾ ಇತ್ತು. ಕಾರೆ ಹಣ್ಣು ಕೀಳುವುದರಲ್ಲಿ ನಮ್ಮ ಟಿ.ಕೆಂಚಪ್ಪ ಪರಿಣತನಾಗಿದ್ದನು. ಅವನು ಅಡ್ಡ ಗಳ ಇಟ್ಟುಕೊಂಡು ಮುಳ್ಳು ತಾಗದಂತೆ ಪೊದೆಯ ಮೇಲಕ್ಕೆ ಅಡರಿ ಹೊಂಬಣ್ಣಕ್ಕೆ ತಿರುಗಿದ ದೋರೆಗಾಯಿ ಆರಿಸಿ ಆರಿಸಿ ಕೀಳುತಾ ಇದ್ದನು. ಸಣ್ಣ ಗೋಲಿ ಗಾತ್ರದ ಈ ಕಾರೆ ಕಾಯಿಗಳನ್ನು ಖಾಲಿ ಬೆಂಕಿ ಪೆಟ್ಟಿಗೆಯಲ್ಲಿ ಕಲ್ಲು ಹರಳಿನ ಸಮೇತ ತುಂಬಿಟ್ಟು ಅಲ್ಲೇ ಪೊದೆಯ ಕೆಳಗೆ ಯಾರಿಗೂ ಕಾಣದಂತೆ ಮುಚ್ಚಿಟ್ಟು ಸೂರ್ಯ ಕಂತರಂಗನ ಮಟ್ಟಿಯಲ್ಲಿ ಮುಳುಗುವ ವೇಳೆಗೆ ಮನೆ ಸೇರಿಕೊಳ್ಳುತ್ತಾ ಇದ್ದೆವು. ಕಾರೆ ಮುಳ್ಳು ಅದ್ಯಾವ ಮಾಯದಲ್ಲಿ ನಮ್ಮ ಕಾಲು ಕೈ ಗೀಚಿರುತ್ತಾ ಇತ್ತೋ. ಮನೆಗೆ ಬಂದು ಕೈ ಕಾಲ ಮೇಲೆ ತಣ್ಣೀರು ಹಾಕಿಕೊಂಡಾಗ ಶುರುವಾಗುತ್ತಾ ಇತ್ತು ನೋಡಿ ಭಗ ಭಗ ಉರಿ. ಆಡುವ ಹಾಗಿಲ್ಲ; ಅನುಭವಿಸುವ ಹಾಗಿಲ್ಲ. ತುಟಿಯ ಹಿಂದೆ ನಾಲಗೆ ಬಚ್ಚಿಟ್ಟುಕೊಂಡು ಹೇಗೋ ಉರಿ ಸಹಿಸುತ್ತಾ ಇದ್ದೆವು. ಮಾರನೇ ದಿನ ನಿಗಧಿತ ವೇಳೆಗೆ ಸರಿಯಾಗಿ ಊರ ಹೊರಗಿನ ಕಾರೆ ಮೆಳೆಯ ಬಳಿ ನೆನ್ನೆಯ ಸಾಹಸಿಗಳೆಲ್ಲಾ ಸೇರಿ, ಬೆಂಕಿ ಪೊಟ್ಟಣ ಬಿಚ್ಚಿದರೆ ಅದರಲ್ಲಿ ಹಳದಿ ಬಣ್ಣದ ಫಳ ಫಳ ಹೊಳೆಯುವ ಕಾರೆ ಹಣ್ಣುಗಳು. ಒಂದೊಂದನ್ನೇ ನಾಲಗೆ ಮೇಲಿಟ್ಟು ಉರುಳಿಸಿ ಉರುಳಿಸಿ ಅದರ ಸೀಒಗರು ರುಚಿ, ಅರೆಗಣ್ಣಲ್ಲಿ ಅನುಭವಿಸುತ್ತಾ ಎಲ್ಲರೂ ಅಲ್ಲಲ್ಲೇ ಮರಳು ಹೊಲದಲ್ಲಿ ಉರುಳಿಕೊಳ್ಳುತ್ತಾ ಇದ್ದೆವು. ಈಗಲೂ ಕಾರೆಹಣ್ಣಿನ ಆ ಸೀಒಗರು ರುಚಿ ನನ್ನ ನಾಲಗೆಗೆ ಅಂಟಿಕೊಂಡೇ ಇದೆ. ಉಪ್ಪು ಹುಣಿಸೆ ಹಾಕಿ ಗಸ ಗಸ ತಿಕ್ಕಿ ತೊಳೆದ ಎಷ್ಟೋ ಹೊತ್ತಿಗೆ ಮೆಲ್ಲಗೆ ಜಿಹ್ವಾಮೂಲದಿಂದ ಸುರುಳಿ ಸುರುಳಿಯಾಗಿ ಕಾರೆ ಹಣ್ಣಿನ ರುಚಿ ಮೇಲೇಳ ತೊಡಗುತ್ತದೆ. ನಾಲಗೆಯ ಎಲ್ಲ ಪಕ್ಕಗಳಿಂದ ಜುಳು ಜುಳನೆ ಜೊಲ್ಲು ಕಿಗ್ಗದ ಜಲಪಾತದಂತೆ ಸುರಿಯಹತ್ತಲು ಮತ್ತೆ ಮತ್ತೆ ಆ ಜೊಲ್ಲು ನುಂಗುತ್ತ ನಾನು ಅರೆಗಣ್ಣು ಮಾಡಿ ಸೋಫಾದಲ್ಲಿ ಅಲ್ಲಾಡದೆ ಕುಕ್ಕರುಬಡಿಯುತ್ತೇನೆ.

ಇನ್ನು ಕಾಕಿ ಹಣ್ಣಿನಂಥ ನಿರುಪದ್ರವಿ ಹಣ್ಣಿನ ಗಿಡ ಮತ್ತೊಂದಿಲ್ಲ. ಯಾವುದೇ ಹಿತ್ತಲಲ್ಲೂ ತುಳಸಿಗಿಡದೆತ್ತರದ ಕಾಕಿ ಗಿಡ ನಿಮಗೆ ಕಾಣಿಸೀತು. ಮೊದಲು ನೋಡಿದಾಗ ಬರೀ ಎಲೆ ಮಾತ್ರ ಕಾಣುವುದು. ಹಣ್ಣಿಲ್ಲ ಎಂದು ನೀವು ಮುಂದೆ ಹೋದಿರೋ ಕೆಟ್ಟಿರಿ. ಅದೇ ಗಿಡವನ್ನು ಕಣ್ಣು ರೆಪ್ಪೆ ಹೊಡೆಯದೆ ನೋಡುತ್ತಾ ನಿಲ್ಲಿರಿ. ಈಗ ಗೊಂಚಲು ಗೊಂಚಲು ಕಾರೆ ಹಣ್ಣು ನಿಮಗೆ ದೃಗ್ಗೋಚರವಾಗುತ್ತದೆ. ನಿಮ್ಮ ಬೆಂಗಳೂರಿನ ಕಪ್ಪುದ್ರಾಕ್ಷಿಯ ಲಿಲ್ಲಿಪುಟ್ಟೀಸಂತಾನ ಇದು. ಅಥವಾ ಬೆಂಗಳೂರು ದ್ರಾಕ್ಷಿಯ ಮೂಲ ಪುರುಷರು ಇವರೇ ಅನ್ನೋಣ! ಸಂಜೆ ಸೂರ್ಯನ ಬೆಳಕಲ್ಲಿ ಆ ಕಾರೆ ಗೊಂಚಲು ನೋಡಬೇಕು. ಗೊಂಚಲು ಮೆಲ್ಲಗೆ ಗಿಡದಿಂದ ಬಿಡಿಸಿಕೊಳ್ಳಬೇಕು. ಆಮೇಲೆ ಪ್ರಶಸ್ತವಾಗಿ ಕರಿಬೇವಿನ ಮರದ ನೆರಳಲ್ಲಿ ಕುಕ್ಕಟಾಸನದಲ್ಲಿ ಕೂತು, ಒಂದೊಂದೇ ಹಣ್ಣು ಬಿಡಿಸಿ ನಾಲಗೆ ತುದಿಯಲ್ಲಿ ಇರಿಸಿಕೊಂಡು ಅದು ರಸ ಒಸರುವುದನ್ನು ಕಾಯುತ್ತಾ ತೆಪ್ಪಗೆ ಒಂದು ಕ್ಷಣ ಕೂಡ್ರಬೇಕು. ಈಗ ಕಾರೆಹಣ್ಣಿನ ರುಚಿ ನಿಮ್ಮ ನಾಲಗೆ ಅಗಲಕ್ಕೂ ಹರಡಿಕೊಳ್ಳುತ್ತದೆ. ಆ ಸವಿ ಕೊಂಚ ತೆಳ್ಳಗಾಯಿತು ಎನ್ನಿಸಿದಾಗ ಇನ್ನೊಂದು ಕಾರೆ ಹಣ್ಣನ್ನು ಮತ್ತೆ ಮೊದಲಿನಂತೇ ನಾಲಗೆ ತುದಿಯಲ್ಲಿ ಇರಿಸಿಕೊಂಡು ರಸ ಒಸರುವುದನ್ನು ಕಾಯುತ್ತಾ ಕೂಡ್ರಬೇಕು. ಕಪ್ಪು ಕಾಕಿಯೊಂದಿಗೆ ಕೆಂಪು ಕಾಕಿಯ ಗಿಡಗಳೂ ನಿಮಗೆ ಅಲ್ಲಲ್ಲಿ ಕಾಣುತ್ತವೆ. ಕಪ್ಪಿನ ರುಚಿ ಸವಿದ ಯಾವ ರಸಿಕ ತಾನೇ ಈ ಕೆಂಪು ಕಾಕಿಗೆ ಮನಸೋತಾನು. ನೀವು ಏನೇ ಅನ್ನಿ. ಕಪ್ಪು ಕಾಕಿಯ ರುಚಿಯೇ ರುಚಿ. ಅದರ ಮುಂದೆ ನೀವು ಇದೀಗಷ್ಟೇ ಗಾಂಧೀಬಜಾರಿನಿಂದ ತಂದ ದುಬಾರಿ ಬೆಲೆಯ ಪೈನಾಪಲ್ ಹಣ್ಣನ್ನೂ ನಿವಾಳಿಸಿ ಒಗೆಯಬಹುದು.

ನನಗೆ ಗೊತ್ತು. ನೇರಿಲೆ ಎಂದರೆ ನಿಮಗೆ ನೆನಪಾಗುವುದು ಕೋಳಿಮೊಟ್ಟೆಯಾಕಾರದ ಜಂಬುನೇರಿಲೆ ಹಣ್ಣು ಮಾತ್ರ. ನನಗೆ ನೇರಿಲೆ ಎಂದರೆ ನಮ್ಮೂರ ಕೆರೆ ನೆನಪಾಗುತ್ತೆ. ಏರಿಯ ಪಕ್ಕದ ಅಡಕೇ ತೋಟ ನೆನಪಾಗುತ್ತದೆ. ಅಲ್ಲಿ ಕಪಿಲೆ ಬಾವಿ ನೆನಪಾಗುತ್ತದೆ. ಆ ಕಪಿಲೆ ಬಾವಿಯ ಮೇಲೆ ಬಾಗಿ ನೀರಲ್ಲಿ ತಣ್ಣನೆ ನೆರಳು ಚಲ್ಲಿರುವ ನೇರಿಲೆ ಮರ ನೆನಪಾಗುತ್ತದೆ. ಹಾಳಾದ ಮರ ಬಾವಿಯ ಮೇಲೆ ಬಾಗಿರುವ ಕಾರಣ, ಮರದ ತುಂಬ ಹಣ್ಣು ಗಿಡಿದಿದ್ದರೂ ಅದನ್ನು ಕೀಳುವ ಸಾಹಸ ಯಾವ ಪುಕ್ಕಲು ಹುಡುಗರೂ ಮಾಡಲಾರರು. ಆದರೆ ನಮ್ಮ ಕೆ.ಟಿ.ಯಂಟಣ್ಣ ಎಂಟೆದೆಯ ಭಂಟ. ಅವನಿಗೆ ಯಾವ ಮರವೂ ದುರ್ಭೇದ್ಯವಲ್ಲ. ತೆಂಗಿನ ಮರವನ್ನೇ ಬರಿಗಾಲಲ್ಲಿ ಪುಟು ಪುಟು ಹತ್ತಿ ಎಳೆನೀರು ಕೆಡಹುವ ಸಾಮರ್ಥ್ಯ ಅವನದ್ದು. ಆ ಎಳೆನೀರನ್ನು ನೀರ ಕಾಲುವೆಯಲ್ಲಿ ಅಡಗಿಸಿ ಮಾರನೇ ದಿನ ಮಧ್ಯಾಹ್ನ ಬಂದು ಆ ಎಳೆನೀರಿನ ಸವಿ ನೋಡಬೇಕು. ಅಂಥ ತಂಪು ಬೇಕು ಅಂದರೆ ಇಂಥ ಬಿಸಿಲು ಅನುಭವಿಸಬೇಕು ಮತ್ತೆ! ಇದು ಯಂಟಣ್ಣನ ಜೀವನಸಿದ್ಧಾಂತ. ಅವನು ನಿರಾಯಾಸವಾಗಿ ಬಾವಿಮೇಗಣ ನೇರಿಲೆ ಮರ ಹತ್ತಿ ನಮ್ಮ ಕಡೆ ಹಣ್ಣು ಕಿತ್ತು ಕಿತ್ತು ತೂರುತಾ ಇದ್ದನು. ಅದನ್ನು ಕ್ಯಾಚು ಹಿಡಿಯುವ ಭರದಲ್ಲಿ ಅದು ಕೈ ತಪ್ಪಿತು ಎಂದರೆ ನಮ್ಮ ಬಟ್ಟೆ ಬರಿಯೆಲ್ಲಾ ಕೆನ್ನೀಲಿ ಮಯವಾಗುತಾ ಇದ್ದವು. ಹಣ್ಣು ತಿಂದ ಮೇಲೆ ಕೆನ್ನೀಲಿ ಬಣ್ಣ ಪರಮಿನೆಂಟಾಗಿ ನಾಲಗೆ ಮೇಲೆ ಉಳಿಯುತಾ ಇತ್ತು. ರಾತ್ರಿ ಮನೆಗೆ ಬಂದಾಗ, ಅದು ಹೇಗೋ ವಾಸನೆ ಹಿಡಿದು “ಎಲ್ಲೋ ಬಾಯಿ ತೆಗೆಯೋ” ಎನ್ನುತ್ತಿದ್ದಳು ನನ್ನ ಅಜ್ಜಿ. ನಾನು ಬಾಯಿ ಬಿಟ್ಟರೆ ಅಯ್ಯವ್ವಾ ಎಂದು ಅವಳು ಆಶ್ಚರ್ಯ ಸ್ತಂಭಿತಳಾಗುತ್ತಿದ್ದಳು. ಕಾರಣ ಗೋಕುಲದಲ್ಲಿ ಕೃಷ್ಣ ಬಾಯಿ ತೆರೆದಾಗ ಅವನ ಬಾಯಿತುಂಬ ಬರೀ ಭೂಮಂಡಲ ಮಾತ್ರ ಕಾಣಿಸಿತಂತೆ. ನಾನು ಬಾಯಿ ತೆರೆದಾಗ ಇಡೀ ಆಕಾಶ ಮಂಡಲವೇ ನನ್ನ ಅಜ್ಜಿಗೆ ಕಂಡು, ರಪ ರಪ ಎಂದು ಅವಳು ನನ್ನ ಬೆನ್ನ ಮೇಲೆ ಹಂಚೀಕಡ್ಡಿಪೊರಕೆಯಿಂದ(ಅದು ಮಡಿಗೆ ಬರುವ ಕಾರಣ) ರಾಚ ತೊಡಗುತ್ತಿದ್ದಳು. ಈ ರೌದ್ರಾವತಾರ ಅವಳ ಮಹೋನ್ನತವಾದ ಪ್ರೀತಿಯ ಅಭಿವ್ಯಕ್ತಿಯಾಗಿತ್ತು! ಇರೋ ಒಬ್ಬ ಮೊಮ್ಮಗ ನೇರಿಲೆ ತಿನ್ನಲು ಹೋಗಿ ನೀರುಪಾಲಾದರೆ ಎಂಬುದು ಅವಳ ಚಿಂತೆ. ಈ ಪ್ರೀತಿ ಎಂಬುದು , ಕೆಂಗಣ್ಣು ಕೋರೆಹಲ್ಲಿನ ಸಮೇತ ಪ್ರತ್ಯಕ್ಷವಾಗಬಾರದು ಎಂದು ಯಾವ ಶಾಸ್ತ್ರದ ಬುಕ್ಕಲ್ಲಿ ಬರೆಯಲಾಗಿದೆ ನೀವೇ ಹೇಳಿ ಮತ್ತೆ!?

ಮೊನ್ನೆ(ಜನವರಿ ೨೬, ೨೦೧೦) ಊರಿಗೆ ಹೋದಾಗ ಟಿ.ಕೆಂಚಪ್ಪ ಸಿಕ್ಕಿದ್ದ. ಅವನ ಪುರುಚಲು ತಲೆಯೆಲ್ಲಾ ಬೂರುಗಲ ಮರ ಹೂ ಬಿಟ್ಟಂತೆ ಬೆಳ್ಳಗಾಗಿದೆ. ಗುರಿಕಾರ ಕಾಳಾಚಾರಿಗೆ ಏದುಸಿರು ಮತ್ತು ಬೊಕ್ಕ ತಲೆ. ಕಣ್ಣೂ ಸರಿಯಾಗಿ ಕಾಣಿಸುತ್ತಾ ಇಲ್ಲ. ಕೆ.ಟಿ.ಯಂಟಣ್ಣ ಪರಸ್ಥಳ ಸೇರಿಯಾಗಿದೆ. ಸ್ಕೂಲಿನ ಪಕ್ಕ ಮಾವಿನ ಮರ ಕಡಿದು ಸ್ಕೂಲಿನವರು ವನಮಹೋತ್ಸವದ ಅಂಗವಾಗಿ ನೀಲಗಿರಿ ತೋಪು ಬೆಳೆಸಿದ್ದಾರೆ. ಪಾಪ, ನಮ್ಮ ಎಮ್ಮೆ ಭದ್ರಕ್ಕ ತೀರಿಕೊಂಡು ತಿಂಗಳಾಯಿತಂತೆ. “ಯಂಟೇಶಣ್ಣಾ, ನಿನ್ನ ಕೂದಲೆಲ್ಲಾ ಏನಾದವಪ್ಪಾ?” ಅಂತ ಅಲ್ಲಾಡಿರುದ್ರಣ್ಣ ಒಳಗೆಳಕೊಂಡ ಬಾಯಿ ಇಷ್ಟಗಲ ಬಿಚ್ಚಿ ಪಕ ಪಕ ಪಕ ನಗುತ್ತಾ ಇದ್ದಾನೆ.

‍ಲೇಖಕರು avadhi

9 April, 2010

5 Comments

  1. Nalini Maiya

    nenapu haleyadaadarenu? bhaava navanaveena!!!

  2. Nalini Maiya

    nenapu haleyadaadarenu? bhaava nava naveena!!!

  3. Ganesh Shenoy

    So engrossing! Carry on HSV sir!

  4. HSV Murthy

    geLeyara pratikriyegaLu bareyuva utsaahavannu immaDigoLisuttive. spaMdanege hRutpUrvaka vaMdane-HSV

  5. armanikanth

    akkareya sir,
    tumbaa chennaagide…
    munduvaresi…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading