ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಹೆಸ್ವಿ ಅನಾತ್ಮ ಕಥನ: ಆ ಹುಡುಗಿ

ಅಳಿಯಲಾರದ ನೆನಹು-೯

ಎಚ್.ಎಸ್.ವೆಂಕಟೇಶ ಮೂರ್ತಿ

ನನ್ನ ಮೂವತ್ತು ವರ್ಷಗಳ ಅಧ್ಯಾಪನವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅರಳುಗಣ್ಣಲ್ಲಿ ಕುಳಿತು ನನ್ನ ಪಾಠಪ್ರವಚನ ಕೇಳಿದ್ದು ನೆನೆಸಿಕೊಂಡಾಗ ಎಳಸು ಮುಖಗಳ ಒಂದು ಪೆರೇಡೇ ಕಣ್ಣಮುಂದೆ ಹಾದುಹೋಗುತ್ತದೆ. ಅಂಥ ಮುಖಗಳಲ್ಲಿ ಒಂದು ಮುಖವನ್ನ ಮಾತ್ರ ನನಗೆ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಕಾರಣ ಅದು ನನ್ನನ್ನು ತುಂಬ ಪೇಚು ಮತ್ತು ಇಕ್ಕಟ್ಟಲ್ಲಿ ಸಿಕ್ಕಿಸಿದ ಮುಖ. ೧೯೭೭-೭೮ ಇರಬೇಕು. ಆ ದಿನಗಳಲ್ಲಿ ನಾನು ಸೂಟ್ ಹಾಕಿಕೊಂಡು ಕಾಲೇಜಿಗೆ ಹೋಗುತಾ ಇದ್ದೆ. ಸೇಂಟ್ ಜೋಸೆಪ್ಫಲ್ಲಿ ಸೂಟ್ ಇಲ್ಲದೆ ನಡೆಯೋದಿಲ್ಲ ಎಂದು ನಮ್ಮ ಸೀನಿಯರ್ಸ್ ಹೇಳಿದ ಹಿತವಚನದ ಪರಿಣಾಮ! ನಮ್ಮ ಎಲ್ಲ ಸೀನಿಯರ್ಸೂ ಆಗ ಸೂಟಲ್ಲೇ ಬರುತಾ ಇದ್ದರು. ನಾನು ಹೇಳೀ ಕೇಳಿ ಹಳ್ಳಿಯಿಂದ ಬಂದವ.

ಸೂಟ್ ಎಂಬೋದನ್ನು ನಾವು ಜೀವಮಾನದಲ್ಲಿ ಒಮ್ಮೆ ಮಾತ್ರ ಹೊಲಿಸೋದು. ಅದೂ ನಾವು ಹೊಲಿಸೋದು ಅಲ್ಲ. ಹೆಣ್ಣುಕೊಟ್ಟ ಮಾವ ಹೊಲಿಸೋದು. ನಮ್ಮ ಮಾವ ಮದುವೆಯಲ್ಲಿ ನನಗೂ ಒಂದು ಸೂಟ್ ಕೊಟ್ಟಿದ್ದರು. ಚಿತ್ರದುರ್ಗದಲ್ಲಿ ಹೊಲಿಸಿದ್ದು ಅದು. ಬೆಂಗಳೂರಿನ ಫ್ಯಾಷನ್ನಿಗೆ ಇನ್ನೂರು ಕಿಲೋಮೀಟರ್ ಹಿಂದೆ ಇದ್ದದ್ದು. ಅದನ್ನು ನಾನು ಹಾಕಿದ್ದು ಮದುವೆ ಸಂಜೆ ಮಾತ್ರ. ಆಮೇಲೆ ಅದು ಕೈಕಾಲು ಮಡಿಸಿಕೊಂಡು ಆರಾಮಾಗಿ ಟ್ರಂಕಲ್ಲಿ ನಿದ್ದೆಹೊಡೆಯುತ್ತಾ ಬಿದ್ದಿತ್ತು. ಬಹಳ ಕಾಲ ಹೀಗೆ ಸೆರೆವಾಸದಲ್ಲಿದ್ದ ಸದರೀ ಸೂಟ್ ನಾನು ಬೆಂಗಳೂರಿಗೆ ಬಂದಮೇಲೆ ಮತ್ತೆ ಬಿಸಿಲ ಮುಖ ನೋಡಿತು! ಅಲ್ಲಲ್ಲಿ ಬೂಸ್ಟು ಹಿಡಿದಿದ್ದ ಸೂಟನ್ನು ಡ್ರೈವಾಷಿಗೆ ಕೊಟ್ಟು ಅದನ್ನು ಧರಿಸಿ ಕಾಲೇಜಿಗೆ ಹೊರಟಾಗ ನನ್ನ ಹೆಂಡತಿ ಕಿಸಕ್ಕಂತ ನಕ್ಕಿದ್ದು ಯಾಕೆ ಅನ್ನೋದು ಇವತ್ತಿನವರೆಗೂ ನನಗೆ ಗೊತ್ತಾಗಿಲ್ಲ.

ಮೈಮೇಲೆ ಭರ್ಜರಿ ಸೂಟು. ನೆಕ್ಟೈ ಎಂಬ ಕೊರಳ ಲಂಗೋಟಿ ಮುಂದೆ ಇಳಿಬಿಟ್ಟುಕೊಂಡು ನನ್ನ ಮೊಪೆಡ್ ಏರಿ ಕಾಲೇಜ್ ಕ್ಯಾಂಪಸ್ಸಿಗೆ ಬಂದಾಗ ಸ್ಟಾಫ್ರೂಮಲ್ಲಿ ಎಲ್ಲ ಹುಳ್ಳಗೆ ನಗುವವರೇ! ಯಾಕ್ಸಾರ್ ಚೆನ್ನಾಗಿಲ್ವಾ ಅಂದೆ ಜೀಕೇಜಿಗೆ. ಚೆನ್ನಾಗಿಲ್ಲ ಅನ್ನೋಕಾಗತ್ತಾ? ನಿಮ್ಮ ಮುಖಕ್ಕೆ ಸೂಟ್ ಚೆನ್ನಾಗೇ ಒಪ್ಪತ್ತೆ ಅಂದರು ಜೀಕೇಜಿ. ಅದುಬಿಟ್ಟರೆ ಬೇರೆ ಸೂಟ್ ನನ್ನ ಬಳಿ ಇರಲಿಲ್ಲ. ಹೊಲಿಸುವ ಆರ್ಥಿಕ ಅನುಕೂಲವೂ ಇರಲಿಲ್ಲ. ಹೀಗಾಗಿ ವಾರದ ಏಳು ದಿನವೂ ಒಂದೇ ಸೂಟ್ ನನ್ನದು! ಒಕ ಮಾಟ ಒಕ ಬಾಣ ಎಂದು ತ್ಯಾಗರಾಜರು ರಾಮನನ್ನು ವರ್ಣಿಸುತ್ತಾರೆ.  ಒಕ ಸ್ಕೂಟಿ; ಒಕ ಸೂಟು ಎಂದು ಯಾರಾದರೂ ಪುಣ್ಯಾತ್ಮರು ನನ್ನನ್ನು ವರ್ಣಿಸಬಹುದಾಗಿತ್ತು.

ಹುಡುಗರು ನನ್ನನ್ನು ತುಂಬ ಹಚ್ಚಿಕೊಂಡದ್ದಕ್ಕೆ ಕಾರಣ ನನ್ನ ಸೂಟಂತೂ ಖಂಡಿತ ಕಾರಣವಲ್ಲ. ಹುಡುಗರೊಂದಿಗೆ ನಗುನಗುತ್ತಾ ಮಾತಾಡುವುದು ನಮ್ಮಲ್ಲಿ ಒಂದು ಗುನ್ಹೆ ಆಗಿದ್ದ ದಿನಗಳು ಅವು. ಪ್ರೊಫೆಸ್ಸರೆಂದರೆ ಘನಗಂಭೀರಕಠೋರಾತ್ಮರಾಗಿರಬೇಕೆಂಬುದು ಒಂದು ಬಗೆಯ ಅಲಿಖಿತ ವಿಧಿಯಾಗಿದ್ದ ಕಾಲದಲ್ಲಿ ನಾನು ಮತ್ತು ನನಗಿಂತ ಸ್ವಲ್ಪ ವಯಸ್ಸಲ್ಲಿ ಹಿರಿಯರಾಗಿದ್ದ ಜಿಕೆಜಿ ಹುಡುಗರೊಂದಿಗೆ ಸಲೀಸಾಗಿ ಬೆರೆಯುವ ಮೇಷ್ಟ್ರಾಗಿದ್ದೆವು. ನಮ್ಮ ಇನ್ನೊಬ್ಬ ಮಿತ್ರರು ಹಿಂದಿ ಕಲಿಸುವ ಅಮಾನುಲ್ಲಾ ಸಾಹೇಬರು. ಅವರಂತೂ ಹುಡುಗರನ್ನು ಮಕ್ಕಳು ಅಂತಲೇ ಕರೆಯುವ ಪರಿಪಾಠ ಇಟ್ಟುಕೊಂಡಿದ್ದರು. ನಾನು ಮತ್ತು ನನ್ನ ಇನ್ನಿಬ್ಬರು ಗೆಳೆಯರು ಹುಡುಗರಿಗೆ ಹೆಚ್ಚು ಪ್ರಿಯರಾಗಲು ನಾವು ವಿದ್ಯಾರ್ಥಿಗಳಿಗೆ ಕೊಟ್ಟ ಸಲುಗೆಯೂ ಒಂದು ಕಾರಣವಿರಬಹುದು. ಜೊತೆಗೆ ಸಾಹಿತ್ಯ ಕಲಿಸುವ ಮೇಷ್ಟ್ರು ತರಗತಿಯಲ್ಲಿ ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿ ಮಾತಾಡುವ ಅವಕಾಶವಿರುತ್ತದೆ. ಅದನ್ನು ನಾವು ಚೆನ್ನಾಗಿ ಬಳಸಿಕೊಳ್ಳುತ್ತಿದ್ದೆವು. ಸಾಹಿತ್ಯ, ರಾಜಕೀಯ, ಸಿನಿಮಾ, ನಾಟಕ-ಯಾವ ವಿಷಯವೂ ನಮ್ಮ ಪ್ರಸ್ತಾಪದ ಕಕ್ಷೆಯ ಹೊರಗಿರಲಿಲ್ಲ. ಇದು ವಿದ್ಯಾರ್ಥಿಗಳನ್ನು ನಮ್ಮ ತರಗತಿಗಳಿಗೆ ವಿಶೇಷವಾಗಿ ಸೆಳೆಯುತ್ತಾ ಇತ್ತು.

ಬರವಣಿಗೆಯ ಪ್ರಾರಂಭದಲ್ಲಿ ನನ್ನನ್ನು ಪೇಚಿಗೆ ಸಿಕ್ಕಿಸಿದ ಒಂದು ಮುಖದ ಬಗ್ಗೆ ಪ್ರಸ್ತಾಪಿಸಿದ್ದೆ. ಆ ಎಳೆ ಹಿಡಿದು ಮತ್ತೆ ಈಗ ಮುಂದುವರೆಯುತ್ತೇನೆ.ಪ್ರಿಯ(ಹೆಸರು ಬದಲಾಗಿದೆ) ಇನ್ನೂ ಹದಿನೆಂಟರ ಪುಟ್ಟ ತರುಣಿ. ನೋಡಲಿಕ್ಕೆ ಚೆಲುವಾಗಿದ್ದಳು. ಚೂಟಿಯಿಂದ ಪುಟುಪುಟು ಓಡಾಡುತ್ತಾ (ಅವಳ ಸುತ್ತ ಯಾವಾಗಲೂ ಒಂದು ಪಟಾಲಮ್ಮೇ ಇರುತ್ತಾ ಇತ್ತು) ನಮ್ಮೆಲ್ಲರಿಗೂ ಪ್ರಿಯಳಾಗಿದ್ದಳು. ಮೊದಲ ವರ್ಷ ಇಷ್ಟು ಚೂಟಿಯಾಗಿ ಪಾದರಸಂದಂತೆ ಇದ್ದ ಹುಡುಗಿ, ಓದು, ಯೂನಿಯನ್ ಚಟುವಟಿಕೆ ಎಲ್ಲದರಲ್ಲೂ ಮುಂದಾಗಿದ್ದವಳು ಎರಡನೇ ವರ್ಷ ಯಾಕೋ ಇದ್ದಕ್ಕಿದ್ದಂತೆ ಡಲ್ಲಾಗಿಹೋದಳು. ಯಾರ ಜೊತೆಯಲ್ಲೂ ಬೆರೆಯೋಣಿಲ್ಲ. ತರಗತಿಯಲ್ಲಿ ಮಂಕಾಗಿ ಕುಳಿತುಕೊಳ್ಳೋದು. ಒಬ್ಬಳೇ ಬಂದು ಒಬ್ಬಳೇ ತರಗತಿಯಿಂದ ನಿರ್ಗಮಿಸುವುದು ಇತ್ಯಾದಿ ಶುರುವಾಯಿತು. ಒಮ್ಮೆ ಯಾಕಮ್ಮಾ ಹೀಗಿದ್ದೀ ಅಂದಾಗ , ಆರೋಗ್ಯ ಚೆನ್ನಾಗಿಲ್ಲ ಸರ್ ಎಂದು ಚುಟುಕಾಗಿ ಉತ್ತರಿಸಿ ತಲೆತಗ್ಗಿಸಿ ಹೊರಟುಹೋಗಿದ್ದಳು. ಹೆಣ್ಣುಮಕ್ಕಳ ವಿಷಯ. ಮನೆಯಲ್ಲಿ ಯಾವ ಸಮಸ್ಯೆಯೋ ಎಂದುಕೊಂಡು ನಾನೂ ಸುಮ್ಮನಾಗಿ ಬಿಟ್ಟೆ. ಕಾಲೇಜಿಗೆ ಸೇರಿದ್ದ ಹೊಸದಲ್ಲವಾ? ಇಲ್ಲದ ಉಪದ್ವ್ಯಾಪ ಹಚ್ಚಿಕೊಳ್ಳುವ ಧೈರ್ಯವೂ ನನಗಿರಲಿಲ್ಲ. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಪ್ರಿನ್ಸಿಪಾಲರ ಬುಲಾವು. ನಾನು ಸ್ವಲ್ಪ ಆತಂಕದಿಂದಲೇ ಪ್ರಿನ್ಸಿಪಾಲರ ಚೇಂಬರ್ಸಿಗೆ ಹೋದೆ. ನಮ್ಮ ಪ್ರಾಚಾರ್ಯರು ಆರು ಅಡಿಯ ಆಜಾನುಬಾಹು. ಹೋತದ ಗಡ್ಡದ ತೇಜಸ್ವೀ ವೃದ್ಧರು. ಕ್ರೈಸ್ತ ಸನ್ಯಾಸಿಗಳಿಗೆ ಅಲಂಕಾರಪ್ರಾಯವಾದ ಮುಗುಳ್ನಗೆ ಯಾವಾಗಲೂ ಅವರ ತುಟಿಯಮೇಲೆ ಇರುತ್ತಾ ಇತ್ತು. ಅವರನ್ನು ನೋಡಿದಾಗೆಲ್ಲಾ ನನಗೆ ನಮ್ಮ ಪುರಾಣಕಾಲದ ಋಷಿಮುನಿಗಳು ನೆನಪಾಗುತ್ತಿದ್ದರು. ಅವರ ಬಗ್ಗೆ ಹೇಳಲೇ ಬೇಕಾದ ಮಾತು- ವಿದ್ಯಾರ್ಥಿಗಳೊಂದಿಗೆ, ಪ್ರಾಧ್ಯಾಪಕರೊಂದಿಗೆ ಹೇಗೆ ನಗುನಗುತ್ತಾ ಮಾತಾಡುತ್ತಿದ್ದರೋ ಹಾಗೇ ಅವರು ತಾವು ಸಾಕಿದ ಕುರಿ, ನಾಯಿ, ಬೆಳಸಿದ ಎಳೆಮಾವಿನ ಗಿಡದ ಜತೆಯಲ್ಲೂ ಮಾತಾಡುತ್ತಿದ್ದರು. ಅದೂ ಇಂಗ್ಲಿಷ್ ಭಾಷೆಯಲ್ಲಿ! ನಮ್ಮ ಗೊರೂರರು ತಮ್ಮ ಎಮ್ಮೆಗೆ ಮಾತು ಬರುವ ಬಗ್ಗೆ ಒಂದು ಪ್ರಬಂಧ ಬರೆದಿದ್ದಾರಲ್ಲಾ! ನಮ್ಮ ಪ್ರಿನ್ಸಿಪಾಲರೂ ಪಶು, ಪಕ್ಷಿ, ಗಿಡಮರಗಳಿಗೂ ಭಾಷೆ ತಿಳಿಯುತ್ತದೆ ಎಂದು ನಂಬಿದ್ದರು. ಅದಕ್ಕೆ ಸಾಕ್ಷಿಯಾಗಿ ಅವರು ಹೇಳುತ್ತಿದ್ದ ಒಂದು ಪ್ರಸಂಗ ನಮ್ಮಲ್ಲಿ ಜನಜನಿತವಾಗಿತ್ತು. ಸ್ಟಾಫ್ ರೂಮಿನ ಹಿಂದಿದ್ದ ಹಿತ್ತಲಲ್ಲಿ ಅವರು ಒಂದು ಮಾವಿನ ಗಿಡವನ್ನು ಮಂಗಳೂರಿಂದ ತಂದು ಬೆಳೆಸಿದ್ದರು. ಅದರ ಬೆನ್ನು ತಟ್ಟಿ ದಿನವೂ ಸ್ವಲ್ಪ ಹೊತ್ತು ಮಾವಿನ ಗಿಡದೊಂದಿಗೆ ಮಾತಾಡುತ್ತಿದ್ದರು. ಗಿಡ ಈಗ ದೊಡ್ಡ ಮರವಾಗಿದ್ದರೂ ಒಮ್ಮೆಯೂ ಹೂಬಿಟ್ಟಿರಲಿಲ್ಲ. ಒಂದು ದಿನ ಪ್ರಿನ್ಸಿಪಾಲರು ಗಿಡದ ಬಳಿನಿಂತು ನಮ್ಮ ಅಟೆಂಡರ್ ಸಿದ್ದಯ್ಯನೊಂದಿಗೆ ಮಾತಾಡುತ್ತಿದ್ದಾರೆ. “ಸಿದ್ದಯ್ಯಾ..ಈ ಗಿಡ ಯಾಕೋ ಹೂ ಬಿಡಲೇ ಇಲ್ಲ. ಈ ಮಾರ್ಚ್ ವರೆಗೆ ನೋಡೋಣ…ಹೂ ಬಿಡಲಿಲ್ಲಾ…ತೆಗೆದು ಹಾಕಿಬಿಡು…ಬೇರೆ ಗಿಡ ಹಾಕಿದರಾಯಿತು…”. ಆಶ್ಚರ್ಯ ಎಂದರೆ ಆ ಮಾರ್ಚ್ ತಿಂಗಳಲ್ಲಿ ಗಿಡದಲ್ಲಿ ಭರ್ದಂಡು ಹೂವು! ಪ್ರಿನ್ಸಿಪಾಲರು ನಮ್ಮನ್ನು ಕೂಗಿ ಉತ್ಸಾಹದಿಂದ ಹೇಳಿದರು: ನೋಡಿ… ಹೇಗೆ ಹೂ ಗಿಡಿದಿದೆ ನೋಡಿ ನಮ್ಮ ಮಾವು! ಹೂ ಬಿಡದಿದ್ದರೆ ಕಡಿಸಿ ಹಾಕುತ್ತಾರೆ ಎಂದು ಅದಕ್ಕೆ ಗೊತ್ತಾದದ್ದೇ ಜೀವ ಭಯದಿಂದ ಪಾಪ ಈ ವರ್ಷ ಮೈತುಂಬ ಹೂಬಿಟ್ಟಿದೆ…ಗಿಡಕ್ಕೆ ಮಾತು ಬರೋಲ್ಲ ಅನ್ನುತ್ತೀರಲ್ಲಾ ನೀವು…ಈಗಾದರೂ ಒಪ್ಪುತ್ತೀರಿ ತಾನೇ?”.

ನಾನು ಪ್ರಿನ್ಸಿಪಾಲರ ಕೋಣೆಗೆ ಹೋದಾಗ ಏನೂ ಬರೆಯುತ್ತಾ ಕೂತಿದ್ದ ಅವರು , ಹೆಜ್ಜೆಸಪ್ಪುಳ ಕೇಳಿದ್ದೇ ತಲೆಯೆತ್ತಿ ನನ್ನ ನೋಡಿದರು. ನಾನು ಯಥಾಪ್ರಕಾರ ಗುಡ್ ಮಾರ್ನಿಂಗ್ ಹೇಳಿದೆ. ಪ್ರಿನ್ಸಿಪಾಲರ ಮುಖ ಯಾವತ್ತಿನ ಹಾಗಿರಲಿಲ್ಲ. ನನ್ನ ಜಂಗಾಬಲವೇ ಉಡುಗಿ ಹೋಯಿತು!ಹಾಗೆ ಮುಖ ಸಿಂಡರಿಸಿಕೊಂಡು ಯಾವತ್ತೂ ಅವರು ಕೂತಿದ್ದವರೇ ಅಲ್ಲ. ಈಗ ಸಹಜವಾಗಿಯೇ ನನ್ನ ತುಟಿಗಳು ಒಣಗ ಹತ್ತಿದವು. ಪ್ರಿನ್ಸಿಪಾಲರು ಗಂಭೀರ ದನಿಯಲ್ಲಿ ಸಣ್ಣಗೆ ಹೇಳಿದರು: ಕುಳಿತುಕೊಳ್ಳಿ…ಈಗ ಗೋಡೆ ಗಡಿಯಾರದ ಸದ್ದು ಮಾತ್ರ ಪ್ರಾಚಾರ್ಯರ ಕೋಣೆಯಲ್ಲಿ. ಉಳಿದ ಜಗತ್ತಿನ ಸದ್ದುಸುಳಿವಿಲ್ಲ.

ಕುಳಿತಿದ್ದ ನನ್ನ ಮುಖವನ್ನೇ ನೋಡುತ್ತಾ ಪ್ರಿನ್ಸಿಪಾಲ್ ಹೇಳಿದರು: “ನಿಮ್ಮ ವಿರುದ್ಧ ಒಬ್ಬಳು ಹುಡುಗಿ ಒಂದು ಕಂಪ್ಲೇಂಟ್ ಕೊಟ್ಟಿದ್ದಾಳೆ….ರಿಟನ್ ಕಂಪ್ಲೇಂಟ್….ಐ ಆಮ್ ಎಕ್ಸ್ಟ್ರೇಮ್ಲಿ ಸಾರಿ ಮಿಸ್ಟರ್ ಮೂರ್ತಿ!”. ಚರ್ಚಿನ ಗಂಟೆ ಹೊಡೆದ ಹಾಗೆ ತಡೆ ತಡೆದು ಮಾತಾಡಿದರು ಫಾದರ್. ತಮ್ಮ ಡ್ರಾ ಎಳೆದು ಒಂದು ಎನ್ವಲಪ್ ಬಿಡಿಸಿ ನನ್ನ ವಿರುದ್ಧ ಯಾರೋ ವಿದ್ಯಾರ್ಥಿನಿ ಬರೆದಿದ್ದ ಕಂಪ್ಲೇಂಟ್ ನನ್ನ ಕೈಗೆ ಕೊಟ್ಟರು. ಡವಡವಿಸುವ ಎದೆಯಲ್ಲಿ ನಾನು ಆ ಬರೆಹ ಓದಿದೆ. ಪ್ರಿಯಾ ಬರೆದಿದ್ದ ಪತ್ರ ಅದು. ಪತ್ರದ ಸಾರಾಂಶ ಇಷ್ಟು… ಕಳೆದ ಆರುತಿಂಗಳಿಂದ ಎಚ್ಚೆಸ್ವಿ ಸರ್ ನನ್ನನ್ನು ನೋಡದೆ ಕ್ಲಾಸಲ್ಲಿ ಪಾಠ ಮಾಡುತ್ತಿದ್ದಾರೆ! ಬೇರೆ ಎಲ್ಲರನ್ನೂ ನೋಡುತ್ತಾರೆ. ನನ್ನನ್ನು ಮ್ಕಾತ್ರ ನೋಡುತ್ತಿಲ್ಲ…! ನಾನು ಮಾಡಿರುವ ಅಪರಾಧವಾದರೂ ಏನು? ನನಗೆ ಜೀವನದಲ್ಲೇ ಜಿಗುಪ್ಸೆ ಉಂಟಾಗಿದೆ…ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ.. ಈ ಬಗ್ಗೆ ತಾವು ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ನಾನು ಕಾಲೇಜು ಬಿಟ್ಟರೂ ಬಿಡಬಹುದು!

ಈ ಕಂಪ್ಲೇಂಟ್ ಓದಿ ಅಳಬೇಕೋ ನಗಬೇಕೋ ನನಗೆ ತಿಳಿಯಲಿಲ್ಲ! ನಾನು ಪೆಚ್ಚಾಗಿ ಕುಳಿತುಕೊಂಡೆ.

“ಅಲ್ಲ ಮಿಸ್ಟರ್ ಮೂರ್ತಿ…ಮೂವತ್ತು ಜನ ವಿದ್ಯಾರ್ಥಿಗಳನ್ನು ನೋಡಿಕೊಂಡು ಮಾತಾಡುವ ನಿಮ್ಕಗೆ ಈ ಒಂದು ಹುಡುಗಿಯನ್ನು ನೋಡಿ ನೋಡಿ ಪಾಠ ಮಾಡೋದು ಕಷ್ಟಾನಾ? ನಾಳೆ ಈ ಹುಡುಗೀನಾ ನಿಮ್ಮ ಮುಂದೇ ಫಸ್ಟ್ ಬೆಂಚಲ್ಲೇ ಕೂಡಿಸಿಕೊಳ್ಳಿ…ಮುಖ ನೋಡದಷ್ಟು ಅವಳು ಕುರೂಪಿ ಅಲ್ಲ…ಅಲ್ಲವಾ…?”.

ನಾನು ಪೆಚ್ಚು ಪೆಚ್ಚಾಗಿ ನಕ್ಕು, ಏನು ಹೇಳಬೇಕೋ ತಿಳಿಯದೆ-ಸಾರೀ ಫಾದರ್ ಎಂದು ವಟಗುತ್ತಿದೆ. ಪ್ರಿನ್ಸಿಪಾಲರು ತಮ್ಮ ಎಡ ವಸಡಿನ ಬಂಗಾರದ ಹಲ್ಲು ಹೊಳೆಯುವಂತೆ ಒಮ್ಮೆಗೇ ಫಕ್ಕನೆ ನಕ್ಕರು:

“ಐ ಫೀಲ್ ಸಾರೀ ಫಾರ್ ಯೂ…!”

‍ಲೇಖಕರು avadhi

13 May, 2010

4 Comments

  1. Prashanth Ignatius

    ಪ್ರೀತಿಯ ಎಚ್.ಎಸ್.ವಿ ಅವರಿಗೆ ಪ್ರೀತಿಪೂರ್ವಕ ನಮಸ್ಕಾರಗಳು,
    ನಿಮ್ಮ ಈ ಬರಹ ಓದುತ್ತಿದ್ದಂತೆ ನನ್ನ ಸೆಂಟ್ ಜೋಸೆಫ್ಸ್ ಕಾಲೇಜಿನ ವಿಧ್ಯಾರ್ಥಿ ಜೀವನದ ಸುವರ್ಣ ದಿನಗಳು ನೆನಪಾಯಿತು.ಬೇರೆ ವಿಷಯಗಳಿಗಿಂತ language subjects ನಲ್ಲೇ ಆಸಕ್ತಿ ಹೊಂದಿದ್ದ ನಾನು ಆ ಕಾಲೇಜಿಗೆ ಸೇರಿ ಕನ್ನಡದ ತರಗತಿ ಬಂದಾಗ ನಿಮ್ಮನ್ನು ನೋಡಿ ಆದ ಆಶ್ಚರ್ಯ ಹಾಗೂ ಸಂತೋಷ ವರ್ಣಿಸಲಸಾಧ್ಯ. ವಿಧ್ಯಾರ್ಥಿಗಳನ್ನು ಗೆಳೆಯರಂತೆ ಕಾಣುತ್ತಿದ್ದ ನೀವು ಬಯ್ಯುವಾಗ ಹೆಚ್ಚೆಂದರೆ ’ಅವಿವೇಕಿ’ ಎನ್ನುವುದು ಬಿಟ್ಟರೆ ಬೇರೆ ಪದ ಬಳಸಿದ್ದು ನನಗೆ ನೆನಪಿಲ್ಲ. ಕನ್ನಡ ತರಗತಿಯಲ್ಲಿ ನೀವು ಇನ್ನೊಂದು ಕಡೆ ಇಂಗ್ಲೀಷ್ ತರಗತಿಯಲ್ಲಿ ಜಿ.ಕೆ.ಜಿ. ಇದಕ್ಕಿಂತ ಅದೃಷ್ಟ ಇನ್ನೊಂದುಂಟೆ? ಆ ದಿನಗಳಲ್ಲಿನ ನಿಮ್ಮ ಪಾಠ ಮಾಡುವ ಶೈಲಿಯನ್ನು ಮೆಲಕು ಹಾಕುವ ನಾನು, ಇಂದಿಗೂ ಯಾವುದಾದರೂ ಸಭೆಯಲ್ಲಿ ನಿಮ್ಮ ಮಾತು ಇದೆ ಎಂದು ಗೊತ್ತಾದರೆ ಸಾಕು ಹಾಜರ್.
    ಇಂತಿ,
    ನಿಮ್ಮ ಬರಹ,ಮಾತು ಹೀಗೆ ಮುಂದುವರಿಯಲಿ ಎಂದು ಹಾರೈಸುವ ಸಾವಿರಾರು ವಿಧ್ಯಾರ್ಥಿಗಳಲ್ಲಿ ಒಬ್ಬ.
    ನನ್ನ ಈ ಕಮೆಂಟ್ ನಲ್ಲಿನ spelling, ಕಾಗುಣಿತದಲ್ಲೇನಾದರು ತಪ್ಪುಗಳಿದ್ದರೆ ಕ್ಷಮಿಸಿ ಗುರುಗಳೇ. 🙂

  2. rakeshsshetty

    ಅದ್ಸರಿ ಸರ್, ನೀವ್ ಯಾಕೆ ಆ ಹುಡ್ಗಿನ ನೋಡದೆ ಇದ್ದಿದ್ದು? 😉

  3. sudhi

    ನನ್ನ ಕಾಲೇಜ್ ದಿನದ ನೆನಪುಗಳು ಮರುಕಳಿಸಿದವು

  4. HSV Murthy

    ಹೌದು ಪ್ರಶಾಂತ್. ಕೆಲವು ಸಲ ಜೋಷಿನಲ್ಲಿ ಹುಡುಗರನ್ನು ಹನುಮಂತರಾಜ್ ಎಂದು ಬೈಯುತ್ತಿದ್ದೆ. ಹುಡುಗಿಯರು ಚೇಷ್ಟೆ ಮಾಡಿದರೆ ಹನುಮಂತರಾಜನ ಸ್ತ್ರೀಲಿಂಗವನ್ನು ಬಳಸುತ್ತಿದ್ದೆ! ಹನುಮಂತ್ರಾಣಿ!
    ನಿಮ್ಮ ಎಚ್ಚೆಸ್ವಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading