ಜಗಕೆ ಹರುಷ ತರುವ ನವ ವಸಂತ
ಹನುಮಂತ ಪಾಟೀಲ್
ಮಾಗಿಯ ಚಳಿಗೆ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ ಕೊಳ್ಳ ನದಿ ನದಗಳು ಮತ್ತು ಕೆರೆ ಕುಂಟೆಗಳು ಬತ್ತಿ ಬರಡಾಗಿ ಹೋಗಿರುತ್ತವೆ. ಮನುಷ್ಯ ಸೇರಿದಂತೆ ಪ್ರಕೃತಿಯ ಎಲ್ಲ ಜೀವ ಜಾತಿಗಳು ಯಾವಾಗ ಈ ದುರ್ಭರ ಬೇಸಿಗೆ ಕೊನೆಗೊಳ್ಳುತ್ತದೆ, ಮಳೆಯ ವೈಭವ ಮತ್ತೆ ಎಂದು ಮರುಕಳಿಸುತ್ತದೆ ಕಾತರಿಸಿ ಕಾದಿರುತ್ತವೆ. ಮತ್ತೆ ವಸಂತ ಮರಳಿ ಭೂಮಿಗೆ ಕಾಲಿಡುತ್ತಾನೆ. ಬೇಸಿಗೆಯ ಬಿರು ಬಿಸಿಲಿನಲ್ಲೂ ತರು ಲತೆ ಗಿಡ ಮರಗಳು ಬೆಳಗಾಗುವುದರೊಳಗೆ ತಿಳಿ ಹಸಿರು ನಸುಗಂದು ಬಣ್ಣದ ಎಳೆಯ ಪಲ್ಲವಗಳನರಳಿಸಿಕೊಂಡು ನಗು ನಗುತ್ತ ನಿಂತು ಬಿಡುತ್ತವೆ. ಏನಿದು ಪವಾಡ ಒಂದು ರಾತ್ರಿಯಲ್ಲಿ ಹೇಗೆಲ್ಲ ಪ್ರಕೃತಿ ಬದಲಾವಣೆಯಾಗಿ ಬಿಟ್ಟಿದೆ ? ಅದುವೆ ವಸಂತ ಆತ ಪ್ರಕೃತಿಯ ಜೀವನಾಡಿ, ಏನೆಲ್ಲ ಸಂಭ್ರಮ ಆತನ ಆಗಮನದಿಂದ !
ಶುಭ್ರ ನೀಲಾಕಾಶದಲ್ಲಿ ಮೋಡಗಳ ತೇರುಗಳು ಮೇಲು ಮೇಲೆರುತ್ತ ಕ್ಷಣಾರ್ಧದಲಿ ಆಕಾಸವನ್ನಾವರಿಸಿ ಬಿಡುತ್ತವೆ. ಗಗನದ ತುಂಬೆಲ್ಲ ಗರ್ನಾಲು ಸಿಡಿ ಮದ್ದುಗಳ ಆರ್ಭಟ, ಕಣ್ಣು ಕೋರೈಸುವ ಸುಳಿ ಮಿಂಚುಗಳು ಗಗನದ ತುಂಬೆಲ್ಲ ಆವರಿಸಿ ವೈಭವವೋ ವೈಭವ! ! ಗದ್ದಲ ಗೌಜಿಗಳೊಡನೆ ವರುಣನ ಆಗಮನ. ಕಾದು ತಪ್ತವಾದ ಇಳೆಗೆ ಸಮೃದ್ಧ ಮಳೆಯ ಸಿಂಚನ, ಪ್ರಕೃತಿಗೆ ಇಷ್ಟು ಸಾಕು ತನ್ನ ಎಲ್ಲ ವೈಭವಗಳೊಡನೆ ಅವಳು ಅರಳಿ ನಿಲ್ಲುತ್ತಾಳೆ. ಚೈತ್ರ ವೈಶಾಖಗಳ ಈ ಪರ್ವ ಕಾಲದಲ್ಲಿ ಬೃಹತ್ ಗಾತ್ರದ ಮೇಘಗಳ ದಂಡಿನೊಡನೆ ವರುಣನ ಭೂ ಸಂಚಾರ ಪ್ರಾರಂಭವಾಗುತ್ತದೆ. ಹಲವೆಡೆ ಮಳೆಯ ಸಿಂಚನದ ಆಶೆ ಹುಟ್ಟಿಸುವ ವರುಣ ಹುಸಿನಗೆ ನಕ್ಕು ಕಣ್ಣು ಮಿಟುಕಿಸಿ ಮೇಘಗಳ ಜೊತೆಗೂಡಿ ನಗುತ್ತ ಮುಂದೆ ಪಯಣ ಬೆಳೆಸಿ ಸಾಗಿ ಬಿಡುತ್ತಾನೆ. ಸಾರ್ವಕಾಲಿಕ ಜಗದ ಕವಿ ಕಾಳಿದಾಸನಿಗೆ ‘ಮೇಘದೂತ’ ದಂತಹ ಶ್ರೇಷ್ಟ ಕೃತಿ ರಚನೆಗೆ ಈ ವಸಂತದ ಮೋಡಗಳೇ ಕಾರಣವೆನ್ನುವುವುದ ಅತಿಶಯೋಕ್ತಿಯಲ್ಲ !

ಈ ಮೋಡಗಳು ಬರಿ ರೋಮ್ಯಾಂಟಿಕ್ ಕವಿಗಳಿಗೆ ಮಾತ್ರ ಪ್ರೇರಣೆ ಅಲ್ಲ. ಅವು ಭಿನ್ನ ವಿಚಾರ ಧಾರೆಯ ಕವಿ ಸಾಹಿತಿಗಳನ್ನು ಸಹ ಪ್ರೇರೆಪಿಸಿವೆ. ಈ ಸಂಧರ್ಭದಲ್ಲಿ ನವ್ಯ ಕಾಲ ಘಟ್ಟದ ಕವಿ ಕಮ್ಯನಿಷ್ಟ ವಿಚಾರ ಧಾರೆಯ ಸು.ರಂ.ಎಕ್ಕುಂಡಿಯವರ ಕವನ ‘ಇಬ್ಬರು ರೈತರು’ ಎನ್ನುವ ಕವನ ಗಮನಾರ್ಹ. ಈ ಕವನದ ಕೆಲ ಸಾಲುಗಳು ಹೊರಡಿಸುವ ಭಿನ್ನ ಆಶಯ ಮತ್ತು ವಿಚಾರಗಳ ಕಾರಣದಿಂದಾಗಿ ವಿಶೇಷ ಗಮನವನ್ನು ಸೆಳೆಯುತ್ತವೆ. ಎಕ್ಕುಂಡಿ ರಶಿಯನ್ ಮಾದರಿಯ ಸಮಾಜವಾದಿ ಕಾವ್ಯವನ್ನು ಕನ್ನಡಕ್ಕೆ ನೀಡಿದವರು. ಈ ಕವನದಲ್ಲಿ ನಿರೂಪಕ ನಿರೂಪಿಸುವ ಸಾಮಾಜಿಕ ನಿಲುವು ಬೇರೆ ಜಗತ್ತನ್ನೆ ನಮ್ಮೆದುರು ತೆರೆದಿಡುತ್ತದೆ. ವರ್ತಮಾನದ ಒತ್ತಡದಲ್ಲಿ ಲಾವಾದ ಹರಿಯುವಿಕೆಯನ್ನು ಅದರ ಬಿಸುಪನ್ನ ಸರಳವಾಗಿ ಆದರೆ ಅಷ್ಟೇ ಧ್ವನಿಪೂರ್ಣವಾಗಿ ನಿರೂಪಿಸಲಾಗಿದೆ. ಕಾಳಿದಾಸನ ಮೇಘದೂತ ಕೃತಿಯಲ್ಲಿ ಒಂದು ರೀತಿಯ ಲೋಕವನ್ನು ನಮ್ಮೆದುರು ತೆರೆದಿಟ್ಟರೆ ಇಲ್ಲಿ ಎಕ್ಕುಂಡಿಯವರ ಈ ಕವನದಲ್ಲಿ ಕವಿಯ ಆಶಯ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಹೀಗಾಗಿ ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ಮೋಡಗಳು ಕಾಲಕ್ಕೆ ಮತ್ತು ಕವಿಗಳ ಆಶಯಕ್ಕೆ ತಕ್ಕಂತೆ ಬದಲಾಗುತ್ತ ಕಾಲಕ್ಕೆ ಪ್ರಸ್ತುವಾಗುತ್ತ ಹೋಗುವುದು ಒಂದು ವಿಸ್ಮಯ. ಈ ಕವನದಲ್ಲಿಯ ಇಬ್ಬರು ರೈತರು ಕವಿ ಕಾಳಿದಾಸನಿಗೆ ಕೇಳುತ್ತಾರೆ
ನೀವು ಕಳಿಸಿದಿರಲ್ಲ ಒಂದು ಮೋಡ
ರಾಮಗಿರಿಯಿಂದ ಅಲಕಾವತಿಯ ಯಕ್ಷಿಣಿಗೆ
ಆ ಕುರಿತು ಒಂದಷ್ಟು ತಮ್ಮ ಕೂಡ
ಬಿನ್ನವಿಸಲೆಂದು ಬಂದಿದ್ದು ನಾವಿಬ್ಬರೂ
ಬಾಯೊಣಗಿ ನಿಂತಿರುವ ನಮ್ಮ ಪಯಿರು
ಹನಿ ನೀರಿಲ್ಲದೆ ಮೊಗವೊಣಗಿ ಪರಿತಪಿಸುತಿವೆ
ದಾರಿಯಲ್ಲವರಿಗೂ ನೀರು ಸುರಿಸು.
ಕಾಳಿದಾಸ ಮೇಘದೂತ ಕಾವ್ಯವನ್ನು ಬರೆದ ಕಾಲದಲ್ಲಿ ಯಕ್ಷನ ಸಂದೇಶವನ್ನು ಯಕ್ಷಿಣಿಗೆ ಹೊತ್ತೊಯ್ಯುವ ವಾಹಕವಾದರೆ ಎಕ್ಕುಂಡಿಯವರ ಕಾಲದಲ್ಲಿ ಬೇರೊಂದು ರೂಪದಲ್ಲಿ ಮೋಡಗಳ ಪ್ರಸ್ತುತಿಗೆ ಕನ್ನಡಿ ಹಿಡಿಯುತ್ತವೆ. ಹೀಗಾಗಿ ಮೋಡಗಳು ನಿನ್ನೆ ಇಂದು ಮತ್ತು ನಾಳೆ ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತ ನವ ನವೀನವಾಗಿ ಉಳಿಯುವಂತಹವು ಎಂಬುದು ಕವಿಯ ಆಶಯ. ವಸಂತ ಕಾಲದಲ್ಲಿ ಪ್ರಕೃತಿ ಅರಳಿ ನಿಲ್ಲುವ ಪರಿಯನ್ನು ಇದೇ ಕವಿ ಎಕ್ಕುಂಡಿಯವರು ತಮ್ಮ ‘ಬಕುಲದ ಹೂವುಗಳು’ ಎನ್ನುವ ಕವನ ಸಂಕಲನದ ಅದೇ ಶೀರ್ಷಿಕೆಯ ಈ ಪ್ರಮುಖ ಕವನದ ಎರಡು ನುಡಿಗಳನ್ನು ಗಮನಿಸೋಣ.
ಕಲ್ಲು ಮುಳ್ಳಿನ ಬೆಟ್ಟದ ಬುಡದಲ್ಲಿಯೆ ಒಂದು
ಬಕುಲದ ವೃಕ್ಷದ ತುಂಬ ಹೂ ಸುರಿದು
ಟೊಂಗೆ ಟೊಂಗೆಗೆ ಕುಳಿತ ಹಿಂಡು ಹಕ್ಕಿಯ
ಹಾಡು ಹೆಂಡತಿಗೆ ಹೇಳಿದನು ಕೂಗಿ ಕರೆದು
ಕಂಡಿಯೇನೆ ಸೋಮಿ ಬಂಡಿ ಹಬ್ಬದ ಹಿಗ್ಗು
ಇಷ್ಟು ದಿನ ಎಲ್ಲಿದ್ದವಿಷ್ಟು ಹೂವು ?
ಅನುಗಾಲ ಇಲ್ಲಿಂದಲೇ ಹಾದು ಹೋದವರು
ಕಂಡಿದ್ದೆವೆ ಇಂಥ ಸೊಬಗು ನಾವು
ಇಲ್ಲಿ ಕವಿ ಹಿನ್ನೆಲೆಯಲ್ಲಿ ನಿಂತು ಒಬ್ಬ ಸಾಮಾನ್ಯ ಹಳ್ಳಿಗನ ಮೂಲಕ ‘ಬಕುಲದ ಹೂವುಗಳು’ ಅರಳಿ ನಿಂತ ಪರಿಯನ್ನು ಕಡು ಅಚ್ಚರಿಗೊಂಡು ತನ್ನ ಹೆಂಡತಿ ಸೋಮಿಗೆ ಹೇಳುತ್ಥಾನೆ. ಅನುಗಾಲದಿಂದಲೂ ಇಲ್ಲಿಂದಲೇ ಹಾದು ಹೋಗುತ್ತಗಿದ್ದವರು, ಒಮ್ಮಿಂದೊಮ್ಮೆಲೆ ಇಷ್ಟೊಂದು ಹೂವುಗಳು ಹೇಗೆ ಅರಳಿದವು ? ಎಂದು ಕವಿ ಎಕ್ಕುಂಡಿಯವರು ಹಳ್ಳಿಗನ ಬಾಯಿಂದ ಹೊರಡಿಸುವ ಮುಗ್ಧ ಪ್ರಶ್ನೆಯನ್ನು ನಾವು ಗಮನಿಸಬೇಕು. ‘ಬಂಡಿ ಹಬ್ಬದ ಹಿಗ್ಗು’ ಎಂತಹ ಸುಂದರವಾದ ಪದ ಪುಂಜದ ರೂಪಕವನ್ನು ಓದುಗನ ರಸ ಸ್ವಾದನೆಗೆ ನೀಡಿದ್ದಾರೆ ? ಈ ಘಟನೆ ಒಳಗೊಂಡಿರುವ ಸೂಕ್ಷ್ಮವನ್ನು ನಾವು ಗಮನಿಸಬೇಕು. ಒಬ್ಬ ಸಾಮಾನ್ಯ ಹಳ್ಳಿಗನನ್ನು ಸಹ ಪ್ರಕೃತಿಯ ಸಹಜ ಕ್ರಿಯೆಯಾದ ಹೂವುಗಳ ಅರಳುವಿಕೆ ಕವಿ ಭಾವವನ್ನು ಉದ್ದೀಪಿಸುತ್ತವ್ತೆ ಎಂಬುದು ಅಚ್ಚರಿಗೊಳಿಸುವಂತಹುದು. ಇಲ್ಲಿ ಹಳ್ಳಿಗ ತಾನು ಕಂಡ ಅಚ್ಚರಿಯನ್ನು ತಾನೊಬ್ಬನೆ ಅನುಭವಿಸಿ ಸುಮ್ಮನಾಗುವುದಿಲ್ಲ, ತನ್ನ ಜೊತೆಗಾತಿ ಹೆಂಡತಿಯ ಜೊತೆಗೆ ಆ ಅನುಭವ ವನ್ನು ಹಂಚಿಕೊಳ್ಳುವುದು ಆತನ ಮನದಲ್ಲಿ ಕವಿ ಮನ ಜಾಗೃತಗೊಂಡಿರುವುದನ್ನು ವಿಶದಿಸುತ್ತಾರೆ. ಇಲ್ಲಿ ನಿರೂಪಕ ಕವಿ ಎಲ್ಲಿಯೂ ಹೊರಗೆ ಕಾಣಿಸಿಕೊಳ್ಳುವುದಿಲ್ಲ, ಆದರೆ ಆ ಕವಿ ಆ ಸಾಮಾನ್ಯ ಹಳ್ಳಿಗನಲ್ಲಿಯೆ ಅಂತರ್ಗತ ವಾಗಿರುವುದನ್ನು ಗಮನಿಸಬೇಕು.
ಇನ್ನು ವಸಂತ ಕಾಲದಲ್ಲಿ ಅರಳಿ ನಿಂತ ಪ್ರಕೃತಿ ಈ ಸಂಧರ್ಭದಲ್ಲಿಯೆ ಬರುವ ಪಾರಂಪರಿಕ ಹಬ್ಬ ‘ಯುಗಾದಿ’ ಬೇಸಿಗೆಯ ಬೇಗೆಗೆ ಮದುಡಿ ನಿಂತ ಮನಕ್ಕೆ ನೀಡುವ ಒಂದು ದಿವ್ಯ ಚೇತನ. ಯುಗಾದಿ ಎಂದ ಮೇಲೆ ವರಕವಿ ಬೇಂದ್ರೆಯವರಲ್ಲದೆ ಅವರ ಸಾರ್ವಕಾಲಿಕ ಮತ್ತು ನಿತ್ಯ ನೂತನ ‘ಯುಗಾದಿ’ ಕವನವನ್ನು ನೆನೆಯದೆ ಈ ಲೇಖನ ಅಪೂರ್ಣ ಅಲ್ಲವೆ ? ಈ ಕವನದಲ್ಲಿ ಕವಿ ಎಕ್ಕುಂಡಿ ಎಲ್ಲ ಜೀವ ಸೆಲೆಗಳೊಡನೆ ಆಗಮಿಸುವ ವಸಂತ ಮತ್ತು ಪ್ರಕೃತಿ ಗಳ ನಿರಂತರತೆಯನ್ನು ಕುರಿತು ಬಹಳ ಸತ್ವಪೂರ್ಣವಾಗಿ ನಿರೂಪಿಸಿದ್ದಾರೆ. ಈ ಜಗತ್ತು ಇರುವ ವರೆಗೆ ಕನ್ನಡಿಗರು ಮತ್ತು ಕನ್ನಡ ಭಾಷೆ ಇರುವವರೆಗೆ ತಲೆ ಮಾರುಗಳಿಂದ ತಲೆಮಾರುಗಳ ವರೆಗೆ ಈ ಬಕುಲದ ಹೂವುಗಳು ರಿಂಗುಣಿಸುಮತ್ವಲೆ ಇರುತ್ತವೆ.






namaskaara patil avarige..
tammannu avadhiyali kandu santoshvaayitu..lekhana chennaagide.. manada sanmvedaneyannu chennaagi padagaLalli hiDidittiddiri..
ಮೇಡಂ ವಂದನೆಗಳು ಲೇಖನದ ಮೆಚ್ಚುಗೆಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
hanumath patil ji, lEkhana barha arthpurnavagide. viSleshanegalu bahala mechcugeyadavu.
ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು ಲೇಖನದ ಕುರಿತ ತಮ್ಮ ಮೆಚ್ಚುಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
thevudiyapulla