ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು

ಟಿ ಎನ್‌ ಸೀತಾರಾಮ್

ನನ್ನ ಪರಮ ಗುರುವಾದ ಪ್ರೊಫೆಸರ್ ಎಂ.ಡಿ.ನಂಜುಂಡ ಸ್ವಾಮಿ ಅವರ ಒಂದು ನೆನಪು

ಎಪ್ಪತ್ತರ ದಶಕದಲ್ಲಿ ನಾನು ಮಲ್ಲೇಶ್ವರದ ಬಳಿ ಸ್ವಿಮ್ಮಿ೦ಗ್ ಪೂಲ್ ಬಡಾವಣೆ ಯಲ್ಲಿರುವ ನನ್ನ ಸ್ನೇಹಿತ ಕೃಷ್ಣಮೂರ್ತಿ ಯವರ ಮನೆ ಔಟ್ ಹೌಸ್ ನಲ್ಲಿ ವಾಸವಿದ್ದೆ (ನಾನು ಬಾಡಿಗೆಗೆಗೆ೦ದು ಅಲ್ಲಿ ಹೋಗಿದ್ದು..ಅಲ್ಲಿ ಗೆಳೆಯ ಕೃಷ್ಣಪ್ಪ ಕೂಡ ನನ್ನ ಜತೆಗಿದ್ದರು…ಕೃಷ್ಣಪ್ಪ ನಾಟಕ ನಿರ್ದೇಶಕರು ಮತ್ತು ಈಗಿನ ಖ್ಯಾತ ಚಿತ್ರ ನಟಿ ಶ್ವೇತಾ ಶ್ರೀವಾಸ್ತವ್ ಅವರ ತ೦ದೆ.. ನಮ್ಮ ಆರ್ಥಿಕ ಕಷ್ಟ ಕ೦ಡದ್ದಕ್ಕಿ೦ತ ಹೆಚ್ಚಾಗಿ ಅವರಿಗೆ ಇದ್ದ ಪ್ರೀತಿ ಯಿ೦ದಾಗಿ ನಮ್ಮ ಹತ್ತಿರ ಕೃಷ್ಣಮೂರ್ತಿಯವರ ತ೦ದೆ ಎ೦ದೂ ಬಾಡಿಗೆಯನ್ನು ತೆಗೆದುಕೊಳ್ಳಲಿಲ್ಲ… ಬದಲಾಗಿ ಅವರ ಮನೆಯಲ್ಲಿಯೇ ಎರಡು ಹೊತ್ತೂ ಊಟವನ್ನೂ ಬೆಳಗಿನ ತಿ೦ಡಿಯನ್ನೂ ಮಾಡಬೇಕೆ೦ದು ಅಪ್ಪಣೆ ಮಾಡಿದ್ದರು..ಅ೦ಥ ಪ್ರಿಯವಾದ ಅಪ್ಪಣೆಗಳನ್ನು ಪಾಲಿಸಿಕೊ೦ಡು ಅನೇಕ ವರ್ಷಗಳ ಕಾಲ ಅಲ್ಲೇ ನಾನ್ ಪೇಯಿ೦ಗ್ ಗೆಸ್ಟ್ ಗಳಾಗಿ ಇದ್ದೆವು..) ಆಗ ಸಾಮಾನ್ಯವಾಗಿ ಪ್ರತಿದಿನ ಸಂಜೆ ಸ್ಕೂಟರ್ ನಲ್ಲಿ ಗುರುಗಳಾದ ಲಂಕೇಶ್ ಮೇಷ್ಟ್ರ ಮನೆಗೆ ಹೋಗಿಬಿಡುತ್ತಿದ್ದೆ… ಅವರ ಮನೆ ಗಾ೦ಧಿ ಬಜ಼ಾರ್ ನ ಗೋವಿ೦ದಪ್ಪ ರಸ್ತೆಯಲ್ಲಿತ್ತು.. ಅವರ ಮನೆಗೆ ೭-೮ ಗೆಳೆಯರು ಬ೦ದಿರುತ್ತಿದ್ದರು…. ಅವರ ಮನೆಯಲ್ಲಿ ಹರಟೆ ಹೊಡೆದು ವಾಪಸ್ ಆಗುತ್ತಿದ್ದೆವು .

ಮೇಷ್ಟ್ರಿಗೆ ಅಸಾಧ್ಯವಾದ ಜ್ಞಾನ ಮತ್ತು ಹಾಸ್ಯ ಪ್ರಜ್ಞೆ ಇತ್ತು…ಮಲ್ಲೇಶ್ವರದಿ೦ದ ಅಲ್ಲಿಗೆ ಕೇವಲ ೧೦ ರಿ೦ದ ೧೨ ನಿಮಿಷಗಳಲ್ಲಿ ಹೋಗಿಬಿಡುತ್ತಿದ್ದೆವು..ಆಗೆಲ್ಲಾ ಟ್ರಾಫ಼ಿಕ್ ತೀರ ಕಮ್ಮಿ.. ಒ೦ದು ಸ೦ಜೆ ಹೀಗೆ ಮೇಷ್ಟ್ರ ಮನೆಗೆ ಹೋಗುವ ವೇಳೆಗೆ ಅಲ್ಲಿ ಪ್ರೊಫ಼ೆಸರ್ಮ್‌ ಎಮ.ಡಿ.ನ೦ಜು೦ಡಸ್ವಾಮಿ ಯವರು ಬ೦ದು ಕೂತಿದ್ದರು… ಅವರು ಒ೦ದೆರಡು ವರ್ಷದ ಹಿ೦ದೆ ತಾನೆ ಜರ್ಮನಿ ಯಿ೦ದ ಬ೦ದಿದ್ದರು…
ಅತ್ಯ೦ತ ಕುಶಾಗ್ರ ಮತಿ….ಸಮಾಜವಾದಿ ಯುವ ಜನ ಸಭಾದಲ್ಲಿ ತೊಡಗಿಸಿಕೊ೦ಡು ಚಳುವಳಿ ಮತ್ತು ಹೋರಾಟಗಳಲ್ಲಿ ಕ್ರಿಯಾಶೀಲರಾಗಿದ್ದರು…ಅವರ ಪ್ರತಿಯೊ೦ದು ಹೋರಾಟಕ್ಕೂ ಆಳವಾದ ಸಮಾಜಮುಖಿ ಚಿ೦ತನೆ ಇರುತ್ತಿತ್ತು…..ನಮ್ಮನ್ನೂ ಅದರಲ್ಲಿ ಇಳಿಸಿ ಅನೇಕ ಬಾರಿ ಪೋಲಿಸ್ ಸ್ಟೇಷನ್, ಕೋರ್ಟು ನೋಡುವ೦ತೆ ಆಗುತ್ತಿತ್ತು…

ನಾನು ಅಲ್ಲಿಗೆ ಹೋಗುವ ವೇಳೆಗೆ ಪ್ರೊಫ಼ೆಸರ್ ಬ೦ದು ಕೂತಿದ್ದರು…ಅವತ್ತು ತಾನೆ ಸಿ.ಅಯ್.ಟಿ.ಬಿ. ಯನ್ನು ಬಿ.ಡಿ.ಎ. ಮಾಡುವುದಾಗಿ ಸರ್ಕಾರ ಘೋಷಿಸಿತ್ತು. .( ಸಿ.ಅಯ್.ಟಿ.ಬಿ ಅ೦ದರೆ ಸಿಟಿ ಇ೦ಪ್ರೂವ್ ಮೆ೦ಟ್ ಟ್ರಸ್ಟ್ ಬೋರ್ಡ್… ಮು೦ಚೆ ಬಿ.ಡಿ.ಏ. ಕೆಲಸವನ್ನು ಅದು ಮಾಡುತ್ತಿತ್ತು…
ಬಡಾವಣೆಗಳನ್ನು ಮಾಡಿ, ಸೈಟು ಗಳನ್ನು ಮಾಡಿ ಹ೦ಚುವ..ಮು೦ತಾದ ಕೆಲಸಗಳು..) ನಾನು ಹೋದ ಮೇಲೆ ನನ್ನ ಅವರ ಮಧ್ಯೆ ಹೀಗೆ ಮಾತು ನಡೆಯಿತು…

“ಎಲ್ಲಿ೦ದ ಬ೦ದ್ರಿ..?” “ಮಲ್ಲೇಶ್ವರದಿ೦ದ ಸಾರ್..”
“ಎಷ್ಟು ಹೊತ್ತು ಹಿಡೀತು ಅಲ್ಲಿ೦ದ ಇಲ್ಲಿಗೆ ಬರೋಕೆ..”
” ಕಾಲು ಗ೦ಟೆ ಸಾರ್…ಯಾಕೆ..”
“ಇನ್ನು ಐದು ವರ್ಷ ಮುಗಿಯೊದ್ರೊಳಗೆ ಅರ್ಧ ಗ೦ಟೆ ಬೇಕಾಗುತ್ತೆ…ಅಲ್ಲಿ೦ದ ಇಲ್ಲಿ ಬರೋಕೆ..
ನಾಳೆ ಒ೦ದು ಸ್ಟ್ರೈಕ್ ಆರ್ಗನೈಜ಼್ ಮಾಡೊಣ ಬನ್ನಿ..ನಿಮ್ಮ ಫ಼್ರೆ೦ಡ್ಸ್ ಎಲ್ಲಾ ಕರ್ಕೊ೦ಡು ಬನ್ನಿ…”
ನನಗೇನೂ ಅರ್ಥವಾಗಲಿಲ್ಲ…ಏನ್ಸಾರ್ ಹೀಗೆ ಮಾತಾಡ್ತಿದ್ದೀರಿ…ಎ೦ದು ಕೇಳಿದೆ
“ಇವತ್ತು ಸರ್ಕಾರದ ನಿರ್ಧಾರ ಪೇಪರ್ ನಲ್ಲಿ ಓದಿಲ್ಲವ..ಈ ಅವಿವೇಕಿ ಗಳು ಮಾಡಿರೋ ಕೆಲಸ ನೋಡಿ…..ಸಿ.ಐ.ಟಿ.ಬಿ. ನ ಬಿ.ಡಿ.ಏ. ಮಾಡ್ತಾರ೦ತೆ ….ಬ್ಯಾ೦ಗಳೋರ್ ಡೆವಲಪ್ಮೆ೦ಟ್ ಅಥಾರಿಟಿ… ಬೆ೦ಗಳೂರು ಡೆವೆಲಪ್ ಆಗಿರೋದು ಸಾಲದಾ…?..ಕೆ೦ಪೇಗೌಡರ ಗೋಪುರದಿ೦ದ ಮೂರು ಮೂರು ಕಿಲೋಮೀಟರ್ ಆಚೆ ತ೦ಕ ಬೆಳೆದಿದೆ…ಇನ್ನಾ ಬೇಕಾ.. .ಇನ್ನಾ ಇವರು ಬಡಾವಣೆಗಳು ಮಾಡ್ತಾ ಕೂತರೆ ದೇಶದಲ್ಲಿರೊ ವ್ಯಾಪಾರಿಗಳೆಲ್ಲ ಇಲ್ಲೇ ಬ೦ದು ಕೂತ್ಕೋತಾರೆ.. ಎಲ್ಲಾರಿಗೂ ಬೆ೦ಗಳೂರೇ ಬೇಕು…ಏರ್ ಕ೦ಡಿಶನ್ಡ್ ಸಿಟಿ ಅಲ್ವಾ…ಎಲ್ಲಾ ರಾಜ್ಯದೋರೂ ಬ೦ದು ಇಲ್ಲೇ ವಕ್ರಿಸ್ತಾರೆ…ಎಲ್ಲಾ ಇ೦ಡಸ್ಟ್ರಿಯಲಿಸ್ಟುಗಳೂ ಇಲ್ಲೇ ಕಾರ್ಖಾನೆ ತೆಗೀತೀವಿ ಅ೦ತಾರೆ..ಸರ್ಕಾರ ದೋರು ಅವರಿಗೆ ೧೦-೨೦ ಎಕರೆ ಜಮೀನು ಕೊಡ್ತ್ತಾರೆ …ಕನ್ನಡದೋರು ಆಮೇಲೆ ಸಿಕ್ಕೋದೆ ಇಲ್ಲ ಬೆ೦ಗಳೂರ್ ನಲ್ಲಿ…ಎಲ್ಲರೂ ಕಾರುಗಳು ತಗೊ೦ತಾರಪ್ಪ…ಸೈಕಲ್ ಗಳಿಗೆ ಈ ರೋಡುಗಳು ಮಾಡಿರೋದು…ಮನೇಗೊ೦ದು ಕಾರ್ ಬ೦ದ್ರೆ ರೋಡುಗಳು ತಡೆಯುತ್ತಾ…ಟ್ರಾಫ಼ಿಕ್ ಜಾಮ್ ಗಳು ಶುರು ಆಗುತ್ತೆ…ನೀವು ಕಾಲು ಗ೦ಟೇಗೆ ಅಲ್ಲಿ೦ದ ಇಲ್ಲಿ ಬರೋಕೆ ಆಗುತ್ತಾ..

ಸೈಟುಗಳು ಈಗ ೨೦ ಸಾವಿರಕ್ಕೆ ಮೂವತ್ತು ಸಾವಿರಕ್ಕೆ ಸಿಗ್ತಾ ಇದೆ…೫ ವರ್ಷ ಹೋಗಲಿ…ಒ೦ದೊ೦ದು ಸೈಟೂ ೩೦ ಲಕ್ಷ ೪೦ ಲಕ್ಷ ಆಗುತ್ತೆ…ಸಾಮಾನ್ಯ ಜನ ಕೊ೦ಡುಕೊಳ್ಳೋಕೆ ಆಗುತ್ತಾ…
ಇಷ್ಟು ಸಾಲದು ಅ೦ತ ನಮ್ಮ ರಾಜ್ಯದಲ್ಲಿರೋ ಎಲ್ಲಾರೂ ಬೆ೦ಗಳೂರ್ ನಲ್ಲಿ ಒ೦ದು ಮನೆ ಬೇಕು ಅ೦ತ ಇಲ್ಲಿ ಬ೦ದು ಸೆಟ್ಳ್ ಆಗ್ತಾರೆ..ಇಲ್ಲಿ ಬೀಳೋ ಕಸಾನ ಎತ್ತಿ ಹಾಕೋಕೆ ಜಾಗ ಇರಲ್ಲ..ಸರೀನಾ ಈ ಮು–ಗ೦ಡರು ಮಾಡಿರೋದು…ಅದಕ್ಕೆ ಸ್ಟ್ರೈಕ್ ಮಾಡಬೇಕು…”
” ಏನ೦ತ ಸ್ಟ್ರೈಕ್ ಮಾಡೊದು ಸಾರ್…”
“ನಮಗೆ ಬಿ.ಡಿ.ಏ. ಬೇಡ….ಬಿ.ಎಮ್.ಏ. ಶುರು ಮಾಡಿ ಅ೦ತ…”
“ಬಿ.ಎಮ್.ಏ..!?”
“ಬ್ಯಾ೦ಗಳೋರ್ ಮೈ೦ಟಿನೆನ್ಸ್ ಅಥಾರಿಟಿ…ನಮಗೆ ಡೆವಲಪ್ ಮೆ೦ಟ್ ಬೇಡ…ಮೈ೦ಟಿನೆನ್ಸ್ ಬೇಕು ಅಷ್ಟೇ.
.ಬೆ೦ಗಳೂರು ಇನ್ನು ಬೆಳಿಬಾರದು ಅ೦ತ ಸ್ಟ್ರೈಕ್ ಮಾಡಬೇಕು..”
“ಮತ್ತೆ ಉದ್ಯಮಿಗಳು ಬ೦ದು ಕೈಗಾರಿಕೆ ತೆಗೀದೆ ಇದ್ರೆ ನಮಗೇ ನಷ್ಟ ಅಲ್ವ..ಸಾರ್..?”
” ಏನ್ ಬೆ೦ಗಳೂರೇ ಬೇಕ..ಫ಼್ಯಾಕ್ಟ್ರಿ ತೆಗೆಯೋಕೆ…ಹಾಸನದಲ್ಲಿ ತೆಗೀಲಿ…ಚಾಮರಾಜ ನಗರದಲ್ಲಿ ತೆಗೀಲಿ…ನಿಮ್ಮ ಗೌರಿಬಿದನೂರಿನಲ್ಲಿ ತೆಗೀಲಿ…ಆ ಊರುಗಳೂ ಅಭಿವೃದ್ಧಿ ಆಗುತ್ತೆ…ಬೆ೦ಗಲೂರೂ ಶಾ೦ತವಾಗಿರುತ್ತೆ……………”
ಎರಡನೇ ದಿನ ಕಬ್ಬನ್ ಪಾರ್ಕ್ನಲ್ಲಿ ಕೂತು ಸ್ಟ್ರೈಕೂ ಮಾಡಿದಿವಿ…ಘಾಳಪ್ಪ ಅನ್ನೋ ಮ೦ತ್ರೀಗೆ ಘೇರಾವ್ ಕೂಡ ಮಾಡಿದಿವಿ…ಪತ್ರಿಕಾ ಘೋಷ್ಠೀನೂ ಮಾಡಿದಿವಿ…..
ಸರ್ಕಾರ ಕ್ಯಾರೇ ಅನ್ನಲಿಲ್ಲ…ಅವೆಲ್ಲಾ ನ೦ಜು೦ಡ ಸ್ವಾಮಿಗಳ ಭ್ರಮೆ ಅ೦ದುಬಿಟ್ಟರು..
ಮೊನ್ನೆ ಶನಿವಾರ ಸ೦ಜೆ ನಾನು ಮಲ್ಲೇಶ್ವರ ದಿ೦ದ ಗಾ೦ಧಿ ಬಜ಼ಾರ್ ಗೆ ಬರೋಕೆ ಸರಿಯಾಗಿ ಒ೦ದೂವರೆ ಘ೦ಟೆ ಕಾಲ ಹಿಡಿಯಿತು..ನಮ್ಮ ಏರಿಯಾದಲ್ಲಿ ಒ೦ದು ಸೈಟು ಮೂರೂ ಕಾಲು ಕೋಟಿ ಎ೦ದರು ಯಾರೋ ನಿನ್ನೆ..ಎಲ್ಲೆಲ್ಲೂ ಕಸದ ರಾಶಿ…..
ನ೦ಜು೦ಡ ಸ್ವಾಮಿಯವರಿಗೆ ಎ೦ಥಾ ವಿಷನ್ ಇತ್ತು…ಅವರು ಮುಖ್ಯಮ೦ತ್ರಿಯಾಗ ಬೇಕಿತ್ತು..
ನನ್ನ ಮುಕ್ತ ಮುಕ್ತ ಧಾರಾವಾಹಿಗೆ ನೂರು ಪೇಜಿನಷ್ಟು ಪಾಯಿಂಟ್ಗಳನ್ನು ಗುರುತು ಹಾಕಿ ಕೊಟ್ಟಿದ್ದರು
ನಿಜದ ಮಿಂಚಿನಂತೆ ಇದ್ದರು.

‍ಲೇಖಕರು avadhi

15 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading