ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎಸ್ ಅಮ್ಮ ರೈಲಿನೆಡೆಗೆ ಹೆಜ್ಜೆ ಹಾಕುತ್ತಿದ್ದರು..

jagadeesh koppa

ಎನ್ ಜಗದೀಶ ಕೊಪ್ಪ 

ನಾನು ನಾಲ್ಕು ವರ್ಷಗಳ ಕಾಲ ಮದ್ರಾಸ್ ನಲ್ಲಿದ್ದೆ .  1981 ರಿಂದ 1984 ರವರ ರೆಗೆ. ಮದ್ರಾಸ್ ನಗರದಲ್ಲಿ ‘ಪ್ರಜಾವಾಣಿ’ ಬಳಗದ ಜಾಹಿರಾತು ಪ್ರತಿನಿಧಿ ಹಾಗೂ ವರದಿಗಾರನಾಗಿದ್ದೆ. ಮೈಲಾಪುರದ ಕೂಗಳತೆಯಲ್ಲಿರುವ ರಾಯಪೇಟ ಬಡಾವಣೆಯಲ್ಲಿ ನನ್ನ ವಾಸ. ಮೈಲಾಪುರ ಎಂದರೆ ಸಂಗೀತ. ಮೈಲಾಪುರದ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದೆ. ಆ ಮೂಲಕವೇ ಎಂ.ಎಸ್. ಸುಬ್ಬುಲಕ್ಮಿ ಮತ್ತು ಟಿ. ಸದಾಶಿವಂ ರವರ ಜೀವನದ ಅನೇಕ ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿಬಿಟ್ಟೆ.

2012 ರಲ್ಲಿ ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ ಕುರಿತು ಅಧ್ಯಯನ ಕೈಗೆತ್ತಿಕೊಂಡಿದ್ದ ಕಾರಣ ತಮಿಳುನಾಡಿನ ಉತ್ತರ ದಿಕ್ಕಿನ ಗಡಿಭಾಗದ ತಿರುತ್ತಣಿ ಎಂಬ ಊರಿನಲ್ಲಿ ಬೆಟ್ಟದ ಮೇಲಿರುವ ಪ್ರಸಿದ್ಧ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆಚರಣೆಯಲ್ಲಿದ್ದ ದೇವದಾಸಿ ನೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆ. ವಾಪಸ್ ಬೆಂಗಳೂರಿಗೆ ಹಿಂತಿರುಗುವ ಉದ್ದೇಶದಿಂದ 42 ಕಿಲೊಮೀಟರ್ ದೂರವಿದ್ದ ಪವಿತ್ರ ಯಾತ್ರ ಸ್ಥಳ ತಿರುಪತಿಗೆ ಬಂದಿಳಿದೆ. ಅಲ್ಲಿನ ಬಸ್ ನಿಲ್ದಾಣದ ಎದುರುಗಿನ ವೃತ್ತದಲ್ಲಿ ಧ್ಯಾನಸ್ಥ ಮನಸ್ಸಿನಲ್ಲಿ ಕುಳಿತು ಹಾಡುತ್ತಿರುವ ಎಂ.ಎಸ್. ಸುಬ್ಬುಲಕ್ಷ್ಮಿಯವರ ಬೃಹತ್ ಕಂಚಿನ ಪ್ರತಿಮೆಯನ್ನು ನೋಡಿ ಮನಸ್ಸಿಗೆ ಆನಂದವಾಯಿತು.

Mss & T.Sadashivamಎಂ.ಎಸ್. ಅಮ್ಮನವರು ತಿರುಪತಿ ವೆಂಕಟೇಶ್ವರ ಸುಪ್ರಭಾತವನ್ನು ಹಾಡುವುದರ ಮೂಲಕ ಪ್ರಾತಃಕಾಲವೆಂದರೆ, ಶ್ರೀ ವೆಂಕಟೇಶ್ವರ ಸುಪ್ರಭಾತ ಎಂಬಂತೆ ಜನಪ್ರಿಯಗೊಳಿಸಿದವರು. ಈ ಕಾರಣಕ್ಕಾಗಿ ತಿರುಪತಿ ನಗರದಲ್ಲಿರುವ ಶ್ರೀ ವೆಂಕಟೇಶ್ವರ ಸಂಸ್ಕೃತ ವಿಶ್ವ ವಿದ್ಯಾನಿಲಯವು ಎಂ.ಎಸ್.ರವರ ಪ್ರತಿಮೆಯನ್ನು ತಿರುಪತಿ ನಗರದಲ್ಲಿ ಸ್ಥಾಪನೆ ಮಾಡಿ ಗೌರವ ಸಮರ್ಪಿಸಿದೆ. ಪ್ರತಿಮೆಯನ್ನು ನೋಡುತ್ತಿದ್ದಂತೆ 1993 ರಲ್ಲಿ ಎಂ.ಎಸ್. ಅಮ್ಮ ಮತ್ತು ಟಿ.ಸದಾಶಿವಂ ರವರನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬೇಟಿಯಾದ ನೆನಪು ಮತ್ತೆ ನನ್ನ ಮನಸ್ಸಿನಲ್ಲಿ ಹಾಯ್ದು ಹೋಯಿತು.

ಅದು ಅಕ್ಟೋಬರ್ ಅಥವಾ ನವಂಬರ್ ತಿಂಗಳು ಎಂದು ನೆನಪು. ಬೆಳಿಗ್ಗೆ ಮಂದಿಂದ ರೈಲು ಹತ್ತಿ ನಾನು ಬೆಂಗಳೂರು ರೈಲ್ವೆ ನಿಲ್ದಾಣ ತಲುಪಿದಾಗ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆ. ರೈಲು ನಿಲ್ದಾಣದಿಂದ ಹೊರ ಬರುತ್ತಿದ್ದೆ. ಅದೇ ಸಮಯದಲ್ಲಿ ಇಬ್ಬರು ವೃದ್ಧ ದಂಪತಿಗಳು ಪರಸ್ಪರ ಕೈ ಹಿಡಿದುಕೊಂಡು ನಿಧಾನವಾಗಿ ಮೆಟ್ಟಿಲು ಹತ್ತಿ ನಿಲ್ದಾಣದೊಳಕ್ಕೆ ಪ್ರವೇಶಿಸುತ್ತಿದ್ದರು.

ಜನಸಾಮಾನ್ಯರ ನಡುವೆ ಸಾಮಾನ್ಯರಂತೆ ಹೆಜ್ಜೆ ಹಾಕುತ್ತಿದ್ದ ಅವರನ್ನು ಎಂ.ಎಸ್. ಅಮ್ಮ ಮತ್ತು ಸದಾಶಿವಂ ಎಂದು ಗುರುತಿಸುವುದು ನನಗೆ ಕಷ್ಟವಾಗಲಿಲ್ಲ. ಕೂಡಲೆ ಅವರ ಬಳಿ ತೆರಳಿ ತಮಿಳು ಭಾಷೆಯಲ್ಲಿ ನಮಸ್ಕರಿಸಿದೆ. ನಂತರ ಅವರ ಬ್ಯಾಗುಗಳನ್ನು ನನ್ನ ಕೈಗೆ ತೆಗೆದುಕೊಂಡು, ನಿಧಾನವಾಗಿ ಅವರನ್ನು ಒಂದನೆಯ ಪ್ಲಾಟ್ ಪಾರಂ ನಲ್ಲಿ ನಿಂತಿದ್ದ ಬೃಂದಾವನ ಎಕ್ಸ್ ಪ್ರಸ್ ರೈಲಿನ ಮೊದಲ ದರ್ಜೆಯ ಬೋಗಿಗೆ ಕರೆದುಕೊಂಡು ಹೋಗಿ ಕೂರಿಸಿದೆ.

‘ಅಮ್ಮಾ ಕಾರಿನಲ್ಲಿ ಮದ್ರಾಸ್ ಗೆ ಹೋಗುವ ಬದಲು ರೈಲಿನಲ್ಲಿ ಏಕೆ ಪ್ರಯಾಣಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದೆ. ಬೆಂಗಳೂರಿನ ಸಂಗೀತ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಷಯವನ್ನು ತಿಳಿಸಿದ ಅವರು, ಕಾರಿನ ಪ್ರಯಾಣದ ವೇಳೆಯಲ್ಲಿ ಬರುವ ದೂಳು ಮತ್ತು ಬಿಸಿಲು ಆಗುವುದಿಲ್ಲ. ರೈಲಿನಲ್ಲಿ ಊಟ ಮಾಡಿ ಮಲಗಿದರೆ, ನಾಲ್ಕು ಗಂಟೆ ವೇಳೆಗೆ ಕಾಟಪಾಡಿ ಇಲ್ಲವೆ, ಜೋಲಾರ್ ಪೇಟೆ ತಲುಪುತ್ತೇವೆ. ಆನಂತರ ಕಾಫಿ ಕುಡಿದು ಕಾಲ ಕಳೆಯುವದರೊಳಗೆ ಮದ್ರಾಸ್ ಸಿಗುತ್ತದೆ’ ಎಂದು ಹೇಳಿ ನಕ್ಕರು. ಜೊತೆಗೆ ಮಧ್ಯಾಹ್ನದ ಊಟಕ್ಕೆ ಕಟ್ಟಿಸಿಕೊಂಡು ಬಂದಿದ್ದ ಮೊಸರನ್ನ ಹಾಗೂ ಪ್ಲಾಸ್ಕಿನಲ್ಲಿದ್ದ ಕಾಫಿಯನ್ನು ತೋರಿಸಿದರು.

ಅಲ್ಲಿಯವರೆಗೆ ನನ್ನ ಮತ್ತು ಅಮ್ಮನವರ ಮಾತನ್ನು ಮೌನವಾಗಿ ವೀಕ್ಷಿಸುತ್ತಿದ್ದ ಟಿ. ಸದಾಶಿವಂರವರು ‘ತಮ್ಮಾ, ಇಷ್ಟು ಒಳ್ಳೆಯ ತಮಿಳು ಭಾಷೆಯನ್ನು ಎಲ್ಲಿ ಕಲಿತೆ?’ ಎಂದು ಕನ್ನಡದಲ್ಲಿ ಪ್ರಶ್ನಿಸಿದರು. ನಾನು ಮೂರು ವರ್ಷಗಳ ಕಾಲ ಮದ್ರಾಸ್ ನಗರದಲ್ಲಿ ವಾಸವಾಗಿದ್ದ ವಿಷಯ ತಿಳಿಸಿದೆ. ಪ್ರತಿ ದಿನ ಸಂಜೆ ಮೈಲಾಪುರ್ ಬಳಿಯ ವೈಟ್ಸ್ ರೋಡ್ ನಲ್ಲಿದ್ದ ತೊಘಲಕ್ ಪತ್ರಿಕೆಯ ಸಂಪಾದಕ ಚೋ ರಾಮಸ್ವಾಮಿಯವರ ನಿವಾಸದಲ್ಲಿ ಕಾಲ ಕಳೆಯುತ್ತಿದ್ದೆ. ಅವರ ಮತ್ತು ಆನಂದ ವಿಕಟನ್ ಪತ್ರಿಕೆಯ ಸಂಪಾದಕರಾಗಿದ್ದ ಬಾಲನ್ ( ಬಾಲಸುಬ್ರಮಣ್ಯಂ) ಮಾತುಕತೆಯಲ್ಲಿ ತಮಿಳುನಾಡಿನ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಷಯಗಳು ಚರ್ಚೆಯಾಗುವಾಗ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದ ವಿಷಯವನ್ನು ಅವರಿಗೆ ವಿವರಿಸಿದೆ.

m s subbalakshmi coverಆನಂತರ ‘ಸರ್ ನಿಮಗೆ ಕನ್ನಡ ಭಾಷೆ ಹೇಗೆ ಗೊತ್ತು?’ ಎಂದು ನಾನು ಮರು ಪ್ರಶ್ನೆ ಹಾಕಿದೆ. 1930 ದಶಕದಲ್ಲಿ ಬೆಂಗಳೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಇರುವ ಖಾದಿ ಭಂಡಾರದಲ್ಲಿ ನಾಲ್ಕೈದು ವರ್ಷಗಳ ಕಾಲ ಕಾಂಗ್ರೇಸ್ ಕಾರ್ಯಕರ್ತನಾಗಿ ದುಡಿದ ವಿಷಯ, ಗಾಂಧೀಜಿಯವರು ವಿಶ್ರಾಂತಿಗಾಗಿ ನಂದಿ ಬೆಟ್ಟಕ್ಕೆ ಆಗಮಿಸಿದ್ದಾಗ ಅವರಿಗೆ ಆಪ್ತ ಸಹಾಯಕನಾಗಿ ದುಡಿದ ವಿಷಯವನ್ನು ಸದಾಶಿವಂ ರವರು ಹೆಮ್ಮೆಯಿಂದ ನನ್ನೊಂದಿಗೆ ಹೇಳಿಕೊಂಡರು. ಬೆಂಗಳೂರು ನಗರ ಮತ್ತು ಕನ್ನಡಿಗರ ಬಗ್ಗೆ ಪ್ರೀತಿಯನ್ನು ಹಂಚಿಕೊಂಡ ಅವರು, ಅನೇಕ ಕನ್ನಡ ಗೆಳೆಯರ ಹೆಸರು ಹೇಳಿದರು. ಮೈಸೂರಿನಲ್ಲಿದ್ದ ನಂಜಯ್ಯ ಎಂಬ ವಕೀಲರು ಪ್ರತಿ ವರ್ಷ ಬೇಸಿಗೆಯಲ್ಲಿ ಅವರಿಗೆ ತಪ್ಪದೆ ಕಳಿಸುತ್ತಿದ್ದ ಅಕ್ಕಿಯಲ್ಲಿ ಮಾಡಿದ ಸಂಡಿಗೆ, ಉದ್ದಿನ ಹಪ್ಪಳ, ಮತ್ತು ಮಿಡಿ ಮಾವಿನ ಉಪ್ಪಿನ ಕಾಯಿ ಇವುಗಳ ರುಚಿಯನ್ನು ಸ್ಮರಿಸಿಕೊಂಡರು.

ರೈಲು ಹೊರಡುವ ವೇಳೆಯಾಗುತ್ತಿದ್ದಂತೆ ಓಡಿ ಹೋಗಿ ಹಣ್ಣಿನ ಅಂಗಡಿಯಲ್ಲಿ ಎರಡು ಸೇಬು ಮತ್ತು ಎರಡು ಬಾಳೆ ಹಣ್ಣುಗಳನ್ನು ತೆಗೆದುಕೊಂಡು ಬಂದು ಅಮ್ಮನ ಕೈಗಿತ್ತು, ಸೋಫಾದಂತಹ ಸೀಟಿನಲ್ಲಿ ಒರಗಿ ಕುಳಿತಿದ್ದ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ನನ್ನ ತಲೆಯ ಮೇಲೆ ಕೈಯಿಟ್ಟು ‘ನಲ್ಲ ಇರು ಕಣ್ಣಾ’ ಎಂದು ಹರಸಿದರು. (ತಮಿಳು ಭಾಷೆಯಲ್ಲಿ ಮಕ್ಕಳನ್ನು ಕೃಷ್ಣ ಎಂದು ಸಂಬೋಧಿಸುವುದು ವಾಡಿಕೆ.) ಯಾವ ಕ್ಷಣದಲ್ಲಿ ಆ ತಾಯಿ ನನ್ನನ್ನು ಹರಸಿದರೊ ಕಾಣೆ, ಅಂದಿನಿಂದ ನನ್ನ ಬದುಕು ಸುಸ್ಥಿರವಾಯಿತು.

ನಂತರದ ದಿನಗಳಲ್ಲಿ ಅವರನ್ನು ಬೇಟಿಯಾಗಲಿಲ್ಲ. ಆದರೆ, ಯಾವ ಜನ್ಮದ ಋಣವೋ ಕಾಣೆ ಅವರ ಅಂತಿಮ ದರ್ಶನ ಪಡೆಯುವ ಭಾಗ್ಯವೂ ನನ್ನದಾಯಿತು. 2004 ರಲ್ಲಿ ಚೆನ್ನೈ ನಗರದ ಕೊಟ್ಟುಪುರಂ ನಿವಾಸದಲ್ಲಿ ಅವರು ನಿಧನರಾದ ದಿನ ನಾನು ಉದಯ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಉದಯವಾರ್ತೆ ಸಂಪಾದಕನಾಗಿ ಸನ್ ಟಿ.ವಿ. ನೆಟ್ ವರ್ಕ್ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ.

ಡಿಸಂಬರ್ 12 ರಂದು ಅವರ ನಿವಾಸ ತಲುಪುವ ವೇಳೆಗೆ ಅವರ ಪಾರ್ಥಿವ ಶರೀರವನ್ನು ಹಸಿರು ತೆಂಗಿನ ಗರಿಗಳಿಂದ ಸಿದ್ಧಪಡಿಸಿದ್ದ ಚಟ್ಟದಲ್ಲಿ ಮಲಗಿಸಿ ನಾಲ್ಕು ಮಂದಿ ಹೊತ್ತು ಹೊರಟಿದ್ದರು. ಅವರನ್ನು ನೋಡಿದಾಗ ಕಣ್ಣಾಲಿಗಳು ತುಂಬಿ ಬಂದವು. ಪುಟ್ಟ ಗುಬ್ಬಚ್ಚಿಯೊಂದನ್ನು ಹೂವಿನಿಂದ ಅಲಂಕರಿಸಿ ಹೆಗಲ ಮೇಲಿಟ್ಟುಕೊಂಡು ಹೊತ್ತೊಯ್ಯುತ್ತಿದ್ದಾರೆ ಎಂದು ಆ ಕ್ಷಣಕ್ಕೆ ನನಗನಿಸಿತು. ತೀರಾ ಕೃಶವಾಗಿದ್ದ ಅಮ್ಮನವರ ಮುಖದ ಮೇಲೆ ನೆರಿಗೆ ಮೂಡಿದ್ದವು, ತಲೆಯ ಗುಂಗುರು ಕೂದಲು ಬೆಳ್ಳಗಾಗಿದ್ದವು. ಮುಖದ ಮೇಲಿನ ಮಾಸದ ಮುಗುಳುನಗೆ ಕೂಡ ಅವರ ಕೊನೆಯ ದಿನಗಳಲ್ಲಿ ಅವರಿಂದ ದೂರವಾಗಿದ್ದಂತೆ ಕಂಡು ಬಂತು. ಸದಾ ಕಾಲ ಅವರ ಮುಡಿಯಲ್ಲಿರುತ್ತಿದ್ದ ಮಲ್ಲಿಗೆ ಹೂವು ಆ ದಿನ ಅವರ ದೇಹದ ಮೇಲಿತ್ತು.

release of ms book koppaಒಂದಿಷ್ಟು ಹೊತ್ತು ಭೂಮಿಗೆ ನೆಟ್ಟ ಶಿಲೆಯಂತೆ, ಭಾವ ಶೂನ್ಯನಾಗಿ ನಿಂತಿದ್ದ ನಾನು ಚೇತರಿಸಿಕೊಂಡ ಬಳಿಕ ಮೌಂಟ್ ರಸ್ತೆಯಲ್ಲಿದ್ದ ನಮ್ಮ ಕಛೇರಿಯತ್ತ ತೆರಳಿದೆ. ಹೆತ್ತ ತಾಯಿಯನ್ನು ಕಳೆದು ಕೊಂಡ ಸಂಕಟ ಮತ್ತು ಸೂತಕದ ಭಾವನೆಗಳು ಇಡೀ ದಿನ ನನ್ನನ್ನು ಆವರಿಸಿಕೊಂಡಿದ್ದವು.

ಈ ಕುರಿತು ಮೂರು ವರ್ಷದ ಹಿಂದೆ ನನ್ನ ಫೇಸ್ ಬುಕ್ ಗೋಡೆಯ ಮೇಲೆ ನೆನಪಿನ ಟಿಪ್ಪಣಿಯೊಂದನ್ನು ಬರೆದೆ. ಆ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ನನ್ನಲ್ಲಿ ಅಶ್ಚರ್ಯ ಮೂಡಿಸಿದವು. ಅಮ್ಮನ ಜೀವನ ಚರಿತ್ರೆ ಏಕೆ ಬರೆಯಬಾರದು? ಎಂಬ ಪ್ರಶ್ನೆ ಮನದಲ್ಲಿ ಆ ಕ್ಷಣಕ್ಕೆ ಮೂಡತೊಡಗಿತು.

ಇಂಡಿಯನ್ ಎಕ್ಸ್ ಪ್ರಸ್ ಬಳಗದ ‘ಸಖಿ’ ಪಾಕ್ಷಿಕದ ಸಂಪಾದಕ ಮಿತ್ರ ಡಾ. ವೆಂಕಿ ನನ್ನ ಕನಸಿಗೆ ನೀರೆರೆದು ಧಾರವಾಹಿ ರೂಪದಲ್ಲಿ ಪ್ರಕಟಿಸಲು ಮುಂದೆ ಬಂದರು. ನಂತರ ಎಂ ಎಸ್ ಅಮ್ಮ ಹುಟ್ಟಿ ಬೆಳೆದ ಮಧುರೈ ನಗರಕ್ಕೆ ಎರಡು ಬಾರಿ, ಮತ್ತು ಬದುಕಿ ಬಾಳಿದ ಚೆನ್ನೈ ನಗರಕ್ಕೆ ಎರಡು ಬಾರಿ ತೆರಳಿ ಮಾಹಿತಿ ಸಂಗ್ರಹಿಸಿಕೊಂಡು ಬಂದೆ. ಹಾಗೆ ಸಿದ್ಧವಾದದ್ದು ಈ ‘ಮನದೊಳಗಿನ ಸುಪ್ರಭಾತ’. ಅದು ಅತ್ಯಂತ ಜನಪ್ರಿಯ ಧಾರವಾಹಿಯಾಗಿ ಪ್ರಸಿದ್ಧಿ ಪಡೆಯಿತು. ಸಖಿ ಪತ್ರಿಕೆಗಿಂತ ನನಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು.

ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರ ಇಂಗ್ಲೀಷ್ ಕೃತಿಯನ್ನು ಒಳಗೊಂಡಂತೆ, ಕರ್ನಾಟಕ ಸಂಗೀತ ಇತಿಹಾಸ ಕುರಿತು ಪ್ರಕಟವಾಗಿರುವ ಹಲವಾರು ಇಂಗ್ಲೀಷ್ ಕೃತಿಗಳ ಜೊತೆಗೆ ಚೆನ್ನೈ ನಗರದ ದ ಹಿಂದೂ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಿದ್ದೇನೆ. ತೆರೆದ ಪುಸ್ತಕದಂತೆ ಬದುಕಿದ ಎಂ.ಎಸ್. ಅಮ್ಮನವರನ್ನು ಕುರಿತಂತೆ ತಮಿಳುನಾಡಿನಲ್ಲಿ ಹೇರಳವಾದ ಮಾಹಿತಿಗಳು ಮತ್ತು ಚಿತ್ರಗಳು ಸಿಗುತ್ತವೆ. ಇದು ನಮ್ಮ ಪಾಲಿನ ಪುಣ್ಯ.

ಎಂ.ಎಸ್. ಸುಬ್ಬಲಕ್ಷ್ಮಿಯವರ ಜೀವನ ಮತ್ತು ಸಾಧನೆ ಕುರಿತು ಈ ಕೃತಿ ರಚಿಸಿರುವ ನಾನು ಯಾವುದೇ ಸಂಗೀತಗಾರ ಅಥವಾ ವಿದ್ವಾಂಸರ ಕುಟುಂಬದಿಂದ ಬಂದವನಲ್ಲ.

‍ಲೇಖಕರು admin

10 April, 2016

1 Comment

  1. Shyamala Madhav

    ತುಂಬ ಮನಃಸ್ಪರ್ಶಿ ! ಇನ್ನೀಗ ‘ ಮನದೊಳಗಿನ ಸುಪ್ರಭಾತ ‘ ವನ್ನು ನನ್ನದಾಗಿಸಿ ಕೊಳ್ಳಬೇಕು .
    – ಶ್ಯಾಮಲಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading