ನಾನು ಬುಕ್ ಮಾಡಿದ ಹೋಟೆಲ್ ಇದ್ದದ್ದು ಟಿಂಪುವಿನ ಮುಖ್ಯ ರಸ್ತೆಯಲ್ಲಿ. ಅದು ಸಿಟಿಯ ಮಧ್ಯ ಭಾಗದಲ್ಲಿತ್ತು. ಅದರ ಮುಂದೆಯೇ ಊರಿನ ವಾಚ್ ಟವರ್ ಇದೆ. ಅದು ಜನಗಳು ಕೂಡಿ ಕಲೆಯುವ ಜಾಗ . ನಾನು ರೂಂ ಸೇರಿ ಫ್ರೆಶ್ ಆಗಿ ಊಟ ಮುಗಿಸಿ ಇಳಿ ಮಧ್ಯಾಹ್ನಕ್ಕೆ ಹೋಟೆಲ್ನಿಂದ ಹೊರಗೆ ಬಿದ್ದೆ. ಈ ಹೋಟೆಲ್ ಇಷ್ಟವಾಗಿದ್ದರಿಂದ ಹೊರಗೆ ಹೊರಡುವ ಮೊದಲು ಒಂದು ದಿನಕ್ಕೆ ಮಾತ್ರ ಮಾಡಿದ್ದ ರೂಂ ಬುಕ್ಕಿಂಗ್ನ್ನು ಎರಡನೇ ದಿನಕ್ಕೂ ಹೆಚ್ಚಿಸಿದೆ.
ಮೊದಲು ಹೊರಟದ್ದು ಅವರ ಮೊಬೈಲ್ ಸರ್ವೀಸ್ ನೀಡುವ ಬಿ-ಮೊಬೈಲ್ ಸರ್ವೀಸಸ್ಗೆ. ಇದು ನಮ್ಮ ಬಿಎಸೆನ್ಎಲ್ ತರಹ. ಹೋಟೆಲ್ ರಿಸೆಪ್ಷನ್ನಲ್ಲಿ ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಳ್ಳಲು ಸೂಚಿಸಿದಾದರೂ ನನಗೆ ನಡೆಯೋದು ತುಂಬಾ ಇಷ್ಟ ಆಗಿದ್ದುದರಿಂದ ನಡೆದೇ ಹೋದೆ. ಹೊಸ ಸ್ಥಳಗಳಲ್ಲಿ ನಡೆದು ತಿರುಗಾಡಿದರೆ ಆ ಜಾಗ ಆಪ್ತವಾಗುವುದಲ್ಲದೆ ನಾವು ಆ ನೆಲದ ಜತೆ ಕನೆಕ್ಟ್ ಆಗಬಹುದು.
ನಮ್ಮ ಪಾಸ್ಪೋರ್ಟ್ ಪ್ರತಿ ನೀಡಿ 50 ರೂ ಕೊಟ್ಟರೆ ಸಿಮ್ ಸಿಗುತ್ತೆ. 10 ನಿಮಿಷದ ಕೆಲಸ ಅದು. ಅದಕ್ಕೆ 500 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡ ಮೇಲೆ ಎಲ್ಲರ ಜೊತೆ ಮಾತನಾಡಬಹುದಾದ್ದರಿಂದ ಏನೋ ಬಲ ಬಂದ ಹಾಗೆ ಆಯ್ತು. ಹಿಂದೊಮ್ಮೆ ಇಂಟರ್ನ್ಯಾಷನಲ್ ರೋಮಿಂಗ್ನಲ್ಲಿ ನನ್ನ ಮೊಬೈಲ್ ಬಿಲ್ಲು 28,000 ರೂ. ಬಂದು ಮಹಾಮೂರ್ಖಳಾದಾಗಿನಿಂದ ರೋಮಿಂಗ್ ಬಳಸದೆ ಲೋಕಲ್ ಸಿಮ್ ಬಳಸೋ ಪಾಠ ಕಲಿತೆ.
ಇನ್ನೇನು ನಿಗದಿತ ಪ್ಲಾನ್ ಇಲ್ಲದುದರಿಂದ ಹಾಗೇ ಅಡ್ಡಾಡತೊಡಗಿದೆ. ಟೆಲಿಫೋನ್ ಆಫೀಸ್ ಪಕ್ಕದಲ್ಲೇ ಇತ್ತು ತರಕಾರಿ ಮಾರ್ಕೆಟ್. ದೊಡ್ಡ ಹಾಲ್ನ ಬೇರೆಬೇರೆ ಭಾಗ ಮಾಡಿ ವ್ಯವಸ್ಥಿತವಾಗಿ ಜೋಡಿಸಿಟ್ಟ ಮಾರುಕಟ್ಟೆ ಅದು. ಹೈನು,ಮೀನು,ಮಾಂಸ, ಹಣ್ಣು-ತರಕಾರಿಗಳು ಎಲ್ಲದಕ್ಕೂ ಬೇರೆ ಬೇರೆ ವಿಭಾಗಗಳು. ಅಲ್ಲಿ ಮುಖ್ಯವಾಗಿ ಕಂಡ ಎರಡು ಐಟಂ ಎಂದರೆ ಮೆಣಸಿನ ಕಾಯಿ(ಏಮ) ಮತ್ತು ಹಸಿ ಅಡಿಕೆ(ದೋಮಾ). ನಮ್ಮ ಹಾಗೆ ಒಣ ಅಡಿಕೆಯೂ ಸಿಗುತ್ತದೆ. ಆದರೆ ಈ ಹಸಿಅಡಿಕೆ ಮತ್ತದರ ಘಮ ಊರ ತುಂಬೆಲ್ಲಾ. ಎಲೆ ಅಡಿಕೆ ಜಗಿಯೋದು ಇಲ್ಲಿ ಸರ್ವೇ ಸಾಮಾನ್ಯ. ಆ ವಾಸನೆ ಸಹಿಸಿಕೊಳ್ಳೋದು ಬಲುಕಷ್ಟವಾಯಿತು.
ಈ ದೋಮಾ ಬಗ್ಗೆ ಅವರಲ್ಲಿ ಒಂದು ಕತೆ ಇದೆ. ಬಹಳ ಹಿಂದೆ ಭೂತಾನೀಯರು ಮಾಂಸಭಕ್ಷಕರಾಗಿದ್ದರಂತೆ.16ನೇ ಶತಮಾನದಲ್ಲಿ ಬಂದ ಶಬ್ರದುಂಗ್ ಎಂಬ ಸಾಧು ಅವರನ್ನು ಮಾಂಸಭಕ್ಷಣೆಯಿಂದ ಬಿಡಿಸಲು ಅವರಿಗೆ ದೋಮಾ ಪರಿಚಯಿಸಿದ. ಮಾಂಸದ ಬದಲು ಎಲೆ, ಮೆದುಳಿನ ಬದಲಿಗೆ ಅಡಿಕೆ, ಮೂಳೆಗಳ ಬದಲಿಗೆ ಸುಣ್ಣ ಹಾಗೂ ಇವು ಮೂರರಿಂದ ಬರೋ ಕೆಂಪು ರಸ, ರಕ್ತದಾಹವನ್ನು ತಣಿಸುತ್ತದಂತೆ. ರಸ್ತೆಯ ಮೇಲೆಲ್ಲ ಕೆಂಪು ರಸ.ಒಟ್ಟಿನಲ್ಲಿ ನಮ್ಮಲ್ಲಿ ಪಾನ್ ಹಾಕೋರಿಂದ ಆಗುವ ಹಾಗೆ ಅಲ್ಲೂನು ಕೆಂಪಾದವೋ ಎಲ್ಲಾ ಕೆಂಪಾದವೋ……
ಇನ್ನು ಮೆಣಸಿನಕಾಯಿ.ಇದೊಂದು ತರಹ ಭೂತಾನಿನ ರಾಷ್ಟ್ರೀಯ ತರಕಾರಿ ಅನ್ನಬಹುದು. ನಮ್ಮ ಹಾಗೆ ಇದು ಊಟದಲ್ಲಿ ಖಾರಕ್ಕೆ ಅಂತ ಬಳಸೋ ಒಗ್ಗರಣೆ ಪದಾರ್ಥ ಅಲ್ಲ. ಅವರು ಅದನ್ನು ತರಕಾರಿಯ ಹಾಗೆ ಬಳಸ್ತಾರೆ. ಏಮಾ ದಶಿ(ಚೀಸ್ ಮೆಣಸಿನಕಾಯಿ) ಅವರ ದಿನಿತ್ಯದ ಆಹಾರ.ಅಸಲಿ ಏಮಾದಶಿ ಯಾಕ್ ಪ್ರಾಣಿಯ ಚೀಸ್ ಜತೆ ತಯಾರುಸುತ್ತಾರೆ.ಭಾನುವಾರದ ತರಕಾರಿ ಮಾರುಕಟ್ಟೆಯಿಂದ ಹೋಗ್ತಿದ್ದವರ ಕೈತುಂಬ ಕೇಜಿಗಟ್ಟಲೆ ಇದೇ ಮೆಣಸಿನಕಾಯಿ.
ದೋಮಾದ ಪರಿಮಳದಿಂದ ಆಚೆ ಬಂದಾಗ ದೇವಸ್ಥಾನದ ತರಹ ಒಂದು ಕಟ್ಟಡ ಕಾಣಿಸ್ತು. ಅಲ್ಲೇ ಯಾರನ್ನೋ ಅದೇನು ಅಂದ್ರೆ ಅವರು ಶಾಪಿಂಗ್ ಮಾಲ್ ಅಂದ್ರು. ಖುಷಿಯಾಗಿ ಅಲ್ಲಿಗೆ ಹೋದೆ.ದೇವಸ್ಥಾನದ ಹಾಗೆ ಕಾಣುತ್ತಿದ್ದ ಕಟ್ಟಡ ಸೇತುವೆಯಾಗಿತ್ತು.ಅದರಾಚೆಗೆ ಮೆಟ್ಟಿಲಿಳಿದರೆ ಭಾನುವಾರ, ಶುಕ್ರವಾರ ಮಾತ್ರ ತರೆಯುವ ಬಜಾರ್.ನೂರೆಂಟು ಬಟ್ಟೆಗಳ ಮಳಿಗೆಗಳು. ಅಲ್ಲಿ ಕೀರಾ, ಟೇಗೋ ಹಾಗೂ ಘೋ ಅಲ್ಲದೆ ಉಲ್ಲನ್ ಬಟ್ಟೆಗಳಿದ್ದವು. ಕೀರಾ ಮತ್ತು ಟೇಗೋ ಹೆಣ್ಣುಮಕ್ಕಳ ರಾಷ್ಟ್ರೀಯ ಉಡುಪು. ಕೀರಾ ಒಂದು ತರಹ ಸ್ಕರ್ಟ. ಸೊಂಟದ ಸುತ್ತ ಸುತ್ತಿಕೊಂಡು ಪಿನ್ ಹಾಕುತ್ತಾರೆ. ಟೇಗೋ ಓವರ್ ಕೋಟಿನಂತಹುದು. ಘೋ ಪುರುಷರ ಉಡುಪು.ಇದು ಮಂಡಿಯ ತನಕ ಬರುವ ನಿಲುವಂಗಿ. ಸೊಂಟದ ಸುತ್ತ ಕೇರ ವನ್ನು ಸುತ್ತಿಕೊಳ್ಳುತ್ತಾರೆ. ಹಬ್ಬಗಳ ದಿನ ಹಾಗು ಝಾಂಗ್ ಗೆ ಹೋಗುವಾಗ ಕಬ್ನೆ ಎನ್ನುವ ಮೇಲು ಹೊದಿಕೆಯನ್ನು ಹಾಕಿಕೊಳ್ಳುತ್ತಾರೆ. ಬಜಾರಿನ ಉದ್ದಗಲಕ್ಕೂ ಅಡ್ಡಾಡಿ ಬಂದು ಒಂದು ಕಡೆ ಚೌಕಾಶಿ ಮಾಡಿ ನನಗೆ ಮತ್ತು ಮಗಳಿಗೆ ಟೇಗೋ ಖರೀದಿಸಿದೆ. ನಾನು ಕೇಳಿದ ಬೆಲೆಗೆ ಕೀರಾ ಬರದಿದ್ದದರಿಂದ ಕೊಳ್ಳದೆ ಹಾಗೆ ಬಿಟ್ಟೆ. ಆಮೇಲೆ ಯಾವ ಅಂಗಡಿಯಲ್ಲಿ ಕೇಳಿದರೂ ಬೆಲೆ ಹೆಚ್ಚೇ ಇದ್ದುದರಿಂದ ಪೇಚಾಡಿಕೊಂಡೆ.
ದಾರಿಯಲ್ಲಿ ಬರುವಾಗ ಒಂದಷ್ಟು ಹುಡುಗ ಹುಡುಗಿಯರು ಚುರುಮುರಿ ತಿಂತಾ ಇದ್ದದ್ದು ನೋಡಿ ಬಾಯಲ್ಲಿ ನೀರು ಸುರಿದು,ಅಲ್ಲೆಲ್ಲಾ ಸುತ್ತಮುತ್ತಾ ಚುರುಮುರಿ ಅಂಗಡಿ ಹುಡುಕಿದೆ. ಅದು ಮೊದಲು ಸಿಕ್ಕಲಿಲ್ಲ. ಆಮೇಲೆ ಕಣ್ಣಿಗೆ ಬಿತ್ತು ಓಣಿಯ ಕೊನೆಯಲ್ಲಿರುವ ಪುಟ್ಟ ಅಂಗಡಿ. ಒಂದು ಚುರುಮುರಿ ಕೊಂಡು ವಾಚ್ಟವರ್ನ ಮುಂದಿನ ಬೆಂಚಿನಲ್ಲಿ ಕೂತು ಬಾಯಿಗಿಟ್ಟೆ.ಹೋದ ಹಾಗೇನೇ ಬಾಯಿಂದ ವಾಪಸ್ ಬಂತು.ಅದೇನು ಅದಕ್ಕೆ ಹಾಕಿದ್ದರೋ ಮತ್ತೆ ಬಾಯಿ ಸರಿ ಪಡಿಸಿಕೊಳ್ಳೋದಕ್ಕೆ ನನ್ನ ಸ್ವೆಟರ್ನ ಬಾಯಿಗೆ ಹಾಕಿ ತೀಡಿ, ನೀರು ಹಾಕಿ ಬಾಯಿ ಮುಕ್ಕಳಿಸಿದರೂ ಅದರ ಕೆಟ್ಟ ರುಚಿ ಬಾಯಿಂದ ಹೋಗಲಿಲ್ಲ.
ಇಲ್ಲಿನ ಯಾವ ಅಂಗಡಿಗೆ ಹೋದರೂ ಕಾಣುವ ಹಾಗೆ ಭೂತಾನಿನ ರಾಜ ರಾಣಿಯ ಸುಂದರ ಭಾವಚಿತ್ರ ನೇತು ಹಾಕಿರುತ್ತಿದ್ದರು. ಅಂಗಡಿ, ಬ್ಯಾಂಕ್, ದೊಡ್ಡ ದೊಡ್ಡ ಕಟ್ಟಡ ಎಲ್ಲ ಕಡೆ ಅವರ ಭಾವಚಿತ್ರ ಕಾಣಬರುತ್ತದೆ. ವಾಂಗ್ ಚುಕ್ ವಂಶದ ಐದನೇ ರಾಜನಾದ ಜಿಗ್ಮೆ ನಾಮ್ಗುಲ್ ವಾಂಗ್ಚುಕ್ ಅವರ ಈಗಿನ ರಾಜ.ವಿಮಾನ ನಿಲ್ದಾಣದಲ್ಲಿ ಕಂಡ ಬೃಹತ್ ಪೋಸ್ಟರ್ ನೋಡಿ ಯಾರೋ ಮಾಡೆಲ್ಗಳು ಅಂತ ತಿಳಿದಿದ್ದೆ.ಊರನ್ನು ಪ್ರವೇಶೀಸಿದ ಮೇಲೆನೇ ಗೊತ್ತಾಗಿದ್ದು ಅವರು ರಾಜ ರಾಣಿ ಅಂತ. ರಾಣಿ ರಾಜವಂಶದಿಂದ ಬಂದವಳಲ್ಲ.ಸಾಮಾನ್ಯ ಮನೆಯಿಂದ ಬಂದ ಜತ್ಸನ್ ಪೇಮ ಎಂಬಾಕೆಯನ್ನು ರಾಜ ವರಿಸಿದ್ದಾನೆ.ಆಕ್ಸಫರ್ಡ್ ವಿದ್ಯಾಭ್ಯಾಸ ಮುಗಿಸಿರುವ ಈ ರಾಜನ ಮೇಲೆ ಜನರಿಗೆ ಬಹಳ ಹೆಮ್ಮೆ. ಇವರ ರಾಯಲ್ ಮದುವೆ ದೇಶ ಕಂಡ ಅತ್ಯಂತ ಸಡಗರದ ಘಟನೆ.ಈ ಮದುವೆಗೆ ಅಲ್ಲಿನ ಸಾರ್ವಜನಿಕರಿಗೆ ಸ್ವಾಗತವಿತ್ತು.
ಭೂತಾನಿನ ಈಗಿನ ರಾಜ ರಾಜಾಡಳಿತ ಹಿನ್ನೆಲೆಯಿಂದ ಬಂದರೂ ಪ್ರಜಾಪ್ರಭುತ್ವದಲ್ಲಿ ಆಸಕ್ತಿ ಹೊಂದಿದ್ದಾನೆ. 2008ರಲ್ಲಿ ಇಲ್ಲಿ ಸರ್ಕಾರದ ಆಯ್ಕೆಗಾಗಿ ಚುನಾವಣೆ ನಡೀತು.ಇದೇ ಈ ದೇಶದಲ್ಲಿ ನಡೆದ ಮೊದಲ ಚುನಾವಣೆ.ಇಲ್ಲಿ ಚುನಾವಣೆಗೆ ಒಂದು ಪ್ರದೇಶದಿಂದ ಒಬ್ಬನೇ ಸ್ಪರ್ಧಿಸಿದ್ದರೂ ಅಲ್ಲಿ ಕೂಡ ಚುನಾವಣೆ ನಡೆಸುತ್ತಾರೆ, ಜನ ಅವನನ್ನು ತಿರಸ್ಕರಿಸಿ ಸೋಲಿಸಬಹುದಂತೆ!
ಕತ್ತಲೆ ಆದಂತೆ ಚಳಿ ಜಾಸ್ತಿ ಆಗ್ತಾ ಇತ್ತು. ಹಸಿವೂ ಆಗತೊಡಗಿತ್ತು. ಮತ್ತೆ ಹೋಟಲ್ ಕಡೆಗೆ ನಡೆದುಕೊಂಡು ಬರುವಾಗ ಸಂಜೆ ಆವರಿಸಿತ್ತು.
( ಚಿತ್ರಗಳು – ಲೇಖಕರವು)
(ಮುಂದುವರಿಯುದು…)
0 ಪ್ರತಿಕ್ರಿಯೆಗಳು
Trackbacks/Pingbacks