
ಚಂದ್ರಪ್ರಭ ಕಠಾರಿ
ನನ್ನ ಮೊದಲ ಕಥಾ ಸಂಕಲನ ‘ಕಠಾರಿ ಕಥೆಗಳು’ ಬಿಡುಗಡೆಯಾಗಿದ್ದು ಸುಮಾರು ಎಂಟು ವರುಷಗಳ ಹಿಂದೆ. ಆಗ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಥಾ ಸಂಕಲನವನ್ನು ಪರಿಚಯ ಮಾಡಿಕೊಟ್ಟಿದ್ದ ಡಾ. ಪದ್ಮಿನಿ ನಾಗರಾಜು ಅವರು, ಆಗಿನಿಂದಲೂ ಸಾಹಿತ್ಯ ಸಂಗಾತಿಗಳು. ಏನೇ ಬರೆದರೂ ಓದಿ ಮೆಚ್ಚುಗೆ ಮಾತ್ರವಲ್ಲದೆ ವಿಮರ್ಶಿಸಿ, ತಿದ್ದುಪಡಿ ಸೂಚಿಸುವವರು.
ಕಳೆದ ವರ್ಷ ಏಪ್ರಿಲ್ ನಲ್ಲಿ ಕೊರೊನಾಗೆ ಶ್ರದ್ಧಾಂಜಲಿ ಎಂಬ ಕವನವನ್ನು ಬರೆದು ಹಂಚಿಕೊಂಡಿದ್ದೆ. ಕವನದ ಬಗ್ಗೆ ಮಾತಾಡಿ, ತಿದ್ದುಪಡಿ ಸೂಚಿಸುತ್ತ ‘ನೀವ್ಯಾಕೆ ಬರೀತಿಲ್ಲ?’ ಎಂದು, ಹೋಮ್ ವರ್ಕ್ ಮಾಡದ ವಿದ್ಯಾರ್ಥಿಯ ಕಿವಿ ಹಿಂಡಿ ದಂಡಿಸುವ ಟೀಚರಿನಂತೆ ನನ್ನನ್ನು ಬರೆಯಲು ಹಚ್ಚಿದರು. ಅವರ ಒತ್ತಾಸೆಯಿಂದ, ‘ಕಾಗೆ ಮೋಕ್ಷ’ – ಕಥಾ ಸಂಕಲನ ಮತ್ತು ‘ಅಗೋಚರ ಕೈ’ ನನ್ನ ಎರಡು ಪುಸ್ತಕಗಳು, ಮೊನ್ನೆ ಅಂದರೆ ಏಪ್ರಿಲ್ ಹದಿನೆಂಟರಂದು ಬನಶಂಕರಿಯ ಸುಚಿತ್ರಾ ಫಿಲಮ್ ಸೊಸೈಟಿಯಲ್ಲಿ ಲೋಕಾರ್ಪಣೆಗೊಂಡಿತು.
ಖ್ಯಾತ ಕವಿಗಳು ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಿ ‘ಒಂದು ಪಾತ್ರದ ಮೂಲಕ ಓದುಗರ ಮನದಲ್ಲಿ ಅನೇಕ ತದ್ರೂಪಿ ಪಾತ್ರಗಳು ಪ್ರತಿಫಲಿಸುವಂತಹ ಕತೆಗಳನ್ನು ಕತೆಗಾರ ಹೆಣೆದಿದ್ದಾರೆ. ತನ್ನ ಕಾಲದ ಸತ್ಯವನ್ನು ಹೇಳುವ ಗುಣರೂಪಕವಾಗಿ ಕಾವ್ಯಗಳನ್ನು ರಚಿಸಿದ್ದಾರೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆಯ ಭಾಷಣದಲ್ಲಿ ಮಾತಾಡಿದರು.

ವಿಮರ್ಶಕರು, ನಾಟಕಕಾರರಾದ ಡಾ. ನಟರಾಜ ತಲಘಟ್ಟಪುರ ಅವರು ಕಾಗೆ ಮೋಕ್ಷ – ಕಥಾ ಸಂಕಲನದ ಕತೆಗಳ ಬಗ್ಗೆ ಮಾತಾಡುತ್ತ ‘ಯಾವುದೇ ಇಸಂಗಳಿಗೆ ಒಳಗಾಗದೆ, ರೋಚಕತೆ ಇಲ್ಲದ ಒಂದು ಸಂಯಮದಿಂದ ವ್ಯವಧಾನದೊಂದಿಗೆ ರಚಿತವಾದ ಕತೆಗಳು’ ಎಂದು ಹೇಳಿದರು.
ಕವಯತ್ರಿ ಮಮತಾ ಅರಸೀಕೆರೆಯವರು ಅಗೋಚರ ಕೈ-ಕವನಗಳನ್ನು ಪರಿಚಯ ಮಾಡುತ್ತ ‘ವ್ಯವಸ್ಥೆಯ ಕುರಿತಾದ ಹೇವರಿಕೆಯನ್ನು- ದಿಟ್ಟತನ, ಪ್ರತಿರೋಧ, ನಿರ್ಭೀಡೆ ಮತ್ತು ಜವಾಬ್ದಾರಿಯುತವಾಗಿ ರಚಿಸಿದ ಕವನಗಳು’ ಎಂಬ ಮಾತುಗಳನ್ನು ಆಡಿದರು.
ಚಿತ್ರ ನಿರ್ದೇಶಕ ರಾಘವೇಂದ್ರ ಪ್ರಸಾದ್ ಅವರು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಸಭೆಗೆ ನಾಂದಿ ಹೇಳಿದರು. ಕತೆಗಾರ ಶ್ರೀಕಾಂತ ಬೇಲೂರು ಸ್ವಾಗತ ಭಾಷಣ ಮಾಡಿದರು. ಕುಮಾರಿ ಧವಳ ಚಂದ್ರಿಕಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಕುಮಾರಿ ಮಯೂಖ ಕಠಾರಿ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ಚಿತ್ರ ನಿರ್ದೇಶಕ ಬಿ.ಸುರೇಶ್, ಡಾ. ಪದ್ಮಿನಿ ನಾಗರಾಜು, ಸಿನಿಮಾ ವಿರ್ಮಶಕ ಮ ಶ್ರೀ ಮುರಳಿಕೃಷ್ಣ, ಪತ್ರಕರ್ತ ಕುಮಾರ ರೈತ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.









Chandraphabh Avare, All the very best for the books and wish you shall write many more and release.
ಧನ್ಯವಾದಗಳು… ನಿಮ್ಮ ಪ್ರೋತ್ಸಾಹದ ಮಾತುಗಳಿಗೆ…