ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊರ ‘ಉಸಾಬರಿ’ ಎಂಬ ಸಾಮಾಜಿಕ ಬದ್ಧತೆ

ಎಚ್.ಆರ್. ರಮೇಶ

ಪ್ರತಿಯೊಂದು ಕಾಲಘಟ್ಟವೂ ತನ್ನದೇ ಆದಂತಹ ಸವಾಲುಗಳನ್ನು ಎದುರಿಸುತ್ತಿರುತ್ತದೆ. ಹಾಗೂ, ಪ್ರಭುತ್ವ ಮತ್ತು ಮನುಷ್ಯರ ನಡುವೆ ವಾಗ್ವಾದ, ವಿರೋಧ ಇದ್ದದ್ದೇ. ಪ್ರಜಾಸತ್ತಾತ್ಮಕ ಸರ್ಕಾರ ಮತ್ತು ಸಮಾಜಗಳಲ್ಲಂತೂ ಇವು ಅತಿ ಅವಶ್ಯಕ. ‘ವಿರೋಧ’ ಪ್ರಜಾಪ್ರಭುತ್ವದ ಬ್ಯೂಟಿಯೆಂದೇ ಹೇಳಬಹುದು. ‘ಪೊಲಿಟಿಕ್ಸ್’ ಎಂದು ನಾವು ಏನನ್ನು ಕರೆಯುತ್ತೇವೆಯೋ ಅದು ಇಂದು ತನ್ನ ಅರ್ಥವನ್ನು ಸೀಮಿತಗೊಳಿಸಿಕೊಂಡಿದೆ. ಮತ್ತು ಸಾಮಾನ್ಯ ಮನುಷ್ಯರನ್ನು ದೂರವೇ ಇಟ್ಟು, ಅದರ ಮೂಲ ಸೆಲೆಯಾದ ಅಭಿವೃದ್ಧಿ, ಸಮಾನತೆ ಮತ್ತು ಸಾಮಾಜಿಕ ಬದುಕಿನ ಸುಧಾರಣೆಗಳ ಬಗ್ಗೆ ಕಾಳಜಿವಹಿಸದೆ ಅದಕ್ಕೆ ತದ್ವಿರುದ್ಧವಾಗಿ ಅದನ್ನು ಕುರೂಪಗೊಳಿಸಲಾಗಿದೆ.

ಒಮ್ಮೆ ನಾವು ಮತವನ್ನು ಚಲಾಯಿಸೆದೆವು ಎಂದರೆ ಅಧಿಕೃತವಾಗಿ ರಾಜಕೀಯ ಮತ್ತು ಸರ್ಕಾರದಲ್ಲಿ ಪಾಲ್ಗೊಳ್ಳುವಿಕೆಯನ್ನು ಪ್ರಾರಂಭಿಸಿದಂತೆ. ಈ ‘ಪಾಲ್ಗೊಳ್ಳುವಿಕೆ’ ಎಂದರೆ ಅಲ್ಲಿ ಪ್ರಶ್ನೆ, ಸಂವಾದ ಮತ್ತು ವಿರೋಧಗಳು ಸಾಮಾನ್ಯ. ಆದರೆ ಇಂದು ಆಗುತ್ತಿರುವುದು ಈ ಮೂರನ್ನು ಕಡೆಗಣಿಸುತ್ತಿರುವುದು ಮತ್ತು ಅವುಗಳಿಗೆ ಆಸ್ಪದವನ್ನೇ ಕೊಡದಿರುವುದು. ಇದನ್ನು ಪ್ರಭುತ್ವ ತುಂಬಾ ವ್ಯವಸ್ಥಿತವಾಗಿ ಮತ್ತು ಅಧಿಕಾರವನ್ನು ಬಳಸಿಕೊಂಡು ಹತ್ತಿಕ್ಕುತ್ತಿರುವುದನ್ನು ಕಾಣಬಹುದಾಗಿದೆ.

‘ಪ್ರಶ್ನೆಕೇಳುವ ಬಾಯಿ’ಗಳನ್ನು ಮುಚ್ಚಿಸುತ್ತಿರುವುದು ಒಂದು ಕಡೆಯಾದರೆ, ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿದ್ದರೂ ‘ಕಂಫರ್ಟ್ ಝೋನ್’ಗಳಲ್ಲಿ ನಮಗೆ ಏಕೆ ಊರಿನ ‘ಉಸಾಬರಿ’ಎಂದು ಆರಾಮಾಗಿ ಇರುವುದು ಮತ್ತೊಂದು ಕಡೆ. ಮನುಷ್ಯ ಒಂದು ನಾಗರೀಕತೆಯಲ್ಲಿ ಬದುಕುತ್ತಿದ್ದಾನೆಂದರೆ ಅವನು ಏಕಕಾಲಕ್ಕೆ ‘ವೈಯಕ್ತಿಕ’ ಮತ್ತು ‘ಸಾಮಾಜಿಕ’ ಜೀವಿ. ಹಾಗಾಗಿ ಸಾಮಾಜಿಕ ಬದ್ಧತೆ ಸ್ವಾಭಾವಿಕವಾಗಿಯೇ ಇರುತ್ತದೆ. ಆದರೆ ಸ್ವಹಿತಾಸಕ್ತಿಗಳಿಂದಾಗಿಯೋ, ಧಾರ್ಮಿಕ-ಜಾತಿ ಕಾರಣಗಳಿಂದಾಗಿ ಯಾವ ‘ಉಸಾಬರಿ’ಗೂ ಹೋಗದೆ ಜಾಣ ಕುರುಡರಂತೆ, ಕಿವುಡರಂತೆ ಇರುವುದು ಸೋಗಲಾಡಿತನ ಮತ್ತು ಆತ್ಮವಂಚನೆ.

‘ಮಾಹಿತಿ ಹಕ್ಕು’ ಮತ್ತು ‘ಉದ್ಯೋಗ ಖಾತ್ರಿ’ಯೋಜನೆಗಳ ಹಿಂದಿ ಅವಿರತ ಶ್ರಮಿಸಿದ ಅರುಣ ರಾಯ್ ತಮ್ಮ ಒಂದು ಬರಹದಲ್ಲಿ ಹೀಗೆ ಹೇಳುತ್ತಾರೆ: Democracy gives us all a right to act. Many of us are in fact denied the right to act, because of caste, class or religious and gender prejudices. Others who can, do not act. They neither perceive their role nor even think of a social agenda.

ಈ ‘ಊರ ಉಸಾಬರಿ’ಯಲ್ಲಿಯೇ ನಮ್ಮ ಹೊಣೆಗಾರಿಕೆ, ಬದ್ಧತೆಗಳಿರುವುದು. ಅದನ್ನು ಅನೇಕ ಬಗೆಯಲ್ಲಿ ವ್ಯಕ್ತಪಡಿಸಲು ಸಾಧ್ಯತೆಗಳಿವೆ. ಕಲೆಯಿಂದ, ಸಾಹಿತ್ಯದಿಂದ ಮತ್ತು ಕೆಲಸದಿಂದ. ಮುಖ್ಯವಾಗಿ ಪತ್ರಕೋದ್ಯಮಕ್ಕಂತೂ ಇದು ಸ್ಥಾಯಿಭಾವವಾಗಿ ಬೇಕೇ ಬೇಕು. ಆದರೆ ಇವೊತ್ತು ಆಗುತ್ತಿರುವುದು ಇದಕ್ಕ ಉಲ್ಟಾ. ಈ ‘ಉಸಾಬರಿ’ಗೆ ನೈತಿಕ ಶಕ್ತಿ ಮತ್ತು ಎದೆಗಾರಿಕೆ ಬೇಕು. ಇದನ್ನು ಹತ್ತಿಕ್ಕಲು ಪ್ರಭುತ್ವದಲ್ಲಿ ‘ಅಧಿಕಾರ’ ಸದಾ ಸನ್ನದ್ದವಾಗಿರುತ್ತದೆ. ಆದರೆ ಸಾಕ್ರೆಟಿಸ್ ನಂಥವರು ‘ಊರಿನ ಉಸಾಬರಿ’ಗೆ ಹೋಗಿ ತಮ್ಮ ಜೀವವನ್ನೇ ಬಲಿಕೊಡಬೇಕಾಯಿತು. ಈ ‘ಉಸಾಬರಿ’ಯಿಂದಾಗಿ ಅನೇಕ ಮಹನೀಯರು ಎಷ್ಟೆಲ್ಲಾ ಪಾಡು ಪಟ್ಟಿದ್ದಾರೆ, ನೊಂದುಕೊಂಡಿದ್ದಾರೆ ಎಂಬುದನ್ನು ಚರಿತ್ರೆ ಓದಿದ ಯಾರಿಗಾದರೂ ಮನವರಿಕೆಯಾಗುತ್ತದೆ.

ಇಂತಹ ಸಾಮಾಜಿಕೆ ಕಳಕಳಿ ಮತ್ತು ಬದ್ಧತೆಗಳಿರುವ ‘ಉಸಾಬರಿ’ಎನ್ನುವ ಶೀರ್ಷಿಕೆಯನ್ನು ಇಟ್ಟುಕೊಂಡು ಪತ್ರಕರ್ತ ಎನ್.ಎಸ್. ಶಂಕರ್ ಅವರು, ಸಮಕಾಲೀನ ತಲ್ಲಣಗಳಿಗೆ ತಮ್ಮ ಬರಹಗಳ ಮೂಲಕ ಪ್ರತಿಸ್ಪಂದಿಸಿ ಬರೆದ ಬರಹಗಳನ್ನು ಪುಸ್ತಕರೂಪದಲ್ಲಿ ತಂದಿದ್ದು, ಅದು ಹೆಚ್ಚು ಚರ್ಚಿಯಲ್ಲಿರುವುದು ಖುಷಿಯ ಸಂಗತಿ.

ಲಂಕೇಶರಿಂದಲೇ ಕಲಿತ ನೇರವಾಗಿ ಟೀಕಿಸುವ, ಮೊನಚಾದ ವ್ಯಂಗ್ಯದಿಂದ ತಿವಿಯುವ, ಮೆಚ್ಚುವ ಸಂಗತಿಗಳನ್ನು ನಿರುತ್ಸಾಹದಿಂದ ಮೆಚ್ಚುವ ಗುಣಗಳು ಎನ್.ಎಸ್. ಶಂಕರ್ ಅವರ ಇಲ್ಲಿನ ಬರಹಗಳಲ್ಲಿ ಕಾಣಬಹುದು. ಇದು ಈ ಬರಹಗಳ ವಿಶೇಷ. ಮತ್ತು ಟ್ರೇಡ್ ಮಾರ್ಕ್! ಆದರೆ ಇಲ್ಲಿನ ಬರಹಗಳ ಹಿಂದೆ ಒಂದು ನಿಷ್ಪಕ್ಷಪಾತವಾದ, ನಿರ್ಮಲವಾದ ಮನಸ್ಸು ಜಗತ್ತಿನ ಶ್ರೇಷ್ಟ ಚಿಂತನೆಗಳ ಮುಖ್ಯವಾಗಿ ಗಾಂಧಿ, ಅಂಬೇಡ್ಕರ್, ಟಾಲ್‌ಸ್ಟಾಯ್, ಲಂಕೇಶ್, ಲೋಹಿಯ, ದೇವನೂರು ಮಹಾದೇವ ಅವರ ವಿಚಾರ ಧಾರೆಗಳ ದಟ್ಟ ಪ್ರಭಾವವಿರುವುದನ್ನು ಕಾಣಬಹುದು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಕೇವಲ ಅವರ ಚಿಂತನೆಗಳನ್ನು ಉದಾಹರಿಸುವುದಕ್ಕಷ್ಟೇ ಸೀಮಿತಗೊಳಿಸದೆ, ಅವನ್ನು ಮತ್ತು ಅವರನ್ನು ತಮ್ಮ ಸೂಕ್ಷ್ಮವಾದ ಒಳನೋಟಗಳ ಮೂಲಕ ವಿಮರ್ಶೆಯ ಒರೆಗಲ್ಲಿಗೆ ಹಚ್ಚುತ್ತಾರೆ. ಇದು ಅವರ ಸೋಪಜ್ಞತೆ ಮತ್ತು ಸ್ವಂತಿಕೆ. ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ, ಚಳವಳಿಗಳು ಮತ್ತು ಜ್ವಲಂತ ಸಮಸ್ಯೆಗಳನ್ನು ಕುರಿತು ಇರುವ ಈ ಬರಹಗಳನ್ನು ‘ದಾರಿ ತಪ್ಪಿರುವ’ ಮತ್ತು ‘ತಪ್ಪುತ್ತಿರುವ ಯುವಜನತೆ’ ಓದಬೇಕಾಗಿರುವ ಮತ್ತು ಓದಿ, ದೇಶದ ಸಂವಿದಾನದ ತಳಪಾಯವಾದ ‘ಜಾತ್ಯಾತೀತತೆ’ ಮತ್ತು ‘ಪ್ರಜಾಸತ್ತಾತ್ಮಕ’ ಮೌಲ್ಯಗಳನ್ನು ಎತ್ತಿಹಿಡಿಯುವ ಸಾಮಾಜಿಕ ಜವಾಬ್ದಾರಿಯನ್ನು ಇಟ್ಟುಕೊಳ್ಳುವ ಜರೂರು ಇದೆ.

ಮೊದಲ ಮೂರು ಅಧ್ಯಾಯಗಳಲ್ಲಿ ಸಾಹಿತ್ಯವನ್ನು ಕುರಿತಾಗಿ ಗಂಭೀರವಾಗಿ ಚರ್ಚೆಮಾಡಲಾಗಿದೆ. ಲಂಕೇಶ್ ಮತ್ತು ಡಿ.ಆರ್. ನಾಗರಾಜರ ಕುರಿತು ನಟರಾಜ ಹುಳಿಯಾರರ ‘ಇಂತಿ ನಮಸ್ಕಾರಗಳು’, ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಮತ್ತು ಚಿತ್ತಾಲರ ‘ಶಿಕಾರಿ’ ಕೃತಿಗಳ ಕುರಿತು ವಿಸ್ತೃತವಾಗಿ ಮತ್ತು ವಿಮರ್ಶಾತ್ಮಕವಾಗಿ ಬೆಳಕನ್ನು ಚೆಲ್ಲಿದ್ದಾರೆ. ಎಂಟು ಒಂಬತ್ತು ವರ್ಷಗಳ ಕಾಲ ‘ಲಂಕೇಶ್ ಪತ್ರಿಕೆ’ಯಲ್ಲಿ ಕೆಲಸಮಾಡಿದ್ದರೂ ಮತ್ತು ಮೇಷ್ಟ್ರನ್ನು ಹತ್ತಿರದಿಂದ ಅರಿತುಕೊಂಡಿದ್ದರು ಎಲ್ಲಿಯೂ ಪಕ್ಷಪಾತ ಧೋರಣೆಯನ್ನು ತಾಳದೆ ಎಚ್ಚರದಿಂದ ನಿಷ್ಪಕ್ಷಪಾತವಾಗಿ ಬರೆಯಲು ಪ್ರಯತ್ನಿಸಿದ್ದಾರೆ. ಇಲ್ಲಿಯ ಟೀಕೆ ಮತ್ತು ವಿಮರ್ಶೆಗಳ ಹಿಂದೆ ಇರುವುದು ಕೇವಲ ಪ್ರೀತಿ ಮತ್ತು ಕಾಳಜಿ.

ಹುಳಿಯಾರರು ತಮ್ಮ ಕೃತಿಯಲ್ಲಿ ಇನ್ನಷ್ಟು ವಿಷಯಗಳನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟು, ಕೆಲವೊಂದಷ್ಟನ್ನಷ್ಟೇ ಆಯ್ದುಕೊಂಡು ಒಂದು ರೀತಿಯ ಲಂಕೇಶರ ಬಗ್ಗೆ ಒಲವನ್ನು ತೋರಿಸುತ್ತ ಪೂರ‍್ವಾಗ್ರಹವಾಗಿ ಬರೆದಿದ್ದು, ಅದಕ್ಕೆ ಇನ್ನೊಂದಿಷ್ಟು ಇದೆ ಸೇರಿಸುವುದಕ್ಕೆ ಎಂದು ತಾವು ಕಂಡ ಲಂಕೇಶರನ್ನು ಸೇರಿಸುತ್ತ ನಟರಾಜರ ಪುಸ್ತಕವನ್ನು ವಿಮರ್ಶಿಸಿದ್ದಾರೆ.

ಮೀಸಲಾತಿಯನ್ನು ಜೀವನ್ಮರಣದ ಸಂಗತಿ ಎಂಬಂತೆ ಸಮರ್ಥಿಸಿಕೊಂಡ ಲಂಕೇಶ್ ವಿ.ಪಿ. ಸಿಂಗ್ ರ ಮಂಡಲ್ ವರದಿಯ ಬಗ್ಗೆ ಪತ್ರಿಕೆಯಲ್ಲಿ ತಟಸ್ಥ ಧೋರಣೆಯನ್ನು ತಾಳಿದ್ದರು ಎಂದು ಖಡಕ್ಕಾಗಿ ಶಂಕರ್ ಅವರು ಪ್ರಶ್ನಿಸುತ್ತಾರೆ. ಅವರಿಂದ ನೈತಿಕ ಸ್ಥೈರ್ಯವನ್ನು ನಿರೀಕ್ಷಿಸಿದ್ದೆ ಆದರೆ ಹಾಗೆ ಮಾಡದೆ, ಆ ವಿಷಯದ ಬಗ್ಗೆ ಜಾಣ ನಿರ್ಲಕ್ಷ್ಯವನ್ನು ತೋರಿಸಿ, ಅಂದಿನ ರಾಜ್ಯದ ರಾಜಕೀಯ ಸ್ಥಿತಿಯ ಬಗ್ಗೆ ಬರೆಯುತ್ತ ವಿರೇಂದ್ರ ಪಾಟೀಲರನ್ನು ಸಮರ್ಥಿಸಿಕೊಂಡು ಬರೆದುದನ್ನು ಜ್ಞಾಪಿಸಿಕೊಂಡು ಅವರು ‘ಯಾಕೆ ಹೀಗೆ ಮಾಡಿದರು’ ಎಂದು ನೋವಿನಿಂದ ಹೇಳುತ್ತಾರೆ.

ಮನುಷ್ಯ ಮೂಲತಃ ಧೂರ್ತ-ಈವಿಲ್ ಎಂದು ಲಂಕೇಶ್ ಸದಾ ಪ್ರತಿಪಾದಿಸುತ್ತಿದ್ದರು ಮತ್ತು ಅದನ್ನು ನಿರಂತರವಾಗಿ ಶೋಧಿಸುತ್ತ ಹೋದರು ಮತ್ತು ಸಮರ್ಥಿಸಲು ಮುಂದಾದರು ಎಂದು ಷರಾ ಬರೆಯುತ್ತಾರೆ ನಟರಾಜರು ಎಂದು ಟೀಕಿಸಿ, ಮುಂದೆ ಅವರು ಹೇಳುತ್ತಾರೆ ಈ ಧೋರಣೆ ನವ್ಯ ಸಾಹಿತ್ಯದ ಉಪ ಉತ್ಪನ್ನವಾಗಿ ಹುಟ್ಟಿದ ಗೀಳು ಎಂದು ಹೇಳುತ್ತಾರೆ. ಶಂಕರ್ ಅವರು ಲಂಕೇಶರಷ್ಟೇ ಈ ವಸ್ತುವನ್ನು ತಮ್ಮ ಬರಹ ಚಿಂತನೆಗಳಲ್ಲಿ ಶೋಧಿಸಲಿಲ್ಲ, ಬದಲಿಗೆ, ಮಾಸ್ತಿ, ಕುವೆಂಪು ಸೇರಿದಂತೆ ಕನ್ನಡದ ಮುಖ್ಯ ಲೇಖಕರು ಇದನ್ನು ಶೋಧಿಸಿದ್ದಾರೆ, ಆದರೆ ಇವರು ಎಂದಿಗೂ ಅದನ್ನೇ ತಮ್ಮ ಸಂವೇದನೆಯನ್ನಾಗಿ ಮಾಡಿಕೊಳ್ಳಲಿಲ್ಲ ಎಂದು ತಮ್ಮ ಮೊನಚು ನೋಟದಿಂದ ನಟರಾಜರ ಅಭಿಪ್ರಾಯಕ್ಕೆ ಸಂಪೂರ್ಣ ವಿರೋಧವನ್ನು ಸೂಚಿಸುತ್ತಾರೆ.

ಮುಂದೆ ಲಂಕೇಶರ ಆತ್ಮಕಥನದ ಬಗ್ಗೆ ಮಾತಾಡುತ್ತ ಅದೊಂದು ನವ್ಯ ಆತ್ಮಕಥನ ಮತ್ತು ಅಪ್ರಾಮಾಣಿಕ ಕೃತಿ ಎಂದು ಹೇಳುತ್ತಾರೆ. ಅವರ ಈ ಧೋರಣೆ ಮತ್ತು ಹೇಳಿಕೆಯನ್ನು ಅಷ್ಟೊಂದಾಗಿ ಒಪ್ಪುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಜಗತ್ತಿನ ಯಾವ ಆತ್ಮಕಥನಗಳೂ ಸಹ ಪರಿಪೂರ್ಣವಲ್ಲ. ಕೆಲವೊಂದಂತೂ ಆತ್ಮವಂಚನೆಗಳಿಂದ ಪಾರಾಗಲು ಸಾಧ್ಯವಾಗಿಲ್ಲ, ಉದ್ದೇಶಪೂರ್ವಕವಾಗಿಯೇ ಕೆಲ ಸಂಗತಿಗಳನ್ನು ಕೈ ಬಿಡಲಾಗಿರುತ್ತದೆ. ಅಷ್ಟಕ್ಕೂ ಒಬ್ಬ ಮನುಷ್ಯ ತನ್ನ ಬದುಕನ್ನು ಇನ್ನೊಬ್ಬ ಮನುಷ್ಯನಿಗೆ ಸಂಪೂರ್ಣವಾಗಿ ಒಪ್ಪಿಸುವುದಕ್ಕೆ ಆಗುವುದಿಲ್ಲ. ಹಾಗೆ ನೋಡಿದರೆ ‘ಸುರಗಿ’ಗಿಂತ ‘ಹುಳಿಮಾವಿನ ಮರ’ವೇ ಕನ್ನಡ ಸಾಹಿತ್ಯದಲ್ಲಿ ಪ್ರಜ್ವಲಿಸುವುದು. ಇದು ಬಹಳಷ್ಟು ಜನರ ಅಭಿಪ್ರಾಯ ಕೂಡ.

ನಟರಾಜರ ಲಂಕೇಶರ ಕುರಿತು ಇರುವ ಬರಹ ಮತ್ತು ಶಂಕರರು ಇನ್ನಷ್ಟು ಸೇರಿಸಿಕೊಂಡು ಬರೆದಿರುವ ಬರಹಗಳು ಕನ್ನಡದ ಓದುಗರಿಗೆ ಹೊಸ ಆಯಾಮ ಮತ್ತು ಹೊಳಹುಗಳನ್ನು ಕೊಡುತ್ತವೆ.

ದೇವನೂರರ ‘ಎದೆಗೆ ಬಿದ್ದ ಅಕ್ಷರ’ದ ಬಗ್ಗೆ ಬರೆಯುತ್ತ ಆ ಕೃತಿಯಲ್ಲಿನ ಪ್ರತಿ ಬರಹಕ್ಕೂ ಒಂದು ಸಂದರ್ಭ, ಸನ್ನಿವೇಶಗಳು ಮತ್ತು ಕಾಲಘಟ್ಟದ ಮಹತ್ವವಿರುವುದನ್ನು ಜ್ಞಾಪಿಸಿಕೊಂಡು ಅವುಗಳಿಗೆ ತಮ್ಮ ನೆನಪುಗಳನ್ನು ಸೇರಿಸಿಕೊಂಡು ಬರೆಯುತ್ತಾರೆ. ಅವರ ಬರಹಗಳಲ್ಲಿನ ಮನ ಕಲಕುವ ಅಂಶಗಳನ್ನು ಮೆಚ್ಚುತ್ತ ಅವರ ರಾಜಕೀಯದಲ್ಲಿನ ಪಾಲ್ಗೊಳ್ಳವಿಕೆಯನ್ನು ಅಂದರೆ ಸರ್ವೋದಯ ಕರ್ನಾಟಕದ ಬಗ್ಗೆ ಅವರದು ಒಣ ಆಶಯಗಳ ಹಗಲುಗನಸು ಎಂದು ಹೇಳಿ ಅದನ್ನು ಅಷ್ಟೊಂದು ದೊಡ್ಡ ವಿಷಯವನ್ನಾಗಿ ಮಾಡುವುದು ಬೇಡವೆಂದು ತಮಗೆ ತಾವೇ ಸುಮ್ಮನಾಗುತ್ತಾರೆ.

‘ಪತ್ರಕರ್ತನ ಸರಹದ್ದು’ ಬರಹದಲ್ಲಿ ಪತ್ರಿಕೋದ್ಯಮದ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಕುರಿತು ದಿನೇಶ್ ಅಮಿನ್‌ಮಟ್ಟು ಅವರ ಬರಹಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಕೆಲವ ವಾಸ್ತವ ಸಂಗತಿಗಳನ್ನು ಹೇಳಿದ್ದಾರೆ. ಪತ್ರಿಕೋದ್ಯಮ ಎನ್ನುವುದು ಯಾವತ್ತಿಗೂ ಅದೊಂದು ಉದ್ಯಮವೇ ಆಗಿದೆ. ಮತ್ತು ಮಾಲೀಕನ ರಾಜಕೀಯ ಒತ್ತಾಸೆಗಳು, ಆಸಕ್ತಿಗಳು, ಹಿಡನ್ ಅಜೆಂಡಾಗಳು ಸಂಪೂರ್ಣವಾಗಿ ಪತ್ರಕರ್ತನಾದವನಿಗೆ ಮೀರಲು ಆಗುವುದಿಲ್ಲ ಎಂದು ಹೇಳುತ್ತಾರೆ.

ಅಮಿನ್‌ಮಟ್ಟು ಅವರ ಅಭಿಪ್ರಾಯ ಉದ್ಯಮಿಗಳ ಹಿಡಿತದಿಂದ ಮಾಧ್ಯಮ ಕ್ಷೇತ್ರವನ್ನು ಬಿಡುಗಡೆಗೊಳಿಸುವುದು ಸಾಧ್ಯ, ಆದರೆ ಅದು ಕಷ್ಟ. ಅದೊಂದು ಸುದೀರ್ಘವಾದ ಹೋರಾಟ. ಆದನ್ನು ಸಾಧ್ಯಗೊಳಿಸಬಹುದು. ವ್ಯವಸ್ಥೆಯ ಒಳಗಡೆ ಇದ್ದುಕೊಂಡೇ ವ್ಯವಸ್ಥೆಯ ಗಲೀಜನ್ನು ಸ್ವಚ್ಛಗೊಳಿಸಬಹುದು ಅಥವಾ ನಿಧಾನ ಗತಿಯಲ್ಲಿ ಬದಲಾವಣೆಯನ್ನು ತರಬಹುದು. ಇದಕ್ಕೆ ಉತ್ತಮ ಉದಾಹರಣೆ ಸಾಯಿನಾಥ್ ಅವರು. ಅವರು ಮಾರ‍್ವಾಡಿಗಳ ಹಿಡಿತದಲ್ಲಿರುವ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪತ್ರಕರ್ತನಾಗಿದ್ದುಕೊಂಡೇ ಭಾರತೀಯ ಪತ್ರಿಕೋಧ್ಯಮದಲ್ಲಿ ಮಿಂಚಿನ ಸಂಚಲನವನ್ನುಂಟುಮಾಡಿರುವ ‘ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್’ ಎನ್ನುವ ಅದ್ಭುತ ಕೃತಿಯನ್ನು ಬರೆದು ಅಂತಹ ಒಂದು ಪ್ರಯತ್ನವನ್ನು ಸಾಧಿಸಿತೋರಿಸಿದರು ಎನ್ನುವುದು.

ಅಮೀನ್ ಮಟ್ಟು ಅವರ ಅಭಿಪ್ರಾಯವು ಸರಿ ಎನ್ನಿಸುತ್ತದೆ ಒಂದು ರೀತಿಯಲ್ಲಿ. ಯಾಕೆಂದರೆ, ನಿಷ್ಪಕ್ಷಪಾತವಾದ ಪತ್ರಿಕೋದ್ಯಮವನ್ನು ಕಾಣಲು ಸಾಧ್ಯವೇ ಆಗುವುದಿಲ್ಲವೇ ಎಂದಿಗೂ? ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಈ ಸಮರ್ಥನೆಯನ್ನು ಮತ್ತು ಅಮಿನ್ ಮಟ್ಟು ಅವರು ಅಭಿಪ್ರಾಯವನ್ನು ತಮ್ಮ ತೀಕ್ಷ್ಣವಾದ ಒಳನೋಟವನ್ನು ಕೊಡುತ್ತಾರೆ. ಮತ್ತು ಈ ಗ್ರಹಿಕೆಗಳನ್ನು ಪುನರ್ ವಿಮರ್ಶಿಸಿಕೊಳ್ಳುವಂತೆ ಮಾಡುತ್ತದೆ. ಅವರು ಹೇಳುತ್ತಾರೆ ಪತ್ರಿಕೋದ್ಯಮ ಹೆಸರೇ ಸೂಚಿಸುವಂತೆ ಅಂದು ಇಂದು ಮುಂದೆಯೂ ಅದು ಉದ್ಯಮವೇ. ಉದ್ಯಮಿಗಳ ಹಿಡಿತದಿಂದ ಮಾಧ್ಯಮಗಳನ್ನು ಪಾರುಮಾಡುವುದು ಕಷ್ಟವೇ ಸರಿ. ಯಾವ ಉದ್ಯಮವೇ ಅದರೂ ಅದಕ್ಕೊಂದು ಸ್ವಹಿತಾಸಕ್ತಿ ಇರಲೇಬೇಕು. ಆದ್ದರಿಂದ ಪತ್ರಕರ್ತರಿಗೆ ಸ್ವಾತಂತ್ರ್ಯದ ಪರಿಧಿ ಇರುವಂತೆಯೇ ನಿಷಿದ್ಧ ವಲಯವೂ ಇದ್ದೇ ಇರುತ್ತದೆ. ತನ್ನ ಮಾಲೀಕರ ಸ್ವಹಿತಾಸಕ್ತಿಯನ್ನು ಆತ ಇಂದೂ ಅತಿಕ್ರಮಿಸಲಾರ ಎಂದು. ಆದರೆ ಇದು ಸಹ ಸಂಪೂರ್ಣವಾದ ಸತ್ಯವೆಂದು ಅನ್ನಿಸುವುದಿಲ್ಲ. ಅನೇಕ ಪತ್ರಕರ್ತರು ತಮ್ಮ ಜೀವವನ್ನು ಒತ್ತಿಯಿಟ್ಟು ಪ್ರಭುತ್ವದ, ಅಧಿಕಾರದ ವಿರುದ್ಧ ಬರೆದಿದ್ದಾರೆ. ಮಾಲೀಕರ ವಿರುದ್ಧ ಬರೆಯದಿದ್ದರೂ ಮಾಲೀಕರು ಪ್ರತಿನಿಧಿಸುವ ರಾಜಕೀಯವನ್ನು ಟೀಕಿಸಿ ಬರೆದಿದ್ದಾರೆ. ಆದರೆ ಶಂಕರ್ ಅವರು ಹೇಳುವಂತೆ ದೃಷ್ಟಿಕೇಂದ್ರ ಬದಲಾಗಬೇಕು. ಅಂದರೆ ವಿಧಾನಸೌಧದ ಬದಲು ಸಮಾಜದತ್ತ ತಿರುಗಬೇಕು. ಆಗ ನಿಜವಾಗಿಯೂ ಸಾಯಿನಾಥ್ ಅವರಂತಹ ಪತ್ರಕರ್ತರು ಜನ್ಮತಾಳುತ್ತಾರೆ. ಇದಕ್ಕೆ ಬೇಕಿರುವುದು ಸ್ಪಷ್ಟವಾದಂತಹ, ಆತ್ಮವಂಚನೆಯಿಲ್ಲದAಥಹ ಸಾಮಾಜಿಕ ಬದ್ಧತೆ.

ಇಲ್ಲಿನ ಬಹುಪಾಲು ಬರಹಗಳು ಜಾತೀಯತೆ ಮತ್ತು ಮತೀಯತೆಗಳ ಕುರಿತು ನೇರವಾಗಿ ಮತ್ತು ನಿರ್ಭೀತಿಯುತವಾಗಿರುವುದನ್ನು ಕಾಣಬಹುದು. ಇವುಗಳ ಹಿಂದೆ ಅಂಬೇಡ್ಕರ್ ಲೋಹಿಯಾ ಅವರ ಚಿಂತನೆಗಳ ಒಂದು ಬಲವಾದ ಬೆಂಬಲವೂ ಇದೆ. ದಲಿತ ಮತ್ತು ರೈತ ಚಳವಳಿಗಳ ಆರಂಭದ ಹುಮ್ಮಸ್ಸು ಮತ್ತು ನಂತರದ ಸೋಲುಗಳು ಮತ್ತು ಸೋಲುಗಳ ಕಾರಣವನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸಿ ಬರೆಯುತ್ತಾರೆ. ಜಾತಿ ವಿನಾಶದಂತಹ ಉನ್ನತವಾದ ಆಶಯವನ್ನು ಇಟ್ಟುಕೊಂಡು ಆರಂಭಗೊಂಡ ದಲಿತ ಸಂಘರ್ಷ ಸಮಿತಿ ಕೊನೆಗೆ ಜಾತಿಯತೆಯ ರಾಡಿಯಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡು ತುಂಬಾ ಹತಾಶರಾಗಿರುವುದನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಧರ್ಮಾಧಾರಿತ ರಾಷ್ಟ್ರವನ್ನು ಮಾಡಲು ಹೊರಟಿರುವ ಮೋದಿ ಸರ್ಕಾರವನ್ನು ಯಾವ ಮುಲಾಜಿಲ್ಲದೆ ನೇರವಾಗಿ ಟೀಕಿಸುವ ಕೆಲ ಬರಹಗಳು ಕಂಫರ್ಟ್ ಝೋನ್ ಗಳಲ್ಲಿ ಇರುವವರಿಗೆ ಎದೆ ಧಸಕ್ಕೆನ್ನುವಂತೆ ಮಾಡುತ್ತದೆ.

ಹೆಚ್ಚಿನ ಮಾಹಿತಿ, ಜ್ಞಾನಗಳನ್ನು ತುಂಬಿಕೊಂಡು ತುಳುಕುತ್ತಿರುವ ಪ್ರಸ್ತುತ ಸಮಾಜವು ‘ವಿವೇಕ’ವನ್ನು ಪಡೆದುಕೊಳ್ಳದೆ ನರಳುತ್ತಿರುವ ಸಮಾಜಕ್ಕೆ ‘ಉಸಾಬರಿ’ಯ ಬರಹಗಳು ಒಂದು ರೀತಿಯ ಚೈತನ್ಯವನ್ನು ತುಂಬುತ್ತವೆ. ಧರ್ಮವನ್ನು ಅಪ್ಪಿಕೊಂಡು,ಜಾತಿಯನ್ನು ಮೈಯಿ ಮತ್ತು ಮನಸ್ಸುಗಳ ಮೇಲೆ ಎಳೆದುಕೊಂಡಿರುವವರಿಗೆ ಇವು ಅರಿವಿನ ಕಣ್ಣನ್ನು ತೆರೆಸುವಂತಿವೆ. ‘ಊರಿನ ಉಸಾಬರಿ’ಎಂದರೆ ಅದೊಂದು ಸಾಮಾಜಿಕ ಜವಾಬ್ದಾರಿಯೇ ಆಗಿದೆ ಎಂಬುದು ಈ ಬರಹಗಳು ಹೇಳುತ್ತವೆ.

ಪ್ರಭುತ್ವ ಮತ್ತು ಅದು ಎಸಗುವ ಹಿಂಸೆಗಳ ಕುರಿತು ಫುಕೋ ದಶಕಗಳ ಹಿಂದೆಯೇ ರೂಪಕಾತ್ಮಕವಾಗಿ ಇಡೀ ಜಗತ್ತಿಗೇ ಹೇಳಿದ ಚಿಂತನೆಗಳನ್ನು ಇಲ್ಲಿ ತುಸು ನೇರವಾಗಿ ಹೇಳಲಾಗಿದೆ, ಅದಕ್ಕೆ ಕಾರಣ ಇಲ್ಲಿನ ಬರಹಗಳಿಗೆ ವರದಿಗಾರಿಕೆಯ ಭಾಷೆ ಪ್ರಭಾವಿಸಿರುವುದರಿಂದ ಅವು ಜ್ವಲಂತ ಸಂಗತಿಗಳ ವಿಸ್ತೃತ ಮತ್ತು ವಿಶ್ಲೇಷಣಾತ್ಮಕ ವರದಿಗಳಂತಿವೆ. ಆದರೆ ಇವುಗಳ ಹೆಚ್ಚುಗಾರಿಕೆ ಇರುವುದು ಲೋಕವನ್ನು ಎದುರುಹಾಕಿಕೊಂಡು ಊರಿನ, ಸಮಾಜದ, ದೇಶದ, ಜಗತ್ತಿನ ‘ಉಸಾಬರಿ’ಯನ್ನು ತೋರಿಸುವ ಎದೆಗಾರಿಕೆಯಲ್ಲಿ.

‍ಲೇಖಕರು avadhi

3 February, 2020

1 Comment

  1. Thippesh N

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading