ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಸಿರಾಡೋಕೆ “ಆಕ್ಸಿಜನ್ ಭಾಗ್ಯ” ಯಾವಾಗ ಸಾರ್?!!

rajaram tallur low res profile

ರಾಜಾರಾಂ ತಲ್ಲೂರು

ಸರ್ಕಾರ ಕರ್ನಾಟಕ ನಗರಾಭಿವ್ರದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಕಾಯಿದೆಗೆ ವಿಧಾನಮಂಡಲದಲ್ಲಿ  ಚರ್ಚೆರಹಿತ ಅನುಮತಿ ಪಡೆದಿದ್ದು, ಅದನ್ನೀಗ ಶಾಸನವಾಗಿಸಲು ರಾಜ್ಯಪಾಲರ ಅಂಕಿತಕ್ಕಾಗಿ ಕಳಿಸುತ್ತಿದೆ.

ಈ ತಿದ್ದುಪಡಿ ಶಾಸನವಾದರೆ, ರಾಜ್ಯದ 250 ನಗರಗಳಲ್ಲಿ ಲೇಔಟುಗಳನ್ನು ನಿರ್ಮಿಸುವಾಗ ತೆರೆದ ಜಾಗದ ಪ್ರಮಾಣ 15% ರಿಂದ 10%ಕ್ಕೂ, ರಸ್ತೆ-ಚರಂಡಿ ಇತ್ಯಾದಿಗಳಿಗೆ ಮೀಸಲಿಡಬೇಕಾದ ಜಾಗ 10%ನಿಂದ 5%ಗೂ ಇಳಿಯಲಿದೆ. ಇದಕ್ಕೆ ಬೆಂಗಳೂರು ನಗರ ಹೊರತಾಗಿದೆ ಎಂದು ನಗರಾಭಿವ್ರದ್ಧಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರಂತೆ.

 

ಬೆಂಗಳೂರಿನಲ್ಲಿ ನಗರ ಬೆಳವಣಿಗೆಯ ಪರಿಸ್ಥಿತಿ ಈಗಾಗಲೇ ಅಳತೆ ಮೀರಿ ಹೋಗಿದ್ದು, ಆ ಕುರಿತು ಆಗಿರುವ ಅಧ್ಯಯನವೊಂದರಲ್ಲಿ ಕಂಡ ಕೆಲವಂಶಗಳನ್ನು ಇಲ್ಲಿ ಹಂಚಿಕೊಂಡರೆ, ಪರಿಸ್ಥಿತಿಯ ಗಂಭೀರತೆ ಅರಿವಾಗಬಹುದು ಎಂದುಕೊಂಡಿದ್ದೇನೆ. ಯಾಕೆಂದರೆ, ರಾಜ್ಯದ ಉಳಿದ ಭಾಗಗಳಿಗೆ ಇಂತಹ ಅಧ್ಯಯನಗಳೂ ನಡೆದಂತಿಲ್ಲ.

ಬೆಂಗಳೂರಿನ ಶೇಕಡಾವಾರು ಭೂಬಳಕೆ (1971- 2001)

ಬಳಕೆಯ ವಿಧ/ವರ್ಷ                                                             1971      1981      1991      2001

ನಿರ್ಮಾಣಗಳು (ವಸತಿ & ವಾಣಿಜ್ಯ)                                              19.69    26.37    38.99      69.05

ಲೇಔಟ್                                                                                      3.53     1.88       0.00        0.00

ವಿಮಾನ ನಿಲ್ದಾಣ ಮತ್ತಿತರ ಸಾರಿಗೆ                                                  1.88     1.88       1.88        1.88

ಕೈಗಾರಿಕೆ                                                                                    0.00    0.00       1.93        4.30

ಶಿಕ್ಷಣ                                                                                          0.00    0.00      2.53         2.53

ಕ್ರಷಿ                                                                                           51.53    47.67   10.84        7.70

ತೋಟಗಾರಿಕೆ                                                                              0.00    0.00      1.09        1.09

ಅರಣ್ಯ                                                                                         0.05    0.05     0.21         0.21

ಪಾರ್ಕ್/ಕೈತೋಟ/ಸಾರ್ವಜನಿಕ-ಅರೆಸಾರ್ವಜನಿಕ                          5.39    5.39     3.01         3.01

ಬಂಜರು ಬಂಡೆ                                                                              0.77    0.77     0.40        0.44

ಕುರುಚಲು/ಹುಲ್ಲುಗಾವಲು                                                               7.85    6.69     6.60       6.56

ಇಟ್ಟಿಗೆಭಟ್ಟಿ                                                                                    0.00   0.00    0.00       0.00

ಜಲಮೂಲಗಳು                                                                              3.49    3.49    3.15        3.15

ತೆರೆದ ಜಾಗ                                                                                   5.81     5.81     29.37   0.08

ಸೇನೆಗೆ ಸೇರಿದ್ದು                                                                             0.00    0.00    0.00    0.00

ಒಟ್ಟು ಸ್ಥಳ (ಚದರ ಕಿ.ಮಿ)                                                            174.71   365.65 413.03 492.55

 

avadhi-column-tallur-verti- low res- cropತೆರೆದ ಜಾಗಗಳ ಗಾತ್ರವನ್ನು ತಗ್ಗಿಸುವ ತಿದ್ದುಪಡಿ ತರಲು “ಭೂಮಿಯ ದರ ಇಳಿಸಬೇಕಿದೆ” ಎಂಬ ನೆಪ  ಕೊಡುವ ಸರಕಾರ, ಗಂಭೀರವಾದ ವಾಸ್ತವಾಂಶಗಳನ್ನು ಮುಚ್ಚಿಡುತ್ತಿದೆ.

ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ, ಯಾವುದೇ ವಸತಿ ಪ್ರದೇಶ ಅಭಿವ್ರದ್ಧಿ ಮಾಡುವಾಗ, ಅದರ 12-15% ಜಾಗ ತೆರೆದ ಜಾಗವಾಗಿ ಮೀಸಲಿಡಬೇಕಾದುದು ಕಡ್ಡಾಯ. ಕರ್ನಾಟಕ ರಾಜ್ಯ ಪರಿಸರ ವರದಿ 2013ರ ಪ್ರಕಾರ, ಪ್ರತೀ 1000 ಜನಗಳಿಗೆ ಒಂದು ಹೆಕ್ಟೇರ್ ತೆರೆದ ಭೂಮಿ ಆವಶ್ಯಕ.

ಬೆಂಗಳೂರಿನಲ್ಲಿ 2001ರ ವೇಳೆಗೆ ಇದ್ದದ್ದು ಸಾವಿರ ಜನಸಂಖ್ಯೆಗೆ ಬರೇ 0.52 ಹೆಕ್ಟೇರ್. ಅಲ್ಲಿಂದೀಚೆಗೆ ಆಗಿರುವ ಬೆಳವಣಿಗೆ ಊಹಿಸಿಕೊಳ್ಳಿ. ಈ ತೆರೆದ ಜಾಗದಲ್ಲಿರುವ ಹಸಿರು ನಾವು ಉಸಿರಾಡಿ ಹೊರಹಾಕುವ ಅಂಗಾರಾಮ್ಲ ಮತ್ತು ವಾಹನ, ಕೈಗಾರಿಕೆಗಳು ಹೊರಹಾಕುವ ವಿಷಾನಿಲಗಳನ್ನು ಹೀರಿ, ನಮಗೆ ಬದುಕಲು ಅಗತ್ಯ ಇರುವ ಆಮ್ಲಜನಕವನ್ನು ಪೂರೈಸುತ್ತದೆ.

ಮಂಗಳೂರು, ಮೈಸೂರು, ಧಾರವಾಡ ಬೆಳಗಾವಿಯಂತಹ ನಗರಗಳಲ್ಲಿ ಬೆಳವಣಿಗೆಯ ಸ್ಥಿತಿ ಬೆಂಗಳೂರಿನದಕ್ಕಿಂತ ಭಿನ್ನವೇನಿಲ್ಲ. 15 ವರ್ಷಗಳ ಹಿಂದಿನ ಬೆಂಗಳೂರಿನ ಸ್ಥಿತಿಯ ಜೊತೆ ಈ ನಗರಗಳನ್ನು ಖಂಡಿತಾ ಹೋಲಿಕೆ ಮಾಡಬಹುದು.

ಈ ನಗರಗಳಲ್ಲಿ ಈಗ ಆಗಿರುವ ಒಟ್ಟು ಅಭಿವ್ರದ್ಧಿಗೆ ಹೋಲಿಸಿದರೆ ಅದರ 10% ಅಂಶವಾದರೂ ಖಾಲಿ ಜಾಗ ಉಳಿದಿದೆ ಎಂದು ಅನ್ನಿಸುವುದಿಲ್ಲ. ಇದೆ ಎಂದಾದರೆ, ಈ ತಿದ್ದುಪಡಿ ಮಾಡುವ ಮೊದಲು ಸರಕಾರ ಅಂಕಿ ಅಂಶಗಳ ಮೂಲಕ ಆ ಅಂಶವನ್ನು ಸಾಬೀತುಪಡಿಸಬೇಕಾಗುತ್ತದೆ. ಅಂತಹದೊಂದು ಅಧ್ಯಯನ ನಡೆಸದೆ ಈ ತಿದ್ದುಪಡಿ ಜಾರಿಗೆ ತರುವುದು ಎಂದರೆ, ನಮ್ಮ ಚಟ್ಟ ನಾವೇ ಕಟ್ಟಿಕೊಳ್ಳುವುದು ಎಂದರ್ಥ!

ಬೆಂಗಳೂರಿನ ಶ್ವಾಸಕೋಶ ಕರಗುತ್ತಾ ಬಂದಿರುವ ಬಗೆಯನ್ನು ಇಲ್ಲಿ ಕೊಟ್ಟಿರುವ ಕೋಷ್ಠಕ ಮತ್ತು ಸ್ಯಾಟಲೈಟ್ ಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಇದಾಗಿ ಈಗ ಹದಿನೈದು ವರ್ಷಗಳು ಕಳೆದಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುತ್ತದೆ.

ಬೆಂಗಳೂರಿನಲ್ಲಿ ತೆರೆದ ಜಾಗದ ಪ್ರಮಾಣದಲ್ಲಿ ಬದಲಾವಣೆ

ವರ್ಷ                                       ಒಟ್ಟುಜಾಗದಲ್ಲಿ ತೆರೆದ ಜಾಗದ ಶೇಕಡಾವಾರು

1925                                       80

1960                                       17.2

1983                                       10.1

2003                                       7.5

6916fcc2-876d-4c63-b5aa-96daf9ca2c04

3ee67f47-32c9-4d27-b93f-651f0b58ac8d

 

ಯಾವುದೇ ದೂರಗಾಮಿ ಯೋಜನೆಗಳಿಲ್ಲದೆ, ಈಗ ಉಳಿದಿರಬಹುದಾದ 7-8% ತೆರೆದ ಜಾಗದಲ್ಲೇ ಇನ್ನೂ ಕಡಿತ ಮಾಡಲು ಹೊರಡುವುದಾಗಲೀ, ಯದ್ವಾತದ್ವಾ ಕಾಂಕ್ರೀಟು ಕಾಡು ಬೆಳವಣಿಗೆಗೆ ಅವಕಾಶ ಕೊಡುವುದಾಗಲೀ, ಕೇವಲ ಭೂ ಕಳ್ಳರ, ಬಿಲ್ಡರ್ ಗಳ ಹೊಟ್ಟೆ ತುಂಬಿಸೀತೇ ಹೊರತು ಅದರಿಂದ ಜನಸಾಮಾನ್ಯರಿಗೆ ಯಾವ ಅನುಕೂಲವೂ ಇಲ್ಲ.

ಇಂತಹ ವಿಚಾರಗಳಲ್ಲಿ ಆಳುವವರು, ಪ್ರತಿಪಕ್ಷಗಳು ಎಲ್ಲರೂ ಒಂದೇ. ಶಾಸನಸಭೆಗಳಲ್ಲಿ ಯಾರೂ ಈ ತಿದ್ದುಪಡಿಯ ವಿರುದ್ದ ಮಾತನಾಡಲಾರರು. ಯಾಕೆಂದರೆ, ಅವರಲ್ಲಿ ಬಹಳ ಮಂದಿಗೆ ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿವೆ.

ಹಾಗಾಗಿ ಈಗ ಜನ ಮಾತನಾಡದೇ ಬೇರೆ ದಾರಿ ಇಲ್ಲ.

‍ಲೇಖಕರು Admin

21 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading