ನಳಿನ
ದಾಸಸಾಹಿತ್ಯ ಪಿತಾಮಹರಲ್ಲಿ ಒಬ್ಬರಾದ ಕನಕದಾಸರ ಕೀರ್ತನೆಗಳನ್ನು ‘ಬೆತಾಬ್ ಲಮ್ ಹೆ’ ಹೆಸರಿನಲ್ಲಿ ಉರ್ದು ಅಕಾಡೆಮಿ ಪ್ರಕಟಿಸಿರುವುದು ಹೆಮ್ಮೆಯ ವಿಷಯ. ಕನಕದಾಸರ ಅನುಭಾವ್ಯದ ನೂರೈದು ಕೀರ್ತನೆಗಳನ್ನು ಇದು ಒಳಗೊಂಡಿದೆ. ಬೆತಾಬ್ ಸಾಗರ್ ಕರ್ನಾಟಕಿ ಕಾವ್ಯನಾಮದ ಕವಿ ಸೈಯದ್ ಷಬೀರ್ ಅಹ್ಮದ್ ಅವರು ಉರ್ದು ಒಳಗೊಂಡಂತೆ ಪಂಚ ಭಾಷಾ ಪ್ರವೀಣರು. ಇವರು ಕನ್ನಡ ಭಾಷೆಯ ಕೀರ್ತನೆಗಳನ್ನು ಉರ್ದುವಿಗೆ ಅಚ್ಚುಕಟ್ಟಾಗಿ ಭಾಷಾಂತರ ಮತ್ತು ಭಾವಾಂತರ ಮಾಡಿರುವ ಈ ಅಪರೂಪದ ಕೃತಿಯಲ್ಲಿನ ಕೆಲವು ಕೀರ್ತನೆಗಳ ಮೆಲುಕುನೋಟ. ಎಲ್ಲಾ ಕೀರ್ತನೆಗಳನ್ನು ಅವುಗಳಿಗೆ ಸಂಬಂಧಪಟ್ಟ ರಾಗದೊಂದಿಗೆ ನೀಡಿರುವುದು ಈ ಕೃತಿಯ ಮತ್ತೊಂದು ವಿಶೇಷ.

ಕನಕದಾಸರು ಯಾವುದೋ ಯಾರಿಗೋ ಸಂಬಂಧಿಸಿದ ಘಟಿಸಿದ ಕಥೆಯನ್ನು ತೆಗೆದುಕೊಂಡು ತಮ್ಮ ಕೀರ್ತನೆಗಳನ್ನು ಹೇಳುವುದಿಲ್ಲ. ಬದಲಿಗೆ ಆತ್ಮಾವಲೋಕನದ ಹಾದಿ ಹಿಡಿದೇ ಪ್ರತಿಯೊಂದನ್ನು ಅನುಭವದೊಂದಿಗೆ ತೆರೆದ ಮನಸ್ಸಿನಿಂದ ಹೇಳಿಕೊಳ್ಳುತ್ತಾರೆ, ಅವರ ಮನಸ್ಸಿನ ಶುದ್ಧತೆಯೊಂದಿಗೆ ಕೀರ್ತನೆಯನ್ನು ಓದುವವರ, ಹಾಡಿದ್ದನ್ನು ಕೇಳುವವರ ಮನಸ್ಸಿಗೆ ಅದೇ ಆತ್ಮಾವಲೋಕನ ಭಾವ ಬೇಗ ತಟ್ಟುತ್ತದೆ.
ಮೊಟ್ಟಮೊದಲ ಕೀರ್ತನೆ(ಪಂತುವರಾವಳಿ-ರಾಗ)
ಆಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ
ಇದಹ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ.
ದಿನನಿತ್ಯವೂ ಎಲ್ಲಾದರೊಂದು ಬಗೆಯಲ್ಲಿ ಬರೆ ಹಾಕಿಸಿಕೊಳ್ಳುವೆವು, ಹಾಗೆ ಮೋಸ ಹೋದುದ್ದನ್ನು ಹರಿಯೊಂದಿಗೆ ಮುಚ್ಚುಮರೆಯಿಲ್ಲದೆ ಹೇಳಿದ್ದಾರೆ. ಎಲ್ಲರಿಗೂ ಎಲ್ಲೆಡೆಯೂ ಅನ್ವಯಿಸುವ ಈ ರೀತಿಯ ತೆರೆದ ವಿಚಾರಧಾರೆಗಳಿಂದಾಗಿಯೇ ಹರಿದಾಸ ಸಾಹಿತ್ಯ ಇಂದಿಗೂ ಎಂದೆಂದಿಗೂ ಔಚಿತ್ಯಪೂರ್ಣವಾಗಿಯೇ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ.
11ನೇ ಕೀರ್ತನೆ ರಾಗ-ಶಂಕರಾಭರಣ -ಪುಟ-16
ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲ
ದೋಷಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು
ಎಂಥ ಮಾತು, ಮನುಜ ಭೂಮಿಯ ಮೇಲೆ ಇರುವಷ್ಟು ದಿನವೂ ತನ್ನ ಆತ್ಮೋದ್ಧಾರದ ಬದಲು ಆಲಿಸುವುದು, ಆಚರಿಸುವುದು ದುಡ್ಡು ಮಾಡುವ ರಹದಾರಿಗಳನ್ನ. ಆದರೆ ಪಾಪಪ್ರಜ್ನೆಯೆಂಬುದ ಹಿಂದಕ್ಕೆ ಹಾಕಿ ಮುಗಿಬಿದ್ದು, ದುಡ್ಡು ಮಾಡುವದರಲ್ಲೇ ನಿರತನಾದವನಿಗೆ ಒಬ್ಬವಿಮರ್ಶಕನಂತಲ್ಲದೆ ತನ್ನನ್ನು ಸಹ ಅದೇ ಸಂದರ್ಭದೊಳಗೊಬ್ಬನಂತೆ ಕಂಡುಕೊಂಡು ಅದೇ ಡಾಂಬಾಚಾರದ ಆಳಕ್ಕೆ ಹೋಗಿ ಮರಳಿ ಇಷ್ಟದೇವನೆಡೆಗೆ ಮೊರೆಯಿಡುವ ಪರಿ ಬಲು ಮೆಚ್ಚುವಂತದ್ದು.
24ನೇ ಕೀರ್ತನೆ- ಮೋಹನ ರಾಗ (ಪುಟ 28 ಮತ್ತು 29)
ಆರು ಬಾಳಿದರೇನು ಆರು ಬದುಕಿದರೇನು?
ನಾರಾಯಣನ ಸ್ಮರಣೆ ನಮಗಿಲ್ಲದನಕ.
ಜಗದ ಜಂಗಮರು ಉದಿಸಿದುದೇ ಆಧ್ಯಾತ್ಮಿಕ ಸಿದ್ಧಿಯನ್ನರಸಿ. ಕೌಟುಂಬಿಕ ಜೀವನ ವ್ಯವಹಾರಿಕತೆಯಲ್ಲಿ ಮನ ಕ್ಲೇಶಗಳು ಅಧಿಕವಾದಾಗ ಮನ ಬಯಸುದುದೇ ಶಾಂತಿ. ಅದಕ್ಕೆ ರಾಜಮಾರ್ಗ ದೇವರ ನಾಮಸ್ಮರಣೆ, ಇಲ್ಲಿ ಏಕಾಗ್ರತೆಯೂ ಹೆಚ್ಚಿ, ಮನಸ್ಸಿನ ತಲ್ಲಣಗಳೂ ಕರಗುತ್ತವೆ. ಇದರಿಂದಾಗಿಯೇ ಬದುಕಿನ ಬವಣೆಗಳು ಮನಸ್ಸಿನಿಂದ ದೂರವಾಗುತ್ತವೆ.
ಚಿತ್ತ ಶಾಂತಿ ನೀಡುವ ನಾರಾಯಣನ ಸ್ಮರಿಸದಿದ್ದರೆ ಬದುಕಿನ ಅರ್ಥವೇನು? ಎಂದು ಕೇಳಿಕೊಳ್ಳುವಲ್ಲಿ ಬದುಕಿನ ನಶ್ವರದಲ್ಲಿ ದೇವರ ನಾಮಸ್ಮರಣೆಯ ಔಚಿತ್ಯವನ್ನು ಸಹ ದಾಸರು ವಿಷದಪಡಿಸಿದ್ದಾರೆ.
29ನೇ ಕೀರ್ತನೆ –ಮುಖಾರಿ (32-ಅರಿತು ನಡೆಯಲು ಬೇಕು)
ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು.
ಮಿತ್ರರು ಶತ್ರುಗಳನ್ನು ಸಮಯವೇ ಮಾಡಿಕೊಡುತ್ತದೆ. ಆದರೆ ಈತನು ಮಿತ್ರನಾಗಿ ಬರುವವನೋ? ಎಂಬ ನಿರೀಕ್ಷೆಯಂತೂ ಸಾಧ್ಯವಿಲ್ಲ. ಅದೇನೇ ಇದ್ದರೂ ಒಂದು ಸತ್ಯದ ಒಳಕುದಿ, ದುರ್ಜನರ ಸಹವಾಸಕ್ಕೆ ಬಿದ್ದು ಐಭೋಗ ಪಡೆದು ಪಾಯಸಾನ್ನ ಸೇವನೆಗಿಂತ ಸಜ್ಜನ ಸಾಧುಗಳ ಮನೆಯಲ್ಲಿ ಅಂಬಲಿ ಸೇವನೆಯೇ ಸಾಕು. ಇದು ಆತ್ಮವು ಸ್ನೇಹವನ್ನು ಬಯಸುವಾಗ ಎಚ್ಚರಿಕೆಯಂತೆ ಮನಸ್ಸಿನಲ್ಲಿ ತಾಕುತ್ತದೆ. ಹೆಣ್ಣು-ಹೊನ್ನು-ಮಣ್ಣಿಗಾಗಿ ಜಿದ್ದಿಗೆ ಬಿದ್ದು ಸಹವಾಸ ದೋಷಗಳನ್ನು ಮಾಡಿಕೊಂಡರೆ ಅದರಿಂದ ಉಣ್ಣುವ ಸುಖಗಳು ಸಹ ಅಷ್ಟೇ ಕೆಟ್ಟ ಪರಿಣಾಮವನ್ನು ಬೀರುತ್ತವೆ.
31ನೇ ಕೀರ್ತನೆ- ಈ ಸಿರಿಯ ನಂಬಿ ಹಿಗ್ಗಲು ಬೇಡ (ರಾಗ-ಕಾಂಬೋದಿ, ತಾಳ –ಝಂಪೆ)
ಬಿಡದೆ ಮಯಾಅಳುಗಳು ಬಾರೆಂದು ಎಳೆವಾಗ
ಮಡದಿ ಮಕ್ಕಳು ಬಹರೆ ಭಂಡ ಜೀವನವೆ
ಸಾವಿಲ್ಲದ ಮನೆಯ ಸಾಸಿವೆಕಾಳು ಹುಡುಕಿದ ಕಿಸಾಗೌತಮಿಗೆ ಬುದ್ಧನಿತ್ತ ದಿವ್ಯವಾಖ್ಯೆಯಂತೆ, ಸಂಸಾರ ಸಾಗರದಲ್ಲಿ ಹೆಂಡಿರು ಮಕ್ಕಳ ಉದಾಹರಣೆ ಕೊಟ್ಟುಕೊಂಡು ಐಚಿಕ ಸುಖ ಸಂಪತ್ತುಗಳನ್ನು ಗಳಿಸಿದ ನಂತರವೂ ಒಂದಿಲ್ಲೊಂದು ದಿನ ಕಡ್ಡಾಯವಾಗಿ ಬರುವ ಯಮನಕೂಗಿಗೆ ತಾನಲ್ಲದೇ ಬೇರೆಯವರು ಯಮನೊಂದಿಗೆ ಸಾವನ್ನು ಹಂಚಿಕೊಳ್ಳಲು ಸಾಧ್ಯವೇ? ಭಕ್ತಿಸುಧೆಯೊಳು ಎಷ್ಟೇತ್ತರದ ಮಾತುಗಳು ಕನಕದಾಸರ ಮನದಾಳದಿಂದ ಬರುತ್ತಿವೆ.
34ನೇ ಕೀರ್ತನೆ –ಎಲ್ಲಾರು ಮಾಡುವುದು ಹೊಟ್ಟೆಗಾಗಿ
ರಾಗ; ನಾದನಾಮಕ್ರಿಯೆ ತಾಳ-ಏಕ.
ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಆಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೫.
ಬಹಳ ಜನಪ್ರಿಯವಾದಂತಹ ಹಾಗೂ ಎಲ್ಲರಿಗೂ ಅನ್ವಯಿಸುವಂತಹ ಸುಂದರ ಹೋಲಿಕೆಗಳುಳ್ಳ ಈ ಕೀರ್ತನೆಯಲ್ಲಿ ಡಾಂಬಿಕತೆಯಿಲ್ಲದೆ ಒಪ್ಪಿಕೊಳ್ಳಬೇಕಾದ ಸತ್ಯ ಹೊಟ್ಟೆಯ ಅನಿವಾರ್ಯತೆ. ದುಡಿಮೆ ಎಂಬುದೊಂದು ಜೀವನ ನಿರ್ವಹಣೆಯ ಮಾರ್ಗ. ಅದರಲ್ಲಿಯೂ ಕೆಲವರದ್ದು ಹೊಟ್ಟೆಗಾಗಿ ನೂರೆಂಟು ಸುಳ್ಳುಹೇಳಿ, ಅನ್ನಿಗರ ಮನೆಯಲ್ಲಿ ಬೆಂಕಿಹಚ್ಚುವುದೂ ಆಗಿರುತ್ತದೆ. ಈ ರೀತಿಯಲ್ಲಿಯೂ ನಮ್ಮೊಡನಿರುವ ಜನರು ಹೊಟ್ಟೆಹೊರೆಯುತ್ತಾರೆ.
39ನೇ ಕೀರ್ತನೆ-ಕಲಿ ಹೆಚ್ಚಿ ಬಂದಿತಲ್ಲ (ಪುಟ 39 ಮತ್ತು 40)
ತನ್ನ ಕಾಂತನ ಬಿಟ್ಟು ಸ್ತ್ರೀಯರು
ಅನ್ಯರಿಗೆ ಮನವೆರಗಿ ಮೋಹಿಪರು
ಅಬ್ಬಾ ವರ್ಣರಹಿತವಾಗುತ್ತಿರುವ ಸಂಬಂಧಗಳ ಅಸಂಬದ್ಧತೆಯನ್ನು ನೇರವಾಗಿ ಹೇಳುವ ದಾಸರು, ಅಂದಿನ ನಾರಿಯರ ಸ್ಥಿತಿಯನ್ನು ಉಲ್ಲೇಖಿಸುತ್ತಾರೆ, ಆದರದು ಇಂದಿಗೂ ಸೂಕ್ತವಾದಂತಹ ವಾಣಿ.
59ನೇ ಕೀರ್ತನೆಯಲ್ಲಿ ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ (ರಾಗ -ಸುರಟಿ)
ಸಕಲ ಭೋಗ ಭಾಗ್ಯವನ್ನುಂಡ ಮನಕ್ಕೆ ಅಂತಿಮದಲ್ಲಿ ಯಾವುದೂ ರುಚಿಸದು. ಐಟಿ ಬಿಟಿಯ ಬದುಕಿನವರಿಂದ ಬಡವನವರೆಗೂ ಒಂದಿಲ್ಲೂಮ್ಮೆ ನಾನಿರುವುದು ವ್ಯರ್ಥವೆಂಬ ಭಾವನೆ ಬರದಿಲ್ಲ. ಆದರೆ ಚನ್ನಕೇಶವನೆಡೆಗೆ ಎಳಸುವ ಅವರ ನಿರಂತರ ಕಾಯಕದಲ್ಲಿ ಸಾರ್ಥಕ್ಯ ಕಾಣುವ ಉದ್ದೇಶ ಸಫಲವಾಗಿದೆ ಎಂಬಂತೆ ಭಾವ ದೀನವಾಗಿದೆ.
66ನೇ ಕೀರ್ತನೆ ಆರಿಗಾದರು ಪೂರ್ವಕರ್ಮ ಬಿಡದು.
ರಾಗ –ಕಾಂಬೋದಿ.
ಶಿಷ್ಟ ಹರಿಶ್ಚಂದ್ರಗೆ ಮಸಣದಡಿಗೆಯಂತೆ
ಸೃಷ್ಠಿಸುವ ಬೊಮ್ಮಗೆ ಶಿರಹೋಯಿತಂತೆ.
ಗ್ರಹಚಾರ, ಹಣೆಬರಹ, ಹೊತ್ತುಬಂದಿದ್ದು, ಪಾಲಿಗೆಬಂದದ್ದು ಎಲ್ಲವೂ ಒಂದೇ ಇಂದು ಅನುಭವಿಸುತ್ತಿರುವುದು, ಅದು ಎಲ್ಲಿಗೆ ಬೇಕಾದರೂ ತನ್ನನ್ನು ನಿಲ್ಲಿಸಬಹುದು. ಕೃಷ್ಟನೇ ಬೆಣ್ಣೆಯ ಕಳ್ಳನಾದಂತೆ ಎಂಬ ಉದಾಹರಣೆಯೊಂದಿಗೆ ಮುಕ್ತಾಯವಾಗುವ ಈ ಕೀರ್ತನೆಯಲ್ಲಿ ಸಾದೃಶ್ಯಗಳು ಮನುಷ್ಯನ ದುಸ್ಥಿಗೆ ಮರುಗುವ ಅಗತ್ಯವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ.
ಕರ್ನಾಟಕ ಉರ್ದು ಅಕಾಡೆಮಿಯವರು ಪ್ರಕಾಶಕರೂ ಆಗಿ ಮುದ್ರಿಸಿರುವ ಈ ಪುಸ್ತಕದ ಬೆಲೆ ರೂ. 250/-.






Thanks a lot for translating the poems into Urdu, a lyrical language by itself!
ಸ್ವಾರಸ್ಯದ ಸಂಗತಿಯೆಂದರೆ, `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಪಲ್ಲವಿಯ ಪುರಂದರ ದಾಸರದೊಂದು
ಕೀರ್ತನೆಯಿದೆ! ಕನಕರೂ ಅದೇ ಪಲ್ಲವಿಯನ್ನು ಎತ್ತಿಕೊಂಡು ಬರೆದರು; ಇಬ್ಬರೂ ಕವಿಗಳ ಆಶಯ ಒಂದೇ ಆಗಿದ್ದಿತು.ಅವರು ಕೊಡುವ ಉದಾಹರಣೆಗಳು ಮಾತ್ರ ಬೇರೆ ಬೇರೆ. `ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂಬ ಮಾತು ಜನಪದದಲ್ಲಿ
ಅಗಲೇ ಪ್ರಚಲಿತವಿದ್ದಿರಬೇಕಲ್ಲವೇ? ಈ ಇಬ್ಬರೂ ಕೀರ್ತನಕಾರರು ಪರಸ್ಪರ ಮಿತ್ರರೂ ಆಗಿದ್ದರು ಎಂದ ಮೇಲೆ ಇದಕ್ಕೆ ಇನ್ನಷ್ಟು ಮ್ಹಹತ್ವ ಬರುತ್ತ್ದದೆ!
ಕೆ.ವಿ. ತಿರುಮಲೇಶ್