ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ರಾವ್ ಅನುವಾದಿಸಿದ ಕಥೆ ’ಲುಕ್ರೀಸ್’

ಲುಕ್ರೀಸ್

ಉಮಾ ರಾವ್

ನನ್ನ ಗೋರಿಯ ಬದಿ ನಿಂತು ಅಳಬೇಡ
ನಾನಲ್ಲಿಲ್ಲ. ನಾನಲ್ಲಿ ನಿದ್ರಿಸಿಲ್ಲ..
ನನ್ನ ಗೋರಿಯ ಬದಿ ನಿಂತು
ಗೋಳಾಡಬೇಡ.
ನಾನಲ್ಲಿಲ್ಲ. ನಾನು ಸಾಯಲಿಲ್ಲ.
ಈ ಆತ್ಮಹತ್ಯೆಯ ಅನಿಷ್ಟ ಶುರುವಾದದ್ದು ಪುರಾತನ ರೋಮ್ ನಲ್ಲಿ. ಇಡೀ ಪಟ್ಟಣದಲ್ಲಿ ನಡೆದ ಸ್ಪರ್ಧೆಯಲ್ಲಿ ಲುಕ್ರೀಸ್ ಳನ್ನು ಅತ್ಯಂತ ಪವಿತ್ರಳೂ ಪತಿವ್ರತೆಯೂ ಎಂದು ಘೋಷಿಸಿದಾಗ. ಬೇರೆಲ್ಲಾ ಹೆಂಡತಿಯರೂ ಗಂಡಂದಿರಿಲ್ಲದ ಸಮಯದಲ್ಲಿ ಖುಷಿಯಾಗಿ ತಮ್ಮ ಮನಸ್ಸಿಗೆ ಬಂದಂತಿರುತ್ತಿದ್ದಾಗ , ಲುಕ್ರೀಸ್ ವಿಧೇಯಳಾಗಿ ಮನೆಯಲ್ಲೇ ನೂಲು ತೆಗೆಯುತ್ತಾ ಕೂತು ಕಾಲ ಕಳೆಯುತ್ತಿದ್ದಳು. ಯುದ್ಧಭೂಮಿಯಲ್ಲಿ ಟೆಂಟ್ ಹಾಕಿದ್ದ ಅವಳ ಗಂಡ ಕೊಲ್ಯಾಟಿನಸ್ ಈ ಸುದ್ದಿ ಕೇಳಿ ಹೆಮ್ಮೆಯಿಂದ ಉಬ್ಬಿಹೋದ. ಸ್ವಲ್ಪ ದಿನಗಳ ನಂತರ ಅಲ್ಲಿನ ದುಷ್ಟರಾಜನಾಗಿದ್ದ ಸೆಕ್ಸ್ ಟಸ್ ಮಗ ಲುಕ್ರೀಸಳ ಶೀಲ ‘ಪರೀಕ್ಷೆ ‘ ಮಾಡಲು ಪಣತೊಟ್ಟು ಅವಳ ಮನೆಗೆ ಬಂದ. ಪರೀಕ್ಷಿಸುವ ಸಲುವಾಗಿ , ಅರ್ಧರಾತ್ರಿಯಲ್ಲಿ ಗಾಢನಿದ್ರೆಯಲ್ಲಿದ್ದ ಲುಕ್ರೀಸ್ ಳತ್ತ ಮೆಲ್ಲಗೆ ನುಸುಳಿ, ಅವಳು ಕನಸು ಕಾಣುತ್ತಿದ್ದಾಗ ಅತ್ಯಾಚಾರ ನಡೆಸಿದ್ದ. ಮಾರನೆಯ ದಿನ ಇಡೀ ರೋಮ್ ನಗರ ಈ ಅತ್ಯಾಚಾರದ ಸುದ್ದಿಯಿಂದ ತುಂಬಿ ಹೋಯಿತು. ಸ್ನೇಹಿತರು, ನೆಂಟರಿಷ್ಟರು, ಗಂಡ ಎಲ್ಲಾ ಲುಕ್ರೀಸ್ ಳ ಹತ್ತಿರ ಸೇರಿದರು. ಆ ದುಷ್ಟ ನಿನ್ನ ಗಂಟಲನ್ನು ಸೀಳಿ, ನಿನ್ನ ಸೇವಕನನ್ನು ಕೊಂದು, ನಿನ್ನ ದೇಹದ ಪಕ್ಕ ಬೆತ್ತಲೆ ಮಲಗಿಸುವೆನೆಂದು ಹೆದರಿಸಿದಾಗ ನೀನು ಅವನ ಕಾಮತೃಷೆಗೆ ಶರಣಾದೆ ಎಂದು ಸಮಾಧಾನ ಮಾಡಿದರು.
ತನ್ನ ಬದುಕೆಲ್ಲಾ ಶೀಲದ ಅವಶ್ಯಕತೆ ಏನೆಂದು ಪ್ರಮಾಣ ಮಾಡುತ್ತಿದ್ದಳೋ, ಅದನ್ನು ಲುಕ್ರೀಸ್ ಒಂದು ಹರಿತವಾದ ಚಾಕುವಿನ ಸಹಾಯದಿಂದ ಮಾಡಿ ತೋರಿಸಿದಳು. ಅವಳ ಆತ್ಮಹತ್ಯೆಯ ಸೇಡು ತೀರಿಸಿಕೊಳ್ಳುವವನಂತೆ ಅವಳ ಗಂಡನ ಗೆಳೆಯ ಬ್ರೂಟಸ್ ಅವಳ ಕಳಂಕ ಹೊತ್ತ ಮೃತದೇಹದೆದುರು ನಿಂತು ಬಿಡುಗಡೆ ಎಂದು ಕೂಗಿದ. ಆಗ ರಾಜ್ಯವಾಳುತ್ತಿದ್ದ ಆ ದುಷ್ಟರು ಬ್ರೂಟಸ್ ನ ಸುತ್ತ ದಟ್ಟವಾಗುತ್ತಿದ್ದ ಜನರ ಗಲಭೆಯನ್ನು ಅಲ್ಲೇ ಬಿಟ್ಟು ಅದೃಶ್ಯರಾದರು. ಲುಕ್ರೀಸಳ ನಿರಂತರ ಶೋಕದ ರಾತ್ರಿಯನ್ನು ಅಲ್ಲೇ ಮುಳುಗಿಸಿದರು.
ನೆನಪುಗಳು: ಕೈಗಳು 1
ಚಾಕು ಬರಿಯ ಚಾಕು ಮಾತ್ರ. ಹಾಗೆಯೇ ಕತ್ತಿ ಬರಿಯ ಕತ್ತಿ. ಹಿಂದೊಮ್ಮೆ ಆದ ಅತ್ಯಾಚಾರದ ನೆನಪುಗಳು ಬಿಳಿ ತೊಗಲಿನ ಡಾಕ್ಟರ್, ಪ್ರೊಫೆಸರ್, ಬೀದಿಯಲ್ಲಿ ಎದುರಾಗುವ ಗಂಡೊಬ್ಬನ ಕೈಗಳತ್ತ ಸಾಗುತ್ತದೆ. ಡಾಕ್ಟರ್, ನೀವು ಒಂದು ಪ್ರಶಾಂತ ಮಧ್ಯಾಹ್ನ ವೆನೆಶಿಯನ್ ಪರದೆಗಳ ನೆರಳಿನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದಿರಿ. ಇಂದು ಮಧ್ಯಾಹ್ನ ಬಿಳೀ ಬೆಡ್ಶೀಟುಗಳು ನನ್ನ ಮನಸ್ಸನ್ನು ಸುತ್ತುವರಿದಿವೆ. ನಿಮ್ಮ ಮೀಸೆ ಗಡ್ಡಗಳ ಹಿಂದೆ ಅವಿತುಕೊಂದಿರುವ ತುಟಿಯ ಹಿಂದೆ ನಿಮ್ಮ ಮನ ಬಚ್ಚಿಟ್ಟುಕೊಂಡಿದೆ. ನನ್ನನ್ನು ನಿದ್ರೆ ಕವಿದುಕೊಳ್ಳುತ್ತಿದೆ. ನನ್ನ ದೇಹ ನಿಮ್ಮತ್ತ ಜಾರುತ್ತಿದೆ. ನಿಮ್ಮ ಬೆರಳುಗಳು ಬೆಡ್ ಶೀಟಿನ ಸುಕ್ಕುಗಳನ್ನು ಬಿಡಿಸುತ್ತಿವೆ. ನೀವು ನನ್ನನ್ನು ಪ್ರೀತಿಸುವುದಾಗಿ ಹೇಳುತ್ತೀರಿ. ಏಕೆಂದರೆ ನಾನು ಒಂದು ದಿನ, ಹದಿನೈದು ವರ್ಷಗಳಲ್ಲದಿರುವಾಗ, ಈ ವೈದ್ಯಕೀಯ ಚರಿತ್ರೆ ಮರುಕಳಿಸುವಂತೆ ಮಾಡಬಹುದೆಂದು.
ನಿಮ್ಮ ಕೈಗಳು ನನ್ನ ಹೊಟ್ಟೆಯ ಮೇಲೆ, ಎದೆಯ ಮೇಲೆ ಮೃದುವಾಗಿ ಆಡುತ್ತವೆ. (ನನ್ನ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಉತ್ತರವಿದೆಯೇ? ನನ್ನ ಕೈ ಒಂದು ಕ್ಷಣ ಹೆಚ್ಚು ಸಮಯ ನಿಮ್ಮ ಕೈಯ್ಯಲ್ಲಿತ್ತೇ? ನನ್ನ ಸಂಕೋಚದ ನೋಟ ನಿಮ್ಮನ್ನು ಪರವಶರನ್ನಾಗಿ ಮಾಡಿತೇ?) ನೀವೇ ನನ್ನ ಮೇಲೆ ಅತ್ಯಾಚಾರ ನಡೆಸುವುದನ್ನು ನಾನು ನೋಡುತ್ತೇನೆ. ಎಲ್ಲೋ ನನ್ನ ಕಾಲುಗಳ ಕೆಳಗೆ ಆ ಟೇಬಲ್ ತುದಿಯಲ್ಲಿ ಬರೀ ಬಿಳೀ ಪೇಪರ್ ಕೋಟಾಗಿ. ನನ್ನ ಮಾತುಗಳು ನಿಮ್ಮ ತೊಡೆಗಳನ್ನು ಒದೆಯುತ್ತವೆ. ಅಲ್ಲಾಡಿಸುತ್ತವೆ. ಪತ್ತೆ ಹಚ್ಚಲು ಮಾಡುತ್ತಿರುವ ಈ ಪರೀಕ್ಷೆಯಲ್ಲಿ ಮೌನವೇ ನಿಮ್ಮ ಸಂಗಾತಿ.
ನೆನಪುಗಳು :ಕೈಗಳು 2
ಇನ್ನೊಂದು ಭೂಖಂಡದಲ್ಲಿ, ಮಾರುಕಟ್ಟೆಯಲ್ಲಿ ಓಡಾಡುತ್ತಾ, ಸಮುದ್ರತೀರದ ಕೆಫೆಯಲ್ಲಿ ಕೂಡುತ್ತಾ, ಹೋಟೆಲಿನ ಅಮೃತಶಿಲೆಯ ಲಾಬಿಯಲ್ಲಿ ವಿರಮಿಸುತ್ತಾ ಇರುವ ನಾನು, ನಿನ್ನ ಭಾಷೆಯಲ್ಲಿ ‘ಸಿಸ್ಟರ್’. ವೈಟರ್ ನಿನ್ನ ‘ಅಂಕಲ್’. ಹಾಗೆಯೇ ನಿನ್ನ ಕುಟುಂಬದ ವಲಯ ಹಿಗ್ಗುತ್ತಲೇ ಹೋಗುತ್ತದೆ. ನಿನ್ನಂಥಾ ವಿಧುರನ ಕತೆಯಲ್ಲಿ ಹಾಸುಹೊಕ್ಕಾಗಿ ಡಿಸ್ಕೋದಲ್ಲಿ ನಾವಿಬ್ಬರೂ ನರ್ತಿಸುತ್ತೇವೆ. ನಾನು ಪ್ರೀತಿಸಬೇಕೆಂದು ಅಪೇಕ್ಷಿಸುವ ಚಂದ್ರನ ಪಕ್ಕದಲ್ಲೇ ನೀನು ಮೊರಾಕೋ ತೀರದಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತೀಯಾ. ಒಂದು ಸಿನೆಮಾ ಪ್ರೊಜೆಕ್ಟರ್ ಕೂಡಾ ಇಷ್ಟು ಯಾಂತ್ರಿಕವಾಗಿರಲಿಕ್ಕಿಲ್ಲ. ನೀನು ನನ್ನನ್ನು ಹತ್ತಿರ ಎಳೆದುಕೊಳ್ಳುತ್ತೀಯಾ. ನಿನ್ನ ಬಯಕೆ ನನ್ನದೂ ಎನ್ನುವಂತೆ ನಟಿಸುತ್ತಾ, ನಮ್ಮ ಕಾಲ ಬದಿಯ ಮರಳುಗಾಡಿನ ಚಂದ್ರನನ್ನು ನೋಡುತ್ತಲೇ ವಿದಾಯದ ವಚನಗಳ ತೀರದತ್ತ ಸಾಗುವುದನ್ನು ನಾನು ಹೇಗೆ ಬೇಡವೆನ್ನಲಿ? ನಿನ್ನಿಂದ ಬರುವ ಸುಖದ ಅವಡುಗಚ್ಚಿದ ಶಬ್ದಗಳು ನನ್ನ ಕೈಕಾಲುಡುಗಿಸಿ ಹಿಮ್ಮೆಟ್ಟುವಂತೆ ಮಾಡುತ್ತವೆ. ನನಗಾಗ ಹತ್ತ್ತೊಂಭತ್ತು ವರ್ಷ. ಮರಳದಂಡೆಯ ಮೇಲೆ ಒಬ್ಬ ನರಪಿಳ್ಳೆಯೂ ಇಲ್ಲ. ಮುಸುಕು ಹಾಕಿ ನಮ್ಮತ್ತ ನಡೆದುಬಂದ ಆ ವ್ಯಕ್ತಿಯೂ ಕಳ್ಳನೆಂದು ನೀನು ಹೇಳುತ್ತೀಯಾ. ನಂತರ ನೀನು ನನಗೆ ಹೇಳಿದ್ದು ಅವನೊಬ್ಬ ಪೋಲೀಸನೆಂದು. ನನ್ನ ಒಳಿತನ್ನೇ ನೀನು ಬಯಸುತ್ತೀಯಾ ಎಂದು ನಂಬುವಂತೆ ಮಾಡಿದ್ದು ಏನು? ಅರ್ಧ ರಾತ್ರಿಯಲ್ಲಿ ಮೂರ್ಖ ಹಾಲಿವುಡ್ ನಟಿಯಂತೆ, ನಾನು ಕಾರಿನಿಂದ ಹೊರಗೆ ಹಾರಿದಾಗ ನನ್ನ ಪಾದದ ಕೀಲು ಮುರಿದಿರುತ್ತದೆ. ಯಾರೋ ಅಪರಿಚಿತ ಕುಡುಕರ ಕೈಯ್ಯಲ್ಲಿ ನನಗೆ ಸಾವು ಬರಬಹುದೆಂದು ಎಣಿಸುತ್ತಾ, ನೀನು ನಿನ್ನ ಕಾರಿನಲ್ಲಿ ನನ್ನನ್ನು ಹಿಂಬಾಲಿಸುತ್ತೀಯಾ.
ನೆನಪುಗಳು: ಕೈಗಳು 3

ಈ ಸಲ ನೀನು ನನ್ನ ಬಾಗಿಲು ತಟ್ಟುತ್ತೀಯಾ. ನನ್ನನ್ನು ‘ಗೆಳತಿ’ ಎಂದು ಕರೆಯುತ್ತೀಯಾ. ಮುಸ್ಸಂಜೆ ಹೊತ್ತಿನಲ್ಲಿ ಫೋಟೋಗಳನ್ನು ತೋರಿಸಲು ನೇರವಾಗಿ ಬಾರಿನಿಂದ ಬರುತ್ತೀಯಾ. ಆಗ ಈ ಡಕರ್ ಹೋಟೆಲಿನ ಬಾಲ್ಕನಿಯ ಹಿಂದಿನ ಗದ್ದೆಗಳ ಬಣ್ಣ ಅಷ್ಟೊಂದು ಕ್ರೂರವಾಗಿರುವುದಿಲ್ಲ. ನೀನು ಕಳೆದುಕೊಂಡ ಫ್ರೆಂಚ್ ಪ್ರೇಯಸಿಯ ಕೂದಲಿನ ಬಣ್ಣ ಇರುತ್ತದೆ. ಮೆರೆಲಿನ್ ಮನ್ರೋಳನ್ನು ಹೋಲುವ ನಿನ್ನ ಪ್ರೇಯಸಿಯ ಫೋಟೋ ತೋರಿಸುತ್ತೀಯಾ. ಅವಳ ಕತ್ತಿನಮೇಲೆ ಹಗುರ ನೆರಳು ಕೂತಿದೆ. ಅದು ಅವಳ ಕತ್ತಿನ ಮೂಳೆಯ ಹೃದಯದಾಕಾರದ ಛಾಯೆಯೇ ಅಥವಾ ನಿನ್ನನ್ನು ಅರಿತ ಗುರುತೇ? ಉಷ್ಣ ಹವೆಗೆ ಸ್ವಾಭಾವಿಕವಾದ ದಟ್ಟ ಕೂದಲಿನ ಮುಸುಕು ಹಾಕಿ ನೀನು ನನ್ನತ್ತ ಬರುತ್ತೀಯಾ. ನಾನು ಅದು ತಮಾಷೆಯೆಂದುಕೊಂಡು ನಗುತ್ತಾ ನಿನ್ನನ್ನು ತಳ್ಳಿದಾಗ ನಿನ್ನ ಬಲಿಷ್ಠ ಕೈಗಳು ನನ್ನ ಕೆನ್ನೆಗೆ ಜೋರಾಗಿ ಹೊಡೆಯುತ್ತವೆ. ನಾನಲ್ಲೇ ಧೊಪ್ಪನೆ ಕುಸಿಯುತ್ತೇನೆ. ನಾನು ಅಳುತ್ತೇನೆ, ಕೂಗುತ್ತೇನೆ, ಕಿರುಚುತ್ತೇನೆ. ನೀನೇನಂದುಕೊಂಡಿದ್ದೀಯಾ ಎಂದು ನೀನು ನನ್ನನ್ನು ಗದರಿಸುತ್ತೀಯಾ. ನೀನು ನನ್ನ ಮೇಲೆ ಕಾಮುಕತೆಯಿಂದ ಎರಗಿದಾಗಲೂ ಇದನ್ನು ನಿರೀಕ್ಷಿಸದೆ ಇರಲು ನಾನೆಂಥಾ ಮುಗ್ಧಳಾಗಿರಬೇಕು ಎಂದೆನ್ನಿಸುತ್ತದೆ.

ರಾತ್ರಿ ಎಲ್ಲಾ ನಾನು ಗೋಳಾಡುತ್ತೇನೆ. ಪಕ್ಕದ ಹಾಲಿನಲ್ಲಿ ಕೇಳಿಬರುವ ಪಿಸುಮಾತುಗಳು ಮತ್ತ ಪ್ರೇಮಿಗಳದೇನೋ ಅನ್ನಿಸುತ್ತದೆ. ಮಾರನೆಯ ದಿನ ಬೆಳಿಗ್ಗೆ ನಾನು ಹಾಸಿಗೆಯಿಂದ ಏಳುತ್ತೇನೆ.ಮುಖ ತೊಳೆದು ಆ ಪುಟ್ಟ ಸಿಂಕಿನಲ್ಲಿ ಮತ್ತೆ ಮತ್ತೆ ಕೈ ತೊಳೆಯುತ್ತೇನೆ. ನನ್ನನ್ನು ನಿನ್ನಿಂದ, ನಿನ್ನ ಪ್ರೇಮದ ಸೋಗಿನಿಂದ ರಕ್ಷಿಸಲು ಈ ಊರಿನ ಮೇಲೆ ಯಾವುದಾದರೂ ಸೂರ್ಯ ಹುಟ್ಟಿ ಬೆಳಕು ಚೆಲ್ಲಬಾರದೇ ಎಂದು ಕಾಯುತ್ತೇನೆ. (ನನ್ನ ಪಕ್ಕದಲ್ಲೇ ಮಲಗಿರುವ ಅವನ ದೃಷ್ಟಿ ನನ್ನತ್ತ ಹರಿದಾಗ ಅದರಲ್ಲಿ ಪ್ರೀತಿಯಂತಹದು ಏನೋ ಇರುತ್ತದೆ. ಅವನು ನಾವು ಪ್ರಯಾಣ ಮಾಡಿದ ಹಡಗಿನ ಡೆಕ್ ನೆನಪಿಸಿಕೊಳ್ಳುತ್ತಾನೆ. ನಮ್ಮ ನಡುವಿದ್ದ ಅಗಾಧ ಸಾಗರದ ಬಗ್ಗೆ, ಜಿಬ್ರಾಲ್ಟರ್ ಸುತ್ತಲಿನ ಅಸ್ಥಿರ ಲಯದ ಕಪ್ಪು ಸಮುದ್ರದ ಮೇಲೆ ಆದ ನಮ್ಮ ಭೇಟಿಯ ಬಗ್ಗೆ . ಲಾನ್ಜರೋಟ್ ನ ಕಪ್ಪು ಲಾವಾ ಗುಹೆಯಿಂದ ಬರುತ್ತಿದ್ದ ಶಬ್ದಗಳ ಬಗ್ಗೆ ನಾವು ಹೇಗೆ ನಕ್ಕಿದ್ದೆವೆಂದು ಜ್ನಾಪಿಸಿಕೊಳ್ಳುತ್ತಾನೆ. ಆ ರಾತ್ರಿ ನಾನು ಪ್ರತಿಭಟನೆಯಿಲ್ಲದೆ ಕುಸಿದಾಗ , ನಮ್ಮ ಕೂದಲಿಂದ ಬಿಳೀಮರಳಿನ ಕಣಗಳು ಉದುರುತ್ತವೆ.)

ಈ ಗೊಂದಲದ ಕ್ಷಣಗಳಿಗೆ ಪಾರ್ಶ್ವವಾಯು ಬಡಿದಂತಿರುವಾಗ, ನನಗೆ ಇದು ಕೊನೆಯಾಗುವ ಸಾಧ್ಯತೆಗಳ ಬಗ್ಗೆ ಅರಿವು ಮೂಡುತ್ತದೆ. ನೀನು ನಿನ್ನತ್ತ ನನ್ನನ್ನು ಎಳೆದುಕೊಳ್ಳುತ್ತೀಯಾ. ನನ್ನ ಧ್ವನಿ ನಿನ್ನ ಕಪ್ಪೆಚಿಪ್ಪಿನಂಥಾ ಕಿವಿಗಳೊಳಗೆ ಹಾದು ಹೋಗುತ್ತದೆ. ಕೋಪದಿಂದ ಒಂದು ಕ್ಷಣ ನೀನು ನನ್ನತ್ತ ನೋಡುತ್ತೀಯಾ, ಆದರೆ ನನ್ನನ್ನು ಕಾಣುವುದಿಲ್ಲ. ನೀನು ಮತ್ತೆ ಮತ್ತೆ ನನ್ನನ್ನು ಹಾಯುವಾಗ ನಾನು ನಿನ್ನನ್ನು ಸುಮ್ಮನೆ ನೋಡುತ್ತೇನೆ. ಇದರ ಮೂಲ ಭಯವಿರಬಹುದು. ‘ಫಸ್ಟ್ ವಲರ್್ಡ’ ಬಗ್ಗೆ ಅಸೂಯೆ ಇರಬಹುದು. ಅಥವಾ ನನಗೇನೂ ಸಂಬಂಧ ಪಡದ ನಿಮ್ಮ ಬುಡಕಟ್ಟುಗಳ ನಡುವಿನ ತಿಕ್ಕಾಟವಿರಬಹುದು.ಇದೆಲ್ಲೋ ಶೂನ್ಯದತ್ತ ಎಳೆಯುತ್ತಿರುವಾಗ, ಈ ಕತೆಗೆ ಬೇರೆ ಏನಾದರೂ ಕೊನೆ ಇರುವ ಸಾಧ್ಯತೆ ಇದ್ದರೆ ಇದನ್ನು ಬರೆಯುವುದನ್ನೇ ನಲ್ಲಿಸಿಯೇನು. ತೆರೆದುಕೊಂಡ ನನ್ನ ಮೈಯ್ಯನ್ನು ಸುತ್ತುವರಿದ ನೋವಿನ ನಡುವೆಯೇ ರೂಮಿನ ಬಾಗಿಲ ಸಂದಿಯಿಂದ ತೂರಿಬರುವ ಬೆಳಕು ಸೋರಿಹೋಗುತ್ತಿದೆ. ಬೇಯುತ್ತಿರುವ ಈ ಡಕರ್ ಹೋಟೆಲ್ ರೂಮಿನಲ್ಲಿ ನೋವಿನ ಅಲೆಗಳು ನನ್ನ ದೇಹದ ಮೂಲಕ ಹಾಯ್ದಿದ್ದು ನನಗೆ ನೆನಪಿಲ್ಲ. ಬೆಳದಿಂಗಳಲ್ಲಿ ಹೊಳೆಯುವ ಸಮುದ್ರ ದಂಡೆಯ ಮೇಲೆ ಕಂಡ ಡಾನ್ಸ್ ಬಾರ್ ನ ಹೆಸರೇನೆಂದು ನೆನಪಿಲ್ಲ. ಯಾವ ಬಿಳಿಯನನ್ನೂ ನಿನ್ನ ಸೋದರಿಯರ ಮೇಲೆ ಅತ್ಯಾಚಾರ ನಡೆಸಿದ್ದಕ್ಕಾಗಿ ಜೈಲಿಗೆ ಹಾಕದ ಸೇಂಟ್ ಲೂಯಿ ದ್ವೀಪದ ಹಾದಿ ನೆನಪಿಲ್ಲ.
ಈ ಸಂದರ್ಭವನ್ನು ಅತ್ಯಾಚಾರವೆಂದು ಕರೆಯಲು ನನಗೆ ಹದಿನೈದು ವರ್ಷಗಳು ಬೇಕಾಯಿತು.
ನೆನಪುಗಳು: ಕೈಗಳು 4
ನನಗೆ ನೆನಪಿಲ್ಲ.
ಮೆತ್ತನೆಯ ಹಾಸಿಗೆಯನ್ನು ಪುಟ್ಟ ಹೆಣ್ಣುಮಗುವಿನ ಪಾದಗಳು ಕೋಪದಿಂದ ಒದೆಯುತ್ತಿವೆ. ಮರದ ನೆಲದಲ್ಲಿದ್ದ ಸಂದುಗಳಿಂದ ಹುಲಿ ಸಿಂಹಗಳು ಹೊರಬೀಳುವ ಕನಸುಗಳನ್ನು ಅವಳು ಕಾಣುತ್ತಾಳೆ. ಅವಳ ಹೊದಿಕೆಯ ಬಿಳಿಯ ಲೇಸ್ ಎಲ್ಲರಂತೆಯೇ ಸಾಯುವ ಪ್ರಾಣಿ ತರಪೇತುದಾರನ ಕೈಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.
ಮಮ್ಮಿ. ಡ್ಯಾಡಿ.
ಕನಸಿನಿಂದ ಎಚ್ಚರಾದಾಗ, ಕಿಟಕಿಯಲ್ಲಿ ಒಬ್ಬ ಕಪ್ಪುಕೂದಲಿನ ಮುಖಹೀನ ಮನುಷ್ಯನ(ಬೇಬಿ ಸಿಟರ್? ರತ್ನಶೋಧಕ?) ಆಕೃತಿ ಮೂಡುತ್ತದೆ. ಅವನ ಕೈಗಳು ವಿಚಿತ್ರವಾಗಿ ಚಿಲಿಸುತ್ತಿರುತ್ತವೆ. ಆ ಗೂಢದ ಅರ್ಥ ತಿಳಿಯದೆ ಅವಳ ಎಳೆಯ ಕಾಲುಗಳು ಒದೆಯುತ್ತವೆ.
ಪಾದದ ಕೆಳಗೇ ಸ್ವರ್ಗ 5
ಇಂದು ರಾತ್ರಿ ಈ ಗುಲಾಬಿತೋಟದಲ್ಲಿ ನಿಂತು ನಾನು ನಿಮ್ಮೆಲ್ಲರನ್ನೂ ಒಬ್ಬೊಬ್ಬರಾಗಿ ಅತ್ಯಾಚಾರಿಗಳೆಂದು ಕರೆಯುತ್ತೇನೆ. ನಿಮ್ಮ ನಿಮ್ಮ ಅಲ್ನಟರ್ಾ ಅಥವಾ ಆಫ್ರಿಕಾದ ಸೂರ್ಯನಡಿ ಬದುಕುತ್ತಿರುವ ನಿಮ್ಮನ್ನು ನನ್ನ ಪ್ರಶ್ನೆಗಳು ಕಲಕುವುದೇನು? ನೀವು ಪ್ಯಾರಿಸ್ ಮೇಲೆ ಸುತ್ತು ಹಾಕುವಾಗ ನಾನು ನಿಮಗಾಗಿ ಕಾಯುತ್ತೇನೆ. ನಿಮಗಾಗಿ ಮಾಸ್ಕೋದಲ್ಲಿ ಕಾಯುತ್ತೇನೆ. ಲಂಡನ್ನಿನಲ್ಲಿ ನೀವು ಮನೆಗೆ ಮರಳುವುದಕ್ಕಾಗಿ ಕಾಯುತ್ತೇನೆ.
ವಾಶಿಂಗ್ ಟನ್ ನಲ್ಲಿ, ಬೀಜಿಂಗ್ನಲ್ಲಿ, ನಿಮ್ಮ ಮುಖ ಭಂಗದ ಕತೆಗಳಿಗಾಗಿ ಕಾಯುತ್ತೇನೆ. ಜಗತ್ತೇ ನನ್ನ ಮನೆ.
ಪಟ್ಟಣಗಳಲ್ಲಿ, ನನ್ನ ಧ್ವನಿ ಗಾಢನಿದ್ರೆಯಲ್ಲಿರುವ ಗಂಡಸಿನ ರಕ್ಷೆಯಾದ ಮೌನವನ್ನು ಸೀಳಿ, ಕಾರಿಡಾರುಗಳಲ್ಲಿ ಹಾದು, ಮಹಡಿ ಮೆಟ್ಟಿಲುಗಳ ಮುರಿದ ಕಂಬಿಗಳ ಮೂಲಕ ಹರಿದು ಬಾಗಿಲ ಬೀಗಗಳನ್ನು ಒಡೆಯುತ್ತದೆ. ನನ್ನ ಅಶಾಂತ ಹೃದಯ ನಿನ್ನ ಮಿಡಿಯುವ ದೇಹದ ಲಯಕ್ಕೆ ಸರಿಯಾಗಿ ಬಡಿಯುತ್ತದೆ. ಇವು ನಿನ್ನ ಕಿವಿಗಳಿಗೆ ಕೇಳುವುದಿಲ್ಲ.
* * *
ಲೇಖಕಿ: ಜ್ಯಾನಿಸ್ ವಿಲಿಯಮ್ ಸನ್
ಅನುವಾದ: ಉಮಾ ರಾವ್
ಲೇಖಕಿಯ ಬಗ್ಗೆ :
ಜ್ಯಾನಿಸ್ ವಿಲಿಯಮ್ ಸನ್ ಲೇಖಕಿ, ವಿಮರ್ಶಕಿ, ಸಂಪಾದಕಿ ಹಾಗೂ ವೀಡಿಯೋ ಚಿತ್ರ ನಿರ್ಮಾಪಕಿ. ಕೆನೆಡಿಯನ್ ಕವಿಯಿತ್ರಿಯರ ಕುರಿತು ಪಿಎಚ್.ಡಿ. ಮುಗಿಸಿದ ನಂತರ, ಇವರು ಸ್ತ್ರೀವಾದಿ ಸಾಹಿತ್ಯ್ಯದ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ. ಟೆಲೆಟೇಲ್ ಸೈನ್ಸ್: ಫಿಕ್ಶನ್,ಅಲ್ಟಿತ್ಯೂಡ್ 2, ಸೌಂಡಿಂಗ್ ದಿಫರೆನ್ ಸಸ್: ಕಾನ್ವಸರ್ೆಶನ್ಸ್ ವಿದ್ ಸೆವೆನ್ಟೀನ್ ಕೆನೆಡಿಯನ್ ವಿಮೆನ್ ರೈಟರ್ಸ್ ಇವರ ಕೆಲವು ಕೃತಿಗಳು. ಇವರ ಕೃತಿ ‘ಲುಕ್ರೀಸ್’ ಪ್ರಖ್ಯಾತ ಪುಶ್ ಕಾರ್ಟ್ಟ ಬಹುಮಾನಕ್ಕೆ ಸೂಚಿತವಾಗಿತ್ತು.

‍ಲೇಖಕರು avadhi

13 August, 2013

1 Comment

  1. sunil rao

    Bahala ishta aaytu madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading