ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಪ್ಪಿಯ ರುಪ್ಪೀಸ್ ರೆಸಾರ್ಟ್ ಪ್ರಜಾಕೀಯ?

‘ಅವಧಿ’ಯಲ್ಲಿ ಪ್ರಕಟವಾದ ಮಧುಸೂಧನ ನಾಯರ್ ಅವರ

‘ಉಪೇಂದ್ರರಿಗೆ ಐದು ಪ್ರಶ್ನೆಗಳು’ ಲೇಖನಕ್ಕೆ ಪ್ರತಿಕ್ರಿಯೆ 

 

 

ಪ್ರಜೆಗಳಿಗೆ ದಕ್ಕೀತೇ ಉಪ್ಪಿಯ ರುಪ್ಪೀಸ್ ರೆಸಾರ್ಟ್ ಪ್ರಜಾಕೀಯ?

ಡಾ. ಗ್ಲ್ಯಾಡ್‍ಸನ್ ಜತ್ತನ್ನ / ಮಂಗಳೂರು

 

ಸಿನೆಮಾ ನಟರ ರಾಜಕೀಯ ನಂಟು ಹಲವು ವೈರುಧ್ಯಗಳ ತಾಣ. ಅಂತೆಯೇ ಉಪೇಂದ್ರರ “ಪ್ರಜಾಕೀಯ”ದ ಹೆಸರಿನಲ್ಲಿ ಆರಂಭವಾಗಿರುವ ಅಸಲು ರಾಜಕೀಯ. ರಾಜಕೀಯ ಪ್ರವೇಶದ ನಿರ್ಧಾರದ ದಿನ ಅವರು ಧರಿಸಿದ್ದು ಖಾಕಿ ಅಂಗಿ. ಅದು ಕಾರ್ಮಿಕರ ಸಂಕೇತವಂತೆ. ಆದ್ದರಿಂದಲೇ ಅದು ಅವರ ಹೊಸ ಪಕ್ಷದ ಸಂಕೇತವೂ ಹೌದಂತೆ.

“ಇನ್ನು ಮುಂದೆ ರಾಜಕಾರಣ ನಡೆಯೋದಿಲ್ಲ; ಇನ್ನು ಏನಿದ್ರೂ ಕಾರ್ಮಿಕರ ಧರ್ಬಾರು” ಇದು ಉಪೇಂದ್ರರು ಮೀಡಿಯಾಗಳ ಮುಂದೆ ಸಿಡಿಸುತ್ತಿರುವ ಜಾರ್ಗನ್ನು. ಆದರೆ ವೈರುಧ್ಯವೆಂದರೆ ಈ ಸಂದರ್ಶನ ನಡೆದದ್ದು ಬೆಂಗಳೂರಿನಿಂದ ಅನತಿ ದೂರದಲ್ಲಿರುವ ದೊಡ್ಡಾಲದಮರದ ಸಮೀಪ 10 ಎಕರೆ ಜಾಗದಲ್ಲಿ. ಉಪೇಂದ್ರರ ಕನಸ ಕೂಸಾಗಿ ಹುಟ್ಟಿಕೊಂಡಿರುವ ಐಶಾರಾಮಿ ‘ರುಪ್ಪೀಸ್ ರೆಸಾರ್ಟಿ’ನಲ್ಲಿ. ಉಪೇಂದ್ರರವರು ಪತ್ನಿ ಪ್ರಿಯಾಂಕ ಮತ್ತು ಸಹೋದರ ಸುಧೀಂದ್ರರವರೊಂದಿಗೆ ನಡೆಸುತ್ತಿರುವ ಹೋಟೆಲ್ ಮತ್ತು ರೆಸಾರ್ಟ್ ಇದು. ಇನ್ನು ಮುಂದಕ್ಕೆ ಇದೇ ಉಪೇಂದ್ರರ “ಪ್ರಜಾಕೀಯ” ಪಕ್ಷದ ಪಾರ್ಟಿ ಆಫೀಸು.

ಇನ್ನು ಉಪೇಂದ್ರರ “ಪ್ರಜಾಕೀಯ” ನಡೆಯುವುದು ಈ ರೆಸಾರ್ಟಿನಲ್ಲೇ. ಒಂದೊಮ್ಮೆ ನೀವೂ ಹೋಗಬೇಕು ಈ ರೆಸಾರ್ಟಿಗೆ, ಇದರ ಐಶಾರಾಮವನ್ನು ನೋಡಲಿಕ್ಕೆ. ಇಲ್ಲಿ ತಂಗಲು ಕೊಠಡಿಗಳಿಲ್ಲ, ಬರೇ ಕಾಟೇಜುಗಳು ಮಾತ್ರ. ಇವುಗಳ ಹೆಸರು ಕೇಳಿದರೇ ದಂಗಾದೀರಿ, ಜೋಕೆ! ಯಾಕೆಂದರೆ ಇವ್ಯಾವುವೂ ಸಾಮಾನ್ಯ “ಪ್ರಜೆ”ಗೆ ಎಟಕುವ ಕಾಟೇಜುಗಳಲ್ಲ. ಖಾಕಿ ಧರಿಸಿದವನಿಗಂತೂ ಇವು ಕನಸಿಗೂ ನಿಲುಕದ ಮೊಹಲ್ಲಾಗಳು. ಕೆಲವನ್ನು ಇಲ್ಲಿ ಹೆಸರಿಸುತ್ತೇನೆ ಕೇಳಿ: ಲಕ್‍ಪತಿ ಸ್ಟುಡಿಯೋ ಕಾಟೇಜು, ಲಕ್‍ಪತಿ ಸೂಟ್ ಕಾಟೇಜು, ಸಹಸ್ರಪತಿ ಸ್ಟಾಂಡರ್ಡ್ ಕಾಟೇಜು ಇತ್ಯಾದಿ. ಇಲ್ಲಿ ಲಕ್ಷಾಧಿಪತಿ, ಸಹಸ್ರಾಧಿಪತಿಗಳಿಗಲ್ಲದೆ ಖಾಕಿ ಧರಿಸಿದ ಸಾಮಾನ್ಯ “ಪ್ರಜೆ”ಗೆ ಸ್ಥಳವೆಲ್ಲಿದೆ? ಮತ್ತಿವರು ಮಾಡ ಹೊರಟಿರುವ ರಾಜಕಾರಣಕ್ಕೆ “ಪ್ರಜಾಕಾರಣ” ಎಂಬ ಹೆಸರು ಬೇರೆ, ಕಾರ್ಮಿಕರ ಖಾಕಿ ಬಟ್ಟೆಯ ಸಂಕೇತ ಬೇರೆ.

ಇನ್ನು ಉಪೇಂದ್ರರ ಪ್ರಜಾಕೀಯದಲ್ಲಿ ಯಾರೂ ಭಾಗವಹಿಸಬಹುದೆಂಬ ಅಪ್ಪಟ ಸುಳ್ಳು.

ಉಪೇಂದ್ರ ಸ್ವತಃ ಹೇಳುವಂತೆ ಎಲ್ಲವೂ ನಡೆಯುವುದು ಇನ್ನು ಸಾಮಾಜಿಕ ಜಾಲತಾಣದಲ್ಲಿ. ಅಂದರೆ ಅಭ್ಯರ್ಥಿಗಳ ಹುಡುಕಾಟ, ಆಯ್ಕೆಯ ಪ್ರಕ್ರಿಯೆ ಇವೆಲ್ಲಾ ಜಾಲತಾಣಗಳಲ್ಲಿಯೇ! ಉಪೇಂದ್ರರಿಗೆ ನಮ್ಮ ಸರ್ಕಾರದ ಇತ್ತೀಚೆಗಿನ ಅಂಕಿ ಅಂಶಗಳನ್ನೊಮ್ಮೆ ನೆನಪಿಸುವುದು ಉಚಿತ ಎಂದು ತೋರುತ್ತದೆ. ಕೇಂದ್ರ ಸರ್ಕಾರದ “ಗೋ-ಡಿಜಿಟಲ್” ಅಲೆಯ ಬೆನ್ನಲ್ಲೇ ನಡೆದ ಸಮೀಕ್ಷೆಯನ್ವಯ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಒಟ್ಟು ಸಂಖ್ಯೆ ಶೇಕಡ 28 ಮಾತ್ರ.

ಅಂದರೆ 72 ಶೇಕಡ “ಪ್ರಜೆ”ಗಳಿಗೆ ಉಪೇಂದ್ರರ “ಪ್ರಜಾಕಾರಣ”ದಲ್ಲಿ ನೋ ಟಿಕೆಟ್! ಇದೆಂಥಾ “ಪ್ರಜಾಕೀಯ” ಸ್ವಾಮಿ? ಉಪೇಂದ್ರರ “ಪ್ರಜಾಕೀಯ”ದ ಹಿಂದಿರುವ ರಾಜಕೀಯ ಉದ್ದೇಶ ಮತ್ತು ಮಸಲತ್ತುಗಳನ್ನು ಅರ್ಥೈಸುವಲ್ಲಿ ಈ ಪ್ರಶ್ನೆಗಳೂ ಅನಿವಾರ್ಯವಾಗದಿರವೇ? ಇದಕ್ಕೆಲ್ಲಾ ಉಪೇಂದ್ರರೇ ಸ್ವತಃ ಉತ್ತರಿಸುವರೋ, ಇಲ್ಲ ಅವರ ಅಭಿಮಾನಿಗಳು ಉತ್ತರಿಸುವರೋ ಕಾದು ನೋಡಬೇಕಿದೆ.

‍ಲೇಖಕರು avadhi

17 August, 2017

1 Comment

  1. Adrian

    Rajakeeya nayakaru, rajakeeyakke iliyuva munna hora thorikege haakikolluva batte janara maana muchuvudakalla, maana thegeyuvudakke, awru topi haakilodu nayakaragi munnedesuvudakkalla janarige Topi haakodakke, upendra istu varshagala sudheerga chinthaneya nanthara Rajakeeya pravesha maadirodhe kuthuhala huttisuva vishaya. Kaadu nodona annodakke yenu ulidilla. Kaavuvavarige resort na sundaravaada chithra(photo) maathra sikkodu.

Trackbacks/Pingbacks

  1. ಉಪ್ಪಿ ಎಂಬ ಮಿಕ್ಸ್ ಮಸಾಲ.. – Avadhi/ಅವಧಿ - […] ‘ಉಪೇಂದ್ರರಿಗೆ ಐದು ಪ್ರಶ್ನೆಗಳು’ ಲೇಖನಕ್ಕೆ ಪ್ರತಿಕ್ರಿಯೆ  […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading