‘ಅವಧಿ’ಯಲ್ಲಿ ಮಧುಸೂದನ್ ನಾಯರ್ ಅವರ ‘ಉಪೇಂದ್ರ ರವರಿಗೆ ಐದು ಪ್ರಶ್ನೆಗಳು’
ಲೇಖನಕ್ಕೆ ಪ್ರತಿಕ್ರಿಯೆ

ಪ್ರಜಾಕೀಯದಲ್ಲಿ ಉತ್ತರಿಸಬೇಕಾದವನು ಪ್ರಜೆಯಷ್ಟೇ!
ಸದಾಶಿವ್ ಸೊರಟೂರು
ನಿಮ್ಮ ಪ್ರಶ್ನೆಗಳನ್ನು ನೋಡಿ ಉಪೇಂದ್ರ ಅವರು ಉತ್ತರಿಸುತ್ತಾರೋ ಇಲ್ಲವೊ ಗೊತ್ತಿಲ್ಲ.
ನಿಮ್ಮ ಬರಹವನ್ನು ಓದಿದ ನಾನಂತೂ ಉಪೇಂದ್ರ ವಿಷಯಕ್ಕೆ ಬರುವ ಮೊದಲು ನಿಮ್ಮ ಮಾತುಗಳಲ್ಲಿ ಗಮನಿಸಿದಿಷ್ಟು!
ನೀವು ಪಕ್ಕಾ ಭಾರತೀಯ ರಾಜಕೀಯ ಮನಸ್ಥಿತಿಯಲ್ಲಿ ಮಾತನಾಡಿದ್ದೀರಿ. (ಉಪೇಂದ್ರ ಅವರ ಕಲ್ಪನೆ ಅದನ್ನು ಮೀರಿದೆ) ಅದರಲ್ಲಿ ನಿಮ್ಮ ತಪ್ಪಿಲ್ಲ! ೭೦ ವರ್ಷಗಳಿಂದ ಅದನ್ನು ನೋಡಿ, ಕೇಳಿ ಕೇಳಿ ಬೆಳೆದ ನಮಗೆ ನಿಮಗೆಲ್ಲಾ ಇದು ಸಾಮಾನ್ಯವಾಗಿಬಿಟ್ಟಿದೆ.
ಒಂದು ಪಕ್ಷ, ಒಂದು ಸರ್ಕಾರ, ಒಂದು ಆಡಳಿತವೆಂದರೆ ಅದು ಸಿದ್ದಾಂತಗಳನ್ನು ಹೊಂದಿರುವುದು ಸಾಮಾನ್ಯ! ಆದರೆ ಆ ಸಿದ್ದಾಂತಗಳು ಜನರ ಸಿದ್ದಾಂತಗಳಾಗಿರುವುದಿಲ್ಲ ಎಂಬುದು ನಮಗೆ ತಿಳಿಯದ್ದೇನೂ ಅಲ್ಲ! ಕಾಂಗ್ರೆಸ್ ಸಿದ್ದಾಂತಗಳು ಕೆಲವರಿಗೆ ಇಷ್ಟವಾಗಬಹುದು. ಬಾಜಪದ ಸಿದ್ದಾಂತಗಳನ್ನು ಕೆಲವರು ತಿರಸ್ಕರಿಸಬಹುದು. ಈ ಸಿದ್ದಾಂತಗಳು ಮಾಡುವ ಕೆಲಸಗಳು ಏನೆಂದರೆ ಅದರ ಆಧಾರದ ಮೇಲೆಯೇ ಜನರನ್ನು ವಿಭಾಗಿಸುವುದು. ಅವುಗಳನ್ನೇ ವೋಟುಗಳಾಗಿ ಪರಿವರ್ತಿಸಿಕೊಳ್ಳುವುದು.

ನಿಮ್ಮ ಮತ್ತು ನಮ್ಮ ಕಣ್ಣಿಗೆ ಕಾಣುವಂತೆಯೆ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ದೊಡ್ಡ ಪಕ್ಷಗಳು ತಮ್ಮ ಸಿದ್ದಾಂತವನ್ನು ಆಧರಿಸಿಯೇ ಜನರನ್ನು ವಿಭಾಗಿಸಿವೆ. ಜನರು ಕೂಡ ಅದನ್ನು ಕಣ್ಮುಚ್ಚಿಕೊಂಡು ಹಿಂಬಾಲಿಸಿದ್ದಾರೆ. ಏಕೆಂದರೆ ಅವರಿಗೆ ಬೇರೆ ಆಯ್ಕೆಗಳಿಲ್ಲ!
ಸಿದ್ದಾಂತಗಳು ಇರಲೇಬೇಕೆಂದರೆ ಅದನ್ನು ಪಕ್ಷವಾಗಲಿ, ಆ ಪಕ್ಷದ ಮುಖಂಡನಾಗಲಿ ತನಗೆ ಇಷ್ಟವಾದಂತೆ ರೂಪಿಸಿಕೊಳ್ಳುವುದಲ್ಲ! ಬದಲಿಗೆ ಅದನ್ನು ಜನ ನಿರ್ಧರಿಸಬೇಕು. ನೀವು ಬಹುಶಃ ಉಪೇಂದ್ರ ಅವರು ವಿವಿಧ ಸಂದರ್ಭದಲ್ಲಿ ಆಡಿದ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಇಲ್ಲಿ ಅವರೊಬ್ಬ ನಾಯಕ ಖಂಡಿತ ಅಲ್ಲ. ಬೇರೆ ಪಕ್ಷಗಳಂತೆ ಅವರೊಬ್ಬ ಹೈಕಮಾಂಡ್ ಕೂಡ ಅಲ್ಲ. ಅವರೊಂದು ಮಾಧ್ಯಮವಷ್ಟೇ. ಪ್ರಜೆಗಳ ಭಾವಕ್ಕೆ ಅವರೊಂದು ಧನಿಯಷ್ಟೇ! ಎಂಬುದು ಅವರ ಮಾತಿನ ಹಿಂದೆ ವ್ಯಕ್ತವಾಗುವ ಭಾವ!
ಎಲ್ಲಾ ಜನರು ಬಯಸುವ ಇಚ್ಚೆಗಳೇ ಆ ಪಕ್ಷದ ಇಚ್ಚೆಗಳು; ಅದೇ ಅವರ ಮೊಟೊ! ಅವರು ಕ್ಲಿಯರ್ ಆಗಿ ಹೇಳಿಬಿಟ್ಟಿದ್ದಾರೆ. ಇಲ್ಲಿ ಎಲ್ಲವೂ ಜನರಿಂದ ಆಗುವಂತದ್ದು, ಅವರು ಬಯಸಿದಂತೆ ಪಕ್ಷ ಮುಂದೆ ಹೋಗುತ್ತದೆ ಹೊರೆತು ನಾನು ಬಯಸಿದಂತೆ ಅಲ್ಲ ಎಂದಿದ್ದಾರೆ. ನಿಜಕ್ಕೂ ಒಂದು ಪಕ್ಷ ಹೀಗೆ ಸಾಗಬೇಕು. ಅದೇ ತಾನೇ ಪ್ರಜಾಪ್ರಭುತ್ವದ ನಿಜವಾದ ಅರ್ಥ!
ಪ್ರಜಾಕೀಯದಿಂದಾಗುವ ರಾಜ್ಯ ರಾಜಕೀಯದ ಬದಲಾವಣೆಯ ಕುರಿತಂತೆ ಸೂಚ್ಯವಾಗಿ ಮಾತಾನಾಡಿದ್ದೀರಿ. ಅದರ ಹಿಂದಿನ ಧ್ವನಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ! ಒಂದಿಷ್ಟು ವೋಟುಗಳನ್ನು ಕಬಳಿಸಿ ಬೇರೆ ಅಭ್ಯರ್ಥಿ ಅಥವಾ ಪಕ್ಷಕ್ಕೆ ಸೋಲಾಗುವ, ಗೆಲುವಾಗುವ ಒಳಾರ್ಥವಿರಬಹುದು. ನಿಮ್ಮ ಉದ್ದೇಶ ಈಗ ಹೇಗಿದೀಯೊ ಹಾಗೆ ಸಾಗಬೇಕೊ ಅಥವಾ ಏನಾದರೂ ಒಂದು ಬದಲಾವಣೆ ಬರಬೇಕೊ ಎಂಬುದು ನನ್ನ ಗಮನಕ್ಕೆ ನಿಲುಕುತ್ತಿಲ್ಲ. ರಾಜಕೀಯ ಸ್ಥಿತ್ಯಂತರ ಆಗುವುದಿದ್ದರೆ ಆಗಲಿ ಬಿಡಿ. ಏನೂ ಆಗುತ್ತದೆ ಅಥವಾ ಆಗಬಾರದೆಂದು ಸುಮ್ಮನೆ ಕೂರುವುದು ಎಂದಿಗೂ ತರವಲ್ಲ. ಏಕೆಂದರೆ ಈಗ ಇರುವ ವ್ಯವಸ್ಥೆಯಿಂದ ಜನ ಬೇಸತ್ತ ಮೇಲೆ ಯಾವುದು ಬೇಕೊ ಅದನ್ನು ಆಯ್ದುಕೊಳ್ಳುತ್ತಾರೆ.
ಅವರು ತಮ್ಮೆಲ್ಲ ಮಾತುಗಳಲ್ಲಿ ಯಾವೆಲ್ಲವೂ ನಮ್ಮನ್ನು ಇದುವರೆಗೂ ನಮ್ಮನ್ನು ಹಣ್ಣಾಗಿಸಿವೆ ಎಂದು ಹೇಳಿದ್ದಾರೋ ಅವುಗಳನ್ನೆ ಮುಂದಿಟ್ಟುಕೊಂಡು ಮಾತಾಡಿದ್ದೀರಿ. ಒಂದು ಪಂಥವೆಂಬುದು ಇರಲೇಬೇಕಾ ಒಂದು ಪಕ್ಷಕ್ಕೆ? ಪಂಥವಿಲ್ಲದ ಸರ್ವರು ಸೇರಿದ ಏಕೈಕ ಪಂಥವಾಗಬೇಕು ನಮ್ಮದು ಎಂಬುದು ನಿಮಗೆ ಅರ್ಥವಾಗದೇ ಹೋಗಿರಬಹುದು. ಈಗಿರುವ ಎಲ್ಲದಕ್ಕಿಂತ ಭಿನ್ನವಾದ ವ್ಯವಸ್ಥೆ ಬಗ್ಗೆ ಮಾತಾಡುವಾಗ ನೀವು ಯಾಕೆ ಅದೇ ಸವಕಲು ವಿಷಯಗಳನ್ನು ಮುಂದಿಟ್ಟಿದ್ದೀರಿ ಅರ್ಥವಾಗುತ್ತಿಲ್ಲ. ಒಂದೊಳ್ಳೆ ಸರ್ಕಾರ ಬಂದರೆ ನಿಜಕ್ಕೂ ಅವು ಸಮಸ್ಯೆಗಳೇ ಅಲ್ಲ ಎಂಬುದು ನನ್ನ ಅಭಿಮತ. ಅಂತಹ ಸರ್ಕಾರಗಳನ್ನು ನೋಡಿ ನೋಡಿ ನಮಗೆ ಅವು ನಮಗೆ ಒಂದು ಸವಾಲಾಗಿ ಕಾಡಿವೆ ಅಷ್ಟೇ!ಮನುಷ್ಯನ ಸಹಜ ಗುಣ ಹೊಸದನ್ನು ಅನುಮಾನದಿಂದ ನೋಡುವುದು, ಅದು ನಿಮ್ಮ ಮಾತುಗಳಲ್ಲಿದೆ.
ನಮಗೆ ಯಾವ ರಾಜಕೀಯವೂ ಮುಖ್ಯವಲ್ಲ ಪಕ್ಷಗಳೂ ಕೂಡ! ಜನರಿಗೆ ಒಳ್ಳೆಯದಾಗಬೇಕು ಅಷ್ಟೇ. ಅಂತಹ ಯಾವ ಬದಲಾವಣೆ ಬಂದರೂ ಜನ ಅದನ್ನು ಸ್ವೀಕರಿಸುತ್ತಾರೆ. ಯಾವ ವಿಮರ್ಶೆ, ಟೀಕೆಗಳ ಮೇಲೂ ಅದು ನಿಂತಿರುವುದಿಲ್ಲ. ಜೈಲಿಗೆ ಹೋಗಿಬಂದ, ಹೆಂಡ ಹಂಚಿದವರನ್ನು ಅನಾಯಸವಾಗಿ ನಂಬಿ ಗೆಲ್ಲಿಸುವ ನಾವು ಉಪೇಂದ್ರ ರವರ ಒಂದು ಹೊಸತನದ ಪ್ರಯತ್ನಕ್ಕೆ ಯಾಕಿಷ್ಟು ರಾಶಿ ರಾಶಿ ಪ್ರಶ್ನೆಗಳನ್ನು ಹಾಕುತ್ತೇವೆ ಅರ್ಥವಾಗುತ್ತಿಲ್ಲ






ಜೈಲಿಗೆ ಹೋಗಿಬಂದ, ಹೆಂಡ ಹಂಚಿದವರನ್ನು ಅನಾಯಸವಾಗಿ ನಂಬಿ ಗೆಲ್ಲಿಸುವ ನಾವು ಉಪೇಂದ್ರ ರವರ ಒಂದು ಹೊಸತನದ ಪ್ರಯತ್ನಕ್ಕೆ ಯಾಕಿಷ್ಟು ರಾಶಿ ರಾಶಿ ಪ್ರಶ್ನೆಗಳನ್ನು ಹಾಕುತ್ತೇವೆ ಅರ್ಥವಾಗುತ್ತಿಲ್ಲ
Idu namma durantha Sadashiv!