ಉಪೇಂದ್ರ ಅವರ ಹೇಳಿಕೆ ನಿಜವೇ?

ಹರೀಶ್ ಶೆಟ್ಟಿ ಬಂಡ್ಸಾಲೆ

ಇತ್ತೀಚೆಗೆ ತಮ್ಮ ಹೊಸ ರಾಜಕೀಯ ಪಕ್ಷವನ್ನು ಕಟ್ಟಿರುವ ನಟ ಉಪೇಂದ್ರ ಅವರು ಬ್ರಾಹ್ಮಣ ಸಮುದಾಯದ ಜನರಿಗೆ ಪ್ರತ್ಯೇಕವಾಗಿ ದಿನಸಿ ಕಿಟ್ ವಿತರಿಸಿದ್ದು ಗದ್ದಲ ಎಬ್ಬಿಸಿತ್ತು. ಅದರ ಪರ ವಿರೋಧ ಚರ್ಚೆಗಳಲ್ಲಿ ಇದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ಕೆಲವರು ಹೇಳಿದರೆ, ಸ್ವತಃ ಉಪೇಂದ್ರ ಸೇರಿ ಬಹಳಷ್ಟು ಜನರು ಇದು ಬಡತನದಲ್ಲಿದ್ದವರಿಗೆ ಮಾಡಿದ ಸಹಾಯವೇ ವಿನಃ ಜಾತಿಯ ಆಧಾರದ ಮೇಲಲ್ಲ, ಬಡತನಕ್ಕು ಜಾತಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮುಂದುವರಿದು ಟಿವಿ ಮಾಧ್ಯಮದ ಸಂದರ್ಶನ ಒಂದರಲ್ಲಿ ಈ ಕುರಿತು ಮಾತನಾಡಿರುವ ಉಪೇಂದ್ರ, ‘ಈ ದೇಶದಲ್ಲಿ ಯಾವ ಬಿಸಿನೆಸ್ ಕೂಡ ಜಾತಿ ಆಧಾರದಲ್ಲಿ ನಡೆಯುವುದಿಲ್ಲ, ಅದು ರಾಜಕೀಯದಲ್ಲಿ ಮಾತ್ರ’ ಎಂದು ದೃಢವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಲೇಖನದಲ್ಲಿ ಉಪೇಂದ್ರರವರ ಈ ಹೇಳಿಕೆಯ ಹಿಂದಿನ ಮರ್ಮಗಳನ್ನು ವಿಮರ್ಶಿಸಲು ಹೋಗದೆ, ಈ ಹೇಳಿಕೆಯನ್ನೇ ವಿಮರ್ಶಿಸುವ ಪ್ರಯತ್ನ ಮಾಡೋಣ. ಉಪೇಂದ್ರ ಅವರ ಹೇಳಿಕೆ ನಿಜವೇ? ಅವರಂತೆ ಸಾಮಾನ್ಯವಾಗಿ ಎಲ್ಲರೂ ವ್ಯಕ್ತಪಡಿಸುವ ‘ಜಾತಿ ವ್ಯವಸ್ಥೆ ಕೇವಲ ಒಂದು ಪುರಾತನವಾದ ವ್ಯವಸ್ಥೆ ಮತ್ತು ಇವತ್ತು ಅದು ಎಲ್ಲೂ ಇಲ್ಲ. ಆಧುನಿಕ ಸಮಾಜದಲ್ಲಿ ಎಲ್ಲಾ ಪ್ರತಿಭೆಯ (ಮೆರಿಟ್) ಮೇಲೆ ನಿಂತಿದೆ’ ಎಂಬ ನಂಬಿಕೆ ನಿಜವೇ?

ಕಳೆದ ಕೆಲವು ದಶಕಗಳ ಸಂಶೋಧನೆ ಮತ್ತು ಶೈಕ್ಷಣಿಕ ಅಧ್ಯಯನಗಳು ಮೇಲಿನ ಹೇಳಿಕೆಗಳಿಗೆ ತದ್ವಿರುದ್ದವಾಗಿ ಜಾತಿ ವ್ಯವಸ್ಥೆ ಇವತ್ತಿಗೂ ಪ್ರಸ್ತುತವಾಗಿದೆ ಮತ್ತು ಶೋಷಿತರನ್ನು ಮತ್ತಷ್ಟು ಹಿಂದುಳಿದವರನ್ನಾಗಿ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಿದೆ. ಜಾತಿ ವ್ಯವಸ್ಥೆ ಆಧುನಿಕ ಸಮಾಜದಲ್ಲಿ ಶಿಕ್ಷಣ, ಉದ್ಯೋಗ ಮತ್ತು ವ್ಯವಹಾರದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ. 

ಖ್ಯಾತ ಮಾನವಶಾಸ್ತ್ರಜ್ಞ ಡೇವಿಡ್ ಮೊಸ್ (೨೦೧೮) ಹೇಳುವಂತೆ ಉದ್ಯೋಗ ಮಾರುಕಟ್ಟೆಯಲ್ಲಿ ಭಾರತದ ಜಾತಿ ವ್ಯವಸ್ಥೆಯಿಂದಾಗುವ ತಾರತಮ್ಯತೆ ಎರಡು ಹಂತದಲ್ಲಿ ಕೆಲಸ ಮಾಡುತ್ತದೆ.

ಒಂದು ಪರೋಕ್ಷವಾಗಿ ‘ಮೆರಿಟ್’ನ ಹೆಸರಿನಲ್ಲಿ, ಇನ್ನೊಂದು ಪ್ರತ್ಯಕ್ಷವಾಗಿ ಜಾತಿಯ ಸೂಚಕ ಹೆಸರಿನಲ್ಲಿ. ಪರೋಕ್ಷವಾಗಿ ಇವತ್ತು ನಾವು ಮೆರಿಟ್ ಎಂದು ಕರೆಯುವ, ಅಭ್ಯರ್ಥಿಗಳಲ್ಲಿ ಇರಬೇಕಾದ ಕೆಲವೊಂದು ಲಕ್ಷಣಗಳು, ಮಾತಿನ ಕೌಶಲ್ಯ, ಸಾಂಸ್ಕೃತಿಕ ಸಾಮರ್ಥ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಗಿಂತಲು ತಮ್ಮ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುತ್ತದೆ. ಇದಕ್ಕೆ ಪೂರಕವಾಗಿ ಜೋದ್ಕಾ ಮತ್ತು ನ್ಯೂವ್‌ಮ್ಯಾನ್ (೨೦೦೭) ರ ಸಂಶೋಧನೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳು ತಮ್ಮ ಆಯ್ಕೆಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಕೌಟುಂಬಿಕ ಹಿನ್ನೆಲೆ, ಅವರ ಪೋಷಕರ ಶಿಕ್ಷಣ, ಅಕ್ಕತಮ್ಮಂದಿರ ಕೆಲಸ, ವಾಸಿಸುವ ಸ್ಥಳ ಇತ್ಯಾದಿ ಮಾನದಂಡಗಳು ಬಹಳ ಮುಖ್ಯವಾಗಿದ್ದು, ಅವರ ಗುಣನಡತೆಯನ್ನು ತಿಳಿಯುವುದಕ್ಕೆ ಬಳಸುತ್ತೇವೆ ಎಂದು ಹೇಳಿದ್ದಾರೆ. ‌

ಇವತ್ತಿನ ಜಾಗತಿಕ ಮಾರುಕಟ್ಟೆಗೆ ಬೇಕಾಗಿರುವ ಭಾಷೆ ಮತ್ತು ಸಾಮಾಜಿಕ ಕೌಶಲ್ಯಗಳು, ಅಪೇಕ್ಷಿತ ಕೌಟಂಬಿಕ ಹಿನ್ನಲೆ ಎಲ್ಲವು ಮೇಲ್ಜಾತಿ ಮತ್ತು ಮೇಲ್ವರ್ಗದ ಮನೆಗಳಿಂದ ದೊರಕುತ್ತದಯೇ ವಿನಃ ಮೊದಲ ಪೀಳಿಗೆಯ ವಿದ್ಯಾವಂತರನ್ನು ಈಗ ಹೊಂದುತ್ತಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಮನೆಯಿಂದಲ್ಲ ಅನ್ನುವುದು ಸತ್ಯ.

ಭಾರತದಲ್ಲಿರುವ ೧೬ ಕೋಟಿಗಿಂತಲೂ ಹೆಚ್ಚಿನ ದಲಿತರಲ್ಲಿ, ಬಹುಪಾಲು ಗ್ರಾಮೀಣ ಪ್ರದೇಶದವರು, ಸ್ವಂತ ಭೂಮಿ ಇಲ್ಲದೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರು. ನಗರಗಳು ಮತ್ತು ಪಟ್ಟಣಗಳಲ್ಲಿ ವಾಸಿಸುವ ದಲಿತರು ಸಹ ಅನೌಪಚಾರಿಕ ಉದ್ಯೋಗ ಕ್ಷೇತ್ರದ ಕೆಲಸ ಮತ್ತು ಕೂಲಿ ಕೆಲಸವನ್ನು ನೆಚ್ಚಿಕೊಂಡು ಬದುಕುತ್ತಿರುವವರು. ಇವರ ಮಕ್ಕಳ ಹೆಚ್ಚಾಗಿ ಮೊದಲ ತಲೆಮಾರಿನ ವಿದ್ಯಾರ್ಥಿಗಳಾಗಿದ್ದು ಸರ್ಕಾರಿ ಪ್ರಾದೇಶಿಕ ಮಧ್ಯಮ ಮತ್ತು ಕೆಳಮಟ್ಟದ ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡುವವರಾಗಿದ್ದು ಔದ್ಯೋಗಿಕ ಮಾರುಕಟ್ಟೆಗೆ ಬೇಕಾಗಿರುವ ಕೌಶಲ್ಯಗಳಿಂದ ವಂಚಿತರಾಗಿರುವವರು. 

ನಾವು ಇವತ್ತು ಪ್ರಶ್ನಿಸಕೊಳ್ಳಬೇಕಾಗಿರುವುದು ‘ಪ್ರತಿಭೆ’ ಅಥವಾ ‘ಮೆರಿಟ್’ ಎಂದು ಕರೆಯಲ್ಪಡುವುದು ನಿಜವಾಗಿಯೂ ನಾವೆಂದುಕೊಂಡಂತೆ ವೈಯಕ್ತಿಕವೇ ಅಥವಾ ಸಾಮಾಜಿಕ ಸಂರಚನೆಯೇ ಎಂಬುದಾಗಿ. ಮೆರಿಟ್ ಎನ್ನುವುದು ಕೇವಲ ವ್ಯಕ್ತಿಯೊಬ್ಬನ ಪರಿಶ್ರಮವಲ್ಲ, ಆತನ/ಆಕೆಯ ಕುಟುಂಬದಿಂದ, ಸಾಮಾಜಿಕ ವಾತಾವರಣದಿಂದ, ಜಾತಿಬಾಂಧವರು ಒದಗಿಸಿಕೊಡುವ ನೆಟ್ ವರ್ಕ್ ಮತ್ತು ಅನುಭವದಿಂದ ರಚಿಸಲ್ಪಟ್ಟಿರುವಂತಹುದು. ಆದರೆ, ಇದ್ಯಾವುದೂ ನಿಜವಲ್ಲ, ಶಿಕ್ಷಣ ಮತ್ತು ಸ್ವಂತ ಪರಿಶ್ರಮವೇ ಪ್ರತಿಭೆ ಎಂದು ವಾದಿಸುವವರು ನಿಮ್ಮ ಶಾಲಾ ಕಾಲೇಜು ದಿನಗಳನ್ನು ನೆನಪು ಮಾಡಿಕೊಳ್ಳಿ.

ಸಣ್ಣ ವಯಸ್ಸಿನಿಂದಲೂ ಮನೆಯಲ್ಲಿ ಶೈಕ್ಷಣಿಕ ವಾತಾವರಣ, ವೇದಪಾಠ, ಮಂತ್ರೋಚ್ಚಾರ, ಇತ್ಯಾದಿಗಳಗೆ ಒಡ್ಡಿರುವ ಮಗುವು, ಇದೇ ಮೊದಲ ಬಾರಿಗೆ ಪುಸ್ತಕ ನೋಡುತ್ತಿರುವ ಮಗುವು ಒಂದೇ ಆಗಿರುತ್ತಿತ್ತೆ? ಇದು ಪ್ರಾಥಮಿಕ ಹಂತದಲ್ಲಷ್ಟೇ ಅಂದುಕೊಂಡಲ್ಲಿ ಕೂಡ ನಿಜವಲ್ಲ. ಅಶ್ವಿನಿ ದೇಶಪಾಂಡೆ ಮತ್ತು ನಿವ್‌ಮ್ಯಾನ್ (೨೦೦೭) ರ ಅಧ್ಯಯನದ ಪ್ರಕಾರ ಮೇಲ್ಜಾತಿಯ ಅಭ್ಯಥಿಗಳಷ್ಟೇ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಕೂಡ ದಲಿತ ಸ್ನಾತಕೋತ್ತರ ಪದವಿಧರರು ಉದ್ಯೋಗ ಮಾರುಕಟ್ಟೆಯಲ್ಲಿ ಕೇಳಲಾಗುವ ಕುಟುಂಬದ ಮತ್ತು ಆರ್ಥಿಕ ಹಿನ್ನೆಲೆಯ ಕುರಿತಾದ ಪ್ರಶ್ನೆಗಳು, ನೆಟ್ ವರ್ಕ್ ನ ಕೊರತೆ, ಇತ್ಯಾದಿಗಳಿಂದಾಗಿ ಹಿನ್ನಡೆ ಮತ್ತು ತಾರತಮ್ಯ ಅನುಭವಿಸುತ್ತಾರೆ. 

ಮೇಲಿನವು ಪರೋಕ್ಷವಾಗಿ ಹಿನ್ನಲೆಯಲ್ಲಿ ಕೆಲಸಮಾಡುತ್ತಿದ್ದರೆ, ವ್ಯಕ್ತಿಯ ಜಾತಿಯ ಹೆಸರು ನೇರವಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ಸುಖ್ದೇವ್ ತೋರಾಟ್ ಮತ್ತು ಸಂಗಡಿಗರು ಮಾಡಿರುವ ಪ್ರಾಯೋಗಿಕ ಅಧ್ಯಯನ ಬಿಡಿಸಿ ತೋರಿಸುತ್ತದೆ. ಈ ಪ್ರಯೋಗದಲ್ಲಿ ಸಂಶೋಧಕರು, ಪತ್ರಿಕೆಗಳಲ್ಲಿ ಬಂದ ಉದ್ಯೋಗ ಜಾಹಿರಾತುಗಳಿಗೆ, ಒಂದೇ ತೆರನಾದ ಬಯೋಡೆಟಾಗಳಲ್ಲಿ ಕೇವಲ ಅಭ್ಯರ್ಥಿಗಳ ಜಾತಿ ಸೂಚಕ ಹೆಸರುಗಳನಷ್ಟೇ ಬದಲಾಯಿಸಿ ಅರ್ಜಿ ಸಲ್ಲಿಸುತ್ತಾರೆ.

ದಲಿತ, ಮುಸ್ಲಿಂ ಮತ್ತು ಹಿಂದೂ ಮೇಲ್ಜಾತಿಯನ್ನು ಸೂಚಿಸುವ ಹೆಸರನ್ನಷ್ಟೇ ಬದಲಾಯಿಸಿ ಅರ್ಜಿ ಸಲ್ಲಿಸಿರುವ ಒಂದೇ ಬಯೋಡೆಟಾಗಳಿಗೆ ಬಂದಿರುವ ಸ್ಪಂದನೆಯನ್ನು ಸಂಖ್ಯಾಶಾಸ್ತ್ರದ ಮಾದರಿಗಳಲ್ಲಿ ಗಣನೆ ಮಾಡಿನೋಡಿದಾಗ ಒಂದೇ ತರೆನಾದ ಬಯೋಡೆಟಾ ಇದ್ದರೂ ಮೇಲ್ಜಾತಿಯ ಹೆಸರುಗಳುಳ್ಳ ಅರ್ಜಿಗಿಂದ ದಲಿತ ಮತ್ತು ಮುಸ್ಲಿಂ ಹೆಸರುಗಳುಳ್ಳ ಬಯೋಡೆಟಾ ಆಯ್ಕೆಯಾಗುವ ಸಂಭ್ಯಾವತೆ ಕಡಿಮೆ ಎಂದು ತಿಳಿದುಬರುತ್ತದೆ. ಇದು ಸಂದರ್ಶನ, ಪರೀಕ್ಷೆ ಅಥವಾ ಇನ್ಯಾವುದೇ ರೀತಿಯಾದ ಮೌಲ್ಯಮಾಪನ ಇಲ್ಲದೆ, ಉದ್ಯೋಗದಾತರು ಕೇವಲ ಹೆಸರಿನಿಂದಷ್ಟೆ ಮಾಡಲ್ಪಟ್ಟಿರುವ ಆಯ್ಕೆ ಎಂದು ನಾವು ಗಮನಿಸಬೇಕು. ಆಗ ಮಾತ್ರ ಜಾತಿಯ ಪಾತ್ರ ಎಷ್ಟು ಗಂಭೀರವಾಗಿದೆ ಎಂದು ನಮಗೆ ತಿಳಿಯುತ್ತದೆ. 

ವ್ಯವಹಾರ ಕ್ಷೇತ್ರದಲ್ಲೂ ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ದಲಿತರಿಗೆ ಯಾವುದೇ ಆಕ್ಷೇಪ ಇಲ್ಲದಿದ್ದರೂ ಆರೋಗ್ಯ, ಶಿಕ್ಷಣ, ಆಹಾರ, ಮತ್ತು ಸೇವಾ ಕ್ಷೇತ್ರಗಳಲ್ಲಿ ದಲಿತರು ಪ್ರವೇಶ ಪಡೆಯಲು ಕಷ್ಟಕರವಾಗಿದೆ. ಇಂತಹ ಕ್ಷೇತ್ರಕ್ಕೆ ಬೇಕಾಗಿರುವ ಕಚ್ಚಾ ವಸ್ತುಗಳು, ನೆಟ್ವರ್ಕ್ ಗಳ ಸಹಾಯ ಮಾತ್ರವಲ್ಲದೇ ಆಹಾರದಂತಹ ಕ್ಷೇತ್ರದಲ್ಲಿ ಜಾತಿ ಆಧಾರಿತವಾದ ಮಡಿ ಮೈಲಿಗೆ ಅಂಶಗಳು ಕೂಡ ವ್ಯವಹಾರದಲ್ಲಿ ತೊಡಕುಂಟುಮಾಡಲು ಕಾರಣವಾಗಿದೆ.

ವ್ಯವಹಾರದಲ್ಲಿರುವ ಜಾತಿ ತೊಡಕನ್ನು ನಿವಾರಿಸಿಕೊಳ್ಳಲು ಗ್ರಾಮೀಣ ಪ್ರದೇಶದಿಂದ ವಲಸೆ ಬಂದಿರುವ ಕೆಳಜಾತಿಯ ಹೋಟೆಲ್ ಮಾಲೀಕರಿಂದ ಹಿಡಿದು ಸ್ವಂತ ಅಭ್ಯಾಸ ಮಾಡುತ್ತಿರುವ ವೈದ್ಯರು ಕೂಡ ನಗರ ಪ್ರದೇಶದಲ್ಲಿ ತಮ್ಮ ಹೆಸರನ್ನು ಮೇಲ್ಜಾತಿಯ ಹೆಸರುಗಳಿಗೆ ಬದಲಾಯಿಸಿಕೊಂಡಿರುವ ನಿದರ್ಶನಗಳನ್ನು ಅಧ್ಯಯಗಳ ವರದಿಗಳು ಬಹಿರಂಗಪಡಿಸಿವೆ.

ಇನ್ನು ಅಂಕಿಅಂಶಗಳ ಮುಖಾಂತರ ತಿಳಿಯುವುದಾದರೆ, ಮಾನವ ಅಭಿವೃದ್ದಿ ಸಂಸ್ಥೆಯು ಸರಕಾರದ ಮಾಹಿತಿಯ ಆಧಾರದ ಮೇಲೆ ರಚಿಸಿರುವ ವರದಿ ಹೇಳುವಂತೆ, ಕೇವಲ ಹತ್ತೊಂಬತ್ತು ಶೇಖಡದಷ್ಟು ಔದ್ಯೋಗಿಕ ಜನಸಂಖ್ಯೆ ಹೊಂದಿರುವ ಹಿಂದೂ ಮೇಲ್ಜಾತಿಯ ಜನರು ಅವರ ಹಂಚಿಕೆಗಿಂತಲೂ ಹೆಚ್ಚಾಗಿರುವ ಮೂವತ್ತೊಂದು ಶೇಕಡ ಉದ್ಯೋಗದಲ್ಲಿ ಪಾಲುದಾರರಾಗಿದ್ದಾರೆ. ಆದರೆ ಹತ್ತು ಶೇಖಡದಷ್ಟು ಔದ್ಯೋಗಿಕ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಪಂಗಡದ ಜನರು ಅವರ ಹಂಚಿಕೆಯ ಅರ್ಧದಷ್ಟು ಅಂದರೆ ಕೇವಲ ಐದು ಶೇಕಡದಷ್ಟು ಮಾತ್ರ ಉದ್ಯೋಗದಲ್ಲಿ ಪಾಲುದಾರಿಕೆ ಹೊಂದಿದ್ದಾರೆ.

ಕರ್ನಾಟಕದಲ್ಲಿ ೨೨.೮ ಪ್ರತಿಶತಃ ಜನಸಂಖ್ಯೆ ಹೊಂದಿರುವ ದಲಿತರ ಉದ್ಯೋಗ ಮಾರುಕಟ್ಟೆಯ ಪಾಲುದಾರಿಕೆ ಕೇವಲ ೮.೯ ಶೇಕಡ. ಈ ಅಂಕಿಅಂಶಗಳು ಯಾವ ಸಮುದಾಯ ಜನಸಂಖ್ಯೆಯಲ್ಲಿ ಕಡಿಮೆ ಇದ್ದೂ ಕೂಡ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದಿದೆ ಎಂದು ಸ್ಪಷ್ಟ ಪಡಿಸುತ್ತದೆ.  

ನಾನು ಇಲ್ಲಿ ಹೇಳಿರುವ ಯಾವುದು ಕೂಡ ಕಾಲ್ಪನಿಕ ಅಥವಾ ಲಾಜಿಕ್ ಆಧಾರಿತ ಮಾತುಗಳಲ್ಲ, ಬದಲಾಗಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮಾಡಿರುವ ಗಂಭೀರ ಸಂಶೋಧನೆಗಳು ಕೊಡಮಾಡಿರುವ ಸತ್ಯಗಳು. ಇವೆಲ್ಲವು ಔದ್ಯೋಗಿಕ ಮರುಕಟ್ಟೆಯಲ್ಲಿ ಜಾತಿಯು ತನ್ನೊಳಗೆ ಹೊತ್ತು ತರುವ ಸಾಂಸ್ಕೃತಿಕ ಬಂಡವಾಳವು ಹೇಗೆ ಮೇಲ್ಜಾತಿಯ ಅಭ್ಯರ್ಥಿಗಳನ್ನು ಪೋಷಿಸಿ ಸಬಲರನ್ನಾಗಿ ಮಾಡುತ್ತದೆ ಮತ್ತು ಅದೇ ಜಾತಿಯು ದಲಿತ ಮತ್ತು ಹಿಂದುಳಿದ ಸಮುದಾಯದ ಅಭ್ಯರ್ಥಿಗಳನ್ನು ಅಬಲರನ್ನಾಗಿಯೂ ಆತಂಕಿತರನ್ನಾಗಿಯೂ ಮಾಡುತ್ತದೆ ಎಂದು ಅನಾವರಣ ಮಾಡುತ್ತದೆ..

ಭಾರತದ ಜಾತಿ ವ್ಯವಸ್ಥೆ ಸಂಕೀರ್ಣವಾಗಿದ್ದು ಪಾಶ್ಚಾತ್ಯ ಸಂಸ್ಕೃತಿಗಳ ಜನಾಂಗೀಯ (ರೇಸ್) ವ್ಯವಸ್ಥೆಯಂತೆ ಸರಳವಾಗಿರುವುದಲ್ಲ. ಜಾತಿ ವ್ಯವಸ್ಥೆ ಅನೇಕ ಶ್ರೇಣಿ ಮತ್ತು ಪದರಗಳಲ್ಲಿ ಕೆಲಸ ಮಾಡುತ್ತದೆ. ಕೇವಲ ಮೇಲ್ಜಾತಿಗಳಲ್ಲಿ ಮಾತ್ರವಲ್ಲದೆ, ಹಿಂದುಳಿದ ಜಾತಿ ಮತ್ತು ಅತ್ಯಂತ ಕೆಳಜಾತಿ ಎಂದು ಕರೆಸಿಕೊಳ್ಳುವ ಸಮುದಾಯಗಳ ನಡುವೆ ಮತ್ತು ಒಳಗೂ ಶ್ರೇಣೀಕೃತ ವ್ಯವಸ್ಥೆ ಇದೆ.‌ ಹಾಗಾಗಿ ಆ ಕುರಿತು ಕೂಲಂಕುಶವಾಗಿ ತಿಳಿದು ಮಾತನಾಡುವ ಅವಶ್ಯಕತೆ ಇದೆ. 

ಇನ್ನು ಉಪೇಂದ್ರರ ಘಟನೆಗೆ ಮರಳುವುದಾದರೆ, ಇದು ಅವರ ಅರಿವಿನ ಕೊರತೆಯಿಂದಲೋ ಅಥವಾ ಉದ್ದೇಶಪೂರ್ವಕ ನಿರ್ಧಾರದಿಂದಲೋ ಬಂದಿರಬಹುದು. ಹಾಗಾಗಿ ನಾನು ಅವರ ಉದ್ದೇಶಗಳ ಬಗ್ಗೆ  ಹೇಳುವುದಿಲ್ಲ. ಆದರೆ ಪ್ರಜ್ಞಾವಂತ ರಾಜಕೀಯ ನಾಯಕನಾಗಲು  ಹೊರಟಿರುವುವರು ಈ ನೆಲದ ಇತಿಹಾಸದ ಮೇಲೆ ಕಟ್ಟಿಕೊಂಡಿರುವ ವಾಸ್ತವಿಕ ಸಮಸ್ಯೆಗಳ ಮೂಲ, ಆಳ, ಅಗಲವನ್ನು ಅರಿತು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗಬೇಕೆ ವಿನಃ ಬರೇ ಒಣ ಲಾಜಿಕ್ ತುಂಬಿರುವ ಕೌಂಟರ್ ಉತ್ತರಗಳಿಂದಲ್ಲ.

ಆಗ ನಮ್ಮಲ್ಲಿ ಜಾತಿ ಇಲ್ಲ ವರ್ಣ ವ್ಯವಸ್ಥೆ ಇದ್ದದ್ದು ಹಳೆಯದ್ದನ್ನೆ ಹೇಳುತ್ತಿರುವವರಿಗೂ ಈಗೆಲ್ಲ ಏನು ಇಲ್ಲ ಎಂದು ಹೇಳುವವರಿಗೂ ಏನು ವ್ಯತ್ಯಾಸ ಇಲ್ಲದಾಗುತ್ತದೆ. 

ಈ ಸಾಮಾಜಿಕ ಸೂಕ್ಷ್ಮಗಳ ತಿಳುವಳಿಕೆ ಇಲ್ಲದೆ, ಎಲ್ಲರನ್ನು ಒಂದೇ ಮಟ್ಟದಿಂದ ಅಳೆದು ಯೋಜನೆಗಳನ್ನು ರೂಪಿಸಿದಾಗ ಈಗಾಗಲೇ ವ್ಯವಸ್ಥೆಯಲ್ಲಿ ರೂಢಿಗತವಾಗಿರುವ ತಾರತಮ್ಯ ಮತ್ತು ಮೇಲ್ಜಾತಿಯವರಲ್ಲಿ ಸಂಗ್ರಹಿಸಲ್ಪಟ್ಟಿರುವ ಸವಲತ್ತುಗಳು ಇನ್ನಷ್ಟು ಅಸಮಾನತೆಯನ್ನು ಹುಟ್ಟುಹಾಕುತ್ತದೆ.

ಜಾತಿ ವ್ಯವಸ್ಥೆ ತಂದಿರುವ ಸಮಸ್ಯೆಗಳಿಗೆ ಪರಿಹಾರ ಜಾತಿರಹಿತವಾದ ಯೋಜನೆಗಳಲ್ಲ, ಬದಲಾಗಿ ಆ ಸಮಸ್ಯೆಗಳಿಂದ ಶೋಷಿತರಾದವರನ್ನು, ಅವಕಾಶ ವಂಚಿತರನ್ನು ಗುರುತಿಸಿ, ಜಾತಿ ವ್ಯವಸ್ಥೆಯಿಂದ ಪ್ರಯೋಜನ ಪಟ್ಟವರ ಮಟ್ಟಕ್ಕಾದರೂ ತರುವಂತಹ ನಿರ್ಧಿಷ್ಟ ಗುರಿಯ ಯೋಜನೆಗಳನ್ನು ರೂಪಿಸಿಬೇಕಾಗುತ್ತದೆ. ಹಾಗೆ ಪ್ರಜಾಪ್ರಭುತ್ವದ ಸಕ್ರಿಯ ಪಾಲುದಾರರಾದ ನಾವು, ಅದರಲ್ಲು ವಿಶೇಷವಾಗಿ ಹಿಂದುಳಿದ ಮತ್ತು  ದಲಿತ ಸಮುದಾಯದ ಯುವಕ ಯುವತಿಯರು ತಾವು ಬೆಂಬಲಿಸುತ್ತಿರುವ ರಾಜಕೀಯ ನಾಯಕರು ಮತ್ತು ಅವರ ಪಕ್ಷಗಳ ರಾಜಕೀಯ ನಿಲುವೇನು, ಅಂಬೇಡ್ಕರ್ ನಮಗಾಗಿ ಕಟ್ಟಿಕೊಟ್ಟಿರುವ ಸಾಂವಿಧಾನಿಕ ಮೌಲ್ಯಗಳ ಕುರಿತಾಗಿ ಅವರ ಬದ್ದತೆ ಏನು ಎಂಬುದಾಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ.

ಈ ಸಂಕೀರ್ಣವಾದ ಜಾತಿ ವ್ಯವಸ್ಥೆ ಹೇಗೆ ನಮ್ಮ ಪ್ರತಿಭೆ, ಆಚಾರ, ವಿಚಾರ, ನೆಟ್ ವರ್ಕ್, ಮಾನಸಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಮತ್ತು ವರ್ಗ ಹಾಗೂ ಲಿಂಗ ವ್ಯವಸ್ಥೆಯನ್ನು ರೂಪುಗೊಳಿಸುತ್ತದೆ ಎಂದು ತಿಳಿಯಬೇಕಾಗಿದೆ. ಭಾರತದಲ್ಲಿ ಜಾತಿ ವ್ಯವಸ್ಥೆ ಇವತ್ತು ಹಿಂದೆ ಇದ್ದ ಹಾಗಿಲ್ಲ, ಆದರೆ ಅದು ಇದೆ ಎನ್ನುವ ಸತ್ಯವನ್ನು ನಾವು ಮರೆಮಾಚಲು ಆಗುವುದಿಲ್ಲ.

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರಾಜು

    ಸಂದರ್ಭೊಚಿತದವರ ಕುರಿತ ಲೇಖನ ಸಶಕ್ತವಾಗಿದೆ ಸರಗ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: