ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಪದೇಶ ಕುರಿತು ಖಲೀಲ್ ಗಿಬ್ರಾನ್ ನ ಎರಡು ದೃಷ್ಟಾಂತಗಳು…

ವೈ.ಬಿ.ಹಾಲಬಾವಿ

“ಉಪದೇಶವನ್ನು ಕೊಡುವಷ್ಟು ಧಾರಳವಾಗಿ ಜನ ಏನನ್ನೂ ಕೊಡಲಾರರು”ಎಂಬುದು ಒಂದು ಪ್ರಸಿದ್ಧ ಉಕ್ತಿ. ಖಂಡಿತವಾಗಿಯೂ ಇಂದು ನಾವು ಉಪದೇಶವನ್ನು ಕೊಡುವ, ಧಾರಳವಾಗಿ ಮಾತನಾಡುವ ಅನೇಕರನ್ನು ಕಾಣುತ್ತೇವೆ. ಇಂತಹವರು ಬರೀ ಉಪದೇಶವನ್ನು ಕೊಡಬಲ್ಲವರೇ ಹೊರತು ಏನನ್ನೂ ನೀಡಲಾರರು. ಇವರು ಬರೆ ಬಾಯಿ ಚಪಲದವರು. ಮಾತಿನ ಮಲ್ಲರು.ಇವರು ನಾನು ಹೇಳುವಂತೆ ಮಾಡು, ನಾನು ಮಾಡುವಂತೆ ಮಾಡಬೇಡ ಎನ್ನುವ ಪ್ರವೃತ್ತಿಯವರು.ಇಂತಹವರಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ. ಆಡುವುದೊಂದು ಮಾಡುವುದೊಂದು ಇವರ ಜಾಯಮಾನವಾಗಿರುತ್ತದೆ ಇತಂಹ ಪ್ರವೃತ್ತಿಯವರನ್ನು ಕಂಡೆ ಕವಿ, ಚಿಂತಕ ಖಲೀಲ್ ಗಿಬ್ರಾನ್ ಹೀಗೆ ನುಡಿಯುತ್ತಾನೆ, “ಕೆಲವರು ತಮ್ಮ ವಿಚಾರಗಳಲ್ಲಿ ತಮಗೆ ಶಾಂತಿ ದೊರೆಯದೇ ಹೋದಾಗ ಮಾತನಾಡುತ್ತಾರೆ. ಅವರು ತಮ್ಮ ಹೃದಯದ ಏಕಾಂತತೆಯಲ್ಲಿ ವಾಸಮಾಡಲಾಗದೆ ತುಟಿಗಳ ಮೇಲೆ ಬದಕುತ್ತಾರೆ. ಆಗ ಅವರ ಪಾಲಿಗೆ ಉಪದೇಶ ಒಂದು ವಿನೋದ ಹಾಗೂ ಕಾಲಕ್ಷೇಪದ ಸಾಧನವಾಗುತ್ತದೆ. ಇಂತಹವರ ಉಪದೇಶದಿಂದ ಕೇಳುಗರ ಚಿಂತನೆ ಕೊಲ್ಲಲ್ಪಡುತ್ತದೆ.ಯಾಕೆಂದರೆ ಚಿಂತನೆಯೆಂಬುದೊಂದು ಆಗಸದ ಹಕ್ಕಿ. ಶಬ್ದಗಳ ಪಂಜರದಲ್ಲದು ರೆಕ್ಕೆ ಬಿಚ್ಚಬಲ್ಲದಾದರೂ ಹಾರಲಾರದು”. ಎಂದು ತಿಳಿಸುತ್ತಾ, “ಕೆಲವರು ಏಕಾಂಗಿಯಾಗುವುದರ ಭಯದಿಂದ ವಾಚಾಳಿಗಳಾಗಿರುತ್ತಾರೆ. ಇಂತಹ ವಾಚಾಳಿತನದವರು ಅರಿವಿರದೆ, ಮುಂದಾಲೋಚನೆಯಿರದೆ ನುಡಿಯುತ್ತಾರೆ ಸ್ವತ: ತಾವೇ ಅರ್ಥ ಮಾಡಿಕೊಳ್ಳಲಾಗದ ಸತ್ಯವೊಂದನ್ನು” ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ಖಲೀಲ್ ಗಿಬ್ರಾನ್ ರೂಪಕ ಕವಿ.ರೂಪಕಗಳಲ್ಲೇ ಮಾತನಾಡುತ್ತಾನೆ.ಅವನ ಎಲ್ಲ ಚಿಂತನೆಗಳು ಓದುಗನ ಕಣ್ಮುಂದೆ ಕಟ್ಟುವಂತೆ ದೃಷ್ಟಾಂತಗಳನ್ನು ಕಟ್ಟುತ್ತಾ ಹೋಗುತ್ತಾನೆ. ಅಂತಹ ದೃಷ್ಟಾಂತಗಳ ಕಟ್ಟುಗಳಲ್ಲಿ ಒಂದಿಷ್ಟು ಒಣ ಉಪದೇಶ ನೀಡುವವರ ಕುರಿತಾದ ದೃಷ್ಟಾಂತಗಳು ಅತ್ಯಂತ ಸೊಗಸಾಗಿ ವಿಡಂಬನಾತ್ಮಕವಾಗಿ ಮೂಡಿ ಬಂದಿವೆ. ಅಂತಹ ಎರಡು ದೃಷ್ಟಾಂತಗಳು ಹೀಗಿವೆ:

1-ಶಾಂತಿ ಸಾಂಕ್ರಾಮಿಕ

ಅದೊಂದು ಊರು, ಚಳಿಗಾಲದ ರಾತ್ರಿ ತುಂಬು ಬೆಳದಿಂಗಳು ಚೆಲುವರಿದ ಸುಂದರ ಸಮಯ ಊರಿನ ನಾಯಿಗಳೆಲ್ಲ ಚಂದಿರನತ್ತ ಮೊಗ ಮಾಡಿ ಬೊಗಳಲಾರಂಭಿಸಿದವು… ಒಂದು ನಾಯಿ ಮಾತ್ರ ಬೊಗಳದೆ ಶಾಂತವಾಗಿತ್ತು. ಅದು ತನ್ನ ಗಂಭೀರ ದನಿಯಲ್ಲಿ ಇತರ ನಾಯಿಗಳಿಗೆ ಹೇಳಿತು; “ನೀರವತೆಯ ನಿದ್ದೆಯನ್ನು ಕೆಡಿಸಬೇಡಿ, ಮತ್ತೆ ಬೊಗಳಿ ಚಂದಿರನನ್ನು ಮುಗಿಲಿಂದ ನೆಲಕ್ಕೆಳೆದು ತರಬೇಡಿ” ಎಂದಿತು. ಆಗ ಎಲ್ಲ ನಾಯಿಗಳು ಬೊಗಳುವುದನ್ನು ನಿಲ್ಲಿಸಿ ಶಾಂತವಾದವು. ಆದರೆ, ಅವುಗಳಿಗೆ ಉಪದೇಶ ನೀಡಿದ ನಾಯಿ ಮಾತ್ರ ಶಾಂತಿಯನ್ನು ಹಾರೈಸುತ್ತಾ ಇಡೀ ರಾತ್ರಿ ಬೊಗಳುತ್ತಲೇ ಇತ್ತು ಎಂದು ಕತೆಯನ್ನು ಮುಗಿಸುತ್ತಾರೆ. ಒಂದು ಚಿಕ್ಕದಾದ ಕತೆ ಸರಳವಾಗಿ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ. ಈ ದೃಷ್ಟಾಂತದಲ್ಲಿ ಬರುವ ಉಪದೇಶ ನೀಡುವ ನಾಯಿಯಂತೆ ಸದಾ ಶಾಂತಿ ಮಂತ್ರವನ್ನು ಪಠಿಸುತ್ತಾ ಅಶಾಂತಿಯಿಂದಿರುವ ಅನೇಕರು ನಮ್ಮ ಮಧ್ಯದಲ್ಲಿದ್ದಾರೆ. ಇಂತಹವರು ಸದಾ ಉಪದೇಶ ಕೊಡುವವರಾಗಿರುತ್ತಾರೆಯೇ ಹೊರತು ಸ್ವತ: ಪಾಲಿಸುವವರಾಗಿರುವುದಿಲ್ಲ. ತಮ್ಮನ್ನು ತಾವು ತಿದ್ದಿಕೊಳ್ಳಲಾರದವರು, ತಮ್ಮನ್ನು ತಾವು ಅರಿಯದವರು ಪ್ರಪಂಚವನ್ನು ತಿದ್ದಲು ಹೊರಡುವುದು ಹಾಸ್ಯಾಸ್ಪದವೆನಿಸುತ್ತದೆ.ಇಂತಹವರ ಉಪದೇಶ ನೀರ ಮೇಲಿನ ಗುಳ್ಳೆಯಂತೆ ಒಡೆಯುತ್ತಾ ಏಳುತ್ತ ಸದಾ ನೊರೆಯನ್ನುಂಟು ಮಾಡುವುದೇ ಆಗಿರುತ್ತದೆ.

2- ವಿರಕ್ತ ಸನ್ಯಾಸಿ

ಹಿಂದೆ ಸಂಸಾರಿಯಾಗಿ ವಿರಕ್ತನಾದ ಸನ್ಯಾಸಿಯೊಬ್ಬನಿದ್ದ. ಆತ ಹತ್ತಿರದ ನಗರಕ್ಕೆ ಹೋಗಿ ಮಾರುಕಟ್ಟೆಯ ಸ್ಥಳದಲ್ಲಿ ನಿಂತು ದಾನ ಮತ್ತು ಸಮಪಾಲಿನ ತತ್ವಗಳನ್ನು ಕುರಿತು ಜನರಿಗೆ ಉಪದೇಶ ನೀಡಿ ಬರುತ್ತಿದ್ದ ಆತ ಒಳ್ಳೆಯ ಮಾತುಗಾರನಾಗಿದ್ದ, ನಾಡಿನೊಳಗೆ ಹೆಸರುವಾಸಿಯಾಗಿದ್ದ. ಒಂದು ಸಂಜೆ ಮೂವರು ವ್ಯಕ್ತಿಗಳು ಅವನ ಕುಟೀರಕ್ಕೆ ಬಂದರು.ಆತ ಅವರನ್ನು ಸ್ವಾಗತಿಸಿದ. ಅವರೆಂದರು; “ನೀವು ದಾನ ಮತ್ತು ಸಮಪಾಲಿನ ಕುರಿತಾಗಿ ಉಪದೇಶ ಮಾಡುತ್ತಾ, ಉಳ್ಳವರು ಬಡವರಿಗೆ ನೀಡುವುದನ್ನು ಕಲಿಯಬೇಕೆಂದು ನೆನಪಿಸಿ ಕೊಡುತ್ತಿರುತ್ತೀರಿ. ನಾಡಿನಲ್ಲಿ ಹಬ್ಬಿದ ನಿಮ್ಮ ಕೀರ್ತಿಯಿಂದಾಗಿ ನೀವು ಸ್ಥಿತಿವಂತರಾಗಿರುವ ಬಗ್ಗೆ ನಮಗೆ ಸಂದೇಹವೇ ಇಲ್ಲ. ನಿಮ್ಮ ಸಂಪತ್ತಿನಲ್ಲಿ ಒಂದಿಷ್ಟನ್ನು ಸಹಾಯ ಮಾಡಿರಿ” ಎಂದರು. ಆಗ ಆ ವಿರಕ್ತ ಸನ್ಯಾಸಿಯೆಂದ; “ನನ್ನ ಮಿತ್ರರೇ, ನನ್ನ ಬಳಿ ಈ ಒಂದು ಹಾಸಿಗೆ, ಒಂದು ಚಾಪೆ, ಹಾಗೂ ಈ ನೀರಿನ ಹೂಜಿಯ ಹೊರತಾಗಿ ಬೇರೇನೂ ಇಲ್ಲ.ಬೇಕಾದರೆ ನೀವು ಇವುಗಳನ್ನು ತೆಗೆದುಕೊಂಡು ಹೋಗಬಹುದು. ನನ್ನ ಹತ್ತಿರ ಬಂಗಾರವೂ ಇಲ್ಲ, ಬೆಳ್ಳಿಯೂ ಇಲ್ಲ” ಎಂದನು. ಆಗ ಅವರಲ್ಲಿ ಇಬ್ಬರು ಅವನತ್ತ ತಿರಸ್ಕಾರದಿಂದ ದಿಟ್ಟಿಸಿ ನೋಡಿ ತಿರುಗಿ ಹೊರಟರು. ಮೂರನೇಯವನು ಕ್ಷಣ ಹೊತ್ತು ಸನ್ಯಾಸಿಯ ಕುಟ್ಟೀರದ ಬಾಗಿಲಲ್ಲೇ ನಿಂತು ಅರಚಿದ “ಓ, ಮೋಸಗಾರ, ಕಪಟಿ! ನೀನು ಸ್ವತ; ಮಾಡದ್ದನ್ನು ಇತರರಿಗೇತಕ್ಕೆ ಉಪದೇಶ ಮಾಡುತ್ತಿಯ!”ಎಂದು ಬಿರುಬಿರನೇ ಹೊರಟನು. ಹೀಗೆ ಮುಕ್ತಾಯಗೊಳ್ಳುವ ಈ ದೃಷ್ಟಾಂತ ಬರೀ ಉಪದೇಶ ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ನುಡಿದಂತೆ ನಡೆಯಬೇಕು ಎನ್ನುವ ಆಶಯವನ್ನು ಈ ದೃಷ್ಟಾಂತ ವ್ಯಕ್ತಪಡಿಸುತ್ತದೆ. ಪ್ರತಿಯೊಬ್ಬರೂ ಇತರರನ್ನು ತಿದ್ದಲು ಹೊರಡುವುದಕ್ಕೆ ಮುನ್ನ ತಮ್ಮನ್ನು ತಾವು ತಿದ್ದಿಕೊಳ್ಳಬೇಕು ಎಂಬುದನ್ನು ಇದು ದೃಢಪಡಿಸುತ್ತದೆ.

 

ಟಿಪ್ಪಣಿ: Great works of Kahlil Gibran ನ ಪುಸ್ತಕದಿಂದ ಆಯ್ದ ಎರಡು ದೃಷ್ಟಾಂತಗಳಾದ

THE FULL MOON ಮತ್ತು THE HERMIT PROPHET ಗಳ ಭಾವಾನುವಾದವಾಗಿದೆ.

 

 

‍ಲೇಖಕರು avadhi

28 June, 2013

3 Comments

  1. G Venkatesha

    Chennagaive.

  2. thimmappa naik

    ಚಿಂತನೆಯೆಂಬುದೊಂದು ಆಗಸದ ಹಕ್ಕಿ. ಶಬ್ದಗಳ ಪಂಜರದಲ್ಲದು ರೆಕ್ಕೆ ಬಿಚ್ಚಬಲ್ಲದಾದರೂ ಹಾರಲಾರದು! nijavagiyu,,,

  3. ಕಿರಣ್ ಕುಮಾರಿ. ಎಸ್.

    “ಉಪದೇಶವನ್ನು ಕೊಡುವಷ್ಟು ಧಾರಳವಾಗಿ ಜನ ಏನನ್ನೂ ಕೊಡಲಾರರು” ಎನ್ನುವ ಅನುಭಾವಿ ತತ್ವಜ್ನ್ಯಾನಿ ಖಲೀಲ್ ಗಿಬ್ರಾನ್ ದೃಷ್ಟಾ೦ತಗಳು ಬದುಕಿಗೆ ಎಚ್ಚರಿಸುವ ಅಲಾರಾಮ್…ಎಷ್ಟೊ ಬಾರಿ ನಾನೂ ಕೂಡಾ ಕೆಲವು ಸ೦ದರ್ಭದಲ್ಲಿ ಹೀಗೆ ನಡೆದುಕೊ೦ಡಿದ್ದು೦ಟು. ಯೋಚಿಸಲು ಪ್ರೇರಣೆ ನೀಡಿದ ನಿಮ್ಮ ಬರಹಕ್ಕೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading