
ರಾಜಾರಾಂ ತಲ್ಲೂರು
ಒಂದು ಕ್ಲೀಷೆ ಇದೆ.
ಅಮೆರಿಕಾದಲ್ಲಿ ಸಾರ್ವಜನಿಕವಾಗಿ ಮುತ್ತಿಕ್ಕುವುದು ಸಾಮಾನ್ಯ, ಸಾರ್ವಜನಿಕವಾಗಿ ಮೂತ್ರ ಮಾಡಿದ್ರೆ ತಪ್ಪು; ಭಾರತದಲ್ಲಿ ಸಾರ್ವಜನಿಕವಾಗಿ ಮೂತ್ರ ಮಾಡುವುದು ಸಾಮಾನ್ಯ, ಸಾರ್ವಜನಿಕವಾಗಿ ಮುತ್ತಿಕ್ಕಿದರೆ ತಪ್ಪು.
ನಮ್ಮ ಮಾಧ್ಯಮಗಳಲ್ಲಿ ಈಗೀಗ “ಸ್ಫೋಟ” ಸಂಭವಿಸುವುದು ಯಾವಾಗ ಎಂದು ಗಮನಕೊಟ್ಟು ನೋಡಿ. ಕಳೆದ ವಾರದಲ್ಲಿ ರಾಜ್ಯಸಭೆಯ, ವಿಧಾನಪರಿಷತ್ತಿನ ಚುನಾವಣೆಗಳ ವೇಳೆ ದುಡ್ಡು ಓಡಾಡಿರುವುದು ಬಹಳ ಸಾಮಾನ್ಯ ಸಂಗತಿ ಎಂಬಂತೆ ಬಿಂಬಿತವಾಯಿತು, ಯಾರ್ಯಾರು ಎಲ್ಲೆಲ್ಲಿ ಅಡ್ಡ ಓಟು ಹಾಕಿಯಾರೆಂದು ಚರ್ಚೆ ಆಯಿತೇ ಹೊರತು ಯಾಕೆ ಹೀಗಾಗುತ್ತಿದೆ ಎಂಬ ಬಗ್ಗೆ ಯಾರೂ ಚರ್ಚೆ ಮಾಡಲಿಲ್ಲ. ಆದರೆ ಅದೇ ಹೊತ್ತಿಗೆ ಸುದ್ದಿಯಲ್ಲಿದ್ದ ಕೂಡ್ಲಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ “ಸಿ.ಡಿ” ಮಾಧ್ಯಮಗಳದೆಲ್ಲ ನಿದ್ದೆ ಕೆಡಿಸಿಬಿಟ್ಟಿತು.
ರಾಜ್ಯದಲ್ಲಿ ಭ್ರಷ್ಟಾಚಾರ ಮೊತ್ತಮೊದಲಿಗೆ ಬಹಿರಂಗವಾಗಿ ಚರ್ಚೆ ಆಗತೊಡಗಿದ್ದು ಗುಂಡೂರಾಯರ ಕಾಲದಲ್ಲಿ. ಮೊದಲೆಲ್ಲ (ಅಂದ್ರೆ ಎಲ್ಲರೂ ಬೊಟ್ಟು ಮಾಡುತ್ತಿದ್ದುದು ದೇವರಾಜ ಅರಸರ ಕಾಲದತ್ತ) ದುಡ್ಡು ಕೊಟ್ರೆ ಕೆಲಸ ಆಗ್ತಿತ್ತು, ಈಗ ದುಡ್ಡು ಕೊಟ್ರೂ ಕೆಲಸ ಆಗ್ತಿಲ್ಲ ಎಂದು ಆರಂಭ ಆದ ಈ ಚರ್ಚೆ ಈವತ್ತು ಎಲ್ಲಿಗೆ ಬಂದು ಮುಟ್ಟಿದೆ? ಸರ್ಕಾರಿ ಕಚೇರಿಗಳ ಪರ್ಸೆಂಟೇಜ್ ಬೋರ್ಡ್ ಗಳು ಮುದ್ರಣಗೊಂಡು ಅಧಿಕಾರಿಗಳ ಮೇಜಿನ ಬಳಿ ನೇಣು ಹಾಕ್ಕೊಳ್ಳುವುದೊಂದು ಬಾಕಿ ಇದೆ ಎಂಬಲ್ಲಿಗೆ ನಾವು ತಲುಪಿ ಆಗಿದೆ.ಹಾಗಾಗಿ ಅದೀಗ ಸುದ್ದಿಯೇ ಅಲ್ಲ.
ಆಲ್ಟರ್ನೇಟಿವ್ ರಾಜಕೀಯ ಎಂದೇ ಬಿಂಬಿತವಾಗಿರುವ ನಾನ್-ಕಾಂಗ್ರೆಸ್, ನಾನ್-ಬಿಜೆಪಿ ರಾಜಕಾರಣ ಎಂದರೆ, ಕರ್ನಾಟಕದ ಮಟ್ಟಿಗೆ ದುಡ್ಡಿನ ಥೈಲಿ ರಾಜಕೀಯವೇ ಆಗಿಬಿಟ್ಟಿದೆ. ಬಹಿರಂಗವಾಗಿಯೇ ದುಡ್ಡು ಇಷ್ಟೊಂದು ಚರ್ಚೆಯಾಗುತ್ತಿದೆಯಾದರೂ ಮಾಧ್ಯಮಗಳಿಗೆ ಇದು ಸುದ್ದಿ ಆಗಬೇಕಾದ ಸಂಗತಿ ಅನ್ನಿಸುತ್ತಿಲ್ಲ. ಫೋರ್ತ್ ಎಸ್ಟೇಟು ರಿಯಲ್ ಎಸ್ಟೇಟ್ ಆಗಿರುವ ಸ್ಪಷ್ಟ ಸೂಚನೆ ಇದು. ಜೊತೆಗೇ ರಾಜಕೀಯವನ್ನು ಜನಸಾಮಾನ್ಯರಿಗೆ ಎಟುಕದ ಎತ್ತರಕ್ಕೆ ಕೊಂಡೊಯ್ಯುವ ಸಂಘಟಿತ ಪ್ರಯತ್ನದ ಭಾಗ ಕೂಡ.
ಅದೇ ವೇಳೆ, ಅನುಪಮಾ ಶೆಣೈ ಅವರು ಬಿಡುಗಡೆ ಮಾಡುತ್ತೇನೆಂದ ಸಿ.ಡಿ. ಆದ್ಯತೆಯ ಸುದ್ದಿ ಆಗಿಬಿಟ್ಟಿತು. ವಿಘಟಿತ ಕುಟುಂಬಗಳ ಡ್ರಾಯಿಂಗ್ ರೂಮ್ ತುರಿಕೆಗಳು ಯಾವುದೆಲ್ಲ ಎಂಬುದನ್ನು ಮಾಧ್ಯಮಗಳು ಕಳೆದೊಂದು ದಶಕದಲ್ಲಿ ಖಚಿತವಾಗಿ ಅಂದಾಜು ಹಾಕಿಕೊಂಡುಬಿಟ್ಟಿವೆ. ಆ ಕಾರಣಕ್ಕಾಗಿಯೇ ಈ “ಹಣಕಿಕ್ಕುವ ಕಾಯಿಲೆ”(ಪೀಪಿಂಗ್ ಟಾಮ್ ಸಿಂಡ್ರೋಮ್) ನಮ್ಮ ಮಾಧ್ಯಮಗಳನ್ನು ಎಷ್ಟು ಗಾಢವಾಗಿ ಆವರಿಸಿಕೊಂಡಿದೆ ಎಂದರೆ, “ಸಿ.ಡಿ.” ಎಂಬ ಶಬ್ದವೇ ಲೈಂಗಿಕ ಹಗರಣಗಳಿಗೆ ಸಿನಾನಿಮ್ ಆಗಿ ಕುಳಿತಿದೆ.
ಇಂತಹ ಮಸಾಲೆ ಬೇಯಿಸಿ ಎರೆಯಲು ಡ್ರಾಯಿಂಗ್ ರೂಮುಗಳಲ್ಲಿ ಹತ್ತುಗಂಟೆಯ ಮೇಲಿನ ಹೊಸದೊಂದು ಪ್ರೈಮ್ ಟೈಮ್ ಕೂಡ ಸಿದ್ಧಗೊಂಡಿದೆ. ಅನುಪಮಾ ಶೆಣೈ ಅವರು ಕೂಡ ಇದೇ ಪ್ರೈಮ್ ಸ್ಲಾಟ್ ತನ್ನ ಸಿಡಿ ಗೆ ಸರಿಯಾದ್ದೆಂದು (ಬೇಗ ತೋರಿಸಿದ್ರೆ ಮಕ್ಕಳು ಹಾಳಾಗ್ತಾರೆ!) ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳ ಅತ್ಯಾಸಕ್ತಿಯಿಂದಾಗಿ, ಕಳೆದ ಒಂದು ದಶಕದಲ್ಲಿ ಸುಮಾರಿಗೆ ಒಂದು ವಿಡಿಯೋ ಲೈಬ್ರರಿ ಇಡುವಷ್ಟು ಲೈಂಗಿಕ ಸರಕುಗಳು ಸುದ್ದಿಯ ಹೆಸರಲ್ಲಿ ಉತ್ಪಾದನೆಗೊಂಡಿವೆ.
ನಮ್ಮ ಮಾಧ್ಯಮಗಳಲ್ಲಿ ದುಡಿಯುವವರು ಲೈಂಗಿಕವಾಗಿ ಅಷ್ಟೊಂದು ಶೋಷಿತ, ಪೀಡಿತ ವರ್ಗವೇ?!





0 Comments