
‘ಈ ಹೊತ್ತಿಗೆ’ಯ ಪ್ರತಿಷ್ಠಿತ ಕಥಾ ಸ್ಪರ್ಧೆಯ ಬಹುಮಾನ ವಿಜೇತ ಎಲ್ಲಾ ಕಥೆಗಳನ್ನೂ ‘ಅವಧಿ’ ಪ್ರಕಟಿಸುತ್ತಿದೆ.
ಈ ನಿಟ್ಟಿನಲ್ಲಿ ಮೂರನೇ ಬಹುಮಾನ ಪಡೆದ ಕಥೆ ‘ಎಲ್ಲೋ ಯೆಲ್ಲೋ…’ ಇಲ್ಲಿದೆ.
ಈ ಕಥೆಯನ್ನು ಬರೆದವರು ಕೊಟ್ಟೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿರುವ ದಾದಾಪೀರ್ ಜೈಮನ್
—
ಮೊದಲ ಬಹುಮಾನ ಪಡೆದ ಗೋವಿಂದರಾಜು ಎಂ ಕಲ್ಲೂರು ಅವರ ಕಥೆ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯನ್ನು ಇಲ್ಲಿ ಓದಬಹುದು
ಎರಡನೆಯ ಬಹುಮಾನ ಪಡೆದ ಕಪಿಲಾ ಪಿ ಹುಮನಾಬಾದೆ ಅವರ ‘ಬಿಸಿಲು’ ಕಥೆಯನ್ನು ಇಲ್ಲಿ ಓದಬಹುದು

ಫಲಿತಾಂಶ ಪ್ರಕಟದ ಕೆಲಸ ಮಧ್ಯಾಹ್ನ ಹನ್ನೆರಡಕ್ಕೆಲ್ಲ ಮುಗಿಸಿ ಈಶ್ವರಿ ತಂದಿದ್ದ ಬಿರಿಯಾನಿ ಹಾಗೂ ನನ್ನಿಷ್ಟದ ಮೆಣಸಿನಪುಡಿ ಹಾಕಿ ಮಾಡಿದ ಚಿಕನ್ ಫ್ರೈ ಹೊಟ್ಟೆ ತುಂಬಿ ಗಂಟಲಿಗೆ ಬರುವವರೆಗೂ ತಿಂದು, ಸಹೋದ್ಯೋಗಿಗಳನ್ನು ಬೀಳ್ಕೊಟ್ಟು, ಹಳೆಯ ಎಲ್ಲ ಫೈಲುಗಳನ್ನು ಹಿಂದಿರುಗಿಸಿ, ಅಲ್ಲಿ ಅಡವಿಟ್ಟಂತಿದ್ದ ನಮ್ಮ ಮಾರ್ಕ್ಸ್ ಕಾರ್ಡುಗಳನ್ನು ಹಿಂಪಡೆದು, ಶಾಲೆಯ ಮೈದಾನದಲ್ಲಿ ಬೇಸಗೆ ರಜೆಗಳು ಶುರುವಾದ ಕ್ಷಣದಿಂದಲೇ ನಿದ್ದೆ ಹೋಗಿದ್ದ ಸಾಲು ಸಾಲು ಹಳದಿ ವ್ಯಾನುಗಳ ದಾಟಿ ಶಾಲೆಯಿಂದ ಹೊರಬಂದಾಗ ಎರಡು ಗಂಟೆಯಾಗಿತ್ತು. ಬೇರೆ ಬೇರೆ ಕಾರಣಗಳಿಗಾಗಿ ಕೆಲಸ ಮಾಡುತ್ತಿದ್ದ ಈ ಸದರಿ ಶಾಲೆಯನ್ನು ಬಿಟ್ಟು ಹೋಗುತ್ತಿದ್ದ ನನಗೂ ಹಾಗೂ ಈಶ್ವರಿಗೂ ಇಂದು ಕೊನೆಯ ದಿನ. ಈಶ್ವರಿ ಮರುದಿನ ರಾತ್ರಿ ತನ್ನ ತವರೂರಾದ ಚೆನ್ನೈಗೆ ಹೋಗುವವರಿದ್ದರು. ಬಹುಷಃ ಮುಂದೆಂದೂ ಈ ಪಟ್ಟಣಕ್ಕೆ ಬರುವುದಿಲ್ಲ ಎಂಬುದನ್ನು ಒಂದು ವಾರದಲ್ಲಿ ನೂರು ಬಾರಿ ಹೇಳಿದ್ದರು. ಭೇಟಿಯಾಗುತ್ತಿರುವ ಕೊನೆಯ ದಿನವಾದವಾದರೂ ಬೆಂಗಳೂರಿನಲ್ಲಿ ಒಟ್ಟಿಗೆ ಸುತ್ತಾಡಿದ ಎಲ್ಲ ನೆಚ್ಚಿನ ಜಾಗಗಳಿಗೆ ಮತ್ತೊಮ್ಮೆ ಕೊನೆಯ ಬಾರಿ ಎಂಬಂತೆ ಸುತ್ತಿ ಪರಸ್ಪರ ವಿದಾಯ ಹೇಳಿಕೊಳ್ಳುವುದೆಂದೂ ನಿರ್ಧಾರವಾದಂತಿತ್ತು. ಕನಕನಗರ ಸರ್ಕಲ್ಲಿನಲ್ಲಿ ಎಡಕ್ಕೆ ತಿರುಗಿ ನೇರವಾಗಿ ಸುಮಾರು ಒಂಭೈನೂರು ಮೀಟರ್ ನಡೆದರೆ ಪುಷ್ಪಾ೦ಜಲಿ ಟಾಕೀಸಿನ ಬಸ್ ಸ್ಟಾಪ್ ಸಿಗುವುದು. ಅಲ್ಲಿಂದ ಮೊದಲಿಗೆ ಆಟೋ ಹಿಡಿದು ಆರ್. ಟಿ. ನಗರದ ಪೋಲಾರ್ ಬಿಯರ್ ಐಸ್ ಕ್ರೀಮ್ ಪಾರ್ಲರಿಗೆ ಹೋಗುವುದು, ಅಲ್ಲಿಂದ ಮಲ್ಲೇಶ್ವರಂನ ಎಂಟನೇ ಕ್ರಾಸಿನಲ್ಲಿ ಒಂದಷ್ಟು ಶಾಪಿಂಗ್, ಹನ್ನೊಂದನೇ ಕ್ರಾಸಿನಲ್ಲಿರುವ ಕೃಷ್ಣನ ದೇವಸ್ಥಾನದಲ್ಲೊಂದಷ್ಟು ಹೊತ್ತು ಕೂತು ಅಲ್ಲೇ ಮುಂದಿರುವ ಮಯ್ಯಾಸಿನಲ್ಲೊಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಕುಡಿಯುವುದು ಎಂದು ಮನಸ್ಸಿನಲ್ಲಿ ಪಟ್ಟಿ ಹಾಕಿಕೊಂಡಿದ್ದೆ.
ಸರ್ಕಲ್ಲಿನ ತಿರುವಿನಲ್ಲಿ ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ಬಂಡಿಯ ಸಮೇತ ಪ್ರತ್ಯಕ್ಷನಾಗುತ್ತಿದ್ದ ಜಿಲೇಬಿ ಅಂಗಡಿಯವನು ಇಂದು ಎರಡು ಗಂಟೆ ಮುಂಚೆಯೇ ಅಲ್ಲಿದ್ದ. ಬಾಣಲೆಯಲ್ಲಿ ಅರಳುತ್ತಿದ್ದ ಅಲ್ಲಿಯ ಬಿಸಿ ಬಿಸಿ ಜಿಲೇಬಿ ನನಗೂ, ಈಶ್ವರಿಗೂ, ನಮ್ಮಿಬ್ಬರಿಗಿಂತ ಹೆಚ್ಚಾಗಿ ಈಶ್ವರಿಯ ಮಗ ಕರ್ಣನಿಗೆ ಪಂಚಪ್ರಾಣವಾಗಿದ್ದರಿಂದ ಅಲ್ಲಿ ಮೂವತ್ತು ರುಪಾಯಿಯ ಜಿಲೇಬಿ ಕಟ್ಟಿಸಿಕೊಂಡೆವು. ದಾರಿಯುದ್ದಕ್ಕೂ ಇಬ್ಬರಿಗೂ ಮಾತನಾಡಲು ಮನಸ್ಸಾಗಲಿಲ್ಲ ಎಂಬುದಕ್ಕಿಂತ ಮಾತನಾಡಿದರೆ ಎಲ್ಲಿ ವಿದಾಯದ ಬೇಸರ ಮೂಡಿಬಿಡುವುದೋ ಎಂಬ ದುಗುಡವಿತ್ತು. ಸ್ವಲ್ಪ ಹೊತ್ತು ಹಾಗೆಯೇ ನಡೆಯುತ್ತಿದ್ದಾಗ ಮೌನ ಮಾತಿಗಿಂತಲೂ ಅಸಹನೀಯವೆನಿಸಿ ‘ಅಂತೂ ನಾಡಿದ್ದು ಹೊಸ ಬದುಕು ಶುರು ಮಾಡ್ತಿದ್ದೀರಿ… ಫೈನಲಿ… ಇವತ್ತಿಂದ ಶಾಲೆ-ಮನೆ-ಶಾಲೆ-ಮನೆ ರುಟೀನಿಂದ ಮುಕ್ತಿ ಅನ್ನಿ’ ಎಂದು ನಕ್ಕೆ. ಅದಕ್ಕವರು ತಲೆಯಾಡಿಸಿ ಮುಗುಳ್ನಕ್ಕು ತಮ್ಮ ಘನ ಮೌನದೊಂದಿಗೆ ಹೆಜ್ಜೆ ಮುಂದುವರೆಸಿದರು. ಪುಷ್ಪಾ೦ಜಲಿ ಟಾಕೀಸಿನ ಬಸ್ ಸ್ಟಾಪಿಗೆ ಬರುವ ಹೊತ್ತಿಗೆ ತಲೆಯಂತೂ ಕಾದ ದೋಸೆ ಹಂಚಾಗಿತ್ತು. ನಡೆಯುತ್ತಾ ಅಂಗಿಯ ಬೆನ್ನು ಮತ್ತು ಕಂಕುಳಿನಿಂದ ಬೆವರು ಕಿತ್ತು ತೋಯ್ದು ಹೋಗಿದ್ದವು. ಈಶ್ವರಿಯ ಹಣೆಯ ಮೇಲೂ ಸಹ ಮುಂಜಾನೆಯ ಹಸಿರೆಲೆಗಳ ಮೇಲೆ ಹರಡಿಕೊಂಡಿರುವ ಮಂಜಿನ ಹನಿಗಳಂತೆ ಬೆವರ ಹನಿಗಳು ಸಾಲುಗಟ್ಟಿದ್ದವು. ಅವರು ಎಡಗೈಯಲ್ಲಿದ್ದ ತಮ್ಮ ಪುಟಾಣಿ ಕರ್ಷಿಫಿನಿಂದ ಆಗಾಗ ಹಣೆ ಮತ್ತು ಕತ್ತು ಒರೆಸಿಕೊಳ್ಳುತ್ತಿದ್ದರೂ ಬಿಸಿಲೆ ಗೆದ್ದು ಬೆವರು ಹುಟ್ಟಿ ಹಾಕುತ್ತಿತ್ತು. ಈಶ್ವರಿಗೆ ತಲೆ ಚಿಟ್ಟು ಹಿಡಿದಿರಬೇಕು; ತನ್ನ ವ್ಯಾನಿಟಿಯೊಳಗಿದ್ದ ಥ್ರೀಫೋಲ್ಡ್ ಛತ್ರಿ ಬಿಡಿಸಿ ಮುಗಿಲಿನ ಮುಖಕ್ಕೆ ಕುಕ್ಕಿ ‘ವಾಂಗ ಸರ್… ಬಿಸಿಲು ಇರುಕು’ ಎಂದರು. ನಾನು ಅವರ ಮಾತನ್ನು ಕಿವಿಯಲ್ಲಿ ಹಾಕಿಕೊಳ್ಳದೆ ಆಟೋ ಹಿಡಿದು ಅವನು ಕೇಳಿದ ನೂರೈವತ್ತು ರೂಪಾಯಿ ಕೊಡಲು ಒಪ್ಪದೆ ಚೌಕಾಸಿ ಮಾಡುತ್ತಿದ್ದಾಗ ಇವತ್ತು ಮಾತ್ರ ಚೌಕಾಸಿ ಬೇಡವೆಂದು ಹೇಳಿ ನನ್ನ ಪಕ್ಕಕ್ಕೆ ಸರಿಸಿ ಆಟೋ ಹತ್ತಿ ಕುಳ್ಳಿರೆಂದು ಹೇಳಿದರು. ಡ್ರೈವರನು ಖುಷಿಯಾದದ್ದು ತೋರಗೊಡಬಾರದೆಂದು ಶತಪ್ರಯತ್ನ ಮಾಡುತ್ತಿದ್ದರೂ ಕೂಡ ಅದು ಸುಳಿದುಹೋಗಿದ್ದು ಕಂಡು ನನಗೆ ಅವಮಾನವಾದಂತಾಯಿತು.
ಆಯಾಸ ತುಂಬಿಸುತ್ತಿದ್ದ ಸುರಿಯುವ ಬಿಸಿಲು, ಐಸ್ ಕ್ರೀಮ್ ಪಾರ್ಲರಿನ ಎಸಿಯ ತಂಪಿಗೆ ಕರಗಿ ಮಾಯವಾದಂತೆನಿಸಿತು. ಈಶ್ವರಿ ಕೂಡ ಈಗ ಚೂರು ಗೆಲುವಾದಂತೆ ಕಂಡರು. ಟೇಬಲ್ಲಿನಲ್ಲಿ ಕೂತು ಮೆನು ಕಾರ್ಡಿನಲ್ಲಿ ಕಣ್ಣಾಡಿಸುತ್ತಾ ‘ಏನು ತಗೋತೀರಿ?’ ಎಂದದ್ದಕ್ಕೆ ಖಚಿತವಾಗಿ ‘ಡೆತ್ ಬೈ ಚಾಕಲೇಟ್’ ಎಂದು ನನಗೇನು ಬೇಕೋ ಅದನ್ನ ಸಂಕೋಚವಿಲ್ಲದೆ ತೆಗೆದುಕೊಳ್ಳುವಂತೆಯೂ ಹೇಳಿದರು. ತಿಂದಿದ್ದೆ ಇನ್ನು ಗಂಟಲಲ್ಲಿದ್ದಿದ್ದರಿಂದ ಮ್ಯಾಂಗೋ ಕಪ್ ಐಸ್ ಎಂದೆ. ‘ತಿನ್ನು ಸಾರ್’ ಎಂದದ್ದೆ ಅದನ್ನೇ ಬಿಗ್ ಕಪ್ ಕೊಡಿ ಎಂದು ವೇಟರನಿಗೆ ಹೇಳಿದರು. ಅದೇ ಹೊತ್ತಿಗೆ ಸೀನು ಬಂದಂತಾಗಿ ಎರಡು ಕೈ ಮೂಗಿನ ಬಳಿಗೆ ತೆಗೆದುಕೊಂಡು ಹೋದಾಗ ಚಿಕನ್ ಫ್ರೈ ಘಮ ಇನ್ನು ಹಾಗೆಯೇ ಉಳಿದಿತ್ತು. ಹಳ್ಳಿಯಲ್ಲಿರುತ್ತಿದ್ದ ಅಮ್ಮ ‘ಎಲ್ಲ ಊಟದಿಂದಾನ ಸುರು ಆಗದು!!!’ ಎನ್ನುತ್ತಿದ್ದದ್ದು ನೆನಪಾಯಿತು. ಬಹುಷಃ ಜನರು ಇದನ್ನೇ ಅನ್ನದ ಋಣ ಎನ್ನುತ್ತಿದ್ದಿರಬೇಕು. ಅದನ್ನೇ ಜನ ಈಗಿನ ಕಾಲಕ್ಕೆ ‘ಆ ಲಾಟ್ ಕ್ಯಾನ್ ಹ್ಯಾಪೆನ್ ಓವರ್ ಕಾಫಿ’ ಅಂತ ಮಾರ್ಪಾಟು ಮಾಡಿಕೊಂಡಿರಲೂಬಹುದು ಎಂಬ ವಿಚಾರ ಹೊಳೆದು ಹೋಯಿತು.
ನನ್ನ ಮತ್ತು ಈಶ್ವರಿಯ ಗೆಳೆತನ ಶುರುವಾದದ್ದು ಊಟದಿಂದಲೇ ಎನ್ನಬೇಕು. ಪಿಯುಸಿಯಿಂದ ಹಿಡಿದು ಇಲ್ಲಿಯವರೆಗೂ; ಅಂದರೆ ಸ್ನಾತಕೋತ್ತರ ಮುಗಿಸಿ ಹಿಡಿದ ಮೊದಲನೇ ವರ್ಷದ ಮಾಸ್ತರಿಕೆ ಕೆಲಸದವರೆಗೂ ಮನೆಯಿಂದ ಹೊರಗಡೆಯೇ ಹಾಸ್ಟೆಲ್ಲಿನಲ್ಲೋ, ಪೀಜೀಗಳಲ್ಲೋ ಮತ್ತು ಗೆಳೆಯರು ಸೇರಿ ಮಾಡಿಕೊಂಡ ರೂಮುಗಳಲ್ಲೋ ಕಳೆಯುವುದೇ ಆಗಿರುವ ನನ್ನಂಥವರಿಗೆ ಮನೆ ಊಟ ಅಂದರೆ ಯಾವುದೇ ನಾಚಿಕೆಯಿಲ್ಲದೆ, ಬಿಗುಮಾನವಿಲ್ಲದೆ ಕೊಟ್ಟವರ ಕೈಯಿಂದ ಇಸಿದುಕೊಂಡು; ಕೆಲವೊಮ್ಮೆ ಕೇಳಿ ಪಡೆದುಕೊಂಡು ತಿಂದು, ಕೊನೆಗೆ ‘ಅನ್ನದಾತೋ ಸುಖೀಭವ’ ಎಂದು ಹರಸುವ ಗುಣವನ್ನು ಮೈಗೂಡಿಸಿಕೊಂಡು ಬಂದಿರುತ್ತೇವೆ. ಬೆಂಗಳೂರಿಗೆ ಮೊದಲ ಬಾರಿ ಯಾವುದಾದರೂ ಟೀವಿಯಲ್ಲಿ ನಿರೂಪಕನಾಗಬೇಕೆಂಬ ಕನಸು ಹೊತ್ತು ಬಂದ ನಾನು ಮೊದಲು ಒಂದು ಕೆಲಸವಿರಲಿ ಎಂದು ಒಂದು ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡದ್ದಾಯಿತು. ಕೆಲಸಕ್ಕೆ ಸೇರಿದ ಮೂರನೇ ತಿಂಗಳಿಗೆ ಮಧ್ಯದಲ್ಲಿ ಯಾರೋ ಬಿಟ್ಟು ಹೋದದ್ದಕ್ಕೆ ಈಶ್ವರಿ ಬಂದು ಸೇರಿದ್ದರು. ರಸಾಯನ ಶಾಸ್ತ್ರದಲ್ಲಿ ಎಂ. ಫಿಲ್ ಪಧವೀಧರೆಯಾದವರು ಹೀಗೆ ಇಂತಹ ನಗರದ ಯಾವುದೋ ಮೂಲೆಯಲ್ಲಿನ ಒಂದು ಪುಟ್ಟ ಶಾಲೆಗೆ ಅಧ್ಯಾಪಕಿಯಾಗಿ ಕೆಲಸ ಮಾಡಲು ಬಂದು ಸೇರಿಕೊಳ್ಳುವುದೆಂದರೆ? ಎಂದು ನನಗೆ ಮೊದಮೊದಲು ಆಶ್ಚರ್ಯವೆನಿಸಿದರೂ ನನ್ನಂತಹದೇ ಯಾವುದೋ ಕಾರಣವಿರಬೇಕೆಂದು ಸುಮ್ಮನಾಗಿದ್ದೆ.
ಈಶ್ವರಿ ಶಾಲೆಗೆ ಬಂದ ಮೊದಲ ದಿನ ಕಾಂಚೀವರಂ ಸೀರೆ ಉಟ್ಟು, ಕೂದಲನ್ನು ಚೆಲ್ಲಿಬಿಟ್ಟು ಒಂದು ಸಣ್ಣ ಕ್ಲಿಪ್ಪು ಹಾಕಿ ಸಣ್ಣ ದುಂಡುಮಲ್ಲಿಗೆ ದಂಡೆಯನ್ನು ಮುಡಿದಿದ್ದರು. ಹಣೆಗೆ ಇಟ್ಟಿದ್ದ ಅಡ್ಡತಿಲಕ ಅವರಿಗೆ ಹೊಂದುತ್ತಿತ್ತು. ಕನ್ನಡವನ್ನ ಚೆನ್ನಾಗೆ ಕಲಿತಿದ್ದರೂ ಅವರ ಮಾತೃಭಾಷೆಯಾದ ತಮಿಳಿನ ಅಕ್ಸೆಂಟ್ ಬಂದುಬಿಡುತ್ತಿತ್ತು. ಹೆಚ್ಚು ತೆಲುಗು ಭಾಷೆಯವರೇ ಹೆಚ್ಚಿದ್ದ ಆ ಶಾಲೆಯಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಹೀಗೆ ಹಲವು ಭಾಷಿಗರ ಕಾರ್ಯಸ್ಥಾನವಾಗಿತ್ತು. ನಾನಿದ್ದ ಪೀಜಿಯಲ್ಲಿ ಪ್ರತಿ ಮದ್ಯಾಹ್ನ ಬಾಕ್ಸಿಗೆಂದು ಚಿತ್ರಾನ್ನ ಖಾಯಂ ಆಗಿತ್ತು. ಒಮ್ಮೆ ಅರಿಶಿನ ಹೆಚ್ಚಾಗಿದ್ದರೆ ಒಮ್ಮೊಮ್ಮೆ ಅನ್ನ ಬೆಂದಿರುತ್ತಿರಲಿಲ್ಲ. ಒಮ್ಮೊಮ್ಮೆ ಉಪ್ಪು ಮಾಯವಾಗಿರುತ್ತಿತ್ತು. ನನ್ನ ಇನ್ನುಳಿದ ಸಹೋದ್ಯೋಗಿಗಳು ‘ನೀನು ಹೀಗೆ ಚಿತ್ರಾನ್ನ ತಿನ್ನುತ್ತಾ ಇದ್ದರೆ, ನಿನ್ನ ಲೈಫೇ ಚಿತ್ರಾನ್ನವಾಗಿ ಬಿಡತ್ತೆ ಗುರು!!!’ ಎಂದು ಆಡಿಕೊಳ್ಳುತ್ತಿದ್ದರು. ನನಗು ಚಿತ್ರಾನ್ನ ತಿಂದು ತಿಂದು ಚಿತ್ರಾನ್ನ ನೋಡಿದರೆ ಮುಖ ಕಿವುಚಿಕೊಳ್ಳುತ್ತಿದ್ದ ನನ್ನನ್ನ ನೋಡಿದ ಈಶ್ವರಿ ಅಂದು ಮೊದಲನೇ ಬಾರಿಗೆ ನನಗೆ ಅವರು ಮೆಣಸಿನ ಪುಡಿ ಹಾಕಿ ಮಾಡಿದ್ದ ಚಿಕನ್ ಫ್ರೈ ನೆಂಚಿಕೊಳ್ಳಲು ಕೊಟ್ಟರು. ಆಹಾ ಹುಲುಜನುಮವೇ!!! ಅವರ ಕೈಯಡುಗೆಯ ರುಚಿಯನ್ನು ಮೂರು ದಿನ ಹೊಗಳುತ್ತಾ ತಿರುಗಾಡಿದ್ದೆ. ಅವರಿಗೂ ಅದು ಇಷ್ಟವಾಗಿತ್ತೇನೋ ನಂತರದ ದಿನದಿಂದ ನನಗೂ ಒಂದು ಎಕ್ಸ್ಟ್ರಾ ಬಾಕ್ಸ್ ತರಲು ಶುರು ಮಾಡಿದರು. ಮೊದಮೊದಲು ಬೇಡ ಬೇಡ ಎಂದು ಮೇಲು ಮಾತಿಗೆ ಅಂದರೂ ಅವರ ಕೈ ಅಡುಗೆಯ ರುಚಿಯ ಬಂಧನದಿಂದ ಬಿಡಿಸಿಕೊಳ್ಳಲಾಗಲಿಲ್ಲ.
‘ಆ ಹುಡುಗನಿಗೆ ಈಗ ಇಪ್ಪತ್ನಾಲ್ಕು. ಹುಡುಗಬುದ್ಧಿ. ಈಯಮ್ಮನಿಗಾದ್ರೂ ಬುದ್ಧಿ ಬೇಡವಾ? ಊಟ ತಂದುಕೊಡೋದೇನು? ಚೆಲ್ಲು ಚೆಲ್ಲಾಗಿ ಆಡೋದೇನು, ಅತಿ ಸಲುಗೆ ಯಾಕೋ ಗೊತ್ತಿಲ್ಲ, ಎಲ್ಲೋ ಏನೋ ಸರಿ ಇಲ್ಲ ಅನಿಸ್ತಿದೆ’ ಎಂಬ ಗುಸುಗುಸು ಪಿಸುಪಿಸು ನನ್ನ ಕಿವಿಗೂ ತಲುಪಿತ್ತು. ‘ನಾವು ಸರಿಯಿದ್ದೇವಲ್ಲ. ಅಷ್ಟು ಸಾಕು!!! ಮಂದಿಗೇನು? ಕುಂತ್ರು ಆಡ್ಕತಾರೆ… ನಿಂತ್ರು ಆಡ್ಕತಾರೆ’ ಅಂದುಕೊಂಡು ತಲೆ ಕೆಡಿಸಿಕೊಂಡಿರಲಿಲ್ಲ.
ಶಾಲೆಯಲ್ಲಿ ಬಿಡುವು ಸಿಕ್ಕಿದಾಗೆಲ್ಲ ಅವರ ಗಂಡ ಕಾಲ್ ಮಾಡುತ್ತಿದ್ದರು. ಹತ್ತರಲ್ಲಿ ಒಂಭತ್ತು ಬಾರಿ ಕರೆ ಮುಗಿಸಿದ ತಕ್ಷಣ ಇವರು ಕಣ್ಣೀರಾಗುತ್ತಿದ್ದರು. ಒಮ್ಮೊಮ್ಮೆ ಬೆಳ್ಳಂಬೆಳಿಗ್ಗೆಯೇ ಕಣ್ಣು ಊದಿಕೊಂಡಿರುತ್ತಿತ್ತು. ಕನ್ನಡ ಬರುವ ಸಹೋದ್ಯೋಗಿಯೊಬ್ಬರು ಈಶ್ವರಿಗೆ ‘ಅಳುಮುಂಜಿ ಶ್ರುತಿ’ ಎಂದು ಹೆಸರಿಟ್ಟುಬಿಟ್ಟಿದ್ದರು. ಅವರು ನನಗಿಂತ ಸುಮಾರು ಹದಿನೈದು ವರುಷಕ್ಕೆ ದೊಡ್ಡವರಾದ್ದರಿಂದ ಅವರನ್ನ ಹೇಗೆ ಸಮಾಧಾನ ಪಡಿಸಬೇಕೆಂಬುದು ನನಗೆ ತಿಳಿಯುತ್ತಿರಲಿಲ್ಲ… ಇಪ್ಪತ್ತ್ನಾಲ್ಕರ ನಾನು ಬಾಯಿತಪ್ಪಿ ಅವರ ಮನಸ್ಸಿಗೆ ನೋವುಂಟು ಮಾಡುವುದನ್ನ ಕೇಳಿಬಿಟ್ಟರೆ? ಎಂಬ ಭಯ ಅವರಿಸಿಕೊಂಡುಬಿಡುತ್ತಿತ್ತು. ಕೊನೆಗೂ ಧೈರ್ಯ ಮಾಡಿ ‘ನಿಮ್ಮ ಗಂಡ ಅಷ್ಟು ಕೆಟ್ಟವರಾ?’ ಎಂದು ಕೇಳಿಬಿಟ್ಟೆ. ‘ನನ್ನ ಗಂಡ ನನಗೆ ಹೊಡೆಯುವುದಿಲ್ಲ… ಅಷ್ಟರ ಮಟ್ಟಿಗೆ ಅವನು ಒಳ್ಳೆಯವನು ಸಾರ್’ ಎಂದು ಹೇಳಿ ಕಣ್ಣೊರೆಸಿಕೊಂಡು ತರಗತಿಗೆ ಹೋಗಿದ್ದರು. ನನ್ನನ್ನು ಆ ಉತ್ತರ ವಿನಾಕಾರಣ ಒಳಗಿನಿಂದ ಅಲ್ಲಾಡಿಸಿಬಿಟ್ಟಿತ್ತು. ಈ ಚಿಕ್ಕ ಹುಡುಗನ ಹತ್ತಿರವೇನು ಹೇಳಿಕೊಳ್ಳುವುದು ಅನಿಸಿರಬೇಕು ಅಥವಾ ಊರಿನಲ್ಲಿರುವ ನನ್ನ ದೊಡ್ಡಮ್ಮನ ಹಾಗೆ ಗಂಡನನ್ನ ಸುಲಭವಾಗಿ ಬಿಟ್ಟುಕೊಡಲು ಮನಸಾಗಿರದೆ ಹೋಗಿರಬಹುದು ಎಂದು ಸಮಾಧಾನ ಪಡಿಸಿಕೊಂಡೆ. ಮುಜುಗರದಿಂದ ನಾನು ಎರಡು ದಿನ ಮಾತನಾಡಿಸಿರಲಿಲ್ಲ. ಅವರೇ ಮತ್ತೆ ಬಂದು ‘ಥ್ಯಾಂಕ್ಯೂ ಸೊ ಮಚ್ ಸಾರ್…’ ಎಂದಷ್ಟೇ ಹೇಳಿ ನನ್ನ ತಲೆಗೂದಲಿನಲ್ಲಿ ಬೆರಳಾಡಿಸಿ ಮುಗುಳ್ನಕ್ಕು ಹೋಗಿದ್ದರು.
ಬಿಡುವಿನ ವೇಳೆಯಲ್ಲಿ ಕೆಫೆಟೇರಿಯಾದಲ್ಲಿ ಕುಳಿತಿರುವಾಗ ‘ನೋಡಲು ಲಕ್ಷಣವಾಗಿದ್ದೀರಿ!!! ಮುಖದಲ್ಲಿ ಒಳ್ಳೆಯ ಕಳೆಯಿದೆ. ನೀವೇಕೆ ಪ್ರೀತಿಸಿ ಮದುವೆಯಾಗಲಿಲ್ಲ?’ ಎಂದು ಕೇಳಿದ್ದಕ್ಕೆ

‘ನಿಮಗೆ ನನ್ನ ಮೇಲೆ ಗೌರವವಿದೆ. ಅದಕ್ಕೆ ಹಾಗನ್ನುತ್ತಿ. ನನ್ನ ಅಪ್ಪ ಅಮ್ಮನಿಗೆ ನಾನೊಂದು ಮೂಟೆಯಾಗಿದ್ದೆ. ನನ್ನನ್ನು ಸಾಗಿಸಿದರು. ಕಪ್ಪು ಬಣ್ಣ… ದಪ್ಪಗಿದ್ದೆ. ಚೂರು ಹಲ್ಲು ಉಬ್ಬಗಿದ್ದವು… ನನಗೆ ಹಲವರ ಮೇಲೆ ಮನಸ್ಸಿತ್ತು ಆದರೆ ನನ್ನನ್ನು ಯಾರೂ ಪ್ರೀತಿಸಲಿಲ್ಲ ಸಾರ್. ನಮ್ಮಂಥವರಿಗೆ ಅರೇಂಜ್ಡ್ ಮ್ಯಾರೇಜೇ ಗತಿ ಅಂತ ಮೊದಲೇ ಗೊತ್ತಾಗಿಹೋಗಿಬಿಟ್ಟಿತ್ತು ಸಾರ್. ಅದಕ್ಕೆ ಆ ವಿಫಲ ಪ್ರಯತ್ನಕ್ಕೆ ಕೈಹಾಕಲಿಲ್ಲ’ ಎಂದು ಬಿಸಿ ಬಿಸಿ ಕಾಫಿ ಕುಡಿಯುತ್ತಾ ತಣ್ಣಗೆ ಹೇಳುತ್ತಿದ್ದರೆ ನನಗೆ ಯಾಕಾದರೂ ಕೇಳಿ ಕೆದಕಿ ಬೇಸರ ಪಡಿಸಿದೆನೇನೋ ಎನಿಸಿತು.
‘ಮೊದಲ ಎಂಟು ಗಂಡುಗಳು ರಿಜೆಕ್ಟ್ ಮಾಡಿ ಹೋದವು. ಒಂಭತ್ತನೆಯದು ವೋಕೆ ಅಂತ ಒಪ್ಪಿಕೊಂಡಿದ್ದು… ಅವರೇ ಕರ್ಣನ ಅಪ್ಪ. ಅವರು ಸಿಕ್ಕಿದ್ದು ಕೂಡ ಮ್ಯಾಟ್ರಿಮೋನಿಯ ಪ್ರೊಫೈಲಿನಲ್ಲಿ!!! ಅವರೂ ನೋಡಲು ಸುಮಾರಾಗಿದ್ದರು. ಆದರೆ ಗಂಡಿಗೇನು? ಹೇಗಿದ್ದರೂ ನಡೆಯತ್ತೆ ಅನ್ನುವ ಮಾತು ಎಲ್ಲ ಕಡೆಯೂ ಇದೆಯಲ್ಲ!!! ಆತ ಒಪ್ಪಿದ್ದೆ ಭುವನದ ಭಾಗ್ಯ ಎಂಬ ಖುಷಿ ಮನೆಯಲ್ಲಿತ್ತು. ರೂಪದಲ್ಲಿ ಕೊರತೆ ಅನಿಸಿದ್ದನ್ನು ಓದಿನಲ್ಲಿ ಗೆಲ್ಲಬೇಕು ಎಂದು ಹೊರಟಿದ್ದೆ. ಎಂ. ಎಸ್ಸಿ ,ಎಂ.ಫಿಲ್, ಬಿ.ಎಡ್ ರಾಶಿ ರಾಶಿ ರಾಶಿ ಓದಿದ್ದೆ. ಪ್ರಯೋಜನಕ್ಕಿಂತ ನಷ್ಟವೇ ಆಯಿತು. ಗಂಡಿಗಿಂತ ಹೆಣ್ಣು ಕಡಿಮೆ ಓದಿರಬೇಕು ಎಂಬ ಅಲಿಖಿತ ಅಭಿಪ್ರಾಯ ಮನಸ್ಸಿನಲ್ಲಿ ಬೇರೂರಿಬಿಟ್ಟಿತ್ತು. ವರದಕ್ಷಿಣೆಯೂ ಕಡಿಮೆ ಬರುತ್ತದೆಂಬ ಲೆಕ್ಕಾಚಾರವೂ ಇದ್ದಿರಬಹುದು…’ ಎಂದು ಹೇಳುತ್ತಲೇ ಹೋಗುತ್ತಿದ್ದವರನ್ನು ತಡೆದು;
‘ವರದಕ್ಷಿಣೆ ಕಡಿಮೆಯಾಯ್ತ?’ ಎಂದು ಕೇಳಿದೆ.
ಅವರದಕ್ಕೆ ನಕ್ಕು ‘ರೂಪದಲ್ಲಿ ಊನ ತೋರಿಸಿ ದಂಡಿ ದಂಡಿ ವರದಕ್ಷಿಣೆ ಪೀಕಿದರು. ಅಪ್ಪ ಇದೆಲ್ಲ ತನ್ನ ಕರ್ಮ. ಇದೊಂದು ಮೂಟೆ ಸಾಗಿಸಿಬಿಟ್ಟರಾಯಿತೆಂದು ಅಂದುಕೊಂಡಂತ್ತಿತ್ತು. ಹಿಂದೆ ಅಣ್ಣ ಇದ್ದನಲ್ಲ. ಇಲ್ಲಿ ಕೊಟ್ಟದ್ದು ಅಲ್ಲಿ ವಾಪಸ್ಸು ಬರುತ್ತದೆಂಬ ವಿಶ್ವಾಸವಂತೂ ಇತ್ತು’ ಹೇಳುತ್ತಲೇ ಹೋದರು… ಆ ಕ್ಷಣಕ್ಕೆ ನಾವುಗಳು ಶಾಲೆಯ ಪಠ್ಯ ಪುಸ್ತಕಗಳಲ್ಲಿ ಓದುವುದಕ್ಕೂ, ಹೇಳಿಕೊಡುವುದಕ್ಕೂ, ಆಚರಣೆಯಲ್ಲೂ ಅಜಗಜಾಂತರ ವ್ಯತ್ಯಾಸವಿದೆಯೆಂದು ಅರಿವಿಗೆ ಬಂತು. ಪುಸ್ತಕಗಳ ಆದರ್ಶಲೋಕ ಬಡವನೊಬ್ಬ ಬರಿಗಾಲಲ್ಲಿ ನಿಂತು ಆಕಾಶದ ವಿಮಾನಕ್ಕೆ ಟಾಟಾ ಮಾಡಿದಂತೆನಿಸಿತು!!!
ಕಾಫಿ ಬ್ರೇಕ್ ಗಳಲ್ಲಿ ಇವೆಲ್ಲ ಚರ್ಚೆಯಾಗುತ್ತಿದ್ದರೂ ಅವರು ಯಾಕೆ ಅಷ್ಟೊಂದು ಕೊರಗುತ್ತಾರೆಂದು ನನಗೆ ಹೊಳೆಯುತ್ತಿರಲಿಲ್ಲ.
ಕೊನೆಗೆ ಅವರ ಗಂಡ ಆರ್ಮಿಯಲ್ಲಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದದ್ದೆಂದು ಈಗ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದಾರೆಂದು ಹೇಳಿಕೊಂಡಿದ್ದರು. ಅವರ ಗಂಡನಿಗೆ ಇವರನ್ನು ನೋಡಿದರೆ ಏನೋ ಒಂದು ತರದ ಕೀಳಿರಿಮೆ ಆವರಿಸುತ್ತಿತ್ತು. ಅದನ್ನ ಅವರು ಹಾಸಿಗೆಯಲ್ಲಿ ಗೆಲ್ಲಲು ನೋಡಿದರು. ಇವರನ್ನು ಕೆಲಸಕ್ಕೆ ಕಳುಹಿಸಿರಲಿಲ್ಲ… ಈಶ್ವರಿಗೆ ತಾವೊಬ್ಬ ವಿಜ್ಞಾನಿ ಆಗಬೇಕಂತಿತ್ತು. ಅದಂತೂ ಸಾಧ್ಯವೇ ಇರಲಿಲ್ಲ. ಕೊನೆಗೂ ಜಿದ್ದಿಗೆ ಬಿದ್ದು ಈ ಶಾಲೆಗೆ ಬಂದದ್ದಾಯಿತು.
ಇಷ್ಟೆಲ್ಲಾ ಜಿಲೇಬಿಯ ಸುರುಳಿಗಳಂತೆ ನೆನಪಾಗುವಾಗಲೇ ಐಸ್ ಕ್ರೀಮ್ ಬಂದಿತು. ಅವರು ಒಂದು ಸ್ಪೂನನ್ನು ತೆಗೆದು ನನ್ನತ್ತ ಹಿಡಿದರು. ನನಗೆ ಈ ಸಮಯದಲ್ಲಿ ಬೇಡವೆಂದು ಹೇಳಿ ಅವರಿಗೆ ಮುಜುಗರ ಮಾಡುವುದು ಸರಿಯಲ್ಲವೆಂದು ತಿಂದೆ… ಕರ್ಣ ಇರ್ಬೇಕಿತ್ತು. ಅವ್ನಿಗೆ ಐಸ್ ಕ್ರೀಮ್ ಅಂದ್ರೆ ಬಲೂನುಗಳಷ್ಟೇ ಜಿಲೇಬಿಯಷ್ಟೇ ಜೀವ ಎಂದು ಕಣ್ಣೀರಾದರು. ‘ಅಳ್ಬೇಡಿ ಮ್ಯಾಮ್. ಹೇಗಿದ್ರು ಚೆನ್ನೈಗೆ ಹೋಗ್ತಿರಲ್ಲ!!! ಅವಾಗ ದಿನಾಲು ಒಂದೊಂದು ಐಸ್ ಕ್ರೀಮ್ ಕೊಡ್ಸಿ…’
‘ನಿಮಕು ನಾನು ಹೋಗೋದೇ ಬೇಕಲ್ಲ?’ ಎಂದು ಮರು ಪ್ರಶ್ನೆ ಹಾಕಿದರು.
‘ಹಾಗಲ್ಲ ಮ್ಯಾಮ್. ಇಲ್ಲಿನ ಉಸಿರುಗಟ್ಟಿಸೋ ಜಾಗದಿಂದ ನಿಮಗೆ ಅದು ಹೇಗೋ ಮುಕ್ತಿ ಸಿಕ್ಕಿದೆ. ಈಗ ಹಳೇದನ್ನು ಮರ್ತು ಹೊಸ್ತು ಅಂತ ಶುರು ಮಾಡೋ ಕಾಲ ಬಂದಿದೆ. ಮತ್ತೆ ಮತ್ತೆ ಅವಕಾಶಗಳು ಆಗಲ್ಲ. ಸಿಕ್ಕಿದಾಗಲೇ ಬಳಸಿಕೊಳ್ಳಬೇಕು’ ಎಂದು ವೇದಾಂತಿಯಂತೆ ನುಡಿದೆ.
‘ನನಕು ಈಗ್ಲೂ ಭಯ ಸಾರ್’ ಎಂದು ಹೇಳಿ ಐಸ್ ಕ್ರೀಮ್ ತಿನ್ನುವುದನ್ನ ನಿಲ್ಲಿಸಿ ಒಂದು ದೀರ್ಘ ಉಸಿರು ತೆಗೆದುಕೊಳ್ಳುತ್ತಾ ಪಕ್ಕದ ಗೋಡೆಯ ಕಡೆಗೆ ಒಂದು ಖಾಲಿತನದ ನೋಟ ಬೀರಿದರು. ನನಗೆ ಅಲ್ಲಿ ಗೋಡೆಗೆ ಅಂಟಿಸಿದ್ದ ಐಸ್ಕ್ರೀಂ ಚಿತ್ರಗಳು, ವಿವಿಧ ಐಸ್ಕ್ರೀಂ ಹೆಸರುಗಳಷ್ಟೇ ಕಂಡವು.
‘ಭಯ ಯಾಕೆ ಮ್ಯಾಮ್?’ ಎಂದು ಸಮಾಧಾನ ಪಡಿಸುವ ದನಿಯಲ್ಲಿ ಪ್ರಶ್ನಿಸಿದೆ.
‘ಇಲ್ಲಿವರ್ಕು ಏಗಾಡಿದ್ದೆ ಆಯ್ತು. ಅಭ್ಯಾಸ ಆಗೋಗಿತ್ತು. ಆಗ ಹಿಂಸೆ ಅನಿಸ್ತಿತ್ತು. ಈ ಗಂಡ ಅನ್ನೋನೊಬ್ಬ ನೆಗೆದು ಬಿದ್ರೆ ಎಲ್ಲ ಸರಿಯಿರತ್ತೆ ಅನ್ಸೋದು… ಆಮೇಲೆ ಕರ್ಣನ ಜೊತೆ ಆರಾಮಾಗಿ ಚೆನ್ನೈಗೆ ಹೋಗಿ ಇದ್ದುಬಿಡಬಹುದು ಅಂತ ಕೂಡ ಅನ್ಸಿತ್ತು. ಆದ್ರೆ ದೇವ್ರು ನಾನು ಅಂದುಕೊಂಡದ್ದಕ್ಕೆ ತಕ್ಷಣವೇ ಆಮೀನ್ ಅಂದು ನಿಜಗೊಳ್ಸಿಬಿಟ್ಟ. ಒಂದು ರಾತ್ರಿ ಜಗಳ ಆಡಿ ಮನೆಯ ಹಾಲಿನ ಸೋಫಾದಲ್ಲಿ ಮಲಗಿರುವವನು ಬೆಳಗಿನ ಹೊತ್ತಿಗೆ ಕಣ್ತೆಗೆಯಲೇ ಇಲ್ಲ… ಈಗ ಕರ್ಣ ಮತ್ತೆ ನನ್ನ ಕನಸುಗಳ ಬದುಕನ್ನ ಒಬ್ಳೆ ನಿಭಾಯಿಸ್ತೀನ? ಸಾರ್’ ಅಂದರು.
******
‘ಅವರಿಗೆ ಮಕ್ಕಳಾಗಿರಲಿಲ್ಲವಂತೆ. ಅವಾಗ ಚೆನ್ನಾಗೆ ಇದ್ದ ಗಂಡ ಪರವಾಗಿಲ್ಲ ಅಂತಂದು ಗಂಡುಮಗುನ ದತ್ತು ತಗೋಬಂದ್ರಂತೆ!!! ಕರ್ಣ ಅಂತ ಹೆಸರಂತೆ. ಆಮೇಲೆ ಅದೇನಾಯ್ತೋ ಏನೋ ಗಂಡ ಇದ್ದಕ್ಕಿದ್ದಂತೆ ಇನ್ನೊಂದು ಮದ್ವೆಯಾಗಿ ಅವಳನ್ನು ಇದೆ ಊರಲ್ಲಿರಿಸಿ ಅವಳ ಕೈಗೆ ಮೂರು ಮಕ್ಕಳು ಕೊಟ್ಟು ಈ ಮಗೂನ ಬೇಡ. ಅದು ನನ್ನ ಮಗು ಅಲ್ಲ ಅಂತ ಸೇರೋದೇ ಇಲ್ವಂತೆ. ಅದಕ್ಕೆ ಪ್ರತಿಸಲ ಕರ್ಣನ ಸಲುವಾಗೇ ಅಳುತ್ತಂತೆ’ ಅಂತ ಸ್ಟಾಫ್ ರೂಮಿನ ಗುಸುಗುಸು ಪಿಸುಪಿಸುಗಳಲ್ಲಿ ಕಿವಿಗೆ ಬಿದ್ದಿದ್ದವಾದರೂ ಫ್ಯಾಕ್ಟ್ ಚೆಕ್ ಮಾಡಲು ಹೋಗಲು ಮನಸ್ಸಾಗದೆ ದೂರ ಉಳಿದಿದ್ದೆ. ಯಾರಾದರೂ ಯಾರ ಬದುಕಿನಲ್ಲಾದರೂ ಎಷ್ಟು ಹತ್ತಿರ ಹೋಗಬಹುದು? ಎಂಬ ಗೊಂದಲವೇ ನನ್ನನ್ನು ತುಂಬಾ ವಿಷಯಗಳಿಂದ ಜನರಿಂದ ದೂರವಿಟ್ಟಿದೆ ಮತ್ತು ಹತ್ತಿರವಾಗಿಸಿದೆ.
‘ಮನುಷ್ಯ ಆರ್ಮಿಯಲ್ಲಿದ್ದ. ಹೊರಗಡೆ ಜೀವನದಲ್ಲಿ ಶಿಸ್ತಂತೆ. ಒಳಗಡೆ ಅಷ್ಟೇ ವುಮನೈಸರಂತೆ. ಕಿಟಕಿಗೆ ನಿಂತು ಯಾವ ಹೆಣ್ಣು ಮಗಳು ಹೇಗೆ? ಅಂತ ಕೆಕ್ಕರಿಸಿ ನಿಂತಿರ್ತಾನಂತೆ! ಅವರ ಫೋನ್ ಕಾಂಟಾಕ್ಟ್ ಲಿಸ್ಟು ಹೀಗೆ ಎಲ್ಲವನ್ನು ಬಿಟ್ಟು ಬಿಡದೆ ಚೆಕ್ ಮಾಡ್ತಾನಂತೆ. ಹೊಡೆಯಲ್ವಂತೆ!!! ಆದರೆ ಕಣ್ಣಲ್ಲೇ ಹೆದರಿಸ್ತನಂತೆ. ಹಾಲಿನವನು, ಪೇಪರಿನವನು ಈಕೆ ಮಾತನಾಡುವ ಪ್ರತಿಯೊಬ್ಬರ ಬಳಿಯೂ ಸಂಬಂಧವಿಟ್ಟುಕೊಂಡಿರಬಹುದೇ ಎಂದು ಬಾಯಿಬಿಟ್ಟೆ ಕೇಳುತ್ತಾನಂತೆ…ಪಾಪ!!! ಒಂದೇಟು ಹಾಕಿದ್ರೂ ಪರವಾಯಿಲ್ಲ. ಈ ಅನುಮಾನದ ಗಂಡಸರ ಬಳಿ ಏಗೋದು ಕಷ್ಟ ಕಣ್ರೀ’ ಎಂದು ಶಾಲೆಯ ಪ್ರಿನ್ಸಿಪಾಲರೂ ಈ ಗುಸುಗುಸು ಪಿಸುಪಿಸುಗಳನ್ನು ಮತ್ತೊಬ್ಬರಿಗೆ ದಾಟಿಸುತ್ತಿದ್ದರು. ಇದನ್ನ; ರಜೆ ಪಡೆಯಲು ಪರ್ಮಿಷನ್ ಕೇಳಲು ಹೋದಾಗ ಅರ್ಧತೆರೆದ ಬಾಗಿಲಿನ ಪೊಳಕಿನಿಂದ ಬೇಡವೆಂದರೂ ನನ್ನ ಕಿವಿಗೆ ಬಂದು ಬಿದ್ದಿತ್ತು.
ಈಶ್ವರಿ ಹೀಗೇಕೆ ಎಲ್ಲರ ಬಳಿಯೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ? ಎನಿಸುತ್ತಿತ್ತು. ಸದಾ ಬ್ಯುಸಿ ಇದ್ದೇವೆ ಎಂದು ಹೇಳಿಕೊಂಡು ತಿರುಗುವ ಮಂದಿ ಇಷ್ಟೆಲ್ಲಾ ವಿವರಗಳನ್ನು ಹೇಗೆ ಮತ್ತು ಯಾವಾಗ ಕಲೆಹಾಕುತ್ತಾರೆ. ಅದನ್ನ ಬೇರೊಬ್ಬರಿಗೆ ಹೇಳಿಕೊಂಡು ಹಗುರಾಗುವಷ್ಟು ಸಮಯ ಹೇಗೆ ಮಾಡಿಕೊಳ್ಳುತ್ತಾರೆ ಎಂದೆಲ್ಲ ನನಗೆ ಆಶ್ಚರ್ಯವಾಗುತ್ತದೆ. ಅದು ಕೂಡ ಕಥೆಗಾರನ ಈ ಕಥೆ ಹೇಳುವ ಚಟದಂತೆಯೇ ಇರಬಹುದೆಂದು ಬಹಳ ಸರಿ ನನಗೆ ಅನಿಸಿದೆ.
******

‘ಮೊದ್ಲಿಗೆ ದ್ವೇಷಿಸೋಕೆ ಅಂತ ಒಬ್ಬ ಇದ್ದ ಸಾರ್. ಈಗ ಅವ್ನು ಇಲ್ಲ… ಇರೋವಾಗ ಕೆಟ್ಟವನು ಅನಿಸ್ತಾ ಇತ್ತು. ಈಗ ಮನ್ಸಿನ ತುಂಬಾ ಅವನೊಂದಿಗೆ ಕಳೆದ ಒಳ್ಳೆ ಕ್ಷಣಗಳದ್ದೆ ಸುರುಳಿ…ಇವೆಲ್ಲ ಹೇಳಿದ್ರೆ ಹುಚ್ಚಿ ಅಂತೀರೇನೋ. ನನಗವರ ಮೇಲೆ ಪ್ರೀತಿ ಅಂತೂ ಇತ್ತು. ಕರ್ಣನನ್ನ ತಮ್ಮ ಮಗ ಅಂತ ಒಪ್ಪಿರಲಿಲ್ಲ… ಮುಂದೆ ಒಪ್ತಾ ಇದ್ರೇನೋ?’ ಐಸ್ ಕ್ರೀಮಿನೊಳಗಿದ್ದ ಐಸೆಲ್ಲಾ ಕರಗುತ್ತಿತ್ತು. ‘ಮ್ಯಾಮ್ ಐಸ್ ಕರಗ್ತಾ ಇದೆ. ಮೊದ್ಲು ತಿಂದು ಬಿಡಿ’ ಎಂದು ಅವರು ಆ ಮರುಕದ, ಭಯದ ಸುಳಿಯಿಂದ ಹೊರತರುವ ಕಾಳಜಿಯಿಂದ ಹಾಗೆ ಹೇಳಿ ನನ್ನ ಕಪ್ಪಿನೊಳಗಿದ್ದದ್ದನ್ನೆಲ್ಲ ತಿಂದು ಮುಗಿಸಿದೆ. ಅವರಿಗೆ ಅದು ತಿಳಿಯಿತೇನೋ ಸುಮ್ಮನಾದರು. ನನ್ನ ತುಟಿಯ ಬಲಪಕ್ಕದಲ್ಲಿ ಐಸ್ ಕ್ರೀಮ್ ಹತ್ತಿದೆ ಎಂದು ತನ್ನ ಕರ್ಷಿಫಿನಿಂದ ಒರೆಸಿದರು. ಇಬ್ಬರೂ ತಿಂದು ಮುಗಿಸಿ ನಾನೆಷ್ಟೇ ಬೇಡವೆಂದರೂ ಅವರೇ ಬಿಲ್ ಕೊಟ್ಟು ಕ್ಯಾಬ್ ಬುಕ್ ಮಾಡಿ ಕಾದೆವು.
‘ನನ್ನ ಕಥೆಯೇನೋ ಸರಿ ಸಾರ್. ಆ ಎರಡನೇ ಹೆಂಡತಿಗೆ ಓದು ಬರಹ ಏನೂ ಗೊತ್ತಿಲ್ಲ. ಮೂರು ಮಕ್ಕಳು ಬೇರೆ. ಎಲ್ಲ ಹೆಂಗೆ ನಿಭಾಯಿಸ್ತಾರೆ ಸಾರ್? ಪಾಪಮು ಸಾರ್…’ ಎನ್ನುವವರನ್ನು ಅರ್ಧಕ್ಕೆ ತಡೆದು ‘ಮ್ಯಾಮ್ ನೀವೀಗ ಅದನ್ನೆಲ್ಲ ಯೋಚಿಸುವ ಗೋಜಿಗೆ ಹೋಗ್ಬೇಡಿ. ನಾನು ಸ್ವಾರ್ಥಿ ಅಂದುಕೊಂಡ್ರು ಪರವಾಗಿಲ್ಲ. ನಿಮ್ಮ ಗಂಡನ ಆಸ್ತಿಯೆಲ್ಲ ಅವರಿಗೇ ಹೋಗ್ತಾ ಇದೆ. ಮೊದ್ಲು ನೀವು ಚೆನ್ನೈಗೆ ಹೋಗಿ ಹೊಸ ಕೆಲ್ಸನೊ, ಪಿ ಎಚ್ ಡಿ ಗೋ ಪ್ರಯತ್ನ ಮಾಡಿ. ಅವರದ್ದು ಅವರಿಗೆ…’ ಎಂದೆ. ಅವರು ಎಂದಿನಂತೆ ಮುಗುಳ್ನಕ್ಕು ನನ್ನ ತಲೆಗೂದಲಲ್ಲಿ ಬೆರಳಾಡಿಸಿದರು. ಕ್ಯಾಬ್ ಹೊರಗಡೆ ಬಂದು ನಿಂತಿತು. ಹಿಂಬದಿ ಸೀಟಿನೊಳಗಡೆ ಕೂತು ಒಟಿಪಿ ಹೇಳಿದೆ. ಕಾರು ಮುಂದಕ್ಕೆ ಸಾಗಿತು. ಅವರು ನನ್ನ ಬಲಗೈ ಹಿಡಿದುಕೊಂಡು ‘ನೀನು ಅಂದುಕೊಂಡಿದ್ನೇಲ್ಲ ಆಗ್ಲಿ ಸಾರ್. ಟ್ರೈ ಪಡಿಕು ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ನನಗೆ ಏನು ಹೇಳಬೇಕೋ ತಿಳಿಯದಾಯಿತು. ‘ಸರಿ ಮ್ಯಾಮ್…’ ಎಂದೆನಾದರೂ ಕೈಬಿಡಿಸಿಕೊಳ್ಳಲು ಮನಸ್ಸಾಗಲಿಲ್ಲ. ನನಗೂ ಗಂಟಲು ಬಿಗಿದಂತಾಯಿತು. ಅವರನ್ನೆದುರಿಸಲಾಗದೆ ಕಿಟಕಿ ಕಡೆ ನೋಡಿದೆ. ಅವರೂ ಕೂಡ ಕಿಟಕಿ ನೋಡುತ್ತಿದ್ದಿರಬಹುದು. ನಮಗೆ ಕೊನೆಗೂ ಬೇಕಿರುವುದು ಇಂತಹ ಕಿಟಕಿಗಳೇ ಎನಿಸಿತು!!! ಈ ಉಬರ್ ಡ್ರೈವರ್ ನಮ್ಮನ್ನು ಗಮನಿಸುತ್ತಿದ್ದಾನಾ? ಪ್ರಯಾಣಿಕರ ಕಿಟಕಿಗಳ ದಾರಿಯಲ್ಲೇ ಸಾಗುವ ಶಾಪ ಅವನನ್ನು ವೃತ್ತಿಯಾಗಿ ಸುತ್ತಿಕೊಂಡಿರುವುದರಿಂದ ಅವನು ಬದುಕಿನ ಸೂಕ್ಷ್ಮಗಳನ್ನು ಕಾರು ಓಡಿಸುತ್ತಲೇ ಕಲಿಯುತ್ತಿದ್ದಿರಬೇಕು ಎಂಬ ತತ್ವಜ್ಞಾನ ಸುಳಿದು ಮರೆಯಾಯಿತು.
ಉಬರಿನ ಇನ್ನೊಂದೆರಡು ಸ್ಟಾಪುಗಳು ದಾಟಿದರೆ ನಾವುಗಳು ನಮ್ಮ ನಮ್ಮ ನಿಲ್ದಾಣಗಳಲ್ಲಿ ಇಳಿದುಕೊಳ್ಳುತ್ತೇವೆ. ಅಲ್ಲಿಂದ ನಮ್ಮ ದಾರಿಗಳು ಬೇರೆ ಬೇರೆಯಾಗುತ್ತವೆ. ಅಲ್ಲಿಂದ ಚದುರಿ ಮತ್ತೆ ದೈನಿಕದಲ್ಲಿ ಲೀನವಾಗುತ್ತೇವೆ. ನಮ್ಮಿಬ್ಬರನ್ನು ಸ್ಟಾಪಿನಲ್ಲಿ ಇಳಿಸಿದ ಚಾಲಕ ಮುಂದಿನ ಬುಕಿಂಗ್ ರೂಟನ್ನು, ಅವರ ಹೆಸರನ್ನು ಆ ಕ್ಷಣಕ್ಕೆ ನೆನಪಿಡುವಂತೆ ಓದಿಕೊಳ್ಳುತ್ತಾನೆ. ಸನ್ನದ್ಧನಾಗುತ್ತಾನೆ. ಇನ್ನೆರಡು ಸ್ಟಾಪು…ಎರಡೇ ಎರಡು ಸ್ಟಾಪು ಎಂದು ಯೋಚಿಸುವಾಗಲೇ; ಫೋನ್ ರಿಂಗಣಿಸಿತು. ನನ್ನ ಎಡಜೇಬಿನೊಳಗಿಂದ ಫೋನನ್ನು ಹೊರತೆಗೆದಾಗ ‘ಅಮ್ಮ’ ಎಂದು ಬರೆದಿತ್ತು. ಅಪ್ಪ ತಾನು ಹೊಟ್ಟೆಯಲ್ಲಿದ್ದಾಗಲೇ ಬಿಟ್ಟು ಹೋಗಿದ್ದ ಅಂತ ಎಲ್ಲರೂ ಹೇಳಿರುವರು. ಈಗ್ಗೆ ಇಪ್ಪತ್ನಾಲ್ಕು ವರ್ಷ. ಅಮ್ಮ ಊರಲ್ಲಿ ಒಬ್ಬಳೇ ನನ್ನ ದೊಡ್ಡಮ್ಮನ ಮನೆಯಲ್ಲಿದ್ದಾಳೆ. ಈಶ್ವರಿಗಿಂತ ಒಂದು ಹತ್ತು ವರ್ಷ ದೊಡ್ಡವಳಿರಬಹುದು. ಈ ಪ್ರವಾಹವನ್ನು ಒಬ್ಬಳೇ ಹೇಗೆ ಈಜುತ್ತಿದ್ದಾಳೆ ಎಂಬುದನ್ನು ನೆನೆಸಿಕೊಂಡು ಕಣ್ಣಲ್ಲಿ ಇನ್ನಷ್ಟು ಕಂಬನಿ ಕೂಡಿಕೊಂಡಿತು.
ಈ ಕೂಡಲೇ ಊರಿಗೆ ಹೋಗಿ ಅಮ್ಮನನ್ನ ಬಿಗಿದಪ್ಪಿಬಿಡಬೇಕೆನಿಸಿತು. ಬಲಗೈಯನ್ನು ಈಶ್ವರಿ ಗಟ್ಟಿಯಾಗಿ ಹಿಡಿದಿದ್ದಳು. ನನ್ನ ಎಡಗೈಯಲ್ಲಿ ಫೋನಿತ್ತು. ಒಂದು ಕ್ಷಣ ಅಮ್ಮ ಮತ್ತು ಈಶ್ವರಿಯ ಚಿತ್ರಗಳು ಕಲೆತು ಬೇರಾದಂತಾದವು. ಎದುರಿಗೆ ಕರ್ಣ ಹಳದಿ ಹೀಲಿಯಂ ಬಲೂನನ್ನ ಹಿಡಿದುಕೊಂಡು ನಿಂತಂತೆನಿಸಿತು. ಅವನಿಷ್ಟದ, ಸರ್ಕಲ್ಲಿನ ತಿರುವಿನಲ್ಲಿ ಕೊಂಡ ಜಿಲೇಬಿ ನನ್ನ ತೊಡೆಯ ಮೇಲೆ ತನ್ನೆಲ್ಲಾ ಸಿಹಿಪಾಕವನ್ನು ಅದರ ಸುರುಳಿಚಕ್ರಗಳಲ್ಲಿ ಅಡಗಿಸಿಟ್ಟುಕೊಂಡು ಬೆಚ್ಚಗೆ ಕೂತಿವೆಯೆನಿಸಿತು. ಇಪ್ಪತ್ನಾಲ್ಕು ವರುಷಗಳ ಹಿಂದೆ ನಾನೇ ಹಾಗೆ ನಿಂತಿದ್ದಿರಬಹುದೆನಿಸಿತು. ಇವತ್ತು ಅಮ್ಮನ ಫೋನೆತ್ತಿ ಇಂದು ರೇಗದೆ ಅವಳ ಕುಶಾಲು ಕೇಳಬೇಕೆನಿಸಿತು. ಈ ಬಾರಿ ಯುಗಾದಿಗೆ ಅವಳಿಷ್ಟದ ಒಂದು ಕಾಂಜೀವರಂ ಸೀರೆ ಒಯ್ದುಬಿಡಬೇಕೆಂದುಕೊಳ್ಳುವಾಗಲೇ ಕಾರು ಸಾಗುತ್ತ ಟ್ರಾಫಿಕ್ಕಿನಲ್ಲಿ ನಿಂತಿತು. ಸಿಗ್ನಲ್ಲಿನಲ್ಲಿ ಕೆಂಪು ದೀಪ. ವಾಹನಗಳ ಹೊಗೆ, ಹಾರ್ನು, ಮಂಗಳಮುಖಿಯರ ಚಪ್ಪಾಳೆಗಳು, ಈ ಪೇಟೆಯನ್ನು ಚಂದ್ರನ ಕಾವಲಿಗೆ ಖೋ ಕೊಟ್ಟು ಮುಳುಗಿ ಹೋಗುತ್ತಿರುವ ಸೂರ್ಯ ಎಬ್ಬಿಸಿಹೋದ ಸಂಜೆಯ ಕೆಂಪು ಅಲೆ, ಕರಗುತ್ತಿರುವ ಸಮಯ, ಒಳಗಿನ ವಿದಾಯದ ನೋವು ಒಳಗಡೆ ಒಂದು ವಿಚಿತ್ರ ಬೇಗುದಿಯನ್ನೇ ಹುಟ್ಟುಹಾಕಿದವು. ಕ್ರಮೇಣ ಸಿಗ್ನಲ್ಲಿನಲ್ಲಿ ಕೆಂಪು ದೀಪ ಕರಗಿ ಹಳದಿ ದೀಪ ಹೊತ್ತುಕೊಂಡಿತು. ಊಬರಿನಲ್ಲಿ ಇಬ್ಬರೂ ಕಿಟಕಿಗೆ ಮುಖ ಮಾಡಿ ಕೂತಿದ್ದೆವು. ಒಬ್ಬರನ್ನೊಬ್ಬರು ಎದುರಿಸಲು ಬಹುಷಃ ಸಾಧ್ಯವಿರಲಿಲ್ಲ. ಕಲಕಬಾರದ ವಿದಾಯದ ವಿಷಾದದ ಮೌನ ಆವರಿಸಿದೆ. ಊಬರ್ ಚಾಲಕ ನಮ್ಮ ಯಾವ ನೋವುಗಳೂ ತಾಕಿಸಿಕೊಳ್ಳಬಾರದೆಂಬ ನಿಶ್ಚಯಿಸಿರುವವನಂತೆ ಹಸಿರು ಬಣ್ಣ ಹೊತ್ತಿಕೊಳ್ಳುವುದನ್ನೇ ಕಾಯುತ್ತಿದ್ದಾನೆ. ಇನ್ನೇನು ಹಳದಿ ಕರಗಿ ಹಸಿರು ಹೊತ್ತಿಕೊಳ್ಳುತ್ತದೆ. ಮೂರು… ಎರಡು… ಒಂದು..






ಸೊಗಸಾದ ಕಥೆ. ನೇರಾನೇರ ಸಂಬಂಧಗಳ ಬಗ್ಗೆ ಬರೆಯುವುದು ಸುಲಭ. ಹೆಸರಿಡಲಾಗದ , ಇಷ್ಟ ಬಂದಂತೆ ಹೆಸರಿಡಬಹುದಾದ ನವಿರು ಸಂಬಂಧಗಳ ಬಗ್ಗೆ ಬರೆಯುವುದು ತೊಡರುತೊಡರಾದ ಕ್ರೋಷಾ ಕೆಲಸದ ತರಹ. ಕತೆಗಾರರಿಗೆ ಅಭಿನಂದನೆಗಳು.
ಬಹಳ ಇಷ್ಟವಾಯ್ತು ದಾದಾ
ಅಭಿನಂದನೆಗಳು…ತುಂಬಾ ಚೆನ್ನಾಗಿ ಬರೆದಿದ್ದಿರಿ.