ನಾ ದಿವಾಕರ್
ಮೈಸೂರು ನಗರದಲ್ಲೊಂದು ಹುಲಿ ಪ್ರತ್ಯಕ್ಷವಾಗಿದೆ. ಸಾರ್ವಜನಿಕರ ಆಕ್ಷೇಪಕ್ಕೆ ಮಣಿದು ಈ ಹುಲಿ ತನ್ನ ಒಡೆಯನ ಅಪ್ಪಣೆಯ ಮೇರೆಗೆ ವನವಾಸಕ್ಕೆ ತೆರಳಿತ್ತು. ಆದರೆ ಒಡೆಯ ಪುನಃ ಆಜ್ಞಾಪಿಸಿದ್ದಾನೆ. ಹುಲಿ ಮತ್ತೊಮ್ಮೆ ಪ್ರತ್ಯಕ್ಷವಾಗಿ ತನ್ನ ಆಟಾಟೋಪ ಮುಂದುವರೆಸಿದೆ. ಇದು ಎಲ್ಲಿ ಯಾವಾಗ ಪ್ರತ್ಯಕ್ಷವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ವೇಗವಾಗಿ ಚಲಿಸುವ ಹುಲಿಯ ಮೇಲಿನ ಸವಾರರು ಮಾತ್ರ ಬೇಟೆಗಾಗಿ ಹಸಿದಿರುತ್ತಾರೆ. ಸಿಕ್ಕ ಕೂಡಲೇ ಎರಡೂ ಕೈಗಳನ್ನು ಚಾಚಿ ಬಾಚಿಕೊಂಡು ಎತ್ತಾಕಿಕೊಂಡು ಹೋಗುತ್ತಾರೆ. ಬಡಪಾಯಿ ಪ್ರಜೆಗಳು ಕಕ್ಕಾಬಿಕ್ಕಿಯಾಗುತ್ತಾರೆ. ಅದೃಷ್ಟವಶಾತ್ ಈ ಹುಲಿ ಮನುಷ್ಯರ ತಂಟೆಗೆ ಬರುವುದಿಲ್ಲ. ಏಕೆಂದರೆ ಇದು ಜೀವವಿದ್ದರೂ ನಿರ್ಜೀವ ಹುಲಿ. ಚಲಿಸಿದರೂ ಹೃದಯವಿಲ್ಲದ ಹುಲಿ. ಸದ್ದು ಮಾಡಿದರೂ ಮೌನವಾಗಿ ಬೇಟೆಯಾಡುವ ಹುಲಿ. ಆದರೆ ಯಾರಿಗೂ ಜಗ್ಗದ ಈ ಹುಲಿಯ ಕಾಟ ಹೇಗಿದೆ ಎನ್ನುವಿರಾ. ಸಯ್ಯಾಜಿರಾವ್ ರಸ್ತೆಗೋ, ದೇವರಾಜ ಅರಸು ರಸ್ತೆಗೋ , ಇರ್ವಿನ್ ರಸ್ತೆಗೋ ಅಥವಾ ಸಬರ್ಬ್ ಬಸ್ ನಿಲ್ದಾಣದ ಬಳಿಯೋ ಓಡಾಡುತ್ತಿರಿ ಇದರ ಬೇಟೆಯ ಪರಿ ಅರಿವಾಗುತ್ತದೆ. ಟೈಗರ್ ಬರ್ತಾಯಿದೆ ಕಣ್ರೀ ಹುಷಾರಾಗಿರಿ ಎಂದು ಅಂಗಡಿ ಮುಗ್ಗಟ್ಟುಗಳ ಮಾಲಿಕರು ನಿಮ್ಮನ್ನು ಎಚ್ಚರಿಸುತ್ತಲೇ ಇರುತ್ತಾರೆ.

ಪಾಪ ಬಡಪಾಯಿ ಮಧ್ಯವರ್ಗದ ವ್ಯಕ್ತಿಯೊಬ್ಬ ಕಾಯಿಲೆಯಿಂದ ನರಳುತ್ತಿರುವ ತನ್ನ ಮಗುವಿಗೆ ಔಷಧಿ ಖರೀದಿಸಲು ಔಷಧಿ ಅಂಗಡಿಗೆ ಬಂದಿರುತ್ತಾನೆ. ಬೇಗನೆ ವಾಪಸ್ಸಾಗುವುದಷ್ಟೇ ಅವನ ಧ್ಯೇಯ. ಅಂಗಡಿಯ ಮುಂದೆ ತನ್ನ ವಾಹನ ನಿಲ್ಲಿಸಿ ಔಷಧಿ ಖರೀದಿಸುತ್ತಿರುತ್ತಾನೆ. ಬೇಗ ಕೊಡಿ ಸಾರ್ ಎಂದು ಪೀಡಿಸುತ್ತಿರುತ್ತಾನೆ. ಔಷಧಿ ಕೊಂಡು ಹಿಂದಿರುಗಿ ನೋಡುವಷ್ಟರಲ್ಲಿ ಅವನ ದ್ವಿಚಕ್ರ ವಾಹನ ಅವನ ಚಿತ್ತದಂತೆಯೇ ಮಾಯವಾಗಿರುತ್ತದೆ. ಸಾರ್ ಈಗ ತಾನೇ ಹುಲಿ ಎತ್ಕೊಂಡೋಯ್ತಲ್ಲಾ ಸಾರ್ ಹುಷಾರಾಗಿರ್ಬಾರ್ದಾ ಎಂಬ ಸಾಂತ್ವನದ ನುಡಿಗಳ ನಡುವೆಯೇ ಕಂಗಾಲಾಗುತ್ತಾನೆ. ಮತ್ತೊಂದೆಡೆ ಗಂಡ ಹೆಂಡತಿ ಇಬ್ಬರು ಮಕ್ಕಳು ಮಕ್ಕಳ ಹುಟ್ಟುಹಬ್ಬದ ಬಟ್ಟೆ ಕೊಳ್ಳಲು ಹೋಗುತ್ತಾರೆ. ಪಾಪ ಅವರ ಗ್ರಹಚಾರ ಕಾರ್ಡ್ ಮೂಲಕ ಪಾವತಿಸುವ ಯಂತ್ರ ಕೆಟ್ಟಿರುತ್ತದೆ. ಅಥವಾ ಕೆಟ್ಟಿದೆ ಎಂದು ಬಟ್ಟೆಯಂಗಡಿಯವ ಹೇಳುತ್ತಾನೆ. ಪಾಕೆಟ್ನಲ್ಲಿ ನಗದು ಇಲ್ಲದೆ ಬಡಪಾಯಿ ತನ್ನ ಕುಟುಂಬವನ್ನು ಅಲ್ಲೇ ಕುಳ್ಳಿರಿಸಿ ಹಣ ತರಲು ಎಟಿಎಂಗೆ ಹೋಗುತ್ತಾನೆ. ರಾತ್ರಿ ವೇಳೆ. ದೂರದಲ್ಲಿರುವ ಮನೆಗೆ ಹೋಗಬೇಕು. ಅವಸರದಿಂದ ಎಟಿಎಂ ಎದುರು ವಾಹನ ನಿಲ್ಲಿಸಿ ಹಣಪಡೆಯಲು ಒಳಗೆ ಹೋಗುತ್ತಾನೆ. ಮರಳಿ ಬರುವಷ್ಟರಲ್ಲಿ ವಾಹನ ಹುಲಿಯ ಪಾಲಾಗಿರುತ್ತದೆ. ಮತ್ತದೇ ಸಾಂತ್ವನದ ನುಡಿಗಳು.
ಇವು ನಿದರ್ಶನಗಳಷ್ಟೇ.. ಕಾರಣಗಳೇನೇ ಇರಲಿ. ಹೀಗೆ ಅನುಭವಿಸುವ ಬಡಪಾಯಿಗಳ ಕಥೆ ನೋಡಲು ಹುಲಿಯ ಬಾಯಿಗೆ ಬಿದ್ದ ವಾಹನಗಳನ್ನು ಶೇಖರಿಸಿಡುವ ಠಾಣೆಗೆ ಭೇಟಿ ನೀಡಬೇಕು. ಅಲ್ಲಿ ದಂಡ ಪಾವತಿಸಿಯೇ ವಾಹನ ಹಿಂಪಡೆಯಬೇಕು. ಹುಲಿಯ ಸವಾರರೂ ಬಡಪಾಯಿಗಳೇ. ಎಷ್ಟಾದರೂ ನೌಕರಿ ಮಾಡುವವರು. ಅಸಹಾಯಕತೆ ಇದ್ದೇ ಇರುತ್ತದೆ. ನಾವೇನ್ಮಾಡೋಣ ಸಾರ್ ನಮ್ಮ ಸಾಹೇಬರು ಹೇಳಿದಂತೆ ಮಾಡುತ್ತೇವೆ ಎಂದು ಸುಮ್ಮನಾಗುತ್ತಾರೆ. ಇನ್ನು ಈ ಹುಲಿಯನ್ನು ಮಾತನಾಡಿಸಲಾದೀತೇ, ನಿರ್ಜೀವ ಪ್ರಾಣಿ. ಅಂತೂ ಇಂತೂ ಕಿಲೋ ಮೀಟರ್ ನಡೆದೋ ಅಥವಾ ಆಟೋಗೆ ದಂಡ ತೆತ್ತೋ ವಾಹನ ಬಿಡಿಸಿಕೊಂಡು ಮನೆಗೆ ವಾಪಸ್ಸಾಗುವ ಹೊತ್ತಿಗೆ ಆಮ್ ಆದ್ಮಿ ಸುಸ್ತಾಗಿರುತ್ತಾನೆ. ಮನೆಗೆ ಬಂದು ಬೈಗಳನ್ನು ಕೇಳಿದರೂ ಹೆಚ್ಚೇನಿಲ್ಲ. ನಿಮಗೇನು ಅಷ್ಟೂ ಗೊತ್ತಾಗಲ್ವೇ ನೋ ಪಾರ್ಕಿಂಗ್ ಬೋರ್ಡ್ ನೋಡಿ ನಿಲ್ಲಿಸಬಾರದೇ ಎಂಬ ಹೀಗಳಿಕೆ ಸಾಮಾನ್ಯ. ಪಾಪ ಬಡಪಾಯಿಯ ಆತುರ, ಅಸಹಾಯಕತೆ, ಅನಿವಾರ್ಯತೆಗೆ ಬೆಲೆಯೆ ಇಲ್ಲ. ಇರಲಿ, ಕಾನೂನು ಪಾಲನೆ ಎಲ್ಲ ಪ್ರಜೆಗಳ ಕರ್ತವ್ಯ. ಕಾನೂನು ಉಲ್ಲಂಘನೆ ಶಿಕ್ಷಾರ್ಹ. ದಂಡನಾರ್ಹ. ಸ್ವಾಗತಾರ್ಹ ಎಂದರೂ ತಪ್ಪೇನಿಲ್ಲ.
ಆದರೆ ಟಿವಿಯ ಮುಂದೆ ಕುಳಿತು ರಾಜಕೀಯ ಭ್ರಷ್ಟಾಚಾರ, ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ, ಸಂಪನ್ಮೂಲಗಳ ಲೂಟಿ, ಸಂವಿಧಾನದ ಉಲ್ಲಂಘನೆ, ಸಂಸತ್ತಿನ ಅವಹೇಳನ, ಚುನಾಯಿತ ಪ್ರತಿನಿಧಿಗಳ ಮಾರಾಟ, ಮಾಫಿಯಾಗಳ ಸುದ್ದಿ ಮುಂತಾದುವನ್ನು ವೀಕ್ಷಿಸುತ್ತಾ ಕುಳಿತುಕೊಳ್ಳುವ ಬಡಪಾಯಿ ಪ್ರಜೆಗೆ ಥಟ್ಟನೆ ನೆನಪಾಗುತ್ತದೆ :
ತಾನು ಕುಟುಂಬದೊಡನೆ ಮಾರುಕಟ್ಟೆಗೆಂದು ಹೊರಟಾಗ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಅಪಘಾತದಿಂದಲ್ಲ. ಸಿಗ್ನಲ್ನಲ್ಲಿ ಪೊಲೀಸ್ ಪೇದೆಗಳು ಯಾರನ್ನೂ ರಸ್ತೆಗೆ ಬಿಡದೆ ನಿಲ್ಲಿಸುತ್ತಿದ್ದರು. ರಸ್ತೆಯಲ್ಲಿ ನಡೆದು ಹೋಗುತ್ತಿರುವವರನ್ನೂ ರೀ ಹೋಗ್ರಿ ಅತ್ತಕಡೆ, ಯೋ ಹೋಗಯ್ಯಾ ಆಚೆಗೆ ಎನ್ನುತ್ತಾ ಬದುಕಿನ ಶ್ರೇಣಿಗನುಸಾರವಾಗಿ ಅರಚಾಡುತ್ತಿದ್ದರು. ಅರ್ಧಗಂಟೆಯಲ್ಲಿ ಹತ್ತಾರು ವಾಹನಗಳು ನಾಲ್ಕೂ ಕೂಡು ರಸ್ತೆಗಳಲ್ಲಿ ಜಮಾಯಿಸಿದ್ದವು. ಹಠಾತ್ತನೆ ಜನಸಂಚಾರದ ನಿರ್ಬಂಧಕ್ಕೆ ಕಾರಣವೇನು ಎಂದು ತಿಳಿಯಿತು. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಪಟಾಲಂನೊಂದಿಗೆ ಆಗಮಿಸಿದ್ದರು. ಮೂವತ್ತಕ್ಕೂ ಹೆಚ್ಚು ವಾಹನಗಳು ಒಂದರ ಹಿಂದೊಂದು ಚಲಿಸಿದವು. ನಿರ್ಜನ ರಸ್ತೆಯ ಸುಗಮ ಸಂಚಾರದಿಂದ ಪ್ರಜಾಪ್ರತಿನಿಧಿಗಳು ಸಂತುಷ್ಟರಾಗಿ ತಮ್ಮ ಪಯಣ ಬೆಳೆಸಿದ್ದರು. ನಂತರ ಪೊಲೀಸರ ಪೀಪಿ ಶಬ್ದವಾಯಿತು. ಅವಸರದಲ್ಲಿದ್ದ ಪ್ರಜೆಗಳು ಇರುವೆಗಳಂತೆ ಕಂಡಲ್ಲಿ ನುಗ್ಗಿ ಜನನಿಬಿಡ ರಸ್ತೆಯಲ್ಲಿ ತಮ್ಮ ಉದ್ದೇಶಿತ ಕೆಲಸಕ್ಕೆ ನಿರ್ಗಮಿಸಿದರು.
ಬಡಪಾಯಿ ಪ್ರಜೆ ಯೋಚಿಸಿದ – ತಾನು ದಂಡ ತೆತ್ತಿದ್ದೇಕೆ ? ವಾಹನವನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಜನಸಂಚಾರಕ್ಕೆ ತೊಂದರೆ ಮಾಡಿದ್ದಕ್ಕಾಗಿಯೇ ಅಲ್ಲವೇ ? ಹೌದು ಎನಿಸಿತು. ಪರವಾಗಿಲ್ಲ ಸರ್ಕಾರಕ್ಕೆ ತಾನೇ ದಂಡ ತೆತ್ತಿರುವುದು ಎಂದು ಸಮಾಧಾನ ಪಟ್ಟುಕೊಂಡ. ಆದರೆ ಮರುಕ್ಷಣವೇ ಹೊಳೆಯಿತು. ರಸ್ತೆಯಲ್ಲಿ ಉಂಟಾದ ಕೃತಕ ಟ್ರಾಫಿಕ್ ಜಾಮ್ ಸಹ ಜನಸಂಚಾರಕ್ಕೆ ಅಡ್ಡಿ ಮಾಡಿತ್ತಲ್ಲವೇ ? ಹುಲಿ ಆಗ ಎಲ್ಲಿಹೋಗಿತ್ತು ? ಹುಲಿಯ ಕಣ್ಣಿಗೆ ಇವು ಗೋಚರಿಸುದಿಲ್ಲವೇನೋ ಎಂದು ಯೋಚಿಸಿ ಟಿವಿ ಆಫ್ ಮಾಡಿ ನಿದ್ರೆಗೆ ಜಾರಿದ. ಕನಸಿನಲ್ಲಿ ಭವ್ಯ ಭಾರತದ ಸುಂದರ ಚಿತ್ರಗಳು ಝಗಮಗಿಸುತ್ತಿದ್ದವು.






🙂
ಅಂದಹಾಗೆ…… ಹುಲಿಗೇ ದಂಡ ಕಟ್ಟಬೇಕಿಲ್ಲ. ಹುಲಿಗೆ ದಂಡ ಕಟ್ಟಲು 300 ರೂಪಾಯಿ ಬೇಕು. ಅದೇ ಹುಲಿಯ ಮೇಲೆ ಸವಾರಿ ಮಾಡುವ ಬೇಟೆಗಾರರಿಗೆ ನೂರು ರೂಪಾಯಿ ಕೊಟ್ಟರೂ ಸಾಕು. ದ್ವಿಚಕ್ರ ವಾಹನ ಸಿಗುತ್ತದೆ. ಈ ಹುಲಿಗೆ ಕೆಂಪು ದೀಪದ ಕಾರುಗಳು ನೋಪಾರ್ಕಿಂಗ್ ನಲ್ಲಿ ನಿಂತಿರುವುದು ಕಾಣಿಸುವುದಿಲ್ಲ. ವಾಹನಗಳನ್ನು ಹುಲಿ ಎತ್ತಿಕೊಂಡು ಹೋಗುವಾಗ ಹೆಲ್ಮೆಟ್ ಮುರಿದು, ಹ್ಯಾಂಡಲ್ ಲಾಕ್ ಜ್ಯಾಮ್ ಆಗಿ, ಪೆಟ್ರೋಲ್ ಟ್ಯಾಂಕ್ ಗೆ ಸ್ಕ್ರಾಚ್ ಆದರೆ ಅದಕ್ಕೆ ಹುಲಿ ಸರ್ವಥಾ ಜವಾಬ್ದಾರಿಯಾಗಿರುವುದಿಲ್ಲ.
vastavada chitrana
ನಮ್ಮದೊಂದು ತರಹಾ ಎಡಬಿಡಂಗಿ ದೇಶ ಸಾರ್!
No Parking ಬೋರ್ಡ್ ಗಳು ಮಾತ್ರ ಇರುತ್ತವೆ. ಆದರೆ ಎಲ್ಲಿಯವರೆಗೆ parking ಮಾಡಬಹುದೆಂಬ ಗುರುತುಗಳು ಅಲ್ಲ!
ನಿಮ್ಮ ವಾಹನವನ್ನು ಹೊತ್ತು ಒಯ್ಯುವ “ಹುಲಿ”ಯಾ ಒಳಗೆ ಒಬ್ಬ Traffic ಸಂಚಾಲಕ ಇರುತ್ತಾನೆ! ಬಾರೆ ಅಸಹಾಯಕ ನೌಕರರಷ್ಟೇ ಅಲ್ಲ!
ಎಷ್ಟೋ ಬಾರಿ “ಕೇಸು” ಸಿಗದಿದ್ದರೆ, ಸರಿಯಾಗಿ parking ಮಾಡಿರುವ ವಾಹನವನ್ನೇ ಹೊತ್ತು ಒಯ್ಯಬಹುದು! ಒಂದು ಬಾರಿ ಒಯ್ದ ಮೇಲೆ ಸರಿ ಯಾವುದು ತಪ್ಪು ಯಾವುದು? ನೀವು ಸರಿಯಾಗಿ ನಿಲ್ಲಿಸಿದ್ದಿರಿ ಅನ್ನುವುದಕ್ಕೆ ಸಾಕ್ಷಿ ಏನು?!
ಕೋರ್ಟ್ ಗೆ ಹೋಗಲಾದೀತೇ? ತಲೆ ಕೆಟ್ಟ ಜನ ಮಾತ್ರ ಹಾಗೆ ಮಾಡುತ್ತಾರೆ!
ಈ electronic ಯುಗದಲ್ಲಿ ನಿಮ್ಮ “ನೊ ಪಾರ್ಕಿಂಗ್”ಗೆ ಒಂದು photographic evidence ಮಾಡಿ, ಅದನ್ನು ನಿಮಗೆ ಕಳಿಸಿ, ನಿಮ್ಮಿಂದ ದಂಡ ಪೀಕಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಆದರೆ “ಹುಲಿ” ಕೊಳ್ಳಲು ಖರ್ಚು ಮಾಡಿರುವ ಮೊತ್ತ? ಅದೇನು ಸುಮ್ಮನೆ ಬರುತ್ತಾ?!
ಕೆಲವೊಮ್ಮೆ ನಿಮಗೆ ಯಾವ ಪೋಲಿಸ್ ಸ್ಟೇಷನ್ ಗೆ ಹೋಗಬೇಕು ಅಂತಲೇ ತಿಳಿಯಲ್ಲ! ಹತ್ತಿರದ ಸ್ಟೇಷನ್ ನಲ್ಲಿ ವಾಹನ ಇರಲ್ಲ. ಕೆಲವೊಮ್ಮೆ ಹತ್ತಾರು ಕಿ.ಮೀ. ಸುತ್ತಿದ ಮೇಲೆ ಕಡೆಗೆ ವಾಹನದ ಇರುವಿಕೆ ತಿಳಿಯುತ್ತದೆ.
ಅಲ್ಲಿ “ಸಾಹೇಬರು” ಆಚೆ ಹೋಗಿರುತ್ತಾರೆ. ಅವರು ಬರುವವರೆಗೆ ಕಾಯಬೇಕು.
ಮತ್ತು ಕೆಲವೊಮ್ಮೆ, ನಿಮ್ಮ ಹತ್ತಿರ ದಂಡ ಪೀಕಿ ವಾಹನ ಕೊಟ್ಟಾರು; ಆದರೆ ರಸೀದಿ ಕೊಡಲ್ಲ. ಯಾಕೆಂದರೆ “ಸಾಹೇಬರು” ಇಲ್ಲ! “ನಾಳೆ ಬಂದು ರಸೀದಿ ತಗೊಂಡು ಹೋಗಿ; ಇಲ್ಲಾ ಸಾಹೇಬರು ಬರುವವರೆಗೆ ಕಾಯಿರಿ” ಅನ್ನೋ ಮಾತು. ರಸೀದಿ ಹಾಕಿದರೆ ಅಲ್ಲವೇ ತಗೊಂಡು ಹೋಗೋದು?! ನರರಾಕ್ಷಸರಿಂದ ತಪ್ಪಿಸಿಕೊಂಡ ಬಡ ಪ್ರಜೆ ಮತ್ತೆ ಅಲ್ಲಿಗೆ ಹೇಗೆ ಹೋದಾನು?! ಪೂರ್ತಿ ಕಾಸು ಬೊಕ್ಕೆ!
ಒಟ್ಟಿನಲ್ಲಿ, ಪಾರ್ಕಿಂಗ್ ಮಾಡಲು ಜಾಗ ಇಲ್ಲ; ಎಲ್ಲಿ ಮಾಡಬೇಕು ಅನ್ನುವುದು ಖಚಿತ ಇಲ್ಲ; ಸರಿಯಾಗಿ ಮಾಡಿದ್ದರೂ ಅದನ್ನು “ಹುಲಿ” ಬಿಟ್ಟೀತು ಅನ್ನುವ ಖಾತರಿ ಇಲ್ಲ. ಕಾಸಂತೂ ಗೋತಾ!
ನಮ್ಮ ಕರ್ಮ!!