ಈ ಸಾವಿಗೆ ಕಾರಣರ್ಯಾರು
ಮಂಜುನಾಥ ದಾಸನಪುರ
ಪ್ರತಿದಿನ ಒಂದಲ್ಲಾ ಒಂದು ಕೊಲೆಯನ್ನೋ, ಆತ್ಮಹತ್ಯೆಯನ್ನು ನೋಡಿ, ಕೇಳಿ ಮನಸ್ಸು ಮುದುಡುತ್ತದೆ. ಅಲ್ಲಿಂದ ಮತ್ತೆ ಚೇತರಿಸಿಕೊಳ್ಳಬೇಕಾದರೆ ಸಾಕಷ್ಟು ಸಮಯಬೇಕಾಗುತ್ತದೆ. ಒಮ್ಮೊಮ್ಮೆ ಆ ಅವಘಡದಲ್ಲಿ ತೀರ ನನ್ನ ಹತ್ತಿರದವರೇ ಯಾರಾದರೂ ಸಿಕ್ಕಿ ಕೊಂಡಿದ್ದರೆ ನನ್ನ ಮನಸ್ಥಿತಿ ಏನಿರುತ್ತಿತ್ತು ಎಂದು ಎಷ್ಟೊ ಸಲ ನನ್ನೊಳಗಿನ ಆತ್ಮಕ್ಕೆ ಕೇಳಿಕೊಂಡಿದ್ದೇನೆ. ಅವಗೆಲ್ಲಾ ಮನಸ್ಸು ಮುದುಡುತ್ತದೆ. ಹೀಂಗೆಲ್ಲಾ ಯಾಕ್ಕಪ್ಪಾ ಇದೆ ಜೀವನ ಅನಿಸುತ್ತದೆ. ಈ ಕ್ಷಣ ಇರುವವರು, ಮರುಕ್ಷಣದಲ್ಲಿ ಇರುವುದಿಲ್ವಲ್ಲಾ ಎಂದು…ನೆನೆದು ಬೆಚ್ಚು ಬೀಳುತ್ತೇನೆ.
ಇತ್ತೀಚಿಗಷ್ಟೇ ಬೆಂಗಳೂರಿನ ನಗರದಲ್ಲಿ ಕಟ್ಟದ ಕುಸಿದು, ಅದರಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿ, ಅಂದು ಬೆಳಗ್ಗೆ ಊಟ ಮಾಡುವಾಗ ಪಕ್ಕದಲ್ಲಿ ಹೆಂಡಿತಿಯನ್ನೋ, ಮಗಳನ್ನು ಕೂರಿಸಿಕೊಂಡು, ಬರುವ ಯುಗಾದಿ ಹಬ್ಬಕ್ಕೆ ನಿನಗೊಂದು ಸೀರೆಯನ್ನೋ, ಒಡವೆಯನ್ನೋ ಕೊಡಿಸುತ್ತೇನೆಂದು ಹೇಳುತ್ತಾ, ಒಂದಷ್ಟು ತಮಾಷೆಯ ಮಾತುಗಳನ್ನಾಡಿ ಕೆಲಸಕ್ಕೆ ಬಂದು ಕೆಲ ವೊತ್ತಿಗೆ ಸಾವನ್ನಪ್ಪಿರಬಹುದಲ್ವಾ ಎಂದು ನೆನೆದು ಮತ್ತಷ್ಟು ವೇದನೆಗೆ ಒಳಗಾಗುತ್ತೇನೆ.
ದೂರದ ಪ್ರದೇಶಗಳಿಂದ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬರುವ ಎಷ್ಟೋ ಮಂದಿ, ಮತ್ತೆ ತಮ್ಮ ತವರಿಗೆ ಹಿಂದುರುಗುತ್ತಾರೆಂಬ ಯಾವ ದೃಢವಾದ ನಂಬಿಕೆಯೂ ಇಲ್ಲವಾಗಿದೆ. ಕಟ್ಟಡ ಕಾರ್ಮಿಕರು ಪ್ರತಿಕ್ಷಣವು ಜೀವದ ಅಪಾಯದಲ್ಲಿ ಬದುಕುವಂತವರು. ಕ್ಷಣ ಎಚ್ಚರ ತಪ್ಪಿದರೆ, ನೂರಾರು ಅಡಿಗಳಿಂದ ದುಪ್ ಎಂದು ಬಿದ್ದು ಕ್ಷಣ ಮಾತ್ರದಲ್ಲಿ ಜೀವವನ್ನು ಕಳೆದುಕೊಳ್ಳವರು. ಇವರ ಜೀವಕ್ಕೆ ತೊಂದರೆಯಾಗದಂತೆ ಮಾಡುವ ಯಾವುದೇ ಜೀವ ರಕ್ಷಕ ಉಪಕರಣಗಳನ್ನು ಯಾವ ಕಟ್ಟಡ ಸಂಸ್ಥೆಯು ಅಳವಡಿಸಿಕೊಳ್ಳದಿರುವುದು ವಿಪರ್ಯಾಸವೇ ಸರಿ.

ಕಟ್ಟಡ ಕಾರ್ಮಿಕರ ಸರಾಸರಿ ವಯಸ್ಸು ಸುಮಾರು 20 ರಿಂದ 40 ಆಗಿರುತ್ತದೆ. ಅಂದರೆ, ಆಗತಾನೆ ಯೌವನ್ನಕ್ಕೆ ಬಂದವರು, ಮದುವೆ ಆಗಿರುವವರು, ಮದುವೆ ಆಗಿ ಒಂದೆರಡು ಮುಂದಾದ ಮಕ್ಕಳಿರುವರು ಆಗಿರುತ್ತಾರೆ. ಇವರ ಸಾವು ಮನುಷ್ಯತ್ವ ಇರುವ ಯಾರಿಗೇ ಆಗಲಿ ನೋವನ್ನು ತರಿಸದೆ ಇರದು.
ಹೆಂಡತಿ ಗಂಡನನ್ನು, ಮಕ್ಕಳು ಅಪ್ಪನನ್ನು ಕಳೆದುಕೊಂಡು ಅನಾಥರಾಗುತ್ತಾರೆ. ಮುಂದಿನ ಅವರ ಬದುಕು ಪ್ರಸ್ತುತ ಸಮಾಜದಲ್ಲಿ ಹೂಯಿಸುವದಕ್ಕೂ ಸಾಧ್ಯವಾಗುವುದಿಲ್ಲ. ಸಂಪೂರ್ಣವಾಗಿ ವಿರುದ್ಧ ದಿಕ್ಕಿಗೆ ತಿರಗಬಹುದು. ಹೆಂಡತಿಗೆ ದಿಕ್ಕು ತೋಚದೆ ಕಗ್ಗತ್ತಲು ಆವರಿಸಬಹುದು, ಆನೇಕಬಾರಿ ಸಾವಿನ ಚಿಂತ ನಡೆಸಬಹುದು, ಮಕ್ಕಳನ್ನು ನೋಡಿ ಸುಮ್ಮನಾಗಬಹುದು, ಒಂಟಿಯಾಗಿ ಮಕ್ಕಳನ್ನು ಕಟ್ಟಿಕೊಂಡು ಬದುಕುವ ಸಾಧ್ಯತೆಗಳನ್ನು ಹುಡುಕುವ ಪ್ರಯತ್ನದಲ್ಲಿ ಆಕೆಯ ಪರಿಸ್ಥಿತಿ ಏನಾಗಿರಬೇಡ. ಇನ್ನು ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುರಿದು, ಪೆನ್ನಿಗೆ ಬದಲಾಗಿ ಅಪ್ಪನ ಕೆಲಸ ಮುಂದುವರೆಸಿ, ಅವನು ಅಪ್ಪನ ದಾರಿ ಹಿಡಿಯಬಹುದು. ಇಲ್ಲವೇ ಬೀದಿ ಬದಿಯಲ್ಲಿ ಅಲೆಯುತ್ತಾ, ಕಾಲ ಹರಣ ಮಾಡುತ್ತಾ, ಪುಡಾರಿ ರಾಜಕಾರಣಿಗ ಆಶ್ರಯ ಪಡೆದು, ಸಣ್ಣ ಪುಟ್ಟ ಗಲ್ಲಿಗಳಲ್ಲಿ ಒಂದಷ್ಟು ದಿನ ಮೆರೆದು, ಮಣ್ಣಾಗಬಹುದು…
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಒಂದು ಸಾವಿಗೆ ಹೋಗಿದ್ದೆ. ಸತ್ತಿರುವಾತನ ವಯಸ್ಸು ಸುಮಾರು 70ಕ್ಕೂ ಹೆಚ್ಚು. ಆ ವ್ಯಕ್ತಿಯ ಸಾವಿಗೆ ಬಂದಿದ್ದ ಆತನ ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಯಾರೂ ಆತಂಕಕ್ಕೆ ಒಳಗಾದಂತೆ ಕಾಣುತ್ತಿರಲಿಲ್ಲ. ಸ್ವಲ್ಪ ಬೇಸರದಲ್ಲಿರುವಂತೆ ಕಂಡಿದ್ದರು ಅಷ್ಟೆ, ಆತನ ಸ್ನೇಹಿತರು ಒಂದು ಕಡೆ ಕೂತು ಮಾತನಾಡಿಕೊಳ್ಳುತ್ತಿದ್ದರು. ‘ಪುಣ್ಯಾತ್ಮ ಕಣೋ, ಯಾವುದೇ ನೋವನ್ನು ಅನುಭವಿಸದೆ ಸುಖವಾಗಿ ಹೋಗಿದ್ದಾನೆ. ನಮ್ಮನ್ನು ಇವನ ರೀತಿಯಲ್ಲಿಯೇ ಆ ದೇವರು ಕರೆದುಕೊಂಡರೆ ಸಾಕಪ್ಪ ಎಂದು.
ಈತನ ಸಾವು ಯಾರಿಗೂ ದೊಡ್ಡ ಆಘಾತವನ್ನು ಉಂಟು ಮಾಡಲಿಲ್ಲ. ಬದುಕಿದ್ದಗಲೂ ಯಾರಿಗೂ ತೊಂದರೆಯಾಗಿಲ್ಲ. ಸತ್ತಗೂ ಯಾರಿಗೂ ತೊಂದರೆಯಾಗದೆ ಸಾಯುವುದೇ ಬದುಕಿನ ನಿಜವಾದ ಸಾರ್ಥಕತೆ ಎನ್ನಬಹುದುದೆ.
ಒಂದು ಕಾಲದಲ್ಲಿ ಸಾವಿಗೆ ನಿರ್ಧಿಷ್ಟವಾದ ವಯಸ್ಸಿತ್ತು. ಅಲ್ಲಿಯವರೆಗೂ ಅದನ್ನು ಯಾರೂ ಸಹ ಕಲ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ಪ್ರಸ್ತುತ ಸಮಾಜದ ಬದುಕು ಸಂಪೂರ್ಣ ಬದಲಾಗಿದೆ. ಪ್ರತಿದಿನ ನಮ್ಮ ಸುತ್ತಮುತ್ತ, ಅಪ್ಪನನ್ನು, ಸ್ನೇಹಿತರನ್ನು, ಅಣ್ಣನನ್ನು, ತಮ್ಮನನ್ನು ಕಳೆದುಕೊಂಡು ನೋವನ್ನು ಉಣ್ಣುತ್ತಿರುವವರ ಸಂಖ್ಯೆ ಹೆಚ್ಚುತ್ತಲೆ ಇದೆ.






sensible write-up.
ಮಂಜೂ…
ಮನಸಿಗೆ ನಾಟುವ ಬರಹ.
ಬರೆಯುತ್ತಿರು ಇನ್ನೂ…
ಸಾವು ಸತ್ಯವಾದರೂ, ಆಗ ಆ ನಿರ್ಧಿಷ್ಟ ಸಮಯದವರೆಗೆ ಯಾರೂ ಅದನ್ನು ಕಲ್ಪಿಸಿಕೊಳ್ಳುತ್ತಿರಲಿಲ್ಲ,ಈಗ ಜತೆ ಜತೆಗೇ ಹೆಜ್ಜೆ ಎತ್ತಿಡುವ ಸಾವು ಯಾವ ಕ್ಷಣದಲ್ಲಿ ಬೇಕಾದರೂ ಹೆಗಲ ಮೇಲೆ ಕೈ ಹಾಕಬಹುದು…
ಹೌದು ಕಣೋ…
ಮನಸು ಮುದುರುವುದಷ್ಟೇ ಅಲ್ಲ. ನೋವಿನಲ್ಲಿ ತೋಯ್ದುಹೋಗುತ್ತದೆ.