ನಾ ದಿವಾಕರ
ಮಾನವ ಸಮಾಜದ ಅಭ್ಯುದಯ ಮತ್ತು ಚಲನೆಯ ಇತಿಹಾಸವನ್ನು ಅವಲೋಕಿಸಿದಾಗ ಮನುಕುಲ ಹಲವು ಹಂತಗಳನ್ನು ದಾಟಿ, ಹಲವು ಮುಗ್ಗಟ್ಟು, ಬಿಕ್ಕಟ್ಟುಗಳನ್ನು ನಿವಾರಿಸಿ, ಹಲವಾರು ತೊಡಕುಗಳನ್ನು ಪರಿಹರಿಸಿ ಮುನ್ನಡೆದಿರುವುದು ಕಂಡುಬರುತ್ತದೆ. ಮನುಜ ಸಹಜ ಎನಿಸುವ ಕೆಲವು ಪ್ರವೃತ್ತಿಗಳು ಸಾಮುದಾಯಿಕ ನೆಲೆಯಲ್ಲಿ ಸಂಸ್ಕೃತಿಯ ರೂಪ ಪಡೆಯುತ್ತವೆ. ಸಾಂಸ್ಕೃತಿಕ ತಳಹದಿಯ ನಿರ್ಮಾಣ ಮತ್ತು ಅಭ್ಯುದಯದ ನೆಲೆ ತನ್ನದೇ ಆದ ಸಾಮುದಾಯಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಸಿಲುಕಿದಾಗ ಅಲ್ಲಿ ಒಂದು ನಾಗರೀಕತೆ ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ಪ್ರದೇಶದ ಜನಸಮುದಾಯಗಳ ಜೀವನಶೈಲಿ, ಸಾಂಸ್ಕೃತಿಕ ನೆಲೆಗಳು ಸಾಮಾಜಿಕ ಮೌಲ್ಯಗಳಾಗಿ ಪರಿವರ್ತಿತವಾದ ಸಂದರ್ಭದಲ್ಲಿ ನಾಗರೀಕತೆ ತನ್ನದೇ ಆದ ಆಂತರಿಕ ಮತ್ತು ಬಾಹ್ಯ ಸ್ವರೂಪ ಪಡೆಯುತ್ತದೆ. ಹೀಗೆ ರೂಪುಗೊಂಡ ನಾಗರೀಕತೆಯ ಒಡಲಲ್ಲಿ ಅಂತರ್ಗತವಾಗಿರುವ, ಆಳವಾಗಿ ಬೇರೂರಿರುವ ಜನಸಮುದಾಯಗಳ ಮೂಲ ಪ್ರವೃತ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳು ತಮ್ಮ ಬಾಹ್ಯ ಸ್ವರೂಪವನ್ನು ಕಳೆದುಕೊಂಡರೂ ಆಂತರಿಕ ಸ್ವರೂಪವನ್ನು ಉಳಿಸಿಕೊಂಡಿರುತ್ತದೆ. ಬೆಳೆಸಿಕೊಳ್ಳುತ್ತಲೂ ಇರುತ್ತದೆ.

ಸಮಕಾಲೀನ ಭಾರತೀಯ ಸಮಾಜದಲ್ಲಿ ಈ ದೇಶದ ಮಹಿಳೆಯರು, ದಲಿತರು, ಶೋಷಿತ ವರ್ಗಗಳು ಎದುರಿಸುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಚಿತ್ರಹಿಂಸೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾರತೀಯ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಒಳಸುಳಿವು ನಮ್ಮನ್ನು ನಾಗರೀಕತೆಯತ್ತ ಕೊಂಡೊಯ್ಯುತ್ತದೆ.
ಹಾಗಾಗಿಯೇ ನಮ್ಮ ಸಮಾಜದಲ್ಲಿ ದಲಿತರು ಎದುರಿಸುವಷ್ಟೇ ದೌರ್ಜನ್ಯ, ಆಕ್ರಮಣಗಳನ್ನು ಮಹಿಳೆಯರೂ ವಿಭಿನ್ನ ರೀತಿಯಲ್ಲಿ, ವಿಭಿನ್ನ ಆಯಾಮಗಳಲ್ಲಿ ಎದುರಿಸುತ್ತಾರೆ. ಮೇಲ್ಜಾತಿಯ ಮಹಿಳೆಯರಿಗಿಂತಲೂ ದಲಿತ ಮಹಿಳೆಯರು ಹೆಚ್ಚಿನ ದೌರ್ಜನ್ಯ ಎದುರಿಸುತ್ತಾರೆ. ಶರತ್ಚಂದ್ರ ಚಟಜರ್ಿ ತಮ್ಮ ನಾರಿಯ ಸ್ಥಾನ (1924) ಎಂಬ ಲೇಖನದಲ್ಲಿ ( ಕೃ. ಪ್ರತಿರೋಧ ಅನು. ಕುಮಾರಪ್ಪ) ಹೀಗೆ ಹೇಳುತ್ತಾರೆ. ಇಂಗ್ಲಿಷಿನಲ್ಲಿ ಎಂಬ ಪದ ನರ-ನಾರಿ ಇಬ್ಬರನ್ನೂ ಉದ್ದೇಶಿಸಿರುತ್ತದೆ. ಆದರೆ ಈ ದೇಶದಲ್ಲಿ ಇದನ್ನು ಸತಿತ್ವ ಎಂದು ಕರೆಯಲಾಗಿದೆ. ಇದೇ ಕೃತಿಯಲ್ಲಿ ಲೇಖಕರು ಪುರುಷರನ್ನು ಕುರಿತು ಹೆಂಡತಿ ನಿನ್ನ ಸಂಪತ್ತು, ಗಂಡ ಎನಿಸಿಕೊಂಡ ಒಂದೇ ಕಾರಣಕ್ಕೆ ಸಮಯ ಬಿದ್ದಾಗ ಅವಳ ನಾರಿ ಧರ್ಮದ ಮೇಲೆ ಅತ್ಯಾಚಾರ ಎಸಗುವ, ಆಕೆಯನ್ನು ಮಾರಾಟ ಮಾಡುವ ನಿನ್ನ ಈ ಸ್ವೇಚ್ಛಾಚಾರ ಪುರುಷ ಜನಾಂಗವನ್ನು ಹೀನಾಯಗೊಳಿಸಿದೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಶರತ್ಚಂದ್ರರು ಭಾರತೀಯ ಸಮಾಜದಲ್ಲಿ ನಾರಿಯ ಗೌರವ ನಿಲ್ಲುವುದು ಆಕೆಯ ವ್ಯಕ್ತಿತ್ವದ ಮೇಲಲ್ಲ, ಬದಲಾಗಿ ಪುತ್ರ ಸಂತಾನ ಮೇಲೆ. ಪುರುಷರ ದೃಷ್ಟಿಯಲ್ಲಿ ನಾರಿಯ ಬದುಕಿನ ಉದ್ದೇಶ ಇದೊಂದೇ ಆಗಿದೆ ಎಂದೂ ಹೇಳುತ್ತಾರೆ.
ಸಮಕಾಲೀನ ಸಂದರ್ಭದಲ್ಲಿ ದೆಹಲಿಯ ನಿರ್ಭಯ, ಧರ್ಮಸ್ಥಳದ ಸೌಜನ್ಯ, ಮುಂಬೈನ ಪತ್ರಿಕಾ ಛಾಯಾಗ್ರಾಹಕಿ, ಅಸ್ಸಾಂನ ಮಹಿಳೆ, ಸೇನೆಯ ದೌರ್ಜನ್ಯಕ್ಕೆ ತುತ್ತಾದ ಮನೋರಮಾ, ಅತ್ಯಾಚಾರಕ್ಕೊಳಗಾದ ಐದು ವರ್ಷದ ಹಸುಳೆ ಹೀಗೆ ದೌರ್ಜನ್ಯಕ್ಕೊಳಗಾದ ನಾರಿಯರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ನಾರಿ ಸಂತತಿಯ ಪ್ರತಿನಿಧಿಗಳು, ಕಠಿಣ ಕಾನೂನು, ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಹಿರಿಮೆ, ಧಾಮರ್ಿಕ ಗರಿಮೆ ಇದ್ದಾಗ್ಯೂ ಸತತವಾಗಿ ಅತ್ಯಾಚಾರಕ್ಕೊಳಗಾಗುತ್ತಿರುವ ಕಾರಣಗಳನ್ನು ಶೋಧಿಸಿದಾಗ ಶರಶ್ಚಂದ್ರರ ಈ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ.
ಪುರುಷ ಸಮಾಜ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುತ್ತದೆ ಎಂಬ ಸಾಮಾನ್ಯವಾದ ವ್ಯಾಖ್ಯಾನವನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಏಕೆಂದರೆ ಭಾರತದ ಪಿತೃಪ್ರಧಾನ ವ್ಯವಸ್ಥೆ ತನ್ನ ಶ್ರೇಷ್ಠತೆಯ ಅಹಮಿಕೆಯಿಂದ ಮಹಿಳೆಯನ್ನು ಮತ್ತಷ್ಟು ನಿಕೃಷ್ಟವಾಗಿ ನೋಡಲಾರಂಭಿಸಿದೆ. ಕಳೆದ ಒಂದು ದಶಕಗಳಲ್ಲಿ ಹೆಚ್ಚುತ್ತಿರುವ ಅಗೌರವಯುತವಾದ ಗೌರವಹತ್ಯೆಗಳು ಇದರ ಸಂಕೇತವಾಗಿ ಕಾಣುತ್ತದೆ. ಒಂದು ಕೌಟುಂಬಿಕ ಚೌಕಟ್ಟಿನಲ್ಲಿ, ಸಂಬಂಧಗಳ ಸರಳುಗಳಲ್ಲಿ ಮಹಿಳೆಯನ್ನು ಬಂಧಿಸುತ್ತಿದ್ದ ಭಾರತೀಯ ಸಮಾಜ ಈಗ ಆಕೆಯನ್ನು ಸಾಮುದಾಯಿಕ ಹಾಗೂ ತತ್ಸಂಬಂಧಿ ಸಾಂಸ್ಕೃತಿಕ ಚೌಕಟ್ಟಿನೊಳಗೆ ಬಂಧಿಸಲು ಯತ್ನಿಸುತ್ತಿದೆ. ಸಾಮುದಾಯಿಕ ನೆಲೆಯಲ್ಲಿ ಜಾಗೃತಗೊಳ್ಳುವ ಪುರುಷ ಸಮಾಜ ಮಹಿಳೆಯನ್ನು ನೋಡುವ ವಿಧಾನವೇ ಭಿನ್ನವಾಗಿರುತ್ತದೆ. ಹಾಗಾಗಿಯೇ ಸಮಾಜದಲ್ಲಿ ಒಂಟಿ ಮಹಿಳೆಯರನ್ನು, ವಿಧವೆಯರನ್ನು ಅಬಲೆಯರಂತೆಯೇ ಕಾಣಲಾಗುತ್ತದೆ.

ಈ ಪ್ರವೃತ್ತಿಯ ವಿಸ್ತೃತ ರೂಪವನ್ನು ಇಂದು ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಕಾಣಬಹುದು. ಕೆಲವು ಸಾಂಸ್ಕೃತಿಕ ಹರಿಕಾರರು, ಧರ್ಮ ಮೀಮಾಂಸೆ ಮಾಡುವ ವಿದ್ವಾಂಸರು, ಹಿಂದೂ ಧರ್ಮ ರಕ್ಷಕರು ಮತ್ತು ದೇಶದ ಸುಶಿಕ್ಷಿತ ನಾಗರಿಕ ಸಮಾಜವೂ ಸಹ ಅತ್ಯಾಚಾರಕ್ಕೊಳಗಾದ ಮಹಿಳೆಯ ನಡತೆ, ವರ್ತನೆ, ಉಡುಪು, ಅಲಂಕಾರ ಮತ್ತು ಚಟುವಟಿಕೆಗಳನ್ನೇ ಕೇಂದ್ರೀಕರಿಸಿ ಆಕೆಯ ಮೇಲೆ ನಡೆಯುವ ಅತ್ಯಾಚಾರವನ್ನು ಸಹಜ ವಿದ್ಯಮಾನದಂತೆ ಪರಿಗಣಿಸುತ್ತಾರೆ. ಅವಳು ಸರಿಯಾಗಿದ್ದಿದ್ದರೆ ಹೀಗೇಕಾಗುತ್ತಿತ್ತು ಎಂಬ ಹೀಗಳಿಕೆ ಇಂದಿಗೂ ಕೇಳಿಬರುತ್ತಿದೆಯಲ್ಲವೇ ? ಪ್ರಗತಿಪರ ಎನಿಸಿಕೊಂಡ ತರುಣ್ ತೇಜಪಾಲ್ ತಮ್ಮ ದುಷ್ಕೃತ್ಯವನ್ನು ಸಮರ್ಥಿಸಿಕೊಳ್ಳಲು ನೀಡಿರುವ ಸಬೂಬುಗಳನ್ನು ನೋಡಿದರೆ ಈ ದೇಶದ ಪುರುಷ ಸಮಾಜ ಇನ್ನೂ ಸುಧಾರಿಸಿಲ್ಲ ಎಂದು ಅರಿವಾಗುತ್ತದೆ. ಒಬ್ಬ ವೇಶ್ಯೆಯ ಅನಿವಾರ್ಯತೆ, ಸಾಮಾಜಿಕ ಹಿನ್ನೆಲೆಗಳನ್ನು ಅರಿಯಲು ಇಂದಿಗೂ ಪ್ರಯತ್ನಿಸದ ಭಾರತದ ಪುರುಷ ಸಮಾಜ, ಯಾವುದೋ ಒಂದು ವರ್ಗ ಅಥವಾ ಜಾತಿಯ ವಿದ್ವಾಂಸರು ನಿರ್ಧರಿಸುವ ಕೆಲವು ಸಂಹಿತೆಗಳನ್ನು ಉಲ್ಲಂಘಿಸುವ ಮಹಿಳೆಯನ್ನು ಸಂಶಯಾಸ್ಪದವಾಗಿಯೇ ನೋಡುತ್ತದೆ. ಹಾಗಾಗಿಯೇ ಮಹಿಳೆಯರ ಉಡುಪುಗಳು ಮಾತ್ರ ಸಂಸ್ಕೃತಿ, ಧರ್ಮ,ಸಂಪ್ರದಾಯ ಮತ್ತು ಸಾಮಾಜಿಕ ಸ್ವಾಸ್ಥ್ಯದ ಪರಿಧಿಗೆ ಒಳಪಡುತ್ತವೆ. ಇದಕ್ಕೆ ಪೂರಕವಾಗಿ ಮಹಿಳೆಯ ಹಕ್ಕುಗಳೂ ಸಹ ನಿರ್ಬಂಧಿಸಲ್ಪಡುತ್ತವೆ .
ಈ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ನಿರಂತರ ಭೀತಿಯಲ್ಲೇ ದಿನ ಸವೆಸುವ ಅಸಂಖ್ಯಾತ ಅಸಹಾಯಕ ಮಹಿಳೆಯರ ಮನದಾಳದ ನೋವು, ಆತಂಕಗಳನ್ನು ವಿಶ್ಲೇಷಿಸುವುದಿರಲಿ, ಪರಾಮರ್ಶಿಸುವ ಪ್ರಯತ್ನಗಳೂ ನಡೆಯುತ್ತಿಲ್ಲ ಎಂಬುದನ್ನು ವಿಷಾದದಿಂದ ನೆನೆಯಬೇಕಿದೆ. ಮಹಿಳೆ ತಾನು ಹಾಕಿದ ನಿರ್ಬಂಧಗಳ ಪಥದಲ್ಲಿ ನಡೆದಾಗ ಮಾತ್ರ ಸುರಕ್ಷಿತವಾಗಿರಲು ಸಾಧ್ಯ ಎಂಬ ಪುರುಷ ಸಮಾಜದ ಅಘೋಷಿತ-ಅಲಿಖಿತ ಆಜ್ಞೆ ಈ ದೇಶದ ಮಹಿಳೆಯರಿಗೆ ನೇಣುಕುಣಿಕೆಯಾಗಿ ಬಿಗಿಯುತ್ತಿದೆ. ಸಮಾಜದ ಸ್ವಾಸ್ಥ್ಯ, ಸಾಮಾಜಿಕ ಸೌಹಾರ್ದತೆ , ಪುರುಷರ ನಿಗ್ರಹ ಮತ್ತು ಪುರುಷ ಸಂತಾನದ ವೃದ್ಧಿ ಇವೆಲ್ಲದರ ನಿಯಂತ್ರಣ ಮತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ಮಹಿಳೆಯ ಮೇಲೆ ಹೊರಿಸಲಾಗಿದೆ. ತನ್ನ ಜವಾಬ್ದಾರಿಯಲ್ಲಿ ವಿಫಲವಾಗುವ ಮಹಿಳೆ ಅಥವಾ ಈ ಸಂಹಿತೆಗಳನ್ನು ಉಲ್ಲಂಘಿಸುವ ಮಹಿಳೆ ಅತ್ಯಾಚಾರಕ್ಕೆ ಅರ್ಹ ವ್ಯಕ್ತಿಯಾಗಿಬಿಡುತ್ತಾಳೆ. ಇದನ್ನು ನಾಗರೀಕತೆಯ ಲಕ್ಷಣ ಎಂದಲ್ಲದೆ ಬೇರೇನನ್ನಲು ಸಾಧ್ಯ ?






0 Comments