
ರುಕ್ಮಿಣಿ ಎನ್
ಆ ದಿನ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದ. ಸಾಮಾಜಿಕ ಜಾಲತಾಣಗಳ ತುಂಬ ಅವನದೇ ಸುದ್ದಿ ಮತ್ತು ಆತ ಬರೆದಿಟ್ಟಿದ್ದ (ಕನ್ನಡದಲ್ಲಿ ಅನುವಾದಿತ) ಡೆತ್ ನೋಟ್ ಕೂಡ ಹರಿದಾಡುತ್ತಿತ್ತು.
ರೋಹಿತ್ ವೇಮುಲ? ಯಾರೀತ? ಯಾತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ? ಆ ಡೆತ್ ನೋಟ್’ನಲ್ಲಿ ಇರುವುದಾದರೂ ಏನು? ಎಂಬಿಷ್ಟೇ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು.
ಫೇಸ್ಬುಕ್ಕಿನಲ್ಲಿ ದೊರೆತ ಅಲ್ಪ ಸ್ವಲ್ಪ ಮಾಹಿತಿಯನ್ನು ಹೊರತುಪಡಿಸಿದರೆ ವೇಮುಲ ಕುರಿತು ತಿಳಿದುಕೊಂಡಿರುವುದು ಕಡಿಮೆಯೇ ಆಗಿತ್ತು. ಬಾಬಾಸಾಹೇಬ್ ಅಂಬೇಡ್ಕರರನ್ನು ಆಳವಾಗಿ ಅಧ್ಯಯನ ಮಾಡಿಕೊಂಡ ಈತ ಹೀಗೆ ತನ್ನ ಬದುಕನ್ನು ಮುಗಿಸಿಕೊಳ್ಳುವುದೆಂದರೆ? ಛೆ! ಅವನು ಹೀಗೆ ದುಡುಕಬಾರದಿತ್ತು ಎಂದೊಮ್ಮೆ ಅನಿಸಿತು. ಮತ್ತೊಂದೆಡೆ, ‘ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ’ಯನ್ನು ಕಟ್ಟಿಕೊಂಡು ತನ್ನ ಹಾಗು ತನ್ನ ಸಂಗಾತಿಗಳ ಕನಸುಗಳನ್ನು ಬೆನ್ನಟ್ಟಿದ್ದ ಹುಡುಗ ಧಿಡಿರನೆ ಸಾವನ್ನು ಬಿಗಿದಪ್ಪಿದನೆ?
ನಂಬಲಸಾಧ್ಯ. ನಂಬಲೇ ಬೇಕಿತ್ತು. ಯಾಕೆಂದರೆ, ಆತನ ಸಾವಿನ ಉದರದೊಳಗೆ ಈ ಹೀನ ಸಮಾಜದ ಮತ್ತು ಶಿಕ್ಷಣ ವ್ಯವಸ್ಥೆಯ ಕ್ರೌರ್ಯ ಹೂಂಕರಿಸುತಿತ್ತು. ನಕ್ಷತ್ರಲೋಕದ ವಿಸ್ಮಯಗಳ ಕುರಿತು ಬರೆಯಬೇಕೆಂದು ಕನಸಿದ ಗೆಳೆಯ ಇನ್ನಿಲ್ಲವಲ್ಲ. ನೆನೆದು ಮನಸ್ಸು ಮುದುಡಿತ್ತು. ಅರಿವಿಲ್ಲದೆ ಕಣ್ಣು ಹನಿಗೂಡಿತ್ತು. ಆದರೆ, ಆ ದಿನ ಒಂದಕ್ಷರವನ್ನು ಆತನ ಕುರಿತು ಬರೆಯದ ಅಸಹಾಯಕ ಸ್ಥಿತಿ ನನ್ನದಾಗಿತ್ತು.
ಕಳೆದ ಭಾನುವಾರ ಫ್ರೀಡಂ ಪಾರ್ಕಿನಲ್ಲಿ ‘ನಾವು ಭಾರತೀಯರು’ ಆಯೋಜಿಸಿದ ಥಿಯೇಟರಿ ರೀ-ಆಕ್ಟ್ ತಂಡದವರು ಪ್ರಸ್ತುತಪಡಿಸಿದ, ಹರ್ಷಕುಮಾರ್ ಕುಗ್ವೆ ಮತ್ತು ಸಂಜ್ಯೋತಿ ವಿ.ಕೆ. ಸಮರ್ಥವಾಗಿ ರಚಿಸಿದ, ವೆಂಕಟೇಶ್ ಕೆ. ನಿರ್ದೇಶನದ “ನಕ್ಷತ್ರದ ಧೂಳು” ಏಕವ್ಯಕ್ತಿ ರಂಗಪ್ರಯೋಗದ ಪ್ರದರ್ಶನವಿತ್ತು.
ರೋಹಿತನಾಗಿ ಕಾಣಿಸಿಕೊಂಡ ಕಿರಣ್ ಮಾರಶೆಟ್ಟಿಹಳ್ಳಿ ಅವರದು ಅದ್ಭುತ ನಟನೆ. ಅವರ ಮಾತಿನ ಭಾವತರಂಗಳು ಪ್ರೇಕ್ಷಕರೆದೆಯನ್ನು ಆರ್ಧ್ರಗೊಳಿಸುತ್ತವೆ.
ಆ ದಿನ ನಾನು ರೋಹಿತ್’ನನ್ನು ಕಂಡೆ. ಅವನನ್ನು ಮುಟ್ಟಿದೆ, ಮಾತನಾಡಿಸಿದೆ. ಅವನು ತನ್ನ ಕಾಠಿಣ್ಯದ ದಿನಗಳ ಕುರಿತು ಹೇಳುವಾಗ ಗದ್ಗಧಿತ ಹೃದಯದಿಂದ ರೋದಿಸಿದೆ. ಅವನ ಬಾಲ್ಯ ಅವಮಾನ, ಅಪಮಾನ, ನಿಂದನೆಗಳ ಕೂಪ. ರಾಧಿಕ ತನ್ನ ಜಾತಿಯವಳಲ್ಲವೆಂದು ತಿಳಿದ ‘ಮಣಿ’ಯಲ್ಲಿ ಇದ್ದಕ್ಕಿದ್ದಂತೆ ಪೈಶಾಚಿಭಾವ ಆವರಿಸುತ್ತದೆ. ಹಾಳು ಜಾತಿಯ ಓಲೈಕೆ ಆತನಿಗೆ ಎಷ್ಟಿತ್ತೆಂದರೆ ತನ್ನದೇ ರಕ್ತ, ಮಾಂಸ, ತೊಗಲು ತಗುಲಿ ಹೆತ್ತ ಮಕ್ಕಳ ಮೇಲಿನ ಮಮತೆಯನ್ನು ಕಳೆದುಕೊಳ್ಳುವಷ್ಟು! ಮಣಿಯಿಂದ ಏಟು ತಿನ್ನುತ್ತಿದ್ದ ಆ ಕಂದಮ್ಮಗಳ ನೋಡುವಾಗ ಕರುಳು ಹಿಂಡಿದ ಅನುಭವ. ಅಲ್ಲಿ ಅಕ್ಷರಶಃ ಹಿಡಿ ಪ್ರೀತಿಗೂ ನ್ಯೂನ್ಯತೆ ಇತ್ತು. ರೋಹಿತ್ ತನ್ನ ಡೆತ್ ನೋಟ್’ನಲ್ಲಿ ‘ತನಗೆ ಸಿಕ್ಕಂತಹ ಬಾಲ್ಯ ಬೇರೆ ಮಕ್ಕಳಿಗೆ ಸಿಗದಿರಲಿ’ ಎಂದು ಬರೆದುಕೊಂಡದ್ದು ನೆನಪಾಗಿ ಕಣ್ಣು ತುಂಬಿ ಬಂತು.
ರೋಹಿತನ ಅಮ್ಮ ರಾಧಿಕ ಗಟ್ಟಿಗಿತ್ತಿ, ಸ್ವಾಭಿಮಾನಿ ಮತ್ತು ಛಲಗಾತಿ. ತಾನು ದಲಿತಳೆಂದ ಕಾರಣಕ್ಕೆ ಗಂಡನಿಂದ ತಿರಸ್ಕೃತಗೊಂಡ ಆಕೆ ಮೂವರು ಮಕ್ಕಳನ್ನು ಉಡಿಯಲ್ಲಿ ಕಟ್ಟಿಕೊಂಡು ದಲಿತ ಕೇರಿಯಲ್ಲಿಯೇ ನೆಲೆಯೂರುತ್ತಾಳೆ. ಅವರಿವರ ಮನೆಕೆಲಸ, ಗಾರೆ ಕೆಲಸ ಮಾಡತ್ತ ನಂತರ ಹೊಲಿಗೆ ಕಲಿತು ಕಸೂತಿ ಕೆಲಸದಲ್ಲಿ ತೊಡಗುತ್ತಾಳೆ. ಇದ್ದುದರಲ್ಲಿಯೇ ಎರಡು ದುಡ್ಡು ಕೂಡಿಟ್ಟು ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾಳೆ. ಆ ತಾಯಿಯ ಛಲವಾದರು ಎಷ್ಟಿತ್ತು ಅಬ್ಬ! ತನ್ನ ಮಕ್ಕಳೊಟ್ಟಿಗೆ ತಾನು ಓದಿ 10th, 12th ಅಲ್ಲದೇ ಪದವಿನೂ ಪಡೆದು ಮಕ್ಕಳ ಅದಮ್ಯ ಹೆಮ್ಮೆಯಾಗುತ್ತಾಳೆ.
ಕಾಲೇಜು ದಿನಗಳಲ್ಲಿ ರೋಹಿತನಲ್ಲೂ ವಯೋಸಹಜತೆ ಇತ್ತು. ಸುಂದರ ಹುಡುಗಿರು, ಕ್ರಿಕೆಟ್, ಸಿನೆಮಾಗಳ ಅಭಿರುಚಿಯಿತ್ತು. ರೋಹಿತನಿಗೆ ನಟ ರಾಮಚಂದ್ರ ಅಚ್ಚುಮೆಚ್ಚು. ಬೆರಳ ತುದಿಯಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿನ ವಿಷಯವನ್ನು ಕ್ಷಣಾರ್ಧದಲ್ಲಿ ಹೆಕ್ಕಿ ತರುವ ವಿಕೀಪಿಡಿಯ ಮತ್ತು ಅಂತರ್ಜಾಲದ ಕುರಿತು ಅವನಿಗೆ ಸದಾ ಅಚ್ಚರಿ.
ಕಾರ್ಲ್ ಸೆಗನ್ ಬರಹಗಳನ್ನು ಬಹುವಾಗಿ ಮೆಚ್ಚಿಕೊಂಡ ರೋಹಿತ್ ಆಸ್ಥೆಯಿಂದ ಸೆಗನ್ ಬರಹಗಳನ್ನು ಓದುತ್ತಿದ್ದ. ಬೃಹ್ಮಾಂಡ ಸೃಷ್ಟಿ ಮತ್ತು ಮನುಷ್ಯ ಜೀವಿಯ ಸಾಧ್ಯತೆಗಳ ಕುರಿತು ತನ್ನ ಬರಹಗಳ ಮೂಲಕ ಜಗತ್ತಿಗೆ ತಿಳಿಸಬೇಕೆಂಬ ಕನಸು ಕಂಡಿದ್ದ. ಭೂಮಂಡಲದಲ್ಲಿನ ಗಿಡ-ಮರ, ಪ್ರಾಣಿ-ಪಕ್ಷಿ, ನದಿ-ಕೊಳ್ಳ ಇಡೀ ಪ್ರಕೃತಿ ಎಲ್ಲವೂ ಮಿಲಿಯಾಂತರ ವರ್ಷಗಳಷ್ಟು ಹಿಂದೆ ನಕ್ಷತ್ರದ ಧೂಳಿನಿಂದ ಉಂಟಾದ ರಚನೆ ಎಂದಾದ ಮೇಲೆ ಇಲ್ಲಿ ಮನುಷ್ಯರು ನಿರ್ಮಿಸಿಕೊಂಡಿರುವ ದೇಶ-ಭಾಷೆಗಳ ಗಡಿ ಮೇಲು-ಕೀಳಿನ ತಾರತಮ್ಯಗಳು ಎಷ್ಟು ಕ್ಷುಲ್ಲಕ!
ಭಾರತ ವಿಜ್ಞಾನ-ತಂತ್ರಜ್ಞಾನದಲ್ಲಿ ಅತ್ಯಂತ ಪ್ರಗತಿ ಸಾಧಿಸಿದೆಯಾದರೂ ಸಮಾಜದಲ್ಲಿನ ಕಟ್ಟಕಡೆಯ ಮನುಷ್ಯನ ಬದುಕನ್ನು ಉತ್ತಮಗೊಳಿಸುವುದು ಯಾಕೆ ಸಾಧ್ಯವಾಗುತ್ತಿಲ್ಲ? ಅದಕ್ಕಿರುವ ಕಾರಣಗಳು, ಅಡತಡೆಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವದೇ ರೋಹಿತನ ಸಂಶೋಧನೆಯ ಮೂಲ ಉದ್ದೇಶ.
ಆ ಘಟ್ಟದಲ್ಲಿಯೇ ಆತನಿಗೆ ಜ್ಞಾನದ ಹಾಗೂ ಅರಿವಿನ ದಾಹವಾಗಿದ್ದು. ಆ ದಾಹ ಅವನಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಉತ್ತರಕ್ಕಾಗಿ ನಿರಂತರ ಹುಡುಕಾಟದಲ್ಲಿ ತೊಡಗುತ್ತಾನೆ. ಹುಡುಕಾಟದ ಆ ಹಾದಿಯಲ್ಲಿಯೇ ಮಾರ್ಕ್ಸ್, ಶಾಹು ಮಹಾರಾಜ್, ನಾರಾಯಣ ಗುರು, ಚೆಗುವರ, ಫುಲೆ ದಂಪತಿಗಳು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಎದುರಾಗುತ್ತಾರೆ. ಆರಂಭದಲ್ಲಿ ರೋಹಿತ್ ಮಾರ್ಕ್ಸ್ವಾದಿ ಚಿಂತನೆಗೆ ಒಳಗಾಗಿದ್ದ. ನಂತರ ಅವನ ಚಿಂತನೆಗಳನ್ನು ಆವರಿಸಿದ್ದು ಬಾಬಾಸಾಹೇಬ್ ಅಂಬೇಡ್ಕರರು.

ಅಂಬೇಡ್ಕರ್ ಕನಸಿದಂತೆ ರೋಹಿತ್ ಒಂದು ಸಮಸಮಾಜದ ನಿರ್ಮಾಣಕ್ಕಾಗಿ ತುಡಿಯತೊಡಗಿದ್ದ. ವಿಮೋಚನಾವಾದಿ ಸಮಾಜವಾದ (Libertine Socialist) ವನ್ನು ಒಪ್ಪಿಕೊಂಡ ರೋಹಿತನ ಮನಸ್ಸು ನಿಜದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿತ್ತು. ಸ್ವಾತಂತ್ರ್ಯವೆಂದರೆ, “ಪ್ರತಿಯೊಬ್ಬರೂ ಆತ್ಮಗೌರವದಿಂದ ಬದುಕಬೇಕಾದ ಹಕ್ಕು ಮತ್ತು ಅವಕಾಶ; ಪ್ರತಿವ್ಯಕ್ತಿಯೂ ಗಳಿಸಿಕೊಳ್ಳಬೇಕಾದ ಘನತೆ ಮತ್ತು ಆತ್ಮಗೌರವ.” ಅದರ ಭಾಗವಾಗಿಯೇ ರೋಹಿತ್ ಸ್ವಾಭಿಮಾನಿ ಚಳುವಳಿಯನ್ನು ಆರಂಭಿಸಿದ್ದ. ಸಂಶೋಧನಾ ವಿದ್ಯಾರ್ಥಿಗಳಾದ ರಾಜು, ವೆಂಕಟೇಶ್ ಜಾತಿ ದೌರ್ಜನ್ನದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರೋಹಿತನನ್ನು ಉಪವಾಸ ಸತ್ಯಾಗ್ರಹಗಳ ಮೂಲಕ ದೌರ್ಜಗಳ ವಿರುದ್ಧ ಸಿಡಿದು ನಿಲ್ಲುವಂತೆ ಮಾಡುತ್ತದೆ.
ಪ್ರಶ್ನಿಸುವುದು, ಚರ್ಚಿಸುವುದು ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟಿಸುವುದನ್ನು ಸಹಿಸದ ಶಿಕ್ಷಣ ವ್ಯವಸ್ಥೆ ರೋಹಿತನ ಫೆಲೋಶಿಪ್ ಹಣವನ್ನು ತಡೆಹಿಡಿಯುತ್ತದೆ. ಅಲ್ಲದೇ ರೋಹಿತ್ ಮತ್ತವನ ಸಂಗಾತಿಗಳನ್ನು ಯೂನಿರ್ವಸಿಟಿ ಹಾಸ್ಟೆಲ್ನಿಂದಲೇ ಅಮಾನತುಗೊಳಿಸಲಾಗುತ್ತದೆ. ಆಗ ಆತ ಚಕ್ರವ್ಯೂಹದೊಳಗೆ ಸಿಲುಕಿದ್ದ. ವಿಜ್ಞಾನ ಬರಹಗಾರನಾಗಬೇಕೆಂದು ಕನಸಿದ ರೋಹಿತ್ ಹಂತಹಂತವಾಗಿ ಹತಾಶಯನಾಗುತ್ತ ಹೋಗುತ್ತಾನೆ. ರೋಹಿತನ ಪರವಾಗಿ ಯಾವ ಧ್ವನಿಯೂ ಕೇಳಿಬರುವುದಿಲ್ಲ. ತೀರಾ ನಿಸ್ಸಹಾಯಕನಾದ ರೋಹಿತನಿಗೆ ಆ ವ್ಯೂಹದಿಂದ ಹೊರಬಂದು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿತ್ತು. ಆದರೆ, ತನ್ನ ಕನಸು ಮತ್ತು ಆದರ್ಶಗಳೊಟ್ಟಿಗೆ ರಾಜಿ ಮಾಡಿಕೊಳ್ಳಲು ಸಿದ್ಧನಿರದ ರೋಹಿತ್ ನೇಣು ಕುಣಿಕೆಗೆ ಕೊರಳೊಡ್ಡುವ ಮೂಲಕ ತಾನು ಕನಸಿದ ನಕ್ಷತ್ರಗಳ ಲೋಕದೆಡೆಗೆ ಸಾವಿನ ರೆಕ್ಕೆಗಳನ್ನು ತೆರೆದುಕೊಳ್ಳುತ್ತ ಪಯಣ ಹೊರಡುತ್ತಾನೆ.
ಈ ರಂಗಪ್ರಯೋಗಕ್ಕೆ ಅಂಕ ಬೀಳುವುದಿಲ್ಲ. ಅಂಬೇಡ್ಕರರು ಕನಸಿದ ಸಮಸಮಾಜ ಸೃಷ್ಟಿಯ ನಿರ್ಮಾಣ ಮುಂದುವರೆಯುತ್ತದೆ. ಆ ನಿಟ್ಟಿನಲ್ಲಿ “ನಕ್ಷತ್ರದ ಧೂಳು” ರಾಜ್ಯಾದ್ಯಂತ ನೂರಾರು ಪ್ರದರ್ಶನಗಳನ್ನು ಕಂಡು ಸಾವಿರಾರು ರೋಹಿತರನ್ನು ಹುಟ್ಟುಹಾಕಲಿ ಎಂಬ ಆಶಯ ಮತ್ತು ಭರವಸೆಯೊಂದಿಗೆ





0 Comments