ನಮ್ ಗೌರ್ಮೆಂಟ್ ಕೆಲ್ಸ ಮಾಡೋರಿಗೆ ಈಗೇನಾಗೈತಿ ?
ಅಂಗನವಾಡಿ ಹೆಲ್ಪರ್ ಮಂಗಳವ್ವ ಓಣ್ಯಾಗಿನ ಹುಡ್ರನ್ನೆಲ್ಲಾ ಸಾಲಿಗೆ ದಬ್ಬಿಕಂಡು ಹೊಂಟಿದ್ಲು. ಆ ಬಂಡಿ ಯಂಕಣ್ಣನ ಮಕ್ಳು ಮಂಗಳವ್ವನ ಧ್ವನಿ ಕೇಳತಿದ್ದಂಗನಾ ಮನಿಗೆ ಓಡಿ ಹೋಗಿ ಪಾಟಿ ಚೀಲ ಹೆಗಲಿಗೆ ಹಾಕ್ಕಂಡು ಓಡಿ ಬಂದ್ವು. ‘ಸರ್ಪೇಟಾಗಿ ಕರಿಬೇಕೇನು ನಿಮ್ಮನ್ನ. ಸಾಲಿ ಟೈಂ ಯಾದಂತ ಗೊತ್ತಾಗಲ್ಲ ನಿಮಿಗ್ಯ ?’ ಅಂತ ಆ ಹುಡ್ರ ತಲಿಗೊಂದು ಕೊಟ್ಲು ನೋಡ್ರಿ, ಪಾಪ ಅವು ಮೂಗೇರಿಸ್ಕಂತ ಚಣ್ಣ ಏರಿಸ್ಕಂತ ಹುಡ್ರು ಗುಂಪಿನೊಳಗ ಸೇರಿಕಂಡು ಜೋರ್ ಜೋರು ನಡಿಯಾಕತಿದ್ವು.
ಓಣ್ಯಾಗಿನ ಹುಡ್ರೆಲ್ಲಾ ದುಂಡಗೆ ಸಾಲಿಕಡಿ ಹೊಂಟಿದ್ದ ಟೈಂಗೆ ಸರಿಯಾಗಿ ಮನಿ ಅಂಗಳದಾಕ ಬಂದು ನಿಂತ ನಮ್ ಮೈಲವ್ವ, ಆ ಸಾಲಿ ಹುಡ್ರನ್ನ ನೋಡಿ ‘ಪಿಳ್ಳಿ ಪಿಸಗು ಎಲ್ಲವ್ನೂ ದುಂಡುಗು ಕಟ್ಟಿಗಂಡು ಹೊಂಟೇನ್ಬೇ ಮಂಗಳವ್ವಾ ?’ ಅಂತೇಳಿ ಕೂಗಿದ್ಲು. ಮೈಲವ್ವನ ದನಿ ಕೇಳಿದ ಮಂಗಳವ್ವ, ‘ನಿನ್ನಂಗ ಪಡಕಂಡು ಬಂದಿಲ್ಲವ್ವಾ ನಾನು ಸುಪನಾತಿ, ನಿನಿಗೇನವ್ವಾ ? ಮನಾರ ಮಾಡಿ ಹಾಕ್ತಾರ, ಎಣ್ಣಿಗಿ ಬೆಣ್ಣಿಗಿ ಕಮ್ಮಿಯಿಲ್ಲದಂಗ ಸಿವ ಕೊಟ್ಟು ಮರತಾನವ್ವ ಎಲ್ಲಾದ್ನೂ ನಿನಿಗೆ, ಹಾದ್ಯಾಗ ಹೋಗಾಬರಾ ಮಂದಿನ ಆಡ್ಕಂದ್ಲಾರ್ದ ಇನ್ನೇನ್ ಮಾಡಿ ?’ ಅಂದ್ಲು.
ಮಂಗಳವ್ವನ ಮಾತು ಕೇಳಿದ ಮೈಲವ್ವ ‘ನಿನಿಗಂತೂ ದೇವ್ರು ಕೊಡಬಾರ್ದ ಕಷ್ಟ ಕೊಟ್ಟಾನಲ್ಲ ? ನಡಿ ನಡಿಯವ್ವೋ ಹೊತ್ತಾಕೈತಿ ನಿನಿಗ್ಯ.’ ಅಂತಂದದ್ದನ್ನ ಕೇಳಿದ ಮಂಗಳವ್ವ ‘ಹೊಗ್ಗಾ ಮೂಳ ನಾಡ ಹಾಳ್ ಮೂಳನ್ನ ತಂದೊಯ್ದು. ಉದ್ಯೋಗ ಇಲ್ಲದ ಬಡಿಗಿ ಅದೇನಾ ಮಾಡಿದ್ನಂತ ಅನ್ನಂಗ ಇದು ಸುಮ್ನ ಹಾದ್ಯಾಗ ಹೋಗಾರ್ನ ತಡವಿಕಂಡು ಕುಂದ್ರತೈತಿ’ ಅಂತ ತನಗ ತಾನಾ ಅಂದ್ಕೋತ ಸಾಲಿಕಡಿ ಹೊಂಟ್ಳು.
ಮಂಗಳವ್ವ ಆ ಕಡಿ ಹೋಗ್ತಿದ್ದಂಗನ ಕರಿಯವ್ನ ಗುಡಿಕಡೆ ಬಂದ ಮೈಲವ್ವ ಇನ್ನೇನು ಕಟ್ಟಿ ಹತ್ತಿ ಕುಂದ್ರಬೇಕು, ಅಷ್ಟರೊಳಗಾ ಎಲ್ಲರಿಗಿಂತ ಮುಂಚೆಲೆ ಬಂದು ಕಟ್ಟಿಗೆ ಸೊಂಟ ಆನಿಸಿ ನಿಂತಿದ್ದ ಮೇಘರಾಜ ಅನ್ನೋನ ನೋಡಿ ‘ಲೋ ತಮ್ಮಾ, ನೀನು ನಮ್ ಅಲ್ಲಾಕುದ್ಹಾ ಬಡಿಗೇರ ಗೋಣೆಪ್ಪನ ಮಗ ಹೌದಿಲ್ಲು ?’ ಅಂದ್ಕೋತ ಕಟ್ಟಿ ಹತ್ತಿ ಕುಂತ್ಲು. ಮೈಲವ್ವನ ಮಾತು ಕೇಳಿದ ಮೇಘ ‘ಹೋಗ್ಗೋ ನಿನ್ನ ಮಂಜಾಳಾಗ್ಲಿ, ಇವನೌನು ಎಂತೆಂಥಾರಿಗೇ ಬರತೈತಿ ನಿಮ್ಮನ್ಯಾಕ ಇನ್ನೂ ಇಲ್ಲೇ ಉಳಿಸ್ಯಾನೇನೋ ಆ ಉದ್ದಿ ಬಸಪ್ಪ, ಒಂದು ತಿಳಿವಲ್ದು ನೋಡಬೇ ಯಮ್ಮಾ’ ಅಂತಂದು ಮೈಲವ್ವನ ಕಡೆ ತಿರುಗಿ ನೋಡಿದ.
ಮೇಘನ ಮಾತಿಗೆ ‘ಊರ ಕರಿಗಲ್ಲು ಹಾಕಬೇಕಾದ್ರ ಅದನ್ನಾದು ಸೋ ಅಂತ ಈ ಊರಿಗೆ ಬಂದಾಳಲೋ ನಾನು. ಇನ್ನೊಮ್ಮಿ ಕರಗಲ್ಲು ತಿರಿವಿ ಹಾಕಾ ವರಿಗೂ ನಮ್ಮನ್ನಿಂಗಾ ಸಲವುತಾಳ ನಮ್ಮವ್ವ ನಮ್ ತಾಯಿ ಕರಿಯವ್ವ. ಅದಿರ್ಲಿ ಬುಡು ನೀನೆನಲೋ ಸೊಂಟಕ್ಕ ಹಗ್ಗ, ಟವಲ್ಲು ಕಟಿಗಂಟು ನಿಂತಿಯಲ್ಲ. ಎಲ್ಲೆರ ಹುರ್ಲು ಹಕ್ಕಣಾಕ ಹೊಂಟೇನು ?’ ಅಂತಂದು ನಗಾಕತ್ತಿದ್ಲು.

ಮೈಲವ್ವನ ಮಾತು ಕೇಳಿದ ಮೇಘ ‘ನನಿಗೇನು ಬಂದೈತಬೇ ಅಂಥಾದ್ದು?, ಬೇಕಾರ ನೀವ ಮೂರೂ ಜನ ಅದೀರಲ್ಲ ಊರೆಲ್ಲ ಆಡ್ಕಳ್ಳ ಅಡ್ಣಾಡಿಗಳು ನೀವಾ ಎಲ್ಲೆರ ವಾರಿಗೆ ಹೋಗಿ ಯಾದಾರ ಕೊತ್ತಂಬ್ರಿ ಗಿಡಕ್ಕ ಹುರ್ಲು ಹಾಕ್ಕೋ ಹೋಗ್ರೋ ನಿಮ್ಮೋಳು’. ಅಂತಂತಿದ್ದಂಗನ ಕಟ್ಟಿಗೆ ಬುಡೇನಜ್ಜನ ಯಂಟ್ರಿ ಆತು. ಬರ್ತಿದ್ದಂಗನಾ ಮೇಘನ ಮಾತುಗಳನ್ನ ಕೇಳಿಕಂತನಾ ಬಂದಿದ್ದ ಬುಡೇನಜ್ಜಾ, ‘ಏನಾ ಅನ್ನಾಕತ್ಯಾನಲ್ಲಬೇ ಮೈಲವ್ವಾ ಈ ಬೋಸುಡಿಕೆ ? ಏನಂತಿವನ್ದು?’ ಅಂತ ಕಟ್ಟಿಗೆ ಕೂತ್ಕೋತ ಪ್ರಶ್ನಿ ಹಾಕಿದ.
ಬುಡೇನಜ್ಜನ ಮಾತು ಕೇಳಿದ ಮೇಘ ‘ನೋಡಾ ಯಜ್ಜಾ ನನ್ ಪಾಡಿಗೆ ನಾ ಸುಮ್ನ ನಿಂತಿದ್ರ, ಈ ಮುದ್ಕಿ ನನಿಗ್ಯಾ ಹುಡ್ಗಾಟ ಮಾಡಕತ್ಯಾಳ. ಅದಕ್ಕಾ ನಾನೂ ದುರ್ಗವ್ವನ ಬುಡಸಾಕತ್ತಿನಿ ಬಾ.’ ಅಂದ. ಮೇಘನ ಮಾತು ಕೇಳಿದ ಮೈಲವ್ವ ‘ಅಲ್ಲಲೋ ಮೊಮ್ಮಗನಾ ಎಲ್ಲಿಗೆ ಹೊಂಟಿ ಅದನ್ನರಾ ಹೇಳಲೋ ಭಾಡ್ಕೋ.’ ಅಂದ್ಲು. ಮೈಲವ್ವನ ಕಡಿ ತಿರುಗಿದ ಮೇಘ ‘ಐನಾರ ಹೊಲಕ್ಕೋಗಿ ಕಟಿಗಿ ತರಕ್ಕಂತ ನಾನೂ, ನಮ್ ಹೇಮಪ್ಪ ದೊಡ್ಡಪ್ಪನ ಮಗ ಸಿವಜ್ಜನೂ ಹೊಂಟಿದ್ವಿ, ‘ನಾನೂ ಹಗ್ಗ, ಟವಲ್ಲು ತರ್ತಿನಿ ತಡೆಲೆ ಅಂತ ಆತ ಮನಿಗೋದ, ಅದಕ್ಕಾ ಬರಾವರಿಗೂ ಇಲ್ಲಿ ನಿಂದ್ರಾನು ಅಂತೇಳಿ ನಿಂತೆ’ ಅಂದ.
ಅದಕ್ಕಿದ್ದು ನಮ್ ಮೈಲವ್ವ ‘ಅಲ್ಲಲೋ ತಮ್ಮಾ, ಕಂಡೂ ಕಂಡು ಇವತ್ತು ಅಮಾಸಿ ಐತಿ. ಅಮಾಸಿ ದಿಸ ಯಾರೂ ಕಡಿನಾ ತರಾಲ್ಲ ಅಂತಾದ್ರಾಗ ನೀವು ಐನಾರ ಹೊಲಕ್ಕಾ ಸ್ಕೆಚ್ ಹಾಕಿರಲ್ಲ ಏನ್ ಹೇಳಬೇಕು ನಿಮಿಗೆ ?’ ಅಂದ್ಲು. ಮೈಲವ್ನ ಮಾತಿಗೆ ಮೇಘ ನಕ್ಕೋತ ‘ಬರೇ ಕಟಿಗಿ ತರೋದಷ್ಟಾ ಅಲ್ಲಬೇ ಇವತ್ತಾ ಕಟಿಗಿ ತಂದು ಅದಾ ಕಟಿಗಿಲೇ ಕೋಳಿ ಮಾಡ್ಕಂಡು ಉಂತೀವಿ. ಚೊಲೋ ದಿನ ಖರಿ ಉಂಡ್ರ ಚೊಲೋ ಅಕೈತಿ ಅನ್ನಾದು ನಮ್ ಸಿವ್ವಪ್ಪಂದು ನಂಬಿಕಿ ಐತಿ ಗೊತ್ತೇನು?’ ಅಂದ. ಮೇಘನ ಮಾತು ಕೇಳಿ ಬಾಯಿ ಮ್ಯಾಗ ಕೈ ಇಟ್ಕೊಂಡ ಮೈಲವ್ವ ‘ಊರಿಗ್ಯಾಕ ಮಳಿ ಬೆಳಿ ಇಲ್ಲ ಅನ್ನಾದು ಈಗ ಗೊತ್ತಾತು ಬುಡ್ಲೋ ತಮ್ಮಾ. ಅಂದಂಗ ಯಾವನ್ಲೇ ಇಂಥಾ ಮನಿಮುರುಕ ಐಡಿಯಾ ಕೊಟ್ಟೋನು.?’ ಅಂತ ಕೇಳಿದ್ಲು. ಅದಕ್ಕ ನಮ್ಮ ಮೇಘ ಇದ್ಕಂಡು ‘ಅಗೋ ನೋಡಲ್ಲಿ ಬಂದಾ ಬುಟ್ಟ. ನಾ ಬರ್ತಿನಮ್ಮೋ.’ ಅಂತಂದು ಅಲ್ಲಿಂದ ಹೊಂಟಾ ಬುಟ್ಟ.
ಮೇಘ ಆ ಕಡಿ ಹೋಗ್ತಿದ್ದಂಗನ ಮೈಲವ್ವ ‘ಏನ್ ಹುಡ್ರೇನಾ ಬುಡಾ ಬುಡೇನಜ್ಜಾ ಈಗಿನ ಹುಡ್ರು. ಯಜಮಾನ್ರಿಗೆ ಹೆಂಗ ಮಾತಾಡಾಕು ಅನ್ನಾ ಖಬರಾ ಇಲ್ಲ ನೋಡು.’ ಅಂದದ್ದಕ್ಕ ನಮ್ ಬುಡೇನಜ್ಜ ‘ಅಲ್ಲಬೇ ಮೈಲವ್ವ ಊರಿಗಿಂತ ಮುಂಚೆ ತಲಿ ನೆರತಾಕಿ ನೀ. ಹುಡಾಳ ಹುಡ್ರತಾಗ ಹೆಂಗ ಮಾತಾಡಬೇಕು ಅನ್ನಾದು ತಿಳಿದುಲ್ಲೇನು ನಿನಿಗ್ಯ?’ಅಂದ. ಬುಡೇನಜ್ಜನ ಮಾತು ಕೇಳಿ ಮೈಲವ್ವ ಅದೇನಾ ಹೇಳಾಕ ಹೊಂಟಿದ್ಳು, ಅದಾ ಟೈಂಗೆ ಸರಿಯಾಗಿ ಕಟ್ಟಿಕಡಿಗೆ ನಮ್ ರಾಮಣ್ಣನು ಬಂದು ಕುಂತ.
ಏನೂ ಮಾತಾಡ್ದಂಗ ಸುಮ್ಮನಾ ಬಂದು ಕುಂತಿದ್ದನ್ನ ನೋಡಿದ ಮೈಲವ್ವ, ‘ಯಾಕಲೋ ರಾಮಾ, ಸಪ್ಪಗದಿಯಲ್ಲ? ಮನ್ಯಾರೇನರಾ ತಿಂಬವೋಟು ಸಗಣಿ ತುಂಬಿದ್ರೇನು ನಿನ್ ಬಾಯಿಗೆ ?’ ಅಂದ್ಲು. ಮೈಲವ್ವನ ಮಾತು ಕೇಳಿದ ರಾಮಜ್ಜ, ‘ಸ್ವಲ್ಪತ್ತು ಸುಮ್ನ ಕುಂದ್ರಬೇ ನಿಮೌನು’ ಅಂದು ಬುಡೇನಜ್ಜನ ಕಡಿಗೆ ತಿರುಗ್ತಿದ್ದ ಅದಾ ಟೈಮಿಗೆ ಸರಿಯಾಗಿ ರಂಗಣ್ಣ ಅನ್ನೋ ಶಾಸ್ತ್ರ ಹೇಳೋ ಮನಷಾ ಇವರ ಕಡಿಗೆ ಬರಾಕತ್ತಿದ್ದ.
ಈ ರಂಗಣ್ಣ ಈ ಊರಿಗೆ ಭಾಳಾ ಫೇಮಸ್ಸು. ಈ ಮೈಲವ್ವ, ರಾಮಜ್ಜ, ಬುಡೇನಜ್ಜ ಇವ್ರು ಇರೋ ಓಣ್ಯಾಗಿನ ಯಾರ್ ಮನಿಯಾಗ ಎಷ್ಟು ಕಂಬಗಳು ಅದಾವು ಅನ್ನಾದು ಈ ರಂಗಣ್ಣಗ ಚೊಲೋತ್ನಂಗ ಗೊತ್ತೈತಿ. ಮತ್ತೊಂದೀಟು ಕಣ್ಕಟ್ಟಿಂದ ಇದ್ಯಾ, ನಿಧಿ ಕಂಡಿಡಿಯಾ ಹುಚ್ಚು ಎಲ್ಲಾ ನಮೂನಿ ಮನಿಹಾಳ ಕಸುಬು ತಿಳ್ಕಂಡಾನ. ಬೋತೇಕ ಓಣ್ಯಾಗಿನ ಜನನೆಲ್ಲಾ ಅವರವರ ಕೆಲ್ಸಗಳಿಗೆ ಹೋದ ಮ್ಯಾಗ ಅಂದ್ರ ಯಡ ಹೊತ್ನಾಗ ಓಣ್ಯಾಕ ಎಂಟ್ರಿ ಕೊಡಾ ಈ ರಂಗಣ್ಣ ಮನ್ಯಾಗಿನ ಹೆಣ್ಮಕ್ಕಳಿಗೆ ಅಂಗಳಾಗಾ ಕುಂತ್ಕಂಡು ಬವಿಸ್ಯ ಹೇಳತಾನ. ಈತ ಹೇಳಿದ ಟೈಂಗೆ ಸರಿಯಾಗಿ ಒಂದೆಲ್ಡು ಹುಡಿಗ್ಯಾರ ಲಗ್ನಾನೂ ಆದ ಮ್ಯಾಗ ರಂಗಣ್ಣನ ಮಾತಿಗೆ ಚೂರು ಕಿಮ್ಮತ್ ಬಂದೈತಿ. ಎಂಥೋರ ಮಾತಿಗೂ ಉತ್ರ ಕೊಟ್ಟು ಗೆಲ್ಲೋ ಈ ರಂಗಣ್ಣ ಹೆದ್ರಾದು ಅಂದ್ರ ಅದು ಮತ್ತೆ ಈ ನಮ್ ಮೂರು ಗುಂಡುಕಲ್ಲುಗಳಿಗೆ.
ಇವತ್ತು ಯಾವಾಗ ದೂರದಿಂದ ಕರಿಯವ್ನ ಗುಡಿತಾವಿರೋ ಕಟ್ಟಿಗೆ ಈ ಮೂರನ್ನೂ ಬಿಟ್ಟ ಮುವ್ವರೂ ಕುಂತಾರ ಅನ್ನಾದನ್ನ ನೋಡಿದ್ನೋ ನಮ್ ರಂಗಣ್ಣ ಮಗ್ಗಲು ಸಂದಿಯೊಳಗ ಹೊಕ್ಕಣಾಕ ನೋಡ್ದ, ಅದಾ ಟೈಂಗೆ ಸರಿಯಾಗಿ ನಮ್ಮ ಬುಡೇನಜ್ಜ ‘ಹೇ ರಂಗಜ್ಜಾ, ಇಲ್ಲೋಟು ಬಾರೋ ಮರಾಯಾ’. ಅಂತ ಕರದ. ಇನ್ನೇನು ಬುಡುಗಡಿನಾ ಇಲ್ಲ ಬುಡು ಅಂದ್ಕೊಂಡು ರಂಗಜ್ಜ ಇವ್ರ ಕಡಿ ಬರಾಕತ್ತಿದ್ದ, ಅದನ್ನ ನೋಡಿದ ನಮ್ ಮೈಲವ್ವ ‘ಬಾ ಬಾ ಮಗ್ನಾ, ಇವತ್ತು ಏನ್ ಕಾದೈತೇನೋ ಬಾ ನಿನಿಗ್ಯ’ ಅಂತಂದು ಕಟ್ಟಿಗೆ ಚಕ್ಕಳ ಮಕ್ಕಳ ಹಾಕ್ಕಂಡು ಕುಂತ್ಕಂಡ್ಳು.
ರಂಗಜ್ಜ ಕಟ್ಟಿ ಹತ್ರ ಬರ್ತಿದ್ದಂಗನಾ ನಮ್ ಮೈಲವ್ವ ‘ನೋಡಪಾ ರಂಗಜ್ಜ, ನಿನ್ನ ತಾಳಿ ಗರಿ ತೆಗದು ಅದ್ರಾಗಿನ ಡಬ್ಬಣಾನ ನಮ್ ರಾಮನ ಕೈಗೆ ಕೊಡು. ಅದೇನಾ ಮೂರು ಸತಿ ಚುಚ್ಚಿ ಅದೇನೇನಾ ಬವಿಸ್ಯ ಹೇಳ್ತಿಯಲ್ಲ. ಇವತ್ತದನ್ನ ಕ್ಲಿಯರ್ರಾಗಿ ಹೇಳಿಬುಡು. ಅದ್ಯಾಕ ನಮ್ ರಾಮ ಮನಸಿನ್ಯಾಗಾ ಮಂಡಿಗಿ ತಿನ್ನಾಕತ್ಯಾನ.’ ಅಂದ್ಳು.
ಇವ್ರತ್ರ ಏನ್ ಮಾತಾಡಿದ್ರೂ ಹಾಳ್ ಬಾವಿಗೆ ಕಲ್ ಹೊಗದಂಗ ಅಂತ ತಿಳಕಂಡಿದ್ದ ನಮ್ ರಂಗಜ್ಜ ಸುಮ್ಮನ ತನ್ನ ಬಗಲಾಗಿದ್ದ ಜೋಳಗ್ಯಾಗಿಂದ ಹಳೇ ತಾಳಿಗರಿ ಕಟ್ಟು ತೆಗದು ಅದಕ್ಕ ಸುತ್ತಿದ್ದ ದಾರ ಬಿಟ್ಟಿ ಆ ದಾರದಾಗ ನೇತಾಡ್ತಿದ್ದ ಡಬ್ಬಣಾನ ರಾಮಜ್ಜನ ಕೈಗೆ ನೀಡಿ ‘ಮನಿ ದೇವ್ರ ನೆನಿಸ್ಕಂಡು ಕೈ ಮುಗುದು ಒಮ್ಮಿ ಈ ಕಟ್ಟಿನೊಳಕ ಚುಚ್ಚು ರಾಮಜ್ಜ’ ಅಂದ. ರಾಮಜ್ಜ ಡಬ್ಬಣಾನ ರಂಗಜ್ಜನ ಕೈಯಾಗಿದ್ದ ತಾಳಿ ಕಟ್ಟಿನ ನಡೂಕ ಸೇರಿಸಿದ. ಡಬ್ಬಣ ಇದ್ದ ಕಡಿಗೆ ತಾಳಿಗರಿ ಕಟ್ಟನ್ನ ಎಲ್ಡು ಓಳು ಮಾಡಿದ ರಂಗಜ್ಜ ‘ಕೇಳು ರಾಮಜ್ಜ ಏನೈತಿ ನಿನ್ನ ಮನಸಿನ್ಯಾಗಿನ ಯಸನ.’ ಅಂದ.
ರಂಗಜ್ಜನ ಮಾತಿಗಾಗಿನಾ ಕಾಯ್ಕಂಡು ಕುಂತಿದ್ದೇನೋ ಅನ್ನಂಗ ನಮ್ ರಾಮಣ್ಣ ‘ನಮ್ ದೇಸದಾಗ ಮಳಿ ಬೆಳಿ ಯಾವಾಗ ಬೇಸಿ ಬರ್ತೈತಿ ?, ರಾಜಕೀಯ ಮಾಡೋರಿಗೆ ಯಾವಾಗ ಒಳ್ಳೇ ಬುದ್ದಿ ಬರತೈತಿ ?, ನಮ್ ಗೌರ್ಮೆಂಟ್ ಕೆಲ್ಸ ಮಾಡೋರಿಗೆ ಈಗೇನಾಗೈತಿ ?, ನಮ್ ರೈತ್ರಿಗೆ ಯಾವಾಗ ನೆಮ್ಮದಿ ಜೀವನ ಸಿಗತೈತಿ ?, ಸದ್ಯಕ್ಕಿಷ್ಟು ಹೇಳಪ್ಪಾ ನೋಡಾನು ?’ ಅಂತ ಪ್ರಶ್ನಿಗಳ ಮ್ಯಾಲ ಪ್ರಶ್ನಿ ಕೇಳಿದ.
ರಾಮಜ್ಜನ ಪ್ರಶ್ನಿಗಳಿಗೆ ರಂಗಜ್ಜ ‘ನಮ್ ಕೈಯಾಗೇನೈತಿ ರಾಮಣ್ಣ, ಲೋಕ ಹೆಂಗ ನಡಿಬೇಕು ಅನ್ನಾದು ಆ ಭಗವಂತಗಷ್ಟಾ ಗೊತ್ತು. ಬ್ಯಾರೆ ಏನಾರಾ ಕೇಳು.’ ಅಂದ. ರಂಗಜ್ಜನ ಮಾತು ಕೇಳಿದ ಬುಡೇನಜ್ಜ. ‘ಎದ್ದೋಗೋ ಅಡ್ನಾಡಿ. ಇನ್ನೊಂದು ನಿಮಿಸ ಇಲ್ಲಿದ್ರ ನಿನ್ನ ಜೋಳಿಗಿ ಹರದು ಆ ತಾಳಿ ಗರಿನೆಲ್ಲಾ ನಮ್ ಮನಿಗೆ ಹೊಯ್ತಿನಿ ನೋಡಿವಾಗ.’ ಅಂದದ್ಕ ರಂಗಜ್ಜ ‘ನಿಮ್ಮಂಥೋರಿಗೇನಾ ನರಕಾ ಅನ್ನದೊಂದೈತಿ ನಿಮಿಗದಾ ಫಿಕ್ಸ್.’ ಅಂದ್ಕೋತ ಅವಸರದಿಂದಾನಾ ಎದ್ದೋದ.
ಆತ ಹೋಗ್ತಿದ್ದನ್ನ ನೋಡಿಕೋಂತ ನಮ್ ಮೈಲವ್ವ, ನಿನಿಗೇನು ಸ್ವರ್ಗದಾಗ ಏಸಿ ರೂಂ ಬುಕ್ ಆಗೈತಂತ ಮಾಡಿಯೇನು ? ನಿನಿಗ್ಯ ಅದಾ ನರಕದಾಗ ಗ್ರೌಂಡ್ ಫ್ಲೋರ್ ಕಾದೈತಂತೆ ಹೊಗಲೋ .’ ಅಂದಳು. ಮೈಲವ್ವನ ಮಾತು ಕೇಳಿದ ರಾಮಜ್ಜ ‘ಅದ್ಯಾಕ ಹಂಗ ಶಾಪ ಹಾಕ್ತಿ ಬಿಡಬೇ ಹೋಗ್ಲಿ. ಏನೋ ಹೊಟ್ಟಿ ಪಾಡಿಗೆ ಅದೇನೋ ಒಂದು ಜೀವ್ನ ಮಾಡ್ಕಂಡು ಹೊಂಟೈತಿ. ನಡಿರಿ ನಮ್ ಮನಿಗೋಗಿ ಚಾ ಮಾಡಿಕಂಡು ಕುಡುದು ಬರಾನು. ಆಮ್ಯಾಲಿನ್ನೂ ಮಾತಾಡಾದು ಇದ್ದಾ ಇರತೈತಿ ಅಂತೇಳಿ ಎಲ್ಲರೂ ರಾಮಜ್ಜನ ಮನಿಕಡಿಗೆ ಹೊಂಟ್ರು.





0 Comments