ವೀಣಾ ಭಟ್
ಎಲ್ಲರಿಗೂ ಭಾನುವಾರವೆಂದರೆ ಇಷ್ಟ. ನನಗೆ ಭಾನುವಾರ ಬಂತೆಂದರೆ ಯಾಕೋ …ಸಿಟ್ಟು .ಎಲ್ಲರಿಗೂ ರಜವಾದರೇನು ..ನನಗೆ ಕೆಲಸವಿದ್ದೇ ಇರುತ್ತದಲ್ಲ . ಆದರೆ …ನನಗೆ ಭಾನುವಾರ ಒಂದು ಕಾರಣಕ್ಕೆ ಇಷ್ಟವಾಗುತ್ತದೆ .ಬೆಳಗ್ಗೆ ಎಲ್ಲರಿಂದ ಮೊದಲು ಪೇಪರ್ ಓದುವ ಖುಷಿ ನನಗೆ ಅದೊಂದೇ ದಿನ ಸಿಗುತ್ತದೆ .ಉಳಿದ ದಿನ ಬೆಳಗ್ಗೆ ಪೇಪರ್ ಓದಲು ಎಲ್ಲಿದೆ ಸಮಯ..?ಮಕ್ಕಳಿಗೆ ತಿಂಡಿ ,ಊಟದ ಡಬ್ಬಿ ಮಾಡುವ ತರಾತುರಿ .ಬಾಗಿಲ ಬಳಿ ಬಿದ್ದ ಪೇಪರ್ ಎತ್ತಿ ಒಳಗಿಟ್ಟು ತಲೆಬರಹದ ಮೇಲೆ ಕಣ್ಣಾಡಿಸಿರುತ್ತೇನೆ.೫ ನಿಮಿಷ ಪೇಪರ್ ಓದುತ್ತಾ ಕುಳಿತರೆ ಮಗನನ್ನು ಎಬ್ಬಿಸಲು ತಡವಾಗಿರುತ್ತದೆ .ನನಗಿಷ್ಟವಾದ ಅಂಕಣ ಬರುವ ದಿನ ಪೇಪರ್ ಗೆ ಕಾಯುತ್ತಿರುತ್ತೇನೆ .ತಿಂಡಿ ಮಾಡಿಕೊಂಡು ಅಥವಾ ಪಲ್ಯಕ್ಕೆ ಬೇಯಿಸಿಕೊಂಡು ಓದುತ್ತಿರುತ್ತೇನೆ .ಆಮೇಲೆ ಕೆಲಸವಾದ ಮೇಲೆ ಪುನಃ ಓದುವುದುಂಟು .ಒಮ್ಮೊಮ್ಮೆ ಅತ್ತೆಯವರು ಮೊದಲು ಎದ್ದರೆ ಪೇಪರ್ ಮೊದಲು ತೆಗೆದುಕೊಂಡು ಓದಲು ಕುಳಿತು ಬಿಡುತ್ತಾರೆ .
ಭಾನುವಾರ ಎಲ್ಲರೂ ಏಳುವುದು ಲೇಟು .ಬೆಳಗ್ಗಿನ ಗಡಿಬಿಡಿ ಇರುವುದಿಲ್ಲವಲ್ಲಾ ..ಹಾಗೇ ಪೇಪರ್ ಓದುತ್ತಾ ಅರ್ಧ ಗಂಟೆ ಕುಳಿತುಬಿಡುತ್ತೇನೆ.ಒಂಭತ್ತು ಘಂಟೆಯ ನಂತರ ಎಲ್ಲರೂ ಏಳುತ್ತಾರೆ .ಹಾಲಿನವನು ಬರುವುದು ಸ್ವಲ್ಪ ಲೇಟು .ಹಾಲು ಬಂದ ಕೂಡಲೇ ತೆಗೆದುಕೊಂಡುಬಿಡಬೇಕು.ಇಲ್ಲಾಂದ್ರೆ ಒಮ್ಮೊಮ್ಮೆ ಕೋತಿಗಳು ಬಂದು ತೆಗೆದುಕೊಂಡುಬಿಡುತ್ತವೆ .ಕ್ಷೀರಾಭಿಷೇಕ ,ಕ್ಹೀರಪಾನ ಎಲ್ಲಾ ನಡೆದಿರುತ್ತದೆ . ಬೆಳಗ್ಗೆ ಮೊದಲು ಮುಖದರ್ಶನ ಹಾಲಿನವನದು ಅಥವಾ ಕೋತಿಗಳದ್ದು …!! ಈ ಹಾಲಿನವನು ಕೈಯಲ್ಲಿ ಕೋಲು ಹಿಡಿದುಕೊಂಡೇ ಎಲ್ಲಾ ಮನೆಗಳಿಗೆ ಹಾಲು ಕೊಡುತ್ತಿರುತ್ತಾನೆ . ಅವನ ಹೆಸರು ಅದಕ್ಕೆ ಸರಿಯಾಗಿ ಲಕ್ಷ್ಮಣ ಅಂತ.”ನೀನು ವಾನರ ಸೈನ್ಯ ಕಟ್ಟಿಕೊಂಡು ವನವಾಸದಿಂದ ಯಾವಾಗ ಬಂದೆ”ಅಂತ ನಾನು ಅವನನ್ನು ಒಮ್ಮೊಮ್ಮೆ ರೇಗಿಸುವುದುಂಟು .
ಪೇಪರ್ ನವನ ಸಮಯ ಪ್ರಜ್ಞೆ ,ಕರ್ತವ್ಯ ಪ್ರಜ್ಞೆ ನನಗೆ ಅಚ್ಚರಿ ಹುಟ್ಟಿಸುತ್ತದೆ . ದಿನಾ ಒಂದೇ ಸಮಯಕ್ಕೆ ಬರುತ್ತಾನೆ .ಮಳೆಯಿರಲಿ,ಚಳಿಯಿರಲಿ ಅವನದು ಇಂಗ್ಲೀಶ್ ಟೈಮು .ಒಂದು ವೇಳೆ ಅವನಿಗೆ ರಜ ಹಾಕುವ ಸಂದರ್ಭ ಬಂದರೆ ಆ ಕೆಲಸ ಇನ್ನೊಬ್ಬನಿಗೆ ಒಪ್ಪಿಸಿರುತ್ತಾನೆ .ಹಗಲು ಬೇರೊಂದು ಅಂಗಡಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಾನೆ .ಅವನು ಪೇಪರ್ ಎಸೆಯುವ ಸ್ಟೈಲ್ ನೋಡಬೇಕು..!!!ಅಷ್ಟು ದೂರ ನಿಂತು ಬಾಗಿಲ ಬಳಿ ಸರಿಯಾಗಿ ಎಸೆಯುತ್ತಾನೆ .ಇದೂ ಒಂದು ಕಲೆ ಎಂದು ಹೇಳಿಕೊಂಡು ನಾನು ನಗುತ್ತೇನೆ .ಅವನಿಗೆ ಏನಾದರೂ ಹೇಳಬೇಕು ಅಂತ ಬಾಗಿಲು ತೆರೆಯುವಷ್ಟರಲ್ಲಿ ಅವನು ಅಂತರ್ಧಾನ ..!!!
ಎಲ್ಲರೂ ಏಳುವ ಮೊದಲು ಕಾಫಿ ಮಾಡ್ಕೊಂಡು ಒಬ್ಬಳೇ ಕುಡಿಯಬೇಕು ಅಂತ ಪೇಪರ್ ಬದಿಗಿಟ್ಟು ಮೇಲೇಳುತ್ತೇನೆ .ಒಮ್ಮೊಮ್ಮೆ ಒಬ್ಬಳೇ ಹಾಗೇ ಸುಮ್ಮನೆ ಕುಳಿತುಕೊಂಡು ಯೋಚಿಸುವುದರಲ್ಲಿ ಏನು ಸುಖವಿದೆ ಅಂತ ….ಅಂದುಕೊಳ್ಳುತ್ತೇನೆ ..ಏನು ಮಾಡದೇ ಟೈಮ್ ವೇಸ್ಟ್ ಮಾಡುವುದು ಕೂಡಾ ರಿಲಾಕ್ಸಿಂಗ್ ಆಗಿರುತ್ತದೆ .’ಹೌ ಟು ರಿಲಾಕ್ಸ್’ ಪುಸ್ತಕ ಕೊಂಡು ಓದಲು ಸಮಯವಿಲ್ಲ ಅಂತ ಚಡಪಡಿಸುವ ಬದಲು ಹಾಗೇ ಸುಮ್ಮನೆ ಕೂರುವುದು ಎಷ್ಟೋ ವಾಸಿ . ಓಲೆ ಮೇಲೆ ಹಾಲಿಡುವಷ್ಟರಲ್ಲಿ ಪತಿರಾಯರು ಹಾಜಿರ್.ನಂತರ ಇಬ್ಬರಿಗೂ ಕಾಫಿ ,ಅಷ್ಟರಲ್ಲಿ ಡಿಮ್ಯಾಂಡ್ ಗಳ ಪಟ್ಟಿ ಶುರುವಾಗಿರುತ್ತದೆ .ಇವತ್ತೇನು ಸ್ಪೆಷಲ್ ಅಡುಗೆ ..?ಏನಾದರೂ ಮಾಡು ಅಂತ ಪತಿರಾಯರ ರಾಗ ಶುರುವಾಗಿರುತ್ತದೆ .ನನಗೋ ವಾರವಿಡೀ ಸ್ಪೆಷಲ್ ಮಾಡಿ ಸಾಕಾಗಿರುತ್ತದೆ.ಸ್ವಲ್ಪ ಹೊತ್ತು ಅದರ ಬಗ್ಗೆಯೇ ಚರ್ಚೆ .ಮಗನೂ ದನಿಗೂಡಿಸುತ್ತಾನೆ..’ಅಮ್ಮಾ ..,ಗೋಬಿ ಮಂಚೂರಿಯನ್ ಮಾಡು. ಈಗ ಎಂ .ಟಿ .ಆರ್ ಮಿಕ್ಸ್ ಬರುತ್ತಂತೆ .ತುಂಬಾ ರುಚಿಯಾಗಿರುತ್ತೆ ಅಂತ ಫ್ರೆಂಡ್ ಹೇಳ್ತಾ ಇದ್ದ ‘.ಫ್ರೆಂಡ್ ಹೇಳಿದ್ರೆ ಮುಗೀತು ,ನಾನು ಮಾಡಲೇ ಬೇಕು..ಮಗಳದು ಇನ್ನೊಂದು ಸ್ಟೈಲ್.”ನಾನು ಫ್ರೆಂಡ್ಸ್ ಬಳಿ ಕೇಳಿ ಕಲ್ತಿದೀನಿ …ಇಟಾಲಿಯನ್ ಸ್ಪೆಷಲ್ ..ಬ್ರೋಕೊಲಿ ಪಾಸ್ತ ಮಾಡ್ತೀನಿ .ಈಗಲೇ ಹೋಗಿ ತರ್ತೀನಿ .ಇವತ್ತು ಮಧ್ಯಾಹ್ನ ನನ್ನದೇ ಸ್ಪೆಷಲ್ “.ಹೂಂ ….ನನಗೆ ಗೊತ್ತು ..ಇವಳ ಸ್ಪೆಷಲ್ ಕತೆ .ಅಡಿಗೆ ಮನೆಯಿಡೀ ಅಡಿಮೇಲಾಗಿರುತ್ತದೆ.ಮಧ್ಯದಲ್ಲಿ ಫೋನ್ ನಲ್ಲಿ ಮಾತಾಡಿಕೊಂಡು ಪಾಸ್ತ ಹೋಗಿ ಮಡ್ಡಿಯಾಗಿರುತ್ತದೆ.ಮತ್ತೆ ಅಡುಗೆ ಬೇರೆ ನಾನು ಮಾಡಬೇಕು. ನೀವ್ಯಾರೂ ಅಡುಗೆ ಮನೆಗೆ ಬರಬೇಡಿ ,ಗೋಬಿ ಇಲ್ಲ ಏನೂ ಇಲ್ಲ ಅಂತ ಗಲಾಟೆ ಮಾಡಿ ಎಲ್ಲರನ್ನೂ ಸುಮ್ಮನಾಗಿಸುತ್ತೇನೆ.ಮಗ ಹಲ್ಲು ಕೂಡಾ ಉಜ್ಜದೆ ಕಾರ್ಟೂನ್ ಹಾಕಿಕೊಂಡು ಕೂರುತ್ತಾನೆ.ಮಗಳು’ ಹಿ ಡ್ಯೂಡ್ ‘ ಅಂತ ಮೊಬೈಲ್ ನಲ್ಲಿ ಮಾತಾಡಕ್ಕೆ ಶುರು .ಆ ಕಡೆಯ ಡ್ಯೂಡ್ ಹುಡುಗನಾ ಹುಡುಗಿಯಾ ಗೊತ್ತಾಗಲಿಲ್ಲ . ಪತಿರಾಯರು ಪೇಪರ್ ಹಿಡಿದುಕೊಂಡು ಕುಳಿತರೆ ಮುಗೀತು .ಈ ಕಡೆ ಏನಾದರೂ ಗೊತ್ತಾಗದು .ನಾನು ನನ್ನ ಸಂಗ್ರಹದ ಅಡುಗೆ ಪುಸ್ತಕಗಳ ಮೇಲೆ ಒಮ್ಮೆ ಕಣ್ಣಾಡಿಸುತ್ತೇನೆ …. ಯಾವುದೂ ….ಯಾಕೋ ಮಾಡಲು ಸರಿ ಹೋಗುವುದಿಲ್ಲ .ಒಂದು ಸಾಮಾನು ಇದ್ದರೆ ಇನ್ನೊಂದು ಇಲ್ಲ . ಇದು ಹೊಸತೇನಲ್ಲ ….ಯಾವಾಗಿನ ಕತೆ …!!!”ಅಡುಗೆ ಪುಸ್ತಕ ಓದಿ ನೀನು ಕೊನೆಗೆ ಬರೀ ಸಾರು ಮಾಡುತ್ತೀ ..ನಂಗೊತ್ತು “…ಮಗಳು ಸ್ಟೇಟ್ ಮೆಂಟ್ ಕೊಟ್ಟಾಯ್ತು …..
ಮತ್ತದೇ ಮಾಮೂಲಿ ಸಾರು ,ಹಪ್ಪಳ ,ಬೀನ್ಸ್ ಪಲ್ಯದ ಊಟ ತೆಪ್ಪಗೆ ಕುಳಿತುಕೊಂಡು ಎಲ್ಲರೂ ಮಾಡುತ್ತಾರೆ.ಎಲ್ಲರಿಗೂ ಏನೋ ಅಸಮಾಧಾನ. ಒಬ್ಬರ ಮುಖ ಇನ್ನೊಬ್ಬರು ನೋಡಲು ತಯಾರಿಲ್ಲ .ಇನ್ನು ಮುಂದಿನ ಭಾನುವಾರದಿಂದ ಒಂದು ಹೊಸ ಬದಲಾವಣೆ ಆಗಲೇಬೇಕು .. ,ಏನಾದರೂ ಹೊಸತನ ತರಬೇಕು ಅಂತ ಗಹನವಾದ ಚರ್ಚೆಯಾಗುತ್ತದೆ .’ನನಗೆ ಚೈನೀಸ್ ಹೋಟೇಲಿಗೆ ಹೋಗಬೇಕು ‘ಅಂತ ಮಗ ,’ನನಗೆ ಇಟಾಲಿಯನ್ ‘ಅಂತ ಮಗಳು ….ಪತಿರಾಯರಿಗೆ ನಾರ್ತ್ ಇಂಡಿಯನ್ ….ಹೂಂ ….ನನ್ನ ಕೇಳುವವರು ಯಾರಿದ್ದಾರೆ …??ನನಗೆ ಅಡುಗೆ ಮನೆಗೆ ರಜ ಸಿಕ್ಕರೆ ಅಷ್ಟೇ ಸಾಕು ಅಂತ ಕಾಯುತ್ತಿದ್ದೆ .ಯಾವ ಊಟ ಆದರೇನು …?ಎಲ್ಲ ಊರಿನ ವೈವಿಧ್ಯ ಸವಿಯಲು ನನಗೆ ಖುಷಿಯೇ ….ಇನ್ನು ಪ್ರತೀ ಭಾನುವಾರದ ರಾತ್ರಿಯ ಊಟ ಹೋಟೇಲಿನಲ್ಲಿ ಅಂತ ಅಂತಿಮ ನಿರ್ಧಾರವಾಯಿತು .ಒಂದೊಂದು ಭಾನುವಾರ ಒಬ್ಬೊಬ್ಬರ ಇಷ್ಟದ ಹೋಟೇಲ್ ,ಐಸ್ ಕ್ರೀಂ ಮಾತ್ರ ಯಾವಾಗಲೂ ಒಂದೇ ಕಡೆ .ಯಾರೂ ಗಲಾಟೆ ಮಾಡಬಾರದು ಅಂತ ನಾನು ಹೇಳಿ ಜಡ್ಜರ ಪಾತ್ರ ವಹಿಸಿದೆ .
ಭಾನುವಾರಕ್ಕೆ ಅಂತ ಇಟ್ಟ ಕೆಲಸಗಳೆಲ್ಲ ಮತ್ತೆ ಸೋಮವಾರವೇ …..ಮುಗಿಯುವುದು .ನುಡಿಮುತ್ತುಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕು .ಏನಂತೀರಾ ..?ನಿನ್ನೆಯ ಕೆಲಸ ಇಂದು ಮಾಡು ….ಇಂದಿನ ಕೆಲಸ ನಾಳೆ ಮಾಡು ….ನಾಳೆಯ ಕೆಲಸ ನಾಡಿದ್ದು ಮಾಡು .[ಮೊನ್ನೆಯ ಕೆಲಸ ಉಳಿದರೆ ಮಾಡಲೇಬೇಡ ]ಒಂದು ದಿನ ಸೋಮಾರಿಯಾದರೆ ತಪ್ಪೇನಿದೆ ..?ಅಲ್ವಾ ..?








haha join the league!! enjoyed
🙂
malathi S
Thanks..Malathi….
ಸಂಡೇ ಸಂಕಟಗಳ ‘ಸ್ವಗತ ಹರಟೆ’ಸೊಗಸಾಗಿದೆ ಸಖತ್ತಾಗಿದೆ!
ಇಷ್ಟಾಅಯ್ತು.
🙂
ಘರ್ ಘರ್ ಕೀ ಕಹಾನೀ! ನಿಮ್ಮ ಬರಹ ಸಖತ್ತಾಗಿದೆ ವೀಣಕ್ಕಾ..
Rashmi mattu Joshiyavarige…..dhanyavadagalu..:)
Sogasada Lekhana Veena.