ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಭಾಗ್ಯದಕ್ಕಿಯನ್ನು ಕಳಪೆ ಎನ್ನಬೇಡಿ..’ ಲಲಿತಾ ಸಿದ್ದಬಸವಯ್ಯ

ಲಲಿತಾ ಸಿದ್ದಬಸವಯ್ಯ

ನಮ್ಮ ಮನೆಗೆ ಮತ್ತು ಪಕ್ಕದ ಮನೆಗೆ ಬರುವ ಕೆಲಸಗಿತ್ತಿಯರಾದ ಐದು ಜನ ಹೆಣ್ಣುಮಕ್ಕಳಿಂದ ನಾನು ತಲಾ ಐದು ಕೇಜಿಯಂತೆ ಅನ್ನಭಾಗ್ಯದ ಅಕ್ಕಿಯನ್ನು ಕೇಜಿಗೆ ಇಪ್ಪತ್ತು ರೂಪಾಯಿಯಂತೆ ಕೊಂಡುಕೊಂಡು ಅದನ್ನು ಜರಡಿಯಾಡಿ ಕೇರಿ ಬಳಸುತ್ತಿದ್ದೇನೆ. ಕೇಜಿಗೆ ಒಂದುವರೆ ಅಥವಾ ಅರಪಾವು ನುಚ್ಚು ಹೊರಟಿದ್ದು ಇದು ಏನೂ ಹೆಚ್ಚಲ್ಲ.
ಈ ನುಚ್ಚಿನಿಂದ ನಾನು ದೋಸೆ, ಇಡ್ಲಿ, ಬಾಂಡ್ಲಿ ರೊಟ್ಟಿ ,ಓಡಪ್ಪೆ ಮಾಡಿದ್ದೇನೆ. ಇವೆಲ್ಲವೂ 45 ರೂಪಾಯಿ ಬೆಲೆಯ ಮಸೂರಿ ಅಕ್ಕಿಯಲ್ಲಿ ಮಾಡಿದಾಗ ಇದ್ದ ರುಚಿಯ ಹಾಗೆ ಇನ್ನೊಂದು ಕೈ ಮಿಗಿಲಾಗೇ ಇವೆ. ಗಟ್ಟಿ ಅಕ್ಕಿಯಿಂದ ಮಾಡಿದ ಅನ್ನದ ಒಂದೊಂದು ಅಗಳು ಒಂದೊಂದು ಸಣ್ಣಗಾತ್ರ ಮುತ್ತಿನಷ್ಟಿದ್ದು ಒಂದು ಹಿಡಿ ಅನ್ನ ಉಂಡರೆ ಅದು ಮೂರುಹಿಡಿ ಮಸೂರಿ ಅಕ್ಕಿ ಅನ್ನಕ್ಕೆ ಸಮ. ಏಕೆಂದರೆ ಮಸೂರಿ ಅಕ್ಕಿಯ ಅನ್ನ ಮಲ್ಲಿಗೆ ಹೂವಿನ ಹಾಗೆ ಮೃದುವಾಗಿ ಬಾಯಿಗಿಟ್ಟರೆ ಕರಗುತ್ತದೆ. ಮತ್ತು ಹೊಟ್ಟೆಯಲ್ಲೂ ಅಷ್ಟೇ ಬೇಗ ಕರಗುತ್ತದೆ. ಈ ಭಾಗ್ಯದ ಅಕ್ಕಿಯ ಮೂರುಹಿಡಿ ಅನ್ನ ಒಂದು ಮುದ್ದೆಯುಂಡೆಗೆ ಸಮವಾಗಿ ಹೊಟ್ಟೆಯಲ್ಲಿ ಕೂತು ಗಟ್ಟಿಯಾಗಿರುತ್ತದೆ. ಕೈಕಾಲಿಗೆ ಬಲವೂ ಇರುತ್ತದೆ. ನಾಜೂಕಿಲ್ಲ ಎನ್ನುವುದರ ಹೊರತಾಗಿ ಇದರಿಂದ ಹೊಟ್ಟೆಕಾಯಿಲೆ ಏನನ್ನೂ ನಾನು ಅನುಭವಿಸಿಲ್ಲ. ಸತತ ಇಪ್ಪತ್ತು ದಿನ ಪ್ರಯೋಗಕ್ಕೇ ಉಂಡು ನೋಡಿದ್ದೇನೆ. ಇದರಲ್ಲಿ ಮಾಡಿದ ನಿಪ್ಪಟ್ಟು ಕೂಡಾ ಕುರುಕಲಾಗಿ ರುಚಿಯಾಗಿರುತ್ತವೆ. ಮದ್ದೂರುವಡೆ ಕೂಡಾ , ಹಾಗೇ ತಂಬಿಟ್ಟೂ ಯಾತರಲ್ಲೂ ಕಡಿಮೆಯಿಲ್ಲದ ರುಚಿ ಬರುತ್ತೆ.

ಸಕ್ಕರೆ ಕಾಯಿಲೆಗೆ ರಾಗಿಯನ್ನು ಸೂಚಿಸುವದರಲ್ಲಿ ಅದರ ತಾಳಿಕೆಯೇ ಪ್ರಮುಖಾಂಶ. ಅದು ಅನ್ನದಂತೆ ಪದೇ ಪದೇ ಉಣ್ಣುವದರತ್ತ ಚಿತ್ತ ಎಳೆಯುವುದಿಲ್ಲ. ಗುಂಡು ಕೂತಂತೆ ಕೂತು ದಿನಕ್ಕೆರಡು ಊಟಕ್ಕೆ – ಅಂದರೆ ನೆಟ್ಟಗೆ ಒಂದು ಉಂಡೆ ಉಂಡರೆ – ನಿಮ್ಮನ್ನು ಕಟ್ಟಿಹಾಕುತ್ತದೆ. ನಾವುಣ್ಣುವ ಎಲ್ಲ ತಿನಿಸಲ್ಲೂ ಇಷ್ಟೊ ಅಷ್ಟೊ ಸಕ್ಕರೆಯಿದ್ದೇ ಉಂಟು. ಅದಕ್ಕೇ ಒಳಹೊಗುವ ಆಹಾರದ ಪ್ರಮಾಣವೇ ಕಡಿಮೆಯಾಗಲೀ ಎಂದೇ ರಾಗಿ ಬಳಸುವುದು ಉತ್ತಮಾದಿ ಉತ್ತಮ.ಇದರಲ್ಲಿ ಸಕ್ಕರೆ ಅಂಶ ಇತರೆ ಕಾಳುಕಡಿಗಿಂತ ಕಡಿಮೆಯೂ ಹೌದು. ಇದೇ ಕೆಲಸವನ್ನು ಅಂದರೆ ಹೊಟ್ಟೆಯಲ್ಲಿ ಗಟ್ಟಿಯಾಗುಳಿಯುವ ಕೆಲಸವನ್ನು ಭಾಗ್ಯದ ಅಕ್ಕಿಯೂ ಮಾಡುತ್ತದೆ, ಅಡ್ಡ ತೊಂದರೆಯಿಲ್ಲದೆ. ನನ್ನ ಬಾಲ್ಯದಲ್ಲಿ ಹಾಲುಬ್ಬಲು ಮತ್ತು ಕೊಯಮತ್ತೂರು ಸಣ್ಣ ಎಂಬ ಎರಡೇ ಅಕ್ಕಿ ನಮಗೆ ಕಿವಿ ಮೇಲೆ ಬೀಳುತ್ತಿದ್ದವು. ಮನೆಯಲ್ಲಿ ಹಿರಿಯರು ಹಾಲುಬ್ಬಲನ್ನು ಅದರ ತಾಳಿಕೆ ಗುಣಕ್ಕೆ ಸೀರುಚಿಗೆ ಕೊಂಡಾಡಿ ಕೊಯಮತ್ತೂರು ಸಣ್ಣವನ್ನು ಹೀಯಾಳಿಸುತ್ತಿದ್ದರು . ಆದರೆ ಈ ಸಣ್ಣಕ್ಕಿ ಶ್ರೀಮಂತಿಕೆ ಸಂಕೇತವಾಗಿತ್ತು, ಹೆಚ್ಚುವರಿಗಳಲ್ಲಿ ನಾಲ್ಕು ಕಾಸು ಹಚ್ಚಾದರೂ ಈ ಸಣ್ಣಕ್ಕಿ ಭೋಜನ ಮಾಡಿಸಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಆಮೆಲಾಮೇಲೆ, ಹಂಸ , ಐ ಅರ್ 8 , ಇತರೆ ತಳಿ ಬಂದು ಕ್ರಮೇಣ ಅವೂ ಇಲ್ಲವಾಗಿವೆ. ಈಗ ಮಸೂರಿ ಅಕ್ಕಿಒಂದೇ ಕೇಳುತ್ತಿದೆ. ಆ ಹಾಲುಬ್ಬಲು ಬಸಿಯುವಾಗ ಮನೆಯಲ್ಲಿ ಒಂದುತರದ ಘಮಲು ತುಂಬುತ್ತಿತ್ತು. ಅದು ಈಗಲೂ ನನ್ನೊಳಗಿದೆಯೇನೋ ಅನ್ನಿಸುತ್ತದೆ. ಅ ಘಮಲಿಲ್ಲದಿದ್ದರೂ ರುಚಿ ಮತ್ತು ತಾಳಿಕೆಯಲ್ಲಿ ಭಾಗ್ಯದ ಅಕ್ಕಿ ಸ್ವಲ್ಪ ಹಾಲುಬ್ಬುಲಿಗೆ ಹತ್ತಿರ ಅಂತ ನನಗನ್ನಿಸಿತು, ತಿಳಿದವರು ಇದನ್ನು ಪುಷ್ಟೀಕರಿಸಬೇಕು.
ಇಷ್ಟೆಲ್ಲ ಹೇಳಿದ್ದು ಈ ಭಾಗ್ಯದಕ್ಕಿಯನ್ನು ಕಳಪೆ ಎನ್ನಬೇಡಿ ಎನ್ನಲು. ಆದರೆ ನನಗೆ ಅಕ್ಕಿ ಕೊಟ್ಟ ಒಬ್ಬ ಹೆಣ್ಣುಮಗಳ ಮನೆಯಲ್ಲೂ ಇದನ್ನು ಉಣ್ಣುತ್ತಿಲ್ಲ. ತಿರಸ್ಕಾರವೇ ಇದೆ. ಈ ಅಕ್ಕಿಯನ್ನು ವಿತರಿಸಿ ಕೈ ಕಟ್ಟಿ ಕೂತರೆ ಆಗುವುದಿಲ್ಲ ,ಸಕರ್ಾರ ಅಂದರೆ ಆಹಾರ ಇಲಾಖೆ ಅದರ ಗುಣಮಟ್ಟದ ಬಗ್ಗೆ ಸ್ಪಷ್ಟ ಪಡಿಸುವುದು ಅದರ ಜವಾಬ್ದಾರಿ ವಿನಾ ಏನೋ ಉಪಕಾರವಲ್ಲ. ಮೊದಲು , ಭಾಗ್ಯದಕ್ಕಿ ಕೊಂಡವರಲ್ಲಿ ಉಂಟು ಮಾಡಿರುವ ಬಿಟ್ಟಿ ಅಕ್ಕಿ ಅಂದ ಮೇಲೆ ಕಳಪೆ ಅಕ್ಕಿಯೇ ಎಂಬ ಕೀಳರಿಮೆ ದೂರ ಮಾಡಿ ಈ ಅಕ್ಕಿಯ ಬಗ್ಗೆ ಅವರಲ್ಲಿ ಆದರ ಹೆಮ್ಮೆ ಮೂಡಿಸುವುದು ಆಹಾರ ಇಲಾಖೆ ಕೆಲಸಾ ಮೊದಲ ಕೆಲಸ. ಗೋಧುಮ ಶಾಲಿ ಅದೂ ಇದೂ ಎಂದು ಸಕ್ಕರೆ ಕಯಿಲೆಗೆ ರಾಮಬಾಣವೆಂದು ಜಾಹೀರಾತು ಪ್ರಾತ್ಯಕ್ಷಿಕೆ ಕೊಡುತ್ತ ಸಾಧಾರಣ ಅಕ್ಕಿಗೇ ಗಿರಾಕಿ ಹುಟ್ಟಿಸಿಕೊಳ್ಳುತ್ತಿರುವ ಬೇರೆ ಬೇರೆ ಬ್ರಾಂಡ್ ಎದುರು ನಮ್ಮ ಸಕರ್ಾರಕ್ಕೆ ಬಡಿದಿರುವ ಕೇಡೇನು , ಇರುವ ಗುಣ ಹೇಳಲು.
ಇನ್ನು ಈ ಭಾಗ್ಯದಕ್ಕಿಯನ್ನು ಉಣ್ಣಲು ಬಳಸದೆ ಹೀಗೆ ಈ ಹೆಂಗಸರು ಮಾರಿಕೊಳ್ಳುವುದೇಕೆಂಬುದನ್ನೂ ನಾನು ವಿಷದಪಡಿಸಿಕೊಂಡಿದ್ದೇನೆ. ಈಗ ರಾತ್ರಿ ಎರಡು ಗಂಟೆ , ನಾಳೆ ಅದನ್ನು ಬರೆಯುವೆ.
 

‍ಲೇಖಕರು G

25 June, 2015

2 Comments

  1. ಅಕ್ಕಿಮಂಗಲ ಮಂಜುನಾಥ

    ಭಾಗ್ಯದ ಅಕ್ಕಿಯನ್ನು ಕಳಪೆ ಎನ್ನುವವರು ಕಳಪೆ ಜನಗಳೇ. ಒಮ್ಮೊಮ್ಮೆ ಕಳಪೆ ಗುಣಮಟ್ಟದಿಂದಿರುವ ಅಕ್ಕಿಯೂ ಸರಬರಾಜಾಗುವುದುಂಟು.ಕಾರಣ ಅಲ್ಲಿನ ಅವ್ಯವಹಾರವೂ ಇರಬಹುದು ಮತ್ತು ಅಜಾಗರೂಕತೆಯೂ ಆಗಬಹುದು. ಕೆಲಸದ ಆಳುಗಳೇ ಇಂತಹ ಅಕ್ಕಿಯನ್ನು ತಮ್ಮ ಒಡೆಯರಿಗೆ (ಹಾಗೆ ಅಂದುಕೊಂಡಿರುತ್ತಾರೆ) ಮಾರುತ್ತಾರೆಂದರೆ ಅವರು ನಿಜಕ್ಕೂ ಸುಸ್ಥಿತಿಯಲ್ಲಿರುವಂತಹ ಜನರೇ.ಬದುಕಲಿಕ್ಕೆ ಯಾವ ಕೆಲಸವಾದರೇನು ಎಂಬ ಕಾರಣಕ್ಕೆ ಮತ್ತು ಅದರಲ್ಲಿನ ವಿಶೇಷ ಸವಲತ್ತುಗಳಿಗೆ ಆಸೆ ಪಟ್ಟು ಇಂತಹ ಕೆಲಸ ಮಾಡುತ್ತಾರೆಂದು ಕೇಳಿದ್ದೇನೆ. ಏನೇ ಆಗಲಿ ಅವರು ಮಾರುವುದು ತಪ್ಪು. ಹಾಗೆಯೇ ಸುಸ್ಥಿತಿಯಲ್ಲಿರುವಂತ ಜನ ಅವರಿಂದ ಕೊಳ್ಳುವುದೂ ಅವರಿಗೆ ಪ್ರೋತ್ಸಾಹ ನೀಡಿದಂತೆಯೇ.

  2. Anonymous

    ಅವರು ಏನಾದರೂ ಕಾರಣಕ್ಕೆ ಮಾರಲು ಮುಂದೆ ಬರಲಿ. ನೀವಂತೂ ಅದನ್ನು ಪ್ರೋತ್ಸಾಹಿಸಬೇಡಿ.
    ಅನಿರುದ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading