ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಪತ್ರ ಅವನಿಗಾಗಿ…’ – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ

ನನ್ನ ಹೆಸರು ದಿವ್ಯಾ. ನಮ್ಮಪ್ಪ ಜೈಲರ್, ಅಮ್ಮ ಮನೆಯ ಯಾಜಮಾನ್ತಿ. ಒಬ್ಬ ತಮ್ಮ .ಮಾತಾಡುತ್ತಲೇ ಇರುವ ನನಗಿರುವ ಸ್ನೇಹಿತರ ಪಟ್ಟಿ ದೊಡ್ಡದು ಆದ್ದರಿಂದ ಅದು ಈಗ ಬೇಡ . ಈ ಬರಹವನ್ನು ಬರೀಬೇಕು ಅಂತ ಕೂತದ್ದು ಅವನಿಗಾಗಿ…..
ನಾವು ಆಗ ಒಂದು ನಗರದಲ್ಲಿದ್ವಿ, ಆ ನಗರಕ್ಕಿದ್ದದ್ದು ಒಂದೇ ಜೈಲು. ಕಳ್ಳರು ಕಡಿಮೆಯಾಗಿದ್ದ ಕಾಲ ಅನ್ಸತ್ತೆ. ಆ ಏಕ ಮಾತ್ರ ಜೈಲಿನ ಪಕ್ಕದಲ್ಲೇ ಜೈಲರ್ ವಸತಿ, ಅದೇ ನಮ್ಮನೆ. ಜೈಲಿಗೂ ನಮ್ಮನೆಗೂ ಮಧ್ಯೆ ಒಂದು ಗೋಡೆ , ಒಂದು ಸಣ್ಣ ಗುಲಾಬಿ ತೋಟ. ನಮ್ಮಪ್ಪಂಗೆ ಮೇಲಿಂದ ಕೆಳಗಿಂದ ಎಲ್ಲೆಲ್ಲಿಂದ ದುಡ್ಡು ಬರ್ತಿತ್ತು ಗೊತ್ತಿಲ್ಲ. ಒಂದ್ಸಾರಿ ಪ್ರಾಮಾಣಿಕತೆ ಅಂತೇನೋ ಮಾತಾಡಿದ್ದಕ್ಕೆ “ಸುಮ್ನೆ ಇರಮ್ಮಿ ಪುಸ್ತಕದ್ ಬದನೆಕಾಯಿನ ನಂಗೇಳ್ಬೇಡ “ ಅಂದಿದ್ರು. ಹಾಗಂತ ಅಪ್ಪ ಕೆಟ್ಟವನು ಅಂತ ಹೇಳಲಾರೆ. ಮನುಷ್ಯ ಸಹಜವಾದ ದೌರ್ಬಲ್ಯಗಳು ಇದ್ದಿರಬಹುದು.
ನಾನು ಓದೋದ್ರಲ್ಲಿ ಅಷ್ಟಕ್ಕಷ್ಟೇ. ನಾವು ಓದೋವಾಗ ತಿಂಗಳು ತಿಂಗಳು ಪರೀಕ್ಷೆ ಮಾಡಿ ಯಾರೆಲ್ಲಾ ಎಲ್ಲಾ ವಿಷಯಗಳಲ್ಲಿ ಪಾಸಾಗ್ತಾರೋ ಅವರಿಗೆಲ್ಲಾ   rank ಕೊಡ್ತಿದ್ರು. ಕ್ಲಾಸಿನಲ್ಲಿದ್ದ ೬೦ಜನರಲ್ಲಿ ಒಂದು ೪೫ ಜನ ಎಲ್ಲಾ ವಿಷಯಗಳಲ್ಲಿ ಪಾಸ್ ಆಗಿದ್ರೆ ೪೫ rank. ಅಷ್ಟರಲ್ಲಿ ನಾನು ಒಂದು ಮೂವತ್ತೈದೋ ನಲವತ್ತನೆವಳಾಗೋ ಇರ್ತ್ತಿದ್ದೆ. ಒಂದು ಬಾರಿ ಹದಿನಾರನೇ rank ಬಂದಿದ್ದಕ್ಕೆ ನಮ್ಮಪ್ಪ ಪೇದೆಗಳಿಗೆ ಸ್ವೀಟು ಕೊಟ್ಟಿದ್ರು ಅಂದ್ರೆ ನನ್ನ ಜಾಣತನವನ್ನ ಊಹಿಸಿಕೊಳ್ಳಿ. ಬೇರೆ ಯಾವುದರಲ್ಲ್ಲಿ ಅಪ್ಪ ಹೇಗೆ ಇರಲಿ ಕೆಲ ವಿಷಯಗಳಲ್ಲಿ ಮಾತ್ರ ಪಕ್ಕಾ ಪೋಲಿಸು. ಮೂರ್ ನಾಲ್ಕು ಕಿಲೋ ಮೀಟರ್ ಇದ್ದ ಸ್ಕೂಲಿಗೆ ನಾವು ನಡೆದೇ ಹೋಗಬೇಕಿತ್ತು. ಅಮ್ಮ ನಿಮ್ಮ ಜೀಪಿನಲ್ಲಿ ಡ್ರಾಪ್ ಮಾಡಿ ಅಂದಿದ್ದಕ್ಕೆ “ನಡದ್ರೆ ನಿನ್ ಮಕ್ಳೆನು ಸವಿಯಲ್ಲ ಬಿಡು” ಅಂದು ಬಿಟ್ಟಿದ್ರು. ನಂ ಸ್ಕೂಲಿಗೆ ಹೋಗೋಕೆ ಒಂದು ಸಮೀಪದ ದಾರಿ ಇತ್ತು. ಅದು ಈಚೆ ಬದಿಯಿಂದ ರೇಲ್ವೆ ಸ್ಟೇಶನ್ ಒಳಹೋಗಿ , ಹಳಿ ಗುಂಟ ನಡೆದು ಆಚೆ ಬದಿಯ ರಸ್ತೆಯನ್ನು ಸೇರುವುದಾಗಿತ್ತು. ನನ್ನ ಮತ್ತು ತಮ್ಮನ ಸ್ನೇಹಿತರು ಬೇರೆ ಬೇರೆಯಾದ್ದರಿಂದ ಅವನ ಪಾಡಿಗೆ ಅವನು ನನ್ನ ಪಾಡಿಗೆ ನಾನು ಹೋಗುತ್ತಿದ್ದೆವು. ರೇಲ್ವೆ ಹಳಿಯ ಒಂದು ಪಕ್ಕದಲ್ಲಿ ರೇಲ್ವೆ ನೌಕರರ ವಸತಿ ಗೃಹಗಳಿದ್ದವು , ಅಲ್ಲಿಂದಲೂ ಎಷ್ಟೋ ಜನ ನಮ್ಮ ಕಾನ್ವೆಂಟಿಗೆ ಮತ್ತು ಪಕ್ಕದ ಹುಡುಗರ ಕಾನ್ವೆಂಟಿಗೆ ಬರ್ತಿದ್ರು. ಅದ್ರಲ್ಲಿ ಅವನೂ ಒಬ್ಬ.
ಅವನು ಎಂದರೆ ? ಹೆಸರು ಸಂಪತ್ , ನಾಮ ಇಟ್ಕೋತ್ತಿದ್ದ ಅಯ್ಯಂಗಾರಿ. “ದುಡ್ಡಿಲ್ಲ ಕಾಸಿಲ್ಲ ಹೆಸರು ಮಾತ್ರ ಸಂಪತ್ತಯ್ಯoಗಾರಿ” ಅಂತ ನಮ್ಮಜ್ಜಿ ಗಾದೆ ಹೇಳೋದು . ಈ ಸಂಪತ್ತುಗೆ ಇಬ್ಬರು ತಂಗೀರು , ಹಳಿಯ ಪಕ್ಕ ಸಣ್ಣ ಮನೆ. ದಿನಾ ಸ್ಕೂಲಿಗೆ ಹೋಗೋವಾಗ ನಂಗೆ ಸಿಗ್ತಿದ್ದ. ಸಿಗ್ತಿದ್ದ ಅಂದ್ರೆ ನಾನು ಅವನನ್ನ ನೋಡ್ತಿದ್ದೆ ಅಷ್ಟೇ. ಅವನ ಹಿಂದೆ ಹಿಂದೆ ಹೋಗ್ತಿದ್ದೆ. ಅಸಾಮಿ ಒಂದು ದಿನಾನೂ ತಿರುಗಿಯೂ ನೋಡಲಿಲ್ಲ. ಸಕತ್ತಾಗಿ ಓದ್ತಿದ್ದ, ಕ್ಲಾಸಿಗೆನು ಸ್ಕೂಲಿಗೇ ಫಸ್ಟು, ಅವನ ಸ್ಕೂಲಲ್ಲಿ ಸಾಲದು ಅಂತ ನಮ್ಮ ಸ್ಕೂಲ್ನಲ್ಲೂ ಸಿಸ್ಟರ್ಸ್ ನಮಗೆ ಅವನ ಉದಾಹರಣೆ ಕೊಡೋರು. “ಹುಡುಗ ಅವನೇ ಅಷ್ಟು ಓದ್ತಾನೆ ,ನೀವು ಅವನನ್ನ ಮೀರಿಸಬೇಕು “ ಅದೂ ಇದೂ ಅಂತ. ಆದ್ರೆ ನಾನ್ಯಾವತ್ತೂ ಅದನ್ನ ಅಷ್ಟು ಸೀರಿಯಸ್ಸಾಗಿ ತೊಗೊಂಡಿಲ್ಲ , ತೊಗೊಂಡ್ರೂ ಏನೂ ಉಪಯೋಗ ಇರ್ಲಿಲ್ಲ, ಆ ಮಾತು ಬೇರೆ. ಅವನು ಮಾತ್ರ ರಸ್ತೇಲಿ ಯಾವುದೋ ಲೋಕದಲ್ಲಿದ್ದೋನ ಹಾಗೆ ಹೋಗ್ತಾ ಇರ್ತಿದ್ದ. “ಏನ್ ಮಹಾ ನ್ಯೂಟನ್ ಥರ ಆಡ್ತಾನೆ” ಅಂತ ನಾನು ಬೈಕೊತಿದ್ದೆ. ನಂ ಸ್ಕೂಲಲ್ಲಿ ಅವನಿಗೆ ನ್ಯೂಟನ್ ಅನ್ನೋ ಹೆಸರೇ ಇಟ್ಟಿದ್ವಿ. ಹೀಗೆ ನಾನು ಹಿಂದೆ ಅವನು ಮುಂದೆ ಅಂತ ಸುಮಾರು ಒಂದೂವರೆ ವರ್ಷ ಕಳಿತು. “ಅವನು ಮೊದ್ಲು ಕಂಡಿರ್ಲಿಲ್ವಾ ” ಅಂತ ಕೇಳಬೇಡಿ ಅದು ನನಗೆ ನೆನಪಿಲ್ಲ.

ನಮ್ಮನೆ ಪಕ್ಕ ಒಂದು ಟಾಕಿಸಿತ್ತು. “ಈ ಪಕ್ಕ ಜೈಲು , ಆ ಪಕ್ಕ ಟಾಕೀಸು ಇದೆಂತಾ ಮನೆ , ಬೇರೆ ಮನೆಗೆ ಹೋಗಣ “ ಅಂತ ಅಮ್ಮ ಅಂದ್ರೆ “ಫ್ರೀಯಾಗ್ ಕೊಟ್ರೆ ಹೆಂಗುಸ್ರು ಹಿಂಗೆ ..ಸುಮ್ನೆ ಹೋಗ್ “ ಅಂತ ಅವಾಜ್ ಹಾಕಿದ್ರು ಅಮ್ಮನ ಪತಿ ದೇವರು.
ಆದ್ರೆ ನಂಗೆ ತಮ್ಮಂಗೆ ಮಾತ್ರ ಆ ಪಕ್ಕ ಏನಾರ ಹಾಳ್ ಬಿದ್ ಹೋಗ್ಲಿ , ಈ ಪಕ್ಕದ ಟಾಕೀಸು ಮಾತ್ರ ಸಿಕ್ಕಾಪಟ್ಟೆ ಇಷ್ಟ ಆಗ್ತಿತ್ತು. ಹೊಸ ಸಿನೆಮಾ ಬಂದ್ರೆ ಅಪ್ಪನಿಗೆ ಗೊತ್ತಾಗದ ಹಾಗೆ ಪೇದೆಗಳ ಹತ್ತಿರ ಟಿಕೆಟ್ ತರಿಸಿ ನಾವು, ಅಮ್ಮ ಕೂತು ಪಟ್ಟಾಗಿ ನೋಡಿ, ಮಧ್ಯೆ ತಮ್ಮ ಅಲ್ಲಿ ಚಿಪ್ಸ್ ಮಾರೋನ್ ಹತ್ರ ಹೋಗಿ ಫ್ರೀಯಾಗಿ ಚಿಪ್ಸ್ ತಂದು, ನಾವು ತಿಂದು ಬರ್ತಿದ್ವಿ. ಪುಣ್ಯಕ್ಕೆ ನಮ್ ಡ್ಯಾಡಿಗೆ ಇದು ನಾವು ಊರು ಬಿಡೋ ತನಕ ಗೊತ್ತಾಗಲಿಲ್ಲ. ಇಲ್ಲಾಂದ್ರೆ ಜೈಲು ಕಾಯೋ ಬದಲು ಜೈಲೋಳಗೆ ಅವರೋ ನಾವೋ ಇರ್ತಿದ್ವೇನೋ ? ಇಂತಿಪ್ಪ ಆ ಟಾಕೀಸಿನಲ್ಲಿ ನಾವು ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಅಂತ ಒಂದು ಸಿನೆಮಾ ನೋಡಿದ್ವಿ. ಸ್ವಲ್ಪ ದಿನಕ್ಕೆ ಸಂಪತ್ತು ಕಂಡ.
ನಾನು ಕಷ್ಟಪಟ್ಟು ಒಂಭತ್ತನೇ ಕ್ಲಾಸಿನ ಪರೀಕ್ಷೆ ಮುಗಿಸಿ ಹಳ್ಳಿಗೆ ಹೋಗೋಕೆ ಕಾಯ್ತಾ ಇದ್ದೆ. ಅಪ್ಪನದ್ದು ಹೊಲ ಇತ್ತು ಹಳ್ಳಿಲಿ. ಹಳ್ಳಿ ಗಿಳ್ಳಿ ಅಂತ ಏನೂ ಆಕರ್ಷಣೆ ಇಲ್ಲದಿದ್ರೂ ನಾನು, ತಮ್ಮ , ಅಮ್ಮ ಅಲ್ಲಿಗೆ ಹೋಗಲೇ ಬೇಕಿತ್ತು. “ಹಳ್ಳಿ ಕೆಲಸ ಕಲಿರಿ” ಅಂತ ನಮಗೆ , “ಇವರಿಗೆ ಸ್ವಲ್ಪ ಬದ್ಕು ಕಲಿಸು” ಅಂತ ಅಮ್ಮಂಗೆ ನಂ ಜೈಲರ್ ಅಪ್ಪಣೆ. ನಾವಿದ್ದ ಊರಲ್ಲಿ ಒಂದು ಲೋಕಲ್ ಪೇಪರ್ ಬರ್ತಿತ್ತು. ‘ನಗರ ಸಮಾಚಾರ ‘ ಅಂತ. ನಾಲ್ಕು ಪುಟದ್ದು . ಮೊದಲ ಪುಟದಲ್ಲಿ ಅರ್ಧ ಪುಟ ನ್ಯೂಸು ಉಳಿದರ್ಧ “ಯಗಚಪ್ಪ ಸ್ಯಾರಿ ಸಿಲ್ಕ್ಸ್ “ ನ ಅಡ್ವಟೇಜು. ಎರಡನೇದರಲ್ಲಿ ಸಿನೆಮಾ ಸುಧ್ಧಿ . ಮೂರನೆದರಲ್ಲಿ ಒಂದಷ್ಟು ಏನೇನೋ ನಾನು ಯಾವತ್ತೂ ಓದಿರದ ಸುಧ್ಧಿಗಳು. ನಾಲ್ಕನೇ ಪುಟದಲ್ಲಿ ಮದುವೆ, ವಿದೇಶ ಪ್ರಯಾಣ , ಶ್ರಧ್ಧಾಂಜಲಿಯ ಫೋಟೋಗಳು , ಇದನ್ನೇ ವೈಯುಕ್ತಿಕ ಆಹ್ವಾನವೆಂದು ತಿಳಿದು ಬಂದು ನಮ್ಮ ಆತಿಥ್ಯ ಸ್ವೀಕರಿಸಿ …ಊಟ ಹೊಡೆದು ಹೋಗಿ ಹೀಗೆ. ನಾನು ಆ ಪತ್ರಿಕೆಯ ಎರಡನೇ ಪುಟ ಮಾತ್ರ ಓದಿ ಮಡಚಿಡುವ ಗಿರಾಕಿ ಅಂತ ಬೇರೆ ಹೇಳಬೇಕಿಲ್ಲ. ಒಂದು ದಿನ ಹೀಗೆ ಇವತ್ತು ಯಾವ ಸಿನೆಮಾಗೆ ಹೋಗಬಹುದು ಅಂತ ನೋಡಿ ಪೇಪರ್ ಮಡಚಿ ಕೆಳಗಿಟ್ಟರೆ ನಾಲ್ಕನೇ ಪುಟದಲ್ಲಿ ಅವನ ಫೋಟೋ ಕಂಡಿತ್ತು. ಮದುವೆಗೆ ಇನ್ನೂ ವಯಸಾಗಿಲ್ಲ , ವಿದೇಶಕ್ಕೆ ಹೋಗೋ ಅಂತ ಸಮಯ ಬಂದಿಲ್ಲ. ಹಾಗಾದ್ರೆ ಇವನಿಗೆ ಏನಾಯ್ತು ? ಅಂತ ನಾನು ಫುಲ್ ಟೆನ್ಶನ್ನಲ್ಲಿ ಮತ್ತೆ ಪೇಪರ್ ಬಿಡಿಸ್ತಾ ಇರೋವಾಗಲೇ ಹಿಂದಿಂದ ಅಪ್ಪ “ನೋಡು ನೋಡು ನಿಮ್ ಕಾನ್ವೆಂಟ್ ಹುಡುಗ ಎಸ.ಎಸ್. ಎಲ್ಸಿ ನಲ್ಲಿ ಡಿಚಿಟಿಞ ಬಂದಿದಾನೆ ಫೋಟೋ ಕೊಟ್ಟಿದಾರೆ , ನೋಡಿ ಕಲಿ “ ಅಂತ ರೆಕಾರ್ಡ್ ಶುರು ಮಾಡಿದ್ರು. ಅವನ ಫೋಟೋ ಕೆಳಗೆ rank ಬಂದಿದ್ದಕ್ಕೆ ಶಾಲಾ ಸಿಬ್ಬಂದಿಯಿಂದ ಅಭಿನಂದನೆ ಅಂತ ಇತ್ತು . ನಾವು ರಜೆ ಮುಗಿಸಿ ಸ್ಕೂಲಿಗೆ ಹೋದಾಗ ಎಲ್ಲಾ ಟೀಚರ್ಸ್ಗಗಳೂ “ ಎಲ್ಲಾ ಊರಲ್ಲಿ ಹುಡುಗಿಯರು ಮುಂದೆ ಆದ್ರೆ ಇಲ್ಲಿ ನೋಡಿ ಆ ಹುಡುಗ rank ಬಂದ” ಅಂತ ಅರ್ಚನೆ ಮಾಡೋದು ಮಾಮೂಲಿಯಾಗಿತ್ತು. ನಾವು ಮಾತ್ರ “ಅಯ್ಯ ನ್ಯೂಟನ್ rank ಬರ್ಲಿಲ್ಲ ಅಂದ್ರೆ ಇನ್ಯಾರ್ ಬರ್ತಾರೆ ಬಿಡು “ ಅಂತ ಆ ವಿಷಯನ ತೇಲಿಸಿಬಿಟ್ವಿ. ಆಮೇಲೆ ಅವನು ಬೇರೆ ಕಾಲೇಜು ಸೇರಿದ ನಾನು ಎಸ್.ಎಸ್.ಎಲ್.ಸಿ ಪಾಸಾಗಿಲ್ಲ ಅಂದ್ರೆ ಹಳ್ಳಿಗೆ ಕಳಿಸ್ತೀನಿ ಅಂತ ನಂ ಸಾಹೇಬ್ರು ಧಮ್ಕಿ ಹಾಕಿದರು, ಎಲ್ಲಾ ಗಲಾಟೆ ಮಧ್ಯೆಯೂ ಅವನು ನಾಲ್ಕೈದು ಬಾರಿ ಹಳಿಯ ಮನೆಯ ಬಳಿ ಕಂಡ. ನಾನು ಎಸ್.ಎಸ್.ಎಲ್.ಸಿ. ಫಸ್ಟ್ ಕ್ಲಾಸ್ನಲ್ಲಿ ಪಾಸಾದೆ ಅಂತ ಅಪ್ಪ ಮತ್ತೆ ಸ್ವೀಟು ಹಂಚಿದ್ರು. ಅವನಿದ್ದ ಕಾಲೇಜಿಗೆ ಸೇರಿಕೊಳ್ಳೋಣ ಅಂತ ಅಂದ್ಕೊತಾ ಇದ್ದೆ , ಅಷ್ಟರಲ್ಲಿ ಅಪ್ಪನಿಗೆ ಟ್ರಾನ್ಸ್ಫರ್ ಆದ ಸುಧ್ಧಿ ಬಂದು ಎಲ್ಲಾ ತಲೆ ಕೆಳಗಾಯಿತು.
ಹೊಸ ಊರು ಹೊಸ ಜನದ ನಡುವೆಯೂ ರೇಲ್ವೆ ಹಳಿ ಕಂಡಾಗಲೆಲ್ಲಾ ಅವನದ್ದೇ ನೆನಪು. ಸ್ಕೂಲಿನ ಗೆಳತಿಯರಲ್ಲಿ ಕೆಲವರು ಅವನ ಕಾಲೇಜು ಸೇರಿಕೊಂಡಿದ್ರು. ಅವರಿಗೆ ಪತ್ರ ಬರೆವಾಗ ಅವನು ಹೇಗಿದಾನೆ ಅಂತ ಕೇಳೋಣ ಅಂದ್ಕೊಂಡೆ. “ಲೆ ದಿವಿ, ಕರ್ಪಿ ನಿನಗ್ಯಾಕೆ ಎಲ್ಲಾ ಬಿಟ್ಟು ಆ ಕುಡುಮಿ ಯೋಚ್ನೆ” ಅಂತ ಆಡಿಕೊಳ್ತಾರೆನೋ ಅಂತ ಹೆದರಿ ಯೋಚನೆ ಬಿಟ್ಟೆ. ಸೆಕೆಂಡ್ ಪಿಯು ರಿಸಲ್ಟು ನಾಳೆ ಅನ್ನೋವಾಗ ಅವನ ನೆನಪು ಹೆಚ್ಚಾಗಿತ್ತು. ಆವತ್ತಿನ ಟಿ.ವಿ. ನ್ಯೂಸ್ ನಲ್ಲಿ ಅವನಿಗೆ ಮತ್ತೆ rank ಬಂದಿದ್ದ ವಿಷಯ ಗೊತ್ತಾಯಿತು. ಮೆಡಿಕಲ್ ಓದ್ತೀನಿ ಅಂತ ಇಂಟರ್ವ್ಯೂ ನಲ್ಲಿ ಹೇಳಿದ. ಆಮೇಲೆ ನಾನೂ ಪಿಯುಸಿ ಪಾಸಾದೆ. ಪಿಯುಸಿಯಲ್ಲಿ ಗಾಜಿನ ಲೋಟ , ಗ್ರಹ ನಕ್ಷತ್ರ , ಕಾಸು ಸೈನು, ಲೆಕ್ಕ ಗಳ ಸವಾಸ ಬೇಡ ಅಂತ ನಾನು ಆರ್ಟ್ಸ್ ತೊಗೊಂಡಿದ್ದಕ್ಕೆ ಪಾಸಾದೆ. ಪಾಸಾದಮೇಲೆ ನಂ ಜೈಲರಿಗೆ ಹೊಸ ಐಡಿಯಾ ಬಂತು, ಒಂದಿನ ಬಂದು “ಡಿಗ್ರಿ ಗಿಗ್ರಿ ಬೇಡ ಮದ್ವೆ ಮಾಡ್ತೀನಿ” ಅಂದ್ರು . ಪುಣ್ಯಕ್ಕೆ ಅಮ್ಮ ಅದೆಲ್ಲಾ ಆಗಲ್ಲ ಡಿಗ್ರಿ ಮಾಡಿದ ಮೇಲೆ ಮದ್ವೆ ಅಂತ ಪಟ್ಟು ಹಿಡಿದು ರಂಪ ಮಾಡಿ ನನಗೂ ಪದವಿಧರೆ ಯಾಗುವ ಅವಕಾಶ ಕೊಟ್ಳು. ಪದವಿ ತರಗತಿಗಳಿಗೆ ನಾನು ನಂ ಹಳ್ಳಿ ಹತ್ರ ಇರೋ ಕಾಲೇಜಿಗೆ ಸೇರ್ಕೊಂಡೆ ಹಾಗಾಗಿ ಹಳ್ಳಿ ಒಡನಾಟ ಜಾಸ್ತಿ ಆಯ್ತು. ಅಪ್ಪ ಹೇಳಿದಹಾಗೆ ಹಳ್ಳಿ ಬದುಕು ಇಷ್ಟ ಆಯ್ತು. ಅಜ್ಜಿ ಜೊತೆ ಹೊಲ ನೋಡ್ಕೊಂಡು , ಕಾಲಿಜಿಗೆ ಹೊಕ್ಕೊಂಡು ನಾನು ಹಳ್ಳಿಲೇ ಉಳಿದ್ಬಿಟ್ಟೆ. ಅಪ್ಪಂಗೂ ಓದಿ ಪಾಸ್ ಆಗ್ತಾಳೆ ಅನ್ನೋ ನಂಬಿಕೆ ಬಂದಿತ್ತೇನೋ ಸುಮ್ನೆ ಇದ್ರು.
ಡಿಗ್ರಿ ಮುಗಿದ ಮೇಲೆ ಏನು ಮಾಡೋದು ಅನ್ನೋ ಪ್ರಶ್ನೆ ನನ್ನನ್ನ ಕಾಡಲೇ ಇಲ್ಲ. ಹೊಲ, ಮನೆ , ಅಜ್ಜಿ , ಸುತ್ತಲಿನ ಒಂದಷ್ಟು ಹೆಂಗಸರು ಮಕ್ಕಳ ಸಮಸ್ಯೆಗಳು ಇವೆಲ್ಲವೂ ನನಗೊಂದು ಸಣ್ಣ ಬೆಳಕು ತೋರಿಸಿದ್ದವು . ಸಂಪತ್ತು , ರೇಲ್ವೆ ಹಳಿ ಎಲ್ಲವನ್ನೂ ನಾನು ಮರೆಯುತ್ತಾ ಇದ್ದೆ , ಮೊನ್ನೇ ಶಾಲೆಯ ಗೆಳತಿಯೊಬ್ಬಳು ಆಚಾನಕ್ಕಾಗಿ ಹತ್ತಿರದ ಪೇಟೆಯಲ್ಲಿ ಸಿಗದೇ ಹೋಗಿದ್ದರೆ.
ಹೊಲಕ್ಕೆ ಬೇಕಾದ ಸಾಮಾನು ಸಲಕರಣೆ ತೊಗೊಳೋಕೆ ಪೇಟೆಗೆ ಹೋಗಿದ್ದೆ. ಅಂಗಡಿಯೊಂದರಲ್ಲಿ ನಿಂತು ವ್ಯಾಪಾರ ಮಾಡುತ್ತಾ ಇರುವಾಗ “ನೀನು ದಿವ್ಯಾ ಅಲ್ಲಾ “ ಅನ್ನೋ ದನಿಗೆ ಹಿಂತಿರುಗಿದೆ. ಶಾಲೆಯ ಗೆಳತಿ ಲಕ್ಷ್ಮಿ ನಗುತ್ತಾ ನಿಂತಿದ್ದಳು . “ಏನೇ ಮದ್ವೆ ಆಗಿ ಮಗು ಜೊತೆ ಸಿಗ್ತಿ ಅಂದ್ರೆ ಅಂಗಡಿಲಿ ಅದೂ ಹಾರ್ಡ್ವೇರ್ ಅಂಗಡಿಲಿ ಸಿಕ್ಯಲ್ಲೇ “ ಅಂದ್ಲು . ನಾನು ಸುಮ್ಮನೆ ನಕ್ಕೆ.
ನಾನು ಡಿಗ್ರಿ ಮಾಡಿದ್ದು , ಹೊಲ ನೋಡ್ಕೋತಾ ಇರೋದು ಅವಳಿಗೆ ಜಗತ್ತಿನ ಈ ಹೊತ್ತಿನ ಅತೀ ಆಶ್ಚರ್ಯದ ಸುಧ್ಧಿಯಾಗಿತ್ತು. ಶಾಲೆಯಲ್ಲಿ “ಏನ್ ಮಾಡ್ತಿಯೇ “ ಅಂದ್ರೆ , “ಮದ್ವೆಯಾಗಿ ನಂ ಅಮ್ಮನ್ ಥರ ಮನೇಲಿ ಹಾಯಾಗಿ ಇರ್ತೀನಿ” ಅಂತಿದ್ದೊಳು ಹೀಗಾದ್ರೆ ಆಶ್ಚರ್ಯನೇ ಅಲ್ವಾ ? . ತದ್ವಿರುಧ್ಧವಾಗಿ ಓದಿನಲ್ಲಿ ಮುಂದಿದ್ದ ಲಕ್ಷ್ಮಿ ಮದುವೆಯಾಗಿ ಗಂಡನೊಡನೆ ನನಗೆ ಸಿಕ್ಕಿದ್ದಳು .
ರಸ್ತೆಯಲ್ಲಿ ನಿಂತು ಮಾತಾಡಿ ಕಾಲು ನೋವು ಬಂದು ಅಲ್ಲೇ ಇದ್ದ ಹೊಟೇಲ್ ಗೆ ಹೋದೆವು. ಅವಳ ಗಂಡ ನಿಮ್ಮ ಮಾತು ಮುಗಿದ ಮೇಲೆ ಫೋನ್ ಮಾಡು ಅಂತ ಹೇಳಿ ಹೊರಟು ಹೋದ. ಶಾಲೆಯಲ್ಲಿ ಮೌನ ಗೌರಿಯಂತಿದ್ದ ಲಕ್ಷ್ಮಿ ಮಾತಾಡುತ್ತಾ ಇದ್ದಳು , ಮಾತು ನಿಲ್ಲಿಸಿ ಗೊತ್ತಿರದಿದ್ದ ನಾನು ಕೇಳುತ್ತಾ ಇದ್ದೆ. ಮಧ್ಯೆ ಲಕ್ಷ್ಮಿ ಏನನ್ನೋ ನೆನಪಿಸಿಕೊಂಡವಳಂತೆ “ಬಾಯ್ಸ್ ಕಾನ್ವೆಂಟಿನ ಟಾಪರ್ ಸಿಕ್ಕಿದ್ದ ಕಣೆ ಮೊನ್ನೆ ಊರಲ್ಲಿ “ ಅಂದ್ಲು . “ಅಂದ್ರೆ ಯಾರು ?” ಅಂತ ನಾನಂದ್ರೆ “ ಅವನೇ ಕಣೆ ನ್ಯೂಟನ್ ನೆನಪಿಲ್ವಾ , ಪಾಪ ಅವನು ನಿನ್ನನ್ನ ಕೇಳಿದ “ ಅಂದ್ಲು. ನಾನು ಎದುರಿಗಿದ್ದ ಟೇಬಲ್ ಮೇಲೆ ಹತ್ತೊದೊಂದು ಬಾಕಿ. ಸಾವರಿಸಿಕೊಂಡು “ಏನಂದೆ“
ಅಂದೆ. “ಮೊನ್ನೆ ಊರಲ್ಲಿ ದುರ್ಗವ್ವನ ಗುಡಿಗೆ ಹೋಗಿದ್ದೆ ಕಣೆ, ಅಲ್ಲಿ ಸಿಕ್ಕಿದ್ದ. . ಒಂದೆರಡು ಸಾರಿ ಶಾಲೆಯ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ವಿ. ಆ ಸಲುಗೆಗೆ ಸುಮ್ನೆ ನಕ್ಕೆ ಅವನು ನಿಂತೇ ಬಿಟ್ಟ.” ಸಿನೆಮಾ ಟೈಟಲ್ ಕಾರ್ಡ್ ಬೇಡಮ್ಮ ಮುಖ್ಯ ವಿಷಯಕ್ಕೆ ಬಾ ಅಂತ ಕೂಗೋಣ ಅನ್ನಿಸ್ತಿತ್ತು ನಂಗೆ . “ಓಹ್ ಹೌದಾ” ಅಂತ ಉಗುಳು ನುಂಗಿದೆ. “ಹೇಗಿದ್ದಿ ಅಂತೆಲ್ಲಾ ಕೇಳಿ ನಿಮ್ ಕ್ಲಾಸಲ್ಲಿ ದಿವ್ಯಾ ಅಂತ ಇದ್ಲಲ್ಲ ಅವಳು ಎಲ್ಲಿದಾಳೆ ? ಹೇಗಿದಾಳೆ ? ಅಂದ ಕಣೆ . ಅವನು ಡಾಕ್ಟರ್ ಅಂತೆ . ಈಗ ಪಿಡಿಯಾಟ್ರಿನಲ್ಲಿ ಎಂ.ಡಿ. ಮುಗಿತಾ ಬಂತಂತೆ. ನಿನ್ ಫೋನ್ ನಂಬರು , ಇಮೇಲು ಏನಾದರೂ ಇದ್ದೀಯ ಅಂತಾನೂ ಕೇಳ್ದಾ ಕಣೆ” ಅಂತ ಒಂದು ಫುಲ್ಲ್ಸ್ತಾಪ್ ಕೊಟ್ಳು. ಗೊತ್ತಿಲ್ಲ ಅಂದಿರ್ತಾಳೆ ಅಂದ್ಕೊಂಡು “ನೀನೆಂದೆ “ ಅಂತ ನಿಧಾನಕ್ಕೆ ಕೇಳಿದೆ. ಮತ್ತೆ ಸಮಾನಂತರದ ರೇಲ್ವೆ ಹಳಿಗಳು ನೆನಪಾಗುತ್ತಿದ್ದವು. “ಸ್ವಲ್ಪ ದಿನದ ಹಿಂದೆ ನಂ ಕ್ಲಾಸಿನಲ್ಲಿ ಇದ್ಲಲ್ಲ ವನಿತಾ ಅವಳು ಸಿಕ್ಕಿದ್ಲು ಕಣೆ. ಅವಳು ನಿನ್ ಇಮೇಲ್ ಐ.ಡಿ. ಕೊಟ್ಳು. ನಾನು ಮೇಲ್ ಮಾಡಿದ್ನಲ್ಲೆ ನೋಡ್ಲಿಲ್ವಾ ?” ಅಂತ ನಿಲ್ಲಿಸಿದಳು. ನಾನು ಮೇಲ್ ನೋಡಿ ಯಾವ ಕಾಲ್ವಾಯ್ತೋ ಆದ್ರೂ “ಇಲ್ಲ ಕಣೆ “ ಅಂದೆ. “ಅವನಿಗೂ ಅದೇ ಐ.ಡಿ. ಕೊಟ್ಟೆ ಕಣೆ”. “ಅವನ ಫೋನ್ ನಂಬರ್ ಇಸ್ಕೊಂಡಿಯೇನೆ?” ಒಂದೇ ಉಸುರಿನಲ್ಲಿ ಕೇಳಿದರೆ “ಇಲ್ಲಾ ಕಣೆ , ನಾನು ಕೇಳಲಿಲ್ “ ಅಂತ ತಣ್ಣೀರು ಸ್ನಾನ ಮಾಡಿಸಿದ್ಲು. ಫೋನ್ ನಂಬರ್ ವಿನಿಮಯವಾಗಿ, ಆ ದಿನಕ್ಕೆ ಮಾತು ಮುಗಿದು ಲಕ್ಷ್ಮಿ ಹೊರಟು ಹೋದಳು .
ನಾನು ಮತ್ತೆ ಮನೆಯ ಹಾದಿ ಹಿಡಿಯುವ ಹೊತ್ತಿಗೆ ಅವನ ಹೆಸರು ಕೇಳಿ ಉಂಟಾದ ಪುಳಕವೂ ತಹಬದಿಗೆ ಬರುತ್ತಿತ್ತು. ವರ್ಷಾನೂ ವರ್ಷ ಮಾತೇ ಆಡದೇ ಹಿಂದೆ ಬಂದ ಹುಡುಗಿ ಅಂತ ಕೇಳಿರಬಹುದು. ಅದಕ್ಕೆ ನೂರಾರು ಅರ್ಥ ಕಲ್ಪಿಸುವುದು ಸರಿಯಲ್ಲ ಅಂತ ಮನೆಗೆ ಹೋಗಿ ಬಾಕಿ ಉಳಿದ ಕೆಲಸ ಮುಗಿಸಿ ಲ್ಯಾಪ್ಟಾಪ್ ತೆರೆದು ಕೂತೆ.ಅವನಿಂದ ಹದಿನೈದು ದಿನಕ್ಕೂ ಮುಂಚೆ ಒಂದು ಮೇಲ್ ಬಂದಿತ್ತು. ನಾನು ಉಳುಮೆ ಮಾಡುತ್ತಿರುವುದು ಕೇಳಿ ಖುಷಿಯಾಯ್ತೆಂದೂ , ಸಾಧ್ಯವಾದರೆ ಇನ್ನೊಂದು ತಿಂಗಳಲ್ಲಿ ಊರಿಗೆ ಬರ ಬೇಕೆಂದು ಬರೆದಿದ್ದ. ಇನ್ನೊಂದು ತಿಂಗಳಲ್ಲಿ ಅವನು ಹೆಚ್ಚಿನ ಓದಿಗೆ ಯು.ಕೆ. ಗೆ ಹೊರಡುವನಿದ್ದ. ಮಾತೇ ಆಡದ ಸಂಪತ್ತು ಇಷ್ಟುದ್ದ ಮೇಲ್ ಮಾಡಿದ್ದರೆ ಮಾತಿನ ಮಲ್ಲಿ ದಿವ್ಯ ಮೂಕಳಾಗಿ ಕೂತಿದ್ದಳು.

‍ಲೇಖಕರು G

14 February, 2014

3 Comments

  1. bharathi b v

    Masth shaili … Ishtavaythu

  2. vijayashree

    channaagi bardideera… Swarna… tumbaa ishta aaytu… 🙂

  3. Sripathi manjanabailu

    Kattige athava kudagolige innoo sane hodibeku. harita eradoo badi samanagi irabeku, aaga matra sariyagi kochcha bahudu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading