
ಎಸ್ ಸುರೇಂದ್ರನಾಥ್
ಮತ್ತೆ ಮೊನ್ನೆ ನಾನು ಈ ನಾಟಕವನ್ನು ರಂಗ ಶಂಕರದಲ್ಲಿ ನೋಡಿ ಖಿನ್ನನಾದೆ, ರೋಮಾಂಚನಗೊಂಡೆ. ಅದೆಂಥಹ ಅನುಭವ… ಇದು ನಾನು ಕೆಲವು ತಿಂಗಳ ಹಿಂದೆ ಉದಯವಾಣಿಯ ಅಂಕಣಕ್ಕೆ ಬರೆದದ್ದು. ಮತ್ತೆ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.
—
ಹರಿದ ದೇಶದ ಗಾಯಗೊಂಡ ಜನರು ಇವರು.
೧೯೪೮. ದೇಶ ಈಗಷ್ಟೇ ಹರಿದು ಹೋಗಿದೆ. ಜನ ತಮ್ಮ ತಮ್ಮ ಊರುಗಳನ್ನು ಬಿಟ್ಟು ಗುಳೆ ಹೊರಟಿದ್ದಾರೆ. ಹೊಸ ಬದುಕನ್ನು ಹುಡುಕಿಯೋ, ಹೊಸ ನೆಮ್ಮದಿಯ ತಾಣವನ್ನು ಹುಡುಕಿಯೋ. ಆದರೆ ತಾವು ಹೋಗಬೇಕಾದ ಊರು ಯಾವುದು, ಅದು ಎಲ್ಲಿದೆ, ಅಲ್ಲಿನ ತಮ್ಮ ಬದುಕು ಏನಾಗಬಹುದು, ತಮ್ಮ ಬದುಕಿಗೆ ಒಂದು ನೆಲೆ ಸಿಗಬಹುದೇ, ಇತ್ಯಾದಿಗಳ ಅರಿವಾಗಲೀ, ಅದರ ಕಲ್ಪನೆಯೂ ಆಗಲಿ ಇಲ್ಲ ಯಾರಿಗೂ. ತಮ್ಮ ನೆಲವನ್ನು ನಂಬಿದ ಕೆಲವರು ಮಾತ್ರ ತಮ್ಮ ನೆಲಕ್ಕಂಟಿಯೇ ನಿಂತಿದ್ದಾರೆ.
ಹೀಗೆ ಗುಳೆ ಹೊರಟವರಲ್ಲಿ ಈ ಮನುಷ್ಯನೂ ಒಬ್ಬ. ಹೆಸರಿಲ್ಲ ಈತನಿಗೆ. ಯಾವುದೋ ಒಂದು ಹಣ್ಣಿನ ದೊಡ್ಡ ಮರವನ್ನು ಬುಡ ಸಮೇತ ಕಿತ್ತು ತಮ್ಮ ಬೆನ್ನಿಗೇರಿಸಿಕೊಂಡು, ಶಿಲುಬೆಯನ್ನು ಹೊತ್ತ ಏಸುಕ್ರಿಸ್ತನಂತೆ, ಹೊರಟಿದ್ದಾನೆ. ದಾರಿಯಲ್ಲಿ ಆತ ಇಬ್ಬರು ಹುಡುಗರನ್ನು ಭೇಟಿಯಾಗುತ್ತಾನೆ. ತುಂಬಾ ದೂರದಿಂದ ಆ ಮರವನ್ನು ಹೊತ್ತು ನಡೆದು ಬಂದಿರುವ ಆತ ಸುಸ್ತಾಗಿದ್ದಾನೆ. ಇಬ್ಬರು ಹುಡುಗರ (ಇಬ್ಬರೂ ಅಣ್ಣ-ತಮ್ಮಂದಿರು. ತಮ್ಮನಿಗೆ ಸ್ವಲ್ಪ ಬುದ್ಧಿಮಂದ. ಊರಿನ ಧಡ್ಡ ಎಂದೇ ಹೆಸರು ಈತನಿಗೆ) ಸಹಾಯದಿಂದ ಮರವನ್ನು ಬೆನ್ನ ಮೇಲೆ ಹೊತ್ತೇ ಅಲ್ಲಿನ ಒಂದು ಕಲ್ಲಿನ ಮೇಲೆ ಸ್ವಲ್ಪ ಹೊತ್ತು ಉಸಿರು ಪಡೆಯಲು ಕೂಡುತ್ತಾನೆ. ಆಗ ನಡೆವ ಸಂಭಾಷಣೆ ಇದು.
ಅಣ್ಣ: ಯಾಕೆ?
ವ್ಯಕ್ತಿ: ಏನು?
ಅಣ್ಣ: ಮರ, ಯಾಕೆ?
ವ್ಯಕ್ತಿ: ಈ ಮರಾನ್ನ ಏಳು ವರ್ಷಗಳ ಹಿಂದೆ ನೆಟ್ಟಿದ್ದು ನಾನು. ನಾಕು ವರ್ಷ ಗಿಡ ಆಗಿದ್ದಾಗ ಒಂದು ಹಣ್ಣೂ ಬಿಡಲಿಲ್ಲ. ಕೆಟ್ಟ ಚಳಿಗಾಲ ಬಂದು ಹೆಚ್ಚೂ ಕಮ್ಮಿ ಸತ್ತೇ ಹೋಗಿತ್ತು ಅಂತ ಹೇಳಬೇಕು. ಮತ್ತೆ ಚಿಗುರು ಒಡೀಬೇಕಾದ್ರೆ ಇಡೀ ಒಂದು ವರ್ಷ ಹಿಡೀತು. ಆಮೇಲೆ ಕಾಯಿ ಬಿಡ್ತು. ನಮ್ಮ ಪಕ್ಕದ ಮನೆ ಹುಡುಗ್ರು ಕಾಯಿ ಹಣ್ಣಾಗೋಕೂ ಮೊದಲೇ, ಹೀಚು ಕಾಯೀನ್ನೇ ಕಿತ್ತು ತಿಂದು ಬಿಡೋರು. ಹೋದ ವರ್ಷ ಒಂದು ಹಣ್ಣು ನಂಗೆ ಸಿಕ್ತು. ತಿಂದೆ.
ಅಣ್ಣ: ಒಳ್ಳೇ ಮರ ಕಡಿಯದು ಪಾಪ.
ವ್ಯಕ್ತಿ: ನಂಗೇನಾಗತ್ತೋ ಅದೇ ಈ ಮರಕ್ಕೂ ಆಗತ್ತೆ ಅಂತ ನಾನು ನನ್ನ ಮನೆ ಬಿಟ್ಟ ಗಳಿಗೆ ಗೊತ್ತಾಯ್ತು. ಮತ್ತೆ ವಾಪಸ್ಸು ಮನೆಗೆ ಹೋಗಿ ಈ ಮರಾನ್ನ ಬೇರು ಸಮೇತ ಕಿತ್ತುಕೊಂಡು ಬಂದೆ.
ಅಣ್ಣ: ನೀನು ಇದನ್ನು ಕೊಲ್ತೀಯಾ ಇಲ್ಲಾ ಇದು ನಿನ್ನನ್ನ ಕೊಲ್ಲತ್ತೆ ಅಷ್ಟೇ.
ವ್ಯಕ್ತಿ: ನಾನು ನನ್ನ ಮನೆ ಬಿಟ್ಟೆ, ನನ್ನ ನೆಲ ಬಿಟ್ಟೆ, ನನ್ನ ಊರಿನ ಗುಡ್ಡ-ಬೆಟ್ಟ ಬಿಟ್ಟೆ. ನಮ್ಮೂರ ಸಿಹಿ ನೀರೀನ ಬಾವಿ ಬಿಟ್ಟೆ. ನಾನು ಎಲ್ಲಿಗೆ ಹೋಗ್ತಾಯಿದೀನಿ ನಂಗೆ ಗೊತ್ತಿಲ್ಲ. ಐವತ್ತಾಯ್ತು ನಂಗೆ. ಒಂದಿನ ನಮ್ಮೂರಿನ ದಡ ದಾಟಿದೋನಲ್ಲ. ಯಾಕೆ ದಾಟಬೇಕು ಹೇಳು. ಆದ್ರೆ ಈಗ, ಈ ವಯಸ್ಸಲ್ಲಿ ಇನ್ನೊಂದು ಊರಿಗೆ ಹೊರಟಿದೀನಿ. ಹೊಸ ಮಣ್ಣಿಗೆ ಹೊಸ ಧೂಳಿಗೆ ಹೊರಟಿದೀನಿ. ನನ್ನ ಮರಾನ್ನ ನಾನು ಬಿಡಲ್ಲ. ಈ ಮರದ ದೊಡ್ಡ ಟೊಂಕದ ಚಿಕ್ಕ ಉಂಗುರ ಆಗಲ್ಲ ನಾನು.
ತಮ್ಮ: ಬಿಡಿಸಿ ಹೇಳು.
ವ್ಯಕ್ತಿ: ಸಾಕು ಸುಧಾರಿಸಿಕೊಂಡಿದ್ದು. ಸ್ವಲ್ಪ ಕೈ ಹಾಕು. ಮರಾನ್ನ ಸರಿಯಾಗಿ ಏರಿಸ್ಕೋಬೇಕು. ದುಶ್ಮನ್ಗಳು ಬೆನ್ನ ಹಿಂದೇ ಇದಾರೆ. ಹೊರಡಬೇಕು ನಾನು.
ಅಣ್ಣ: (ತಮ್ಮನಿಗೆ) ಕೈ ಹಾಕಬೇಡ. ಇನ್ನೂ ತೇಕುತಾಯಿದಾನೆ. (ವ್ಯಕ್ತಿಗೆ) ನೀನು ಮುಟ್ಟಲ್ಲ-
ವ್ಯಕ್ತಿ: ಪ್ರಯತ್ನ ಮಾಡ್ತೀನಿ.
ಅಣ್ಣ: ಆಮೇಲೆ-
ವ್ಯಕ್ತಿ: ಇದನ್ನು ಮತ್ತೆ ನೆಡ್ತೀನಿ. ಇದು ಸುಧಾರಿಸಿಕೊಳ್ಳತ್ತೆ. ಚಿಗುರತ್ತೆ. ಹಣ್ಣು ಬಿಡತ್ತೆ. ಮನೆಗೆ ವಾಪಸ್ಸು ಹೋಗೋ ಕಾಲ ಬಂದಾಗ ಮತ್ತೆ ಇದನ್ನು ಬುಡ ಸಮೇತ ಕಿತ್ತಿ ಅದು ಮೊದಲು ಎಲ್ಲಿತ್ತೋ ಅಲ್ಲೇ ನೆಡ್ತೀನಿ. ಒಂದು ವೇಳೆ ನಾನು ಈ ಮರಾನ್ನ ಅಲ್ಲೇ ಬಿಟ್ಟೇ ಅಂತ ತಿಳಕೋ, ನನ್ನ ಆ ಮರದ ನೆರಳಲ್ಲಿ ಅವರು…ಯೋಚನೆ ಮಾಡೋಕೂ ಆಗಲ್ಲ ನಂಗೆ. ಚಿಕನ್ ತಿಂತಾಯಿದಾರೆ, ವೈನ್ ಕುಡೀತಾಯಿದಾರೆ. ಯುವ ಪ್ರೇಮಿಗಳು. ಎಷ್ಟು ಚೆನ್ನಾಗಿದೆ ನೋಡೋಕೆ. ಅವನ ಕೆಂಪು ತಲೆಕೂದಲು, ಬಿಳೀ ಮೈಬಣ್ಣ, ಅವಳ ದೊಡ್ಡ ಎದೆ, ಅದ್ಭುತವಾದ ಮುಗುಳ್ನಗೆ, ನನ್ನ ಮರದ ನೆರಳಲ್ಲಿ, ಅಪ್ಪಿ ಮುತ್ತಿಕ್ತಾಯಿದಾರೆ. ಅವನ ಕೈ ಅವಳ ಬೆನ್ನ ಮೇಲಿದೆ, ಅವಳನ್ನ ಹಗುರಾಗಿ ಎತ್ತಿಕೊಳ್ತಾಯಿದಾನೆ, ನಗ್ತಾಯಿದಾರೆ, ಆಮೇಲೆ ವಯಸ್ಸಾಗತ್ತೆ ಅವರಿಗೆ, ನನ್ನ ಮರದ ಹಣ್ಣು ಕಿತ್ತಿ ಜಾಮ್ ಮಾಡ್ತಾಳೆ, ಕೆಲಸ ಮುಗಿಸಿ ಅವನು ಮನೆಗೆ ಸಂಜೆ ಬರ್ತಾನೆ, ಮರದ ಕೆಳಗೆ ಕಾಲು ಚಾಚಿ ಮಲಗಿ ಪೇಪರ್ ಓದ್ತಾನೆ, ಮರದ ನೆರಳಲ್ಲಿ ಒಂದು ಹುಟ್ಟುಹಬ್ಬದ ಸಡಗರ, ಅವರ ಮೊದಲನೇ ಮಗಂದು, ನನ್ನ ಮರದ ಒಂದು ಕೊಂಬೆಗೆ ಜೋಕಾಲಿ ಕಟ್ಟಿ ಆಟ ಆಡುಸ್ತಾರೆ, ಗಟ್ಟಿ ಮುಟ್ಟಾದ ಕೊಂಬೆ, ಗಟ್ಟಿ ಮುಟ್ಟಾದ ಮರ ಅದು, ನಂದು, ಅವರ ಮಗಂಗೆ ಈಗ ಹದಿನಾರು ವರ್ಷ, ನನ್ನ ಮರದ ಟೊಂಕದ ಮೇಲೆ ಒಂದು ಹೃದಯದ ಚಿತ್ರ ಕೆತ್ತತಾನೆ, ಒಂದು ಹುಡುಗಿ ಹೆಸರು ಬರೀತಾನೆ, ನನ್ನ ಮರಕ್ಕೆ ಇದೆಲ್ಲಾ ಇಷ್ಟ ಆಗತ್ತೆ ನಂಗೊತ್ತು, ಬರ್ತಾ ಬರ್ತಾ ನನ್ನ ಮರ ನನ್ನನ್ನ ಮರೆತು ಬಿಡತ್ತೆ, ನನ್ನ ಉಸಿರಿನ ವಾಸನೆಯನ್ನ ಮರೆತು ಬಿಡತ್ತೆ, ನನ್ನ ದನಿಯನ್ನ ಮರೆತು ಬಿಡತ್ತೆ, ನಾನು ಆ ಮರದ ಎದೆಯಲ್ಲಿನ ಅನೇಕ ಉಂಗುರಗಳ ಪೈಕಿ ಒಂದು ಸಣ್ಣ ಮಸುಕು ಮಸುಕಾದ ನೆನಪಾಗಿ ಬಿಡ್ತೀನಿ, ನನ್ನ ಕೈಲಿ ಸಾಧ್ಯವಿಲ್ಲ, ಒಂದು ಸಣ್ಣ ಉಂಗರು ಆಗಕೆ. ಅದಕ್ಕೇ ನಾನು ಹೋದಲ್ಲಿ ಈ ಮರ ಇರಬೇಕು. ಸ್ವಲ್ಪ ಕೈ ಹಾಕು, ಭಾಳಾ ದೂರ ಹೋಗಬೇಕು ನಾನು…
—
ಇದು ಅಮೀರ್ ನಿಝಾರ್ ಝುವಾಬಿ ಬರೆದ ‘ಐ ಆಮ್ ಯೂಸುಫ್ ಆಂಡ್ ದಿಸ್ ಈಸ್ ಮೈ ಬ್ರದರ್’ ನಾಟಕದ ಒಂದು ತುಣುಕು. ಜನವರಿ ೧೯೪೮. ಪ್ಯಾಲೆಸ್ಟೈನ್ನಲ್ಲಿ ವಿಚಿತ್ರ ವಾತಾವರಣ. ತಮ್ಮ ನೆಲ, ನೆಮ್ಮದಿ, ನೀರು, ಎಲ್ಲವನ್ನೂ ಕಳೆದು ಕೊಳ್ಳುವ ಆತಂಕ. ತಮ್ಮ ನೆಲದ ಮೇಲೆ ಮತ್ತಾರದೋ ಅಧಿಕಾರ. ಬ್ರಿಟಿಷ್ ಆದೇಶ, ಅಂದರೆ ಮ್ಯಾಂಡೇಟ್, ಮುಗಿಯಲು ಇನ್ನೊಂದೆರಡು ವಾರಗಳಿವೆ. ಈ ನೆಲದ ಯಾವ ಭಾಗವನ್ನು ಯಾರು ಪಡೆಯುತ್ತಾರೆ ಎಂದು ನಿರ್ಧಾರವಾಗುವುದು ವಿಶ್ವಸಂಸ್ಥೆಯಲ್ಲಿ ಚಲಾಯಿಸುವ ಓಟುಗಳಿಂದ. (ನಾಟಕದಲ್ಲಿ ಈ ಓಟು ಹಾಕುವ ಪ್ರಕ್ರಿಯೆಯನ್ನು ಒಂದು ರೇಡಿಯೋ ಮೂಲಕ ಬಿತ್ತರಿಸಲಾಗುತ್ತದೆ. ನೆರೆದ ಗುಂಪಿನಲ್ಲಿ ನೀರವತೆ. ಓಟು ಚಲಾಯಿಸುವ ಪ್ರಕ್ರಿಯೆ ಮುಗಿದ ನಂತರ, ತಮ್ಮ ನೆಲವನ್ನು ಮತ್ತಾರಿಗೋ ಕಳೆದು ಕೊಂಡ ನಂತರ ಇಡೀ ಗುಂಪನ್ನು ಹತಾಷೆ ನುಂಗಿಬಿಡುತ್ತದೆ.) ಇದ್ದಕ್ಕಿದ್ದಂತೇ ತಮ್ಮ ನೆಲ ತಮ್ಮದಲ್ಲವಾಗಿ ಬಿಡುತ್ತದೆ. ಹರಿದು ಚೂರು ಚೂರಾಗಿ ಬಿಡುತ್ತದೆ. ತಾವು ಬದುಕಿದ್ದ ನೆಲದಲ್ಲೇ ತಾವು ಅನಾಥರಾಗಿ ಬಿಡುತ್ತಾರೆ. ತಮ್ಮ ವೈಯಕ್ತಿಕ ಹಕ್ಕುಗಳನ್ನು ಕಳೆದುಕೊಂಡು ಬಿಡುತ್ತಾರೆ. ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರು ಆತಂಕವಾದಿಗಳೆಂದು ಪಟ್ಟಿ ಕಟ್ಟಿಸಿಕೊಳ್ಳುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಇಸ್ರೇಲ್ ಬೆಳೆದಿದ್ದು, ಜೋರ್ಡಾನ್ ಹುಟ್ಟಿದ್ದೇ ಇಲ್ಲಿಂದ.
—
ಇಡೀ ನಾಟಕ ಚರಿತ್ರೆ, ನೆನಪು ಮತ್ತು ಪ್ರೀತಿಯ ಒಂದು ಕಾವ್ಯಾತ್ಮಕ ಶೋಧನೆ ಅಂದರೂ ತಪ್ಪಿಲ್ಲ. ನಾಟಕದಲ್ಲಿ ಕಾಣುವ ಪ್ರೀತಿ ನೆಲದ್ದಾಗಿರಬಹುದು, ದೇಹಗಳದ್ದಾಗಿರಬಹುದು, ಮನಸ್ಸುಗಳದ್ದಾಗಿರಬಹುದು. ಒಂದೆಡೆ ದುರಂತಕ್ಕೆ ಮುಖ ಮಾಡಿ ನಿಂತ ಇಬ್ಬರು ಎಳೆಯ ಪ್ರೇಮಿಗಳ ಪ್ರೇಮದ ಕಥೆಯಾದರೆ, ಇನ್ನೊಂದೆಡೆ ೧೯೪೮ ಜನವರಿ ತಿಂಗಳ ಆಚೀಚೆ, ಒಡೆದು ಚೂರಾಗಲಿರುವ, ಒಡೆದು ಚೂರಾದ ಪ್ಯಾಲೆಸ್ಟೀನಿಯರು ಭರಿಸಿದ ದೈಹಿಕ ಮತ್ತು ಮಾನಸಿಕ ನಷ್ಟ; ಮನುಷ್ಯನ, ಒಂದು ಸಮೂಹದ ನೋವು-ನಲಿವುಗಳು, ಬೇಕು-ಬೇಡಗಳು ಅಂದಿನ ರಾಜಕೀಯ ಆಟದಲ್ಲಿ ಮುಚ್ಚಿ ಹೋದ ದುರಂತ ಕತೆ ಕೂಡಾ ಹೌದು. ಒಂದು

ಪ್ರೇಮ ಕಥೆ ಮಾತ್ರವಾಗದೇ, ಇಡೀ ಸಮೂಹದ ನೋವು-ನಲಿವಿನ, ರಾಜಕೀಯದ ಅತಂತ್ರಗಳ ಸೂಕ್ಷ್ಮ ದರ್ಶನ ಕೂಡಾ ಈ ನಾಟಕ. ಇಡೀ ಪ್ಯಾಲೆಸ್ಟೈನ್ ದೇಶವನ್ನು ಬ್ರಿಟಿಷರು ಹೇಗೆ ಚೂರು ಮಾಡಿ ಹಂಚಿದರು, ಮುಂದೊಂದು ದಿನ ಆರಂಭವಾಗುವ ಇಸ್ರೇಲಿ ಮತ್ತು ಪ್ಯಾಲೆಸ್ಟೈನರ ಕೊನೆಗಾಣದ ಯುದ್ಧಕ್ಕೆ ಇದು ಹೇಗೆ ನಾಂದಿಯಾಗುತ್ತದೆ, ಒಂದು ದೇಶದ ಮಾನವೀಯ ಮುಖವನ್ನು ಅಳಿಸಿ ಹಾಕಿ ಆ ಸಮೂಹದ ರಾಜಕೀಯ ದುರಂತಕ್ಕೆ ಬ್ರಿಟಿಷರು ನೈತಿಕವಾಗಿ ಹೇಗೆ ಕಾರಣರಾಗುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಚಿತ್ರಿಸುತ್ತಾ ಹೋಗುತ್ತದೆ.
ಈ ಚಿತ್ರಣದಲ್ಲಿ ಎಲ್ಲೂ ಉದ್ವೇಗವಿಲ್ಲ, ಸಿಟ್ಟಿಲ್ಲ, ಕ್ರೋಧವಿಲ್ಲ. ಎಲ್ಲವನ್ನೂ ಶಾಂತವಾಗಿ, ಆದರೆ ಒಬ್ಬ ನುರಿತ ಶಸ್ತ್ರಚಿಕಿತ್ಸಕನ ರೀತಿಯಲ್ಲಿ ಪದರ ಪದರವಾಗಿ ವಿಶ್ಲೇಷಿಸುತ್ತಾ ಹೋಗುತ್ತದೆ. ಎಲ್ಲೂ ಅಬ್ಬರಿಸಿದ ಒಂದು ನಿರಮ್ಮಳ ಕವನದಂತೆ ನಾಟಕ ಮುಂದುವರೆಯುತ್ತದೆ. ತಿರಸ್ಕಾರ, ದ್ವೇಷಕ್ಕಿಂತಾ ಸಿಟ್ಟು, ನೋವು, ಹತಾಷೆ ನಾಟವನ್ನು ತುಂಬಿದೆ.
—
ಈ ನಾಟಕ ನನಗೆ ದಕ್ಕಿದ್ದು ಪುಣೆಯ ಗೆಳೆಯ, ನಾಟಕ ನಿರ್ದೇಶಕ ಮೋಹಿತ್ ಟಾಕಲ್ಕರ್ ಅವರಿಂದ. ೨೦೧೫ರ ರಂಗ ಶಂಕರ ನಾಟಕೋತ್ಸವದಲ್ಲಿ ಈ ನಾಟಕ ಪ್ರದರ್ಶನಗೊಂಡಿತ್ತು. ಅದೇ ವರ್ಷ ಮೋಹಿತ್ ಟಾಕಲ್ಕರ್ಗೆ ಶಂಕರ್ ನಾಗ್ ಯುವ ರಂಗಕರ್ಮಿ ಪುರಸ್ಕಾರ ಕೂಡಾ ಸಂದಿತ್ತು. ಮತ್ತೆ ನಾಟಕವನ್ನು ನೋಡಿದ್ದು, ದೆಹಲಿಯಲ್ಲಿ, ಮೆಟಾದ ಒಂದಷ್ಟು ಪ್ರಶಸ್ತಿಗಳನ್ನು ಬಾಚಿದ ಸಂದರ್ಭದಲ್ಲಿ.





0 Comments