ಮೂಲ: ಇಂದು ಕಿಲ್ಲಮ್

ಕನ್ನಡಕ್ಕೆ : ಸಂವರ್ತ ‘ಸಾಹಿಲ್’
ಕೆರೆದಂಡೆಯ ಮೇಲೆ ಕೂತು
ನೋಡುತ್ತಿದ್ದೇನೆ. ದಾಟಲು
ಅತ್ತಿಂದಿತ್ತ ಇತ್ತಿಂದತ್ತ ಸಾಗಲು
ನಾವಿಕ ನೆರವಾಗುತ್ತಿದ್ದಾನೆ.
ಕಿಸೆಯೊಳಗೆ ಕೈಯಾಡಿಸಿ ನೋಡಿದರೆ
ನಯಾಪೈಸೆ ಇಲ್ಲ.
ನನ್ನಿಂದ ಸಾಲ ಪಡೆದು
ಹಿಂದಿರುಗಿಸದೆ ಉಳಿದವರೂ
ಯಾರಿಲ್ಲ.
ಎಲ್ಲಿಂದಲೋ
ಎಲ್ಲಿಗೋ-ಎಲ್ಲೆಲ್ಲಿಗೋ
ಎಲ್ಲರೂ ಹೋಗುತ್ತಿರುವಾಗ
ಈ ದಡದಲ್ಲಿಯೇ ಒಂಟಿ

ಒಬ್ಬಂಟಿಯಾಗಿರುವುದು ನನ್ನ
ಹಣೆಬರಹವೇ?
ನದಿಗೆ ಹಾರಿ ಮುಳುಗಿಯೇ
ಈ ಹಣೆಬರಹ ಅಳಿಸಬೇಕೇ?
ದೂರದಲ್ಲಿ ಅದೊಬ್ಬ ಮುದುಕ
ಕಾಣಿಸುತ್ತಿದ್ದಾನೆ. ಅವನು
ನನ್ನ ಕಡೆಯೇ ಬರುತ್ತಿದ್ದಾನೆ.
ಕೈಸನ್ನೆಯಲ್ಲೇ
ತನ್ನ ಕೈಯ ಹಿಡಿ ಎಂದು ಹೇಳುತ್ತಿದ್ದಾನೆ.
ಹಿಂದೊಮ್ಮೆ ರಸ್ತೆ ದಾಟುವಾಗ
ನಾನು ಅವನ ಕೈಹಿಡಿದಿದ್ದೆ.
0 ಪ್ರತಿಕ್ರಿಯೆಗಳು