ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ’ಕ್ವೀನ್’ ನನ್ನನ್ನೂ ಗೆದ್ದಳು – ಶಾಂತಾ ನಾಗರಾಜ್

ಶಾಂತಾನಾಗರಾಜ್

‘ಕ್ವೀನ್’ ಸಿನಿಮಾ ನೋಡಿ ಹೊರಬಂದಾಗ ನಾನು ಅಕ್ಷರಶಃ ಮೂಕಳಾಗಿ ಹೋಗಿದ್ದೆ. ಒಂದೂವರೆ ದಶಕದಿಂದ ಹಲವಾರು ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಕೌನ್ಸಿಲಿಂಗ್ ಮಾಡುವಾಗ ಒಂದು ಘಟ್ಟದಲ್ಲಿ ನಾನು ತೀರಾ ವಿಚಲಿತಳಾಗುತ್ತೇನೆ. ‘ಪ್ರೀತಿಸಿದವನು ಕೈ ಕೊಟ್ಟ, ನನಗೆ ಅವನನ್ನು ಮರೆಯಲಾಗುತ್ತಿಲ್ಲ, ನನಗೆ ಆತ್ಮಹತ್ಯೆಯೇ ಗತಿ’ ಎಂದೆಲ್ಲ ಅವರು ನೆರಳಾಡುವಾಗ ನನಗೆ ನಿಜಕ್ಕೂ ಕರುಣೆಯುಕ್ಕುತ್ತದೆ. ಇದಕ್ಕೆ ಯಾರು ಹೊಣೆ? ಅವರ ಅಪ್ಪ ಅಮ್ಮಂದಿರೇ? ಕೈಕೊಟ್ಟ ಹುಡುಗನೇ? ‘ಪ್ರೀತಿ ಅಮರ’ ಎಂದು ಸಾರುವ ಮಾಧ್ಯಮಗಳೇ? ಅಥವಾ ಮುಗ್ಧವಾಗಿ ಸಿಕ್ಕಿದವರ ಬೆನ್ನು ಬೀಳುವ ಈ ಬಡಪಾಯಿಗಳೇ? ಈ ಎಲ್ಲಾ ಪ್ರಶ್ನೆಗಳಿಗೂ ತುಂಬಾ ಸಮರ್ಥವಾಗಿ, ಯಾವ ಅಬ್ಬರಗಳಿಲ್ಲದೇ, ಮೆಲೋಡ್ರಾಮಾವಿಲ್ಲದೇ, ಆದರೆ ನೇರವಾಗಿ ಮನಸ್ಸಿಗೇ ತಟ್ಟುವಂತೆ ಈ ಸಿನಿಮಾ ಗಟ್ಟಿಯಾದ ಸಂದೇಶಗಳನ್ನು ಕೊಡುತ್ತದೆ.
ಪ್ರೀತಿ ಪ್ರೇಮದ ಬಗ್ಗೆ ನಮ್ಮ ಸಮಾಜದಲ್ಲಿ ಇನ್ನಿಲ್ಲದಂಥಾ ತಪ್ಪುಕಲ್ಪನೆಗಳಿವೆ. ಇದುವರೆವಿಗೆ ಬಂದಿರುವ ಪ್ರೇಮಕಥೆಗಳ ಸಿನಿಮಾಗಳು ಈ ತಪ್ಪುಕಲ್ಪನೆಯ ಬುನಾದಿಯ ಮೇಲೇ ಕಟ್ಟಿದ ಕಥೆಗಳಾಗಿವೆ. ಸಿಂಗಪುರದಲ್ಲಿ ನಾನು ‘ತಾಲ್’ ಸಿನಿಮಾ ನೋಡಿದಾಗ ಒಂದು ತಮಾಷೆಯ ಪ್ರಸಂಗ ಎದುರಾಯಿತು. ಸಿನಿಮಾ ನೋಡಿ ಹೊರಬರುತ್ತಿರುವಾಗ ನನ್ನ ಹಿಂದಿನಿಂದ ಸಿಂಗಪುರದ ಚೀನೀ ಮಹಿಳೆಯೊಬ್ಬರು “ಕ್ಷಮಿಸಿ ನಿಮ್ಮನ್ನೊಂದು ಪ್ರಶ್ನೆ ಕೇಳಲೇ”? ಎಂದು ನನ್ನ ಮರುನುಡಿಗೂ ಕಾಯದೇ “ಭಾರತದ ಹುಡುಗಿಯರಿಗೆ ಆತ್ಮಗೌರವ ಇರುವುದಿಲ್ಲವೇ”? ಎಂದರು! ಐಶ್ವರ್ಯಾ ರೈಳ ಸೌಂದರ್ಯ, ಇಂಪಾದ ಹಾಡುಗಳು ಇವುಗಳ ಗುಂಗಿನಲ್ಲಿದ್ದ ನನಗೆ ಈ ಪ್ರಶ್ನೆಗೆ ಏನುತ್ತರ ಕೊಡಬೇಕೆಂದು ತಿಳಿಯದೇ ಕಕ್ಕಾಬಿಕ್ಕಿಯಾದೆ. ಆಕೆಯೇ ಮುಂದುವರೆದು ಹೇಳಿದರು ” ಅಲ್ಲಾ ಮೊದಲ ನಾಯಕ ತಾನೇ ಪ್ರೀತಿಸಿದ ನಾಯಕಿ ಮತ್ತು ಅವಳ ತಂದೆಯನ್ನು ತನ್ನ ಮನೆಯವರ ಮಾತು ಕೇಳಿ ಅವಮಾನಿಸುತ್ತಾನೆ. ಹತಾಶಳಾದ ಅವಳಿಗೆ ಸಂಗೀತ ಮತ್ತು ನೃತ್ಯಗಳಿಗೆ ವೇದಿಕೆ ಕೊಟ್ಟು ಅವಳು ಬೆಳೆಯುವಂತೆ ಮಾಡುವವನು ಎರಡನೇ ನಾಯಕ. ಆದರೂ ಮದುವೆಯ ವಿಷಯ ಬಂದಾಗ ಅವಳು ಮೊದಲ ನಾಯಕನನ್ನೇ ಆರಿಸುತ್ತಾಳಲ್ಲ”? ಎಂದರು.
ನಾನೇನು ಹೇಳಲಿ ಮೇಡಂ ? ನಮ್ಮ ದೇಶದಲ್ಲಿ ಮೊದಲ ಪ್ರೀತಿ ಶಾಶ್ವತ! ಮನಸ್ಸು ಒಬ್ಬನಿಗೆ ಕೊಟ್ಟ ಮೇಲೆ ಮುಗಿಯಿತು. ಮತ್ತೆ ಯಾರನ್ನೂ ಕಣ್ಣೆತ್ತಿ ನೋಡುವಂತಿಲ್ಲ ಹುಡುಗಿಯರು! ಎನ್ನುವ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಲೇ? ನಾನು ಗೊಂದಲದ ಧ್ವನಿಯಲ್ಲಿ ” ಇಲ್ಲ ಹಾಗೇನಿಲ್ಲ, ಇದು ಎಷ್ಟಾದರೂ ಸಿನಿಮಾ” ಎಂದೆ. ಆದರೆ ನನಗೇ ನನ್ನ ಉತ್ತರ ಸಮರ್ಪಕವಲ್ಲ ಎನಿಸಿತು. ಎಷ್ಟೋ ದಿನ ಆಕೆಯ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆದರೆ ಈಗ ಸ್ವಲ್ಪ ಸಮಾಧಾನವಾಗಿದೆ ಏಕೆಂದರೆ ‘ಕ್ವೀನ್’ ಮಾತ್ರ ಅದರ ವಿರುದ್ಧ ಹೆಜ್ಜೆಹಾಕಿದೆ!!

ಎಲ್ಲಾ ಸಿನಿಮಾಗಳು ಪ್ರೀತಿಯಿಂದ ಶುರುವಾಗಿ, ಡ್ಯುಯೆಟ್, ಖಳನಾಯಕನ ಎಂಟ್ರಿ, ಒಂದಷ್ಟು ಫ಼ೈಟಿಂಗ್‍ನಿಂದ ಮುಂದುವರೆದು ಮದುವೆಯಲ್ಲಿ ಮುಕ್ತಾಯವಾದರೆ, ‘ಕ್ವೀನ್’ ಮದುವೆಯಿಂದಲೇ ಪ್ರಾರಂಭವಾಗುತ್ತದೆ. ಅತ್ಯಂತ ಸಂಪ್ರದಾಯ ಬದ್ಧವಾಗಿ ಹೆತ್ತವರ ಕಣ್‍ತಂಪಿನಲ್ಲಿ ಕುರಿಯಂತೆ ತಲೆಯಾಡಿಸುತ್ತಾ ಬೆಳೆದ ಹುಡುಗಿ, ಅವಳನ್ನು ತಾನೇ ಪ್ರೀತಿಗೆ ಎಳೆದು ದೊಡ್ದವರನ್ನು ಒಪ್ಪಿಸಿ ಮದುವೆಯ ಹಂತಕ್ಕೆ ತಂದ ನಾಯಕ, ಮದುವೆಯ ಹಿಂದಿನ ದಿನ ‘ಈ ಮದುವೆ ನನಗೆ ಬೇಡ’ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಅದಕ್ಕೆ ಅವನು ಕೊಡುವ ಕಾರಣ ‘ಅವನೀಗ ಲಂಡನ್ನಿಲ್ಲಿದ್ದಾನೆ. ಈ ಅಪ್ಪಟ ಭಾರತೀಯ ಹುಡುಗಿ ಅಲ್ಲಿಗೆ ಹೊಂದುವುದಿಲ್ಲ’. ಸಿದ್ಧತೆಗಳೆಲ್ಲಾ ಮುಗಿದ ಮದುವೆ ಮುರಿದುಬಿದ್ದಾಗ ಏನೇನು ಗೊಂದಲಗಳಾಗುತ್ತವೆಯೋ ಎಲ್ಲವೂ ಇವೆ. ಆ ನಂತರವಷ್ಟೇ ಕಥೆಗೆ ತಿರುವು! ಈ ನೋವನ್ನು ಮರೆಯಲು ತಾನೇ ಏರ್ಪಡಿಸಿದ್ದ ಹನಿಮೂನಿಗೆ ಒಬ್ಬಳೇ ಹೊರಟು ಬಿಡುತ್ತಾಳೆ ಹುಡುಗಿ! ಅಲ್ಲಿ ಬೇರೆ ಬೇರೆ ಪ್ರಪಂಚವನ್ನು ಕಾಣುತ್ತಾಳೆ. ಗಟ್ಟಿಯಾಗುತ್ತಾ ಹೋಗುತ್ತಾಳೆ. ಎಲ್ಲವೂ ಅದೆಷ್ಟೊಂದು ಸಹಜವಾಗಿದೆಯೆಂದರೆ, ಯಾರೇ ಆ ಹುಡುಗಿಯ ಜಾಗದಲ್ಲಿದ್ದರೂ ಹಾಗೇ ಮಾಡುತ್ತಿದ್ದರೇನೋ ಎನ್ನಿಸುವಷ್ಟು ಸಹಜವಾಗಿದೆ.
ಉದಾಹರಣೆಗೆ ಅವಳು ಮೊದಲ ದಿನ ಪರದೇಶದಲ್ಲಿ ಹೊರಗೆ ಹೋಗುವಾಗ ಪ್ರವಾಸಿಗರು ತಮ್ಮ ಬಳಿ ಪಾಸ್‍ಪೋರ್ಟ್ ಇಟ್ಟುಕೊಳ್ಳ ಬೇಕೆಂಬ ಅರಿವಿಲ್ಲದೇ ಪೋಲೀಸಿಗೆ ಸಿಕ್ಕಿಬಿದ್ದು ಗೆಳತಿಯ ಸಹಾಯದಿಂದ ಬಚಾವಾಗುವುದು, ಮತ್ತೊಂದು ದಿನ ನಡು ರಾತ್ರಿಯಲ್ಲಿ ತನ್ನ ರೂಮಿಗೆ ಬರುವಾಗ ಕಳ್ಳನೊಬ್ಬ ಇವಳ ಪರ್ಸನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ತನ್ನ ಮಂಡಿಗಳ ನಡುವೆ ಪರ್ಸ್ ಹಿಡಿದು ನೆಲದ ಮೇಲೆ ಮಲಗಿ, ಅವನಿಗೆ ಏನು ಮಾಡಿದರೂ ಪರ್ಸ್ ಸಿಗದಂತೆ ಮಾಡುವುದು ಎಲ್ಲವೂ ಕೇವಲ ಸಮಯಪ್ರಜ್ಞೆಯಿಂದ ಮಾತ್ರ ಸಾಧ್ಯ ಎನ್ನುವ ಸಂದೇಶವನ್ನೇ ಕೊಡುತ್ತದೆ. ಹೀಗೆ ಎಲ್ಲ ಸಂಕಷ್ಟಗಳನ್ನೂ ಎದುರಿಸುವ ಛಾತಿಯೊಂದು ಸಿನಿಮಾಗಳ ಮಾಮೂಲಿ ಅಬ್ಬರವಿಲ್ಲದೇ ಕ್ವೀನ್ ನಾಯಕಿಯ ಪಾತ್ರದಲ್ಲಿ ಚಿತ್ರಿತವಾಗಿದೆ. ಸ್ವದೇಶಕ್ಕೆ ವಾಪಸ್ ಬಂದು ” ನಾನೀಗ ಮನಸ್ಸು ಬದಲಾಯಿಸಿದ್ದೇನೆ ನಿನ್ನನ್ನು ಮದುವೆಯಾಗುತ್ತೇನೆ” ಎನ್ನುವ ನಾಯಕನಿಗೆ ಅವನು ಎಂಗೇಜ್‍ಮೆಂಟ್‍ನಲ್ಲಿ ಕೊಟ್ಟ ಉಂಗುರವನ್ನು ಅವನ ಕೈಲಿಟ್ಟು, ಅವನ ಬೇಡಿಕೆಯನ್ನು ನಯವಾಗಿ ಮಾತಿಲ್ಲದೇ ತಿರಸ್ಕರಿಸಿ, ಅವನ ಮನೆಯಿಂದ ಹೊರಬಂದು ಸಂತೋಷದಿಂದ ಸಣ್ಣಗೆ ಕುಣಿತದ ಹೆಜ್ಜೆ ಹಾಕುತ್ತಾ ನಿರಾಳವಾಗುವ ‘ಕ್ವೀನ್’ ಎಲ್ಲ ಪ್ರೇಕ್ಷಕರಿಗೂ ಬಹು ಮೆಚ್ಚಿನವಳಾಗುತ್ತಾಳೆ.!
ನಮ್ಮ ಪಕ್ಕದ ಮನೆಯ ಹುಡುಗಿಯ ಬದುಕನ್ನು ನೋಡುತ್ತಿದ್ದೇವೆಯೋ ಎನ್ನುವಷ್ಟು ಸಹಜವಾಗಿರುವ ಈ ಸಿನಿಮಾ ಮನರಂಜನೆಯೂ ಹೌದು ಮಾರ್ಗದರ್ಶಕವೂ ಹೌದು! ಇಡೀ ಸಿನಿಮಾದಲ್ಲಿ ಇಷ್ಟವಾಗುವ ಎರಡಂಶಗಳೆಂದರೆ ನವಿರಾದ ಸೂಕ್ಷ್ಮಗಳನ್ನು ನಿರ್ದೇಶನದಲ್ಲಿ ಉಳಿಸಿಕೊಂಡಿರುವ, ಎಲ್ಲ ಪಾತ್ರಗಳನ್ನು ಅತ್ಯಂತ ಪ್ರೌಢವಾಗಿ ನಿರ್ವಹಿಸಿರುವ ಪರಿ, ಮತ್ತು ಪಾತ್ರವೇ ತಾನಾಗಿರುವ ನಾಯಕಿ ಕಂಗನಾ ರಾವತ್! ‘ಅವನು ಕೈ ಕೊಟ್ಟ ನನಗೆ ಆತ್ಮಹತ್ಯೆಯೇ ಗತಿ’ ಎಂದು ಹಲುಬುವ ಲಕ್ಷ ಲಕ್ಷ ಹುಡುಗಿಯರು ಈ ಸಿನಿಮಾವನ್ನು ತಪ್ಪದೇ ನೋಡಬೇಕು.

‍ಲೇಖಕರು avadhi

14 April, 2014

2 Comments

  1. Jyothi Umesh

    Nanagoo nodona anta aase aagtide! tumba jana helidru superb movie anta.. noduttene! nimma baraha channagide!

  2. Maluru Venkataswamy

    ‘ಅವಧಿ’ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹೊಸ ತಾರೆ.ವಿಚಾರಪೂರ್ಣ ಲೇಖನಗಳು,ಅರ್ಥಪೂರ್ಣ ಕಥೆ,ಕವಿತೆಗಳಿಂದ ಪ್ರಕಾಶಿಸುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading