
ಎಸ್. ಕೃಷ್ಣಮೂರ್ತಿ
ಮುನಿಸೇಕೆ ಮನದನ್ನೆ ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ
ಕಲ್ಲಾಯಿತೇಕೆ ಕೋಮಲ ಹೃದಯ ?
ಮರೆತೆಯಾ ಜೊತೆಯ ಮಧುರ ದಿನಗಳ ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ ?
ಮುಂಗಾರು ಮಳೆಯ ಕಚಗುಳಿಗಳ ?
ನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.
ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದಯಲ್ಲಿ ನನ್ನನೊರಗಿಸಿ ?
ಗೋವರ್ಧನ್ ನವಿಲೇಹಾಳ್
ಅದೆಂಥಾ ಪ್ರೀತಿ ನಿನ್ನದು
ಶಿಲೆಯಾಗುವವರೆಗೂ ಅವನ
ಬರುವಿಕೆಗಾಗಿ ಕಾದು ನಿಂತಿದ್ದೀಯಲ್ಲ,
ಸರ್ವಾಂಗಗಳನೂ ಸಿಂಗರಿಸಿ.
ಶಿಲೆಯ ಮಹಲೊಳಗೆ
ಗರಡುಗಂಬಗಳ ಹೀಗೆ ದಿಟ್ಟಿಸಿ
ನೋಡುತ್ತಲೇ ಇದ್ದೀಯಲ್ಲ
ನಿನ್ನನೇ ನೀ ಮರೆತು
ಅವನು ಬಿಟ್ಟ ಏದುಸಿರ ಕುಡಿಯಲು.
ನೆರಳಲ್ಲೇನೂ ಅರಳದು
ಒಂಚೂರು ಮುಂದೆ ಬಾ
ಬಿಸಿಲಿಗೆ ಮೈಯೊಡ್ಡು
ನಿನ್ನ ಮರೆತು ಹೋದವನ ನೆನಪ
ಸ್ಮೃತಿಫಟಲದ ಕೋಣೆಯಿಂದ ಹೊರದೂಡು
ಮನಸಲ್ಲೊಂದು ಹೊಸ ಬೇರು ಚಿಗುರಿತು.
ಮೈಯನ್ನೊಮ್ಮೆ ಕೊಡವು
ಆ ದರಿದ್ರ ನೆನಪಿನ ಧೂಳು ನೆಲಕಾಣಲಿ
ಪಾದಗಳ ಮೇಲೆ ಬೀಳದಿರಲಿ,
ಬಿದ್ದರೆ ಆಗಾಗ ಕೆರೆದುಕೊಳ್ಳಬೇಕೆನಿಸೀತು
ಕೆಟ್ಟದ್ದಕ್ಕೆ ಅಂಟಿಕೊಳ್ಳುವ ಚಟ ಉಂಟು.
ಒಮ್ಮೆ ಹಿಂತಿರುಗಿ ನೋಡು; ಕಿವಿಕೊಡು
ನಿನಗೆಂದೇ ಕೈಮಾಡಿ ಕರೆದವರಿಗೆ
ಹೂ ನಗೆ ಬೀರಿದರಷ್ಟೇ ಸಾಕು
ಬದುಕು ಬದಲಿಸೀತು
ಚೈತನ್ಯದ ಹೊಳೆ ಹರಿದೀತು.





0 Comments