ಆ ರಾತ್ರಿ ..
ಸೂರ್ಯನಾಗಲೇ ತನ್ನ ಮನೆಗೆ ಹೋಗಿ ಬಾಗಿಲೆಳೆದುಕೊಂಡಾಗಿತ್ತು. ಕತ್ತಲು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಬರುತ್ತಿತ್ತು. ಮಕ್ಕಳಿಬ್ಬರೂ ತಮ್ಮ ಪಾಡಿಗೆ ತಾವೇ ಆಡಿಕೊಳ್ಳುತ್ತಿದ್ದರು. ಮೈದುನ ರೇಡಿಯೋದ ಕಿವಿ ಹಿಂಡಿ ಗುರ್ರ್.. ರ್ರ್.. ಎಂದು ಸದ್ದು ಹೊರಡಿಸುತ್ತಿದ್ದ. ನಾನು ಕೊಂಚ ಅಶಾಂತಿಯಿಂದಲೇ ಕೊಯ್ದಿಟ್ಟ ಮಲ್ಲಿಗೆಯನ್ನು ಮಾಲೆಯಾಗಿಸುತ್ತಿದ್ದೆ. ಇವರಿನ್ನೂ ತಮ್ಮ ಕ್ಲಿನಿಕ್ಕಿನಿಂದ ಮನೆಗೆ ತಲುಪಿರಲಿಲ್ಲ. ಇವರದ್ದು ಯಾವತ್ತಿನ ಅಭ್ಯಾಸ. ಮನೆಗೆ ತಡವಾದ ದಿನವೆಲ್ಲಾ ‘ಹೊರಡುವಾಗ ಪೇಷಂಟುಗಳು ಬಂದ್ರು.. ಹಾಗೇ ತಡ ಆಯ್ತು’ ಎನ್ನುವ ನಿತ್ಯದ ಸಬೂಬು. ಇದ್ದಕ್ಕಿದ್ದಂತೆ ದೂರದಿಂದ ‘ಎಚ್ಚರಿಕೆ … ಎಚ್ಚರಿಕೇ’ ಎನ್ನುವ ಸ್ವರವೊಂದು ಕಿವಿಗೆ ಬಿತ್ತು. ಆಟವಾಡುತ್ತಾ ಗದ್ದಲವೆಬ್ಬಿಸುತ್ತಿದ್ದ ಮಕ್ಕಳನ್ನು ಸುಮ್ಮನಾಗಿಸಿದೆ. ಮೈದುನನನ್ನು ರೇಡಿಯೋ ಆಫ್ ಮಾಡುವಂತೆ ಹೇಳಿದೆ. ಕೇವಲ ಎಚ್ಚರಿಕೆ ಎನ್ನುವುದು ಅಸ್ಪಷ್ಟವಾಗಿ ಕೇಳಿಸುತ್ತಿತ್ತಲ್ಲದೇ ಬೇರೇನೂ ಕೇಳಿಸುತ್ತಿರಲಿಲ್ಲ.
ನಾಲ್ಕು ವರ್ಷಗಳ ಮೊದಲೊಮ್ಮೆ ಭದ್ರಾ ನದಿಯ ಅಣೆಕಟ್ಟು ಒಡೆದಿದ್ದಾಗ ಹೀಗೇ ‘ಎಚ್ಚರಿಕೇ’ ಎಂಬುದಾಗಿ ಮೈಕಾ ಕಟ್ಟಿದ ಜೀಪಿನಲ್ಲಿ ಹೇಳುತ್ತಾ ಹೋಗುತ್ತಿದ್ದರು. ಮನೆಯಿಂದ ಸ್ವಲ್ಪ ಕೆಳಗೆ ನೀರು ಹರಿಯುವ ಹಳ್ಳವಿತ್ತು. ಅಲ್ಲೇ ನಮ್ಮ ಬಚ್ಚಲು ಮನೆ ಇದ್ದಿದ್ದು. ಬೆಳಗ್ಗೆದ್ದು ನೋಡಿದರೆ ನೀರು ಬಿಸಿ ಮಾಡುವ ಹಂಡೆ, ತಂಬಿಗೆ, ಪೇರಿಸಿಟ್ಟಿದ್ದ ಸೌದೆ ಎಲ್ಲಾ ನೀರಲ್ಲಿ ಕೊಚ್ಚಿ ಹೋಗಿತ್ತು. ಹಾಗೇ ಏನಾದರೂ ಆಯ್ತಾ ಅಂತ ಹೆದರಿಕೆಯಾತು. ಗಂಟೆಯ ಮುಳ್ಳು ಒಂಬತ್ತಕ್ಕೆ ಬಂತು. ಇನ್ನೂ ಇವರ ಸುಳಿವೇ ಇಲ್ಲ. ಮಕ್ಕಳು ನಿದ್ದೆಯ ಮಡಿಲಿಗೆ ಜಾರಿ ಹೋಗುತ್ತಿದ್ದರು. ಅವರನ್ನು ಏಳಿಸಿ ಊಟ ಬಡಿಸಿದೆ. ಮೈದುನನೂ ಅವರ ಜೊತೆಯೇ ಉಂಡ. ಇನ್ನೂ ಇವರು ಬಾರದಿರುವುದನ್ನು ಕಂಡು “ನಾನು ಕ್ಲಿನಿಕ್ಕಿನವರೆಗೆ ಹೋಗಿ ಬರಲಾ ಅತ್ತಿಗೆ” ಎಂದ. ಕ್ಲಿನಿಕ್ ಏನೂ ಹತ್ತಿರದಲ್ಲಿರಲಿಲ್ಲ. ಮನೆಯಿಂದ ಕಾಡಿನ ಹಾದಿ ಹಿಡಿದು ಮೂರೂವರೆ ಮೈಲು ನಡೆಯಬೇಕಿತ್ತು.
ಈ ಕತ್ತಲಿನಲ್ಲಿ ಅವನೊಬ್ಬನನ್ನೇ ಕಳಿಸುವುದು ಸಾಧ್ಯವೇ ಇರಲಿಲ್ಲ. ಎಲ್ಲಾದರೂ ಇವರು ಪೇಷಂಟಿನ ಮನೆಗೆ ವಿಸಿಟ್ ಹೋಗಿ ಬೇರೆ ದಾರಿಯಲ್ಲಿ ಮನೆ ತಲ್ಪಿದರೆ ಇವನು ಕ್ಲಿನಿಕ್ಕಿನಲ್ಲಿ ಕಾದೂ ಏನೂ ಪ್ರಯೋಜನವೂ ಆಗುತ್ತಿರಲಿಲ್ಲ. “ಬೇಡ ನೀನು ಮಲಗು ಈಗ ಬಂದಾರು” ಎಂದೆ. ಆಗೊಮ್ಮೆ ಈಗೊಮ್ಮೆ ಎಚ್ಚರಿಕೆ ಎನ್ನುವ ಸ್ವರ ದೂರದಿಂದಲೇ ಕಿವಿಗೆ ಬೀಳುತ್ತಿತ್ತು.ಎಷ್ಟು ಕಿವಿ ನಿಮಿರಿಸಿದರೂ ಬೇರೇನೋ ಕೇಳದೆ ಹೆದರಿಕೆ ಹೆಚ್ಚಿಸುತ್ತಿತ್ತು. ಅದು ಬಿಟ್ಟರೆ ಗಂಟೆಯ ಮುಳ್ಳು ಎದೆಗೆ ಗುದ್ದಿದಂತೆ ಟಿಕ್ ಟಿಕ್ ಎಂದು ಕರ್ಕಶ ಸದ್ದು ಮಾಡುತ್ತಿತ್ತು. ಹೊರಗಿನ ಕತ್ತಲಿಗೆ ಕಣ್ಣು ಹೊಂದಿಸಿ ದೂರ ದಾರಿಯ ಕಡೆಗೆ ಕಣ್ಣು ನೆಟ್ಟೆ. ಮನಸ್ಸಿನೊಳಗಿದ್ದ ಬೇಸರ ಈಗ ಕಣ್ಣೀರಾಗಿ ಹೊರ ಬರತೊಡಗಿತು. ‘ ಅಲ್ಲಾ .. ಈ ಕಾಡಿನ ಮಧ್ಯದ ಮನೆಯಲ್ಲಿ ಪುಟ್ಟ ಮಕ್ಕಳು, ಹೆಂಡತಿ ಎಲ್ಲಾ ಇದ್ದಾರೆಂಬ ಪ್ರಜ್ಞೆಯೂ ಬೇಡವೇ, ತಾನು, ತನ್ನ ಕೆಲಸ ಬಿಟ್ಟರೆ ಬೇರೇನೂ ಇವರ ತಲೆಯಲ್ಲೇ ಇಲ್ಲ’
ಗಡಿಯಾರ ಡಣ್ ಡಣ್ ಎಂದು ಹೊಡೆದುಕೊಳ್ಳಲು ತೊಡಗಿತು. ಮನಸ್ಸೆಲ್ಲೋ ಇದ್ದರೂ ಲೆಕ್ಕ ಹಾಕಿದೆ. ಹನ್ನೊಂದು.. ‘ದೇವಾ.. ಇಷ್ಟೊಂದು ಬೇಜವಾಬ್ಧಾರಿ ಇರಬಾರದು ಗಂಡಸರಿಗೆ.. ಛೇ..’ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಂತಾಯ್ತು. ದೂರದಿಂದ ಎಚ್ಚರಿಕೇ.. ಎನ್ನುವ ಸದ್ದು.. ಮತ್ತೆ ಒಂದು ಸಲ ಡಣ್ ಎಂದಿತು ಗಡಿಯಾರ.. ಸರ ಪರ ಒಣಗಿದೆಲೆಗಳ ಮೇಲೆ ಯಾರೋ ಕಾಲಿಟ್ಟಂತೆ .. ಹತ್ತಿರ ಹತ್ತಿರ ಬಂತು ಆ ಸದ್ದು..ಹೊರಗಿನಿಂದ ನನ್ನನ್ನು ಕರೆಯಿತು ಇವರ ಧ್ವನಿ.. ದುಃಖದ ಜಾಗದಲ್ಲಿ ಈಗ ಮತ್ತೆ ಸಿಟ್ಟು ಬುಗಿಲೆದ್ದಿತು. ಬೇಕಂತಲೇ ನಿಧಾನಿಸಿ ಬಾಗಿಲು ತೆಗೆದೆ. “ಮಕ್ಕಳು ಮಲಗಿದ್ರಾ .. ಇವತ್ತೇನಾಯ್ತು ಗೊತ್ತಾ..”ಎಂದು ಮಾತು ಸುರು ಮಾಡಿದರು.
ನನಗೆ ಉಕ್ಕಿ ಬರುತ್ತಿದ್ದ ಕೋಪದಲ್ಲಿ “ಹುಂ.. ಗೊತ್ತಾಗದೇ ಏನು.. ಇವತ್ತು ನಿಮ್ಮ ಪೇಷಂಟುಗಳು ಗಂಟೆ ಹನ್ನೊಂದಾಗುವುದನ್ನೇ ಕಾದು ಮದ್ದಿಗೆ ಸಾಲು ಕಟ್ಟಿ ಬಂದ್ರಲ್ವಾ.. ಸಾಕು ನಿಮ್ಮ ಕತೆ..” ಎಂದೆ. ಇವರು ನಗುತ್ತಾ.. “ಸ್ವಲ್ಪ ನನ್ನ ಮಾತು ಕೇಳು.. ನಾನು ಏಳು ಗಂಟೆಗೇ ಕ್ಲಿನಿಕ್ ಬಾಗಿಲು ಹಾಕಿ ಹೊರಟೆ. ಆಗಲೇ ‘ಎಚ್ಚರಿಕೇ.. ಒಂದು ಮಧ ಬಂದ ಆನೆ ಊರಲ್ಲಿ ಸುತ್ತುತ್ತಾ ಇದೆ. ಯಾರು ಮನೆಯಿಂದ ಹೊರ ಬರಬೇಡಿ’ ಅಂತ ಜೀಪಲ್ಲಿ ಹೇಳ್ತಾ ಬಂದ್ರು. ಪೇಟೆಯ ಜನಗಳು ಮನೆ ಸೇರಿ ಬಾಗಿಲು ಹಾಕಿಕೊಂಡರು. ಅಲ್ಲಿದ್ದ ನನ್ನ ಮಿತ್ರರು ಈಗ ನೀವು ಹೋಗುವ ಮಾತೇ ಬೇಡ ಎಂದು ನನ್ನನ್ನೂ ತಮ್ಮಲ್ಲಿಗೆ ಎಳೆದೊಯ್ದರು. ಸ್ವಲ್ಪ ಹೊತ್ತಿನಲ್ಲೇ ಆ ಆನೆ ರೈತನೊಬ್ಬನನ್ನು ತುಳಿದು ಸೊಂಡಿಲಿನಲ್ಲಿ ಬೀಸಿ ಎಸೆಯಿತಂತೆ ಎಂಬ ಸುದ್ಧಿ ಬಂತು. ಈಗಂತೂ ಯಾರೂ ನನ್ನನ್ನು ಹೊರಗೆ ಬಿಡಲು ತಯಾರೇ ಇರಲಿಲ್ಲ. ಆದರೂ ನಾನು ಸುಮಾರು ಹೊತ್ತು ಕಾದು ಈಗೇನೂ ತೊಂದರೆ ಇರಲಾರದು ಅಂತ ಬೇಗ ಬೇಗ ಓಡಿ ಮನೆಗೆ ಬಂದೆ..” ಎಂದರು.
“ಅಯ್ಯೋ ರಾಮಾ.. ನೀವ್ಯಾಕೆ ಬರಲು ಹೋದ್ರಿ .. ದೇವರೇ.. ಏನಾದ್ರಾಗಿದ್ರೆ..” ನಾನು ನಡುಗು ಸ್ವರದಲ್ಲಿ ಹೇಳಿದೆ. “ನೀನು ಪುಟ್ಟ ಮಕ್ಕಳೊಂದಿಗೆ ಇಲ್ಲಿ ಹೇಗಿರ್ತೀಯ ಅನ್ನುವ ಭಯ ನನ್ನನ್ನು ಇಲ್ಲಿಗೆ ಎಳೆಯಿತು.. ಹೋಗಲಿ ಬಿಡು .. ಈಗೇನೂ ಆಗಿಲ್ಲ ತಾನೇ .. ನನ್ನ ಊಟ ಆಗಿಲ್ಲ. ನಿಂದೂ ಅಗಿಲ್ಲ ಅಂತ ಗೊತ್ತಿದೆ. ತಟ್ಟೆ ಇಡು.. ಊಟ ಮಾಡೋಣ” ಎಂದು ಬಟ್ಟೆ ಬದಲಾಯಿಸಲು ಹೋದರು.







chennagide
Nice….:)
ವಾಹ್… ಎಷ್ಟು ಚೆಂದಕ್ಕೆ ಬರದ್ದೆ .. ಲಾಯ್ಕಿದ್ದು 🙂
Tumba Chennagide…
ತುಂಬಾ ಲಾಯಿಕ ಇದ್ದು .ಕಾಯುವಿಕೆ ಅಸಮಧಾನ ಕೋಪ ಹೆದರಿಕೆ ದುಃಖ ಕೋಪ ಆರ್ದ್ರತೆ ಎಲ್ಲದರ ಸರಳ ಸಹಜ ಅಭಿವ್ಯಕ್ತಿ ಪುಟ್ಟ ಬರಹದೊಳಗೆ
ಬಾಳ ಚಲೋ ಐತಿ ಮೇಡಂ.. 🙂
Cool! ಅಕ್ಕಾ! ಇದೇ ಒಂಟಿ ಕೊಂಬಿನ ಆನೆ ನನ್ನನ್ನೂ ಸ್ವಲ್ಪ ಕಾಡಿಸಿತ್ತು! ತಮ್ಮ ಬರಹ ನನ್ನನ್ನು ಇಪ್ಪತ್ತೈದು ವರ್ಷ ಹಿಂದೆ ಕೊಂಡೊಯ್ತು! ವಂದನೆಗಳು. – ಕೇಸರಿ ಪೆಜತ್ತಾಯ, ಸುಳಿಮನೆ ತೋಟ, ಬಾಳೆಹೊಳೆ – ೫೭೭ ೧೭೯
ಮೇಡಮ್ ತುಂಬಾ ಚೆನ್ನಾಗಿದೆ. ಹೌದು ಅವರ ಜವಾಬ್ದಾರಿ ಕೂಡಾ ಈ ಕಥೆಯಲ್ಲಿ ಮುಖ್ಯವಾದದ್ದು ಎ೦ದು ಖ೦ಡಿತಾ ಅನ್ನಿಸುತ್ತೆ. ನಿಮ್ಮ ಸ೦ವೇದನೆಗೆ ಧನ್ಯವಾದಗಳು.
ಎಸ್. ಕಿರಣ್ ಕುಮಾರಿ
ondu ghataneya sutta heneda niroopane channagide madam .