ನಮ್ಮ ಸೀಮೆ ಕತೆಗೆ ಹೆಸರಾದದ್ದು. ಕರಿಭಂಟನ ಕಾಳಗ, ಶ್ರೀದೇವಿ ಮಹಾತ್ಮೆ, ಶನಿ ಮಹಾತ್ಮೆ, ಶಿವ ಜಲಂಧರ, ದಶಕಂಠ ರಾವಣ, ಮುಂತಾದ ಸುಮಾರು ಇಪ್ಪತ್ತೇಳು ಬಯಲಾಟಗಳನ್ನು ಎದೆಯಲ್ಲಿಟ್ಟುಕೊಂಡು ಬೆಳೆಸಿದ ಭಾಗವತರು ಇದ್ದಾರೆ. ಹೊಸ ಪೀಳಿಗೆ ಕತೆಗಾರರೇನೂ ಕಮ್ಮಿ ಇಲ್ಲ. ಆದರೆ ಓದುಗರ ಮಕ ಸರಿಯಾಗಿ ಕಾಣುತ್ತಿಲ್ಲ. ಆ ಮಕಗಳು ಸ್ಪಷ್ಟವಾಗಿ ಕಂಡರೆ ನಮ್ಮ ಕತೆಗಾರರು ಮತ್ತಷ್ಟು ಕ್ರಿಯಾಶೀಲರಾದಾರು.
ಕಥೆಗಾರ ಎಸ್ ಗಂಗಾಧರಯ್ಯ ಅವರ ಹೊಸ ಕಥೆಗಳ ಸಂಕಲನ ‘ದೇವರ ಕುದುರೆ’
ಬಿಸಿಲಕೋಲು ಪ್ರಕಾಶನ ಹೊರತಂದಿರುವ ಈ ಕೃತಿಗೆ ಖ್ಯಾತ ವಿಮರ್ಶಕ ನಟರಾಜ ಬೂದಾಳು ಅವರು ಬರೆದ ಮುನ್ನುಡಿ ಇಲ್ಲಿದೆ
ಎಸ್. ನಟರಾಜ ಬೂದಾಳು
ವೈಕಂ ಕತೆಗಳನ್ನು ಕನ್ನಡಕ್ಕೆ ತಂದುಕೊಟ್ಟವರೆಂದೇ ಎಸ್. ಗಂಗಾಧರಯ್ಯನವರನ್ನು ಕನ್ನಡದ ಓದುಗರು ಮೊದಲಿಗೆ ಗುರುತಿಸುತ್ತಾರೆ. ಅದಕ್ಕೆ ಅವರದ್ದೇನೂ ತಕರಾರಿಲ್ಲ. ಅವರ ಹೆಚ್ಚುಗಾರಿಕೆಯೆಂದರೆ ವೈಕಂ ಥರದವರ ಪ್ರಭಾವದ ಸ್ವಾಲೆಯಲ್ಲಿಯೂ ತನ್ನಲ್ಲಿರುವ ಕತೆಗಾರನನ್ನು ಗುರುತಿಸಿ ಬೆಳೆಸಿದ್ದು.
ಅದು ಅಷ್ಟು ಸರಳವಲ್ಲ. ತಿಪಟೂರು ಆಸುಪಾಸಿನ ಕನ್ನಡವನ್ನು ಅಲ್ಲಿಯ ಆವರಣ ಇಂದಿಗೂ ಬಿತ್ತನೆ ಬೀಜದಂತೆ ಕಾಪಾಡಿಕೊಂಡು ಬಂದಿದೆ. ವಿಶೇಷವಾಗಿ ಆ ಪ್ರಾಂತದ ಗೊಲ್ಲರ ಹಟ್ಟಿಗಳು, ಕಣಿವೆ ಗುಡ್ಡಗ್ವಾರಣ್ಯಗಳು, ಕುರಿ ರೊಪ್ಪ, ಜಂಗಲಿ ದನಗಳ ಮಂದೆಗಳು, ಉರುಮೆ ದೋಣಿನ ನಡುವ ಹಲಗೆ ಹಿಡಿವ ಆಸಾದಿಗಳು ಮತ್ತು ಅವರ ಬಂಡು ಹಾಡುಗಳು, ತಮ್ಮ ವಂಶಾವಳಿಯ ಅಂತ್ಯವನ್ನು ಸಾರಲು ಇದ್ದಾವೇನೋ ಅನ್ನುವಂತಿರುವ ಜಾಲಾರದ ಮರಗಳು – ಹೀಗೆ ಇವೆಲ್ಲ ತಮ್ಮ ಮಡಿಲಲ್ಲಿ ಕಾಪಿಟ್ಟುಕೊಂಡಿರುವ ಬಿತ್ತನೆ ಭಾಷೆಯನ್ನು ಕಣಸುಗ್ಗಿ ಆದಮೇಲೆ ಇನ್ನಷ್ಟು ಸೇರಿಸಿ ಕೊಡುತ್ತೇನೆಂದು ಕಡತಂದಂತೆ ಕತೆಗಾರ ಗಂಗಾಧರಯ್ಯ ಕತೆಗಳಾಗಿಸಿದ್ದಾರೆ. ನಾನೂ ಅದೇ ನೆಲದವನು ಅದೇ ಕಾಲದವನು. ಹಾಗಾಗಿ ಇಲ್ಲಿನ ಕತೆಗಳನ್ನು ಒಂದೇ ರೊಟ್ಟಿಯನ್ನು ಎದುರಿಗೆ ಕೂತು ತಿನ್ನುವವನಂತೆ ಸವಿದಿದ್ದೇನೆ.
ಇಲ್ಲಿನ ಕತೆಗಳು ನಮ್ಮ ಬಾಳನ್ನು ಕಂಡು, ಕತೆ ನಾನೋ ನಿಮ್ಮ ಬಾಳೋ ಎಂದು ಕೇಳುವಂತಿವೆ. ನಿಜದ ಬದುಕೇ ಇಲ್ಲಿ ತಂತಾನೇ ಕತೆಯಾಗಿದೆ. ಕತೆಯೆಂದರೆ ನಿಜವಲ್ಲದ್ದು. ಆದುದರಿಂದ ಅದು ನಮ್ಮನ್ನೆ ಕುರಿತು ಮಾತನಾಡುತ್ತಿದೆ ಎನ್ನುವಂತೆ ನಮ್ಮ ಸಹಜ ಬದುಕು ಕಳೆದುಹೋಗಿದೆ. ಯಾರದೋ ಬಾಳನ್ನು ಬಾಳುತ್ತಿದ್ದೇವಾ ಎಂದು ಅನುಮಾನ ಬರುವಂತೆ ನಮ್ಮ ಬದುಕುಗಳು ರೂಪಾಂತರ ಹೊಂದಿವೆ. ಒಂದೊಮ್ಮೆ ವಿಶಿಷ್ಟ ಅನುಭವವೊಂದು ಕಲಾತ್ಮಕ ರೂಪಾಂತರ ಪಡೆದುಕೊಂಡರೆ ಕತೆಯೋ ಕವನವೋ ಆಗುವುದೆಂದು ಮೀಮಾಂಸೆ ಹೇಳುತ್ತಿತ್ತು. ಈಗ ಅದು ತನ್ನ ನಿಲುವನ್ನು ಬದಲಿಸಿಕೊಳ್ಳಬೇಕಿದೆ.
ಈ ಸಂಕಲನದ ಹನ್ನೆರಡು ಕತೆಗಳೂ ಮಾಡುತ್ತಿರುವುದು ದುಃಖದ ಅನುಸಂಧಾನವನ್ನು. ಉಕ್ಕೋ ಮಳ್ಳೋ ನೀರಿನಲ್ಲಿ ತೇಲುತ್ತ ಮುಳುಗುತ್ತ ಮಳ್ಳುತ್ತಿರುವ ಜೀವಗಳನ್ನು ಮಾತನಾಡಿಸುವ ಕತೆಗಾರರಿಗೆ ಇಲ್ಲಿ ಯಾರ ಸಂಕಟವೂ ಅಮುಖ್ಯವಲ್ಲ ಎಂದೆನ್ನಿಸಿದ್ದರೆ ಆಶ್ಚರ್ಯವಲ್ಲ.
ಇಲ್ಲಿರುವ ಬಹುಪಾಲು ಕತೆಗಳ ಆವರಣ ಕಾಲದ ದೃಷ್ಟಿಯಿಂದ ಒಂದೆರಡು ದಶಕಗಳ ಹಿಂದಿನದು. ನಮ್ಮ ಸುತ್ತ ಇರುವ ಗುಡ್ಡಬೆಟ್ಟಗಳು, ಕುರುಚಲು ಗಿಡಗಳು, ಮೆದೆ ಮುಳ್ಳುಕಂಟಿಗಳೊಳಗೆ ಏನಿದೆ ಎಂಬುದು ಅರಿವಿಗೆ ಬಾರದ ಹಾಗೆ ಎಲ್ಲ ಅವರವರ ತಾವಿನಲ್ಲಿ ಇದ್ದವು. ಇದ್ದಕ್ಕಿದ್ದ ಹಾಗೆ ಜೆಸಿಬಿಗಳ ಮೇಲೆ ಬಂದ ಆರ್ಥಿಕ ವಸಾಹತುಶಾಹಿಯು ನಮ್ಮನ್ನೆಲ್ಲ ಮಕಾಡೆ ಮಲಗಿಸಿ ನಮ್ಮ ಮೇಲೆ ತಮ್ಮ ಜೆಸಿಬಿಗಳನ್ನು ನುಗ್ಗಿಸಿಕೊಂಡು ಹೊರಟವು. ಗುಡ್ಡಬೆಟ್ಟಗಳನ್ನು ಅಗೆದವು, ಹಳ್ಳಕೊಳ್ಳಗಳನ್ನು ಸಪಾಟು ಮಾಡಿಕೊಂಡವು, ಚಿನ್ನವೋ ಕಬ್ಬಿಣವೋ ಅದೇನೇನೋ ಎಲ್ಲವನ್ನು ನುಣ್ಣಗೆ ಅರೆದುಕೊಂಡು ಒಂದಿಷ್ಟು ಧೂಳನ್ನು ನಮ್ಮ ಕಡೆಗೆ ತೂರಿ ನಮ್ಮ ಕಣ್ಣೆದುರೆ ದೋಚಿಕೊಂಡು ಹೋಗಲಾರಂಭಿಸಿದವು.
ದಿನಬೆಳಗಾಗುವುದರೊಳಗೆ ಸ್ಥಳೀಕ ಮತ್ತು ಪರದೇಶಿ ರಾಜಕಾರಣಿಗಳು ಒಂದಾದರು. ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುವ ಕಳ್ಳಕಾಕರಿಗೆ ಟೀ, ಕಾಪಿ ಕಾಸಲು ಇಲ್ಲಿನ ಪಾಪಿ ಪರದೇಸಿಗಳು ರಸ್ತೆ ಪಕ್ಕದಲ್ಲಿ ಒಲೆ ಹಚ್ಚಬೇಕಾಯಿತು. ಇಂತಹ ಸಂಕಟದ ಹೊತ್ತಿನಲ್ಲಿ, ಜಾಗದಲ್ಲಿ ಕತೆ ಹುಟ್ಟದೆ ಇನ್ನೆಲ್ಲಿ ಹುಟ್ಟೀತು?
ಅದಿರಲಿ, ವಾಸ್ತವ ಹಿಂಗೆ ಘನ ಘೋರವಾಗಿರುವಾಗ ಅದನ್ನು ಕತೆ ಮಾಡುವುದಾದರೂ ಹೆಂಗೆ? ಇಲ್ಲಿರುವ ಗುಡ್ಡದ ಮಲ್ಲಯ್ಯನೆಂಬೋ ಹೆಸರಿನ ದೇವರಾಗಲೀ, ಅವನನ್ನು ಅಲಂಕರಿಸಿ ಎಲ್ಲವನ್ನೂ ಅವನು ಕಾಯಬಲ್ಲ ಎಂದು ನಂಬಿರುವ ಗ್ಯಾರಜ್ಜನಾಗಲೀ, ಇಂಥಾ ಸಮಾನ ಅಶಕ್ತರನ್ನು ಮುಂದಿಟ್ಟುಕೊಂಡು ಯಾವ ಜಾಲಾರದ ಮರಗಳು, ಅವುಗಳ ಮೇಲೆ ಕುಂತು ಕೂಗುತ್ತಿರುವ ನವಿಲುಗಳು, ಅವಿತುಕೊಳ್ಳಲು ಜಾಗಕ್ಕೆ ತಡಕಾಡುತ್ತಿರುವ ಹುಲ್ಲೆಮರಿಗಳು ಎಂಥ ಪ್ರತಿರೋಧವನ್ನು ನೀಡಬಲ್ಲವು?
ಕಡೆಗೆ ಈ ಕತೆಯಾದರೂ ಏನು ಮಾಡೀತು? ಎಂದು ಅನ್ನಿಸಿದರೆ ಅದು ಕತೆಗಾರನ ಸೋಲೂ ಅಲ್ಲ ಕತೆಯ ಸೋಲೂ ಅಲ್ಲ. ಬದಲಿಗೆ ಕುಸಿಯುತ್ತಿರುವ ನಮ್ಮ ಬದುಕು ಎಂಬುದನ್ನು ಅರಿವಿಗೆ ತಂದುಕೊಡುವುದಷ್ಟೆ ಅದರ ಸಾಧ್ಯತೆ. ಇಂತಹ ಆವರಣಕ್ಕೆ ಬರುವ ಎಲ್ಲರೂ ಅನುಮಾನಕ್ಕೆ ಅರ್ಹರು ಎನ್ನುವಂತೆ ಆಗಿದೆ. ಪ್ರತಿಭಟನೆಯ ನೆಪದಲ್ಲಿ ಬರುತ್ತಿರುವವರಲ್ಲಿ ಒಳಗೆ ಇರುವ ಮಾಫಿಯಾಗಳು ಎಷ್ಟು ಜನರಿದ್ದಾರೋ? ಈವರೆಗೆ ನಾಟಕವೆನ್ನುವುದು ರಂಗದ ಮೇಲೆ ನಡೆಯುತ್ತಿತ್ತು ಕೆಳಗೆ ಕೂತವರು ನೋಡುತ್ತಿದ್ದರು. ಈಗ ಅವು ಅದಲುಬದಲಾಗಿವೆ. ಎಲ್ಲಿ ನಾಟಕವೋ ಎಲ್ಲಿ ಪ್ರೇಕ್ಷಕರೋ, ಎಲ್ಲಿ ಬದುಕೋ ಎಲ್ಲಿ ಕತೆಯೋ ಎನ್ನುವಂತಾಗಿದೆ. ಗುಡ್ಡದ ಕೂಸು ಎನ್ನುವ ಕತೆ ನನ್ನ ಕಿರುಬೆರಳನ್ನು ಮುಟ್ಟಿ ಜಗ್ಗಿಸಿದ್ದು ಹೀಗೆ. ಅದು ನನ್ನನ್ನು ಇಡಿಯಾಗಿ ಅಳ್ಳಾಡಿಸಿತು.
ಹಳ್ಳಿಯ ಬದುಕೇ ಸಂಕೀರ್ಣವಾದುದು. ಅದಕ್ಕೆ ಅನೇಕ ಕುರೂಪಿ ಮುಖಗಳಿವೆ. ಅಲ್ಲೊಂದು ಇಲ್ಲೊಂದು ನೀತಿ ನಿಯತ್ತಿನ ಒರತೆಗಳಿವೆ. ತೀವ್ರವಾಗಿರುವ ಜಾತಿ ಪ್ರಜ್ಞೆ, ಬಡತನವನ್ನೇ ಹಾಸಿ ಹೊದ್ದಿರುವ ಬದುಕು, ಮತ್ತೇನೂ ಇಲ್ಲದಿರುವುದಕ್ಕೆ ಅವರಿವರದ್ದೇನಾದರೂ ಪುಗಸಟ್ಟೆ ಸಿಗುತ್ತದಾ ಎಂದು ಕಾದಿರುವ ಕೆಲ ಸಣ್ಣಮನಸ್ಸಿನ ಜನ, ತೀರಾ ರೋಸಿ ಇನ್ನು ಸಾಕು ಎಂದು ಅನುಭಾವದ ಕಡೆ ನೋಟ ನೆಟ್ಟು ಮೇಲೆ ನೋಡುವವರೊಂದಿಷ್ಟು, ಇಲ್ಲಿಂದ ಕಿತ್ತುಕೊಂಡು ಆಚೆ ಹೋಗಲು ಆಸರೆಯಾಗುವ ಓದಿಗೆ ಹಂಬಲಿಸುವ ಕೆಲವೇ ಮಕ್ಕಳು, ಇವುಗಳ ನಡುವೆ ಒಂದಷ್ಟು ಸಮಾಧಾನವನ್ನು ಎಲ್ಲಿಂದಲೋ ಹೊಂಚಿಕೊಂಡು ಬಂದು ಮಕದ ಮೇಲೆ ಹರಡಿಕೊಂಡು ಕೂತು, ಭಜನೆ ಬ್ರಹ್ಮಾನಂದ ಸುಖವೆಂದು ಹಾಡುತ್ತಿರುವ ತತ್ವಪದಕಾರರು – ಎಲ್ಲ ಇರುವುದಿಷ್ಟರಲ್ಲೇ ಕಿತ್ತಾಟದ ಬದುಕು.
ಇದನ್ನು ಕೇವಲ ಕೃಷಿ ಸಂಬಂಧೀ ಸಮಸ್ಯೆಯೆಂದು ಸರಳೀಕರಿಸಲು ಬಾರದು. ಜೇನು ಬೇಲಿ, ಕರ್ಪಾಲು, ಕೋರು, ಚಿತ್ತದ ಗೊತ್ತ ಮುಟ್ಟದೆ ಕತೆಗಳು ಈ ಆವರಣದಲ್ಲಿ ಕಂಡರೆ ಅಜ್ಜಿಯ ಕೋಲಿನಂತಹ ಕತೆಗಳು ಅಪರೂಪದ ಕೌಟುಂಬಿಕ ಆವರಣವೊಂದನ್ನು ಚಿತ್ರಿಸುತ್ತದೆ. ಐದಾರು ದಶಕಗಳ ಹಿಂದೆಯೇ ಆರಂಭವಾದ ಕೌಟುಂಬಿಕ ವಿಘಟನೆಯ ಅಬ್ಬರ ಇನ್ನೂ ಮುಂದುವರೆದೇ ಇದೆ. ಈಗಂತೂ ಮೋಬೈಲುಗಳು ಬಂದ ಮೇಲೆ ವೈಯಕ್ತಿಕತೆಯ ಬೇಲಿಗಳನ್ನು ಕಿತ್ತು ಹಾರುಹೊಡೆಯಲಾಗಿದೆ. ಈ ಬೇಲಿ ಇಲ್ಲದ ಬದುಕನ್ನು ನಿರ್ವಹಿಸುವುದನ್ನು ಕಲಿತಿಲ್ಲದವರ ಪಾಡು ಬೇಡ.
ಈ ಕತೆಗಳಿಗೆ ಹೊಸ ವಿಸ್ತರಣೆಯೊಂದು ಇದೆ. ಅದನ್ನು ವಿಸ್ತರಣೆ ಎನ್ನಬೇಕೋ ಇಡಿಯಾಗಿ ಮತ್ತೊಂದು ಪ್ರಕಾರವೋ ಗೊತ್ತಿಲ್ಲ. ಚಿಕ್ಕನ ನವಿಲು ಮರಿಗಳು, ದೇವರ ಕುದುರೆ, ಪದುಮದೊಳಗೆ ಬಿಂದು ಸಿಲುಕಿ ಕತೆಗಳು ಓದುಗನ ಜೊತೆಯಲ್ಲಿ ಅಷ್ಟು ದೂರ ಮಾತನಾಡಿಸುತ್ತಲೇ ಬಂದು ಯಾವುದೋ ಒಂದು ತಿರುವಿನಲ್ಲಿ ಮರೆಯಾಗಿಬಿಡುತ್ತವೆ. ಓದುಗನಿನ್ನೂ ಅದರ ಜೊತೆಯಲ್ಲಿ ಮಾತನಾಡುತ್ತಲೇ ಇರುತ್ತಾನೆ. ಇಲ್ಲಿ ಸಾಮಾನ್ಯ ಕತೆಗಳಲ್ಲಿ ಕಾಣುಬರುವ ಏರುಗತಿಯ ನಿರೂಪಣೆ ಒಂದು ತಾರ್ಕಿಕ ಅಂತ್ಯಗಳನ್ನಿಲ್ಲಿ ನಿರೀಕ್ಷಿಸಲಾಗದು. ಕತೆ ಎರಡೂ ಕಡೆ ಮುಂದುವರಿಯಲು ಸಾಧ್ಯ: ಒಂದು ಕೇಳುಗನಲ್ಲಿ, ಇನ್ನೊಂದು ಕತೆಯಲ್ಲಿ. ಓದುಗನನ್ನೂ ಕತೆಯೊಳಕ್ಕೆ ಎಳೆದುಕೊಳ್ಳುವ ಪ್ರಯತ್ನವನ್ನು ಈ ಕತೆಗಳು ಮಾಡುತ್ತವೆ.
ಕಥನ ಮೀಮಾಂಸೆಗೆ ಸಂಬಂಧಿಸಿದ ಮಾತೊಂದನ್ನು ಹೇಳಲೇಬೇಕು. ಇವು ಈ ನೆಲದಿಂದ ಹುಟ್ಟು ಪಡೆದ ಕತೆಗಳು. ಈ ನೆಲದ ಭಾಷೆಯ ಬನಿ, ಬರದ ಗುಣ, ಇಲ್ಲಿನ ಅಂತಃಕರಣ ಎಲ್ಲವೂ ಕತೆಯಲ್ಲಿ ಜಾಗ ಬೇಡುತ್ತವೆ, ಪಡೆಯುತ್ತವೆ. ರಸ, ಧ್ವನಿ, ಔಚಿತ್ಯ ಮುಂತಾದ ಭಾಷಿಕ ಪರಿಕರಗಳನ್ನು ಜೋಡಿಸಿಟ್ಟುಕೊಂಡು ಕಟ್ಟುವ, ಓದಿದರೆ ಸ್ವಾಟೆಯಲ್ಲಿ ರಸಜಿನುಗಬೇಕೆನ್ನುವ ಕಥನಮೀಮಾಂಸಾ ಮಾದರಿಯನ್ನು ನಿರಾಕರಿಸಿಯೇ ಇವು ಬೆಳೆದು ನಿಂತಿವೆ. ಮೀಮಾಂಸೆಯೆನ್ನುವುದು ನಮ್ಮ ಪಾಲಿಗೆ ಸಂಕಟದ ಹೊರೆಯನ್ನು ಒಂದಿಷ್ಟು ಕಡಿಮೆ ಮಾಡಿ ಹಗುರಾಗಿಸುವ ದಾರಿ. ಇದು ನಮ್ಮ ಹೊಲ ಮನೆ ಕೇರಿಗಳಲ್ಲಿ ನಮ್ಮ ಜೊತೆಯೇ ಓಡಾಡಿಕೊಂಡಿರಬೇಕೇ ವಿನಾ ಆನಂದ, ಪರಾವಾಕ್ಕು, ಅನುತ್ತರಾ ಮುಂತಾದ ಗೊತ್ತಿಲ್ಲದ, ಕಂಡಿಲ್ಲದ, ಕೇಳಿಲ್ಲದ ಕಡೆಗೆ ಸಾಗಹಾಕುವ ಭ್ರಾಂತಲ್ಲ. ಹಾಗಾಗಿ ಇಲ್ಲಿಯ ಎಲ್ಲ ಕತೆಗಳೂ ಗುರಿಯಿಟ್ಟ ಹಾಗೆ ದುಃಖದ ಅನುಸಂಧಾನದಲ್ಲಿ ತೊಡಗಿವೆ. ಅದು ಕತೆಗೂ ಅನಿವಾರ್ಯ, ಕತೆಗಾರನಿಗೂ ಅನಿವಾರ್ಯವಾದುದು.
ನಮ್ಮ ಸೀಮೆ ಕತೆಗೆ ಹೆಸರಾದದ್ದು. ಕರಿಭಂಟನ ಕಾಳಗ, ಶ್ರೀದೇವಿ ಮಹಾತ್ಮೆ, ಶನಿ ಮಹಾತ್ಮೆ, ಶಿವ ಜಲಂಧರ, ದಶಕಂಠ ರಾವಣ, ಮುಂತಾದ ಸುಮಾರು ಇಪ್ಪತ್ತೇಳು ಬಯಲಾಟಗಳನ್ನು ಎದೆಯಲ್ಲಿಟ್ಟುಕೊಂಡು ಬೆಳೆಸಿದ ಭಾಗವತರು ಇದ್ದಾರೆ. ಹೊಸ ಪೀಳಿಗೆ ಕತೆಗಾರರೇನೂ ಕಮ್ಮಿ ಇಲ್ಲ. ಆದರೆ ಓದುಗರ ಮಕ ಸರಿಯಾಗಿ ಕಾಣುತ್ತಿಲ್ಲ. ಆ ಮಕಗಳು ಸ್ಪಷ್ಟವಾಗಿ ಕಂಡರೆ ನಮ್ಮ ಕತೆಗಾರರು ಮತ್ತಷ್ಟು ಕ್ರಿಯಾಶೀಲರಾದಾರು.
ಈ ಕತೆಗಳನ್ನೆಲ್ಲ ನಾನೇ ಬರೆದವನಂತೆ ಓದಿದೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ನನ್ನೊಳಗೂ ಒಬ್ಬ ಕತೆಗಾರ ಆಗೊಮ್ಮೆ ಈಗೊಮ್ಮೆ ಮಕಾ ತೋರಿಸಿ ಹೋಗುತ್ತಾನೆ. ಅವನು ನನ್ನನ್ನು ಕೇವಲ ಓದುಗನಂತೆ ಇರಲು ಬಿಡುತ್ತಿಲ್ಲ. ಈ ಕತೆಗಳನ್ನು ನಾನು ಬರೆದಿದ್ದರೆ ಏನು ಮಾಡುತ್ತಿದ್ದೆ ಎಂದೆಲ್ಲ ಕೇಳಿಕೊಂಡೆ. ಅನೇಕ ಕತೆಗಳ ಜೊತೆಗೆ ಮಾತಾಡುತ್ತ ಮಾತಾಡುತ್ತ ಅವುಗಳ ಜೊತೆಗೇ ಹೋಗಿಬಿಟ್ಟೆ, ಇನ್ನು ಕೆಲವು ಕತೆಗಳು ನಿನ್ನ ಜೊತೆ ಬರುವುದಿಲ್ಲ ಎಂದು ಚಂಡಿ ಹಿಡಿದವು! ಕತೆಗಳು ನಾವು ಹೇಳಿದಂತೆ ಕೇಳುತ್ತವೆ ಎಂದೇನಿಲ್ಲ.
ಗಂಗಾಧರಯ್ಯನದೂ ಅದೇ ಪಾಡು, ನಂದೂ ಅದೇ ಪಾಡು. ಹಾಗಾಗಿ ಇವು ಬರೀ ನನ್ನ ಮಾತುಗಳಲ್ಲ. ನನ್ನ ಈ ಮಾತುಗಳು ಗಂಗಾಧರಯ್ಯನ ಮಾತುಗಳು ಕೂಡ ಅಂದುಕೊಂಡರೆ ನನಗೂ ಖುಷಿ, ಅವರಿಗೂ ಖುಷಿಯಾಗುವುದು ಅಂದುಕೊಳ್ಳುತ್ತೇನೆ. ಇನ್ನಷ್ಟು ಮತ್ತಷ್ಟು ಕತೆಗಳು ಈ ಬೆದ್ದಲು ಭೂಮಿಯಿಂದ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ.
–





ಮುನ್ನುಡಿ ಪೂರ್ತಿ ” ನಾನಾಡುವ ನುಡಿ” ಯಲ್ಲಿದೆ. ನಮ್ಮೋರೊಬ್ರು ಇಲ್ಲವ್ರೆ ಅನ್ನಿಸಿತು!