ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರನ್ನ ತೊಲಗಿಸಬೇಕಾಗಿದೆ

ವಿವೇಕಾನಂದ. ಹೆಚ್.ಕೆ. 

ಈ ದಲಿತರು ಇದ್ದಾರೆ ನೋಡಿ,

ಅದೇ, ಹೊಲೆಯ ಮಾದಿಗ ಭೋವಿ ಕೊರಚ ಕೊರಮ ಚಮ್ಮಾರ ಮುಂತಾದ ನರಮಾನವರಂತೆ ಕಾಣುವ, ಹಸು ದನ ಇಲಿ ಹಾವು ತಿನ್ನುವ, ಕಪ್ಪಗಿರುವ , ಹರಕಲು ಬಟ್ಟೆ ಹಾಕಿಕೊಂಡು ಸ್ನಾನವೂ ಮಾಡದೆ ಕೆಟ್ಟ ವಾಸನೆ ಬರುವ, ಯೋಗ್ಯತೆ ಇಲ್ಲದಿದ್ದರೂ ಮೀಸಲಾತಿ ಕೊಡಿ ಅಂತ ಕೇಳುತ್ತಾರಲ್ಲ, ಅದೇ ನಾವು ನೀವು ಅವರನ್ನು ಮುಟ್ಟಿಸಿಕೊಳ್ಳಲೂ ಅಸಹ್ಯ ಪಡುತ್ತೇವಲ್ಲ, ಹಿಂದೆ ಊರಿನಿಂದ ಆಚೆ ಇಟ್ಟಿದ್ದೆವಲ್ಲ ಆ ಜನಗಳೇ ಇವತ್ತು ಈ ದೇಶದ ಅಭಿವೃದ್ಧಿಗೆ ಶಾಪ. ಏನಾದರೂ ಮಾಡಿ ಇವರನ್ನು ತೊಲಗಿಸಬೇಕಲ್ಲ. ಅದಕ್ಕಾಗಿ ಯೋಚಿಸುತ್ತಿದ್ದೇನೆ.

ಈ ಕೆಲವು ಹೆಂಗಸರು ಇದ್ದಾರಲ್ಲ.

ಅದೇ, ಬಡವರಾದರೂ ಜೀನ್ಸ್ ಪ್ಯಾಂಟು ಟೀ ಶರ್ಟು ಹಾಕ್ಕೊಂಡು ತುಟಿಗೆ ಲಿಪ್ ಸ್ಟಿಕ್ ಹಾಕ್ಕೊಂಡು ಬೈಕು ಕಾರು ಓಡುಸ್ಕೊಂಡು ಬಾಯ್ ಪ್ರೆಂಡ್ ಜೊತೆ ಸುತ್ತಾಡ್ಕೊಂಡು, ಹೆಣ್ಣು ತಾನು ತಗ್ಗಿ ಬಗ್ಗಿ ನಡಿಬೇಕು ಅನ್ನೋದು ಮರತ್ಕೊಂಡು, ಗಂಡ ಸತ್ತ ತಕ್ಷಣ ಅವನ ಜೊತೆ ಏಳೇಳು ಜನುಮದ ಅನುಬಂಧ ಅಂತ ಸಾಯದೆ ಇನ್ನೂ ಮಜಾ ಮಾಡ್ಕೊಂಡು ಸ್ವತಂತ್ರ ಬೇಕು ಸಮಾನತೆ ಬೇಕು ಅಂತಾ ಕೂಗಾಡ್ತಾರಲ್ಲ ಇಂತವರಿಂದಲೇ ನಮ್ಮ ದೇಶ ಹಾಳಾಗ್ತ ಇರೋದು. ಇವರಿಗೋ ಏನಾದ್ರು ಮಾಡಿ ಒಂದು ಗತಿ ಕಾಣಿಸಬೇಕು ಅಂತ ಯೋಚನೆ ಮಾಡ್ತಾ ಇದ್ದೇನೆ.

ಈ ಕೂಲಿ ಕಾರ್ಮಿಕರು ಇದ್ದಾರಲ್ಲ,

ಅದೇ, ತಲೆ ಮೇಲೆ ಮಲ ಹೊರುತ್ತಾ, ಗಲೀಜು ಮೋರಿಗಳನ್ನು ಕ್ಲೀನ್ ಮಾಡುತ್ತಾ, ರಸ್ತೆಗಳ ಕಸ ಗುಡಿಸ್ಕೊಂಡು ಬೇರೆಯವರ ಮನೆಯ ಎಂಜಲು ತೊಳೆದುಕೊಂಡು, ಕೂಲಿಗಾಗಿ ತನ್ನದೇ ಕುಲದ ಇನ್ನೊಬ್ಬರ ತೂಕದ ಮೂಟೆ ಹೊತ್ತುಕೊಂಡು, ಮರಳು ಮಣ್ಣು ಸಿಮೆಂಟು ಕಲೆಸುತ್ತಾ, ಕಲ್ಲು ಕಬ್ಬಿಣ ಹೊರುತ್ತಾ, ಇನ್ನೊಬ್ಬರ ಸುಖಕ್ಕಾಗಿ ಬಂಗಲೆಗಳನ್ನು ಕಟ್ಟಿಕೊಡುತ್ತಾ, ಬೆಳಗಿನಿಂದ ಸಂಜೆಯವರೆಗೂ ಕತ್ತೆ ದುಡಿದಂತೆ ದುಡಿದು ರಾತ್ರಿ ಎಣ್ಣೆ ಹೊಡೆದು ಮಲಗುತ್ತಾರಲ್ಲ ಇಂತವರಿಂದಲೇ ದೇಶ ನಾಶವಾಗುತ್ತಿರುವುದು‌. ಇವರನ್ನು ಹೇಗೆ ಇಲ್ಲವಾಗಿಸುವುದು ಎಂದು ಯೋಚಿಸುತ್ತಿದ್ದೇನೆ.

ಈ ಸಾಬರು ಇದ್ದಾರಲ್ಲ

ಅದೇ, ಬೆಳಗ್ಗೆ ಅಲ್ಲಾ ಹೋ ಅಕ್ಬರ್ ಅಂತ ಕೂಗುತ್ತಾ, ಕೆಟ್ಟು ನಿಂತ ವಾಹನಗಳನ್ನು ರಿಪೇರಿ ಮಾಡಿಕೊಡುತ್ತಾ, ಮೀನು ಮಾಂಸ ಹಣ್ಣು ತರಕಾರಿ ಬಟ್ಟೆ ಗುಜರಿ ಸಾಮಾನುಗಳನ್ನು ಮಾರುತ್ತಾ, ಗಡ್ಡ ಬಿಟ್ಕೊಂಡು ಟೋಪಿ ಹಾಕ್ಕೊಂಡು ಮಕ್ಕಳನ್ನು ಸಾಕಲು ಹಗಲಿರುಳು ಶ್ರಮಪಡುತ್ತಾ, ಏನೋ ಗಲಾಟೆ ಆಯ್ತು ಅಂತ ಇಬ್ಬರಿಗೆ ಹೊಡೆದು ಹತ್ತು ಜನ ಏಟು ತಿನ್ನುವ, ಎಷ್ಟೇ ದೇಶದ ಬಗ್ಗೆ ಪ್ರೀತಿ ತೋರಿದರೂ ಪಾಕಿಸ್ತಾನದವನು ಎಂಬ ಅನುಮಾನಕ್ಕೆ ಈಡಾಗುವ ಈ ನೆಲದ ಗುಣಕ್ಕೆ ಹೊಂದಿಕೊಂಡಿರುವ ಆದರೆ ರಾಜಕೀಯ ದಾಳವಾಗಿರುವ ಈ ಸಾಬರನ್ನು ಎಲ್ಲಿಗಾದರೂ ದೂರ ಓಡಿಸಬೇಕೆಂದು ಯೋಚಿಸುತ್ತಿದ್ದೇನೆ.

ಇನ್ನು ಈ ರೈತರು ಇದ್ದಾರಲ್ಲ,

ಅದೇ, ಪಟಾಪಟಿ ಚೆಡ್ಡಿ ಹಾಕ್ಕೊಂಡು, ಮೂಗಲ್ಲಿ ಗೊಣ್ಣೆ ಸುರುಸ್ಕೊಂಡು, ಬಫೂನ್ ಥರ ನಾಲ್ಕು ಕಾಸು ಸಿಕ್ಕುವ ಗ್ಯಾರಂಟಿ ಇಲ್ಲದಿದ್ದರೂ ದಿನವೆಲ್ಲಾ ಏನೋ ಘನಾಂಧಾರಿ ಕೆಲಸ ಮಾಡುವಂತೆ, ಭೂ ತಾಯಿಯ ಮಗನೋ ಮಗಳೋ ಎಂಬಂತೆ ಮೂಟೆಗಟ್ಟಲೆ ಅಕ್ಕಿ ರಾಗಿ ಗೋದಿ ಜೋಳ ಹಣ್ಣು ತರಕಾರಿ ಬೆಳೆದು ತಾನು ಸರಿಯಾಗಿ ಹೊಟ್ಟೆಗೆ ತಿನ್ನದಿದ್ದರೂ ಬೇರೆಯವರಿಗೆ ಅತ್ಯಂತ ಕಡಿಮೆ ಕಾಸಿಗೆ ಮಾರಿ, ತಾವು ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೆ ಮರ್ಯಾದೆ ಎಂಬ ಭ್ರಮೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ನಿಷ್ಪ್ರಯೋಜಕರು. ಸದಾ ದುಡಿಯುವುದನ್ನೇ ಕಾಯಕ ಮಾಡಿಕೊಂಡಿರುವ ಸುಖವನ್ನೇ ಕಾಣದ ಇವರಿಂದಲೂ ದೇಶಕ್ಕೆ ಅಪಾಯ. ಇವರನ್ನೂ ಇಲ್ಲವಾಗಿಸುವುದು ಹೇಗೆಂದು ಯೋಚಿಸುತ್ತಿದ್ದೇನೆ.

ಇವರಿಷ್ಟು ಜನ ತೊಲಗಿದರೆ ನಮ್ಮ ದೇಶದ ಸುಮಾರು 130 ಕೋಟಿ ಜನರಲ್ಲಿ 115 ಕೋಟಿ ಜನ ಡಮಾರ್. ಉಳಿಯುವುದು ಕೇವಲ 15 ಕೋಟಿ .ಅವರು ಯಾರೆಂದರೆ ಅತ್ಯಂತ ಬುದ್ದಿವಂತ ಅಧಿಕಾರಿಗಳು ರಾಜಕಾರಣಿಗಳು ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳು Software ನವರು ಮುಂತಾದ ಗೌರವಾನ್ವಿತರು.

ಆಗ ನೋಡಿ ನಮ್ಮ ಭಾರತ ಹೇಗೆ improve ಆಗುತ್ತೆ ಅಂತ. ಈ ಕಚಡಾ ನಾಯಿ ಕೋಳಿ ಮೀನು ದನ ಹಂದಿ ಹಾವು ಕಪ್ಪೆ ಚೇಳು ತಿನ್ನುವ 3rd class ಜನರೇ ಇರುವುದಿಲ್ಲ. ಕೇವಲ ಹಾಲು ತುಪ್ಪ ಅನ್ನ ಹೋಳಿಗೆ ಮುಂತಾದ ಸಾತ್ವಿಕ ಆಹಾರ ತಿನ್ನುವ, ಶುದ್ಧ ವ್ಯಾಕರಣದಿಂದ ಕೂಡಿದ ಶಾಸ್ತ್ರೀಯ ಭಾಷೆ ಮಾತನಾಡುವ , ರಾತ್ರಿ ಮಲಗುವಾಗಲೂ ಸೂಟು ಬೂಟು ಟೈ ಹಾಕಿಕೊಂಡೇ ಮಲಗುವ, ಬ್ರಿಟೀಷರಿಗೆ ಜನಿಸಿದಂತೆ ಇಂಗ್ಲೀಷ್ ಅಲ್ಲದೆ ಬೇರೆ ಭಾಷೆ ಮಾತನಾಡದ, ವಿಮಾನ ಬುಲೆಟ್ ಟ್ರೈನ್, Western Toilet ಮಾತ್ರ ಉಪಯೋಗಿಸುವ, Smart city ಗಳಲ್ಲೇ ವಾಸಿಸುವ, ಪ್ರೀತಿ ಮದುವೆ ಮಕ್ಕಳು ಸಂಸಾರಗಳನ್ನು Online ನಲ್ಲೇ ನಿಭಾಯಿಸುವ ಜನರೇ ಇರುತ್ತಾರೆ ಮತ್ತು ಭಾರತ ಎಂಬ ಹೆಸರು ಕೇಳಿದರೇನೆ ಅಮೆರಿಕ ಚೀನಾ ಪಾಕಿಸ್ತಾನ ಮುಂತಾದ ದೇಶಗಳು ಗಡಗಡ ನಡುಗುವಂತಾಗುವ ವಿಶ್ವ ಗುರು ನಮ್ಮ ದೇಶ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ನನ್ನ ಆಗ್ರಹ ಇಷ್ಟೆ,
ಭಾರತವನ್ನು ಶುಧ್ಧ ಸಸ್ಯಹಾರಿಯ ದೇಶವನ್ನಾಗಿ ಮಾಡಿ.
ಭಾರತವನ್ನು ಆಧ್ಯಾತ್ಮದ ತವರೂರನ್ನಾಗಿ ಮಾಡಿ.
ಸತಿ ಸಹಗಮನ ಪಧ್ಧತಿಯನ್ನು ಮತ್ತೆ ಜಾರಿಗೆ ತಂದು ಭಾರತೀಯ ನಾರಿಯರನ್ನು ದೇವತೆಗಳೆಂದು ವಿಶ್ವಕ್ಕೆ ನಿರೂಪಿಸಿ.
ಪೂಜ್ಯ ನಾರಿಯರಿಗೆ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿ.
ದಲಿತರನ್ನು ಊರ ಹೊರಗೋಡಿಸಿ.
33 ಕೋಟಿ ದೇವರುಗಳು ವಾಸಿಸುವ ಹಸುವನ್ನು ಮನೆಯೊಳಗೆ ಕರೆದು ಪಾದ ಪೂಜೆ ಮಾಡಿ.
ಸಾಬರು ಕ್ರಿಶ್ಚಿಯನ್ನರನ್ನು ಹೊಡೆದೋಡಿಸಿ.
ವಿಧವಾ ವಿವಾಹ ರದ್ದು ಮಾಡಿ.
ಅತ್ಯಂತ ನಂಬುಗೆಯ ಬಾಲ್ಯ ವಿವಾಹ ಜಾರಿ ಮಾಡಿ.

ಒಂದೇ ಬೇಸರ ಎಂದರೆ ನಾನು ಇದನ್ನು ನೋಡಲು ಇರುವುದಿಲ್ಲ. ಏಕೆಂದರೆ ಆ ನಿಷ್ಪ್ರಯೋಜಕ 115 ಕೋಟಿ ಜನರಲ್ಲಿ ನಾನೂ ಒಬ್ಬ.

ಉಳಿದ 15 ಕೋಟಿ ಮಹಾತ್ಮರಿಗೆ ಒಳ್ಳೆಯದಾಗಲಿ. ಧನ್ಯವಾದಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಇದು ಮನಸ್ಸುಗಳ ಅಂತರಂಗದ ಚಳವಳಿ.

 

‍ಲೇಖಕರು admin

31 May, 2017

1 Comment

  1. Venkat Bhat

    recently i too started feeling alienated…. allu illa, ellu illa… elli hogabeku telitilla.. yaradru damar madoru banni bega please

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading