ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವತ್ತು ಮತ್ತೆ ಕರ್ನಾಟಕಕ್ಕೆ ಹೊರಡಬೇಕು..

ಪ್ರೊ ಬಿ ಎ ವಿವೇಕ ರೈ

ಆಗಸ್ಟ್ ೨೦ ರಿಂದ ಇವತ್ತಿನ ವರೆಗೆ ಫಿನ್ ಲೆಂಡ್ ಮತ್ತು ಜರ್ಮನಿಯಲ್ಲಿ ಕಳೆದ ಇಪ್ಪತ್ತೈದು ದಿನಗಳು ಸಾಕಷ್ಟು ಕೆಲಸಗಳ ಒತ್ತಡಗಳ ನಡುವೆಯೂ ನನಗೆ ಸಂತೃಪ್ತಿ ಕೊಟ್ಟವು . ಫಿನ್ ಲೆಂಡ್ ನ ತುರ್ಕು ವಿಶ್ವವಿದ್ಯಾನಿಲಯದ ಜಾನಪದ ವಿಜ್ಞಾನ ವಿಭಾಗವರು ತಮ್ಮ ಗತಿಸಿದ ಪ್ರೊಫೆಸರ್ ಲೌರಿ ಹಾಂಕೊ ನೆನಪಿನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನದಲ್ಲಿ ಕನ್ನಡ ಮತ್ತು ತುಳು ಮೌಖಿಕ ಕಾವ್ಯಗಳನ್ನು ದೃಶ್ಯ ಶ್ರವ್ಯ ದಾಖಲೆಗಳ ಮೂಲಕ ವಿವರಿಸಿ , ಹಾಂಕೊ ಅವರಿಗೆ ಗೌರವ ಸಲ್ಲಿಸಿದೆ . ನನಗೆ ಕೆಲವು ವರ್ಷಗಳಿಂದ ಜಾನಪದ ಅಧ್ಯಯನದ ಸಂಪರ್ಕ ಕಡಮೆ ಆಗಿದ್ದರಿಂದ , ಈ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರೆಯಿತು . ಜಾನಪದ ಸಂಶೋಧನೆಯಲ್ಲಿ ಇಲ್ಲಿನ ತರುಣ ಪೀಳಿಗೆಯವರು ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ . ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಫಿನ್ ಲೆಂಡ್ ನ್ನು ಕಂಡದ್ದು ,ಅಲ್ಲಿನ ದ್ವೀಪಗಳಲ್ಲಿ ಅಡ್ಡಾಡಿದ್ದು ನಾಸ್ಟಾಲ್ಜಿಯಾ ಸುಖವನ್ನು ಕೊಟ್ಟಿತು .

ಕಳೆದ ನಾಲ್ಕು ವರ್ಷಗಳ ನನ್ನ ಪರಿಚಿತ ಹಾಗು ಆತ್ಮೀಯ ಪುಟ್ಟ ನಗರ ಜರ್ಮನಿಯ ವ್ಯೂರ್ತ್ಸ್ ಬರ್ಗ್ ಗೆ ಬಂದು ಇಲ್ಲಿನ ಇಂಡಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ . ಅನ್ನಾ ಎಸ್ಪಸಿತೋ ಅವರು ಯೋಜಿಸಿದ ‘ಅಂತಾರಾಷ್ಟ್ರೀಯ ಜೈನ ಕಥನ ಸಾಹಿತ್ಯ ‘ ಸಂಕಿರಣದಲ್ಲಿ -ಆಗಸ್ಟ್ ೩೦ ರಿಂದ ಸಪ್ಟಂಬರ ೧ – ಸಕ್ರಿಯವಾಗಿ ಪಾಲುಗೊಂಡೆ . ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದ ಅವಧಿಯಲ್ಲಿ ಪಂಪ, ರನ್ನ ,ಜನ್ನ ಕವಿಗಳ ಕಾವ್ಯಗಳನ್ನು ಪಾಠ ಮಾಡಿದ್ದರೂ ಜೈನ ಅಧ್ಯಯನದಲ್ಲಿ ನನ್ನದು ವಿಶೇಷ ಪರಿಣತಿ ಅಲ್ಲ. ಹಾಗಾಗಿ ಈ ಜೈನ ಸಂಕಿರಣದಲ್ಲಿ ಜೈನ ಸಂಶೋಧನೆಯ ಬಗ್ಗೆ ವಿಶೇಷ ಕೆಲಸಮಾಡಿದ ಸಂಶೋಧಕರನ್ನು ಭೇಟಿ ಆಗುವ ,ಅವರ ಅಧ್ಯಯನದ ಮಾದರಿ ಮತ್ತು ಫಲಿತಗಳನ್ನು ತಿಳಿದುಕೊಳ್ಳುವ ಅಪೂರ್ವ ಅವಕಾಶ ದೊರೆಯಿತು . ನಾನು ‘ ಕನ್ನಡ ಕವಿ ಜನ್ನನ ಯಶೋಧರ ಚರಿತೆ ಕಾವ್ಯದಲ್ಲಿ ಹಿಂಸೆ ಮತ್ತು ಅಹಿಂಸೆಗಳ ಪರಿಕಲ್ಪನೆಗಳು ‘ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದೆ . ಕನ್ನಡ ಜೈನ ಸಾಹಿತ್ಯ ಸಂಬಂಧಿಯಾದ ಪ್ರಬಂಧ ಅದು ಒಂದೇ ಅಲ್ಲಿ ಇದ್ದುದರಿಂದ ,ಅನೇಕ ಜೈನ ವಿದ್ವಾಂಸರು ಕನ್ನಡ ಜೈನ ಕಾವ್ಯಗಳ ಬಗ್ಗೆ ಆಸಕ್ತಿ ತೋರಿಸಿದರು .

ಸಪ್ಟಂಬರ ೨ ರಿಂದ ೧೪ ( ನಿನ್ನೆ ) ರ ವರೆಗೆ ಇಲ್ಲಿನ ಇಂಡಾಲಜಿ ವಿಭಾಗದಲ್ಲಿ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ನಡೆಯಿತು . ಕನ್ನಡವನ್ನು ಪ್ರಾಥಮಿಕ ಹಂತದಿಂದ ಮಾತನಾಡಲು ,ಓದಲು ಮತ್ತು ಬರೆಯಲು ಕಲಿಸುವ ಈ ಶಿಬಿರ ನಾವು ಕಳೆದ ವರ್ಷ ಸುರುಮಾಡಿದ ಸರಣಿಯಲ್ಲಿ ಮೂರನೆಯದು . ಕಳೆದ ಬಾರಿಯಂತೆ ನಾನು ಮತ್ತು ಡಾ . ಕತ್ರಿನ್ ಬಿಂದರ್ ಕನ್ನಡ ಅಧ್ಯಾಪಕರಾಗಿ .ಸಾರಾ ಮೆರ್ಕ್ಲೆ ಅವರು ಪೂರಕ ವ್ಯಾಸಂಗದ ಜೊತೆಗೆ ಅಕ್ಷರಾಭ್ಯಾಸ ತರಬೇತಿ ಕೊಟ್ಟರು . ಪ್ರೊ. ಹೈದ್ರೂನ್ ಬ್ರೂಕ್ನರ್ ಅವರು ಕರ್ನಾಟಕದ ಇತಿಹಾಸ, ಕಲೆಗಳು , ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ಕೊಟ್ಟರು . ನಿನ್ನೆ ದಿನ ಕನ್ನಡ ಶಿಬಿರದ ಅಭ್ಯರ್ಥಿಗಳಿಗೆ ನಾವು ನಡೆಸಿದ ಪರೀಕ್ಷೆಯಲ್ಲಿ ಅವರ ಸಾಧನೆ ನಮಗೆ ಬೆರಗು ಉಂಟು ಮಾಡಿತು . ಎರಡೇ ವಾರಗಳಲ್ಲಿ ಕನ್ನಡವನ್ನು ಸರಳವಾಗಿ ಮಾತನಾಡಲು ,ನಾವು ಕೊಟ್ಟ ಕನ್ನಡದ ಚಿಕ್ಕ ಕತೆಯನ್ನು ತಪ್ಪಿಲ್ಲದೆ ಓದಲು ಮತ್ತು ತಾವೇ ಯೋಚನೆ ಮಾಡಿ ಸ್ವತಂತ್ರವಾಗಿ ವ್ಯಾಕರಣಬದ್ಧವಾಗಿ ಕನ್ನಡ ವಾಕ್ಯಗಳನ್ನು ಬರೆಯಲು ಅವರಿಗೆ ಸಾಧ್ಯ ಆದದ್ದು ನಮಗೆ ಸಂಭ್ರಮದ ಸಂಗತಿ . ಕನ್ನಡ ಶಿಬಿರದ ಚಿತ್ರಗಳನ್ನು ನನ್ನ ಬ್ಲಾಗ್ ನಲ್ಲಿ ಬೇರೆಯಾಗಿಯೇ ಕೊಡುತ್ತೇನೆ .
ಇಲ್ಲಿ ಇವತ್ತು ತುಂತುರು ಮಳೆ . ಶರತ್ಕಾಲ ಆರಂಭ ಆಗಿದೆ . ಚಳಿಗಾಲಕ್ಕೆ ಮೊದಲೇ ಚಳಿ ಒಳಹೊಕ್ಕಿದೆ . ಕನ್ನಡ ಮತ್ತು ಕರ್ನಾಟಕದ ಇಲ್ಲಿನ ನೆನಪುಗಳನ್ನು ಹೊತ್ತುಕೊಂಡು , ಇವತ್ತು ಮತ್ತೆ ಕರ್ನಾಟಕಕ್ಕೆ ಹೊರಡಬೇಕು .
 

‍ಲೇಖಕರು G

18 September, 2013

2 Comments

  1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ಕನ್ನಡ ಸಾಹಿತ್ಯ ಮತ್ತು ಜನಪದವನ್ನು ಜಗದಗಲ,ಮುಗಿಲಗಲ ಬೆಳಗಿಸುತ್ತಿರುವ ಡಾ.ವಿವೇಕ ರೈ ಸರ್ ಅವರಿಗೆ ಅಭಿನಂದನೆಗಳು.

  2. Raj

    Amazing!
    Now, if only we could see similar interest and proficiency from our current generation in our own Bengaluru!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading