ಗಿರಿಜಾ ಶಾಸ್ತ್ರಿ
ಬೆಲ್ ವ್ಯೂ ವಸ್ತು ಸಂಗ್ರಹಾಲಯ ಭಾಗ-೩
ವಸ್ತುಸಂಗ್ರಹಾಲಯ ದ ಮೂರನೆಯ ಮಹಡಿಗೆ ಏರಿದೆವೆಂದರೆ ನಮ್ಮನ್ನು ಸ್ವಾಗತಿಸುವುದು ಜೋಯ್ ವೆಲ್ಟ್ ಕಂಪ್ (Joey Veltkamp) ಎಂಬ ಕಲಾವಿದನ “SPIRIT” ಇದು “ಕೌದಿ”ಯ ಚೇತನ. ಈ ಚೈತನ್ಯ ಪೆಸಿಫಿಕ್ ನ ವಾಯವ್ಯ ವಲಯದ ಗ್ರಾಮೀಣ ವೈಭವನ್ನು ಸಾರುತ್ತದೆ. ಜೋಯ್ ವೆಲ್ಟ್ ಕಂಪ್ ( ತನ್ನನ್ನು ತಾನು ಜಾನಪದ ಕಲಾವಿದನೆಂದು ( folk artist) ಕರೆದುಕೊಳ್ಳುತ್ತಾನೆ. ಅವನು ಈ ಪ್ರದೇಶಗಳಲ್ಲಿ ಕೌದಿ ಕಲಾವಿದನೆಂದೂ ( quilt artist) ಹೆಸರಾಗಿದ್ದಾನೆ.
ಕಂಪ್ ನಿಗೆ ತಾನು ‘ಅವನಲ್ಲ ಅವಳು’ ಎಂಬ ಅರಿವು ಹತ್ತಿದಾಗಿನಿಂದ ಅವನೊಳಗೆ ತಾಯಿ ಮತ್ತು ತಾಯಿನೆಲ ಜಾಗೃತವಾಗತೊಡಗಿತು. ಅವನನ್ನು queer (gay) folk artist ಎಂದೇ ಗುರುತಿಸಲಾಗುತ್ತದೆ. ಪೆಸಿಫಿಕ್ ನ ವಾಯುವ್ಯ ಪರಿಸರದ ಪ್ಯೂಜೆಟ್ ಸೌಂಡ್ ಪ್ರದೇಶದಲ್ಲಿರುವ ಮನೋಹರ ನಿಸರ್ಗದಿಂದ ಪ್ರಭಾವಿತನಾದವನು. ಅಲ್ಲಿನ ಜನರ ವಿಶಿಷ್ಟವಾದ ಸ್ವಭಾವ ಜೀವನ ಪದ್ಧತಿಯ ಬಗೆಗಿನ ನೆನವರಿಕೆ ಅವನ ರಚನೆಗಳಲ್ಲಿ ಕಂಡು ಬರುವ ಪ್ರಮುಖ ಅಂಶಗಳು. ಅವನ ಪ್ರಕಾರ “ಸ್ಪಿರಿಟ್ ” ಎಂದರೆ ತಾಯ್ನಾಡಿಗೆ ಮರಳುವುದು, ಬಾಲ್ಯದ ಹುರುಪು, ಅಮೆಚೂರ್ ಥಿಯೇಟರ್, ಜೊತೆಗೆ ಅಲೆಮಾರಿಯ ಆನುಭಾವಿಕತೆ ( Mysric hippie spiritualty). ಈ ಎಲ್ಲವೂ ಅವನ ಕಲಾಕೃತಿಗಳಲ್ಲಿ ಮುಪ್ಪುರಿಗೊಂಡು ವ್ಯಕ್ತವಾಗಿವೆ.
ಗಂಡಸಾಗಿ ಹುಟ್ಟಿದ ಕಂಪ್ ನಿಗೆ ಆಪ್ತ ಕೌಟುಂಬಿಕ ಗೃಹವಾದಿನಿಯ ಬಿಸುಪಿನ ಅಮಲೇರಿತು. ಅದರ ಪ್ರತೀಕವಾಗಿ ಅವನು ತನ್ನ ನಲವತ್ತನೇ ವರುಷದಿಂದ ಕೌದಿಗಳನ್ನು ಹೊಲಿಯತೊಡಗಿದ. ಕೌದಿ ಎಂದರೇನೆ ಅವ್ವನ ಬಿಸುಪು ಹೊತ್ತ ಹೊದಿಕೆ! ಅವ್ವನೆಂದರೆ ಬೆಚ್ಚಗಿನ ಮನೆ, ರುಚಿಯಾದ ಊಟ, ಎಣೆಯಿಲ್ಲದ ಪ್ರೀತಿ! ಆದುದರಿಂದಲೇ ಇವನ ಕೌದಿಗಳಲ್ಲಿ ತನ್ನ ತವರಿನ ಹಣ್ಣು ಹಂಪಲು ತರಕಾರಿಗಳು, ಬೀದಿ ವ್ಯಾಪಾರಿಗಳು, ಪ್ರಾಣಿ ಪಕ್ಷಿಗಳು ಜಾಗಪಡೆದಿವೆ.

ಕೌದಿಯ ಮೂಲಕ ಕೋಮಲತೆ ಮತ್ತು ಹೆಣ್ಣುತನ ವನ್ನು (soft and feminine) ಬಯಲಾಗಿಸುವುದು ಇವನ ಉದ್ದೇಶ. ಅನೇಕ ವೇಳೆ ಮೇಲುನೋಟಕ್ಕೆ ಅಸಂಬದ್ಧ, ಅಪ್ರಸ್ತುತವೆನಿಸುವ ಇವು ವಿಕೃತ ಹಾಸ್ಯಗಳಿಂದಲೂ ಕೂಡಿವೆ. ಅತೀಂದ್ರಿಯ ವಾಸ್ತವಿಕತೆಯನ್ನು ಕೇಂದ್ರೀಕರಿಸಿಕೊಂಡಿರುವ (surrealism) ಇವನ ಕಲಾಕೃತಿಗಳು ಜಾಗರೂಕತೆ (watchfulness), ಅನುಭಾವಿಕ (spirituality), ಅನಿತ್ಯ (changeability) ದ ಪರಿಕಲ್ಪನೆಗಳನ್ನು ಪ್ರತಿನಿಧಿಸುತ್ತದೆ. ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.
ಇವು ಕೇವಲ ಬಟ್ಟೆಯ ತುಣುಕುಗಳ ಜೋಡಣೆಗಳಷ್ಟೇ ಅಲ್ಲ ಅಪ್ರತಿಮ ಕಲಾಕೃತಿಗಳೂ ಆಗಿವೆ. ಅವುಗಳನ್ನು ಕಂಪ್ ಬಣ್ಣದ ಚಿತ್ರಗಳೆಂದೇ ಕರೆಯುತ್ತಾನೆ ( colour paintings). ಅಭೌತಿಕ ಸಂಗತಿಗಳಿಂದ ಹಿಡಿದು ಮಣ್ಣಿನ ಸಣ್ಣ ಸಣ್ಣ ವಿವರಗಳವರೆಗೆ ಇವನ ಕಲೆಯ ವಿಷಯ ಹರಡಿದೆ.
ಇಲ್ಲಿ ಒಂದು ಕಡೆ ಬಿಳಿಯ ನೈಲಾನು ಬಟ್ಟೆಗಳ ಮೇಲೆ ವಿಧ ವಿಧವಾದ ತೆರೆದ ಕಣ್ಣುಗಳನ್ನು ಹೊಲಿದ ಹಲವಾರು ಪರದೆಗಳ ಅನುಸ್ಥಾಪನೆಗಳು ( Installations) ಕೋಣೆಯ ತುಂಬಾ ಇಳಿ ಬಿದ್ದಿವೆ.
ಇಲ್ಲಿನ ಕೌದಿಗಳಲ್ಲಿ ತರಹೇವಾರಿ ಗೂಬೆಗಳದ್ದೇ ಮೇಲುಗೈ. ಇವು ಗೂಬೆಯ ಕಣ್ಣುಗಳೂ ಹೌದು. ಗೂಬೆ ಸಾವಿನ, ಅನ್ಯಲೋಕದ, ಶಕುನಗಳ, ಮಾಟಮಂತ್ರದ ಸಂಕೇತವೂ ಹೌದು. ಲೈಂಗಿಕ ಸಂಬಂಧಗಳ ಪ್ರತೀಕವೂ ಆಗಿದೆಯಂತೆ!

ಈ ಕಣ್ಣುಗಳು ಅನೇಕ ದೇಹಗಳಲ್ಲಿ ಸಾಗುವ ಆತ್ಮದ ಪ್ರಯಾಣದ ಸಂಕೇತವೂ ಆಗಿದೆ. ಈ ಕಣ್ಣುಗಳು ದೇವರ ಕಣ್ಣುಗಳಾಗಬಹುದು, ಅನ್ಯ ಲೋಕದ ಅಥವಾ ದೆವ್ವದ ಕಣ್ಣುಗಳಾಗಬಹುದು.
ಕಲಾವಿದನ, ದೆವ್ವಗಳು, ಗೂಬೆಗಳು ಮತ್ತು ಟ್ವಿನ್ ಪೀಕ್ಸ್ ನ ಕಲಾಕೃತಿಗಳ ಮೂಲ ಈ ಕಣ್ಣುಗಳೇ ಆಗಿವೆ.ಕಂಪ್ ನಿಗೆ ದೆವ್ವಗಳನ್ನು ರಚಿಸುವ ಗೀಳು 2008 ರ ಸುಮಾರಿಗೆ ಹುಟ್ಟಿಕೊಂಡಿತಂತೆ…. ಇಲ್ಲಿ ಕೆಲವು ಕಣ್ಣುಗಳಿಗೆ ಗುಡ್ಡೆಯೇ ಇಲ್ಲ. ಗುಳಿಬಿದ್ದ ಇಂತಹ ಕಣ್ಣುಗಳನ್ನು ದೆವ್ವದ ಪೋಷಾಕುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿದ್ದುವಂತೆ. ದೆವ್ವವೋ, ದೇವರೋ, ಅನ್ಯಲೋಕದ ಜೀವಿಗಳೋ? ಒಟ್ಟಿನಲ್ಲಿ ನಾವು ಯಾರದೋ “ಕಣ್- ಕಟ್ಟಿ”ನೊಳಗೆ ಸದಾ ಇದ್ದೇವೆ ಎಂಬುದನ್ನು ಇದು ವ್ಯಕ್ತಪಡಿಸುತ್ತದೆ.
ಗೂಬೆಗಳು ಮತ್ತು ಕಣ್ಣುಗಳ ಕೌದಿಗಳ ಅನುಸ್ಥಾಪಗಳು ಇಳಿ ಬಿದ್ದಿರುವುದು ಒಂದು ಕಡು ಕೆಂಪಾದ ಕೋಣೆಯಲ್ಲಿ. ಈ ಕೆಂಪು ಕೋಣೆ, ಕಾಲ ದೇಶಗಳ ಅರ್ಥಕಳೆದುಕೊಂಡ ಕನಸಿನ ಅಪೂರ್ವ ಆಯಾಮವನ್ನು ವ್ಯಕ್ತಪಡಿಸುತ್ತದೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.ಈ ಇನ್ಸ್ಟಲೇಷನ್ ಗಳು ದೆವ್ವಗಳ ದೃಷ್ಟಿ ಮತ್ತು ನೆನಪುಗಳ ಲೋಕಕ್ಕೆ ಕಟ್ಟಿದ ಪರದೆಯಾಗಿವೆ.
ಇದೇ ಮಹಡಿಯಲ್ಲಿ ಪ್ಯಾಟ್ ಲೋಪರ್ ( Patte Loper) ನ ಪ್ರಯೋಗಾಲಯವೊಂದಿದೆ. ಮನುಷ್ಯ ತನ್ನ ಹೊರತಾಗಿ ಬೇರೆ ಜೀವ ಸಂಕುಲಗಳು ಇವೆ ಎಂಬುದನ್ನೇ ಮರೆತಂತಿದೆ. ಅದರತ್ತ ಗಮನ ಹರಿಸುವುದರ ಸಲುವಾಗಿ “Other worlds” ಎನ್ನುವ ಶೀರ್ಷಿಕೆಯಡಿ ಮನುಷ್ಯನಿಗೆ ಪ್ರಾಣಿ ಮತ್ತು ನಿಸರ್ಗದೊಡನೆ, ಇತರ ಜೀವ ಜಡಗಳೊಡನೆ ಇರುವ ಅವಿನಾ ಸಂಬಂಧವನ್ನೂ ಇವು ವ್ಯಕ್ತಪಡಿಸುತ್ತವೆ. ನಾವು ಸತ್ತನಂತರ ಮಣ್ಣಲ್ಲಿ ಮಣ್ಣಾಗುವ ಪರಿಯನ್ನು ಮಣ್ಣಿನಿಂದಲೇ ಜೀವ ಚಕ್ರ ಮತ್ತೆ ಪ್ರಾರಂಭವಾಗುವ ಪರಿಯನ್ನು ಇಲ್ಲಿನ ಪ್ರೊಜೆಕ್ಟರ್ ನಲ್ಲಿ ಅನಿಮೇಷನ್ ಮೂಲಕ ತೋರಿಸಲಾಗುತ್ತದೆ.
ಜೋಯ್ ವೆಲ್ಟ್ ಕಂಪ್ ನ ಕೆಂಪು ಕೋಣೆಯ ಬದಿಯಲ್ಲಿಯೇ ಪ್ಯಾಟ್ ಲೋಪರ್ ನ ಪ್ರಯೋಗಾಲಯವನ್ನು ಇಟ್ಟಿರುವುದಕ್ಕೆ ಕಾರಣ ಈ ಬಹುಶಃ ಇಬ್ಬರೂ ಕಲಾವಿದರೂ ಜಾಗರೂಕತೆ (watchfulness), ಅನುಭಾವ (spirituality), ಅನಿತ್ಯ (changeability) ದ ಪರಿಕಲ್ಪನೆಗಳನ್ನೇ ವ್ಯಕ್ತಪಡಿಸುತ್ತಿದ್ದಾರೆ ಎಂದಿರಬಹುದು.



















ಮಾಹಿತಿಪೂರ್ಣ ಬರಹ