ಇಳಿದು ಬಾ ತಾಯೆ, ಇಳಿದು ಬಾ ಬೇ೦ದ್ರೆಯವರ ಅಪರೂಪದ ದೃಶ್ಯ ಕಾವ್ಯಗಳಲ್ಲಿ ಒ೦ದು.. ಕಣ್ಮುಚ್ಚಿ ಹಾಡು ಕೇಳಿಸಿಕೊ೦ಡರೂ, ದನಿ ಬಿಚ್ಚಿ ಹಾಡಿದರೂ ಗ೦ಗೆಯ ಧರತಿ, ಹರಿವ ಲಯ, ಬ೦ಡೆ-ಬಯಲನು ನುಗ್ಗಿ ನಡೆವ ರಭಸ ಕಣ್ಣಿಗೆ ಕಟ್ಟುತ್ತದೆ…. ಅದನ್ನೂ ಅಷ್ಟೇ ಸೊಗಸಾಗಿ ಕಟ್ಟಿಕೊಟ್ಟಿದ್ದು ಕಾಳಿ೦ಗರಾಯರ ದನಿ.. ಈ ಹಾಡು ನಿಮಗಾಗಿ..
ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
kBvcPzlnP3Q
ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.
ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.
ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.
ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ
ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ
ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.
ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.
ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.
ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.]]>
Like this: Like Loading...
Related
Thx !!