ಅರಕಲಗೂಡು ಜಯಕುಮಾರ್
ಅರಕಲಗೂಡು: ಅವತ್ತು ಯುಗಾದಿ ಹಬ್ಬ, ಹೊಸ ವರ್ಷದ ಸಂಭ್ರಮ, ಈ ಸಂಭ್ರಮದಲ್ಲಿ ಭಕ್ತಿ ಭಾವದಿಂದ ಹಣ್ಣು ಕಾಯಿ ಹೊತ್ತು ಆಂಜನೇಯನ ದೇಗುಲಕ್ಕೆ ಬಂದವರಿಗೆ ಬಾಗಿಲು ಮುಚ್ಚಿ ಆಂಜನೇಯ ಸ್ವಾಮಿಯ ದರ್ಶನವನ್ನೇ ನಿರಾಕರಿಸಲಾಯಿತು, ಭಕ್ತರು ಪ್ರಶ್ನಿಸಿದಾಗ ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸಲು ತಂದಿದ್ದ ಹಣ್ಣು ಕಾಯಿಯನ್ನೇ ಒದ್ದು ದೇಗುಲದ ಬಾಗಿಲು ಮುಚ್ಚಿ ತೆರಳಿದ ಅರ್ಚಕ ಅವಾಚ್ಯ ಶಬ್ದಗಳಿಂದ ಭಕ್ತಾದಿಗಳನ್ನು ನಿಂದಿಸುತ್ತಾ ತೆರಳಿದ. ಹಣ್ಣು ಕಾಯಿ ತಂದಿದ್ದ ಭಕ್ತರು ಅಪಮಾನ ಹಾಗೂ ನಿರಾಸೆಯಿಂದ ನೋವು ನುಂಗಿಕೊಂಡು ಹಿಂತಿರುಗಿದರು. ಈ ಕುರಿತು ಠಾಣೆಗೆ ದೂರು ನೀಡಿದರು ಆದರೆ ಚುನಾವಣೆಯ ನೆಪ ಹೇಳಿದ ಪೋಲೀಸರು ಕಾಟಾಚಾರದ ಮುಚ್ಚಳಿಕೆ ಬರೆಸಿಕೊಂಡು ಅಪಮಾನಕ್ಕೊಳಗಾದ ಭಕ್ತರನ್ನೇ ಗದರಿಸಿ ಕಳುಹಿಸಿದರು. ಇಂತಹ ಅಮಾನವೀಯ ಘಟನೆ ನಡೆದಿದ್ದು ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದಲ್ಲಿ. ಆಂಜನೇಯನ ಭಕ್ತರಾಗಿ ಅಪಮಾನಿತರಾಗಿದ್ದು ಅದೇ ಗ್ರಾಮದ ದಲಿತರು, ಅಷ್ಟಕ್ಕೂ ಅದು ಮುಜುರಾಯಿ ದೇಗುಲ, ಗ್ರಾಮದ ಇತರರ ಪ್ರೇರಣೆಯ ಮೇರೆಗೆ ಅಪಮಾನಿಸಿ ದೇವರ ದರ್ಶನ ನಿರಾಕರಿಸಿದ್ದು ಸಕರ್ಾರಿ ದತ್ತಿ ಪಡೆಯುವ ಅರ್ಚಕ ಮಹಾಶಯ! ಪ್ರಕರಣವನ್ನೇ ದಾಖಲಿಸದೇ ರಾಜಿ ಒಪ್ಪಂದ ಮಾಡಿ ಕಳುಹಿಸಿದ್ದು ಅರಕಲಗೂಡು ಪೋಲೀಸರು!
ಡಾ ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ ಆಚರಣೆಯ ಮುನ್ನಾ ದಿನವೇ ನಡೆದಿರುವ ಈ ಘಟನೆ ಸ್ವಸ್ಥ ಸಮಾಜದ ಸೋಗಿನ, ಹೀನ ಮನಸ್ಥಿತಿಯ ಪ್ರತೀಕವೇ ಸರಿ ಮತ್ತು ಆ ಮೂಲಕ ಜಾತಿ ವ್ಯವಸ್ಥೆ ಸತ್ತಿಲ್ಲ ಅದು ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನಿದರ್ಶನ ಒದಗಿಸಿದೆ. ವಾಸ್ತವದಲ್ಲಿ ಜಾತೀಯ ವ್ಯವಸ್ಥೆ ತೊಲಗಿದೆ ಎಂದು ಹೇಳಲಾಗುತ್ತಿದ್ದರೂ ಸಹಾ ಬೂದಿ ಮುಚ್ಚಿದ ಕೆಂಡದಂತೆ ಜಾತಿ ಪದ್ದತಿ ಜಾಗೃತವಾಗಿದೆ ಮತ್ತು ಅದು ಇನ್ನೂ ತೀವ್ರವಾಗಿ ಬದಲಾದ ಸ್ವರೂಪದಲ್ಲಿ ವ್ಯಕ್ತವಾಗುತ್ತಾ ಕಂದಕ ನಿಮರ್ಿಸುತ್ತಿದೆ ಎಂಬುದು ಸಾಬೀತಾದಂತಾಗಿದೆ. ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ನಡೆದಿದ್ದು ಅರಕಲಗೂಡು ತಾಲೂಕಿನಲ್ಲೇ, ಆದರೆ ಪ್ರಕರಣ ದಾಖಲಾಗಿದ್ದು ದಲಿತರಿಗೆ ನ್ಯಾಯ ಒದಗಿಸಿದ್ದು ಮಾತ್ರ ಶೂನ್ಯ. ಆಡಳಿತಾಶಾಹಿಯೂ ಸಹಾ ನ್ಯಾಯವನ್ನು ನಿರಾಕರಣೆ ಮಾಡುತ್ತಾ ಖಾಜಿ ನ್ಯಾಯ ಮಾದರಿಯಲ್ಲಿ ಮೇಲ್ನೋಟಕ್ಕೆ ತಿಪ್ಪೇಸಾರಿಸುತ್ತಿದೆ.
ಕಳೆದ ವರ್ಷ ಇದೇ ಯುಗಾದಿ ಹಬ್ಬದ ಸಂಧರ್ಭದಲ್ಲಿ ತಾಲೂಕಿನ ಕೆರಗೋಡು ಗ್ರಾಮದಲ್ಲಿ ದೇವರ ಜಾತ್ರೆ ಮತ್ತು ಉತ್ಸವ ಸಂಧರ್ಭ ಹಣ್ಣು ಕಾಯಿ ಮತ್ತು ಪೂಜೆ ಯನ್ನು ನಿರಾಕರಿಸಲಾಗಿತ್ತಲ್ಲದೇ ಹಬ್ಬದ ದಿನ ಅವರು ಗ್ರಾಮದೊಳಗೆ ಓಡಾಡದಂತೆ ನಿರಾಕರಿಸಲಾಗಿತ್ತು. ಅದನ್ನು ಉಲ್ಲಂಘಿಸಿದವರಿಗೆ ದಂಡವನ್ನೂ ಸಹಾ ಹಾಕಲಾಗಿತ್ತು. ಸವಣರ್ಿಯ ಸಮುದಾಯದವರೇ ಬಹುಸಂಖ್ಯಾತರಿರುವ ಆ ಗ್ರಾಮದಲ್ಲಿ ಇಂತಹ ಹೀನ ಪದ್ದತಿ ಅನಾದಿಕಾಲದಿಂದಲೂ ಆಚರಣೆಯಲ್ಲಿ ಬಂದಿದೆ. ಇವತ್ತಿಗೂ ಗ್ರಾಮದಲ್ಲಿ ದಲಿತರು ಪರ ಊರಿಗೆ ತೆರಳಲು ಖಾಸಗಿ ವಾಹನಗಳನ್ನು ಹತ್ತಿ ಇಳಿಯುವಂತಿಲ್ಲ, ಗ್ರಾಮದ ಹೊರವಲಯದಲ್ಲಿ ಇಳಿದು ಹತ್ತ ಬೇಕು, ದೇಗುಲ ಪ್ರವೇಶಕ್ಕೆ ನಿರ್ಬಂಧವಿದೆ. ಗ್ರಾಮದ ಪ್ರತಿಷ್ಠಿತ ಕುಟುಂಬದ ಸಹೋದರರ ಜಗಳದಲ್ಲಿ ಗ್ರಾಮದಲ್ಲಿ ವಾಸವಿರುವ ಕೇವಲ 9ದಲಿತ ಕುಟುಂಬಗಳನ್ನು ಬಹಿಷ್ಕರಿಸಲಾಯಿತು, ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ ಶಾಂತಿ ಸಭೆ ನಡೆಸಿ ತಪ್ಪು ದಂಡವನ್ನು ವಾಪಾಸ್ ಕೊಡಿಸಿದರು, ಸವಣರ್ಿಯರೇ ಹೆಚ್ಚಿರುವ ಗ್ರಾಮಕ್ಕೆ ದಲಿತ ದೌರ್ಜನ್ಯದ ಹೆಸರಿನಲ್ಲಿ ದತ್ತು ಗ್ರಾಮವಾಗಿ ತೆಗೆದುಕೊಂಡ ಸಚಿವ ಸೋಮಣ್ಣ ಕೋಟಿ ರೂ ವೆಚ್ಚದ ಯೋಜನೆ ಪ್ರಕಟಿಸಿ ಬಿಟ್ಟರು, ಇದರಿಂದ ಆ ಊರಿನ ದಲಿತರಿಗೆ ನಯಾ ಪೈಸೆಯ ಪ್ರಯೋಜನವೂ ಆಗಲಿಲ್ಲ ಬದಲಿಗೆ ಅಮಾನವೀಯ ಕೃತ್ಯ್ಕಕೆ ಕಾರಣರಾಗಿದ್ದವರು ಫಲಾನುಭವಿಗಳಾಗಿಬಿಟ್ಟರು. ಸಚಿವ ಸೋಮಣ್ಣ ಜೊತೆಗೆ ಊರ ಮದ್ಯದ ದೇಗುಲ ಆವರಣಕ್ಕೆ ದಲಿತರು ಬಂದಿದ್ದರಿಂದ ಮಡಿ ಹೋಯಿತೆಂದು ಕಿಡಿಗೇಡಿಗಳು ಸಗಣಿ ನೀರು ಹಾಕಿದರು. 3-4ದಿನಗಳ ನಂತರ ಅದೇ ಗ್ರಾಮಕ್ಕೆ ದಲಿತರ ಅಹವಾಲು ಕೇಳಲು ಬಂದ ಮತ್ತೊಬ್ಬ ದಲಿತ ಹಾಗೂ ಬಂದಿಖಾನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣಸ್ವಾಮಿಗೆ ಊರ ಹೊರಗಿನ ದಲಿತ ಕೇರಿಯಲ್ಲಿ ಸಭಾ ವೇದಿಕೆ ನಿಮರ್ಿಸಿ ತಾರತಮ್ಯವನ್ನು ಮಾಡಲಾಯಿತು. ಆ ಸಚಿವರೋ ಗ್ರಾಮದಲ್ಲಿ ಬಹಿಷ್ಕಾರಗೊಂಡ ದಲಿತರ ನೆರವಿಗೆ ಬಂದ ಸಂಘಟನೆಗಳ ಮುಖಂಡರ ವಿರುದ್ದವೇ ಟಾಡಾ ಮಾದರಿಯ ದೂರು ದಾಖಲಿಸುವ ಎಚ್ಚರಿಕೆಯನ್ನು ನೀಡಿ ಬಿಟ್ಟರು. ಸಕರ್ಾರವೂ ಸಹಾ ದಲಿತ ದೌರ್ಜನ್ಯಕ್ಕೆ ಸೂಕ್ತ ರಕ್ಷಣೆ ಕೊಡುವಲ್ಲಿ ವಿಫಲವಾಯಿತು.
ಇದೇ ರೀತಿ ಸಿದ್ದಾಪುರ ಗ್ರಾಮದ ದಲಿತರು ಹಬ್ಬದ ಸಂಧರ್ಭದಲ್ಲಿ ಚಪ್ಪರ ಹಾಕಲು ಬರಲಿಲ್ಲವೆಂಬ ಕಾರಣಕ್ಕೆ ಅಮಾನುಷವಾಗಿ ಹಲ್ಲೆ ನಡೆಸಿ ಬಹಿಷ್ಕಾರ ಹಾಕಲಾಯಿತು. ಅಂದಿನ ಹಾಸನ ಜಿಲ್ಲಾಧಿಕಾರಿ ಜಗದೀಶ್ ಸ್ವತ: ದಲಿತನಾಗಿದ್ದರೂ ಸಹಾ ಈ ಪ್ರಕರಣವವನ್ನು ನಿಭಾಯಿಸುವಲ್ಲಿ ವಿಫಲರಾದರು. ಬೈಚನಹಳ್ಳಿಯ ಬಳಿಯ ಮರವಳಲು ಗ್ರಾಮವೊಂದರ ಗ್ರಾಮದೇವತೆಗೆ ಊರವರು ಒಂದು ವಾರ ಕಾಲ ಅನ್ನ ಹಾಕುವ ಸಂಧರ್ಭ ಗ್ರಾಮಕ್ಕೆ ಹೋಗುವ ಮತ್ತು ಬರುವ ದಾರಿಯಲ್ಲಿ ದಲಿತರಿಗೆ ಮಾತ್ರ ಪ್ರವೇಶ ನಿರಾಕರಿಸಿ ಅವರನ್ನು ಸುತ್ತಿ ಬಳಸಿ ಜಮೀನಿನ ಮೇಲೆ ಓಡಾಡುವಂತೆ ಸೂಚಿಸಲಾಯಿತು. ಮತ್ತು ಅದನ್ನು ನೋಡಿ ಕೊಳ್ಳಲು ದಲಿತರನ್ನೆ ನೇಮಿಸಲಾಯಿತು. ಅರಿಯದೇ ಆ ಹಾದಿಯಲ್ಲಿ ಬಂದ ಅಮಾಯಕ ದಲಿತನೋರ್ವನನ್ನು ದನಕ್ಕೆ ಬಡಿದ ಹಾಗೆ ಬಡಿದು ದಂಡ ವಿಧಿಸಿದ ಘಟನೆ ನಡೆಯಿತು. ಈ ಪ್ರಕರಣವನ್ನು ಪೋಲೀಸರು ಖಾಜಿ ನ್ಯಾಯ ಮಾಡಿ ಮುಚ್ಚಿ ಹಾಕಿದರು.
ಏಪ್ರಿಲ್ 11, 2013ರಂದು ತಾಲೂಕಿನ ದುಮ್ಮಿ ಗ್ರಾಮದಲ್ಲೂ ಮುಜುರಾಯಿಗೆ ಸೇರಿದ ದೇಗುಲಕ್ಕೆ ಪೂಜೆ ಸಲ್ಲಿಸಲು ಹೋದ ದಲಿತರ ಹಣ್ಣು ಕಾಯಿಯನ್ನು ಒದ್ದು ಅಪಮಾನಿಸಿ ಬಾಗಿಲು ಹಾಕಲಾಗಿದೆಯೆಂದು ಅಪಮಾನಿತರಾದ ಧನಂಜಯ, ರಾಜೇಶ, ಪ್ರಮೋದ್, ನಿಂಗರಾಜು ಮತ್ತಿತರರು ಆರೋಪಿಸುತ್ತಾರೆ. ಗ್ರಾಮದಲ್ಲಿ ಬೆಳಿಗ್ಗೆ ಹೊತ್ತು ಸವಣರ್ಿಯ ಭಕ್ತಾದಿಗಳು ಮಾತ್ರ ಪೂಜೆ ಸಲ್ಲಿಸ ಬಹುದು ಮದ್ಯಾಹ್ನ 3ಗಂಟೆ ನಂತರ ದಲಿತರು ದೇಗುಲದ ಹೊರಗೆ ನಿಂತು ಹಣ್ಣುಕಾಯಿ ಪೂಜೆ ಸಲ್ಲಿಸುವ ಅನಿವಾರ್ಯತೆ ಗ್ರಾಮದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿದೆ ಎನ್ನಲಾಗುತ್ತಿದೆ. ಪ್ರಕರಣ ಅರಕಲಗೂಡು ಪೋಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆಯೇ ತಡವಾಗಿ ಎಚ್ಚೆತ್ತುಕೊಂಡ ಪೋಲೀಸರು ಉಭಯ ಬಣಗಳನ್ನು ಕರೆಸಿಕೊಂಡು ಮುಚ್ಚಳಿಕೆ ಬರೆಸಿದ್ದಾರೆ. ಆದರೆ ಅದೇ ದೇಗುಲದಲ್ಲ ಮತ್ತೆ ದೇಗುಲ ಪ್ರವೇಶ ನೀಡುವ ಕುರಿತು ದಲಿತರಿಗೆ ರಕ್ಷಣೆ ನೀಡುವ ವಿಚಾರವನ್ನು ಪ್ರಸ್ತಾಪಿಸಿಲ್ಲ.
ಇಂತಹ ಘಟನೆಗಳು ಜರುಗಿದಾಗ ಸೌಹಾರ್ಧ ಸಭೆ ನಡೆಸಿ ಪ್ರಕರಣ ಇತ್ಯರ್ಥಪಡಿಸಬೇಕಾದ ತಹಸೀಲ್ದಾರ್ ಗೆ ಈ ಕುರಿತು ಮಾಹಿತಿಯಿಲ್ಲ, ಪತ್ರಿಕೆ ಈ ಕುರಿತು ತಹಸೀಲ್ದಾರ್ ಈಶ್ವರಪ್ಪ ಅವರನ್ನು ಸಂಪಕರ್ಿಸಿದಾಗ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಅರಕಲಗೂಡು ಪೋಲೀಸರು ಬರೆಸಿದ ಮುಚ್ಚಳಿಕೆ ಪತ್ರಕ್ಕೆ ದೇಗುಲದ ಅರ್ಚಕ ಗೋಪಾಲ, ಗ್ರಾಮದ ಸವಣರ್ಿಯ ವರ್ಗದ ಮುಖಂಡರಾದ ಜವರೇಗೌಡ, ವೆಂಕಟೇಗೌಡ, ಪುಟ್ಟೇಗೌಡ, ಗುಣಶಂಕರ, ಸುರೇಶ, ದನಂಜಯ, ಕುಮಾರ, ವಂಕಟೇಗೌಡ ಮತ್ತಿತರರು ಸಹಿ ಹಾಕಿದ್ದಾರೆ. ಏ.14ರಂದು ದೇಗುಲ ಪ್ರವೇಶ ಮತ್ತು ಪೂಜೆಗೆ ಅವಕಾಶ ಕಲ್ಪಿಸುವಂತೆ ಹಾಗೂ ಈ ಸಂಧರ್ಭ ತಾಲೂಕು ಆಡಳಿತದಿಂದ ರಕ್ಷಣೆ ನೀಡುವಂತೆ ಗ್ರಾಮದ ದಲಿತರು ತಹಸೀಲ್ದಾರ್ ಈಶ್ವರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಮತ್ತೆ ಪ್ರವೇಶ ನಿರಾಕರಿಸಿದಲ್ಲಿ ತಾಲೂಕು ಆಡಳಿತ ನಡೆಸುವ ಅಂಬೇಡ್ಕರ್ ಜಯಂತಿಯಲ್ಲಿ ಕಪ್ಪು ಬಾವುಟ ಪ್ರದಶರ್ಿಸಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಸಂಧರ್ಭದಲ್ಲಾದರೂ ತಾಲೂಕು ಆಡಳಿತ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ದಲಿತರಿಗೆ ರಕ್ಷಣೆ ಒದಗಿಸುವುದೇ ಕಾದು ನೋಡಬೇಕು.






ನಮಸ್ತೆ ಜಯಕುಮಾರ್ ಅವರೆ ಚೆನ್ನಾಗಿದ್ದೀರ. ಮನೆಯಲ್ಲಿ ಎಲ್ಲರು ಚೆನ್ನಾಗಿದ್ದಾರೆ.
ನಿಮ್ಮ ಲೇಖನ ಓದಿದೆ ಚೆನ್ನಾಗಿದೆ. ತುಂಬಾ ನೋವಾಯಿತು. ಜಾತೀಯತೆಯ ಕ್ರೌಯ ಇನ್ನೂ ಜೀವಂತವಾಗಿ ದಲಿತರನ್ನು ಶೋಷಿಸುತ್ತಿರುವ ಕಾರಣಕ್ಕಾಗಿ