ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುವ ಭಾಗ್ಯವ ನೆನೆದು…

-ಸಾವಿತ್ರಿ ವಿ ಹಟ್ಟಿ
ಸಣ್ಣ ವಯಸ್ಸಿನು ವಾರಿಗೆಯ ಹುಡುಗರು ಆ ದೇವಾಲಯಕ್ಕೆ ಸೇಟಮ್ಮನ ಮನೆ ಎಂದೇ ಕರೆಯುತ್ತಿದ್ದರು. ಆದರೆ ನೀಲಕಂಠೇಶ್ವರ ದೇವಸ್ಥಾನವು ವಾಸ್ತವದಲ್ಲಿ ಸೇಟಮ್ಮನ ವಾಸಸ್ಥಾನವಗಿತ್ತೇ ವಿನಃ ಅದು ಆಕೆಯ ಮನೆಯಾಗಿರಲಿಲ್ಲ ಮತ್ತು ಸೇಟಮ್ಮ ಎಂಬುದು ಆಕೆಯ ಹೆಸರಾಗಿರಲಿಲ್ಲ. ಆಕೆಯ ನಿಜವಾದ ಹೆಸರು ಸತ್ಯಮ್ಮ ಎಂದಿತ್ತು.  ನಿಜ ಹೇಳಬೇಕೆಂದರೆ ಅದು ಬರಿ ಸೇಟಮ್ಮನ ವಾಸಸ್ಥಾನವಷ್ಟೇ ಆಗಿರಲಿಲ್ಲ. ಅಲ್ಲಿ ಕಣ್ಣುಕಪ್ಪಡಿ(ಬಾವಲಿಗಳು)ಗಳಿದ್ದವು. ಓತಿಕಾಟ, ದೊಡ್ಡ ಹಲ್ಲಿಗಳು, ಇಲಿ ಹೆಗ್ಗಣಗಳು ಎಲ್ಲ ಇದ್ದವು. ಕೆಂಪು ಮಂಗಗಳು ಸಹ ಆಗೀಗ ಅಲ್ಲಿಗೆ ಬಂದು ದೇವಸ್ಥಾನದ ಪ್ರಾಂಗಣದಲ್ಲಿ, ಸುತ್ತಲಿನ ಗೋಡೆಗಳ ಮೇಲೆ, ಅಲ್ಲಿಯೇ ಇದ್ದ ಒಂದು ಪತ್ರಿ ಗಿಡದ ಟೊಂಗೆಯ ಮೇಲೆ ಕುಳಿತು ನೆಗೆದಾಡಿ, ಆಟವಾಡಿಕೊಂಡು ಕನ್ನೇರಬಾವಿಯ ತೋಟದ ಕಡೆ ಪಯಣ ಮುಂದುವರೆಸುತ್ತಿದ್ದವು. ದೇವಸ್ಥಾನದ ಮುಂದಿನ ಆವಾರದ ಸುತ್ತಲಿನ ಗೋಡೆಗಳ ಮೇಲೆ ಹೊಟ್ಟೆ ರುಮ್ ಎನ್ನುವಂತಹ ಓತಿಕಾಟಗಳು ಉದ್ದಕ್ಕೆ ಕತ್ತು ಅಲುಗಾಡಿಸುತ್ತಾ ಓಡಾಡುತ್ತಿದ್ದವು. ಹಲ್ಲಿಗಳಂತೂ ದೇವಸ್ಥಾನದ ಕಂಬಗಳ ಬೋದಿಗೆ, ತಿರುವು ಮುರುವುಗಳ ಮೇಲೆ ಎಲ್ಲೆಂದರಲ್ಲಿ ಇರುತ್ತಿದ್ದವು. ಅವು ಲೊಚಗುಟ್ಟಿದಾಗಲೆ ಅವುಗಳ ಅಸ್ತಿತ್ವ ಅಲ್ಲಿರುವ ಹುಡುಗರ ಗಮನಕ್ಕೆ ಬರುತ್ತಿತ್ತು.
ದೇವಸ್ಥಾನದ ಮುಂದೆ ಆವಾರವಿದೆ. ಅಲ್ಲಿ ಯಾರಾದರೂ ಎತ್ತು ಅಥವಾ ಆಕಳುಗಳನ್ನು ಕಟ್ಟಿರುತ್ತಿದ್ದರು. ಹಾಗೇ ದನಗಳನ್ನು ಅಲ್ಲಿ ಕಟ್ಟಿ ಹಾಕಿದಾಗ ಹುಡುಗರಿಗೆ ದೇವಸ್ಥಾನದ ಮಂಟಪವೇ ಆಟದ ತಾಣವಾಗುತ್ತಿತ್ತು. ಅಂತಹ ಸಮಯದಲ್ಲಿ ಹುಡುಗರು ಸಹಜವಾಗಿಯೇ ದೇವಸ್ಥಾನದ ಚೆಲುವನ್ನು ಸವಿಯುತ್ತಿದ್ದರು. ಏಕೆಂದರೆ ಆ ದೇವಸ್ಥಾನವೂ ಕೂಡ ಲಕ್ಕುಂಡಿಯಲ್ಲಿ ಜಕ್ಕಣಾಚಾರ್ಯರು ಕಟ್ಟಿದ ದೇವಸ್ಥಾನಗಳಲ್ಲಿ ಒಂದು ಎಂಬ ಪ್ರತೀತಿ ಇದೆ. ಕರಿಯ ಕಲ್ಲಿನಲ್ಲಿ ಕಟ್ಟಲಾಗಿರುವ ಆ ದೇವಸ್ಥಾನದ ಗೋಡೆಗಳಿಗೆ ಕೆಲವೆಡೆ ಸುಣ್ಣವನ್ನು ಬಳಿಯಲಾಗಿತ್ತು. ಉಳಿದಂತೆ ಅದು ಸೇಟಮ್ಮನ ಒಲೆಯ ಹೊಗೆಗೆ ಈಡಾಗಿ ತನ್ನ ನಿಜವಾದ ಬಣ್ಣವನ್ನು ಕಳೆದುಕೊಂಡಿತ್ತು. ಗರ್ಭಗುಡಿಯಲ್ಲಿ ಮಾತ್ರ ಎತ್ತರದ ಜಗುಲಿಯ ಮೇಲಿರುವ ನೀಲಕಂಠೇಶ್ವರ ಲಿಂಗ ಮಾತ್ರ ಸದಾ ಪೂಜಿತವಾಗಿ ಚೆನ್ನಾಗಿಯೇ ಇರುತ್ತಿತ್ತು.
ದೇವಸ್ಥಾನದ ಕಂಬಗಳ ಬೋದಿಗೆ, ತಿರುವು ಮುರುವು , ಚೌಕಟ್ಟುಗಳೇ ಸೇಟಮ್ಮ ಬಳಸುವ ಸಾಮಗ್ರಿಗಳನ್ನು ಇಡಲು ಪಳಿ, ನಾಗೊಂದಿಗೆಗಳಾಗಿದ್ದವು. ಆಕೆ ರೊಟ್ಟಿ ಬೇಯಿಸುವ ಹಂಚು, ಒಂದು ಮಗಿ(ಮಣ್ಣಿನ ಚೊಂಬು) ಒಂದು ಅಲ್ಯುಮಿನಿಯಮ್ ತಟ್ಟೆ ಇವಿಷ್ಟನ್ನು ಮಾತ್ರ ಕಂಬದ ಬೋದಿಗೆಗಳಲ್ಲಿ ಇರಿಸುತ್ತಿದ್ದಳು. ಉಳಿದಂತೆ ತಾನು ಬಳಸುವ ಆಹಾರ ಸಾಮಗ್ರಿಗಳನ್ನೆಲ್ಲ ಒಂದು ಕಟ್ಟಿಗೆಯ ಪೆಟ್ಟಿಗೆಯಲ್ಲಿ ಹಾಕಿ ಒಂದು ಸಣ್ಣ ಬೀಗ ಜಡೆದಿರುತ್ತಿದ್ದಳು. ಆ ಕಪ್ಪಾದ ಕಟ್ಟಿಗೆಯ ಹಳೆಯ ಸಂದೂಕವನ್ನು ಮುಟ್ಟುವುದಕ್ಕೂ ಮಕ್ಕಳು ಹೆದರುತ್ತಿದ್ದವು. ಆಕೆಯ ಉಡುಪುಗಳು ಮಾತ್ರ ಒಂದು ಬಟ್ಟೆಯಲ್ಲಿ ಮಡಿಚಿಟ್ಟು ಕಟ್ಟಲ್ಪಟ್ಟಿರುತ್ತಿದ್ದವು. ಆ ಬಟ್ಟೆ ಗಂಟು ಕೂಡ ಅವ್ಯಕ್ತ ಭಯವನ್ನು ಉಂಟು ಮಾಡುತ್ತಿತ್ತು. ಅಲ್ಲಿ ಆಟವಾಡುತ್ತ ಕಸ ಕಡ್ಡಿ ಹರವಿ ದೇವಸ್ಥಾನದ ತುಂಬೆಲ್ಲ ಕುಣಿದು ಕುಪ್ಪಳಿಸುವ ಮಕ್ಕಳು ಸೇಟಮ್ಮ ಬರುತ್ತಲೇ ಸತ್ತೆವೊ ಕೆಟ್ಟೆವೊ ಎಂದು ಪ್ರಾಣ ಭಯದಿಂದ ಅಲ್ಲಿಂದ ಓಡಿ ಹೋಗುತ್ತಿದ್ದವು. ಏಕೆಂದರೆ ಎತ್ತರಕ್ಕೆ, ಕರ್ರಗೆ, ತೆಳ್ಳಗೆ ಇದ್ದ ಆಕೆಯ ಕಣ್ಣುಗಳು ಯಾವಾಗಲೂ ಕೆಂಪಗೆ ಇರುತ್ತಿದ್ದು ನೋಡಲು ಭಯಾನಕವಾಗಿದ್ದವು. ಅದೂ ಅಲ್ಲದೇ ಆಕೆ ಎಂದೂ ಯಾವುದೇ ಮಗುವನ್ನು ಪ್ರೀತಿಯಿಂದ ಮಾತಾಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಕುಂಕುಮ, ಬಳೆ, ಮೂಗುತಿ ಯಾವುದನ್ನೂ ಧರಿಸದೆ ಇರುತ್ತಿದ್ದ ಆಕೆಯನ್ನು ಸ್ವಲ್ಪ ತಿಳುವಳಿಕೆ ಬಂದ ಮಕ್ಕಳು ವಿಧವೆ ಮುದುಕಿ ಎಂದೇ ತಿಳಿದಿದ್ದವು. ಆಕೆ ಕೂಲಿ ಮಾಡಿ ತನ್ನ ಜೀವನವನ್ನು ನಡೆಸುತ್ತಿದ್ದಳು. ಆಕೆಗೆ ಯಾರೂ ದಿಕ್ಕು ಇಲ್ಲ ಎಂದೇ ನಂಬಿದ ಹುಡುಗರಲ್ಲಿ ನಾನೂ ಒಬ್ಬಳಾಗಿದ್ದೆ.
ಕ್ರಮೇಣ ತಿಳುವಳಿಕೆ ಬಂದಂತೆಲ್ಲ ಸೇಟಮ್ಮನ ಕುರಿತು ಅನೇಕ ವಿಷಯಗಳು ತಿಳಿದು ಬಂದವು. ನಿಜವಾಗಿಯೂ ಆಕೆಗೆ ಕೂದಲಿಗೊಂದು ಬಳಗವಿತ್ತು. ಆಕೆಯ ಗಂಡ ಸಣ್ನ ವಯಸ್ಸಿನಲ್ಲೇ ಆಕೆಯನ್ನು ಬಿಟ್ಟು ಹೋದನಂತೆ. ಹೋದದ್ದು ಎಲ್ಲಿಗೋ ಗೊತ್ತಿಲ್ಲ. ಆದರೆ ಹಾಗೆ ಹೋದವನು ಸನ್ಯಾಸಿಯಂತೆ ಬದುಕುತ್ತಿರುವುದು ಯಾರು ಯಾರಿಂದಲೋ ಎಲ್ಲೆಲ್ಲಿಂದಲೋ ನಮ್ಮೂರಿಗೆ ಸುದ್ದಿ ಬಂದಿತ್ತು. ನಂತರ ಆತ ಸತ್ತೇ ಹೋದನೆಂದು ಸುದ್ದಿ ಬಂದಿತ್ತಂತೆ. ಇದೇ ಕಾರಣದಿಂದಲೊ ಏನೊ ಸತ್ಯಮ್ಮ ಸೇಟಮ್ಮ ಆಗಿ  ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು ಎಂಬ ಮಾತನ್ನು ಪ್ರಯೋಗ ಮಾಡುತ್ತಿರುವಂತೆ ಬದುಕುತ್ತಿದ್ದಳು. ಹೀಗಿದ್ದ ಸೇಟಮ್ಮ ಅದೊಂದು ದಿನ ಕಾಲಿನಲ್ಲಿ ಕಾಲ್ಗೆಜ್ಜೆ, ಕಾಲುಂಗುರ, ಕೈಯಲ್ಲಿ ಬಳೆ, ಕೊರಳಲ್ಲಿ ತಾಳಿ, ಕುಂಕುಮದೊಂದಿಗೆ ಕಾಣಿಸಿಕೊಂಡಾಗ ನನಗೆ ಏನೂ ದಿಕ್ಕು ತೋಚದಂತಾಗಿಬಿಟ್ಟಿತ್ತು. ಏಕೆಂದರೆ ಆಕೆ ಹರೆಯದ ವಯಸ್ಸಿನಲ್ಲಿ ಇದೆಲ್ಲವನ್ನು ಧರಿಸಿದ್ದರೆ ಬಹುಶಃ ಯಾರಿಗೂ ಏನೂ ಅನ್ನಿಸುತ್ತಿರಲಿಲ್ಲವೇನೊ? ಆದರೆ ಆಕೆ ಈ ರೀತಿ ಉಡುಗೆ ತೊಡುಗೆ ಅಲಂಕಾರದಲ್ಲಿ ಬದಲಾವಣೆ ಹೊಂದಿದಾಗ ಆಕೆಗೆ ಸನಿಹ ಸನಿಹ ಅರವತ್ತು ವರ್ಷ ತುಂಬಿತ್ತೇನೊ. ಹಾಗಾಗಿ ನನಗೂ ಬಹಳ ಆಶ್ಚರ್ಯ, ದಿಗಿಲು, ಸಂಶಯ ಉಂಟಾಗಿದ್ದವು. ಆಕೆಯನ್ನು ರಸ್ತೆಯ ಮೇಲೆ ಆ ಬದಲಾದ ಅಲಂಕಾರದಲ್ಲಿ ನೋಡಿ ನೋಡಿದವಳೇ ಒಂದೇ ಉಸಿರಿಗೆ ಓಡುತ್ತಾ ಬಂದು ಮನೆಗೆ ತಲುಪಿದ್ದೆ. ನನ್ನ ಗಾಬರಿಯನ್ನು ಕಂಡ ಅವ್ವ ಅಕ್ಕ ಕೂಡ ಗಾಬರಿಗೊಂಡು ಯಾಕ ಯಾಕವ್ವಿ ಅಷ್ಟ್ಯಾಕ ಓಡಿ ಬಂದೀ? ಎಂದಿದ್ದರು. ಕೈಯಲ್ಲಿದ್ದ ನನ್ನ ಪುಸ್ತಕ, ಪಾಟಿಯನ್ನು ಹಾಗೆ ಎದೆಗವಚಿಕೊಂಡೇ ಸೇಟಮ್ಮನ ಬದಲಾವಣೆ ಬಗ್ಗೆ ಅವ್ವಗೆ ವರದಿ ಒಪ್ಪಿಸಿದಾಗ, ಅಕ್ಕನವರಿಬ್ಬರೂ ಬಿದ್ದು ಬಿದ್ದು ನಕ್ಕಿದ್ದರು ನನ್ನ ಗಾಬರಿಯ ಕಾರಣ ಕೇಳಿ. ನಂತರ ನನಗೆ ತಿಳಿಸಿದರು. ಅದೂವರೆಗೆ ಸತ್ತೇ ಹೋಗಿದ್ದಾನೆಂದು ನಂಬಿದ್ದ ಸತ್ಯಮ್ಮನ ಗಂಡ ಬದುಕಿದ್ದಾನೆಂದೂ, ಆತ ಸನಿಹದರಲ್ಲಿಯೇ ಆಕೆಯನ್ನು ನೋಡಲು ಬರುವವನಿದ್ದಾನೆಂದೂ ಸುದ್ದಿ ಬಂದಿತ್ತಂತೆ. ಆ ಶುಭ ಸುದ್ದಿಯನ್ನು ಕೇಳಿದ ಸೇಟಮ್ಮ ಅದೂವರೆಗೆ ಬೋಳು ಬೋಳಾಗಿ ಕಳೆದು ಸುಕ್ಕು ಬಿದ್ದಿದ್ದ ಬದುಕಿಗೆ ಅಲಂಕಾರ ಮಾಡಹೊರಟಿದ್ದಳು… ಪಾಪ ಅನ್ನಿಸಿಬಿಟ್ಟಿತು.

‍ಲೇಖಕರು sreejavn

21 August, 2011

2 Comments

  1. malathi S

    Nice story Savi
    🙂
    malathi S

  2. D.RAVIVARMA

    kathe tumba chennagide,infact neevu kathe baredilla,adu tantane helta hogta ide nijakku wonderful.d,ravi varma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading