ಇದು ಸೊಳ್ಳೆ ಪುರಾಣ!

– ಎಸ್.ಜಿ.ಶಿವಶಂಕರ್


ಸೊಳ್ಳೆಯ ಬಗೆಗೂ ಒಂದು ಪುರಾಣವೇ ಎಂದು ಹುಬ್ಬೇರಿಸಬೇಡಿ! ತಥ್ ಇದು ಸೊಳ್ಳೆ ವಿಷಯ ಎಂದು ಮೂಗು ಮುರಿಯಲೂಬೇಡಿ! ಸೊಳ್ಳೆಯ ವಿಷಯವನ್ನು ಯಕಶ್ಚಿತ್ ಎಂದಂತೂ ಭಾವಿಸಬೇಡಿ!ಹುಲಿ ಸಿಂಹಗಳಿಗೂ ಹೆದರದವರು ಸೊಳ್ಳೆಗಳಿಗೆ ಅಂಜಲೇಬೇಕು! ಕಾರಣ ಹಂದಿ ಜ್ವರ, ಚಿಕನ್ಗುನ್ಯಾ ಮುಂತಾದ ಆಧುನಿಕ ಖಾಯಿಲೆಗಳನ್ನು ಯಾವುದೇ ತಾರತಮ್ಯವಿಲ್ಲದೆ ವಿಶ್ವದಾದ್ಯಂತ ಹರಡುವ ಮೂಲಕ ಸೊಳ್ಳೆಗಳು ಜಗತ್ತಿನ  ಬಲಿಷ್ಠ ಕೀಟಗಳಾಗಿವೆ. ಈ ಕಾರಣದಿಂದಾಗಿ ಸೊಳ್ಳೆಯ ಬಗೆಗಿನ ಈ ಬರಹಕ್ಕೆ ಮಹತ್ವವಿದೆ ಎಂಬುದು ನನ್ನ  ಅಚಲವಾದ ನಿಲುವು!

ನನ್ನ ಜೀವನದ ಸುಮಾರು ಅರವತ್ತು ವರ್ಷ ಅಂದರೆ ಸೇವೆಯಿಂದ ನಿವೃತ್ತಿಯಾಗುವವರೆಗೂ ಸೊಳ್ಳೆಗಳ ಬಗೆಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಿವೃತ್ತಿಯ ನಂತರವೇ ಈ ವಿಸ್ಮಯಕಾರಿ ಕೀಟಗಳ ಬಗೆಗೆ ಗಮನ ಹರಿಸಿದ್ದು. ವಿಸ್ಮಯಕಾರಿ ಎಂಬ ಪದ ಪ್ರಯೋಗಿಸದ್ದಕ್ಕೆ ನಿಮಗೆ ಅಚ್ಚರಿಯಾಗಬಹುದು. ಇವನ್ನು ವಿಸ್ಮಯಕಾರಿ ಎಂದು ಕರೆಯುವುದಕ್ಕೆ ಕಾರಣವಿದೆ. ನನ್ನ ಮನೆಯಲ್ಲಿ ಎಡಬಿಡದೆ ಪ್ರತಿ ದಿನ ರಾತ್ರಿ ಸಾಯಿಸುವಷ್ಟೇ ಸೊಳ್ಳೆಗಳು ನಡುರಾತ್ರಿಯಲ್ಲಿ ಕಾಣಿಸಿಕ್ಕೊಳ್ಳುತ್ತವೆ! ನಡುರಾತ್ರಿ ಸಾಯಿಸಿದಷ್ಟೇ ಸೊಳ್ಳೆಗಳು ಮರುದಿನ  ಕಾಣಿಸಿಕ್ಕೊಳ್ಳುತ್ತವೆ!  

ಈ ಕಾರಣಕ್ಕೇ ಇವನ್ನು ವಿಸ್ಮಯಕಾರಿ ಕೀಟಗಳೆಂದು ಕರೆಯುವುದು! ನಿವೃತ್ತಿಯ ನಂತರ ನನ್ನ ಅರೋಗ್ಯ ಗಣನೀಯವಾಗಿ ಸುಧಾರಿಸಿದೆ. ಈಗ ‘ಫೈಟಿಂಗ್ ಫಿಟ್’ ಅನ್ನುತ್ತಾರಲ್ಲ ಹಾಗಿದ್ದೇನೆ! ಇದಕ್ಕೆ ಕಾರಣ ನಾನು ನಿತ್ಯ ವಾಕಿಂಗ್, ಜಾಗಿಂಗ್, ವ್ಯಾಯಾಮ ಇಲ್ಲವೇ ಯೋಗ ಮಾಡುತ್ತಿರುವೆ ಎಂಬ ಆತುರದ ತೀಮರ್ಾನಕ್ಕೆ ಬರಬೇಡಿ. ಇದಕ್ಕೆ ಬೇರೆಯದೇ ಕಾರಣವಿದೆ. ನಿವೃತ್ತಿಯ ಸಮಯದಲ್ಲಿ ಎದೆ ಮಟ್ಟದಿಂದ ಆಚೆ ಚಾಚಿಕೊಂಡು  ಡೊಳ್ಳು ಹೊಟ್ಟೆಯ ಆಕಾರ ಪಡೆಯುತ್ತಿದ್ದ ನನ್ನ ಹೊಟ್ಟೆಯೀಗ ಎದೆ ಮಟ್ಟದಿಂದ ಒಳಗೆ ಸರಿದು ಕ್ರಿಡಾಪಟುವಿನ ಹೊಟ್ಟೆಯ ಆಕಾರ ಪಡೆದಿದೆ. ಸದಾ ಹಿಂಸಿಸುತ್ತಿದ್ದ ಸಂಧಿವಾತ ಹೇಳ ಹೆಸರಿಲ್ಲದೆ ಮಾಯವಾಗಿದೆ! ಚೆನ್ನಾಗಿ ಹಸಿವಾಗುತ್ತಿದೆ…ಅಪಾಯದ ಗಂಟೆ ಬಾರಿಸುತ್ತಿದ್ದ ರಕ್ತದೊತ್ತಡ ಕೂಡ ಕಮ್ಮಿಯಾಗಿದೆ. ಈ ಆರೋಗ್ಯ ಸುಧಾರಣೆಗೆ ಸೊಳ್ಳೆಗಳೇ ಕಾರಣ ಎಂದರೆ ನೀವು ನಂಬಲಾರಿರಿ! ಆದರೆ ಇದು ಸೂರ್ಯನ ಬೆಳಕಿನಷ್ಟೇ ಸತ್ಯ! ಅದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಕೆಳಗಿದೆ ಉತ್ತರ!ಸೊಳ್ಳೆಗಳಿಗೂ ನನ್ನ ಆರೋಗ್ಯ ಸುಧಾರಣೆಗೂ ಸಂಬಂಧವಿದೆ ಎನ್ನುವುದು ವಿಚಿತ್ರವೆನ್ನಿಸಬಹುದು. ಹಾಗೆಯೇ ಜಾಗತೀಕರಣಕ್ಕೂ ನನ್ನ ಆರೋಗ್ಯಕ್ಕೂ ಸಂಬಂಧವಿದೆ ಎಂದರೆ ಇದು ಅಸಂಬದ್ಧ ಪ್ರಲಾಪವೆನ್ನಿಸಿಬಹುದು. ಆದರೆ ಎಲ್ಲವೂ ಸುಸಂಬದ್ಧವಾಗಿಯೇ ಇದೆ ಎಂದು ನಾನೀಗ ಸಾಬೀತುಪಡಿಸುವೆ.

ಜಾಗತೀಕರಣದ ನಂತರ ಚೀನಾ ದೇಶದಲ್ಲಿ ತಯಾರಾದ ವಸ್ತುಗಳು ನಮ್ಮ ದೇಶಕ್ಕೆ ಯರ್ರಾಬಿರ್ರಿ ಬಂದು ಬೀಳುತ್ತಿವೆ. ಚೀನಾದಲ್ಲಿ ತಯಾರಾದ ಗಡ್ಡ ಕೆರೆಯುವ ಬ್ಲೇಡಿನಿಂದ ಹಿಡಿದು ನಮ್ಮ ದೇವಾನುದೇವತೆಗಳ ವಿಗ್ರಹಗಳವರೆಗೂ ವೈವಿಧ್ಯಮಯ ವಸ್ತುಗಳು ರಾಶಿಗಟ್ಟಲೆ ನಮ್ಮ ನೆಲದಲ್ಲಿ ಬಿಕರಿಗೊಳ್ಳುತ್ತಿವೆ. ಬೆಲೆಗಳೋ ನಂಬಲಸಾಧ್ಯವಾದಷ್ಟು ಕಡಿಮೆ! ಯಾರ ಕಿಸೆಗೂ ಭಾರವೆನಿಸುವುದಿಲ್ಲ! ಕಳೆದ ಹಲವು ವರ್ಷಗಳಿಂದ ಚೀನಾ ದೇಶದ ವಸ್ತುಗಳನ್ನೇ ಮಾರುವ ವಿಶೇಷ  ಬಜಾರುಗಳು ಪ್ರಾರಂಭವಾಗಿವೆ!  ಕೇವಲ ಮುವತ್ತೈದು ರೂಪಾಯಿಗಳಿಗೆ ಚಪ್ಪಲಿ, ಪೊರಕೆ, ಬಕೆಟ್ಟು, ವ್ಯನಿಟಿ ಬ್ಯಾಗು, ದೇವರ ವಿಗ್ರಹಗಳು, ಮಕ್ಕಳ ಆಟಿಕೆಗಳು…ಹೀಗೆ ಪುಟಗಟ್ಟಲೆ ಪಟ್ಟಿ ಮಾಡಬಹುದಾದ ವಸ್ತುಗಳು! ಬೆಲೆಗಳು ಎಷ್ಟು ಸಸ್ತಾ ಆಗಿವೆಯೋ ಅಷ್ಟೇ ಬೇಗನೆ ಕೆಡುತ್ತವೆ ಈ ಉತ್ಪನ್ನಗಳು! ಈ ವಸ್ತುಗಳನ್ನು ಉಪಯೋಗಿಸಿದವರೆಲ್ಲಾ ಈ ಮಾತನ್ನು ಒಪ್ಪಿಯೇ ಒಪ್ಪುತ್ತಾರೆ!ಈ ಚೀನಾದ ಉತ್ಪನ್ನಗಳಲ್ಲಿಯೇ ಒಂದು ನನ್ನ ಉತ್ಕೃಷ್ಟ ಆರೋಗ್ಯಕ್ಕೆ ಸಾಧನವಾಗಿರುವುದು! ಅದು ಯಾವುದೆನ್ನುತ್ತೀರೋ ಅದೇ ಸೊಳ್ಳೆ ಸಾಯಿಸುವ ಬ್ಯಾಟ್!  ಇದು ನೋಡಲು ಬ್ಯಾಡ್ಮಿಂಟನ್ ಬ್ಯಾಟಿನಂತೆ ಕಾಣುತ್ತದೆ. ಇದರ ಆಕಾರವನ್ನು ಬ್ಯಾಡ್ಮಿಂಟನ್ ಬ್ಯಾಟಿಗೆ ಇಲ್ಲಾ ಟೆನ್ನಿಸ್ ಬ್ಯಾಟಿಗೂ ಹೋಲಿಸಬಹುದು.  ಈ ಬ್ಯಾಟಿಗೆ ಬ್ಯಾಟರಿಯ ಅವಶ್ಯಕತೆಯಿಲ್ಲ! ಕರೆಂಟಿನಲ್ಲಿ ಛಾಜರ್ು ಮಾಡಬಹುದು. ಈ ಬ್ಯಾಟಿನಲ್ಲಿನ ಒಂದು ಸ್ವಿಚ್ಚನ್ನು ಒತ್ತಿ ಸೊಳ್ಳೆಯ ಮೇಲೆ ಬೀಸಿದರೆ ಚಟಪಟ ಸದ್ದು ಮಾಡುತ್ತಾ  ಸೊಳ್ಳೆ ಸತ್ತು ಬೀಳುತ್ತದೆ. ಹಿಂಡು ಸೊಳ್ಳೆಗಳ ಮೇಲೆ ಬೀಸಿದರೆ ಚಿನಕುರುಳಿ ಪಟಾಕಿಯಂತೆ ಶಬ್ಧ ಮಾಡುತ್ತಾ ಸತ್ತು ಬೀಳುತ್ತವೆ!ಈ ಬ್ಯಾಟನ್ನು ಕೈಯಲ್ಲಿ ಹಿಡಿದವರಿಗೆ ನಾನೇ ಪ್ರಕಾಶ್ ಪಡುಕೋಣೇ ಇಲ್ಲಾ ಬೋರಿಸ್ ಬೆಕರ್ ಎಂಬ ಭಾವನೆ ಬರುತ್ತದೆ. ನಂತರ ಸ್ಫೂತರ್ಿಯಿಂದ ಬ್ಯಾಟನ್ನು ಸೊಳ್ಳೆಯತ್ತ ಬೀಸಲು ತೊಡಗುತ್ತಾರೆ. ಈ ಆಟಕ್ಕೆ ಒಂದು ತಂತ್ರವಿದೆ. ಅದೇನೆಂದರೆ ಮೊದಲಿಗೆ ಒಟ್ಟೊಟ್ಟಿಗೆ ಇರುವ ಸೊಳ್ಳೆಗಳನ್ನು ಸಾಯಿಸಿ, ನಂತರ ವಿರಳವಾಗಿ ಅಲ್ಲಲ್ಲಿ ಒಂದೋ ಇಲ್ಲಾ ಎರಡೋ ಇರುವ ಸೊಳ್ಳೆಗಳನ್ನು ಬ್ಯಾಟಿನಿಂದ ಸಾಯಿಸುವುದು ಉತ್ತಮ! ಒಮ್ಮೆ ಗೋಡೆಯ ಮೇಲಿರುವ ಸೊಳ್ಳೆಗಳಿಗೆ ಗತಿ ಕಾಣಿಸಿದ ನಂತರ ಕರ್ಟನ್ ಮೇಲೆ, ಷೋಕೇಸಿನ ಮೇಲೆ, ಫೋಟೋ ಫ್ರೇಮುಗಳ ಮೇಲಿರುವ ಸೊಳ್ಳೆಗಳತ್ತ ಗಮನ ಹರಿಸಬೇಕು. ಅವಲ್ಲೇ ಮುಗಿಸಿದ ನಂತರ ನಮ್ಮ ಗಮನ ಛಾವಣಿಯತ್ತ! ಛಾವಣಿಯಲ್ಲಿ ವಿಶ್ರಾಂತಿ  ತೆಗೆದುಕ್ಕೊಳ್ಳುತ್ತಿರುವ ಸೊಳ್ಳೆಗಳನ್ನು ಸಾಯಿಸಲು ಎತ್ತರದ ಸ್ಟೂಲು ಇಲ್ಲವೇ ಕುಚರ್ಿ ಏರಬೇಕಾಗುತ್ತದೆ. ಏರಿದ ನಂತರ ಇಳಿದು ಜಾಗ ಬದಲಿಸಿ ಪುನಃ ಏರಿ, ಪುನಃ ಇಳಿದು…ಹೀಗೇ ಮುಂದುವರಿಯುತ್ತದೆ….ಸೊಳ್ಳೆ ಕಿಲ್ಲಿಂಗ್! ಈ ಕ್ರಿಯೆಯಿಂದ ಶರೀರಕ್ಕೆ ಅದ್ಭುತವಾದ ವ್ಯಾಯಾಮ ದೊರೆಯುತ್ತದೆ!  ಬ್ಯಾಟು ಬೀಸುವಾಗ ಒಮ್ಮೊಮ್ಮೆ ಫೋಟೋ, ಗ್ಲಾಸು ಮುಂತಾದುವು ಕೆಳಗೆ ಬಿದ್ದು, ಮನೆಯವರಿಂದ ಬೈಸಿಕ್ಕೊಳ್ಳಬೇಕಾಗುತ್ತದೆ. ಇದು ಗಮನದಲ್ಲಿರಲಿ. ಇದರಿಂದ ಖಿನ್ನರಾಗಿ ಬ್ಯಾಟು ಬೀಸುವುದನ್ನು ಖಂಡಿತವಾಗಿ ನಿಲ್ಲಿಸಬಾರದು. ಯಶಸ್ಸಿನ ದಾರಿಯಲ್ಲಿ ನೂರಾರು ತೊಡಕುಗಳು ಎದುರಾಗುತ್ತವೆ. ಅವೆಲ್ಲವನ್ನೂ ಮೆಟ್ಟುವ ದೃಢತೆ ಮುಖ್ಯ!ಈ ಸೊಳ್ಳೆ ಕ್ರೀಡೆ ಅಭ್ಯಾಸವಾಗಿಬಿಟ್ಟರೆ ನಂತರ ಬಿಡುವುದು ಕಷ್ಟ! ಸೊಳ್ಳೆಗಳು ಹೆಚ್ಚಾಗಿದ್ದಾಗ ಮನಸ್ಸಿಗೆ ಸಮಾಧಾನವೂ, ಕಡಿಮೆಯಾದಾಗ ಒಂದು ರೀತಿಯ ಬೇಸರವೂ ಆಗುವುದು!  ಸೊಳ್ಳೆ ಕಡಿಮೆಯಿದ್ದರೂ ಹುಡುಕಿ ಹುಡುಕಿ ಬ್ಯಾಟು ಬೀಸುವ ಅಭ್ಯಾಸವೂ ಆವರಿಸಿಕೊಂಡುಬಿಡುತ್ತದೆ. ದಿನಕ್ಕೆ ಒಂದು ಇಪ್ಪತ್ತಾದರೂ ಸೊಳ್ಳೆ ಸಾಯಿಸಿದರೆ ಅದು ಉತ್ತಮ ವ್ಯಾಯಾಮ! ಖರಾರುವಾಕ್ಕಾಗಿ ಇಪ್ಪತ್ತು ಸೊಳ್ಳೆಗಳನ್ನು ಎಣಿಸುವುದು ಕಷ್ಟವಾಗುತ್ತದೆ. ಅಂದಾಜು ಲೆಕ್ಕ ಸಾಕು!

ನಾನು ಈ ಸೊಳ್ಳೆ ಕ್ರೀಡೆ  ಪ್ರಾರಂಭಿಸಿ ಸುಮಾರು ಒಂದು ವರ್ಷವಾಗಿದೆ. ನಿವೃತ್ತಿಯ ನಂತರ ಖಿನ್ನತೆ ಆವರಿಸುತ್ತದೆ ಎಂದು ಸಹೋದ್ಯೊಗಿಗಳು ಹೆದರಿಸಿದ್ದರು! ಇದರ ಅನುಭವ ನನಗೆ ಕಿಂಚಿತ್ತೂ ಆಗಿಲ್ಲ. ಇದಕ್ಕೆ ಕಾರಣ ಸೊಳ್ಳೆ ಬ್ಯಾಟ್ ಎಂದು ಯಾವ ಮುಜುಗರವೂ ಇಲ್ಲದೆ ಹೇಳುತ್ತೇನೆ!ಸಂಜೆ ಆರಕ್ಕೆ ಬ್ಯಾಟು ಹಿಡಿದರೆ ರಾತ್ರಿ ಮಲಗುವವರೆಗೂ ಬ್ಯಾಟು ಬೀಸುತ್ತಿರುತ್ತೇನೆ. ಮನೆಮಂದಿಯೆಲ್ಲಾ ಟಿವಿಯಲ್ಲಿ ಕಣ್ಣು ಕೀಲಿಸಿರುವಾಗ ನಾನು ಸೊಳ್ಳೆ ಕಿಲ್ಲಿಂಗ್ನಲ್ಲಿ ಮಗ್ನನಾಗಿರುತ್ತೇನೆ. ಮೊದಲಿಗೆ ಸೊಳ್ಳೆಗಳು ಸಾಯುವ ಚಟಪಟ ಸದ್ದಿಗೆ ಮನೆಯವರೆಲ್ಲಾ ಮುಖ ಕಿವಿಚುತ್ತಿದ್ದರು. ‘ಇದ್ಯಾಕೋ ಅತಿಯಾಯ್ತು’ ಎಂದು ಗೊಣಗುತ್ತಿದ್ದರು. ಈಗ ಅವರಿಗೂ ಅಭ್ಯಾಸವಾಗಿಬಿಟ್ಟಿದೆ. ನನ್ನ ಮೊಮ್ಮಗಳು ಮಾತ್ರ ನನ್ನ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಕೊಡುತ್ತಾಳೆ. ಅವಳೂ ಒಂದು ಪುಟ್ಟ ಬ್ಯಾಟು ಹಿಡಿದು ‘ತಾತ ಅಲ್ಲಿ, ಇಲ್ಲಿ ಅಲ್ಲಿ ಹೋಯ್ತು, ಇಲ್ಲ ಬಂತು’ ಎಂದು ಡೈರೆಕ್ಷನ್ ಕೊಡುತ್ತಾಳೆ. ಸೊಳ್ಳೆಗಳು ಚಟಪಟ ಸದ್ದಿನೊಂದಿಗೆ ಸಾಯುವಾಗ ‘ಫೋರ್! ಸಿಕ್ಸ್’ ಎಂದು ಚಪ್ಪಾಳೆ ತಟ್ಟಿ ಕೂಗಿ ಸ್ಫೂತರ್ಿ ತುಂಬುತ್ತಾಳೆ! ಹೀಗಾಗಿ ನನ್ನ ಕ್ರೀಡೆ ಯಾವ ಭಂಗವೂ ಇಲ್ಲದೆ ನಿರಾತಂಕವಾಗಿ ಸಾಗುತ್ತಿದೆ!  ಸೊಳ್ಳೆ ಕ್ರೀಡೆಯನ್ನು ಏಕಲವ್ಯನಂತೆ ಅಭ್ಯಾಸ ಮಾಡುತ್ತಿರುವ ಸಮಯದಲ್ಲಿ, ಸ್ನೇಹಿತರು ಇಲ್ಲವೇ ನೆಂಟರುಗಳ ಮನೆಗೆ ಭೇಟಿ ಕೊಟ್ಟ ಸಂದರ್ಭಗಳಲ್ಲಿ ನಾನು ಅವರ ಮನೆಯಲ್ಲಿ ಹುಡುಕುತ್ತಿದ್ದುದು ಸೊಳ್ಳೆ ಬ್ಯಾಟು! ನನ್ನಂತೆಯೇ ಇನ್ಯಾರಾದರೂ ಈ ಕ್ರೀಡೆಯನ್ನು ಅಭ್ಯಾಸ ಮಾಡುತ್ತಿದ್ದಾರಾ ಎಂಬ ಕುತೂಹಲದಿಂದ. ಕೆಲವು ಮನೆಯಗಳಲ್ಲಿ ಸೊಳ್ಳೆ ಬ್ಯಾಟುಗಳು ಕಂಡಾಗ ಅತೀವ ಸಂತೋಷವಾಗಿಬಿಡುತ್ತಿತ್ತು! ಸೊಳ್ಳೆ ಬ್ಯಾಟಿನ ವಿಷಯವನ್ನು ಪ್ರಸ್ತಾಪಿಸಿದರೆ ಅವರ ಪತ್ನಿಯರು ‘ಇವರಿಗಿದೇ ದೊಡ್ಡ ಕೆಲ್ಸವಾಗಿದೆ! ಸಂಜೆಯಾದರೆ ಟೆನ್ನಿಸ್ ಆಡುವವರಂತೆ ಬ್ಯಾಟು ಹಿಡಿದು ನಿಂತುಬಿಡುತ್ತಾರೆ’ ಎಂದು ತಮ್ಮ ಪತಿದೇವರುಗಳ ಬಗೆಗೆ ವ್ಯಂಗವಾಡಿದ್ದರು! ಅದರ ಅಂತ ಕಟಕಿಗಳ ಬಗೆಗೆ ಗಮನ ಹರಿಸದೆ, ಈ ಕ್ರೀಡೆಯನ್ನು ಮೈಗೂಡಿಸಿಕೊಂಡಿರುವವನು ನಾನೊಬ್ಬನೇ ಅಲ್ಲ, ನನ್ನಂತೆಯೇ ವಿಶ್ವದಾದ್ಯಂತ ಲಕ್ಷಾಂತರ ಜನರು ಈ ಕ್ರೀಡೆಯಲ್ಲಿ  ತೊಡಗಿರುವುದು ತಿಳಿದು ತೃಪ್ತಿಪಟ್ಟುಕೊಂಡಿದ್ದೆ ! ಈ ಕ್ರೀಡೆಯಲ್ಲಿ ಖಂಡಿತವಾಗಿ ಆರೋಗ್ಯದ ಭಾಗ್ಯವಿದೆ. ಒಂದೇ ಒಂದು ತೊಂದರೆ ಎಂದರೆ ಈ ಬ್ಯಾಟುಗಳ ಜೀವಿತಾವಧಿ! ಎಲ್ಲ ಚೀನೀ  ತಯಾರಿಕೆಗಳಂತೆ ಇವೂ ಅಲ್ಪಾಯುಷಿಗಳು! ಒಂದೆರಡು ತಿಂಗಳು ಕೆಲಸ ಮಾಡಿದರೆ ಹೆಚ್ಚು! ಕೆಲವು ಸಾರಿ ಒಂದೇ  ವಾರಕ್ಕೆ ಕೆಟ್ಟ ಉದಾಹರಣೆಗಳೂ ಇವೆ. ಬ್ಯಾಟು ಕೆಟ್ಟರೆ ಮತ್ತೊಂದನ್ನು ತಂದು ಸೊಳ್ಳೆ ಚಟಪಟ ಎಂದು ಸಾಯಿಸುವವರೆಗೂ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಇದು ನನ್ನ ಅನುಭವ!ಉತ್ತಮ ಆರೋಗ್ಯಕ್ಕೆ ಈ ಸೊಳ್ಳೆ ಬ್ಯಾಟು ಅತ್ಯುತ್ತಮ ಸಾಧನ!  ಅದರ ನಿರಂತರ ಉಪಯೋಗ ವ್ಯಾಯಾಮದ  ಅದ್ಭುತ ಪರಿಣಾಮವನ್ನು ಕೊಡುವುದು. ಜೊತೆಗೆ ಸೊಳ್ಳೆಗಳು ನಿರಂತರವಾಗಿ ನಾಶವಾಗುವುದರಿಂದ ಚಿಕನ್ಗೂನ್ಯಾ, ಹಂದಿಜ್ವರ ಮತ್ತಿತರ ಖಾಯಿಲೆಯಿಂದಲೂ ಮುಕ್ತಿ! ಇಂದಿನ ಸ್ಪೆಷಲಿಸ್ಟ್ ಡಾಕ್ಟರುಗಳು, ಅವರು ಬೇಕಿದ್ದೋ ಬೇಡದಿದ್ದೋ ಬರೆದು ಕೊಡುವ ನೂರಾರು ಟೆಸ್ಟು, ಹತ್ತಾರು ಬಗೆಯ ಮಾತ್ರೆಗಳಿಂದ ಮತ್ತು ಸಾವಿರದ ಹತ್ತಿರಹತ್ತಿರಕ್ಕೆ ತಂದು ನಿಲ್ಲಿಸುವ ಅವರ್ ಬಿಲ್ಲು ಇವುಗಳಿಂದ ಮುಕ್ತಿ! ಹೆಚ್ಚಿನ ಶ್ರಮವಿಲ್ಲದೆ ನಿಮ್ಮ ಆರೋಗ್ಯ ಸುಧಾರಿಸಬೇಕೆಂದರೆ ಇಂದೇ ಒಂದರ್ಧ ಡಜನ್ ಬ್ಯಾಟುಗಳನ್ನು ಖರೀದಿಸಿ ಸೊಳ್ಳೆ ಹೊಡೆಯಲು ಪ್ರಾರಂಭಿಸಿ. ಹಾಗದರೆ ಇನ್ನು ತಡವೇಕೆ? ಬ್ಯಾಟು ಖರೀದಿಸಿ! ಸೊಳ್ಳೆ ಕ್ರೀಡೆಯಲ್ಲಿ   ತೊಡಗಿಸಿಕ್ಕೊಳ್ಳಿ!!ಇಷ್ಟೆಲ್ಲಾ ಉಪಯೋಗಗಳಿರುವ ಈ ಸೊಳ್ಳೆ ಕಿಲ್ಲಿಂಗನ್ನು ಒಂದು ರಾಷ್ಟ್ರೀಯ ಕ್ರೀಡೆಯಾಗಿ ಏಕೆ ಪರಿಗಣಿಸಬಾರದು ಎಂದು ಒಂದು ಜನಾಂದೋಲನದ ಮೂಲಕ ಸಕರ್ಾರದ ಮೇಲೆ ಒತ್ತಡ ತರಲು ಯೋಚಿಸುತ್ತಿರುವೆ! ನೀವೇನೆನ್ನುತ್ತೀರಿ? ಈ ಆಂದೋಲನದಲ್ಲಿ ಭಾಗಿಯಾಗುವ ಮನಸ್ಸಿದ್ದರೆ ದಯವಿಟ್ಟು ಉತ್ತರಿಸಿ!

 

‍ಲೇಖಕರು avadhi

August 21, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anitha Naresh Manchi

    nijakkoo olleya yojane.. solle killing nalli naanu raashtra mattadalli spardhisi bahumaana galisaballe emba nambike nannadu..
    inde praarambhisi janaandolana.. naanu swalpa solle hodedu aamele bandu serikolteeni andolanakke 🙂 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: