ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ಫಿ ನಾರಾಯಣಮೂರ್ತಿಗಳೇ, ಈ ಪತ್ರ ಓದಿ..

ಈಗ ಪತ್ರ ಬರೆಯುವ ಕಾಲ . ಕಾರ್ಪೊರೇಟ್ ದಿಗ್ಗಜರು ಇದ್ದಕ್ಕಿದ್ದ ಹಾಗೆ ಮಕ್ಕಳಿಗೆ ಪತ್ರ ಬರೆಯಲು ಆರಂಭಿಸಿದ್ದಾರೆ . ಹಾಗೆ ಬರೆಯಲಿ ಎಂಬಂತೆ ಕಾದು ಕುಳಿತ ಮಾಧ್ಯಮಗಳು ಅದನ್ನು ವಾರಗಟ್ಟಲೆ ಚರ್ಚಿಸುತ್ತಿವೆ ಈ ಮಧ್ಯೆ ಪತ್ರಕರ್ತೆ ಪ್ರೀತಿ ನಾಗರಾಜ್ ”ಅಲ್ಲಾ, ಇವರೆಲ್ಲಾ ಮನೆಯಲ್ಲಿ ಮಕ್ಕಳ ಜೊತೆ ಮಾತಾಡಲ್ವಾ” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಈ ಮಧ್ಯೆ ಇಲ್ಲೊಂದು ಪತ್ರ ಇದೆ. ಇದೂ ಮಕ್ಕಳಿಗೆ ಬರೆದದ್ದೇ. ನಾರಾಯಣಮೂರ್ತಿಗಳ ಪತ್ರಕ್ಕೆ ಉತ್ತರ ಎನ್ನುವಂತಹ ಪತ್ರ. ಓದಿ. ಇಲ್ಲೇ ಓದಿ- ಯಾಕೆಂದರೆ ಇದು ಮಾಧ್ಯಮಗಳಲ್ಲಿ ಖಂಡಿತಾ ಕಾಣಿಸಿಕೊಳ್ಳುವುದಿಲ್ಲ.

ಏಕೆಂದರೆ ಬಡತನ ಈಗ ಸೇಲ್ ಆಗುವ ಪ್ರಾಡಕ್ಟ್ ಅಲ್ಲ..

vaddagere2

ಡಾ.ವಡ್ಡಗೆರೆ ನಾಗರಾಜಯ್ಯ

ನನ್ನ ಮಕ್ಕಳಾದ ಗೌತಮ್ ನಾಗ್ ಮತ್ತು ಶಾಕ್ಯಘೋಷ ಇವರಿಗೆ ನನ್ನ ನಿವೇದನೆ_

“ಮಕ್ಕಳೇ, ಇಲ್ಲಿ ಕೇಳ್ರಪ್ಪಾ ನನ್ನ ಮಾತು, ನಿಮ್ಮಪ್ಪ ಅಂದ್ರೆ ನಾನು ಜೀತಗಾರರ ಮಗ. ನಾನು ಗುಡಿಸಿಲಿನಲ್ಲಿ ಹುಟ್ಟಿದವನು. ಹಸಿವೆ ನೀಗಿಸಿಕೊಳ್ಳಲು ಭೂಮಾಲೀಕರ ಮನೆಗಳೆದುರು ಭಿಕ್ಷಾಪಾತ್ರೆಯನ್ನು ಹಿಡಿದು ಅನ್ನಭಿಕ್ಷೆ ಬೇಡಿ ಬದುಕಿದವನು. ಭೂಮಾಲೀಕರ ಹೊಲಗದ್ದೆಗಳಲ್ಲಿ ದವಸಧಾನ್ಯ ಬೆಳೆದು ಧಣಿಗಳ ಕಣಜಗಳಿಗೆ ತುಂಬುತ್ತಿದ್ದ ನಾನು, ನನ್ನ ಅಪ್ಪ-ಅಮ್ಮ, ಅಂದ್ರೆ ನಿಮ್ಮ ಅಜ್ಜಿ-ತಾತನವರೂ ಸಹ ಹೀಗೆಯೇ ಅನ್ನಭಿಕ್ಷೆ ಬೇಡುವವರಾಗಿದ್ದರು. ಅನ್ನ ಬೆಳೆದುಕೊಡುವವರೇ ಅನ್ನಭಿಕ್ಷೆ ಬೇಡುವ ಸಾಮಾಜಿಕ ಸಂಕಟದ ಬದುಕು ನಮ್ಮಲ್ಲಿದೆ. ಇದು ಭಾರತೀಯರ ಅಸ್ಪೃಶ್ಯರ ಸೂತಕವಾಗಿ ಇಂದಿಗೂ ನಮ್ಮನ್ನು ‘ಮೀಸಲಾತಿ’ ಹೆಸರಿನಲ್ಲಿ ಬಾಧಿಸುತ್ತಿದೆ.

workerಅಂದು ಅನ್ನದ ಪಾತ್ರೆಯನ್ನು ಹಿಡಿದು ಭೂಮಾಲೀಕರ ಮನೆಗಳಲ್ಲಿ ನಾವೇ ದುಡಿದ ನಮ್ಮ ಅನ್ನದ ಪಾಲನ್ನು ಕೇಳುವುದನ್ನು ಭಿಕ್ಷೆ ಎಂದು ಕರೆದರು! ಈಗಲೂ ‘ಮೀಸಲಾತಿ’ಯನ್ನು ರೂಢಿಗತ ಜಾಯಮಾನದ ಹಿಂದಿನಂತೆಯೇ ಭಿಕ್ಷೆ ಎಂದು ಬಿಂಬಿಸಲಾಗುತ್ತಿದೆ. ನಂಬಿಸಲಾಗುತ್ತಿದೆ.

ಭೂಮಾಲೀಕರು ಹಸಿದ ನನಗೆ ಅನ್ನ ಕೊಡದೆ ಗದರಿಸಿ ಓಡಿಸಿದಾಗ, ನಾನು ನಮ್ಮೂರಿನ ಸರ್ಕಾರಿ ಶಾಲೆಯ ಬಳಿಗೆ ಗೋಧಿ ಉಪ್ಪಿಟ್ಟು ತಿನ್ನಲು ಓಡಿ ಹೋಗುತ್ತಿದ್ದೆ. ಅಮೆರಿಕಾದ ರಾಷ್ಟ್ರಾಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿಯವರು ಭಾರತ ದೇಶದ ಶಾಲೆಗಳಲ್ಲಿ ಹಸಿವೆಯಿಂದ ನರಳುತ್ತಿದ್ದ ನನ್ನಂತಹ ಅಬ್ಬೇಪಾರಿಗಳನ್ನು ಕಂಡು ಮರುಗಿದರು. ಅಮೆರಿಕಾ ದೇಶದಿಂದ ಗೋಧಿಯನ್ನು ಹಡಗುಗಳಲ್ಲಿ ತುಂಬಿ ಭಾರತದ ಬಡ ಮಕ್ಕಳಿಗೆ ಪುಕ್ಕಟ್ಟೆಯಾಗಿ ಕಳುಹಿಸಿ ನಮ್ಮ ಹಸಿವು ನೀಗಿದವರು.

ನಾನು ಹಸಿವೆ ನೀಗಿಸಿಕೊಳ್ಳಲು ಉಪ್ಪಿಟ್ಟಿನ ಆಸೆಯಿಂದ ಇಸ್ಕೂಲು ಬಾಗಿಲು ತುಳಿದವನು. ಅಲ್ಲಿ ನನಗೆ ಹೊಟ್ಟೆಗೆ ಉಪ್ಪಿಟ್ಟಿನೊಂದಿಗೆ ಎದೆಗೆ ಅಕ್ಷರಗಳೂ ಬಿದ್ದು ಜ್ಞಾನದ ಬೆಳಕಿಗೆ ತೆರೆದುಕೊಂಡೆ. ಮೌಖಿಕರ ಜಾನಪದ ಜ್ಞಾನದ ನೆಲೆಯ ಗುಡಿಸಿಲ ನನಗೆ ಮುಂದೆ ಕಲಿಯುತ್ತಾ ಹೋದಂತೆ ಶಾಲೆಯ ಅಕ್ಷರಗಳಲ್ಲಿ ಬುದ್ಧ- ಬಸವ- ಅಲ್ಲಮ-ಅಂಬೇಡ್ಕರ್- ಕಬೀರ- ಕುವೆಂಪು- ಲೋಹಿಯಾ, ಪ್ರೊ.ಬಿ.ಕೃಷ್ಣಪ್ಪ ಮುಂತಾದವರು ಸಿಕ್ಕಿದರು.

ಇವರು ಸಿಕ್ಕಿದ ನಾನು ಬೀದಿಯಲ್ಲಿ ಕೂಗಿ ಹೇಳುತ್ತಿದ್ದೇನೆ-
“ಬೆವರನು ಸುರಿಸಿ ದುಡಿಯುವ ಜನ ನಾವು/ ನಮ್ಮ ಬೆವರಿನ ಪಾಲನು ಕೇಳುವೆವು/ ತುಂಡು ಭೂಮಿಯಲ್ಲ ಒಂದು ದೇಶವಲ್ಲ ಇಡೀ ಭೂಗೋಳವನ್ನೇ ಕೇಳುವೆವು”

ಪ್ರೀತಿಯ ಗೌತಮ್ ನಾಗ್ ಮತ್ತು ಶಾಕ್ಯಘೋಷ ನೀವಿನ್ನೂ ಎಳೆಯ ಮಕ್ಕಳು, ಈ ದೇಶದ ಸಂಪತ್ತು ಮತ್ತು ಅಧಿಕಾರಗಳ ಸಮಾನ ಪಾಲು ಪಡೆಯುವ ನಿಮ್ಮ ಹಕ್ಕುಗಳನ್ನು ಯಾವುದೇ ಬೆಲೆ ತೆತ್ತಾದರೂ ಸರಿಯೇ ಉಳಿಸಿಕೊಳ್ಳಿರಿ. ಅಲಕ್ಷಿತ ಸಮುದಾಯಗಳ ಕಟ್ಟಕಡೆಯ ಪದತಲದ ಬಿಂದುವಿನ ನೆಲೆಯಿಂದ ಸಾಮಾಜಿಕ ನ್ಯಾಯದ ಹೋರಾಟದ ದಾರಿಯ ‘ನವಯಾನ’ ನಿಮ್ಮದಾಗಲಿ.

ಇಂತಿ ನಿಮ್ಮ ಪ್ರೀತಿಯ

ಡಾ.ವಡ್ಡಗೆರೆ ನಾಗರಾಜಯ್ಯ

‍ಲೇಖಕರು Admin

10 May, 2016

1 Comment

  1. ಅಂಕ್ನಳ್ಳಿ ಜಯರಾಂ.

    ಮನದಾಳದದಿಂದ ಮೂಡಿಬಂದ ಅನುಭವದ ಅರ್ಥಪೂರ್ಣ ನುಡಿಗಳಿವು. ಹೋರಾಟದ ಕಿಚ್ಚು ಹಚ್ಚುವ ಕಿಡಿಗಳಿವು. ಕ್ರಾಂತಿಕಾರಿ ವಂದನೆಗಳು ವಡ್ಡಗೆರೆ ಸರ್. “ನೆನ್ನೆದಿನ ನನ್ನ ಜನ ಬೆಟ್ಟದಂತೆ ಬಂದರು…..” ಎನ್ನುವ ಹಾಗೆ ಇಂದು ಮುಂದು ಎಂದೆಂದೂ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಸೇರಬೇಕಿದೆ. ಅದಕ್ಕೆ ನಿಮ್ಮಂಥ ಹಿರಿಯರ ಈ ಪ್ರೇರಕ ನುಡಿಗಳು ಅತ್ಯಗತ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading