ವಿದ್ಯೆ ಕಲಿಸುವ ಗುರುವಿಗೇ ಮೋಸ ಮಾಡಬಹುದೇ

ಡಾ ಲಕ್ಷ್ಮೀ ಜಿ ಪ್ರಸಾದ
ಧಿಕ್ಕಾರ ಧಿಕ್ಕಾರ! ಇಂಥವರನ್ನು ಇನ್ನೂ ಸಹಿಸಿಕೊಂಡಿರುವ ಈ ಸರಕಾರಕ್ಕೂ ದಿಕ್ಕಾರ, ಅವರು ತಮ್ಮ ಸ್ವಂತದ ಮೌಲ್ಯಮಾಪನ ಮಾಡ್ತಾ ಇದ್ದಾರೆ ಮಕ್ಕಳಿಗೆ ಗೊತ್ತಿರೋದುಕ್ಕಿಂತ ಕಡಿಮೆ ತಿಳಿವಳಿಕೆ ಇರೊ ಮೌಲ್ಯಮಾಪನ ಮಾಡೊ ಅಧ್ಯಾಪಕರಿಗೆ ನನ್ನ ಧಿಕ್ಕಾರ. ಮೌಲ್ಯಮಾಪನಕ್ಕೆ ಹಾಜರಾಗದೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಲು ನಿಂತಿರುವ ಉಪನ್ಯಾಸಕರಿಗೆ ಧಿಕ್ಕಾರವಿರಲಿ. ಪಿಯು ಉಪನ್ಯಾಸಕರ ಕುರಿತಾಗಿ ಇಂತಹ ಮಾತುಗಳನ್ನು ಕೆಲವು ದಿನಗಳಿಂದ ಫೇಸ್‌ಬುಕ್ ಟ್ವಿಟ್ಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಕೇಳುತ್ತಿದ್ದೇವೆ.
ಪಿಯು ಉಪನ್ಯಾಸಕರ ಸಮಸ್ಯೆಗಳ ಅರಿವು ಪ್ರಜ್ಞಾವಂತ ಬರಹಗಾರರಿಗೂ ಗೊತ್ತಿಲ್ಲವೆಂದಾದರೆ ಇನ್ನು ಜನಸಾಮಾನ್ಯರಿಗೆ ಹೇಗೆ ಅರ್ಥವಾಗಲು ಸಾಧ್ಯ?ಒಂದು ವಿಷಯವನ್ನು ನಾನು ಮೊದಲಿಗೆ ಹೇಳುತ್ತೇನೆ. ಈಗ ನಡೆಯುತ್ತಿರುವ ಮೌಲ್ಯ ಮಾಪನ ಬಹಿಷ್ಕಾರ ಮತ್ತು ಪ್ರತಿಭಟನೆ ಏಕಾ ಏಕಿ ದಿನ ಬೆಳಗಾಗುವಷ್ಟರಲ್ಲಿ
ನಿರ್ಣಯವಾಗಿ ಆರಂಭವಾದದ್ದಲ್ಲ. ಈ ಬಗ್ಗೆ ಮೂರು ನಾಲ್ಕು ತಿಂಗಳ ಮೊದಲೇ ನಿರ್ಧಾರವಾಗಿತ್ತು, ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಉಪನ್ಯಾಸಕರ ಸಂಘ ಅನೇಕ ಬಾರಿ ಮನವಿ ಮಾಡಿತ್ತು. ಈ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ವರದಿ ಬರುತ್ತಲೇ ಇತ್ತು. ಇಷ್ಟಕ್ಕೂ ಉಪನ್ಯಾಸಕರ ಹಲವು ವರ್ಷಗಳ ಬೇಡಿಕೆ ಅನ್ಯಾಯವಾದದ್ದಲ್ಲ. ಅದು ನ್ಯಾಯಯುತವಾದ ಬೇಡಿಕೆಯೇ ಆಗಿದೆ. ವೇತನ ಹೆಚ್ಚಿಸುವಂತೆ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ವೇತನ ತಾರತಮ್ಯ ನಿವಾರಿಸುವಂತೆ ಕೇಳುತ್ತಿದ್ದಾರೆ. ಈ ಹಿಂದೆಯೇ ಅನೇಕ ಬಾರಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ ಕೂಡ. ಆದರೆ, ಯಾವುದೇ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದಕ್ಕೆ ಮೌಲ್ಯಮಾಪನ ಬಹಿಷ್ಕಾರದ ದಾರಿಯನ್ನು ಹಿಡಿದಿದ್ದಾರೆ.
ಮೌಲ್ಯಮಾಪನ ಬಹಿಷ್ಕಾರ ಸರಿಯಲ್ಲ, ಬೇರೆ ಸಮಯದಲ್ಲಿ ಪ್ರತಿಭಟನೆ ಮಾಡಿ ಎಂದು ಅನೇಕರ ಅಭಿಪ್ರಾಯ. ಬೇರೆ ಸಮಯದಲ್ಲಿ ಪಾಠ ಪ್ರವಚನ ಮಾಡದೆ ಇದ್ದರೆ ಕೇವಲ ಕಾಲೇಜ್‌ನಲ್ಲಿ ಮಾಡುವ ಪಾಠವನ್ನು ಮಾತ್ರ ಅವಲಂಭಿಸಿರುವ ವಿದ್ಯಾರ್ಥಿಗಳಿಗೆ ಅಪಾರ ನಷ್ಟವಾಗುತ್ತದೆ. ಪ್ರತಿ ತಿಂಗಳು ಇಷ್ಟಿಟ್ಟು ಪಾಠವನ್ನು ಮುಗಿಸಲೇ ಬೇಕಾಗುತ್ತದೆ. ಕೆಲವೊಮ್ಮೆ ಸಮಯ ಸಾಕಾಗದೆ ಹೆಚ್ಚಿನ ಉಪನ್ಯಾಸಕರು ಹೆಚ್ಚುವರಿಯಾಗಿ ಶನಿವಾರ ಮಧ್ಯಾಹ್ನ ಮೇಲೆ ಹಾಗೂ ಆದಿತ್ಯವಾರ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಪಾಠ ಮಾಡುವ ಅವಧಿಯಲ್ಲಿ ಪಾಠ ಮಾಡದೆ ಪ್ರತಿಭಟಿಸಿದರೆ ನಷ್ಟ ಯಾರಿಗೆ ಅಂತ ಈಗ ಅರ್ಥವಾಗಬಹುದು ಅಲ್ಲವೇ?
ಮತ್ತೊಂದು ಆಕ್ಷೇಪ ಏನೆಂದರೆ ಈಗ ಮೌಲ್ಯಮಾಪನ ಮಾಡದೆ ಅನಂತರ ಹರಿ ಬರಿಯಾಗಿ ಮನಸ್ಸಿಲ್ಲದ ಮನಸಿನಿಂದ ಮೌಲ್ಯ ಮಾಪನ ಮಾಡಿದರೆ ಮಕ್ಕಳಿಗೆ ಅಂಕ ಕೊಡುವಾಗ ಒಂದೆರಡು ಅಂಕ ವ್ಯತ್ಯಾಸ ಬಂದರೆ ಏನು ಮಾಡುವುದು? ಮನಸ್ಸಿಲ್ಲದೆ ಮೌಲ್ಯ ಮಾಪನ ಮಾಡುವಾಗ ಅಂಕ ವ್ಯತ್ಯಾಸ ಬರುವುದಾದರೆ ಮನಸ್ಸಿಲ್ಲದೆ ಪಾಠ ಮಾಡಿದರೆ ಹೇಗಾಗಬಹುದು? ಇಷ್ಟಕ್ಕೂ ಪ್ರತಿಭಟನೆ ಯಾಕಾಗಿ? ಎಷ್ಟು ವರ್ಷಗಳ ಬೇಡಿಕೆ ಎಂಬುದು ತಿಳಿದಿದೆಯೇ? ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ನಮ್ಮಲ್ಲಿನ ಸಾಮಾನ್ಯ ನಿಯಮ. ತಹಸೀಲ್ದಾರ್, ಪಶು ವೈದ್ಯರು, ಕಿರಿಯ ಎಂಜಿನಿಯರ್‌ಗಳು, ಸಬ್ ಇನ್ಸ್‌ಪೆಕ್ಟರ್, ವೈದ್ಯಾಧಿಕಾರಿಗಳು ಹಾಗೂ ಉಪನ್ಯಾಸಕರು ಒಂದೇ ಗ್ರೇಡ್‌ನ ಸರ್ಕಾರಿ ಉದ್ಯೋಗಿಗಳು.
ಹಾಗಾಗಿ ಇವರೆಲ್ಲರಿಗೂ ಒಂದೇ ರೀತಿಯ ವೇತನ ಶ್ರೇಣಿ ಇರುತ್ತದೆ. 1996ನೆಯ ಇಸವಿ ತನಕ ಇವರೆಲ್ಲರಿಗೂ ಒಂದೇ ರೀತಿಯ ವೇತನ ಇತ್ತು. ನಂತರ ಮಾತ್ರ ಉಪನ್ಯಾಸಕರನ್ನು ಹೊರತು ಪಡಿಸಿ ಉಳಿದವರಿಗೆ ಕಾಲ ಕಾಲಕ್ಕೆ ವೇತನವನ್ನು ಹೆಚ್ಚಿಸಲಾಯಿತು. ಉಪನ್ಯಾಸಕರಿಗೆ ಮಾತ್ರ ಹೆಚ್ಚಿಸಲಿಲ್ಲ. ಹೀಗಾಗಿ ಉಪನ್ಯಾಸಕರ ಹಾಗೂ ಸಮಾನ ಶ್ರೇಣಿಯ ಇತರ ಸರಕಾರಿ ಉದ್ಯೋಗಿಗಳ ಆರಂಭಿಕ ಮೂಲ ವೇತನದಲ್ಲಿ ಸುಮಾರು ಎಂಟು ಸಾವಿರ ರುಪಾಯಿಗಳಷ್ಟು ವ್ಯತ್ಯಾಸವಿದೆ. ಇಷ್ಟು ಅಂತರವನ್ನು ಸರಿ ಪಡಿಸಿ ಉಪನ್ಯಾಸಕರಿಗೆ ಇತರರಂತೆ ವೇತನ ನೀಡಿದರೆ ಸರಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತದೆ ಎಂದು
ಸರಕಾರ ಕೆಲ ವರ್ಷಗಳ ಮೊದಲು ಕುಮಾರ ನಾಯಕ್ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಿತು. ಸಮಿತಿಯು ಸಾಕಷ್ಟು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ನೀಡಿತು. ಸಮಿತಿಯು ಮಾಡಿದ ಸಲಹೆಯನ್ನು ಜಾರಿಗೆ ತಂದರೆ ತಾರತಮ್ಯ ಪೂರ್ಣ ನಿವಾರಣೆ ಆಗದಿದ್ದರೂ ಒಂದಿನಿತು ಅಂದರೆ ಸುಮಾರು ಮೂರು ಸಾವಿರ ರೂಪಾಯಿಗಳಷ್ಟು ವೇತನ ಹೆಚ್ಚಳವಾಗುತ್ತದೆ. ನಾಲ್ಕು ವರ್ಷ ಕಳೆದರೂ ಸಮಿತಿಯ ವರದಿಯನ್ನು ಜಾರಿಗೆ ತಂದಿಲ್ಲ .
ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಆಗಿದೆ. ಆದರೆ ಮೌಲ್ಯ ಮಾಪನ ಸಮಯದಲ್ಲಿ ಬಿಟ್ಟು ಬೇರೆ ಸಮಯದಲ್ಲಿ ಮಾಡುವ ಪ್ರತಿಭಟನೆಗೆ ಯಾವುದೇ ಬೆಲೆ ಬರುವುದಿಲ್ಲ. ಅದು ಹೆತ್ತವರ ಗಮನಕ್ಕೂ ಬರುವುದಿಲ್ಲ! ಹೇಗೂ ಉಪನ್ಯಾಸಕರು ವಿಶೇಷ ತರಗತಿ ಮಾಡಿ ಪಾಠ ಮುಗಿಸುತ್ತಾರೆ. ಹಾಗಿರುವಾಗ ಉಪನ್ಯಾಸಕರ ಸಮಸ್ಯೆ ಬಗ್ಗೆ ಯಾರೇಕೆ ತಲೆಕೆಡಿಸಿಕೊಳ್ಳುತ್ತಾರೆ? ಮೊನ್ನೆ ಮಾತಿಗೆ ಸಿಕ್ಕ ಎಂಜಿನಿಯರ್ ಒಬ್ಬರು ಉಪನ್ಯಾಸಕರಿಗೆ ಈಗಾಗಲೇ ತುಂಬಾ ವೇತನ ಇದೆ. ದಿನಕ್ಕೆ ನೂರು ರುಪಾಯಿ ವೇತನಕ್ಕೆ ದುಡಿಯುವವರು ಇಲ್ಲವೇ? ಎಂದು ಕೇಳಿದ್ದರು. ಉಪನ್ಯಾಸಕರ ಬಗ್ಗೆ ಜನರಿಗಿರುವ ಭಾವನೆ ಇದರಿಂದ ಗೊತ್ತಾಯಿತು ನನಗೆ. ನಾನು ತಕ್ಷಣ ಕೇಳಿದೆ ನಿಮ್ಮಲ್ಲಿ ಜವಾನರಿಗೆ ಎಷ್ಟು ವೇತನ? ಅಬ್ಬಬ್ಬ ಅಂದ್ರೆ ಏಳು ಎಂಟು ಸಾವಿರ ತಾನೇ? ನೀವು ಯಾಕೆ ಒಂದು ಲಕ್ಷ ರುಪಾಯಿ ವೇತನ ಪಡೆಯುತ್ತೀರಿ? ನಿಮಗೇಕೆ ಅಷ್ಟು ವೇತನ? ಎಂದು. ಅದು ನಮ್ಮ ಕಲಿಕೆಗೆ ಅರ್ಹತೆಗೆ ಅನುಭವಕ್ಕೆ ಸಿಗುವ ವೇತನ ಎಂದರು. ಆಗ ನಾನು ಕೇಳಿದೆ. ನೀವು ಹೆಚ್ಚಿನ ಕಲಿಕೆ ಅರ್ಹತೆ ಹೊಂದಿದ್ದರೆ ಹೆಚ್ಚಿನ ವೇತನ ಪಡೆಯಬಹುದು,
ಉಪನ್ಯಾಸಕರು ಹೆಚ್ಚಿನ ಕಲಿಕೆಯನ್ನು ಅರ್ಹತೆಯನ್ನು ಅನುಭವವನ್ನು ಹೊಂದಿದ್ದಾರೆ. ಅವರು ಹೆಚ್ಚಿನ ವೇತನ ಪಡೆಯಬಾರದೇ? ತಾರತಮ್ಯ ಮಾಡಿದರೆ ಪ್ರತಿಭಟಿಸಬಾರದೆ? ಎಂದು. ಮರುಮಾತಾಡದೆ ಸುಮ್ಮನಾದರು. ಕೆಲ ವರ್ಷಗಳ ಹಿಂದಿನ ತನಕ ಪದವಿ ಪೂರ್ವ ಶಿಕ್ಷಣ ಉನ್ನತ ಶಿಕ್ಷಣ ಇಲಾಖೆಯ ಜತೆಗಿತ್ತು. ಇದರಿಂದ ಪದವಿ ಕಾಲೇಜ್ ಮತ್ತು ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಿಗೆ ಒಂದೇ ರೀತಿಯ ವೇತನ ಇತ್ತು. ಕೆಲ ವರ್ಷಗಳ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉನ್ನತ ಶಿಕ್ಷಣ ಇಲಾಖೆಯಿಂದ ಬೇರೆಯಾಗಿ ಸ್ವತಂತ್ರವಾಯಿತು.
ಈಗ ಪದವಿ ಕಾಲೇಜ್ ಉಪನ್ಯಾಸಕರಿಗೆ ಯುಜಿಸಿ ವೇತನವಿದ್ದು, ಪಿಯು ಉಪನ್ಯಾಸಕರ ದುಪ್ಪಟ್ಟು ವೇತನ ಪಡೆಯುತ್ತಾರೆ. ಪದವಿ ಪೂರ್ವ ಉಪನ್ಯಾಸಕರು ಪದವಿ ಕಾಲೇಜ್ ಉಪನ್ಯಾಸಕರಷ್ಟೇ ಅರ್ಹತೆ ಹೊಂದಿದ್ದರೂ ಕೂಡ ಅವರ ಅರ್ಧದಷ್ಟು ವೇತನಕ್ಕೆ ತೃಪ್ತಿ ಹೊಂದಬೇಕು. ಒಟ್ಟಿನಲ್ಲಿ ಇವರು ಹೆಸರಿಗೆ ಉಪನ್ಯಾಸಕರು ಅಷ್ಟೇ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅತಂತ್ರರಾಗಿದ್ದಾರೆ. ಪದವಿ ಕಾಲೇಜ್ ಉಪನ್ಯಾಸಕರಿಗೆ ಸಂಶೋಧನಾ ಕಮ್ಮಟಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಓಓಡಿ ಸೌಲಭ್ಯವಿರುತ್ತದೆ. ಯುಜಿಸಿ ಪ್ರಾಯೋಜಿತ ವಿಚಾರ ಸಂಕಿರಣಗಳು ಆಗಾಗ ಅಲ್ಲಲ್ಲಿ ಕಾಲೇಜ್‌ಗಳಲ್ಲಿ ಯೂನಿವರ್ಸಿಟಿಗಳಲ್ಲಿ ಆಯೋಜನೆ ಆಗುತ್ತಲೇ ಇರುತ್ತದೆ. ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಇಂಥಹ ಯಾವುದೇ ಸೌಲಭ್ಯವಿಲ್ಲ, ನಾನು ಅನೇಕ

ಯೂನಿವರ್ಸಿಟಿಗಳಿಗೆ ಸಂಶೋಧನಾ ಪ್ರಬಂಧ ಮಂಡಿಸಲು ನನ್ನ ಖಾತೆಯಲ್ಲಿರುವ ಸಿಎಲ್, ಇಎಲ್‌ಗಳನ್ನೂ ಹಾಕಿ ಹೋಗಿದ್ದೇನೆ.ಅಲ್ಲಿಗೆ ಅನೇಕ ಪದವಿ ಕಾಲೇಜ್ ಹಾಗೂ ಯೂನಿವರ್ಸಿಟಿಗಳ ಉಪನ್ಯಾಸಕರು ಓಓಡಿ ಸೌಲಭ್ಯ ಪಡೆದುಕೊಂಡು ಹಾಜರಾಗಲು ಬಂದಿರುವುದನ್ನು ನೋಡಿ ಛೆ! ನನಗೆ ಪ್ರಬಂಧ ಮಂಡಿಸಲು ಕೂಡ ಈ ಸೌಲಭ್ಯವಿಲ್ಲವಲ್ಲ ಎಂದು ಅನೇಕ ಬಾರಿ ನೊಂದುಕೊಂಡಿದ್ದೇನೆ ಕೂಡ!
ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಲ್ಲಿ ಅನೇಕರು ಉಪನ್ಯಾಸಕರ ಅರ್ಹತಾ ಪರೀಕ್ಷೆಗಳಾದ NET, SLET ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅನೇಕರು ಸಂಶೋಧನಾ ಅಧ್ಯಯನ ಮಾಡಿ ಪಿಚ್‌ಡಿಯಂಥ ಉನ್ನತ ಪದವಿಗಳನ್ನು ಪಡೆದಿದ್ದಾರೆ. ಆದರೆ ಇವರಾರಿಗೂ ಒಂದಿನಿತು ಮನ್ನಣೆ ಇಲ್ಲ. ಪಿಎಚ್‌ಡಿ ಪಡೆದವರಿಗೆ ನಾಲ್ಕು- ಐದು ಇನ್ಕ್ರಿಮೆಂಟ್ ಕೊಡಿ ಎಂಬ ಬೇಡಿಕೆ ಹಲವು ದಿನಗಳಿಂದ ಇಟ್ಟಿದ್ದರೂ ಅದಕ್ಕೆ ಯಾವುದೇ ಮನ್ನಣೆ ದೊರೆತಿಲ್ಲ. ಅರ್ಹತೆ ಗಳಿಸಿದ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜ್‌ಗೆ ಭಡ್ತಿ/ ಪದೋನ್ನತಿ ಕೊಡಿ ಎಂದು ಕೇಳಿದರೆ ಅದಕ್ಕೆ ಸಾವಿರ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಲಾಗುತ್ತದೆ. ಬಹುಶ ಜಗತ್ತಿನಲ್ಲಿ ಒಂದು ಹುದ್ದೆಗೆ ಸೇರಿದ ಮೇಲೆ ಪದೋನ್ನತಿಯೇ ಇಲ್ಲದೆ ಇರುವ ಹುದ್ದೆ ಪಿಯು ಉಪನ್ಯಾಸಕರದ್ದು ಮಾತ್ರ ಇರಬೇಕು! ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ ಉಪನ್ಯಾಸಕನಾಗಿಯೇ ನಿವೃತ್ತನಾಗಬೇಕು.
ಒಂದಷ್ಟು ಬೆರಳೆಣಿಕೆಯಷ್ಟು ಮಂದಿಗೆ ಪ್ರಿನ್ಸಿಪಾಲ್ ಆಗಿ ಭಡ್ತಿ ಹೊಂದುವ ಅವಕಾಶ ಸಿಗುತ್ತದೆ ಅಷ್ಟೇ! ಹೆಚ್ಚಿನವರು ಸೇರಿದ ಹುದ್ದೆಯಲ್ಲೇ ನಿವೃತ್ತರಾಗಬೇಕು. ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇರಿಕೊಂಡವರು ಪದವಿ ಶಿಕ್ಷಣ ಪಡೆದು ಬಿಎಡ್ ಪದವಿ ಗಳಿಸಿದರೆ ಪ್ರೌಢ ಶಾಲೆ ಶಿಕ್ಷಕರಾಗಿ ಪದೋನ್ನತಿ ಹೊಂದಲು ಅವಕಾಶವಿದೆ. ಪ್ರೌಢ ಶಾಲೆ ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದು ಪಿಯು ಉಪನ್ಯಾಸಕರಾಗಿ ಭಡ್ತಿ ಪಡೆಯುತ್ತಾರೆ.
ಆದರೆ ಪಿಯು ಉಪನ್ಯಾಸಕರು ಎನ್‌ಇಟಿ, ಪಿಎಚ್‌ಡಿ ಪದವಿಗಳನ್ನು ಪಡೆದರೂ ಯಾವುದೇ ಪ್ರಯೋಜನವಿಲ್ಲದ ಕಾರಣ ಹೆಚ್ಚಿನ ಅಧ್ಯಯನಕ್ಕೆ, ಪದವಿ ಗಳಿಕೆಗೆ ಮುಂದಾಗುವುದೇ ಇಲ್ಲ. ಅದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಂತ ನೀರಾಗುತ್ತಿದೆ! ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜ್‌ಗಳಲ್ಲಿ ಸಾಕಷ್ಟು ಅನುಭವ ಇರುವ ಅರ್ಹ ಪ್ರತಿಭಾವಂತ ಉಪನ್ಯಾಸಕರೇ ಇದ್ದಾರೆ. ಆದರೆ ಇವರ ಸಮಸ್ಯೆಗಳು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರ್ಹರಾರೂ ಉಪನ್ಯಾಸಕರಾಗಲು ಮುಂದೆ ಬರಲಾರರು ಖಂಡಿತ.
ಈಗಂತೂ ಪಿಯು ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆಗೆ ಬಿಎಡ್ ಕಡ್ಡಾಯವಾಗಿದೆ. 2013ನೇ ವರ್ಷದಲ್ಲಿ ಆಯ್ಕೆಯಾದವರಲ್ಲಿ ಬಿಎಡ್ ಪದವಿ ಇಲ್ಲದ ಸುಮಾರು 800 ಮಂದಿ ಉಪನ್ಯಾಸಕರ ಭವಿಷ್ಯ ಅತಂತ್ರವಾಗಿದೆ. ತಮ್ಮ ಭವಿಷ್ಯದ ಅಭದ್ರತೆ ಕಾಡುತ್ತಿರುವಾಗಲೂ ತನ್ಮಯತೆಯಿಂದ ಪಾಠ ಮಾಡಿ ಉತ್ತಮ ಫಲಿತಾಂಶ ತರುತ್ತಿರುವ ಇವರುಗಳು ನಿಜಕ್ಕೂ ಶ್ಲಾಘ್ಯರು. ಒಂದು ಕಡೆ ಕಡಿಮೆ ವೇತನ, ಇನ್ನೊಂದು ಕಡೆ ವೇತನ ತಾರತಮ್ಯ, ಮತ್ತೊಂದೆಡೆ ಉನ್ನತ ಕಲಿಕೆಗೊಂದಿಷ್ಟೂ ಮನ್ನಣೆ ಇಲ್ಲದ, ಪದೋನ್ನತಿಯ ನಿರೀಕ್ಷೆಯೇ ಇಲ್ಲದ, ಭರವಸೆಯೇ ಇಲ್ಲದ ಯಾಂತ್ರಿಕತೆ, ಯಾವ ಬೇಡಿಕೆಗಳಿಗೂ ಇಲ್ಲದ ಸ್ಪಂದನೆ.
ಇನ್ನು ಪ್ರತಿಭಟಿಸದೇ ಏನು ಮಾಡಬೇಕು ಹೇಳಿ? ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟರೆ ಅವರುಗಳ ಪ್ರತಿಭಟನೆ, ಮೌಲ್ಯ ಮಾಪನ ಬಹಿಷ್ಕಾರಗಳು ಇರುವುದೇ ಇಲ್ಲ ಅಲ್ಲವೇ? ಪಿಯು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇತರರಿಗೆ ಹೆಚ್ಚಿನ ವೇತನ ಕೊಟ್ಟರೆ ಹೊರೆ ಆಗುವುದಿಲ್ಲವೇ? ಇದಕ್ಕೆ ಉತ್ತರಿಸುವವರು ಯಾರು?





ನಿಮ್ಮ ಈ ವಿವರಾದ ಅನುಭವಜನ್ಯ ಮಾತುಅಗಳಿಗೆ ಕೃತಜ್ಞತೆಗಳು, ಡಾ. ಲಕ್ಷ್ಮೀಪ್ರಸಾದ್ ಅವರೇ. ನಿನ್ನೆ ರಾತ್ರಿಯ ಸುದ್ದಿಯ ಪ್ರಕಾರ ನೀವೆಲ್ಲರೂ ಮೌಲ್ಯಮಾಪನ ಬಹಿಷ್ಕಾರವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಹಿಂದಕ್ಕೆ ತೆಗೆದಿದ್ದೀರಿ ಎನ್ನುವುದು ಗೊತ್ತಾಯಿತು. ಒಂದೆಡೆ ಇದರಿಂದ ಸಂತೋಷವೆನಿಸಿತು: ಎಲ್ಲಿ ತ್ಯಾಗವಿದೆಯೋ ಅಲ್ಲಿ ಮಾನವೀಯತೆ ಇರುತ್ತದೆ. ಇದೊಂದು ಸೋತುಗೆಲುವುದು ಎಂದು ತಿಳಿದುಕೊಳ್ಳಬೇಕು. ಇನ್ನೊಂದೆಡೆ ಖಿನ್ನತೆಯೆನಿಸಿತು: ಯಾವಾಗ ಸರಕಾರ ಜನವರ್ಗದ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವುದಿಲ್ಲವೋ ಆಗ ಬಾಧಿತರು ‘ಅನ್ಯ’ರಾಗಿಬಿಡುತ್ತಾರೆ; ಏಲಿಯನೇಶನ್ ಎಂದರೆ ಇದುವೇ. ಮನುಷ್ಯರ ಬೆಳವಣಿಗೆಗೆ ಇದು ಒಳ್ಳೆಯದಲ್ಲ.
*
ಬೆಂಗಳೂರಿನಲ್ಲಿ ಕೇಂದ್ರಸರಕಾರದ ಪಿಎಫ್ ತಿದ್ದುಪಡಿ ನೀತಿಯನ್ನು ವಿರೋಧಿಸಿ ನಡೆದ ಕಾರ್ಮಿಕ ಚಳುವಳಿಯನ್ನೂ ನಾನು ಗಮನಿಸಿದ್ದೇನೆ. ಯಾರ ಹಿತಕ್ಕೋಸ್ಕರ ಈ ತಿದ್ದುಪಡಿಯನ್ನು ತರಲಾಗಿದೆಯೋ ಅವರೇ ಇದು ಬೇಡ ಎನ್ನುವುದಕ್ಕೆ ಪ್ರಬಲ ಕಾರಣಗಳಿವೆ. ಆದರೆ ಕಾರ್ಮಿಕರ ಜತೆ ಮಾತಾಡದೇ ಅವರ ಮೇಲೆ ಇದನ್ನು ಹೇರಲಾಗಿದೆ. ಕೇಂದ್ರದ ಕಾರ್ಮಿಕ ಮಂತ್ರಿ, ಕನಿಷ್ಠವೇತನವನ್ನು ರೂ. ೧೦,೦೦೦ಕ್ಕೆ ಏರಿಸಿದ್ದೇವೆ ಎಂದು ಹೆಮ್ಮೆಯಿಂದ ಕೊಚ್ಚಿಕೊಂಡಿದ್ದಾರೆ; ಈ ಹತ್ತು ಸಾವಿರ ಇಂದು ಆವಾಸ್ತವ ಪ್ರಮಾಣ. ಕಾರ್ಮಿಕರ ಬೇಡಿಕೆ ಇದಕ್ಕಿಂತ ಹೆಚ್ಚಿದೆ–ಹಾಗೂ ಜನ ಅದನ್ನು ಬೆಂಬಲಿಸುತ್ತಾರೆ. ಅಲ್ಲದೆ ಕಾರ್ಮಿಕ ನೀತಿ ಕೇವಲ ವೇತನವೊಂದಕ್ಕೇ ಸೀಮಿತವಾಗಿರಬಾರದು. ಕಾರ್ಮಿಕರ ಒಟ್ಟಾರೆ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರಬೇಕು–ಉದಾಹರನೆಗೆ, ವರ್ಕ್ ಪ್ಲೇಸಿನಲ್ಲಿ ಮೂಲಭೂತ ಸೌಕರ್ಯಗಳಿವೆಯೇ, ಅವರ ಹಸುಳೆಗಳನ್ನು ನೋಡಿಕೊಳ್ಳುವುದಕ್ಕೆ ಬಾಲವಾಡಿಗಳಿವೆಯೇ ಇತ್ಯಾದಿ.
ಕಾರ್ಮಿಕರ ಪ್ರತಿಭಟನೆ ಹಿಂಸಾತ್ಮಕವಾಗಿತ್ತು–ಅಲ್ಲದೆ ಮತ್ತೇನಾಗಿರುತ್ತದೆ? ಅವರ ಸಂಖ್ಯಾಬಲ ಮತ್ತು ಬೇಡಿಕೆಯ ನ್ಯಾಯಪರತೆ ಆ ಪ್ರತಿಭಟನೆಗೆ ಶಕ್ತಿ ನೀಡಿತು, ಹಾಗೂ ಕಾರ್ಮಿಕರು ಇದರಲ್ಲಿ ಗೆಲುವು ಸಾಧಿಸಿದರು.
ಹಿಂಸೆಯನ್ನು ನಾಗರಿಕ ಜನಾಂಗ ಒಪ್ಪುವುದಿಲ್ಲ. ಆದರೆ ಹಿಂಸೆ ಯಾಕೆ ನಡೆಯುತ್ತದೆ ಎಂದು ಯೋಚಿಸಬೇಕು. ಹಿಂಸೆ ಕೂಡಾ ಏಲಿಯನೇಶನ್ ನ (ಹತಾಶೆ, ತಬ್ಬಲಿತನ ಇತ್ಯಾದಿಗಳ) ಒಂದು ಪ್ರಕಟಣೆ. ಕಿರುಚದೆ ಕೇಳಿಸುವುದಿಲ್ಲ ಎಂಬ ಪ್ರಿಮಿಟಿವ್ ಸ್ಥಿತಿ. ನಾಗರಿಕತೆಯಲ್ಲಿ, ಪಿಸುಮಾತನ್ನು ಕೂಡಾ, ಅದು ವಿವೇಕಯುತವಾಗಿದ್ದರೆ, ಕೇಳಿಸಿಕೊಳ್ಳುವ ಸ್ಥಿತಿ ಇರಬೇಕು. ಅಧಿಕಾರ ದರ್ಪದಿಂದ ಹೀಗೆ ಜನರನ್ನು ಧಿಕ್ಕರಿಸಿ ಏಲಿಯನೇಟ್ ಮಾಡುವ ಸರಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕು ಇರುವುದಿಲ್ಲ.
ಪರಿಣಾಮಗಳನ್ನು ಮುಂದಾಗಿ ಯೋಚಿಸಿ, ಯಾವ ವರ್ಗದ ಕುರಿತು ಕಾನೂನು ತರುತ್ತೇವೆಯೋ ಆ ವರ್ಗಗಳ ಕೂಡೆ ಚರ್ಚಿಸಿ ಹಿತಕರವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದೇ ಮುತ್ಸದ್ದಿತನ. ಇದು ನಮ್ಮ ಮಂತ್ರಿಗಳಲ್ಲಿ ಕಾಣಿಸುವುದಿಲ್ಲ.
ಜೂನಿಯರ್ ಕಾಲೇಜು ಶಿಕ್ಷಕ ಬಂಧುಗಳಿಗೆ ನಾನು ಹೇಳುವುದು ಇಷ್ಟೆ: ನೀವು ನೈತಿಕವಾಗಿ ಗೆದ್ದಿದ್ದೀರಿ. ಒಂದಲ್ಲ ಒಂದು ದಿನ ನಿಮಗೆ ನ್ಯಾಯ ಸಿಕ್ಕಿಯೇ ಸಿಗುತ್ತೆ.
ಕೆ.ವಿ.ತಿರುಮಲೇಶ್
Nimmondige naanu kaijodisuve
ಶಿಕ್ಷಕರಿಗೆ, ಉಪನ್ಯಾಸಕರಿಗೆ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ರಜೆ ಇರುತ್ತದೆ ಮತ್ತು ಅವರಿಗೆ ರಜೆಯಲ್ಲಿಯೂ ಕೆಲಸ ಮಾಡದಿದ್ದರೂ ಸಂಬಳ ಬರುತ್ತದೆ. ಮಾರ್ಚ್, ಏಪ್ರಿಲ್ , ಮೇ, ಜೂನ್ ೧೫ರವರೆಗೆ ಇವರಿಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಇವರಿಗೆ ಪರೀಕ್ಷೆ ನಡೆಯುವ ದಿನ ಮತ್ತು ಮೌಲ್ಯಮಾಪನ ಮಾಡುವ ದಿನಗಳು ಮಾತ್ರ ಕೆಲಸ ಇರುತ್ತದೆ, ಉಳಿದಂತೆ ರಜೆ, ಅದೂ ಅಲ್ಲದೆ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಿಂಗಳು ದಸರಾ ರಜೆ ಬೇರೆ ಇರುತ್ತದೆ) ಇಂಥ ಸೌಲಭ್ಯ ಬೇರೆ ಯಾರಿಗೂ (ತಹಸೀಲ್ದಾರ್, ಪಶು ವೈದ್ಯರು, ಕಿರಿಯ ಎಂಜಿನಿಯರ್‌ಗಳು, ಸಬ್ ಇನ್ಸ್‌ಪೆಕ್ಟರ್, ವೈದ್ಯಾಧಿಕಾರಿಗಳು ಮೊದಲಾದವರಿಗೆ) ಇಲ್ಲ. ಈಗಾಗಲೇ ಇವರ ವೇತನ ೨೦,೦೦೦ ದಿಂದ (ಮೂಲವೇತನ) ಆರಂಭವಾಗಿ ೫೦,೦೦೦-೬೦,೦೦೦ ರೂಪಾಯಿ ವರೆಗೆ ಇದೆ ಎಂಬ ಮಾಹಿತಿ ಇದೆ. ಇಷ್ಟು ಸಂಬಳ ಇದ್ದೂ ಇವರು ಮುಷ್ಕರ ಮಾಡುವುದು ಖೇದಕರ. ವಿದ್ಯಾರ್ಥಿಗಳಿಗೆ ಮೌಲ್ಯ, ನೈತಿಕತೆ ಬೋಧಿಸಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದ ಶಿಕ್ಷಕರು, ಉಪನ್ಯಾಸಕರು ಹಣದ ಹಿಂದೆ ಬಿದ್ದು ಇನ್ನಷ್ಟು ಸಂಬಳ ಏರಿಸಬೇಕೆಂದು ಮುಷ್ಕರ ನಡೆಸುವುದು ಶೋಚನೀಯವೂ ಹೌದು. ಹೀಗಾದರೆ ಇವರು ಸಮಾಜಕ್ಕೆ ಯಾವ ಮೌಲ್ಯಗಳನ್ನು ನೀಡಬಲ್ಲರು? ಈಗ ಇವರಿಗೆ ಸಿಗುತ್ತಿರುವ ಸಂಬಳದಲ್ಲಿ ಜೀವನ ಮಾಡಲು ಸಾಧ್ಯವಿಲ್ಲ ಎಂದಾದರೆ ಅದು ಬೇರೆ ವಿಷಯ. ಇವರಿಗೆ ಈಗ ಉಳಿದವರಿಗೆ ಸಿಗುವ ಸಂಬಳ ಸಿಗುತ್ತಿಲ್ಲ ಎಂಬ ಒಂದೇ ಕೊರಗು ಹೊರತು ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇಲ್ಲ. ಇದನ್ನು ಸರಿಪಡಿಸಲು ಪದವಿ ಕಾಲೇಜು ಉಪನ್ಯಾಸಕರಿಗೆ ನೀಡುತ್ತಿರುವ ಯುಜಿಸಿ ವೇತನವನ್ನು ಕಡಿಮೆ ಮಾಡುವುದು ಒಂದು ಪರಿಹಾರ. ಪದವಿ ಕಾಲೇಜು ಉಪನ್ಯಾಸಕರಿಗೆ ನೀಡುವ ವೇತನ ಅತಿಯಾಯಿತು. ಇಂದು ಎಲ್ಲ ಕ್ಷೇತ್ರದಲ್ಲಿಯೂ ಆರ್ಥಿಕ ಹಿಂಜರಿತದಿಂದಾಗಿ ವೇತನ ಕಡಿತ ಮಾಡುತ್ತಿದ್ದಾರೆ. ಇದೇ ರೀತಿ ಪದವಿ ಕಾಲೇಜು ಉಪನ್ಯಾಸಕರಿಗೂ ವೇತನ ಕಡಿತ ಮಾಡುವುದು ನ್ಯಾಯೋಚಿತ.
ಸರ್ಕಾರದ ಹೆಚ್ಚಿನ ವರಮಾನ ಸರಕಾರಿ ನೌಕರರ ವೇತನ ಹಾಗೂ ಇನ್ನಿತರ ಸವಲತ್ತುಗಳಿಗೆ ಖರ್ಚಾಗುತ್ತದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ, ಶಿಕ್ಷಣ, ಅರೋಗ್ಯ, ಗ್ರಾಮೀಣ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಿಗೆ ಹಣ ಇಲ್ಲದ ಶೋಚನೀಯ ಪರಿಸ್ಥಿತಿ ಇಂದು ದೇಶದಲ್ಲಿ ಉಂಟಾಗಿದೆ. ಈ ನಿಟ್ಟಿನಲ್ಲಿ ಸರ್ಕಾರೀ ನೌಕರರ ವೇತನದಲ್ಲಿ ಕಡಿತ ಮಾಡುವುದು ಅಪೇಕ್ಷಣೀಯ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಂತ್ರಿಯಾಗಿದ್ದಾಗ ತಮಗೆ ಸಿಗುತ್ತಿದ್ದ ವೇತನದಲ್ಲಿ ಅವರ ಹೆಂಡತಿ ೫೦ ರೂಪಾಯಿ ಉಳಿಸಿದ ಕಾರಣಕ್ಕಾಗಿ ಸರಕಾರಕ್ಕೆ ತಮಗೆ ನೀಡುತ್ತಿದ್ದ ೩೦೦ ರೂ. ಸಂಬಳವನ್ನು ೨೫೦ ರೂಪಾಯಿಗೆ ಇಳಿಸುವಂತೆ ಪತ್ರ ಬರೆದಿದ್ದರು ಏಕೆಂದರೆ ತಮಗೆ ಜೀವನ ನಡೆಸಲು ಅಷ್ಟು ಸಾಕಾಗುತ್ತದೆ ಎಂದು. ಮಹಾತ್ಮಾ ಗಾಂಧಿಯವರು ದೇಶದಲ್ಲಿ ಬಡವರಿಗೆ ಬಟ್ಟೆ ಕೊಳ್ಳಲೂ ಹಣವಿಲ್ಲ, ನನ್ನ ದೇಶದ ಜನ ಬಟ್ಟೆ ಕೊಳ್ಳಲೂ ಹಣವಿಲ್ಲದೆ ನರಳುತ್ತಿರುವಾಗ ನಾನು ಮೈತುಂಬ ಬಟ್ಟೆ ತೊಟ್ಟು ಮೆರೆಯುವುದು ಯಾವ ನ್ಯಾಯ ಎಂದು ಯೋಚಿಸಿ ಅರೆಬೆತ್ತಲಾಗಿ ಜೀವನವಿಡೀ ನಡೆದುಕೊಂಡರು. ಇಂಥ ಉನ್ನತ ನೈತಿಕ ಪರಂಪರೆ ಇದ್ದ ದೇಶವಿಂದು ಹಣದ ಹಿಂದೆ ಬಿದ್ದು ಹಣದ ಮೂಲಕವೇ ಮನುಷ್ಯನ ಯೋಗ್ಯತೆಯನ್ನು ಅಲೆಯುವ ಅತ್ಯಂತ ನೀಚ ಮಟ್ಟಕ್ಕೆ ಇಳಿದಿದೆ. ನೈತಿಕತೆ, ದೇಶಭಕ್ತಿ ಎಂಬುದು ಯಾರಿಗೂ ಬೇಡವಾಗಿದೆ. ನಿಜವಾದ ದೇಶಭಕ್ತರು ದೇಶದ ಕೋಟ್ಯಂತರ ಜನರು ಬಡತನದಲ್ಲಿ ನರಳುತ್ತಿರುವಾಗ ಲಕ್ಷಾಂತರ ರೂಪಾಯಿಗಳ ವೇತನ ಪಡೆದು ಮೆರೆಯುವುದಿಲ್ಲ.
I am afraid you really understand the problem of the PU teachers’ strike. By the way how much percentage of your salary do you give back every month? Sounds like you really do that !!!
ಕೆ ವಿ ತಿರುಮಲೇಶ್ ಅವರ ಮಾತುಗಳಿಗೆ ನನ್ನ ಸಂಪೂರ್ಣ ಸಹಮತವಿದೆ
Thank you KV Thirumalesh sir for your support
Thanks for support Raghunath krishnamachar
ಸರ್ಕಾರೀ ನೌಕರರು ವರ್ಷದಿಂದ ವರ್ಷಕ್ಕೆ ತಮ್ಮ ವೇತನವನ್ನು ಹೆಚ್ಚು ಮಾಡುತ್ತಾ ಹೋಗುತ್ತಿದ್ದಾರೆ. ಇದರ ಪರಿಣಾಮ ಏನೆಂದರೆ ಅಂತಿಮವಾಗಿ ಸರ್ಕಾರ ದಿವಾಳಿಯಾಗುವುದು. ಗ್ರೀಸಿನಲ್ಲಿ ಸರ್ಕಾರೀ ನೌಕರರ ವೇತನವನ್ನು ಸಿಕ್ಕಾಪಟ್ಟೆ ವಿವೇಚನೆಯಿಲ್ಲದೆ ಏರಿಸಿ ಮೋಜಿನ ಜೀವನಶೈಲಿಯನ್ನು ಜನರು ಅವಲಂಬಿಸಿ ಕೊನೆಗೆ ದೇಶ ದಿವಾಳಿಯಾಯಿತು. ಇದರಿಂದ ನಮ್ಮ ದೇಶ ಏನಾದರೂ ಪಾಠ ಕಲಿಯದೇ ಹೋದರೆ ನಮ್ಮ ದೇಶದ ಗತಿಯೂ ಇದೇ ರೀತಿ ಆಗುವ ಸಂಭವ ಇದೆ. ನಮ್ಮ ಸರ್ಕಾರಗಳು ಈಗಾಗಲೇ ಸಾಲದ ಮೇಲೆಯೇ ನಡೆಯುತ್ತಿದ್ದು ಈ ಸಾಲದ ಬಡ್ಡಿ ಕಟ್ಟಲು ಆದಾಯದ ಬಹುಪಾಲು ಹೋಗುತ್ತದೆ. ಇನ್ನುಳಿದ ಹಣದಲ್ಲಿ ಸರಕಾರಿ ನೌಕರರ ಸವಲತ್ತುಗಳಿಗಾಗಿ ಬಹಳ ದೊಡ್ಡ ಪಾಲು ಹೋಗುತ್ತದೆ. ಸರ್ಕಾರೀ ನೌಕರರ ಸಂಬಳ ಏರಿಸುವಾಗ ದೇಶದ ಸಾಮಾನ್ಯ ಜನರ, ರೈತರ ಸ್ಥಿತಿಯ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಬರಗಾಲದಿಂದ ಬವಣೆ ಪಡುತ್ತಿರುವ ಕೋಟ್ಯಂತರ ಜನ ರೈತರು, ಗ್ರಾಮೀಣ ಜನರ ಬಗ್ಗೆ ಸರ್ಕಾರೀ ನೌಕರರು ಕಿಂಚಿತ್ತೂ ಯೋಚಿಸುವುದಿಲ್ಲ. ಇದು ನಮ್ಮ ಸರ್ಕಾರೀ ನೌಕರರ, ಅಧಿಕಾರಿಗಳ ಸಾಮಾಜಿಕ ಪ್ರಜ್ಞೆ ಹಾಗೂ ಕಾಳಜಿ.
ಸರ್ಕಾರೀ ನೌಕರರಿಗೆ ಭದ್ರವಾದ ನೌಕರಿ ಇದೆ ಆದರೆ ಇಂದು ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕೋಟ್ಯಂತರ ಜನರಿಗೆ ನಿಗದಿತ ಸಂಬಳವೂ ಇಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದರಿಂದಾಗಿ ಕೋಟ್ಯಂತರ ಪ್ರತಿಭಾವಂತರು, ಸ್ನಾತಕೋತ್ತರ, ತಾಂತ್ರಿಕ ಪದವೀಧರರು ಸೂಕ್ತ ಉದ್ಯೋಗ ಇಲ್ಲದೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ ಇಲ್ಲದೆ ಬಹಳ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇವರ ಬಗ್ಗೆ ಎಂದಾದರೂ ಸರ್ಕಾರೀ ನೌಕರರು, ಅಧಿಕಾರಿಗಳು ಯೋಚಿಸುತ್ತಾರೆಯೇ? ಹಾಗಾದರೆ ಇವರೆಲ್ಲ ಎಷ್ಟು ಕೊರಗಬೇಕು? ಎಷ್ಟು ಮುಷ್ಕರ ಮಾಡಬೇಕು, ದಂಗೆ ಏಳಬೇಕು?
ಸಂತೋಷ ಕುಮಾರರೆ ನೀವು ಶಾಸ್ತ್ರಿೀಜಿ,ಗಾಂಧೀಜಿಯವರ ಉದಾಹರಣೆ ಬಿಡಿ.ನೀವು ಎಷ್ಟರಮಟ್ಟಿಗೆ ಅವರ ಹಾಗೆ ತ್ಯಾಗ ಮಾಡಿ ದೇಶಭಕ್ತಿಯನ್ನು ಮೆರೆದಿದ್ದೀರಿ ಎಂಬುದನ್ನು ತಿಳಿಸಿ.ಇತರರಿಗೆ ಉಪದೇಶ ಮಾಡುವುದು,ಸಮಸ್ಯೆಯ ನಿಜವನ್ನು ಅರಿಯದೆ ಟೀಕಿಸುವುದು ಸುಲಭವಾದ ಕೆಲಸ.ಕಾರ್ಪೋರೇಟ್ ಕಂಪನಿಗಳ ವೇತನಕ್ಕೆ ಹೋಲಿಸಿದರೆ ಸರ್ಕಾರಿ ವೇತನ ಚಿಲ್ಲರೆಯಾಗಿ ಕಾಣುತ್ತದೆ.ಅದರಲ್ಲು ಸಂಬಳವನ್ನಙೆ ನೆಚ್ಚಿಕೊಂಡಿರುವವರ ಪಾಡು ಹೇಳತೀರದು.ಅದಕ್ಕಾಗಿಯೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸಗಳು ಆಕರ್ಷಣೆಯನ್ನು ಕಳೆದುಕೊಳ್ಳುತ್ತಿರುವುದು.ಒಬ್ಬ ಸಾಮಾನ್ಯ ಮನುಷ್ಯಮುೂಲಭುತವಾಗಿ ತನ್ನ ಅಸ್ತಿತ್ವದ ಬಗ್ಗೆಯೇ ಆಸಕ್ತನಾಗಿರುತ್ತಾನೆ.ನಂತರದಲ್ಲಿ ತ್ಯಾಗ,ಉದಾರತೆಯ ಮಾತನಾಡುತ್ತಾನೆ.ಎಲ್ಲರೂ ಗಾಂಧಿ,ಶಾಸ್ತ್ರಿ ಆಗಲು ಸಾಧ್ಯವಿಲ್ಲ.ದೈನಂದಿನ ಜೀವನದಲ್ಲಿ ಮುಳುಗಿರುವ ಪ್ರತಿಯೊಬ್ಬನೂ ತನ್ನ ಸ್ಥಿತಿ ಮತ್ತಷ್ಟು ಅದೂ ನ್ಯಾಯಯುತವಾಗಿ ಉತ್ತಮಪಡಬೇಕೆಂದು ಆಶಿಸುವುದು ತಪ್ಪೆ? ಉಪನ್ಯಾಸಕನೂ ಮೊದಲು ಮನುಷ್ಯ ತಾನೆ? ಶಿಕ್ಷಕನಿಗೆ ಸಂಬಳ ಹೊರತುಪಡಿಸಿ ಬೇರಾವುದೆ ಆದಾಯದ ಮೂಲವಿರುವುದಿಲ್ಲ.ತನ್ನೆಲ್ಲ ಶಕ್ತಿಯನ್ನು ಸರ್ಕಾರದ ಸೇವೆಗೆ ವಿನಿಯೋಗಿಸುವ ಸರ್ಕಾರಿ ನೌಕರ ಸರ್ಕಾರದಿಂದ ತನಗೆ ಸಿಗಬೇಕಾದ ಸೌಲಭ್ಯವನ್ನು ಬಯಸುವುದು ತಪ್ಪೆ?
ಸರ್ಕಾರೀ ಕೆಲಸ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬುದು ನಿಜವಲ್ಲ. ಇತೀಚೆಗೆ ಉತ್ತರ ಪ್ರದೇಶದಲ್ಲಿ ಕೆಲವೇ ಕೆಲವು ಸರ್ಕಾರೀ ಅಟೆಂಡರ್ ಕೆಲಸಕ್ಕೆ ಅರ್ಜಿ ಕರೆದಾಗ ಲಕ್ಷಾಂತರ ಅರ್ಜಿ ಬಂದದ್ದು ಏನನ್ನು ಸೂಚಿಸುತ್ತದೆ? ಈ ಅಟೆಂಡರ್ ಕೆಲಸಕ್ಕೂ ಪದವೀಧರರು, ಸ್ನಾತಕೋತ್ತರ ಪದವೀಧರರು, ತಾಂತ್ರಿಕ (ಇಂಜಿನಿಯರಿಂಗ್) ಪದವೀಧರರೂ ಅರ್ಜಿ ಹಾಕಿದ್ದು ಏನನ್ನು ಸೂಚಿಸುತ್ತದೆ? ಕಾರ್ಪೋರೆಟ್ ಕಂಪನಿಗಳಲ್ಲಿ ಮುಷ್ಕರ ಮಾಡುವಂತೆಯೇ ಇಲ್ಲ. ಯಾವಾಗ ಬೇಕಾದರೂ ಕಾರ್ಪೋರೆಟ್ ಕಂಪನಿಗಳಿಂದ ಪಿಂಕ್ ಸ್ಲಿಪ್ ನೀಡಿ ನೌಕರರನ್ನು ತೆಗೆದು ಬಿಸಾಡಬಹುದು. ಖಾಸಗಿ ಕಂಪನಿಗಳಲ್ಲಿ ಸಂಬಳ ಹೆಚ್ಚಳದ ಬಗ್ಗೆ ಮಾತಾಡುವಂತೆಯೇ ಇಲ್ಲ. ಸಿಕ್ಕಿದ್ದನ್ನು ತೆಗೆದುಕೊಂಡು ಹೋಗುತ್ತಿರಬೇಕು ಅಷ್ಟೇ. ಕೆಲಸವೂ ಅಷ್ಟೇ ನಾಯಿ ದುಡಿದಂತೆ ದುಡಿಯಬೇಕು. ಇದರ ಬಗ್ಗೆ ಎಂದಾದರೂ ಸರ್ಕಾರೀ ನೌಕರರು ಯೋಚಿಸಿದ್ದಾರೆಯೇ?
ಅಟೆಂಡರ್ ಕೆಲಸಕ್ಕೆ ಲಕ್ಷಾಂತರ ಅರ್ಜಿ ಬಂದಿದ್ದು ನಿರುದ್ಯೋಗ ಸಮಸ್ಯೆಯ ಭಿೀಕರತೆಯನ್ನು ತೋರಿಸುತ್ತದೆ.ಸಾರ್ವಜನಿಕ ವಲಯದ ನಿರ್ಲಕ್ಷ್ಯವೆ ಇದಕ್ಕೆ ಕಾರಣ.ಉನ್ನತ ಶಿಕ್ಷಣ ಪಡೆದ ಯಾರೂ ಬಯಸಿ ಅಟೆಂಡರ್ ಕೆಲಸಕ್ಕೆ ಬರುವುದಿಲ್ಲ.ಅವರ ಮೊದಲೆ ಆದ್ಯತೆ ಉತ್ತಮ ವೇತನ ಸಿಗುವ ನೌಕರಿ ಆಗಿರುತ್ತದೆ.ಖಾಸಗಿ ವಲಯದಲ್ಲಂತು ಸಂವಿಧಾನದ ಆಶಯಗಳನ್ನೆಲ್ಲ ಗಾಳಿಗೆ ತೂರಲಾಗಿದೆ.ಸರ್ಕಾರಿ ನೌಕರ ತನ್ನ ಸೇವಾವಧಿ ಪೂರ್ತಿ ದುಡಿದರೂ ದುಡಿಯಲಾಗದಷ್ಟು ಹಣವನ್ನು ಕೇವಲ ೫-೬ ವರ್ಷಗಳಲ್ಲಿ ಸಂಪಾದಿಸುವ ನೌಕೆರರು ಕಾರ್ಪೊರೇಟ್ ವಲಯದಲ್ಲಿದ್ದಾರೆ. ಮಹಾನಗರಗಲ್ಲಿನ ಗಗನಚುಂಬಿ ಅಪಾರ್ಟ್ಮೆಂಟ್ಗಳು ನಿರ್ಮಾಣವಾಗುತ್ತಿರುವುದು ಬಹುತಾೆೇಕ ಖಾಸಗಿ ವಲಯದಲ್ಲಿನ ನೌಕರರಿಗಾಗಿಯೆ ಎಂಬುದು ಗೊತ್ತಿರವಂಥಾದ್ದೆ. ಅಲ್ಲೆಲ್ಲು ಕೆಲಸ ಸಿಗದ ದೌರ್ಭಾಗ್ಯವಂತರು ಅನಿವಾರ್ಯವಾಗಿ ಸಿಗುವ ಎಲ್ಲ ಕಡೆಯೂ ಅರ್ಜಿ ಸಲ್ಲಿಸುತ್ತಲೆ ಇರುತ್ತಾರೆ.